ಗುರಿತಪ್ಪಿರುವ ತಥಾಕಥಿತ ‘ಮಹಾಯಜ್ಞ’
ಭಾಗ-1
ರೂ. 500 ಮತ್ತು 1000 ಮುಖಬೆಲೆಯ ಎಲ್ಲಾ ನೋಟುಗಳನ್ನು ಅಮಾನ್ಯಗೊಳಿಸುವ ಮೋದಿ ಸರಕಾರದ ದಿಢೀರ್ ನಿರ್ಧಾರ ಆಪ್ತವಲಯಗಳಿಗೆಲ್ಲ ಅನಿರೀಕ್ಷಿತ ಆಗಿರಲಿಕ್ಕಿಲ್ಲ, ಆದರೆ ಜನಸಾಮಾನ್ಯರ ಮಟ್ಟಿಗಂತೂ ತೀರಾ ಅನಿರೀಕ್ಷಿತವಾಗಿರುವುದರೊಂದಿಗೆ ಭಾರೀ ಕ್ಲೇಶಕರವೂ ಆಗಿ ಪರಿಣಮಿಸಿದೆ. ನವೆಂಬರ್ 8ರಂದು ತನ್ನ ಎಂದಿನ ಹಾವಭಾವಯುಕ್ತ ಜನಮರುಳ ಶೈಲಿಯಲ್ಲಿ ನಾಟಕೀಯ ಭಾಷಣ ಬಿಗಿದ ಮೋದಿ ಪ್ರಾಮಾಣಿಕ ರಿಕ್ಷಾವಾಲ, ತರಕಾರಿ ವ್ಯಾಪಾರಿ, ಶ್ರಮಜೀವಿ ಮೊದಲಾದವರ ಬಗ್ಗೆ ಭಾರೀ ಅನುಕಂಪ ಉಳ್ಳವರಂತೆ ನಟಿಸುತ್ತಾ ಭ್ರಷ್ಟಾಚಾರ, ಕಾಳಧನ, ಭಯೋತ್ಪಾದನೆಗಳ ವಿರುದ್ಧ ಮಹಾಯಜ್ಞಕ್ಕೆ ಕರೆಕೊಟ್ಟಿದ್ದಾರೆ. ಆದರೆ ಈ ಮಹಾಯಜ್ಞಕ್ಕೆ ಆಹುತಿಯಾಗುತ್ತಿರುವವರು ಅವರು ಉಲ್ಲೇಖಿಸಿದ ಅದೇ ವರ್ಗಗಳಿಗೆ ಸೇರಿದ ಸಾಮಾನ್ಯ ಜನರೆಂಬ ಕಟುಸತ್ಯ ದಿನಗಳೆದಂತೆ ಹೆಚ್ಚೆಚ್ಚು ಸ್ಪಷ್ಟವಾಗತೊಡಗಿದೆ. ಕಟ್ಟರ್ ಮೋದಿಬಂಟರು ಯಥಾಪ್ರಕಾರ ಶಂಖ, ಜಾಗಟೆಗಳೊಂದಿಗೆ ತಮ್ಮ ಸರ್ವಾಧಿಕಾರಿ ನಾಯಕನ ದಿಟ್ಟ ಕ್ರಮವನ್ನು ಕೊಂಡಾಡುತ್ತಾ ಟೀಕಿಸುವವರ ವಿರುದ್ಧ ಹರಿಹಾಯುತ್ತಿದ್ದಾರೆ. ಅದೇ ವೇಳೆ ಆಚೆಯೂ ಅಲ್ಲ ಈಚೆಯೂ ಅಲ್ಲ ಎನ್ನುವಂತಿದ್ದ ಸುಮಾರು 3 ಲಕ್ಷಕ್ಕೂ ಅಧಿಕ ಮೋದಿಯ ಟ್ವಿಟರ್ ಅನುಯಾಯಿಗಳ ಹೆಬ್ಬೆರಳುಗಳೆಲ್ಲ ಅಧೋಮುಖವಾಗಿವೆ. ನವೆಂಬರ್ 9ರಂದು ನೋಟು ರದ್ದತಿ ಕ್ರಮವನ್ನು ಹೊಗಳಿದ ವ್ಯಾಪಾರಿಗಳ ಸಂಘ (Confederation of All India Traders), ನಂತರ ಅದರ ಸದಸ್ಯರಿಗೆ ಆಗುತ್ತಿರುವ ಕೆಟ್ಟ ಅನುಭವಗಳ ಹಿನ್ನೆಲೆಯಲ್ಲಿ ಮಾರನೆ ದಿನವೇ ಖಂಡನಾತ್ಮಕ ಹೇಳಿಕೆ ನೀಡಿದೆ. ತಮ್ಮ ಸಮಸ್ಯೆಗಳನ್ನು ತೆರೆದಿಟ್ಟ ಸಂಘದ ಪ್ರಧಾನ ಕಾರ್ಯದರ್ಶಿ, ಸಾಕಷ್ಟು ನಗದು ಲಭ್ಯವಿರದ ಕಾರಣ ಗ್ರಾಹಕರಿಗೆ ಚಿಲ್ಲರೆ ವ್ಯಾಪಾರಿಗಳಿಂದ ಖರೀದಿಸಲಾಗುತ್ತಿಲ್ಲ, ಚಿಲ್ಲರೆ ವ್ಯಾಪಾರಿಗಳಿಗೆ ಡಿಸ್ಟ್ರಿಬ್ಯೂಟರ್ಗಳ ಹಣ ಸಂದಾಯ ಮಾಡಲು