ಮಕ್ಕಳಲ್ಲಿ ಮಾರಕ ರೋಗಗಳು
‘ರೋಗ ನಿವಾರಣೆಗಿಂತ ರೋಗ ನಿರೋಧವೇ ಮೇಲು’ ಎಂಬ ವೈದ್ಯಕೀಯ ಜಾಣ ನುಡಿಯಿದೆ. ಯಾವುದಾದರೂ ರೋಗವು ಅಂಟಿದ ಮೇಲೆ ಅದರ ನಿವಾರಣೆ ಮಾಡಿಕೊಳ್ಳಲು ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ಅದು ಬಾರದಂತೆ ನೋಡಿಕೊಳ್ಳುವುದು ಯೋಗ್ಯ ದಾರಿ.
ಚಿಕ್ಕಮಕ್ಕಳಲ್ಲಿ ಕೆಲವರು ಕೆಲವೊಂದು ಸಾಂಸರ್ಗಿಕ ರೋಗಗಳಾದ ಧನುರ್ವಾಯು, ಕ್ಷಯ, ಬಾಲಾರ್ಧಾಂಗ (ಪೋಲಿಯೊ) ಮುಂತಾದ ರೋಗಗಳಿಗೆ ಬಲಿಯಾಗುವುದುಂಟು. ಅಲ್ಲದೆ ಲಕ್ಷಾಂತರ ಮಕ್ಕಳು ಈ ಮಾರಕ ರೋಗಗಳಿಂದಾಗಿ ಅಂಗವಿಕಲರಾಗುತ್ತಾರೆ. ಇದಕ್ಕೆ ಕಾರಣ ಅವರ ಶರೀರದಲ್ಲಿ ರೋಗವನ್ನು ಎದುರಿಸಲು ಬೇಕಾದ ಪ್ರತಿರೋಧಕ ಶಕ್ತಿ ಇರದಿರುವುದು ಮತ್ತು ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಬೆಳೆಯಲು ಪ್ರಚೋದಿಸುವಂತಹ ಸನ್ನಿವೇಶಗಳಾದ ಶುದ್ಧವಾದ ಕುಡಿಯುವ ನೀರಿನ ಹಾಗೂ ಸತ್ವಯುತ ಆಹಾರದ ಕೊರತೆ ಅಲ್ಲದೆ ಬಡತನ, ಮೂಢನಂಬಿಕೆಗಳು, ನೊಣಗಳ ಪಿಡುಗು ಇನ್ನಿತರ ಕಾರಣಗಳು. ಕೆಲವೊಂದು ಸಾಂಸರ್ಗಿಕ ರೋಗಗಳು ಎಂದೂ ಗುಣಪಡಿಸಲಾಗದ ಅಶಕ್ತತೆಯನ್ನುಂಟು ಮಾಡುತ್ತದೆ. ಉದಾ: ಕ್ಷಯ ಬಾಲಾರ್ಧಾಂಗ ಇತ್ಯಾದಿ. ಆದ್ದರಿಂದ ಮಕ್ಕಳನ್ನು ಇಂತಹ ಭಯಂಕರ ರೋಗಗಳಿಂದ ಸುಲಭವಾಗಿ ಅಗ್ಗವಾದ ರೋಗ ಪ್ರತಿಬಂಧಕಗಳಿಂದ ಅಥವಾ ಚುಚ್ಚು ಮದ್ದುಗಳಿಂದ ರಕ್ಷಿಸುವುದು ಅನಿವಾರ್ಯ.
ಕೆಳಕಂಡ ಲಸಿಕೆಗಳನ್ನು ಸಕಾಲದಲ್ಲಿ ಉಪಯೋಗಿಸುತ್ತಾ ಬಂದರೆ ಮಕ್ಕಳನ್ನು ಅನೇಕ ರೋಗಗಳಿಂದ ರಕ್ಷಿಸಬಹುದು.
