ನೋಟು ರದ್ದತಿ: ಶಿಕ್ಷೆ ಯಾರಿಗೆಂದರೆ...
ದೇಶದಲ್ಲಿಂದು ಎಲ್ಲೆಲ್ಲೂ ನೋಟು ರದ್ದತಿಯದೇ ಸುದ್ದಿ. ಮೋದಿ ಹಾಗೆ ಮಾಡಿದರು... ಮೋದಿ ಹೀಗೆ ಮಾಡಿದರು... ಕಪ್ಪುಹಣ ನಿಯಂತ್ರಿಸಿದರು ಹೀಗೆ... ಸಮೂಹ ಸನ್ನಿ ಮತ್ತು ಅದಕ್ಕೆ ತುಪ್ಪಸುರಿಯಲು ನಿಂತ ಪುಂಗಿದಾಸರ ಕತೆ. ಆದರೆ ವಾಸ್ತವ? ಜನ, ಅದರಲ್ಲೂ ಬಡವರು, ಕೂಲಿಕಾರರು, ಸಣ್ಣ ಸಣ್ಣ ವ್ಯಾಪಾರಿಗಳು ದಿನನಿತ್ಯದ ಬದುಕಿಗೆ ಭೀಕರವಾಗಿ ಪರದಾಡುವಂತಾಗಿದೆ. ಕೂಲಿ ಬಿಟ್ಟು ಬ್ಯಾಂಕುಗಳ ಮುಂದೆ ದಿನಗಟ್ಟಲೆ ಗಂಟೆಗಟ್ಟಲೆ ಕ್ಯೂ ನಿಲ್ಲುವಂತಾಗಿದೆ. ಎಷ್ಟು ಮನೆಯಲ್ಲಿ ಅಡುಗೆ ಮಾಡಿಲ್ಲ? ಎಷ್ಟು ಮಕ್ಕಳು ಹಾಲು ಕುಡಿದಿಲ್ಲ? ಎಷ್ಟು ಜನ ಕೂಲಿ ಇಲ್ಲದೆ ಬೀದಿ ಬದಿಯಲ್ಲಿ ಕುಳಿತಿಲ್ಲ? ನೆನಸಿಕೊಂಡರೆ ಮೈ ಜುಂ ಎನ್ನುತ್ತೆ.
''ನೋಟು ರದ್ದು: ಶ್ರೀಮಂತರ ದುಡ್ಡು ಆಚೆಗೆ...!'', ಯಾವ ಶ್ರೀಮಂತ, ಯಾವ ದಡ್ಡ ಶ್ರೀಮಂತ ಇಂದು ಕೈಯಲ್ಲಿ ದುಡ್ಡು ಇಟ್ಟುಕೊಂಡಿರುತ್ತಾನೆ? ಈ ನಿಟ್ಟಿನಲ್ಲಿ ತೊಂದರೆಗೊಳಗಾಗುತ್ತಿರುವವರು, ತಮ್ಮದಲ್ಲದ ತಪ್ಪಿಗೆ ಬರೆ ಹಾಕಿಸಿಕೊಳ್ಳುತ್ತಿರುವವರು ಈ ದೇಶದ ಬಡವರು, ಜನಸಾಮಾನ್ಯರು. ಖಂಡಿತ, ನೋಟು ಬದಲಿಸುವ ಉದ್ದೇಶ ಅಷ್ಟು ಅವಶ್ಯವಿದ್ದರೆ ಸರಕಾರ ಒಂದಷ್ಟು ದಿನ ಮುಂಚೆಯೇ ತಿಳಿಸಿದ್ದರೆ ಜನಸಾಮಾನ್ಯರು, ವಿಶೇಷವಾಗಿ ಬಡವರು ತಮ್ಮ ನಿತ್ಯದ ಬದುಕಿಗಾಗಿ ಕನಿಷ್ಠ ತಯಾರಿ ಮಾಡಿಕೊಂಡಿರುತ್ತಿದ್ದರು. ಯಾಕೆಂದರೆ ನೋಟು ರದ್ದು ಮಾಡಿರುವ ಈ ದಿನಗಳಲ್ಲಿ ಒಂದಷ್ಟು ದುಡ್ಡು ಉಳಿಸಿರುವ ಶ್ರೀಮಂತರು, ಉದ್ಯೋಗಿಗಳು, ಸರಕಾರಿ ನೌಕರರು ಆರಾಮವಾಗಿ ಇದ್ದಾರೆ. ನಿತ್ಯದ ಬದುಕಿಗೆ ಅವರಿಗೆ ಅಂಗಡಿಗಳಿಂದ ಒಂದಷ್ಟು ರೇಷನ್ ಸಾಲವಾದರೂ ಹುಟ್ಟುತ್ತಿದೆ. ಆದರೆ ಅದೇ ನಿತ್ಯದ ಬದುಕಿಗೆ ಆ ದಿನದ, ವಾರದ ಕೂಲಿ ಅವಲಂಬಿಸಿದ್ದವರಿಗೆ? ಅವರಿಗೆ ಯಾರು ಹಣ ಕೊಡುತ್ತಾರೆ? ಅವರಿಗೆ ಯಾರು ಸಾಲ ಕೊಡು ತ್ತಾರೆ? ಇಂಥವರ ಬಳಿ ಕ್ರೆಡಿಟ್ ಕಾರ್ಡ್, ಡಿಜಿಟಲ್ ಮನಿ ಇತ್ಯಾದಿ ಸುಳಿಯುತ್ತದೆಯೇ?