ಸಾಧ್ಯವಾಗುತ್ತಿಲ್ಲ, ಡಿಸ್ಟ್ರಿಬ್ಯೂಟರ್ಗಳಿಗೆ ಉತ್ಪಾದಕರ ಹಣವನ್ನು ಪಾವತಿಸಲು ಆಗುತ್ತಿಲ್ಲ ಎಂದು ದೂರಿದ್ದಾರೆ. ಅಂಧಾಭಿಮಾನಿಗಳಿಂದ ‘ಸರ್ಜಿಕಲ್ ದಾಳಿ’ ಎಂದು ಬಣ್ಣಿಸಲ್ಪಟ್ಟಿರುವ ಈ ಕಾರ್ಯಾಚರಣೆ ಈಗಾಗಲೇ ಕನಿಷ್ಠ ಹತ್ತು ಅಮಾಯಕ ಭಾರತೀಯ ಪ್ರಜೆಗಳ ಬಲಿ ತೆಗೆದುಕೊಂಡಿದೆ. ಮುಗಿಯುವಷ್ಟರಲ್ಲಿ ಇನ್ನೆಷ್ಟು ಪ್ರಾಣಬಲಿ ಪಡೆದುಕೊಳ್ಳಲಿದೆಯೊ ತಿಳಿಯದು.
ನವೆಂಬರ್ 9ರ ಮುಂಜಾನೆಯಿಂದ ಪ್ರಾರಂಭವಾಗಿ ಈಗಲೂ ಮುಂದುವರಿಯುತ್ತಿರುವ ಜನಸಾಮಾನ್ಯರ ಪಡಿಪಾಟಲುಗಳನ್ನು ಗಮನಿಸಿದಾಗ ಇದೊಂದು ಸರಿಯಾದ ಪೂರ್ವಸಿದ್ಧತೆ ಇಲ್ಲದ, ಸಂವೇದನಾರಹಿತ ಹಾಗೂ ಅದಕ್ಷತೆಯಿಂದ ಕೂಡಿದ ಕಾರ್ಯಾಚರಣೆ ಎಂಬುದು ಸ್ಪಟಿಕಸ್ಪಷ್ಟ. ಇವತ್ತು ದೇಶದಲ್ಲಿ ಸುಮಾರು 80,000 ಬ್ಯಾಂಕು ಶಾಖೆಗಳಿದ್ದು ಹಳೆ ನೋಟುಗಳನ್ನು ಬದಲಾಯಿಸುವ ಮತ್ತು ಜಮೆ ಮಾಡುವ ಪ್ರಕ್ರಿಯೆಯಲ್ಲಿ ಪ್ರತಿ ಶಾಖೆಯ ಸಿಬ್ಬಂದಿ ಸರಾಸರಿ 15,000 ಗಿರಾಕಿಗಳ ಜೊತೆ ವ್ಯವಹರಿಸಬೇಕಾಗಿದೆ ಎಂದರೆ ಇದರ ಅಗಾಧತೆಯನ್ನು ಅರ್ಥಮಾಡಿಕೊಳ್ಳಬಹುದು. ಆರಂಭದಲ್ಲಿ ಎಟಿಎಂಗಳಲ್ಲಿ ಬದಲಾವಣೆ ಮಾಡಲು ಎರಡು ದಿನ ಸಾಕೆಂದ ಸರಕಾರ ಈಗ ಮೂರು ವಾರಗಳು ಬೇಕೆನ್ನುತ್ತಿದೆ. ಜತೆಗೆ ಹೊಸ ನೋಟುಗಳ ಮುದ್ರಣ, ವಿತರಣೆ ಇತ್ಯಾದಿ ಪ್ರಕ್ರಿಯೆಗಳಿಗೆ ಅತ್ಯಂತ ದಕ್ಷತೆಯಿಂದ ಕೂಡಿದ ಲಾಜಿಸ್ಟಿಕ್ಸ್ ಅತ್ಯಗತ್ಯ. ಇದರ ಕೊರತೆಯೇ ಇವತ್ತಿನ ಎಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ. ಪರಿಣಾಮವಾಗಿ ಕೇವಲ ನಗದು ಹಣದ ಮೇಲೆ ಹೊಂದಿಕೊಂಡಿರುವ ರೈತರು, ಬಡವರು, ಜನಸಾಮಾನ್ಯರು, ದಿನಗೂಲಿ ಕಾರ್ಮಿಕರು, ಗೃಹಿಣಿಯರು, ತಾಯಂದಿರು, ಬ್ಯಾಂಕ್ ಖಾತೆ ಇಲ್ಲದವರು ಮುಂತಾದವರ ಬದುಕು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಡ್ರೈವರ್, ಕಂಡಕ್ಟರ್, ಮನೆಕೆಲಸದಾಕೆ, ಪ್ಲಂಬರ್, ಮೆಕ್ಯಾನಿಕ್, ವೈಟರ್, ಬೀದಿಬದಿ ವ್ಯಾಪಾರಿಗಳಂತಹವರು ಬ್ಯಾಂಕು, ಎಟಿಎಂಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದ್ದರೆ ವಯೋವೃದ್ಧರು, ಗೃಹಿಣಿಯರು ಮುಂತಾದವರ ಸಂಕಷ್ಟ ಹೇಳತೀರದಾಗಿದೆ. ಇವರೆಲ್ಲ ಗೋಣಿಗಟ್ಟಳೆ ಹಣವನ್ನು ಖಾತೆಗೆ ಜಮಾ ಮಾಡಲು ಬಂದವರೇನಲ್ಲ. ಇವರು ತಮ್ಮ ಸಣ್ಣಪುಟ್ಟ ಉಳಿತಾಯದ ಹಣವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವವರು. ದೈನಂದಿನ ಖರ್ಚುವೆಚ್ಚಗಳಿಗಾಗಿ ನಗದಿನ ಮೇಲೆ ಅವಲಂಬಿಸಿರುವವರು. ಆದರೆ ನೈಜ ಕಾಳದಂಧೆಕೋರರು ಆರಾಮವಾಗಿ ಕಮಿಷನ್ ಏಜೆಂಟರುಗಳ ಮೂಲಕ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ! ಕಪ್ಪುಹಣ ಮತ್ತು ನೋಟು ರದ್ದತಿ ಹಾಗೆ ನೋಡಿದರೆ ಬಚ್ಚಿಟ್ಟ ಕಪ್ಪುಹಣ ಹೊರತೆಗೆಯಲೆನ್ನಲಾಗುವ ನೋಟು ರದ್ದತಿ ಕಾರ್ಯಕ್ರಮಗಳು ಈ ಹಿಂದೆಯೂ ನಡೆದಿವೆ. 1946ರಲ್ಲಿ ರೂ 500, 1,000, 10,000 ಮತ್ತು 1978ರಲ್ಲಿ ರೂ 1,000, 5,000, 10,000ದ ನೋಟುಗಳ ರದ್ದತಿ ನಡೆದಿದ್ದರೆ 2014ರಲ್ಲಿ ನಿರ್ದಿಷ್ಟ ಶ್ರೇಣಿಯ ರೂ 500, 1000ದ ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ಆದರೆ ಈಗಿನದ್ದಕ್ಕೆ ಹೋಲಿಸಿದರೆ ಹಿಂದಿನ ಮೂರೂ ಸಂದರ್ಭಗಳಲ್ಲಿ ಜನಸಾಮಾನ್ಯರು ಅನುಭವಿಸಿದ ಸಂಕಷ್ಟದ ಪ್ರಮಾಣ ಕಡಿಮೆ ಎಂದು ತಿಳಿದುಬರುತ್ತದೆ. ಪ್ರಸಕ್ತ ಕಾರ್ಯಾಚರಣೆಯಲ್ಲಿ ಚಲಾವಣೆಯಲ್ಲಿರುವ ಹಣದ ಶೇ. 86ರಷ್ಟು ಅಂದರೆ ಸುಮಾರು ರೂ. 14 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಬದಲಾಯಿಸಲಾಗುತ್ತದೆ ಎಂದು ಹೇಳುತ್ತಿರುವ ಮೋದಿ ಸರಕಾರ ಇದರಿಂದಾಗಿ ಎಷ್ಟು ಕಪ್ಪುಹಣ ಹೊರಬೀಳಲಿದೆ ಎಂಬ ಮಾಹಿತಿಯನ್ನು ನೀಡದಿರುವುದು ಗಮನಾರ್ಹ. ಈಗಾಗಲೆ ಉಲ್ಲೇಖಿಸಲಾದ ಹಿಂದಿನ ಮೂರೂ ನೋಟು ರದ್ದತಿ ಕಾರ್ಯಕ್ರಮಗಳು ಕಪ್ಪುಹಣದ ಬೇರನ್ನು ಕಿತ್ತೊಗೆಯುವಲ್ಲಿ ಸಂಪೂರ್ಣ ಅಸಫಲವಾಗಿವೆ. ಈ ಕ್ರಮಗಳು ಕೇವಲ ತಾತ್ಕಾಲಿಕ ಉಪಶಮನಗಳಲ್ಲದೆ ಇನ್ನೇನೂ ಅಲ್ಲ ಎಂಬುದಕ್ಕೆ ಕಪ್ಪುಹಣ ಮಾಯವಾಗುವ ಬದಲು ಇನ್ನಷ್ಟು ಬೆಳೆದು ಹೆಮ್ಮರವಾಗಿರುವುದೆ ಸಾಕ್ಷಿ.
ಕಪ್ಪುಹಣ ನಗದಿನ ರೂಪದಲ್ಲಿರುತ್ತದೆ, ಅದನ್ನೆಲ್ಲ ಪಲ್ಲಂಗದ ಅಡಿಯಲ್ಲಿ ಅಥವಾ ಕಪಾಟುಗಳಲ್ಲಿ ಅಥವಾ ಟ್ರಂಕುಗಳಲ್ಲಿ ತುಂಬಿ ಭೂಮಿಯೊಳಗೆ ಅಡಗಿಸಿಡಲಾಗುತ್ತದೆ ಎಂದು ಸರಳವಾಗಿ ಅರ್ಥೈಸಿಕೊಂಡವರೆ ಹೆಚ್ಚು. ಆದರೆ ವಾಸ್ತವ ಬೇರೆಯೆ ಇದೆ. ನಗದು ರೂಪದಲ್ಲಿರುವ (ಉದಾ: ಚುನಾವಣೆಗಳ ಕಾಲಗಳಲ್ಲಿ) ಕಪ್ಪುಹಣದ ಪ್ರಮಾಣ ತುಂಬಾ ಕಡಿಮೆ. ಅಲ್ಲದೆ ಕಪ್ಪುಹಣದ ಬಹ್ವಂಶ ದೇಶದೊಳಗೆ ಇಲ್ಲ; ಅದು ವಿದೇಶಗಳಲ್ಲಿರುವ ಹಲವಾರು ತೆರಿಗೆ ಧಾಮಗಳಲ್ಲಿ ಸುರಕ್ಷಿತವಾಗಿದೆ. (ಒಂದು ಅಂದಾಜಿನಂತೆ 2008ರ ತನಕ ಸುಮಾರು 462 ಬಿಲಿಯ ಡಾಲರುಗಳು). ಬಿಳಿಯ ಹಾಗೆ ಕಪ್ಪುಹಣವೂ ಸದಾ ಚಲಾವಣೆಯಲ್ಲಿ ಇರುತ್ತದೆ; ಅದನ್ನು ನಾನಾ ಕಾಳದಂಧೆಗಳಲ್ಲಿ ಹೂಡಲಾಗುತ್ತದೆ. ಇತ್ತೀಚೆಗೆ ಸೋರಿಕೆಯಾದ ‘ಪನಾಮಾ ಪೇಪರ್ಸ್’ ಪ್ರಕಾರ ಭಾರತದ ಅನೇಕ ಧನಾಡ್ಯರ ಹೆಚ್ಚಿನ ಹಣವೆಲ್ಲ ವಿದೇಶಗಳಲ್ಲಿದೆ. ವಿದೇಶಗಳಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬನ ಕಿಸೆಗೆ ರೂ 15 ಲಕ್ಷ ಇಳಿಬಿಡುವ ಭರವಸೆ ಕೊಟ್ಟವರಿಗೆ ಆ ಕಪ್ಪುಹಣ ನಗದಿನ ರೂಪದಲ್ಲಿಲ್ಲ ಎನ್ನುವುದು ಗೊತ್ತಿತ್ತು! ಕಾನೂನುಬಾಹಿರ ಅಥವಾ ತೆರಿಗೆ ವಂಚನೆಯ ವಹಿವಾಟುಗಳೆಲ್ಲವೂ ಕಪ್ಪುಹಣದ ವ್ಯಾಪ್ತಿಗೆ ಬರುತ್ತವೆ. ಕಪ್ಪುಹಣ ಉತ್ಪತ್ತಿಯಾಗುವುದು ಕೈಗಾರಿಕಾ ಉತ್ಪಾದನೆಯಲ್ಲಿ ಹಾಗೂ ರಫ್ತು ಪ್ರಮಾಣದಲ್ಲಿ ಅಸಲಿಗಿಂತ ಕಡಿಮೆ ತೋರಿಸುವ ಮೂಲಕ. (ಉದಾಹರಣೆಗೆ 1000 ಟನ್ ಅದಿರು ಮಾರಿ 800 ಟನ್ಗಳಷ್ಟನ್ನೆ ದಾಖಲಿಸುವುದು), ಆಮದು ದರಪಟ್ಟಿಯಲ್ಲಿ ಅಸಲಿಗಿಂತ ಹೆಚ್ಚು ತೋರಿಸುವ ಮೂಲಕ, ಹವಾಲಾ ದಂಧೆ, ರಿಯಲ್ ಎಸ್ಟೇಟ್ ದಂಧೆ ಇತ್ಯಾದಿಗಳ ಮೂಲಕ. ಆದರೆ ಇದರ ಸಿಂಹಪಾಲು ವಿದೇಶಗಳಲ್ಲಿ ಸುರಕ್ಷಿತವಾಗಿರುತ್ತದೆ. ಕಳೆದ ಒಂದು ವರ್ಷದಲ್ಲೇ ಸುಮಾರು 83 ಬಿಲಿಯನ್ ಡಾಲರು ಮೌಲ್ಯದ ಕಾಳದಂಧೆ ನಡೆದಿದೆ ಎಂದರೆ ಕಾಳಧನದ ಪ್ರಮಾಣ ಎಷ್ಟೊಂದು ಅಗಾಧವಾಗಿದೆ ಎಂದು ಊಹಿಸಬಹುದು. ದೊಡ್ಡ ದೊಡ್ಡ ಕಾರ್ಪೊರೇಟು ಕುಳಗಳು ಇಂತಹ ಬಿಲಿಯಾಂತರ ಡಾಲರು ಕಪ್ಪುಹಣವನ್ನು ಬಿಳಿಯಾಗಿಸಿರುವುದನ್ನು ಎಂ.ಬಿ.ಷಾ ನೇತೃತ್ವದ ವಿಶೇಷ ತನಿಖಾ ತಂಡ ಪತ್ತೆಹಚ್ಚಿದೆ. ತೆರಿಗೆ ವಂಚಿಸಿದ ದುಡ್ಡನ್ನೆಲ್ಲ ಸ್ಥಿರಾಸ್ತಿ, ಚಿನ್ನ, ಆಭರಣ ಮುಂತಾದವುಗಳಲ್ಲಿ ಹೂಡಲಾಗುತ್ತದೆ. ಇಂತಹ ಕಪ್ಪುವಹಿವಾಟುಗಳನ್ನು ತಡೆಗಟ್ಟದೆ ಬರೀ ನೋಟು ರದ್ದತಿಯಿಂದ ಕಪ್ಪುಹಣದ ಉತ್ಪಾದನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. 1978ರಲ್ಲಿ ಮೊರಾರ್ಜಿ ದೇಸಾಯಿ ಸರಕಾರ ನೋಟು ರದ್ದತಿ ಮಾಡಿದ ಸಂದರ್ಭದಲ್ಲಿ ಐ.ಜಿ.ಪಟೇಲ್ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ಅವರು ತಮ್ಮ ‘Glimpses of Indian Economic Policy: An Insider’s View’ ಎಂಬ ಪುಸ್ತಕದಲ್ಲಿ ಹೀಗನ್ನುತ್ತಾರೆ: ‘‘ಇದು ಅಧಿಕ ಕೆಲಸ, ಅಲ್ಪ ಫಾಯಿದೆಯ ಕ್ರಮ.... ಕಪ್ಪುಹಣವನ್ನು ನೋಟುಗಳ ರೂಪದಲ್ಲಿ ಶೇಖರಿಸಲಾಗುತ್ತದೆಂದು ತಿಳಿಯುವುದು ಭೋಳೆತನ. ಹಾಗೊಂದು ವೇಳೆ ಇದ್ದರೂ ಅದನ್ನು ಏಜಂಟ್ಗಳ ಮೂಲಕ ಬದ ಲಾಯಿಸಿಕೊಳ್ಳಲಾಗುತ್ತದೆ.....!’’