ಕೆಳಗಿನ ಅಂಶಗಳನ್ನು ಲಕ್ಷದಲ್ಲಿಡಬೇಕು:
1. ತ್ರಿರೋಗ ಚುಚ್ಚುಮದ್ದು ಧರ್ನುವಾತ, ನಾಯಿ ಕೆಮ್ಮು ಮತ್ತು ಗಂಟಲು ರೋಗದಂತಹ ಮೂರು ರೋಗಗಳಿಗೆ ಪ್ರತಿಬಂಧಕ;. ಈ ತ್ರಿರೋಗ ಚುಚ್ಚು ಮದ್ದು ಮತ್ತು ಪೋಲಿಯೊ ಲಸಿಕೆ ಒಂದೇ ಸಲ ಹಾಕಿಸುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಬರಲಾರದು. ಆದ್ದರಿಂದ ಕಡ್ಡಾಯವಾಗಿ ಮೂರು ಸಲ ಹಾಕಿಸಲೇ ಬೇಕು. 2. ಪೋಲಿಯೊ ಲಸಿಕೆ ಹಾಕಿಸುವ ಒಂದು ತಾಸು ಮುಂಚೆ ಹಾಗೂ ಒಂದು ತಾಸು ನಂತರ ಹಾಲನ್ನು ಮಗುವಿಗೆ ಕುಡಿಸಬಾರದು. ಕಾರಣ ಲಸಿಕೆಯನ್ನು ಬಾಯಿಯಲ್ಲಿ ಹಾಕುವುದರಿಂದ ವಾಂತಿಯಾಗಿ ಹಾಕಿದ ಔಷಧ ಹೊರಗೆ ಬರುವ ಸಂಭವವಿದೆ.
Poliomylitusಪೋಲಿಯೊ (ಬಾಲಾರ್ಧಾಂಗ- ): ಈ ತೀವ್ರ ಸಾಂಕ್ರಾಮಿಕ ರೋಗವು ಎನ್‌ಟರೋ ವೈರಲ್ ಜಾತಿಯ ಕ್ರಿಮಿಗಳಿಂದ ಹರಡುವುದು. ಈ ಕ್ರಿಮಿಗಳು ನರಮಂಡಲವನ್ನು ಸಂಪೂರ್ಣವಾಗಿ ಆಶ್ರಯಿಸಿ ಸ್ನಾಯುಗಳ ದೌರ್ಬಲ್ಯ ವನ್ನುಂಟು ಮಾಡುತ್ತದೆ. ಕೈಗಳಿಗಿಂತಲೂ ಹೆಚ್ಚಾಗಿ ಕಾಲುಗಳಿಗೆ ಇದು ಮಾರಕವಾಗುತ್ತದೆ. ಈ ರೋಗವು ಬರುವಾಗ ಮೊದಲು ಜ್ವರ, ನೆಗಡಿ, ತಲೆನೋವು, ಚಳಿ, ಮೈಕೈಗಳ ನೋವು, ಕೆಮ್ಮು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಇದಲ್ಲದೆ 2-3 ದಿವಸಗಳ ಬಳಿಕ ಅಥವಾ ಜ್ವರದ ತೀವ್ರಾವಸ್ಥೆಯಿಂದ ರೋಗಕ್ಕೊಳಗಾದ ಭಾಗವು ತನ್ನ ಶಕ್ತಿಯನ್ನು ಕಳೆದುಕೊಳ್ಳುವುದರಿಂದ, ಆ ಭಾಗದ ಸ್ನಾಯುಗಳು ಸರಿಯಾಗಿ ಕೆಲಸ ಮಾಡಲು ಆಗದಿರುವುದರಿಂದ ಬಾಧಿತರು ಮೊದಲಿನಂತೆ ಕಾಲನ್ನಾಗಲಿ, ಕೈಯನ್ನಾಗಲಿ ಊರಲು, ಎತ್ತಲು, ಓಡಾಡಲು, ಹಿಡಿಯಲು ಅಸಮರ್ಥರಾಗುತ್ತಾರೆ.
ನಾಯಿಕೆಮ್ಮು: (Whooping cough)
ಚಿಕ್ಕಮಕ್ಕಳಿಗೆ ತೀವ್ರ ಸ್ವರೂಪವಾಗಿ ಹರಡುವ ಈ ರೋಗವು ಬ್ಯಾಸಿಲ್ಲಸ್ ಪೆರ್ಟುಸಿಸ್ ಎಂಬ ಕ್ರಿಮಿಗಳಿಂದ ಹಬ್ಬುವುದು. ಮೊದಲು ನೆಗಡಿ, ಗಂಟಲು ಕೆರೆತವುಳ್ಳ ಕೆಮ್ಮು ಈ ಲಕ್ಷಣಗಳಿಂದ ರೋಗವು ಪ್ರಬಲಗೊಳ್ಳುತ್ತಾ ಹೋಗುತ್ತದೆ. ಅನೇಕ ವೇಳೆ ಕೆಲವಾರಗಳಾದರೂ ಈ ರೋಗದ ಲಕ್ಷಣ ಕಡಿಮೆಯಾಗುವುದಿಲ್ಲ. ಮಗುವು ಉಸಿರು ಹಿಡಿದು ಜೋರಾಗಿ ಕೆಮ್ಮಿದಾಗ ವಾಂತಿ ಕೂಡ ಆಗುವುದು. ಈ ಕೆಮ್ಮಿನೊಡನೆ ಪುಪ್ಪುಸಬಾವು, ಶ್ವಾಸನಾಳ ಬಾವು ಹೆಚ್ಚುವುದು.
ಗಂಟಲು ರೋಗ (Diphtherias) :
ಇದು ತೀವ್ರ ಮಾರಕ ರೋಗ. ಕೊರಿಸಿನ್ ಬ್ಯಾಕ್ಟೀರಿಯ ಡಿಫ್ತೀರಿಯಾ ಎಂಬ ಕ್ರಿಮಿಗಳಿಂದ ಇದು ಉಂಟಾಗುತ್ತದೆ. ಇದು ಶ್ವಾಸಾಂಗಗಳಾದ ಮೂಗು, ಗಂಟಲುಗಳಿಗೆ ಆವರಿಸುತ್ತದೆ. ಈ ಕ್ರಿಮಿಗಳು ಗಂಟಲಿನಲ್ಲಿ ಉಸಿರಾಟದ ತೊಂದರೆಯನ್ನುಂಟು ಮಾಡುವುದು.ಕ್ರಿಮಿಗಳು ಅಂಟಿದ ಭಾಗದಲ್ಲಿ ಬೆಳೆಯತೊಡಗಿ ವಿಷವನ್ನು ರಕ್ತದಲ್ಲಿ ಬಿಡಲಾರಂಭಿಸುತ್ತದೆ. ಈ ವಿಷದಿಂದ ಹೃದಯ ಹಾಗೂ ನರಮಂಡಲಗಳು ದೂಷಿತವಾಗಿ ಮರಣವು ಸಂಭವಿಸುತ್ತದೆ.
