ನೋಟು ಅಮಾನ್ಯವೂ ಅಮಾನುಷ ಸರಕಾರವೂ...
ಮೊನ್ನೆ ನವೆಂಬರ್ 26ರಂದು ಸಂವಿಧಾನ ದಿನ ಆಚರಿಸಿದೆವು. 1949 ನವೆಂಬರ್ 26ರಂದು ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಇದರ ಸ್ಮರಣಾರ್ಥ ಪ್ರತಿವರ್ಷ ನವೆಂಬರ್ 26ರಂದು ಸರಕಾರ ‘ಸಂವಿಧಾನ ದಿವಸ್’ ಆಚರಿಸುತ್ತಿದೆ. ಪ್ರಜೆಗಳಿಗೆ ಸ್ವಾತಂತ್ರ್ಯ ಮತ್ತು ಹಕ್ಕುಬಾಧ್ಯತೆಗಳನ್ನು ನೀಡಿರುವ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಈ ಸಂವಿಧಾನ, ಭಗವದ್ಗೀತೆ, ಕುರ್‌ಆನ್ ಬೈಬಲ್ ಇತ್ಯಾದಿ ಪವಿತ್ರ ಗ್ರಂಥಗಳಿಗೂ ಮಿಗಿಲಾದ ಪರಮೋಚ್ಚ ರಾಷ್ಟ್ರಧರ್ಮ ಗ್ರಂಥ. ಪ್ರತಿ ವರ್ಷ ಇದು ಬೋಧಿಸುವ ಮೌಲ್ಯಗಳನ್ನು ಸ್ಮರಿಸುವುದು ಉಚಿತವೇ ಆಗಿದೆ. ಸಂವಿಧಾನ ದಿವಸದಂದು ಇದನ್ನು ನಮಗೆ ಕೊಟ್ಟ ಹಿರಿಯರನ್ನು ಸ್ಮರಿಸುವುದರ ಜೊತೆಗೆ ಸಂವಿಧಾನ ಬೋಧಿಸುವ ಮೌಲ್ಯಗಳನ್ನು ಪಾಲಿಸುವ ಬದ್ಧತೆ ಯನ್ನು ಪುನರುಚ್ಚರಿಸುತ್ತೇವೆ. ಎಲ್ಲದರಂತೆ ಇದೂ ಒಂದು ಕಾಟಾಚಾರದ ದಿನಾಚರಣೆ ಯಾಗಬಾರದು. ಏಕೆಂದರೆ ಇದು ರಾಷ್ಟ್ರಜೀವನದ ಪೂಜನೀಯ ಆಕರ ಗ್ರಂಥ. ಅಂದು ಸಂವಿಧಾನ ಪಾಲಿಸುವ ಪ್ರತಿಜ್ಞೆಯನ್ನೇನೋ ಮಾಡು ತ್ತೇವೆ. ಆದರಂತೆ ನಾವು ನಡೆದುಕೊಳ್ಳುತ್ತಿದ್ದೇವೆಯೇ? ಪ್ರಾಮಾಣಿಕ ಉತ್ತರ ಇಲ್ಲ ಎಂಬುದೇ ಆಗಿದೆ. ಸಂವಿಧಾನ ಪಾಲಿಸುವುದಾಗಿ ಪ್ರತಿಜ್ಞೆಮಾಡುವ ನಮ್ಮ ಶಾಸಕರು, ಮಂತ್ರಿಮಹೋದಯರ ನಡವಳಿಕೆಗಳು, ಮಾತುಗಳು, ರಾಷ್ಟ್ರದ ಇತ್ತೀಚಿನ ಕೆಲವು ವಿದ್ಯಮಾನಗಳನ್ನು ನೋಡಿದಾಗ ಬೇರೇನು ಹೇಳಲು ಸಾಧ್ಯ?
ಸಂವಿಧಾನವನ್ನು ಅಪವಿತ್ರಗೊಳಿಸುವ ಲಜ್ಜೆಗೆಟ್ಟ ಚಾಳಿ ಇಂದಿರಾಗಾಂಧಿ ಯವರು ಹೇರಿದ ತುರ್ತುಪರಿಸ್ಥಿತಿಯಿಂದಲೇ ಶುರುವಾಯಿತು. ತುರ್ತುಪರಿಸ್ಥಿತಿ ಹೋದರೂ ಹಿರಿಯಕ್ಕನ ಚಾಳಿ ಮಾತ್ರ ಮುಂದುವರಿದಿದೆ-ನಾನಾರೂಪಗಳಲ್ಲಿ. ವ್ಯಕ್ತಿ ಸ್ವಾತಂತ್ರ್ಯವಿಲ್ಲದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎನ್ನುತ್ತಾರೆ ಗಾಂಧೀಜಿ. ಆದರೆ ತುರ್ತುಪರಿಸ್ಥಿತಿಯಲ್ಲಿ ರಾಜಾರೋಷವಾಗಿ ಹಾಗೂ ನಂತರದ ದಿನಗಳಲ್ಲಿ ಪರೋಕ್ಷ ಸೂಕ್ಷ್ಮಾತಿಸೂಕ್ಷ್ಮವಾಗಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ಬರುತ್ತಲೇ ಇದೆ. ಇದು ಸರಕಾರಿ ಕ್ರಮಗಳಿಂದಲೇ ನೇರವಾಗಿ ಆಗುತ್ತಿದೆ ಎಂದು ಹೇಳಲಾಗದು, ಸರಕಾರದ ಮೂಗಿನಡಿ ಅದರ ಕೃಪಾಪೋಷಿತ ಸಂಘಟನೆಗಳಿಂದ ವ್ಯಕ್ತಿ ಸ್ವಾತಂತ್ರ್ಯದ ಹನನವಾಗುತ್ತಲೇ ಇದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆಯೊಡ್ಡುವ ಇಂಥ ಕೆಲವು ಸಂಘಟನೆಗಳಿಗೆ ಹೆಚ್ಚಿನ ಬಲಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಭಾಷಾ ಸ್ವಾತಂತ್ರ್ಯ, ಆಯ್ಕೆ ಸ್ವಾತಂತ್ರ್ಯ, ಊಟ-ಉಡುಪಿನ ಸ್ವಾತಂತ್ರ್ಯ, ಹೀಗೆ ಹಲವು ಬಗೆಯ ಸ್ವಾತಂತ್ರ್ಯಗಳಿಗೆ ಸಂಚಕಾರ ಬಂದಿದೆ, ಈಗ ಕಾಳಧನವನ್ನು ಮಟ್ಟಹಾಕುವ ಸಲುವಾಗಿ ಮೋದಿಯವರು ಮಾಡಿರುವ 500 ಮತ್ತು 1000 ರೂ. ನೋಟುಗಳ ಅಮಾನ್ಯದಿಂದಾಗಿ(ಅನೋಟೀಕರಣ ಎನ್ನೋಣವೆ) ಪ್ರಜೆಗಳಿಗೆ ತಾವು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ಪಡೆವ, ವಿನಿಯೋಗಿಸುವ ಸ್ವಾತಂತ್ರ್ಯಕ್ಕೇ ಸಂಚಕಾರ ಬಂದಿದೆ. ಕಪ್ಪುಹಣದ ಮೂಲೋತ್ಪಾಟನೆಗೆ ಎಲ್ಲರ ಸಹಮತವಿದೆ. ಆದರೆ ಕೆಲವೇ ಸಾವಿರ-ಲಕ್ಷ ಮಂದಿಯ ಕಪ್ಪುಹಣ ದಂಧೆಗೆ ಕಡಿವಾಣ ಹಾಕಲು ಉಳಿದ ಅಹನ್ಯಹನಿ ಕಾಲಕ್ಷೇಪಮಾಡುವ ದೇಶದ ಜನಸಂಖ್ಯೆಯ ಮುಕ್ಕಾಲು ಪಾಲು ಜನರನ್ನು ಶಿಕ್ಷಿಸಬೇಕಿತ್ತೆ? ಅನ್ಯ ಮಾರ್ಗಗಳಿರಲಿಲ್ಲವೆ? ಈ ಕ್ರಮ ಸರಿಯೆ? ಇದರ ಬಗ್ಗೆ ಅರ್ಥ ಶಾಸ್ತ್ರ ನಿಪುಣರಲ್ಲೇ ಒಮ್ಮತವಿಲ್ಲ.
ಕಪ್ಪುಹಣ ಎಂದರೇನು? ತೆರಿಗೆ ಪಾವತಿಸದೆ ಸರಕಾರದ ಕಣ್ಣುತಪ್ಪಿಸಿ ಬಚ್ಚಿಟ್ಟ ಹಣ. ಇದನ್ನು ಹೊರತರಲು ಅನ್ಯ ಮಾರ್ಗಗಳಿರಲಿಲ್ಲವೆ? ಸ್ವಾತಂತ್ರ್ಯ ಬಂದ ದಿನದಿಂದ ವರಮಾನ ತೆರಿಗೆ ಇಲಾಖೆ ಇತ್ಯಾದಿಗಳು ಕೆಲಸ ಮಾಡುತ್ತಿವೆಯಲ್ಲವೆ? ಅವುಗಳಿಂದ ಕಪ್ಪಹಣದ ಪಿಡುಗು ತಪ್ಪಿಸಲು ಏಕೆ ಸಾಧ್ಯವಾಗಲಿಲ್ಲ? ಅಥವಾ ಅದೂ ಲಂಚಗುಳಿತನದಲ್ಲಿ ಮುಳುಗಿಹೋಗಿ ಅಥವಾ ