ಕೇಳುವವರಿಲ್ಲದ ದೂರು ಪೆಟ್ಟಿಗೆಗಳು!, ಸಮುದ್ರ ತೀರ ಬಿಲ್ಡರ್‌ಗಳ ಕೈಗೆ?
ದೂರು ಪೆಟ್ಟಿಗೆಗಳಿಗೆ ಡಿಮಾಂಡ್ ಇಲ್ಲ!
ಮುಂಬೈಯಲ್ಲಿ ಮಹಿಳಾ ಸುರಕ್ಷೆಯ ಉದ್ದೇಶದಿಂದ ತಾಗಿಸಲಾದ ಡಬ್ಬಾ (ಬಾಕ್ಸ್) ಈಗ ಲೇವಡಿಗೆ ಒಳಗಾಗುತ್ತಿದೆ. ಪೊಲೀಸ್ ಇಲಾಖೆಯ ವತಿಯಿಂದ ನಿರ್ಭಯ ರೇಪ್‌ಕಾಂಡದ ನಂತರ ಮಹಿಳಾ ಸುರಕ್ಷೆಗಾಗಿ ಈ ಡಬ್ಬಾ ಅಲ್ಲಲ್ಲಿ ಇರಿಸಲಾಗಿತ್ತು. ಆದರೆ ಇಂದು ಇವೆಲ್ಲ ಹೀನ ಸ್ಥಿತಿಯಲ್ಲಿವೆ. ಈ ಸುರಕ್ಷಾ ಡಬ್ಬಗಳು ಪೊಲೀಸ್ ಠಾಣೆ, ರೈಲ್ವೆ ಸ್ಟೇಷನ್, ಆಸ್ಪತ್ರೆ ಇಂತಹ ಹಲವು ಪ್ರಮುಖ ಸ್ಥಳಗಳಲ್ಲಿ ಇರಿಸಲಾಗಿದೆ. ಆದರೆ ಇವುಗಳನ್ನು ಇಂದು ಕೇಳುವವರಿಲ್ಲದೆ ಕೆಲವು ತುಂಡಾದ ಸ್ಥಿತಿಯಲ್ಲಿವೆ. ಮುಂಬೈಯಲ್ಲಿ ಮಹಿಳೆಯರ ಸುರಕ್ಷೆ ದೃಷ್ಟಿಯಿಂದ ಪೊಲೀಸ್ ಇಲಾಖೆಯ ವತಿಯಿಂದ ನಗರಾದ್ಯಂತ ಅನೇಕ ಸ್ಥಳಗಳಲ್ಲಿ ದೂರು ಪೆಟ್ಟಿಗೆಗಳನ್ನು ಇರಿಸಲಾಗಿವೆ. ಮಹಿಳೆಯರಿಗೆ ಏನಾದರೂ ಸಮಸ್ಯೆಗಳಿದ್ದರೆ, ಅಥವಾ ಅವರಿಗೆ ಭಯದ ವಾತಾವರಣ ಉಂಟಾದರೆ ಅಂತಹ ಮಹಿಳೆಯರು ಕಾಗದದಲ್ಲಿ ತಮ್ಮ ದೂರನ್ನು ಹೆಸರು, ವಿಳಾಸದೊಂದಿಗೆ ಬರೆದು ಈ ಬಾಕ್ಸ್‌ಗೆ ಹಾಕಬಹುದು. ಅನಂತರ ಸಂಬಂಧಿಸಿದ ಪೊಲೀಸರು ಈ ದೂರಿನ ತನಿಖೆ ಆರಂಭಿಸಲಿದ್ದಾರೆ.
ಆದರೆ ಇಂದು ಮಹಿಳೆಯರ ವಿಷಯದಲ್ಲಿ ಇಷ್ಟೊಂದು ಅಪರಾಧಗಳು ನಡೆಯುತ್ತಿದ್ದರೂ ಅಲ್ಲಲ್ಲಿ ಅಳವಡಿಸಲಾದ ದೂರು ಪೆಟ್ಟಿಗೆಗಳಲ್ಲಿ ದೂರು ಬೀಳುತ್ತಿಲ್ಲ. ಕಾರಣ ಈ ಪೆಟ್ಟಿಗೆಗಳು ಶಿಥಿಲಾವಸ್ಥೆಯಲ್ಲಿರುವುದನ್ನು ಹಲವೆಡೆ ಕಾಣಬಹುದು ಅಥವಾ ಇನ್ನೂ ಅನೇಕ ಮಹಿಳೆಯರಿಗಂತೂ ಇಂತಹ ದೂರು ಪೆಟ್ಟಿಗೆಗಳು ಇವೆಯೆಂದೇ ಮಾಹಿತಿ ತಿಳಿದಿಲ್ಲ.
ಮುಂಬೈ ರೈಲ್ವೇ ಪೊಲೀಸ್ ಮತ್ತು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಹಲವು ದೂರು ಪೆಟ್ಟಿಗೆಗಳಿವೆ. ಆದರೆ ಇಂದು ಶಿಥಿಲಾವಸ್ಥೆಯಲ್ಲಿರುವುದು ಪೊಲೀಸ್ ಇಲಾಖೆಗೆ ಯಾಕೆ ತಿಳಿದಿಲ್ಲವೋ? ಕೆಲವು ಪೊಲೀಸ್ ಅಧಿಕಾರಿಗಳ ಪ್ರಕಾರ ಹೆಚ್ಚುತ್ತಿರುವ ಸೋಶಿಯಲ್ ಮೀಡಿಯಾದ ಟ್ರೆಂಡ್ ಈ ದೂರು ಪೆಟ್ಟಿಗೆಗಳ ಮಹತ್ವವನ್ನು ಕಡಿಮೆ ಮಾಡಿದೆಯಂತೆ. ಈಗ ಪೊಲೀಸ್ ಇಲಾಖೆಯೂ ಸೋಶಿಯಲ್ ಮೀಡಿಯಾದಿಂದ ದೂರು ನಿವಾರಣೆ ಮಾಡಲು ಮುಂದಾಗಿದೆ. ಇದರಲ್ಲಿ ಟ್ವಿಟರ್ ಒಂದು ಮಹತ್ವಪೂರ್ಣ ಪಾತ್ರ ವಹಿಸಿದೆ.
* * *
ಎನ್‌ಕೌಂಟರ್: ಮುಂಬೈ ಜೈಲ್‌ಗಳಲ್ಲೂ ಪರಿಣಾಮ
ಭೋಪಾಲ್ ಜೈಲ್‌ನಿಂದ 8 ಮಂದಿ ಕೈದಿಗಳು ಪಲಾಯನ ಮಾಡಿದ್ದು, ಅನಂತರ ಅವರನ್ನು ಎನ್‌ಕೌಂಟರ್‌ನಲ್ಲಿ ಕೊಂದದ್ದು, ಚರ್ಚೆ..... ಇವನ್ನೆಲ್ಲ ಗಮನಿಸಿ ಮುಂಬೈಯ ಜೈಲುಗಳಲ್ಲೂ ಈಗ ಭದ್ರತೆ ಹೆಚ್ಚಿಸಲಾಗಿದೆ. ಮಹಾರಾಷ್ಟದ ಜೈಲುಗಳಲ್ಲೂ ಈಗ ಹೈ ಅಲರ್ಟ್ ಜಾರಿಗೊಳಿಸಿದ್ದು, ಒಂದು ಹೊಸ ಆದೇಶ ಬಂದಿದೆ. ಈ ಆದೇಶದಲ್ಲಿ ಜೈಲ್‌ನ ಸುರಕ್ಷೆ ಮತ್ತು ಕೈದಿಗಳ ಮೇಲೆ ನಿಗಾ ಇರಿಸುವ ಪಹರೆದಾರರು ಒಬ್ಬರಲ್ಲ ಇಬ್ಬರಿರುತ್ತಾರೆ. ಈ ಮೊದಲು ಒಬ್ಬ ಗಾರ್ಡ್ ಇರುತ್ತಿದ್ದರೆ ಇನ್ನು ಇಬ್ಬರಿದ್ದಾರೆ. ಈ ಮಾಹಿತಿ ನೀಡಿದವರು ಜೈಲ್ ಮಹಾನಿರೀಕ್ಷಕ ಬಿ.ಕೆ. ಉಪಾಧ್ಯಾಯ.