ಅಂದಹಾಗೆ ಹೀಗೆ ದಿಢೀರ್ ದುಡ್ಡು ರದ್ದು ಮಾಡಿ ವಾರಗಟ್ಟಲೆ ಹಣ ಇಲ್ಲದೆ ಜನಸಾಮಾನ್ಯರನ್ನು ಪರದಾಡಿಸಿ, ಅನ್ನ, ಆರೋಗ್ಯ, ವ್ಯವಹಾರ ಇಲ್ಲದೆ ಅಲೆದಾಡಿಸಿ ಎಂದು ಯಾವ ಸಂವಿಧಾನದ ಯಾವ ಆರ್ಟಿಕಲ್‌ನಲ್ಲಿ ಬರೆದಿದೆ ಸ್ವಾಮಿ? ಇದು ಆಡಳಿತವೋ? ಅರಾಜಕತೆಯೋ? ಬಲ್ಲವರು ದನಿ ಎತ್ತಬೇಕು. ಕೆಲವರು ಕಪ್ಪುಹಣದ ನಿಯಂತ್ರಣದ ಗಿಳಿ ಪಾಠ ಒಪ್ಪಿಸುತ್ತಾರೆ. ಪ್ರಶ್ನೆಯೇನೆಂದರೆ 2000ರೂ. ನೋಟು ತಂದು ಕಪ್ಪು ಹಣ ನಿಯಂತ್ರಿಸುವುದು ಹೇಗೆ? ಹೋಗಲಿ, ಕಪ್ಪುಹಣವನ್ನು ಯಾರಾದರೂ ಈಗ ನೋಟಿನ ರೂಪದಲ್ಲಿ ಇಟ್ಟುಕೊಳ್ಳುತ್ತಾರೆಯೇ? ಎರಡೆರಡು ಮೂರ್ಮೂರು ಮನೆ, ಹತ್ತಾರು ಸೈಟು, ನೂರಾರು ಎಕರೆ ಜಮೀನು, ಕೋಟ್ಯಂತರ ಷೇರು ಬಂಡವಾಳ, ವಿದೇಶಿ ಬ್ಯಾಂಕುಗಳಲ್ಲಿ ನೇರ ಡಿಪಾಸಿಟ್ಟು... ವಾಸ್ತವವೆಂದರೆ ಕಪ್ಪುಹಣ ಇಂದು ನೋಟಿನ ರೂಪದಲ್ಲಿರುವುದು ಕೇವಲ ಶೇ.6 ಅಷ್ಟೆ. ಅಂದರೆ ಉಳಿದ ಶೇ.94 ಕಪ್ಪುಹಣ ಮೇಲೆ ಹೇಳಿದ ವಿವಿಧ ಹೂಡಿಕೆಗಳ ರೂಪದಲ್ಲಿದೆ. ನೇರ ತೆರಿಗೆ ಕಟ್ಟದೆ ಸರಕಾರಕ್ಕೆ ಹೀಗೆ ವಂಚಿಸುತ್ತಿರುವವರು ಕಪ್ಪುಹಣ ಉಳ್ಳ ಶ್ರೀಮಂತರು. ಆದರೆ ಪರೋಕ್ಷ ತೆರಿಗೆ ಮೂಲಕ ಈ ದೇಶದ ಆರ್ಥಿಕತೆ ರಕ್ಷಿಸುತ್ತಿರುವವರು ಬಡವರು, ಜನಸಾಮಾನ್ಯರು. ಅಂದರೆ ತೆರಿಗೆ ಕಟ್ಟಿಯೂ ನೋಟು ರದ್ದು ಮೂಲಕ ಹಣದ ಕೊರತೆಯ ಶಿಕ್ಷೆ ಬಡವರಿಗೆ. ಚುನಾವಣೆಯಲ್ಲಿ ಎರಡೂವರೆ ವರ್ಷಗಳ ಹಿಂದೆ ನೀಡಿದ ಆಶ್ವಾಸನೆಯಂತೆ ಕೇಂದ್ರ ಸರಕಾರಕ್ಕೆ ಕಪ್ಪುಹಣ ತರುವ ನಿಜವಾದ ಕಾಳಜಿಯಿದ್ದರೆ ಈ ದೇಶದ ಶಾಸನಬದ್ಧ ಬ್ಯಾಂಕುಗಳಿಗೆ 9,000 ಕೋಟಿ ವಂಚಿಸಿದ ಉದ್ಯಮಿ ವಿಜಯ್ ಮಲ್ಯ ಇಷ್ಟೊತ್ತಿಗೆ ಈ ದೇಶದ ಜೈಲಿನಲ್ಲಿ ಕೊಳೆಯಬೇಕಿತ್ತು. ಆದರೆ ಆತ ಫಾರಿನ್ ಬೀಚುಗಳಲ್ಲಿ ಆರಾಮವಾಗಿ ಅಡ್ಡಾಡುತ್ತಿದ್ದಾನೆ! ಇದು ಮೋದಿಯವರಿಗೆ ತಿಳಿದಿಲ್ಲವೆ?
