ಅಪ್ರತಿಮ ತಂತ್ರಜ್ಞ, ಕಠಿಣ ಪರಿಶ್ರಮಿ ಗಫೂರ್ ಸಾಬ್
ಇವರು ನಮ್ಮೂರಿನ ಅಪ್ರತಿಮ ತಂತ್ರಜ್ಞ 65-70 ವರ್ಷ ವಯಸ್ಸಿನ ಗಫೂರ್ ಸಾಬ್. ಓದಿದ್ದು ನಾಲ್ಕೋ ಐದನೇ ತರಗತಿ. ಮಿಕ್ಸಿ,ಟಿ.ವಿ,ಫ್ಯಾನ್ ನಿಂದ ಹಿಡಿದು ಮುರಿದ ಕೊಡೆ, ಹಾಳಾದ ಟಾರ್ಚ್ ವರೆಗೆ ಎಲ್ಲವನ್ನೂ ರಿಪೇರಿ ಮಾಡಬಲ್ರು. ಬಸ್ ಸ್ಟ್ಯಾಂಡ್ ಹತ್ರ ಒಂದು ಚಿಕ್ಕ ಗೂಡಂಗಡಿಲಿ ಕೂಡಲು ತಮಗೇ ಸರಿಯಾಗಿ ಜಾಗ ಇಲ್ದಂತೆ ತರಾವರಿ ಟೂಲ್, ರಿಪೇರಿಗೆಂದ ಬಂದ ಸಾಮಗ್ರಿ ಇತ್ಯಾದಿಗಳನ್ನು ಜೋಡಿಸಿಕೊಂಡಿದ್ದಾರೆ. ತಪ್ಪದೇ ದಿನಕ್ಕೆ ಐದು ಬಾರಿ ನಮಾಜು ಮಾಡ್ತಾರೆ. ಊರಿನ ಬಹಳಷ್ಟು ಜನರಿಗೆ ಇವರು ' ಚಾಚಾ, ಮಾವ, ಭೈಯ್ಯಾ...
ನಮ್ಮ ಶಾಲಾ ಮಕ್ಕಳಿಗೆ ವಿದ್ಯುತ್ ವಾಹಕಗಳನ್ನು ಪರೀಕ್ಷಿಸಿ ಅರ್ಥಮಾಡಿಕೊಳ್ಳಲು ಸರ್ಕ್ಯೂಟ್ ಒಂದನ್ನು ತಯಾರಿಸಿ ಕೊಟ್ಟಿದ್ದಾರೆ. ಅದೂ ನಿರುಪಯುಕ್ತವೆಂದು ಬಿಸಾಡಿದ ವಸ್ತುಗಳಿಂದ. ಇದನ್ನು ನೋಡಿ ಮಕ್ಕಳೂ ತಮ್ಮದೇ ಆದ ತರೇವಾರಿ ಸರ್ಕ್ಯೂಟ್ ತಯಾರಿಸಿಕೊಂಡಿದ್ದಾರೆ.
ವಯಸ್ಸಾಗಿದೆ, 'ವೃದ್ಧಾಪ್ಯ ವೇತನಕ್ಕೆ' ಯಾಕೆ ಪ್ರಯತ್ನಿಸಿಲ್ಲ? ನಾನು ಸಹಾಯ ಮಾಡ್ತೀನಿ ಅಂದ್ರೆ ' ನನಗದು ಬೇಡ. ನನಗೆ ಸಾಕಾಗುವಷ್ಟು ನಾನು ದುಡಿಯೋದೇ ಖುಷಿ. ಅಷ್ಟು ಸಿಗ್ತಿದೆ ಅಷ್ಟು ಸಾಕು. ಮಿಕ್ಕಿದಾಗ ಅಲ್ಲಾ ನೋಡ್ಕೋತಾನೆ' ಅಂತಾರೆ. ನಮ್ಮ ಶಾಲೆಗೆ ಬಂದು ಮೋಟರ್, ಆರ್ಮಿಚರ್ ಕೆಲಸ ಮಾಡೋ ರೀತಿನಾ ಹೇಳಿಕೊಡ್ತೀನಿ ಅಂತ ಒಪ್ಕೊಂಡಿದಾರೆ. ಧನ್ಯವಾದಗಳು ಗಫೂರ್ ಸಾಹೇಬರೆ.