ಭೋಪಾಲ್ ಜೈಲ್‌ನ ಘಟನೆಯಿಂದ ಮಹಾರಾಷ್ಟ್ರದ ಜೈಲು ಆಡಳಿತ ತೀವ್ರ ಎಚ್ಚೆತ್ತುಕೊಂಡಿದೆ. ಜೈಲುಗಳಿಂದ ಕೈದಿಗಳು ಪರಾರಿಯಾಗದಂತೆ ಎಚ್ಚರವಹಿಸಲಾಗಿದೆ. ಹಾಗೂ ಜೈಲುಗಳಲ್ಲಿನ ಸಿಸಿಟಿವಿಯ ಮಾನಿಟರಿಂಗ್ ಹೆಚ್ಚಿಸಲಾಗಿದೆ. ವಿಭಿನ್ನ ಜೈಲುಗಳಲ್ಲಿನ ಅಪಾಯಕಾರಿ ಕೈದಿಗಳನ್ನು ಬೇರೆ ಬೇರೆ ಜೈಲ್‌ಗಳಲ್ಲಿ ಇರಿಸಲೂ ಫರ್ಮಾನ್ ಜಾರಿಗೊಂಡಿದೆ. ಮನೆಯವರು ಕೈದಿಗಳಿಗೆ ಕಳುಹಿಸುವ ಪತ್ರಗಳನ್ನೂ ಇನ್ನು ತೀವ್ರ ತಪಾಸಣೆ ಮಾಡಲಾಗುವುದು.
ವರ್ತಮಾನದಲ್ಲಿ ಮಹಾರಾಷ್ಟ್ರದಲ್ಲಿ 9 ಸೆಂಟ್ರಲ್‌ಜೈಲ್, 31 ಜಿಲ್ಲಾ ಕಾರಾಗೃಹ, 13 ಬಹಿರಂಗ ಕಾರಾಗೃಹ, 172 ಉಪ ಕಾರಾಗೃಹ, ಸಹಿತ ಪುಣೆ ಮತ್ತು ಮುಂಬೈಯಲ್ಲಿ ಮಹಿಳೆಯರಿಗಾಗಿ ಎರಡು ವಿಶೇಷ ಕಾರಾಗೃಹಗಳಿವೆ.
ಕಳೆದ ವರ್ಷ ನಾಗ್‌ಪುರ ಸೆಂಟ್ರಲ್ ಜೈಲ್‌ನಿಂದ 5 ಕೈದಿಗಳು ಪರಾರಿಯಾಗಿದ್ದರು. ಹಾಗೂ ಜೈಲ್ ಅಧೀಕ್ಷಕ ವೈಭವ್ ಕಾಂಬ್ಲೆಯನ್ನು ಅಮಾನತು ಮಾಡಲಾಗಿತ್ತು.
* * *
ಮುಂಬೈಯ ಪೂರ್ವ ಸಮುದ್ರತೀರ ಬಿಲ್ಡರ್‌ಗಳಿಗೆ?