ಒಟ್ಟಾರೆ ದೇಶದ ಆರ್ಥಿಕತೆ ಇಂದು ರಣಪ್ರಪಾತಕ್ಕೆ ಕುಸಿಯುತ್ತಿದೆ. ಶೇ.75ರಷ್ಟು ಹಣ ಚಲಾವಣೆಗೆ ಬರದೆ, ಶೇ.75ರಷ್ಟು ಹಣಕಾಸು ವ್ಯವಹಾರವಿಲ್ಲದೆ ಸ್ಥಗಿತಗೊಂಡಿದೆ. ಅಘೋಷಿತ ಆರ್ಥಿಕ ತುರ್ತು ಸ್ಥಿತಿ ಇಂದು ಎಲ್ಲೆಲ್ಲು ಕಾಣುತ್ತಿದೆ. ಒಂದು ದಿನ ಭಾರತ್ ಬಂದ್ ಆದರೆ, ಕರ್ಫ್ಯೂ ವಿಧಿಸಲ್ಪಟ್ಟರೆ ಅಷ್ಟು ಲಕ್ಷ ಕೋಟಿ ನಷ್ಟ ಇಷ್ಟು ಲಕ್ಷ ಕೋಟಿ ನಷ್ಟ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಕಳೆದ ಐದಾರು ದಿನಗಳಿಂದ ಅಘೋಷಿತವಾಗಿ ಜಾರಿಯಲ್ಲಿರುವ ಮುಂದೆಯೂ ಅನೇಕ ದಿನಗಳವರೆಗೆ ಇರಲ್ಪಡುವ ಈ ಆರ್ಥಿಕ ತುರ್ತುಸ್ಥಿತಿಯಿಂದ ಅದೆಷ್ಟು ಲಕ್ಷ ಕೋಟಿ ಕೋಟಿ ನಷ್ಟವಾಗಲಿದೆ? ಹಾಗೆ ನಷ್ಟವಾಗುವ ಮಾನವ ಸಂಪನ್ಮೂಲ? ಅದರ ಆರೋಗ್ಯ? ಏರುವ ಬೆಲೆಗಳು? ಈಗ ಅಡುಗೆ ಉಪ್ಪಿನ ಬೆಲೆಯೆ ಕೆಜಿಗೆ 400ರೂ ಆಗಿ ಕೆಲವೆಡೆ ಪರದಾಟವಾಗಿದೆ! ಇನ್ನು ಕಾರ್ತಿಕ ಮಾಸದ ಈ ತಿಂಗಳು ಮದುವೆ ಸೀಸನ್. ಈ ಸಂದರ್ಭದಲ್ಲಿ ಚಿನ್ನ ಗ್ರಾಂಗೆ ರೂ.4000ದ ಗಡಿ ದಾಟಿದೆ! ಮುಂದುವರಿದ ನೋಟು ರದ್ದತಿಯ ಈ ಪರಿಣಾಮ ಮೊನ್ನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಕ್ತ ಖರೀದಿಸಲು ಚಿಲ್ಲರೆ ಇಲ್ಲದೆ ರೋಗಿಯೊಬ್ಬರು ಅಸುನೀಗಿದ್ದಾರೆ. ಬ್ಯಾಂಕಿಗೆ ಹಣ ಜಮಾ ಮಾಡಲು ನೂಕು ನುಗ್ಗಲಿನಲ್ಲಿ ಜನ ಮೃತಪಟ್ಟ ವರದಿ ಬರುತ್ತಿವೆ. ಅಲ್ಲದೆ ವರದಿಯಾಗದ ಇಂಥ ಅನೇಕ ಘಟನೆಗಳು? ಮತ್ತು ನಿತ್ಯದ ಗೋಳು?