ಧನುರ್ವಾಯು (Tetanus): ಈ ರೋಗವು ಕ್ಲೊಸ್ಟ್ರಿಟಿಯಂ ಟೆಟ್ಯಾನಿ ಎಂಬ ಕ್ರಿಮಿಯಿಂದ ಬರುತ್ತದೆ. ಈ ರೋಗ ಅಂಟಿದಾಗ ಮಗುವಿಗೆ ಸರಿಯಾಗಿ ಬಾಯಿ ತೆಗೆಯಲು ಆಗುವುದಿಲ್ಲ. ಹೃದಯ, ಹೊಟ್ಟೆ, ಕುತ್ತಿಗೆಯ ಸ್ನಾಯುಗಳ ಹಾಗೂ ಇತರ ಸ್ನಾಯುಗಳ ಸೆಳೆತವು ಕಂಡುಬರುವುದು. ಈ ರೋಗವು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆರಿಗೆಯಾದಾಗ ಅಶುದ್ಧ ಸಾಮಗ್ರಿಗಳು, ಹೊಕ್ಕಳು ಹುರಿಯನ್ನು ಕತ್ತರಿಸುವಾ ಉಪಯೋಗಿಸುವ ಅಶುದ್ಧ ತುಕ್ಕು ಹಿಡಿದ ಕತ್ತರಿ, ಚಾಕು, ಬ್ಲೇಡು, ಕುಡುಗೋಲು ಮುಂತಾದವುಗಳಿಂದ ನಮ್ಮ ದೇಶದಲ್ಲಿ ಬರುವುದು ಹೆಚ್ಚು.
ಕ್ಷಯ ರೋಗ (Tuberculosis): ಈ ರೋಗವು ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್-ಕ್ಯೂಲೋಸಿಸ್ ಎಂಬ ಕ್ರಿಮಿಯಿಂದ ಹರಡುವುದು. ಈ ರೋಗವು ಅನೇಕ ವಿಧದಲ್ಲಿ ಮಗುವಿಗೆ ಅಂಟ ಬಹುದು. ಹೆಚ್ಚಾಗಿ ಪುಪ್ಪುಸ, ಕರುಳು, ಮಿದುಳು, ಎಲುಬು, ಸಂದು ಮೊದಲಾದ ಭಾಗಗಳಿಗೆ ಅಂಟಿಕೊಳ್ಳುತ್ತದೆ.
ಮಕ್ಕಳಿಗೆ ಕ್ಷಯರೋಗ ಉಂಟಾದಾಗ ಬೇಗನೇ ಗೊತ್ತಾಗುವುದಿಲ್ಲ. ಮೈ ಬಿಸಿಯಾಗುವುದು, ಕೆಮ್ಮು, ಹಸಿವಿಲ್ಲದಿರುವುದು, ದಿನದಿಂದ ದಿನಕ್ಕೆ ಕ್ಷೀಣವಾಗುತ್ತಾ ಬರುವುದು ಇವು ಪ್ರಾರಂಭಿಕ ಲಕ್ಷಣಗಳು.
ಇಂತಹ ಸಾಂಕ್ರಾಮಿಕ ರೋಗಗಳು ಗಮನಕ್ಕೆ ಬಂದಾಗ ಕೂಡಲೇ ಊರಿನ ಅಥವಾ ನಗರದ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಬೇಕು. ಅವರು ಈ ರೋಗಗಳು ಪ್ರಸಾರವಾಗದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುತ್ತಾರೆ. ಮಕ್ಕಳಿಗೆ ಈ ರೋಗಗಳು ಬಂದಾಗ ಯೋಗ್ಯ ಚಿಕಿತ್ಸೆಯು ಕೂಡಲೇ ದೊರಕದಿದ್ದರೆ ಮೃತ್ಯುವನ್ನಪ್ಪುವ ಸಂಭವ ಹೆಚ್ಚು.
ಮಕ್ಕಳು ಈ ರೋಗಗಳಿಗೆ ತುತ್ತಾಗದಂತೆ ನೋಡಿ ಕೊಳ್ಳಬೇಕಾದರೆ ಪ್ರತಿಯೊಂದು ಮಗುವಿಗೂ ರೋಗ ಪ್ರತಿಬಂಧಕ ಚುಚ್ಚುಮದ್ದುಗಳನ್ನು ಸರಿಯಾದ ಸಮಯ ದಲ್ಲಿ ಹಾಕಿಸುವುದು ಪಾಲಕರ ಕರ್ತವ್ಯವಾಗಿದೆ.