ಮುಂಬೈ ಪೂರ್ವ ಸಮುದ್ರ ತೀರದಲ್ಲಿ ಸುಮಾರು 1,800 ಎಕ್ರೆಯಷ್ಟು ಖಾಲಿ ಜಾಗವಿದೆ. ಇವುಗಳಲ್ಲಿ ಮರೀನ್ ಡ್ರೈವ್ ಮತ್ತು ಇನ್ನಷ್ಟು ಓವಲ್ ಮೈದಾನ ನಿರ್ಮಿಸಬಹುದಾಗಿದೆ. ಇಷ್ಟೊಂದು ಜಮೀನಿನ ಉಪಯೋಗವನ್ನು ಮುಂಬೈಕರ್‌ಗಾಗಿ ನೀಡಬೇಕು. ಆದರೆ ಕೇಂದ್ರ ಸರಕಾರ ಈ ಸ್ಥಳದಲ್ಲಿ ವ್ಯವಸಾಯಿಕ ಮತ್ತು ವಸತಿ ಸಂಕುಲ ನಿರ್ಮಿಸುವ ವಿಚಾರದಲ್ಲಿದೆ. ಹೀಗೆ ನಡೆದರೆ ಪರಿಸರಕ್ಕೆ ಭಾರೀ ತೊಂದರೆಯಾಗಲಿದೆ. ಮುಂಬೈ ಪೂರ್ವ ಸಮುದ್ರ ತೀರದ ಜಾಗವನ್ನು ಬಿಲ್ಡರ್‌ಗಳಿಗೆ ನೀಡಬೇಡಿ ಎಂದು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಯುವಸೇನೆ ಮನವಿ ಮಾಡಿದೆ. ಮುಂಬೈ ಪೋರ್ಟ್ ಟ್ರಸ್ಟ್, ಮಹಾನಗರ ಪಾಲಿಕೆ, ನೌಕಾಸೇನೆ ಸಹಿತ ಎಲ್ಲಾ ಸಂಬಂಧಿತ ವಿಭಾಗಗಳ ಅಧಿಕಾರಿಗಳ ಸಂಯುಕ್ತ ಬೈಠಕ್ ಈ ವಿಷಯದಲ್ಲಿ ನಡೆಸಬೇಕು ಎಂದು ಆದಿತ್ಯ ಠಾಕ್ರೆ ಅವರು ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಜೊತೆಗಿನ ಚರ್ಚೆಯಲ್ಲಿ ಆಗ್ರಹಿಸಿದ್ದಾರೆ.
ಮುಂಬೈಯ ಪೂರ್ವ ಸಮುದ್ರ ತೀರದಲ್ಲಿನ ಉಪಲಬ್ದ ಜಾಗವು ಮುಂಬೈ ಪೋರ್ಟ್ ಟ್ರಸ್ಟ್ ಮತ್ತು ನೌಕಾಸೇನೆಯ ಅಧೀನದಲ್ಲಿದೆ. ಕೆಲವೆಡೆ ಉಪ್ಪುತಯಾರಿಸುವ ಜಾಗವೂ ಇದೆ. ಈ ಎಲ್ಲ ಜಮೀನಿನಲ್ಲಿ 8 ಮರೀನ್ ಡ್ರೈವ್ ಮತ್ತು 50 ಓವಲ್ ಮೈದಾನ ವಿಕಸಿತಗೊಳಿಸಬಹುದಾಗಿದೆ ಎನ್ನುತ್ತಾರೆ ಯುವಸೇನೆಯ ಆದಿತ್ಯ.
* * *
ಸಂಭ್ರಮಾಚರಣೆ ಮಾಡದ ಸರಕಾರ
ಮಹಾರಾಷ್ಟ್ರ ಸರಕಾರದ ಎರಡು ವರ್ಷಗಳು ಪೂರ್ಣಗೊಂಡಿದ್ದರೂ ಸರಕಾರದ ದುರ್ಭಾಗ್ಯವೆಂದರೆ ಈ ಸಂತೋಷವನ್ನು ಸಂಭ್ರಮಿಸುವಂತಿಲ್ಲ. ಅಂದರೆ ಎರಡು ವರ್ಷದ ಆಡಳಿತದ ಬಗ್ಗೆ ಸಂಭ್ರಮವನ್ನು ಆಚರಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಚುನಾವಣಾ ಆಯೋಗವು ಇದಕ್ಕೆ ನಿರಾಕರಿಸಿರುವುದೇ ಕಾರಣ. ಆದರೆ ಜನರಿಗಂತೂ ಇದು ಸೌಭಾಗ್ಯವೇ ಹೌದು! ಯಾಕೆಂದರೆ ಸರಕಾರದ ಎರಡು ವರ್ಷ ಪೂರೈಸಿದ ಭವ್ಯ ಆಯೋಜನೆಗೆ ಖರ್ಚು ಮಾಡಬಹುದಾಗಿದ್ದ ಜನತೆಯ ಸಾವಿರಾರು ರೂಪಾಯಿ ಉಳಿತಾಯವಾದಂತಾಗಿದೆ. ಇನ್ನೊಂದೆಡೆ ಸರಕಾರಕ್ಕೆ ನಿಜವಾಗಿಯೂ ಸಂಭ್ರಮ ಆಚರಿಸುವ ಅಧಿಕಾರವಾದರೂ ಇದೆಯೇ? ಎನ್ನುವ ಪ್ರಶ್ನೆ.
