ಗಾಳಿಯಿಂದ ಶುದ್ದ ಕುಡಿಯುವ ನೀರು !
ಪ್ರೌಢಶಾಲಾ ವಿದ್ಯಾರ್ಥಿಗಳ ಸಂಶೋಧನೆ
ನೀರಿಗಾಗಿ ಇಡೀ ಊರಿಗೆ ಊರೇ ಬವಣೆ ಪಡುತ್ತಿರುವ ಈ ದಿನಮಾನಗಳಲ್ಲಿ ಎಲ್ಲಿಯಾದರೂ ಒಂದು ತೊಟ್ಟು ಕುಡಿಯಲು ಶುದ್ಧ ಜಲ ಸಿಗುವುದೇ ಎಂದು ಹುಡುಕುವ ಕಾಲವಿನ್ನು ದೂರವಿಲ್ಲ. ಏಕೆಂದರೆ ಅಂತಹ ಪರಿಸ್ಥಿತಿಯನ್ನು ನಾವೇ ನಮ್ಮ ಕೈಯ್ಯಾರೆ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಮುಂದೊಂದು ದಿನ ಶುದ್ಧ ಕುಡಿಯುವ ನೀರಿಗಾಗಿ ಏನೆಲ್ಲ ಮಾಡಬೇಕಾಗುವುದೋ ದೇವರೆ ಬಲ್ಲ.
ಶುದ್ಧ ಜಲಕ್ಕಿಂತ ಹಾಲು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಸದ್ಯದ ಮಾರುಕಟ್ಟೆಯಲ್ಲಿ ವಿವಿಧ ಹೆಸರುಗಳಿಂದ ಜನರನ್ನು ಮೋಸ ಮಾಡುತ್ತಿರುವ ಬಾಟಲಿ ನೀರು ನಮ್ಮ ಬದುಕಿಗೆ ಎಷ್ಟು ಸುರಕ್ಷಿತ ಎನ್ನುವುದರ ಕುರಿತು ಪತ್ರಿಕೆಗಳು ಪುಟಗಟ್ಟಲೆ ಬರೆದಿವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ನಡೆದಿದೆ.
ಹಾಗಾದರೆ ಕಡಿಮೆ ಬೆಲೆಯಲ್ಲಿ ಕಲ್ಮಷರಹಿತ ಶುದ್ಧ ಜಲ ನಮಗೆಲ್ಲಿ ಸಿಗುವುದು ಎನ್ನುವ ಜಿಜ್ಞಾಸೆ ಹುಟ್ಟಿಕೊಳ್ಳುವುದು ಸಹಜ. ಭಟ್ಕಳ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಾದ ಮುಹಮ್ಮದ್ ಬಿಲಾಲ್ ಹಾಗೂ ಅಮಾನುಲ್ಲಾ ತಮ್ಮ ವಿಜ್ಞಾನ ಶಿಕ್ಷಕ ಪ್ರಶಾಂತ್ ಭಟ್ ಮಾರ್ಗದರ್ಶನದಲ್ಲಿ ಇಂತಹದ್ದೊಂದು ಸಾಧ್ಯತೆಗಳನ್ನು ಹುಟ್ಟುಹಾಕಿದ್ದಾರೆ. ಅದುವೆ ಗಾಳಿಯ ಮೂಲಕ ಶುದ್ಧ ಜಲ ಪಡೆಯುವುದು. ಭಾರತದಂತಹ ರಾಷ್ಟ್ರಗಳಲ್ಲಿ ಇದರ ಸಾಧ್ಯತೆಗಳು ಹೆಚ್ಚೆಚ್ಚಾಗಿ ಗೋಚರಿಸುತ್ತಿವೆ. ಪರಿಸರದಲ್ಲಿನ ಗಾಳಿಯನ್ನು ಹೀರಿಕೊಂಡು ಗಾಳಿಯಲ್ಲಿನ ನೀರಿನ ಅಂಶವನ್ನು ಕ್ರೋಡೀಕರಿಸಿ ಅತ್ಯಂತ ಶುದ್ಧವಾಗಿರುವ ಮತ್ತು ಆರೋಗ್ಯಕರವಾಗಿರುವ ನೀರನ್ನು ಪಡೆಯಬಹುದು ಎಂಬ ಮಾದರಿಯನ್ನು ಸಿದ್ದಪಡಿಸಿದ ವಿದ್ಯಾರ್ಥಿಗಳು ಅದನ್ನು ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಾರ್ಯಗತ ಮಾಡಿ ತೋರಿಸಿದ್ದಾರೆ. ಇಂತಹ ಅನ್ವೇಷಣೆಗಳಿಂದಾಗಿ ನಮ್ಮಲ್ಲಿ ಉತ್ತಮ ಆರೋಗ್ಯಯುತವಾಗಿರುವ ಕುಡಿಯವ ನೀರನ್ನು ಪಡೆಯಬಹುದಾಗಿದೆ ಎಂದು ಪ್ರಶಾಂತ್ ಭಟ್ ಅಭಿಪ್ರಾಯಪಡುತ್ತಾರೆ.
ನಮ್ಮ ಭೂಮಂಡಲವು ಶೇ.75ರಷ್ಟು ನೀರಿನಿಂದಾವೃತಗೊಂಡಿದೆ. ಆದರೆ ಇದು ಕುಡಿಯಲು ಯೋಗ್ಯವಲ್ಲ. ಕೇವಲ ಶೇ.1ರಷ್ಟು ಮಾತ್ರ ನೀರು ಯೋಗ್ಯವಾಗಿದ್ದು ಇದರಲ್ಲಿ ಶೇ.2.5 ನೀರು ಮಾತ್ರ ಆರೋಗ್ಯಕರವಾಗಿದೆ ಎಂದು ಹೇಳಲಾಗುತ್ತಿದೆ.
ಕೆರೆ,ಕೊಳ್ಳ, ನದಿ ಹಳ್ಳಗಳಿಂದ ಜನರು ಕುಡಿಯಲು ನೀರನ್ನು ಉಪಯೋಗಿಸುತ್ತಾರೆ. ಬೇಸಿಗೆಯಲ್ಲಿ ಐದಾರು ಕಿ.ಮೀ ದೂರ ನಡೆದರೂ ಜನರಿಗೆ ಕುಡಿಯಲು ನೀರು ಸಿಗದು. ಶುದ್ಧ ಕುಡಿಯುವ ನೀರಿನ ಅಭಾವದಿಂದಾಗಿ ನಾನಾ ರೀತಿಯ ಮಾರಕ ರೋಗಗಳಿಂದ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ನಮ್ಮ ದೇಶದ ಸ್ಥಿತಿಗತಿಯಾಗಿದೆ. ಒಂದು ಲೀ.ನೀರಿಗೆ 25 ರಿಂದ 30 ರೂ. ಕೊಟ್ಟರೂ ಅದರ ಸುರಕ್ಷತೆಯ ಕುರಿತಂತೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ.
ಈ ನೀಟ್ಟಿನಲ್ಲಿ ನೀರಿನ ಘನೀಕರಣ ತತ್ವವನ್ನಾಧರಿಸಿ ವಿದ್ಯಾರ್ಥಿಗಳು ಸಿದ್ಧಗೊಳಿಸಿದ ಮಾದರಿಯು ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ಇಂತಹ ಯೋಜನೆಗಳು ನಮ್ಮ ದೇಶದಲ್ಲಿ ಕಾರ್ಯರೂಪಕ್ಕೆ ತಂದರೆ ನಾವು ಆರೋಗ್ಯಕರ ಭಾರತ ನಿರ್ಮಾಣ ಮಾಡಲು ಸಾಧ್ಯ ಎನ್ನುತ್ತಾರೆ ಮಾರ್ಗದರ್ಶಕ ಶಿಕ್ಷಕ ಪ್ರಶಾಂತ್ ಭಟ್.
ಇದು ಹೇಗೆ ಸಾಧ್ಯ?: ಹೌದು ಗಾಳಿಯಿಂದ ನೀರು? ಇದು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಳ್ಳುವುದು ಸಹಜ. ನೀವು ಗಾಳಿಯಲ್ಲಿ ನೀರಿನ ಅಂಶಗಳಿರುವುದನ್ನು ಕೇಳಿರಬಹುದಲ್ಲವೇ? ಇದೇ ನೀರಿನ ಅಂಶಗಳನ್ನು ವಿಂಡ್ ಟರ್ಬೈನ್ ಮೂಲಕ ಒಂದು ಚೇಂಬರಿಗೆ ಶೇಖರಿಸಿ ಅದು ಅಲ್ಲಿ ಆದು ಅವಿಯಾಗಿ ನೀರಿನ ರೂಪ ಪಡೆದುಕೊಳ್ಳುತ್ತದೆ. ನಂತರ ಅದನ್ನು ಪಂಪ್ ನ ಮೂಲಕ ಮೇಲಕ್ಕೆ ಬರುವಂತೆ ಮಾಡಲಾಗುತ್ತದೆ. ಇದು ಸದ್ಯ ಲಭ್ಯವಿರುವ ಎಲ್ಲ ಶುದ್ಧ ನೀರಿಗಿಂತಲೂ ಹೆಚ್ಚು ಶುದ್ಧ ನೀರು ಎಂಬುದಾಗಿ ವಿಜ್ಞಾನ ಹೇಳುತ್ತದೆ.
ಬೇಕಾಗುವ ಸಾಧನಗಳು: ವಿಂಡ್ ಟರ್ಬೈನ್(ಗಾಳಿಯ ಸಹಾಯದಿಂದ ತಿರುಗು ಚಕ್ರ), ನೆಲದಡಿ ನಿರ್ಮಿಸಲ್ಪಟ್ಟ ಚೆಂಬರ್(ಗಾಳಿ ಶೇಖರಿಸಲು), ನೀರಿನ ಘನೀಕರಣದ ಚೇಂಬರ್ ಹಾಗೂ ಚಿಕ್ಕ ಹ್ಯಾಂಡ್ ಪಂಪ್ (ನೀರನ್ನು ಮೇಲಕ್ಕೆ ಎತ್ತಲು)
ಇದು ಯಾವು ರೀತಿ ಕಾರ್ಯನಿರ್ವಹಿಸುತ್ತದೆ?: ಭೂಮಿಯಲ್ಲಿ ಆರು ಅಡಿ ಒಳಗೆ ಕಂಡನ್ಸೇಷನ್ ಚೇಂಬರ್(ಘನೀಕರಣ ಚೇಂಬರ್) ನಿರ್ಮಿಸಿ ಮೇಲ್ಭಾಗದಲ್ಲಿ ಗಾಳಿಯ ಸಹಾಯದಿಂದ ತಿರುಗುವ ಚಕ್ರ(ವಿಂಡ್ ಟರ್ಬೈನ್) ಅಳವಡಿಸಲಾಗುವುದು. ಇದು ಗಾಳಿಯ ಸಹಾಯದಿಂದ ತಿರುಗುತ್ತಿರುತ್ತದೆ ಇದರೊಂದಿಗೆ ಒಳಗಡೆ ಜೋಡಿಸಲ್ಪಿಟ್ಟಿರುವ ಬ್ಲೇಡ್ ಗಳು ಸಹ ತಿರುಗುತ್ತವೆ. ಇದು ತಿರುಗುವಾಗ ಹೊರಗಡೆಯಿಂದ ಬಂದ ಗಾಳಿಯನ್ನು ಒಳಗಡೆ ತೆಗೆದುಕೊಂಡು ಭೂಮಿಯಲ್ಲಿ ಅಳವಡಿಸಿರುವ ಚೇಂಬರ್ ಕಳಿಸುತ್ತದೆ.( ಇದು ಒಂದು ರೀತಿಯಲ್ಲಿ ಎಕ್ಸಾಸ್ಟ್ ಫ್ಯಾನ್ನಂತೆ ಕಾರ್ಯನಿರ್ವಹಿಸುತ್ತದೆ)
