ನೋಡಿದ್ದೀರಾ ನೀರಿನಲ್ಲಿ ಚಲಿಸುವ ಸೈಕಲ್ ?!
ಸರಕಾರಿ ಶಾಲಾ ವಿದ್ಯಾರ್ಥಿಯ ಸಂಶೋಧನೆ
ಭಟ್ಕಳ, ನ.22: ತಾಲೂಕಿನ ತೆಂಗಿನಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪುನಿತ್ ಗೊಂಡ ಹಾಗೂ ಆತನ ಸಹಪಾಠಿಗಳು ಸಂಶೋಧಿಸಿರುವ ವಾಟರ್ ಬೈಸಿಕಲ್ ರಾಷ್ಟ್ರ ಮಟ್ಟದ ‘ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ’ಕ್ಕೆ ಆಯ್ಕೆಯಾಗಿದೆ.
ವಿಜ್ಞಾನಿ ಆರ್ಕಿಮಿಡಿಸ್ನ ತೇಲುವಿಕೆಯ ನಿಯಮ, ತೋರಿಕೆಯ ನಷ್ಟ, ಪ್ಲವನ ಬಲ ಸಿದ್ಧಾಂತದ ಆಧಾರದಲ್ಲಿ ಸಂಶೋಧಿಸಲ್ಪಟ್ಟಿರುವ ಈ ವಾಟರ್ ಬೈಸಿಕಲ್ ಇಂಧನ ರಹಿತವಾಗಿದ್ದು ಪರಿಸರ ಸ್ನೇಹಿ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿದೆ.
ದಿನ ಬಳಕೆಯ ವಸ್ತುಗಳನ್ನು ಈ ಸೈಕಲ್ ತಯಾರಿಕೆಯಲ್ಲಿ ಬಳಸಲಾಗಿದೆ. ಇನ್ನೂ ಸೇತುವೆ ಸಂಪರ್ಕದ ಭಾಗ್ಯ ಲಭಿಸದ ಗ್ರಾಮೀಣ ಅಥವಾ ದ್ವೀಪ ಭಾಗದಲ್ಲಿ ನದಿ, ಹೊಳೆ, ಹಳ್ಳಗಳನ್ನು ದಾಟಲು ಈ ಸೈಕಲ್ನ್ನು ಉಪಯೋಗಿಸಬಹುದಾಗಿದೆ. ಪ್ರವಾಸಿಗರಿಗೆ ಮನರಂಜನೆಯ ಉಪಕರಣವಾಗಿಯೂ ತೇಲುವ ಸೈಕಲ್ ಗಮನ ಸೆಳೆಯುತ್ತದೆ. ಗಾಳದ ಮೀನುಗಾರಿಕೆಗೂ ಸೈ ಎನ್ನಿಸಿಕೊಂಡಿದೆ. ವಿಶೇಷವಾಗಿ ಈ ಸೈಕಲ್ನ ಮುಂಭಾಗದಲ್ಲಿ ತಂತಿಯಿಂದ ಮಾಡಲ್ಪಟ್ಟ ಜಾರಿಗೆಯನ್ನು ಅಳವಡಿಸಲಾಗಿದ್ದು, ನದಿ, ಕೆರೆ, ಹೊಳೆಯಲ್ಲಿನ ಕಸ ಕಡ್ಡಿಗಳನ್ನು ತೆಗೆಯಲು ಬಳಸಿಕೊಳ್ಳುವುದರ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೂ ಸಾಥ್ ನೀಡಬಹುದಾಗಿದೆ. ಅಂದಹಾಗೆ ಈ ಸೈಕಲ್ ತಯಾರಿಕಾ ವೆಚ್ಚ ಕೇವಲ 5-6 ಸಾವಿರ ರೂ. ಮಾತ್ರ.
ಮಂಗಳೂರು ಅತ್ತಾವರದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಾಡಿನ ವಿವಿಧೆಡೆಯಿಂದ ಬಂದ 271 ಸಂಶೋಧನಾ ಪರಿಕರಗಳನ್ನು ಪ್ರದರ್ಶಿಸಲಾಗಿದ್ದು, ಭಟ್ಕಳದ ವಿದ್ಯಾರ್ಥಿಗಳ ನೀರಿನ ಮೇಲೆ ಓಡಬಲ್ಲ ಸೈಕಲ್ಗೆ 5ನೆ ಸ್ಥಾನ ಲಭಿಸಿದೆ. ಡಿ.10 ಮತ್ತು 11ರಂದು ರಾಷ್ಟ್ರ ಮಟ್ಟದ ಪ್ರದರ್ಶನವನ್ನು ದಿಲ್ಲಿಯ ನ್ಯಾಶನಲ್ ಫಿಸಿಕಲ್ ಲ್ಯಾಬೋರೇಟರಿಯಲ್ಲಿ ಆಯೋಜಿಸಲಾಗಿದೆ. ವಿದ್ಯಾರ್ಥಿಯೊಬ್ಬ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಇಂತಹ ಸಾಧನೆ ಕೈಗೊಂಡಿರುವುದು ಗ್ರಾಮೀಣ ಭಾಗದಲ್ಲಿನ ಪ್ರತಿಭೆಗಳಿಗೆ ಮಾದರಿಯಾದಂತಾಗಿದೆ. ಸರಕಾರಿ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ತಾವೇನೂ ಕಡಿಮೆಯಲ್ಲ ಎನ್ನುವುದನ್ನು ಈ ಮೂಲಕ ಸಾಧಿಸಿ ತೋರಿಸಿದ್ದಾರೆ.