ಮಹಾರಾಷ್ಟ್ರದ ಹಳ್ಳಿಗಳಿಂದ ಹಿಡಿದು ನಗರದ ತನಕವೂ ನೂರಾರು ಸಮಸ್ಯೆಗಳು. ಈ ವರ್ಷ ಉತ್ತಮ ಮಳೆ ಆಗಿದ್ದರೂ ನಗರಗಳಲ್ಲಿ 15 ಪ್ರತಿಶತ ನೀರಿನ ಕಡಿತ ಜಾರಿಯಾಗಿದೆ. ಅಪರಾಧಿಗಳ ಆತ್ಮವಿಶ್ವಾಸ ವೃದ್ಧಿಯಾಗುತ್ತಿದೆ. ಆದಿವಾಸಿ ವಸತಿ ಶಾಲೆಯಲ್ಲಿ ಶಿಕ್ಷಕರೇ ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಬೀಭತ್ಸ ಸುದ್ದಿ ಮತ್ತೊಂದೆಡೆ. ರಾಜ್ಯದಲ್ಲಿ ವ್ಯಾಪಾರಿಗಳ ಸ್ಥಿತಿ ಇನ್ನೂ ಶೋಚನೀಯವಾಗುತ್ತಿದೆ. ಜಿ.ಎಸ್.ಟಿ. ಭೂತ ಮತ್ತೊಂದೆಡೆ ಕೂತಿದೆ. 8 ಲಕ್ಷ ಕೋಟಿ ರೂಪಾಯಿಯ ಹೂಡಿಕೆಯ ಒಪ್ಪಂದವಾಗಿದೆ ಎಂದು ಸರಕಾರ ಹೇಳಿಕೆ ನೀಡಿದ್ದರೂ ಈ ತನಕ ಬಂದದ್ದು 54 ಲಕ್ಷ ರೂಪಾಯಿ ಮಾತ್ರ. ಇದು ಇಂದು ಒಬ್ಬ ವಿದ್ಯಾರ್ಥಿಯ ಮೆಡಿಕಲ್ ಕಾಲೇಜಿನ ಎಡ್ಮಿಶನ್‌ಗೂ ಸಾಕಾಗದು!. ಉದ್ಯೋಗದ ಹೆಸರಲ್ಲಿ ಸರಕಾರದಿಂದ ಜಮೀನು ಕೇಳುವವರ ದೊಡ್ಡ ಸಾಲೇ ಇದೆ. ಕಾಂಗ್ರೆಸ್, ಎನ್‌ಸಿಪಿ ಸರಕಾರ ಇದ್ದಾಗಲೂ ಸರಕಾರಿ ಜಮೀನು ವಿತರಣೆ ನಡೆದಿತ್ತು. ಎರಡು ವರ್ಷದ ನಂತರ ಸರಕಾರ ಹೇಳುತ್ತಿದೆ- ರೈತರಿಗೆ 18,000 ಕೋಟಿ ರೂ. ನೀಡಲಾಗಿದೆ ಎಂದು! ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ರೈತರಿದ್ದಾರೆ. ಸರಕಾರ 18 ಸಾವಿರ ಕೋಟಿ ರೂಪಾಯಿ ಯಾರಿಗೆ ವಿತರಿಸಿದೆ? ಯಾರು ಖುಷಿಯಲ್ಲಿದ್ದಾರೆ?
