ಆ ದೇಶಕ್ಕಾಗಿ ಮರುಕ ಪಡು!
ತಾ ನೇಯದ ಬಟ್ಟೆಯನು ತೊಡುತ್ತಿರುವ
ತಾ ಬೆಳೆಯದ ರೊಟ್ಟಿಯನು ತಿನ್ನುತ್ತಿರುವ
ತಾ ಬೆಳೆಸದಾ ದ್ರಾಕ್ಷಿ ತೋಟಗಳಿಂದ
ಹರಿವ ವೈನನು ಸವಿಯುತ್ತಿರುವ
ಆ ದೇಶಕ್ಕಾಗಿ ಮರುಕ ಪಡು !
ಪೀಡಕನನ್ನೇ ನಾಯಕನೆಂದು ತಿಳಿದಿರುವ
ಮಿನುಗು ಮಾತುಗಳನ್ನಾಡಿ ದೋಚುವ
ಲೂಟಿಕೋರನನೆ ದಾನಶೂರನೆಂದು ತಿಳಿದಿರುವ
ಆ ದೇಶಕ್ಕಾಗಿ ಮರುಕ ಪಡು !
ಕನಸೊಳಗೆ ಭಾವೋದ್ವೇಗವನು ತಿರಸ್ಕರಿಸಿ
ಎಚ್ಚರದೊಳದಕೆ ಶರಣಾಗುವ
ಆ ದೇಶಕ್ಕಾಗಿ ಮರುಕ ಪಡು!
ಶವಯಾತ್ರೆಯೊಂದನ್ನುಳಿದು ಮತ್ತೆಲ್ಲೂ ಸೊಲ್ಲೆತ್ತದ
ಅಳಿದ ಪಳೆಯುಳಿಕೆಗಳನ್ನುಳಿದು
ಬೇರೇನನ್ನೂ ಹೊಗಳದ
ಬಲಿಗಲ್ಲ ಮೇಲೆ ತನ್ನ ಕೊರಳೇ ಖಡ್ಗವನ್ನೆದುರಿಸುವ ಆ ಸಮಯವನ್ನುಳಿದು ಮತ್ತೆಲ್ಲೂ ಪ್ರತಿಭಟಿಸದ
ಆ ದೇಶಕ್ಕಾಗಿ ಮರುಕ ಪಡು !
ಅಲ್ಲಿ ನಾಯಕನೊಬ್ಬ ಗುಳ್ಳೆ ನರಿ
ಗಾರುಡಿಗನೇ ತತ್ತ್ವಜ್ಞಾನಿ
ಮೈದಡವಿ ಸಂತೈಸುವ ಕಲೆಗಾರ
ಆ ದೇಶಕ್ಕಾಗಿ ಮರುಕ ಪಡು !
ಡೊಳ್ಳು ವಾದ್ಯಗಳನ್ನೂದಿ
ಹೊಸ ನಾಯಕನ ಸ್ವಾಗತಿಸುವ
ಜರೆವ ಗದ್ದಲ ಲೇವಡಿಯೊಡನೆ
ಆ ನಾಯಕನ ಬೀಳ್ಕೊಡುವ
ಬರಲಿರುವ ಇನ್ನೊಂದು ದೊರೆಗಾಗಿ
ಮತ್ತೆ ಆ ವಾದ್ಯಗಳನ್ನುಳಿಸುವ
ಆ ದೇಶಕ್ಕಾಗಿ ಮರುಕ ಪಡು ! ಹಿರಿಯರಾದರೋ ಮೂಕರಾಗಿಹರಲ್ಲಿ
ವರುಷ ವರುಷಗಳಿಂದ
ಯುವಕರಿನ್ನೂ ಮಲಗಿಹರು
ತೊಟ್ಟಿಲಲ್ಲಿ ಆ ದೇಶಕ್ಕಾಗಿ ಮರುಕ ಪಡು !
ಎಲ್ಲಿ ದೇಶದೊಡಲೊಡೆದು ಚೂರಾಗಿ
ತಾವೇ ದೇಶಗಳೆಂದೆಣಿಸುತ್ತಿಹವೋ
ಆ ದೇಶಕ್ಕಾಗಿ ಮರುಕ ಪಡು!!