ಲಾಲ್ ಸಲಾಂ ಕಾಮ್ರೇಡ್ ಫಿಡೆಲ್ ಕ್ಯಾಸ್ಟ್ರೊ
ಸಹೋದರ ರೌಲ್ ಕ್ಯಾಸ್ಟ್ರೊ ಮತ್ತು ಕ್ರಾಂತಿಕಾರಿ ಸ್ನೇಹಿತ ಚೆ ಗುವೇರಾ ಜೊತೆ ಸೇರಿಕೊಂಡು ಗೆರಿಲ್ಲಾ ಯುದ್ಧ ನಡೆಸಿದ್ದ ಕ್ಯಾಸ್ಟ್ರೊ ಕ್ಯೂಬಾ ದೇಶಕ್ಕೆ ಹೊಸಜೀವ ನೀಡುವಲ್ಲಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬ್ಯಾಟಿಸ್ಟಾ ಎಂಬ ಸರ್ವಾಧಿಕಾರಿಯಿಂದ ದೇಶವನ್ನು ಮುಕ್ತಗೊಳಿಸುವುದು ಅಲ್ಲದೇ ಅಮೆರಿಕದ ಕರಿ ನೆರಳಿನಿಂದ ದೇಶವನ್ನು ಪಾರು ಮಾಡುವುದು ಅವರ ಪಾಲಿಗೆ ದೊಡ್ಡ ಸವಾಲಾಗಿತ್ತು. ಹೋರಾಟದ ಹಾದಿಯ ಕೆಲ ಹಂತಗಳಲ್ಲಿ ಅವರು ವಿಫಲರಾದರೂ ಎಂದಿಗೂ ನಿರಾಸೆಗೊಳ್ಳಲಿಲ್ಲ.
ಕ್ರಾಂತಿಕಾರಿ ಚಳವಳಿಯ ಸ್ವರೂಪ ಹೇಗಿರಬೇಕು ಮತ್ತು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಹೇಗೆ ಯಶಸ್ವಿಯಾಗಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡಿದ್ದು ಅಲ್ಲದೇ ಅದನ್ನು ಬದ್ಧತೆಯಿಂದ ಕಾರ್ಯರೂಪಕ್ಕೆ ತಂದ ಕಮ್ಯುನಿಸ್ಟ್ ನೇತಾರ ಫಿಡೆಲ್ ಕ್ಯಾಸ್ಟ್ರೊ ಹೋರಾಟದ ಬದುಕಿಗೆ ವಿದಾಯ ಹೇಳಿದ್ದಾರೆ. ಜೀವನದ ಕಟ್ಟಕಡೆಯ ಕ್ಷಣದವರೆಗೂ ಚಳವಳಿಯನ್ನೇ ಉಸಿರಾಗಿಸಿಕೊಂಡಿದ್ದ ಕ್ಯಾಸ್ಟ್ರೊ ಕಮ್ಯುನಿಸ್ಟ್ ನಾಯಕ ಮಾತ್ರ ಆಗಿರಲಿಲ್ಲ. ಅವರೊಬ್ಬ ಒಬ್ಬ ದೇಶಾಭಿಮಾನಿ, ಅದ್ಭುತ ಚಿಂತಕ, ಜೀವಪರ ಕಾಳಜಿಯುಳ್ಳ ವ್ಯಕ್ತಿ ಕೂಡ ಆಗಿದ್ದರು. ಸಮಾನತೆ ಸಮಾಜದ ನಿರ್ಮಾಣಕ್ಕಾಗಿ ಮಿಡಿಯುವ ಕನಸುಗಾರ ಕೂಡ ಆಗಿದ್ದರು. ಇಡೀ ಬದುಕನ್ನು ಸಂಘರ್ಷವನ್ನಾಗಿ ಸ್ವೀಕರಿಸಿದ ಅವರು ಯಾವತ್ತೂ ವಿರಮಿಸಲು ಬಯಸಲಿಲ್ಲ. ಪ್ರತೀ ಹಂತದಲ್ಲೂ ಹೋರಾಡಿದ ಅವರು ತಮ್ಮ ಅನುಭವ ಮತ್ತು ವಿಚಾರಗಳ ಮೂಲಕ ಕ್ಯೂಬಾ ದೇಶದ ಜನರಿಗೆ ಹೋರಾಟದ ಪಾಠವನ್ನು ಸಹ ಹೇಳಿಕೊಟ್ಟರು. ಎಂತಹದ್ದೇ ಸವಾಲು ಎದುರಾದರೂ ಮಣಿಯಬಾರದು ಎಂಬ ಧ್ಯೇಯವಾಕ್ಯ ನೀಡಿದರು. ಅಮೆರಿಕ ಎಂಬ ಪೆಡಂಭೂತವನ್ನು ಎದುರು ಹಾಕಿಕೊಳ್ಳಲು ಬಹುತೇಕ ರಾಷ್ಟ್ರಗಳು ಹಿಂಜರಿಯುತ್ತವೆ. ಸಮರ ಸಾರುವುದಕ್ಕಿಂತ ರಾಜಿ ಮಾಡಿಕೊಳ್ಳುವುದೇ ಲೇಸು ಎಂಬ ಧೋರಣೆ ಅನುಸರಿಸುತ್ತವೆ. ಆದರೆ ಅಂತಹ ರಾಷ್ಟ್ರಗಳ ಸಾಲಿನಲ್ಲಿ ಕ್ಯೂಬಾ ಎಂಬ ಪುಟ್ಟ ದೇಶ ನಿಲ್ಲುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಕ್ಯಾಸ್ಟ್ರೊ ನುಡಿದಂತೆ ನಡೆದುಕೊಂಡರು. ಜಗತ್ತಿನ ದೊಡ್ಡಣ್ಣನೆಂದೇ ಗುರುತಿಸಿಕೊಳ್ಳುವ ಅಮೆರಿಕವನ್ನು ಎದುರು ಹಾಕಿಕೊಂಡರೆ ಎಷ್ಟೆಲ್ಲ ಮತ್ತು ಯಾವುದೆಲ್ಲ ದುಷ್ಪರಿಣಾಮಕ್ಕೆ ತುತ್ತಾಗಬಹುದು ಎಂದು ಬೇರೆ ರಾಷ್ಟ್ರದವರು ಕಿವಿಮಾತು ಹೇಳಿದರೂ ಕ್ಯಾಸ್ಟ್ರೊ ಬದಲಾಗಲಿಲ್ಲ. ಅಮೆರಿಕ ದಂಡೆತ್ತಿ ಬರುವ ಬೆದರಿಕೆಯೊಡ್ಡಿದರೂ ಕ್ಯಾಸ್ಟ್ರೊ ಧೃತಿಗೆಡಲಿಲ್ಲ. ಅಮೆರಿಕ ಬಳಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಸೇನೆಯೂ ಇರಬಹುದು. ಆದರೆ ನಮ್ಮ ದೇಶದಲ್ಲಿ ಅಪ್ಪಟ ದೇಶಾಭಿಮಾನಿಗಳು ಇದ್ದಾರೆ. ಸ್ವಾಭಿಮಾನ ಮತ್ತು ಸ್ವಾವಲಂಬನೆಯ ತಳಹದಿಯ ಮೇಲೆ ದೇಶ ಕಟ್ಟುವ ಜನರಿದ್ದಾರೆ. ನಮಗ್ಯಾರಿಗೂ ಭಯವಿಲ್ಲ ಎಂದು ಕ್ಯಾಸ್ಟ್ರೊ ನೇರವಾಗಿ ಉತ್ತರಿಸಿದ್ದರು.
ದೇಶ ಮತ್ತು ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕ್ಯಾಸ್ಟ್ರೊ ಎಂದಿಗೂ ವಿರಮಿಸಲು ಬಯಸಲಿಲ್ಲ. ದೇಶವನ್ನು ಸರ್ವಾಧಿಕಾರಿಯ ಹಿಡಿತದಿಂದ ಮುಕ್ತಗೊಳಿಸುವ ಹೋರಾಟಗಾರನಾಗಿ ಅಲ್ಲದೇ ಅತ್ಯಂತ ದೀರ್ಘ ಕಾಲದ ಪ್ರಧಾನಿ ಮತ್ತು ಅಧ್ಯಕ್ಷರಾಗಿ ದೇಶವನ್ನು ಕಟ್ಟಿ ಬೆಳೆಸಿದವರು. ಕಮ್ಯುನಿಸ್ಟ್ ನೀತಿಗಳನ್ನು ಮತ್ತು ಜನಪರ ಯೋಜನೆಗಳನ್ನು ಜಾರಿಗೆ ತಂದ ಅವರು ದೇಶದ ಕಟ್ಟಕಡೆಯ ಮನುಷ್ಯನಿಗೂ ಸಕಲ ಸೌಕರ್ಯ ದೊರಕಿಸುವ ಪ್ರಯತ್ನ ಮಾಡಿದರು. ಆರ್ಥಿಕ ದಿಗ್ಬಂಧನ, ದಾಳಿಯ ಬೆದರಿಕೆ ಮತ್ತು ಇನ್ನಿತರ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ಅವರು ಜನ ಬೆಂಬಲದೊಂದಿಗೆ ಕ್ಯೂಬಾವನ್ನು ಸದೃಢ ಮತ್ತು ಸ್ವಾವಲಂಬಿ ದೇಶವಾಗಿಸುವಲ್ಲಿ ಶ್ರಮಿಸಿದರು. ಜನರಿಗೆ ಅಗತ್ಯವಿರುವ ಊಟ, ಬಟ್ಟೆ, ವಸತಿ ಸೌಲಭ್ಯ ವಹಿಸುವುದರ ಜೊತೆಗೆ ಭೂಸುಧಾರಣೆ ಯೋಜನೆ ಜಾರಿಗೊಳಿಸಿದರು. ಬಹುತೇಕ ಉದ್ದಿಮೆಗಳನ್ನು ರಾಷ್ಟ್ರೀಕರಣಗೊಳಿಸುವುದರ ಜೊತೆಗೆ ಅಮೆರಿಕದ ಭೂಮಾಲಕರನ್ನು ದೇಶದಿಂದ ಹೊರಹಾಕಿದರು. ಲಾಭ ಗಳಿಸುವ ಉದ್ಯಮಗಳು ಇಂತಿಷ್ಟು ಪಾಲನ್ನು ನೌಕರರಿಗೆ ನೀಡಬೇಕು ಎಂಬ ನಿಯಮ ಕೂಡ ರೂಪಿಸಿದರು. ಬಡ ಮತ್ತು ಜನಸಾಮಾನ್ಯರ ಪರ ಕಾಳಜಿಯಿಟ್ಟುಕೊಂಡೇ ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿದರು.
ಸಹೋದರ ರೌಲ್ ಕ್ಯಾಸ್ಟ್ರೊ ಮತ್ತು ಕ್ರಾಂತಿಕಾರಿ ಸ್ನೇಹಿತ ಚೆ ಗುವೇರಾ ಜೊತೆ ಸೇರಿಕೊಂಡು ಗೆರಿಲ್ಲಾ ಯುದ್ಧ ನಡೆಸಿದ್ದ ಕ್ಯಾಸ್ಟ್ರೊ ಕ್ಯೂಬಾ ದೇಶಕ್ಕೆ ಹೊಸಜೀವ ನೀಡುವಲ್ಲಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬ್ಯಾಟಿಸ್ಟಾ ಎಂಬ ಸರ್ವಾಧಿಕಾರಿಯಿಂದ ದೇಶವನ್ನು ಮುಕ್ತಗೊಳಿಸುವುದು ಅಲ್ಲದೇ ಅಮೆರಿಕದ ಕರಿ ನೆರಳಿನಿಂದ ದೇಶವನ್ನು ಪಾರು ಮಾಡುವುದು ಅವರ ಪಾಲಿಗೆ ದೊಡ್ಡ ಸವಾಲಾಗಿತ್ತು. ಹೋರಾಟದ ಹಾದಿಯ ಕೆಲ ಹಂತಗಳಲ್ಲಿ ಅವರು ವಿಫಲರಾದರೂ ಎಂದಿಗೂ ನಿರಾಸೆಗೊಳ್ಳಲಿಲ್ಲ. ಬೇರೆ ಬೇರೆ ಮಾರ್ಗ ಅನುಸರಿಸಿದ ಅವರು ಕ್ಯೂಬಾವನ್ನು ಎಲ್ಲಾ ರೀತಿಯ ಅಪಾಯಗಳಿಂದ ಪಾರುಮಾಡಿದ್ದಲ್ಲದೇವಿಶ್ವದ ಗಮನ ಸೆಳೆಯುವಂತೆ ಮಾಡಿದರು. ದೊಡ್ಡ ಗಿಡುಗನಂತಹ ಅಮೆರಿಕದ ಎದುರು ಪುಟ್ಟ ಗುಬ್ಬಿಯಂತಹ ಕ್ಯೂಬಾ ದೀರ್ಘಕಾಲದವರೆಗೆ ತನ್ನದೇ ಆದ ಅಸ್ತಿತ್ವ ಕಾಪಾಡಿಕೊಳ್ಳಲು ಆಗುವುದೇ ಎಂದು ಕೆಲವರು ಕುಹಕವಾಡಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಕ್ಯಾಸ್ಟ್ರೊ ನಂತರದ ವರ್ಷಗಳಲ್ಲಿ ತಮ್ಮ ದೇಶದ ಬಗ್ಗೆ ಬೇರೆ ಯಾರೂ ಹಗುರವಾಗಿ ಮಾತನಾಡಲು ಅವಕಾಶ ನೀಡಲಿಲ್ಲ. ಎಲ್ಲರೂ ನಿಬ್ಬೆರಗಾಗಿ ಕ್ಯೂಬಾ ದೇಶದ ಸಾಧನೆಯನ್ನು ಶ್ಲಾಘಿಸಿದರು.
1926ರ ಆಗಸ್ಟ್ 13ರಂದು ಶ್ರೀಮಂತ ಭೂಮಾಲಕರ ಕುಟುಂಬದಲ್ಲಿ ಜನಿಸಿದ ಕ್ಯಾಸ್ಟ್ರೊ ಗ್ರಾಮೀಣ ಶಾಲೆಯಲ್ಲೇ ಶಿಕ್ಷಣ ಪೂರೈಸಿ ಹವಾನಾ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದರು. ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ಅವರು ಎಡಪಂಥೀಯ ನಾಯಕರಾಗಿ ಹೊರಹೊಮ್ಮಿದರು. ವಿದ್ಯಾರ್ಥಿದೆಸೆಯಿಂದಲೇ ಹೋರಾಟದ ಬದುಕನ್ನು ನೆಚ್ಚಿಕೊಂಡ ಅವರು ವಿದ್ಯಾರ್ಥಿ ನಾಯಕರಾಗಿ ಲ್ಯಾಟಿನ್ ಅಮೆರಿಕ ಸೇರಿದಂತೆ ಬೇರೆ ಬೇರೆಡೆ ಸಂಚರಿಸಿದರು. ಅಮೆರಿಕದ ಸಾಮ್ರಾಜ್ಯಶಾಹಿ ವಿರುದ್ಧ ಸಮಾವೇಶಗಳನ್ನು ನಡೆಸಿದರು. ಆಯಾ ದೇಶಗಳಲ್ಲಿದ್ದ ಸರ್ವಾಧಿಕಾರದ ವಿರುದ್ಧ ಸಹ ಹೋರಾಟ ರೂಪಿಸಿದರು. 1952ರಲ್ಲಿ ಬ್ಯಾಟಿಸ್ಟಾ ಕ್ಷಿಪ್ರಕ್ರಾಂತಿಯ ನಂತರ ಸಂಘಟನೆಯಲ್ಲಿ ತೊಡಗಿಸಿಕೊಂಡ ಕ್ಯಾಸ್ಟ್ರೊ ಸರ್ವಾಧಿಕಾರಿ ಬ್ಯಾಟಿಸ್ಟಾ ವಿರುದ್ಧ ಸಶಸ್ತ್ರ ದಂಗೆಗೆ ಕಾರಣರಾದರು. ಆದರೆ ಅವರು ಅದರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಇದರಿಂದ ಅವರು ಜೈಲು ಶಿಕ್ಷೆ ಅನುಭವಿಸಿ, ನಂತರ ಬಿಡುಗಡೆಯಾದರು. 1955ರಲ್ಲಿ ಮೆಕ್ಸಿಕೋಗೆ ತೆರಳಿದ ಕ್ಯಾಸ್ಟ್ರೊ ಕ್ಯೂಬಾದತ್ತ ಗೆರಿಲ್ಲಾ ದಂಡಯಾತ್ರೆ ಕೈಗೊಂಡರು. ಸಶಸ್ತ್ರ ದಂಗೆಗೆ ಸಿದ್ಧತೆ ನಡೆಸಿದರು. ಅತ್ಯಂತ ವ್ಯವಸ್ಥಿತ ಮತ್ತು ಯೋಜನಾಬದ್ಧವಾಗಿ ದಂಗೆ ಕೈಗೊಂಡ ಅವರು ಬ್ಯಾಟಿಸ್ಟಾನನ್ನು ಕ್ಯೂಬಾದಿಂದ ಹೊರಹಾಕುವಲ್ಲಿ ಯಶಸ್ವಿಯಾದರು. 1959ರಿಂದ 1976ರವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕ್ಯಾಸ್ಟ್ರೊ 1976ರಿಂದ 2008ರವರೆಗೆ ರಾಷ್ಟ್ರದ ಅಧ್ಯಕ್ಷರಾಗಿಯೂ ಜವಾಬ್ದಾರಿ ವಹಿಸಿಕೊಂಡರು. ಅನಾರೋಗ್ಯದ ಹಿನ್ನೆಲೆಯಲ್ಲಿ 2008ರಲ್ಲಿ ಅವರು ಅಧಿಕಾರ ತ್ಯಜಿಸಿದರೇ ಹೊರತು ಅವರಲ್ಲಿನ ಹೋರಾಟವೇನೂ ಕುಂದಿರಲಿಲ್ಲ.
ಕ್ಯಾಸ್ಟ್ರೊ ಮತ್ತು ಚೆ ಗುವೇರಾ ನಡುವೆ ಆಪ್ತಸ್ನೇಹವಿತ್ತು. ಯಾವುದೇ ಹೋರಾಟ ನಡೆಸಬೇಕಿದ್ದರೂ ಅವರು ಪರಸ್ಪರ ಚರ್ಚಿಸುತ್ತಿದ್ದರು. ಅವರ ಆಪ್ತತೆ, ಬದ್ಧತೆ ಮತ್ತು ಹೋರಾಟದ ಮನೋಭಾವ ಎಂತಹದ್ದು ಎಂಬುದಕ್ಕೆ ಈ ಪತ್ರವೇ ಸಾಕ್ಷಿ. ‘‘ನಿಮ್ಮೆಂದಿಗೆ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಅರ್ಪಣಾ ಮನೋಭಾವದಿಂದ ಹೋರಾಟ ನಡೆಸಿದ್ದು ನನಗೆ ಹೆಮ್ಮೆಯ ಸಂಗತಿ. ನಿಮ್ಮೆಳಗಿನ ಕ್ರಾಂತಿಕಾರಿ, ನಾಯಕತ್ವದ ಗುಣಲಕ್ಷಣಗಳನ್ನು ಅರಿಯುವಲ್ಲಿ ಕೊಂಚ ತಡವಾಯಿತು. ನಿಮ್ಮ ಆಲೋಚನಾ ಲಹರಿಯೊಂದಿಗೆ ಗುರುತಿಸಿಕೊಂಡಿದ್ದು ಅಲ್ಲದೇ ಅಪಾಯ, ತತ್ವಗಳನ್ನು ನಿಮ್ಮಂತೆಯೇ ಗ್ರಹಿಸಿದ್ದು ಹೆಮ್ಮೆಯಿಂದ ನೆನೆಯುತ್ತೇನೆ. ಕ್ಯೂಬಾ ದೇಶದ ನಾಯಕತ್ವ ಜವಾಬ್ದಾರಿ ನಿಮ್ಮದು. ನಾನಿನ್ನೂ ಹೊರಡುತ್ತೇನೆ.’’
ಕ್ಯಾಸ್ಟ್ರೊ ಅವರನ್ನು ಇನ್ನಷ್ಟು ಸರಳವಾಗಿ ಮತ್ತು ಆಪ್ತವಾಗಿ ಅರಿಯಲು ಈ ಪತ್ರವೊಂದೇ ಸಾಕು. ಕ್ಯಾಸ್ಟ್ರೊ ಅವರನ್ನು ಹತ್ತು ಹಲವು ರೀತಿಯಲ್ಲಿ ವರ್ಣಿಸಬಹುದು. ಆದರೆ ಅವರ ಜೀವಿತಾವಧಿಯ ಹೋರಾಟದ ಕಾಲಘಟ್ಟ ಮತ್ತು ಬದುಕಿದ ರೀತಿಯನ್ನು ವರ್ಣಿಸಲು ಪದಗಳ ಕೊರತೆ ಕಾಡಬಹುದು. ದೇಶಭಕ್ತಿ ಮತ್ತು ತ್ಯಾಗ ಮನೋಭಾವದ ಕುರಿತು ಪ್ರಶ್ನೆಗಳು ವ್ಯಕ್ತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕ್ಯಾಸ್ಟ್ರೊ ಹೆಚ್ಚು ಪ್ರಸ್ತುತವಾಗುತ್ತಾರೆ. ದೇಶಕ್ಕಾಗಿ ಯಾರೇನು ಮಾಡಿದರೂ ಅಥವಾ ಕೊಟ್ಟರು ಎಂದು ಪ್ರಶ್ನಿಸುವ ಬದಲು ಸ್ವತಃ ಕ್ಯಾಸ್ಟ್ರೊ ತಾನೇನು ಮಾಡಿದೆಯೆಂದು ಸಾದರಪಡಿಸಿದರು. ಮಾತುಗಳಿಗಿಂತ ಕೃತಿಯಲ್ಲೇ ಹೆಚ್ಚು ನಂಬಿಕೆ ಹೊಂದಿದ್ದರು, ಅದರಂತೆ ನಡೆದುಕೊಂಡರು. ದೇಶದ ಜನರ ವಿಶ್ವಾಸವೂ ಗಳಿಸಿದರು. ಕ್ರಾಂತಿಯಿಂದ ಮಾತ್ರವೇ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಂಡ ಕ್ಯಾಸ್ಟ್ರೊ ತಮ್ಮ 90ನೇ ಇಳಿವಯಸ್ಸಿನಲ್ಲೂ ರಾಜಿ ಮಾಡಿಕೊಳ್ಳಲಿಲ್ಲ. ಅಮೆರಿಕ ಎಷ್ಟೇ ನಿರ್ಬಂಧ ಹೇರಿದರೂ, ಬೆದರಿಕೆ ಒಡ್ಡಿದರೂ ಬೃಹತ್ ಪರ್ವತದಂತೆ ಅಲುಗಾಡಿಸಲಾಗದ ಬಂಡೆಯಂತೆ ಕ್ಯೂಬಾ ದೇಶವನ್ನು ಬಂಡೆಯಾಗಿ ನಿಲ್ಲಿಸಿದರು. ದೇಶಕ್ಕಾಗಿ ಇಡೀ ಜೀವನ ಸಮರ್ಪಿಸಿದ ಅವರು ತಮ್ಮ ಮೊಗದಲ್ಲಿ ಎಂದಿಗೂ ದಣಿವು ತೋರಿಸಿಕೊಡಲಿಲ್ಲ.
ಆಪ್ತಸ್ನೇಹಿತ ಚೆಗುವೇರ ಜೊತೆ ಸಿಗಾರ್ ಸೇದುವುದರಲ್ಲಿ ಹೆಚ್ಚು ಸಂತಸಪಡುತ್ತಿದ್ದ ಕ್ಯಾಸ್ಟ್ರೊ ತಮ್ಮ ಬದುಕಿನ ಪ್ರತೀ ಕ್ಷಣವನ್ನು ಸವಾಲಾಗಿ ಸ್ವೀಕರಿಸಿದರು. ಅರ್ಥಾತ್ ಅವರಲ್ಲಿನ ಅದಮ್ಯ ಆತ್ಮವಿಶ್ವಾಸ ಮತ್ತು ಆತ್ಮಬಲ ಯಾವಾಗಲೂ ಸ್ಫೂರ್ತಿ ನೀಡಿದವು. ಕೈಯಲ್ಲಿ ಕೆಂಬಾವುಟ, ತಲೆಗೊಂದು ಕ್ಯಾಪ್, ಮೈಮೇಲೆ ಯೋಧನ ದಿರಸು, ಬಾಯಿಯಲ್ಲಿ ಸಿಗಾರ್ ಮತ್ತು ಸದಾ ಆಶಾಭಾವನೆಯಿಂದ ಕಂಗೊಳಿಸುವ ಕಂಗಳಲ್ಲಿ ಕಾಣಸಿಕ್ಕವರು ಕ್ಯಾಸ್ಟ್ರೊ.
ಕ್ಯಾಸ್ಟ್ರೊ ಅವರನ್ನು ಸಂಪೂರ್ಣವಾಗಿ ದಮನ ಮಾಡಲು ನಡೆದ ಪ್ರಯತ್ನಗಳು ಅಷ್ಟಿಷ್ಟಲ್ಲ. ಸುಮಾರು 90ಕ್ಕೂ ಹೆಚ್ಚು ಬಾರಿ ಅವರ ಮೇಲೆ ದಾಳಿ ನಡೆಸಿ, ಪ್ರಾಣ ಕಸಿದುಕೊಳ್ಳುವ ಯತ್ನ ನಡೆಯಿತು. ಆಹಾರದಲ್ಲಿ ವಿಷ ಹಾಕುವ, ಗುಂಡಿನ ದಾಳಿ ನಡೆಸುವ ಪ್ರಯತ್ನವೂ ನಡೆಯಿತು. ಆದರೆ ಪ್ರತಿ ಸಂದರ್ಭದಲ್ಲೂ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಹುಟ್ಟಿ ಬಂದ ಕ್ಯಾಸ್ಟ್ರೊ ಮತ್ತೆ ಎಂದಿನಂತೆ ಸವಾಲು ಒಡ್ಡುವುದರಲ್ಲಿ ಖುಷಿ ಅನುಭವಿಸಿದರು. ಕ್ರಾಂತಿಕಾರಿ ಹೇಗೆ ಬದುಕಬೇಕು ಎಂಬುದನ್ನು ನೇರವಾಗಿ ಅವರು ಯಾವತ್ತೂ ಹೇಳಲಿಲ್ಲ. ಆದರೆ ಅದನ್ನು ಹೇಳದೇನೆ ಅಕ್ಷರಶಃ ಬದುಕಿ ತೋರಿಸಿದರು.
ಅಮೆರಿಕದಲ್ಲಿ ಅಲ್ಲದೇ ಜಾಗತಿಕವಾಗಿ ಹಲವಾರು ಅಪಾಯ ಮತ್ತು ಆಘಾತಕಾರಿ ಬದಲಾವಣೆಗಳು ಆಗುತ್ತಿರುವ ಇಂದಿನ ಸಂದರ್ಭದಲ್ಲಿ ಕ್ಯಾಸ್ಟ್ರೊ ಇರಬೇಕಿತ್ತು. ಇಂದಿನ ಯುವಪೀಳಿಗೆಗೆ ಮಾರ್ಗದರ್ಶನ ನೀಡಬೇಕಿತ್ತು. ಲಾಲ್ ಸಲಾಂ ಕಾಮ್ರೇಡ್ ಕ್ಯಾಸ್ಟ್ರೊ.