ಇತ್ತ ಮರಾಠ ಸಮುದಾಯದಿಂದ ನಾಲ್ಕು ಕಿ.ಮೀ. ದೂರದ ಬೈಕ್ ರ್ಯಾಲಿ ಮೊನ್ನೆ ಮುಂಬೈಯಲ್ಲಿ ನಡೆಯಿತು. ಇನ್ನು ಮರಾಠರ ಮೋರ್ಚಾ ಡಿಸೆಂಬರ್ 14ರ ನಂತರ ನಡೆಯಲಿದೆ. ಯಾಕೆಂದರೆ ಡಿಸೆಂಬರ್ 14 ರಂದು ನಾಗ್‌ಪುರದಲ್ಲಿ ವಿರಾಟ್ ಮೋರ್ಚಾ ತಯಾರಿ ನಡೆದಿದೆ. ಚಳಿಗಾಲದ ಅಧಿವೇಶನದಲ್ಲಿ ಮರಾಠ ಮೀಸಲಾತಿಯ ಫಲಿತಾಂಶದ ನಿರೀಕ್ಷೆ ಮಾಡಲಾಗುತ್ತಿದೆ. ಇದೆಲ್ಲದರ ನಡುವೆ ಸರಕಾರ ಮೂರನೇ ವರ್ಷಕ್ಕೆ ಕಾಲಿಡಲಿದೆ.
* * *
ತಂಬಾಕು ಉತ್ಪಾದನೆಗಳ ಮೇಲೆ ಇನ್ನಷ್ಟು ತೆರಿಗೆ?
ಕ್ಯಾನ್ಸರ್ ಅಂತಹ ಮಾರಕ ರೋಗದಿಂದ ಬಳಲುತ್ತಿರುವ, ಅವರ ಶುಶ್ರೂಷೆ ನಡೆಸುತ್ತಿರುವ ಡಾಕ್ಟರ್‌ಗಳಿಗೆ ಜಿಎಸ್‌ಟಿ ದರಗಳ ಘೋಷಣೆ ಬಹಳ ಮಹತ್ವದ್ದಾಗಿತ್ತು. ಸರಕಾರವು ತಂಬಾಕು ಉತ್ವಾದನೆಗಳ ಮೇಲೆ ಶೇ. 28 ದರದಿಂದ ಜಿಎಸ್‌ಟಿ ಹೇರುವ ಮಾತನ್ನಾಡಿದೆ. ಆದರೆ ಕ್ಯಾನ್ಸರ್ ಶುಶ್ರೂಷೆಗೆ ವಿಶ್ವಪ್ರಸಿದ್ಧಿ ಪಡೆದಿರುವ ಟಾಟಾ ಮೆಮೋರಿಯಲ್‌ನ ಕ್ಯಾನ್ಸರ್ ರೋಗದ ವಿಶೇಷತಜ್ಞ ಡಾ. ಪಂಕಜ ಚತುರ್ವೇದಿ ಅವರು ಬೀಡಿ ಮತ್ತು ಇತರ ತಂಬಾಕುಯುಕ್ತ ಪದಾರ್ಥಗಳ ಮೇಲೆ ತೆರಿಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ದೇಶದಲ್ಲಿಂದು ಸುಮಾರು ಒಂದು ಮಿಲಿಯನ್ ಕ್ಯಾನ್ಸರ್‌ನ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಲ್ಲಿ 40 ರಿಂದ 50 ಪ್ರತಿಶತ ಜನರಲ್ಲಿ ಕ್ಯಾನ್ಸರ್‌ಗೆ ಕಾರಣ ತಂಬಾಕು ಸೇವನೆ ಆಗಿರುತ್ತದೆ. ಸಿಗರೇಟು ಮತ್ತು ಬೀಡಿ ಸೇದುವವರ ಆಯಸ್ಸು 6 ರಿಂದ 8 ವರ್ಷ ಕಡಿಮೆ ಯಾಗುತ್ತದೆ ಎಂಬ ಮಾತನ್ನು ಚತುರ್ವೇದಿ ಹೇಳಿದ್ದಾರೆ.