ತಮ್ಮ ಕೈಯಲ್ಲಿ ಇಲ್ಲದ ಕಪ್ಪುಹಣಕ್ಕಾಗಿ ಬಡವರು, ಜನಸಾಮಾನ್ಯರು ಇಂದು ರೌರವ ನರಕ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ನೋಟು ರದ್ದು ಮಾಡುವ ಈ ಯೋಜನೆ ಯಾರಿಗೆ ವರ? ಯಾರಿಗೆ ಶಾಪ? ಸಾಕ್ಷಿಗಾಗಿ ಎಲ್ಲಿಯೂ ಹುಡುಕುವ ಅಗತ್ಯವಿಲ್ಲ. ನಮ್ಮ ಸುತ್ತಮುತ್ತಲ ಜನರ ಪಡಿಪಾಟಲೇ ಅದಕ್ಕೆ ಸಾಕ್ಷಿಯಾಗುತ್ತದೆ. ಅಂತಹ ಒಂದು ಸಾಕ್ಷಿಯನ್ನು ದಾಖಲಿಸುವುದಾದರೆ, ಹೊಟೇಲ್‌ನಲ್ಲಿ ಮಾಲಕನೊಬ್ಬ ಗ್ರಾಹಕರ ಜೊತೆ ಮಾತನಾಡುತ್ತ ಹೇಳುತ್ತಿದ್ದ ''ನೋಡಿ, ಎಲ್ಲರೂ 500, 1000 ನೋಟು ರದ್ದು ಮಾಡಿದ್ದರಿಂದ ನಮಗೆ ಶ್ರೀಮಂತರಿಗೆ ತೊಂದರೆ ಎನ್ನುತ್ತಿದ್ದಾರೆ, ನಾವು ತೆರಿಗೆ ಕಟ್ಟಬೇಕು ಎನ್ನುತ್ತಿದ್ದಾರೆ, ಅದನ್ನು ನಮ್ಮ ಆಡಿಟರ್ ನೋಡಿಕೊಳ್ಳುತ್ತಾರೆ ಬಿಡಿ. ಆದರೆ ಅಲ್ಲಿ ನಿಂತಿದ್ದಾರಲ್ಲ, ಒಂದಿಪ್ಪತ್ತು ಜನ ಸಪ್ಲೈಯರ್, ಕ್ಲೀನರ್, ಅಡುಗೆಯವರು ಅವರಿಗೆಲ್ಲ ನಾನು ಒಂದು ತಿಂಗಳು ಸಂಬಳ ಕೊಡೋದಿಲ್ಲ! ನಾನು ಮೋಸಗಾರ ಅಲ್ಲ, ಕೊಡೋದಿಕ್ಕೆ ನನ್ನ ಬಳಿ ಅಷ್ಟೊಂದು ನೋಟು ಇಲ್ಲ. ಈಗ ಹೇಳಿ ತೊಂದರೆಗೊಳಗಾಗುವವರು ಯಾರು? ನಾನೋ ಆ ಕೆಲಸಗಾರರೋ?''.
ಈಗ ಹೇಳಿ ತೊಂದರೆಗೊಳಗಾಗುವವರು, ತೊಂದರೆ ಅನುಭವಿಸುತ್ತಿರುವವರು ಯಾರು?.