ಭೂಮಿಯ ಒಳಗಿನ ಭಾಗ ಹೊರಗಿನ ಭಾಗಕ್ಕಿಂತ ತಂಪಾಗಿರುವುದರಿಂದ ವಿಂಡ್ ಟರ್ಬೈನ್ ಮೂಲಕ ಒಳ ಸೇರಿದ ಗಾಳಿಯು ತಂಪಾಗಿ ಚಿಕ್ಕ ಚಿಕ್ಕ ನೀರಿನ ಹನಿಗಳನ್ನು ಸೃಷ್ಟಿಸುತ್ತದೆ. ಇದು ಭೂಮಿಯ ಒಳಗಿರುವ ಕಂಡನ್ಸೇಷನ್ ಚೇಂಬರ್ ನಲ್ಲಿ ಶೇಖರಣೆಗೊಳ್ಳುತ್ತದೆ. ಹೀಗೆ ಶೇಖರಣೆಗೊಂಡ ನೀರನ್ನು ಹ್ಯಾಂಡ್ ಪಂಪ್ ಮೂಲಕ ಮೇಲಕ್ಕೆ ಎತ್ತಲಾಗುತ್ತದೆ. ಹೀಗೆ ಹೊರಕ್ಕೆ ಬಂದ ನೀರು ಮಳೆಯ ನೀರಿಗಿಂತಲೂ ಶುದ್ಧವಾಗಿರುತ್ತದೆ. ಏಕೆಂದರೆ ಮಳೆಯ ನೀರು ಗ್ರೀನ್ ಹೌಸ್ ಗ್ಯಾಸ್ ಗಳಾದ ಕಾರ್ಬನ್ ಡೈಆಕ್ಸೈಡ್, ಸೋಡಿಯಮ್ ಗಳಿಂದ ಕೂಡಿರುವುದರಿಂದ ಇದು ಕೂಡ ಶುದ್ಧತೆಯಿಂದ ಕೂಡಿರುವುದಿಲ್ಲ. ಆದರೆ ಈ ಮಾದರಿಯ ಮೂಲಕ ಹೊರತೆಗೆದ ನೀರು ಮಳೆಯ ನೀರಿಗಿಂತಲೂ ಪರಿಶುದ್ಧವಾಗಿರುತ್ತದೆ. ಅಲ್ಲದೆ ಭೂಮಿಯಡಿ ಚೇಂಬರ್ ನಲ್ಲಿ ಫಿಲ್ಟರ್ ಪೇಪರ್ ಅಳವಡಿಸಿದ್ದರಿಂದ ಇದು ಧೂಳು, ಕ್ರಿಮಿ ಕೀಟಗಳಿಂದ ಕಲುಷಿತವಾಗುವುದನ್ನು ತಡೆಯುತ್ತದೆ. ಆದ್ದರಿಂದ ಗಾಳಿಮೂಲಕ ಆವಿಷ್ಕರಿಸಿದ ಈ ನೀರು ಎಲ್ಲ ನೀರಿಗಿಂತಲೂ ಅತ್ಯಂತ ಶುದ್ಧ ಹಾಗೂ ಆರೋಗ್ಯಕಾರಿ ಎನ್ನಬಹುದಾಗಿದೆ.
ಇದು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಯೋಜನೆಯಾಗಿದ್ದು ಪ್ರಧಾನಿ ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿದೆ. ಇದು ಸ್ವಚ್ಛ ಭಾರತ ಕನಸನ್ನು ನನಸಾಗಿಸುವ ಮಾದರಿಯಾಗಿದ್ದು ಇದನ್ನು ಯಾವ ರೀತಿ ಬಳಸಿಕೊಳ್ಳಬಹುದಾಗಿದೆ ಎನ್ನುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಬಹುದಾಗಿದೆ.