ಖಾಸಗಿಯಾಗುತ್ತಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು...
2004-05ರಲ್ಲಿ 156ರಷ್ಟಿದ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ 2010-11ರ ಹಂಗಾಮಿನಲ್ಲಿ 117ಕ್ಕೆ ಇಳಿಯಿತು. 2014-15ರ ಹಂಗಾಮಿನಲ್ಲಿ ಇದರಲ್ಲಿ ಮತ್ತೆ 18 ಕಾರ್ಖಾನೆಗಳು ಬಂದ್ ಆಗಿವೆ. ಇದೀಗ 99 ಸಹಕಾರಿ ಸಕ್ಕರೆ ಕಾರ್ಖಾನೆಗಳು ಮಾತ್ರ ಕಬ್ಬು ನುರಿಸುತ್ತಿವೆ.
ಖಾಸಗೀಕರಣದ ಮಾಯೆ ಎಲ್ಲೆಲ್ಲೂ ಮೋಡಿ ಮಾಡುತ್ತಿದೆ. ಇದಕ್ಕೆ ಮಹಾರಾಷ್ಟ್ರದ ಗಡಿ ಭಾಗದ ಬೆಳಗಾವಿಯ ಸಕ್ಕರೆ ಉದ್ಯಮ ಕ್ಷೇತ್ರವೂ ಹೊರತಾಗಿಲ್ಲ. ಒಂದು ಕಾಲದಲ್ಲಿ ಇಡೀ ದೇಶಕ್ಕೆ ಸಹಕಾರಿ ರಂಗದ ಮೂಲಮಂತ್ರ ಹೇಳಿಕೊಟ್ಟ ಇಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪರಿಣಾಮ ಪ್ರತಿವರ್ಷ 5ಕ್ಕೂ ಅಧಿಕ ಸಹಕಾರಿ ಸಕ್ಕರೆ ಕಾರ್ಖಾನೆಗಳು ಬಾಗಿಲು ಮುಚ್ಚುತ್ತಿವೆ. ಖಾಸಗಿ ಕಂಪೆನಿಗಳು ಸಹಕಾರಿ ಕಾರ್ಖಾನೆಗಳ ಪುನಶ್ಚೇತನಕ್ಕೆ ಮುಂದಾಗುತ್ತಿದ್ದು, ಸಹಕಾರಿ ಕಾರ್ಖಾನೆಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿವೆ. ಹಾಗೆಯೇ ಖಾಸಗಿ ಕ್ಷೇತ್ರ ವಿಸ್ತಾರಗೊಳ್ಳುತ್ತಿದೆ.
ಕಳೆದ ಕೆಲ ವರ್ಷಗಳಲ್ಲಿ ಸರಿ ಸುಮಾರು 18 ಸಹಕಾರಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ನಿಲ್ಲಿಸಿದ್ದು, ಈ ಕಾರ್ಖಾನೆಗಳು ಖಾಸಗೀಕರಣದತ್ತ ಕಾಲಿಟ್ಟಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಹಕಾರ ಮಹರ್ಷಿ ವಿ.ಕೆ. ಪಾಟೀಲ ಮೊದಲ ಬಾರಿಗೆ ಸಹಕಾರಿ ತತ್ವದಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದರು. ತದನಂತರ ನೋಡು ನೋಡುತ್ತಿದ್ದಂತೆಯೇ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪಟ್ಟಿ ಏರುತ್ತಲೇ ಸಾಗಿತು. ಜಿಲ್ಲೆಯ ಗಣ್ಯರು, ಸಹಕಾರಿ ಧುರೀಣರು ಕೇವಲ ರೈತರ ಕಬ್ಬಿಗೆ ಬೆಲೆ ನೀಡುವುದಕ್ಕಷ್ಟೇ ಸೀಮಿತವಾಗದೆ ಕಾರ್ಖಾನೆ ಪರಿಸರದಲ್ಲಿನ ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದರು.
ಕೊಲ್ಲಾಪುರ ಜಿಲ್ಲೆಯ ಕ್ರಾಂತಿವೀರ ನಾಗನಾಥ ಅಣ್ಣಾ ನಾಯಕವಡಿ ಅವರ ಕಿಸನ್ ವೀರ ಹಾಗೂ ಇಚಲಕರಂಜಿಯ ದೇಶಭಕ್ತ ರತ್ನಪ್ಪಣ್ಣಾ ಕುಂಬಾರರ ಪಂಚಗಂಗಾ ಸಹಕಾರಿ ಸಕ್ಕರೆ ಕಾರ್ಖಾನೆಗಳಂತೂ ಪ್ರತಿ ವರ್ಷ 200 ಬಡ, ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಪರಿಸರದಲ್ಲಿಯ ನೂರಕ್ಕೂ ಅಧಿಕ ಹಳ್ಳಿಗಳಲ್ಲಿಯ ರೈತರ ಹೊಲಗಳಿಗೆ ನೀರಾವರಿ ಯೋಜನೆಗಳನ್ನು ಅಳವಡಿಸಿದ್ದವು. ಆದರೆ ಇಂತಹ ದೂರದೃಷ್ಟಿಯುಳ್ಳ ವ್ಯಕ್ತಿಗಳು ಕಾಲಾಂತರ ಮರೆಯಾಗಿ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಸ್ವಾರ್ಥ ಸೇರಿಕೊಂಡಿತು. ಸಹಕಾರಿ ಸಕ್ಕರೆ ಕಾರ್ಖಾನೆಗಳು ಇಲ್ಲವಾಗುತ್ತ, ಇತ್ತ ಖಾಸಗಿ ಕಾರ್ಖಾನೆಗಳು ತಲೆ ಎತ್ತುತ್ತಲೇ ಹೋದವು.
ಮಿತಿಮೀರಿದ ಖರ್ಚು, ಆಡಳಿತದಲ್ಲಿಯ ಭ್ರಷ್ಟಾಚಾರ, ರಾಜಕೀಯ ಸೇರಿದ್ದರಿಂದ ಸಹಕಾರಿ ಕಾರ್ಖಾನೆಗಳಿಗೆ ಗ್ರಹಣ ಹಿಡಿಯಲು ಪ್ರಾರಂಭವಾಯಿತು. ರೈತ ಸಂಘಟನೆಯ ಚಳವಳಿಯಿಂದಾಗಿ ಕಬ್ಬಿನ ಬೆಲೆ ಹೆಚ್ಚಳದ ಮಧ್ಯೆ ಕುಸಿದ ಸಕ್ಕರೆ ಬೆಲೆಯಿಂದಾಗಿಯಂತೂ ಸಹಕಾರಿ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟದಿಂದ ತುಕ್ಕು ಹಿಡಿದವು. 2004-05ರಲ್ಲಿ 156ರಷ್ಟಿದ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ 2010-11ರ ಹಂಗಾಮಿನಲ್ಲಿ 117ಕ್ಕೆ ಇಳಿಯಿತು. 2014-15ರ ಹಂಗಾಮಿನಲ್ಲಿ ಇದರಲ್ಲಿ ಮತ್ತೆ 18 ಕಾರ್ಖಾನೆಗಳು ಬಂದ್ ಆಗಿವೆ. ಇದೀಗ 99 ಸಹಕಾರಿ ಸಕ್ಕರೆ ಕಾರ್ಖಾನೆಗಳು ಮಾತ್ರ ಕಬ್ಬು ನುರಿಸುತ್ತಿವೆ.
ಇತ್ತೀಚಿನ ವರ್ಷಗಳಲ್ಲಂತೂ ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ಖಾಸಗಿ ಕಂಪೆನಿಗಳು ಮುಂದಾಗುತ್ತಿವೆ. ಆರು ವರ್ಷಗಳ ಹಿಂದೆ 49ರಷ್ಟಿದ್ದ ಖಾಸಗಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಪ್ರಸಕ್ತ ವರ್ಷ 79ಕ್ಕೇರಿದೆ. ಈಗ ಮಹಾರಾಷ್ಟ್ರದಲ್ಲಿ ಒಟ್ಟು 99 ಸಹಕಾರಿ ಸಕ್ಕರೆ ಕಾರ್ಖಾನೆಗಳು ಹಾಗೂ 79 ಖಾಸಗಿ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಮುಂಬರುವ ಐದು ವರ್ಷಗಳಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗಿಂತ ಖಾಸಗಿ ಸಕ್ಕರೆ ಕಾರ್ಖಾನೆಗಳೇ ಹೆಚ್ಚಾದರೆ ಅಚ್ಚರಿಪಡಬೇಕಿಲ್ಲ...