ದೇಶದಲ್ಲಿ ಸುಮಾರು 27 ಕೋಟಿ ಜನರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಅರ್ಥಾತ್ ಪ್ರತೀ ನಾಲ್ವರಲ್ಲಿ ಒಬ್ಬ ವ್ಯಕ್ತಿ ತಂಬಾಕು ಸೇವನೆ ಮಾಡುತ್ತಾರೆ. ಆದರೆ ಅಲ್ಲಿ ತೆರಿಗೆ ಬಹಳ ಕಡಿಮೆ ಇದೆ. ಇದರಿಂದ ಸರಕಾರಕ್ಕೆ ನಷ್ಟ. ಹೀಗಾಗಿ ಸರಕಾರ ಎಲ್ಲಾ ತಂಬಾಕು ಪದಾರ್ಥಗಳ ಮೇಲೆ ಅಧಿಕ ತೆರಿಗೆ ಹೇರಬೇಕು ಎಂದಿದ್ದಾರೆ ಇಲ್ಲಿನ ಡಾಕ್ಟರ್‌ಗಳು.
* * *
ಮಹಿಳೆಯರಿಗಾಗಿ ತೇಜಸ್ವಿನಿ ಬಸ್ಸು
ಮಹಿಳೆಯರ ಸುರಕ್ಷೆಯ ದೃಷ್ಟಿಯಿಂದ ಮಹಾರಾಷ್ಟ್ರ ರಾಜ್ಯ ಕ್ಯಾಬಿನೆಟ್ ನಗರ ಕ್ಷೇತ್ರಗಳಲ್ಲಿ ಮಹಿಳೆಯರಿಗಾಗಿ ವಿಶೇಷ ತೇಜಸ್ವಿನೀ ಬಸ್ಸು ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಕ್ಯಾಬಿನೆಟ್ ನಿರ್ಣಯದಂತೆ ಮುಂಬೈ, ನವಿಮುಂಬೈ, ಥಾಣೆ, ಕಲ್ಯಾಣ್-ಡೊಂಬಿವಿಲಿ ಮತ್ತು ನಾಗ್‌ಪುರದಂತಹ ಮಹಾನಗರ ಪಾಲಿಕೆಗಳ ಕ್ಷೇತ್ರಗಳಲ್ಲಿ ಸಾರ್ವಜನಿಕ ಬಸ್ಸು ಸೇವಾ ಮಾಧ್ಯಮದಿಂದ ಮಹಿಳೆಯರಿಗಾಗಿ 300 ತೇಜಸ್ವಿನಿ ಬಸ್ಸುಗಳನ್ನು ಸರಕಾರ ನೀಡಲಿದೆ. ಇದಕ್ಕಾಗಿ ಸರಕಾರ ಬಜೆಟ್‌ನಲ್ಲಿ 50 ಕೋಟಿ ರೂ. ಮುಂಗಡ ಇರಿಸಿದೆ. ಈ 300 ಬಸ್ಸುಗಳನ್ನು ಖರೀದಿಸಲು ಸರಕಾರಕ್ಕೆ ಕನಿಷ್ಠ ಎಂದರೂ 90 ಕೋಟಿ ರೂ. ಖರ್ಚಾಗಲಿದೆ. ಈ ಬಸ್ಸುಗಳು ಪರ್ಯಾವರಣ ಗಮನದಲ್ಲಿರಿಸಿ ನಿರ್ಮಾಣವಾಗಲಿದೆ. ಜೊತೆಗೆ ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮರಾ, ಟಿವಿ, ಸಾರ್ವಜನಿಕ ಘೋಷಣೆಗಳ ಯಂತ್ರಗಳನ್ನಿರಿಸಲಾಗುವುದು. ನಗರದಲ್ಲಿ ಆಫೀಸು - ಉದ್ಯೋಗಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.