ಪ್ರಯಾಣವೇ ಜೀವನ ದೇಶವೇ ಕಾಲೇಜು
ಬೈಸಿಕಲ್‌ನಲ್ಲಿ ದೇಶ ಸುತ್ತಿದ ಮೋಹಿತ್ ಕಪೂರ್‌ನ ವಿಭಿನ್ನ ಅಧ್ಯಯನ!
ಇದೀಗ 2016ರ ಜುಲೈ 2ರಂದು ಮತ್ತೆ ಬೈಸಿಕಲ್ ಏರಿರುವ ರೋಹಿತ್, ಭಾರತ, ನೇಪಾಳ, ಭೂತಾನ್, ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ವಿಯೆಟ್ನಾಂ, ಕಾಂಬೋಡಿಯಾ ಮೂಲಕ ಮಲೇಶಿಯಾ ಪ್ರವೇಶಿಸಲು ನಿರ್ಧರಿಸಿದ್ದಾರೆ. ಬೈಸಿಕಲ್ ಜತೆಗೊಂದು ಸ್ಟವ್ ಕೂಡಾ ಮೋಹಿತ್ ಜತೆಗಿರುತ್ತದೆ. ದೇಶದ ಉದ್ದಗಲವನ್ನು, ಪ್ರಕೃತಿಯ ಸೌಂದರ್ಯವನ್ನು ಬೈಸಿಕಲ್ ಮೇಲೆ ಅಳೆಯುವ ಜತೆಯಲ್ಲೇ ಭಾರತದ ವಿವಿಧ ಕಡೆಗಳ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಬಗ್ಗೆಯೂ ಸ್ಥಳದಲ್ಲೇ ಮಾಡಿ ಕಲಿತುಕೊಳ್ಳುತ್ತಾರೆ. ಜೈಪುರದಿಂದ ಮಲೇಶಿಯಾದ 18,000 ಕಿ.ಮೀ.ಗಳ ‘ಮಂಚಿಂಗ್ ಆನ್ ಸ್ಯಾಡಲ್’ ಎಂಬ ಬೈಸಿಕಲ್ ಪಯಣಕ್ಕಾಗಿ ಸುಮಾರು ಒಂದು ವರ್ಷವನ್ನೇ ಮೀಸಲಿಟ್ಟಿದ್ದಾರೆ. ತನ್ನ ಈ ವಿಭಿನ್ನ ಅಧ್ಯಯನ ಸಂಚಾರದ ಬಳಿಕ ಮತ್ತೆ ರೆಗ್ಯುಲರ್ ತರಗತಿಗಳಿಗೆ ಹೋಗಿ ಪದವಿಯನ್ನು ಪೂರೈಸುವ ಇರಾದೆ ಮೋಹಿತ್‌ರದ್ದು. ತಮ್ಮ ಆಗ್ನೇಯ ಏಷ್ಯಾದ ಈ ಪಯಣದಲ್ಲಿ ಮೋಹಿತ್ ಈಗಾಗಲೇ 6,000 ಕಿ.ಮೀ. ಕ್ರಮಿಸಿಯಾಗಿದೆ. ಬುಧವಾರ (ನ. 23ರಂದು) ಮಂಗಳೂರಿಗೆ ಆಗಮಿಸಿದ್ದ ಈತ ‘ವಾರ್ತಾಭಾರತಿ’ ಕಚೇರಿಗೆ ಭೇಟಿ ನೀಡಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಯವರನ್ನು ಭೇಟಿಯಾದರು. ಬಳಿಕ ಪ್ರತಿನಿಧಿ ಜತೆ ಕೆಲ ಹೊತ್ತು ತನ್ನ ಅನುಭವವನ್ನು ಹಂಚಿಕೊಂಡಿದ್ದು ಇಲ್ಲಿದೆ.
'ವಾರ್ತಾಭಾರತಿ' ಯ ಕಚೇರಿಯಲ್ಲಿ....
‘‘ಕಲಿಕೆ ಎಂಬುದು ಕೇವಲ ಕಾಲೇಜು ಕೊಠಡಿಗಳಿಗೆ ಸೀಮಿತವಾ ದರೆ ಏನು ಪ್ರಯೋಜನ?. ಅಲ್ಲಿಂದ ಅಕ್ಷರ, ಮಾಹಿತಿ, ತಂತ್ರಜ್ಞಾನಗಳ ಜ್ಞಾನವನ್ನೇನೋ ಪಡೆಯಬಹುದು. ಆದರೆ ಪ್ರಕೃತಿಯ ನಿಜವಾದ ಸೌಂದರ್ಯ, ನಮ್ಮ ವಿಭಿನ್ನ ರಾಜ್ಯಗಳ ಭೋಜನಗಳ ನೈಜ ಸ್ವಾದವನ್ನು ಚಪ್ಪರಿಸಿ, ಅರಿತು ಕಲಿಯಬೇಕಾದರೆ ನನ್ನ ಈ ಬೈಸಿಕಲ್ ಪಯಣವೇ ಸರಿ ಎಂದೆನಿಸಿತು.’’
ಈ ಸುಂದರ ಯುವಕನ ವಯಸ್ಸು 19. ಹೆಸರು ಮೋಹಿತ್ ಕಪೂರ್. ಊರು ಜೈಪುರ. ಬಾಣಸಿಗ (ಚೆಫ್)ನಾಗುವ ಕನಸು ಹೊತ್ತಿರುವ ಈ ಯುವಕ ಅದಕ್ಕಾಗಿ ಕಂಡುಕೊಂಡ ದಾರಿ ಮಾತ್ರ ಕೊಂಚ ವಿಚಿತ್ರವಾದರೂ ಭೇಷ್ ಅನ್ನುವಂಥದ್ದು. ಬೈಸಿಕಲ್‌ನಲ್ಲಿ ಊರೂರು ಸುತ್ತುತ್ತಾ, ಹೋದ ಕಡೆಗಳಲ್ಲೆಲ್ಲಾ ಅಲ್ಲಿನ ವಿಶೇಷ ತಿಂಡಿ ತಿನಿಸುಗಳ ಬಗ್ಗೆ ಕಲಿತುಕೊಳ್ಳುತ್ತಾ, ಪ್ರಕೃತಿಯೊಂದಿಗೆ ಒಡನಾಟ ಬೆಳೆಸುವುದು ಮೋಹಿತ್ ಗುರಿ. ತನ್ನ ಈ ಕನಸಿಗೆ ಮಂಚಿಂಗ್‌ಆನ್ ಸ್ಯಾಡಲ್ (Munching on Saddle)ಎಂದು ಹೆಸರಿಟ್ಟು ಕೊಂಡು ಹೊರಟ ಪ್ರಕೃತಿ ಪ್ರೇಮಿ ಮೋಹಿತ್ ಭಾರತ ಪರ್ಯಟನೆ ಮುಗಿಸಿ ಈಗ ಆಗ್ನೇಯ ಏಷ್ಯಾ ಪ್ರಯಾಣ ಆರಂಭಿಸಿದ್ದಾರೆ.
12ನೆ ತರಗತಿ ಮುಗಿಸಿ, ಇನ್ನೇನು ಮಗ ಪದವಿ ಮೆಟ್ಟಿಲು ಹತ್ತಬೇಕೆಂದು ಈತನ ಹೆತ್ತವರು ಬಯಸಿದರೆ, ಈತನ ಒಲವು ಮಾತ್ರ ದೇಶ- ವಿದೇಶಗಳನ್ನು ಸುತ್ತುವುದಾಗಿತ್ತು. ಕೇವಲ, ಊರೂರು ಸುತ್ತುವುದು ಮಾತ್ರವಲ್ಲ, ಅದರ ಜತೆ ತನ್ನ ಇಚ್ಛೆಯಂತೆ ಬಾಣಸಿಗ ನಾಗುವ ಕನಸನ್ನು ಸಾಕಾರಗೊಳಿಸುವ ಇರಾದೆಯೂ ಈತನದ್ದು. ಕಾಲೇಜಿನ ನಾಲ್ಕು ಗೋಡೆಗಳ ಮಧ್ಯಕ್ಕೆ ಮಾತ್ರ ತನ್ನ ಅಧ್ಯಯನ ಸೀಮಿತವಾಗಬಾರದು ಎಂಬ ಚಿಂತನೆಯೊಂದಿಗೆ ಮೋಹಿತ್ ಕಪೂರ್ ತನ್ನ ಕನಸಿನ ಪಯಣಕ್ಕಾಗಿ ಆಯ್ದುಕೊಂಡಿದ್ದು ಬೈಸಿಕಲ್. ಪ್ರಕೃತಿ ಸಹ್ಯ ಪ್ರಯಾಣ ಈತನ ಆದ್ಯತೆ.
ಹೆಚ್ಚಿನ ಖರ್ಚಿಲ್ಲದೆ, ಬೈಸಿಕಲ್ ಪೆಡಲ್ ತುಳಿಯುತ್ತಾ, ದೇಶ- ವಿದೇಶ ಗಳ ಉದ್ದಗಲ ಸುತ್ತುವ ಜತೆಗೆ ತಾನು ಭೇಟಿ ನೀಡುವ ಊರುಗಳಲ್ಲಿ ವಿಶೇಷ ತಿಂಡಿ ತಿನಿಸುಗಳ ಬಗ್ಗೆ ತಿಳಿದುಕೊಳ್ಳುವುದು. ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದು ಈತನ ಮುಖ್ಯ ಗುರಿ. ಅದಕ್ಕಾಗಿಯೇ ತನ್ನ 17ರ ಹರೆಯದಲ್ಲಿ ಅಂದರೆ 2014ರಲ್ಲಿ ಈತ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 4000 ಕಿಲೋ ಮೀಟರ್ ಪಯಣವನ್ನು 24 ದಿನಗಳಲ್ಲಿ ಪೂರೈಸಿ ಹೊಸ ಅನುಭವ ಪಡೆದುಕೊಂಡಿದ್ದಾರೆ. ಪ್ರಥಮ ವರ್ಷದ ತನ್ನ ದೇಶ ಸುತ್ತಾಟ ಮೋಹಿತ್‌ರಲ್ಲಿ ಹೊಸ ಚೈತನ್ಯ, ಹೊಸ ಹುರುಪನ್ನು ತುಂಬಿತ್ತು. ಆ ಚೈತನ್ಯ 2015ರಲ್ಲಿ ಮಣಾಲಿಯಿಂದ ಲೇಹ್ ವರೆಗೆ 600 ಕಿ.ಮೀ.ಗಳ ಬೈಸಿಕಲ್ ಪಯಣದಲ್ಲಿ ಹಿಮಾಲಯದ ಪರ್ವತ ಕಣಿವೆಗಳ ಸೌಂದರ್ಯವನ್ನು ಆಸ್ವಾದಿಸಲು ಕಾರಣವಾಯಿತು.
ಕನಸಿಗಾಗಿ ಮೊಬೈಲ್ ಮಾರಿದೆ!
‘‘ನನ್ನ 17ರ ಹರೆಯದಲ್ಲಿ ಬೈಸಿಕಲ್‌ನೊಂದಿಗೆ ಪಯಣದ ನನ್ನ ಕನಸನ್ನು ಆರಂಭಿಸುವಾಗ ಕೈಯಲ್ಲಿ ಹಣವಿಲ್ಲದ ಕಾರಣ ತಂದೆ ತೆಗೆಸಿಕೊಟ್ಟಿದ್ದ ಮೊಬೈಲ್ ಮಾರಿದ್ದೆ. ಟ್ರಾವೆಲ್ ಬ್ಯಾಗ್ ಹಾಗೂ ಇತರ ಸಾಮಗ್ರಿಗಳನ್ನು ಕೊಳ್ಳುವುದಕ್ಕಾಗಿ. ಊಟ ತಿಂಡಿ ನಿದ್ದೆಯೆಲ್ಲಾ ಗುರುದ್ವಾರ, ದೇವಸ್ಥಾನಗಳಲ್ಲಿ ಮುಗಿಯುತ್ತಿತ್ತು. ಏಕಾಂಗಿಯಾಗಿ ನಾನೇ ಬಯಸಿದ ನನ್ನ ಪಯಣವನ್ನು ನಾನು ಸವಾಲಾಗಿಯೇ ಎದುರಿಸಿದೆ. ಜೈಪುರದ ಮಣಾಲಿಯಿಂದ ಕನ್ಯಾಕುಮಾರಿವರೆಗಿನ ಆ ನನ್ನ ಒಂದು ತಿಂಗಳೊಳಗಿನ ಪಯಣವು ಭಾರತದ ಕಲ್ಲು ಗುಡ್ಡೆಗಳಲ್ಲಿ ನನ್ನನ್ನು ಕುಳಿತುಕೊಳ್ಳುವಂತೆ ಮಾಡಿದೆ. ಭಾರತದ ಸಮುದ್ರದ ತಂಪಾದ ನೀರನ್ನು ಸ್ಪರ್ಶಿಸಲು ಅವಕಾಶ ಕಲ್ಪಿಸಿತು. ನಿರ್ದಿಷ್ಟ ಕನಸಿನೊಂದಿಗೆ ಹೊಸ ಹೊಸ ಅನುಭವಗಳು ಹೊಸ ಹೊಸ ಪಾಠಗಳನ್ನು ಕಲಿಸಿದೆ. ವಿಭಿನ್ನ ಸಂಸ್ಕೃತಿ, ಆಚಾರ ವಿಚಾರಗಳನ್ನು ಅರಿಯಲು ಅವಕಾಶ ನೀಡಿತು.’’.
ಕನಸಿನ ಪಯಣ 2014ರಿಂದಲೇ ಆರಂಭ!
‘‘ನಾನು ಪಿಯುಸಿ ಮುಗಿಸಿದಾಕ್ಷಣ ನನ್ನ ತಂದೆ ನನಗೆ ಮೋಟಾರು ಬೈಕ್ ಕೊಡಿಸಲು ಮುಂದಾದರು. ಆದರೆ ಅದು ನನಗೆ ಬೇಕಾಗಿರಲಿಲ್ಲ. ನಾನವರಲ್ಲಿ ಬೈಸಿಕಲ್ ಕೊಡಿಸಬೇಕೆಂದು ಕೇಳಿಕೊಂಡೆ. ಬೈಸಿಕಲ್ ಮೇಲೇರಿ ದೇಶವನ್ನು ಸುತ್ತುವ ಇಂಗಿತವನ್ನು ಮುಂದಿಟ್ಟೆ. ಅವರ ಆಕ್ಷೇಪ ವನ್ನು ತಣಿಸಲು ಸುಮಾರು 5 ತಿಂಗಳುಗಳೇ ಬೇಕಾಯಿತು. ಕೊನೆಗೂ ನನ್ನ ಆಕಾಂಕ್ಷೆೆಗೆ ಅವರು ಸೈ ಎಂದರು. ಹಾಗೆ 2014ರಲ್ಲಿ ನನ್ನ ಕನಸಿನ ಪಯಣ ಆರಂಭಗೊಂಡಿತು. ಆ ವರ್ಷ ಒಂದು ತಿಂಗಳ ಅವಧಿಯೊಳಗೆ ನನ್ನ ಪಯಣವನ್ನು ಮುಗಿಸಿದ್ದೆ. 2015ರಲ್ಲಿ ಮತ್ತೆ ಸೈಕಲೇರಿ, ಹಿಮಾಲ ಯದ ಬೆಟ್ಟ ಪರ್ವತ ಕಣಿವೆಗಳ ಸೌಂದರ್ಯವನ್ನು ಕಣ್ಣಾರೆ ಕಂಡು ದಂಗಾದೆ. ಭಾರತದ ಸೌಂದರ್ಯವನ್ನು ನೋಡಲು ಬೈಸಿಕಲ್ ಪಯಣಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ ಎಂಬುದು ನನಗಾವಾಗ ಮನದಟ್ಟಾಗಿತ್ತು.
‘‘ಕಲಿಕೆ ಎಂಬುದು ಕೇವಲ ಕಾಲೇಜು ಕೊಠಡಿಗಳಿಗೆ ಸೀಮಿತವಾ ದರೆ ಏನು ಪ್ರಯೋಜನ. ಅಲ್ಲಿಂದ ಅಕ್ಷರ, ಮಾಹಿತಿ, ತಂತ್ರಜ್ಞಾನಗಳ ಜ್ಞಾನವನ್ನೇನೋ ಪಡೆಯಬಹುದು. ಆದರೆ ಪ್ರಕೃತಿಯ ನಿಜವಾದ ಸೌಂದರ್ಯ, ನಮ್ಮ ವಿಭಿನ್ನ ರಾಜ್ಯಗಳ ಭೋಜನಗಳ ನೈಜ ಸ್ವಾದವನ್ನು ಚಪ್ಪರಿಸಿ, ಅರಿತು ಕಲಿಯಬೇಕಾದರೆ ನನ್ನ ಈ ಬೈಸಿಕಲ್ ಪಯಣವೇ ಸರಿ ಎಂದೆನಿಸಿತು. ನಿಜ, ನನ್ನ ಈ ಕನಸು ನನಸಾಗಿಸುವ ಹುಚ್ಚಿಗೆ ಆತ್ಮಸ್ಥೈರ್ಯವಿದ್ದರೂ ಕೈಯಲ್ಲಿ ಹಣವಿರಲಿಲ್ಲ. ಆದರೆ ಇಚ್ಛಾಶಕ್ತಿಗೆ ಕೊರತೆ ಇರಲಿಲ್ಲ. ಹಾಗಾಗಿಯೇ ನನ್ನ ಪಯಣದ ವೆಚ್ಚಕ್ಕಾಗಿ ಲೇಖನ ಗಳನ್ನು ಬರೆಯುತ್ತಾ, ಆನ್‌ಲೈನ್ ಫಂಡಿಂಗ್ ಮೂಲಕ ನನ್ನ ಈ ಪಯಣಕ್ಕೆ ಶುಭ ಹಾರೈಸುವವರಿಂದ ಸಹಾಯ ಪಡೆಯುತ್ತಾ ನಾನು ನನ್ನ ಪಯಣವನ್ನು ಆರಂಭಿಸಿದೆ. ‘ಹಿಚ್‌ಹೈಕ್’ ಮೂಲಕ ಮಂಗಳೂರಿಗೆ
ಜೈಪುರದಿಂದ ಹೊರಟ ನಾನು ಹೊಸದಿಲ್ಲಿಯಾಗಿ ಸುತ್ತಾಡುತ್ತಾ ಮುಂಬೈ, ಪುಣೆಯಾಗಿ ಗೋವಾದಿಂದ ನ.23ರಂದು ಮಂಗಳೂರು ಆಗಮಿಸಿದ್ದು ಹಿಚ್‌ಹೈಕ್ ಮೂಲಕ. ನವೆಂಬರ್ 9ರ ವೇಳೆಗೆ ನನ್ನ ಕೈಯಲ್ಲಿ 500ರ ಎರಡು ನೋಟುಗಳಿದ್ದವು. ಆ ಹೊತ್ತಿಗೆ ಅದು ಅಮಾನ್ಯಗೊಂಡಿತ್ತು. ಅದನ್ನು ಬ್ಯಾಂಕ್ ಖಾತೆಗೆ ಠೇವಣಿ ಹಾಕಿಬಿಟ್ಟೆ. ಕೈಯಲ್ಲಿ ಉಳಿದಿದ್ದು, ಕೇವಲ ಕೆಲ ನೂರು ರೂಪಾಯಿ ಮಾತ್ರ. ಊಟ ತಿಂಡಿಗಾಗಿ ಏನು ಮಾಡಬೇಕೆಂದು ತೋಚದ ಪರಿಸ್ಥಿತಿ. ಹಾಗಾಗಿ ನನಗೆ ‘ಲಿಫ್ಟ್ ಕೊಡಿ’ (ಹಿಚ್‌ಹೈಕ್) ಎಂದು ಕೆಲವೆಡೆ ಜನರಲ್ಲಿ ಬೇಡುತ್ತಾ ಇಂದು (ನ. 23ರಂದು)ಮಂಗಳೂರು ಸೇರಿದೆ. ಕೆಲವು ಕಡೆಗೆ ಪ್ರಯಾಣಿಸಲು ಯಾವುದಾದರೂ ಘನ ವಾಹನಗಳನ್ನು ಆಶ್ರಯಿಸಬೇಕಾಗುತ್ತದೆ. ನನ್ನ ಜೇಬಿನಲ್ಲಿ ಹಣವಿಲ್ಲದ ಸಂದರ್ಭ ಹಿಚ್‌ಹೈಕನ್ನು ನಾನು ಬಳಸಿಕೊಂಡು ಬರುತ್ತಿದ್ದೇನೆ. ಎಲ್ಲರೂ ನನಗೆ ಸಹಕರಿಸಿದ್ದಾರೆ. ಮಂಗಳೂರಿ ನಲ್ಲಿ ಇಡ್ಲಿ ಸಾಂಬಾರ್ ಮಾಡುವುದು ಹೇಗೆ ಹಾಗೂ ಅದರ ರುಚಿಯನ್ನು ಸವಿದೆೆ.
‘ನನ್ನ ಮಂಚಿಂಗ್ ಆನ್ ಸ್ಯಾಡಲ್’ ಪಯಣದಲ್ಲಿ ನಾನು ಹಲ ವಾರು ಪ್ರದೇಶ, ಗ್ರಾಮ, ಹಳ್ಳಿ, ನಗರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲರೂ ಪ್ರೀತಿ, ಆದರಗಳಿಂದ ಸ್ವಾಗತಿಸಿ ಆತಿಥ್ಯ ನೀಡಿದ್ದಾರೆ. ನಾನು ನನ್ನ ಕುಟುಂಬದಿಂದ ದೂರವಿದ್ದರೂ ಅದರ ಅರಿವಾ ಗದಂತೆ ನನ್ನ ದೇಶವಾಸಿಗಳ ಪ್ರೀತಿ ನನ್ನ ಗುರಿಯತ್ತ ನನ್ನನ್ನು ಕೊಂಡೊಯ್ಯುತ್ತಿದೆ.’’
‘‘ಜುಲೈ 2ರಂದು ನಾನು ಜೈಪುರ- ಮಲೇಶಿಯಾಕ್ಕೆ ಬೈಸಿಕಲ್ ಪಯಣ ಆರಂಭಿಸಿದಾಗ, ಹೊಸದಿಲ್ಲಿಗೆ ಭೇಟಿ ನೀಡಿದ ವೇಳೆ ಅಲ್ಲಿನ ನನ್ನ ಸೈಕ್ಲಿಂಗ್ ಸ್ನೇಹಿತರಿಗೆ ಫೋನಾಯಿಸಿದ್ದೆ. ಜುಲೈ 10ರಂದು ಇಂಡಿಯಾ ಗೇಟ್ ಬಳಿ ಅವರೆಲ್ಲಾ ಜಮಾಯಿಸಿ ನನ್ನ ಪಯಣಕ್ಕೆ ಶುಭ ಹಾರೈಸಿ ಬೀಳ್ಕೊಟ್ಟರು. ಅಲ್ಲಿಂದ ಪಯಣ ಇದೀಗ ಮಂಗಳೂರು ತಲುಪಿದೆ.’’
ನನ್ನ ಗುರಿ ಇದ್ದಿದ್ದು ಮಧ್ಯ ಪ್ರಾಚ್ಯ- ಹೋಗುತ್ತಿರುವುದು ಆಗ್ನೇಯ ಏಷ್ಯಾ!
ನನ್ನ ಮೂರನೆ ಅವಧಿಯ ಪಯಣದಲ್ಲಿ ನಾನು ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಬೈಸಿಕಲ್ ಪಯಣ ಮಾಡಬೇಕೆಂಬ ಗುರಿ ಹೊಂದಿದ್ದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಗಳಲ್ಲಿ ಸೈಕಲ್‌ನಲ್ಲಿ ಸಾಗುವುದು ಅಪಾಯಕಾರಿ ಎಂದು ನನ್ನ ಪೋಷಕರು ನನ್ನ ಆ ದಿಕ್ಕಿನ ಸಂಚಾರಕ್ಕೆ ಅವಕಾಶ ನೀಡಲಿಲ್ಲ. ಆ ಬಳಿಕ ನಾನು ಹಿಮಾಲಯದ ಮಾರ್ಗದ ಮೂಲಕ ಆಗ್ನೇಯ ಏಷ್ಯಾದ ಪ್ರಯಾಣಕ್ಕೆ ಮುಂದಾದೆ. ಆದರೆ ಅದಕ್ಕಾಗಿ ನನಗೆ ಪ್ರಾಯೋಜಕರು ಬೇಕಾಗಿತ್ತು. ನಾನು ಹಲವಾರು ಕಂಪೆನಿಗಳ ಜನರನ್ನು ಭೇಟಿಯಾದೆ. ಆದರೆ ಪ್ರಯೋಜನವಾಗಲಿಲ್ಲ. ನಿರಾಶೆಯೊಂದಿಗೆ ಮನೆ ಸೇರಿದ್ದೆ. ಆದರೆ ನನ್ನ ನಿರ್ಧಾರ ಮಾತ್ರ ಬದಲಿಸಲಿಲ್ಲ. ಖಾಲಿ ಕೈಯಲ್ಲೇ ಪಯಣ ಆರಂಭಿಸಲು ಸಿದ್ಧನಾಗಿದ್ದೆ. ಜುಲೈ 10ರಂದು ಹೊಸ ದಿಲ್ಲಿಗೆ ಬಂದಾಗ ನನಗಲ್ಲಿ ಕೆಲ ಬೈಸಿಕಲ್ ಪ್ರೇಮಿಗಳು ಸಿಕ್ಕರು. ಅವರೆಲ್ಲಾ ನನ್ನನ್ನು ಬೀಳ್ಕೊಡಲು ಬಂದವರು. ಕೇವಲ ಅಷ್ಟು ಮಾತ್ರವಲ್ಲ, ಅವರಲ್ಲೊಬ್ಬ ನನ್ನ ಜೇಬಿಗೆ ಕವರೊಂದನ್ನು ತುರುಕಿಬಿಟ್ಟ. ಅದರಲ್ಲಿ 3000 ರೂ.ಗಳ ಗರಿಗರಿಯಾದ ನೋಟುಗಳು. ನನ್ನ ಕಣ್ಣಾಲಿಗಳು ತುಂಬಿದ್ದವು. ನಿಜ, ಆತ ಯಾರೆಂದೇ ನನಗೆ ತಿಳಿದಿರಲಿಲ್ಲ. ಅಂದು ನಾನು ಅದೆಷ್ಟು ಭಾವುಕನಾಗಿದ್ದೆನೆಂದರೆ, ಆ ವ್ಯಕ್ತಿಗೆ ಧನ್ಯವಾದ ಹೇಳಲು ಮರೆತಿದ್ದೆ. ದೃಢ ನಿಶ್ಚಯ, ಸ್ವಚ್ಛ ಮನಸ್ಸು ಇದ್ದಲ್ಲಿ ನಮ್ಮ ದಾರಿಗೆ ನೆರವು ತಾನಾಗಿಯೇ ಒದಗಿ ಬರುತ್ತದೆ. ಸಹೃದಯಿಗಳಿಗೆ ನಮ್ಮ ದೇಶದಲ್ಲಿ ಕಮ್ಮಿ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ ಅಲ್ಲವೇ?. ಈ ಮನಪೂರ್ವಕ ನಂಬಿಕೆಯೊಂದಿಗೆ ನನ್ನ ಪಯಣ ಮಲೇಶಿಯಾ ತಲುಪಲಿದೆ. ಮಂಗಳೂರಿನಲ್ಲೂ ನನಗೆ ಊಟ ತಿಂಡಿ ವ್ಯವಸ್ಥೆ ಮಾಡಿಸಿದ್ದಾರೆ. ಅವರ್ಯಾರೆಂದು ನನಗೆ ಗೊತ್ತಿಲ್ಲವಾದರೂ, ಅವರ ನೆರವು ಮಾತ್ರ ಮರೆಯಲಾಗದು. ದಿನವೊಂದಕ್ಕೆ 150ರಿಂದ 200 ಕಿ.ಮೀ. ಪ್ರಯಾಣಿಸುತ್ತೇನೆ. ಆದರೆ ಈ ಪ್ರಯಾಣದ ನಡುವೆ ಅಂದರೆ ಸುಮಾರು 20 ಕಿ.ಮೀ.ಗಳ ನಡುವೆ ನಾನು ಬ್ರೇಕ್ ತೆಗೆದುಕೊಳ್ಳುತ್ತೇನೆ. ಆ ಪ್ರದೇಶಗಳ ತಿಂಡಿ ತಿನಿಸುಗಳ ಬಗ್ಗೆ ಅರಿತುಕೊಳ್ಳುವುದಕ್ಕಾಗಿ, ಜನರ ಜತೆ ಬೆರೆಯುವುದಕ್ಕಾಗಿ.
ಹೀಗೆ ಹೊಸತನ್ನು ಅನ್ವೇಷಿಸುತ್ತಾ, ಸೊಬಗನ್ನು ಕಣ್ಣಾರೆ ತುಂಬಿಕೊಳ್ಳುತ್ತಾ ನನ್ನ ಪಯಣ ಹೀಗೇ ಮುಂದುವರಿಯಲಿದೆ. ಜುಲೈ ತಿಂಗಳಲ್ಲಿ ನಾನು ಮಲೇಶಿಯಾ ಸೇರುವ ಮೂಲಕ ನನ್ನ ಗುರಿ ತಲುಪಲಿದ್ದೇನೆ. ಅಷ್ಟು ಹೊತ್ತಿಗಾಗಲೇ ನಾನು ಆಗ್ನೇಯ ಏಷ್ಯಾ ದೇಶಗಳ, ನನ್ನ ಭಾರತ ದೇಶ ಸೇರಿದಂತೆ ವಿಭಿನ್ನ ಪಕ್ವಾನಗಳ ಸ್ವಾದದ ಜತೆ ಅವುಗಳನ್ನು ತಯಾರಿಸುವ ವಿಧಾನಗಳನ್ನು ಅರಿಯಲಿದ್ದೇನೆ. ನನ್ನ ಚೆಫ್ ಆಗುವ ಕನಸಿಗೆ ನನ್ನ ದೇಶವಾಸಿಗಳ ಸಹಕಾರವೂ ನನಗಿದೆ.
ಮೋಹಿತ್ ಕಪೂರ್ ಮೊಬೈಲ್ ಸಂಖ್ಯೆ- 9782797289, 9899294742
ಗೇಟ್ ಆಫ್ ಇಂಡಿಯಾದ ಎದುರು ಸೈಕಲ್ ಸ್ನೇಹಿತರ ಜತೆ ಮೋಹಿತ್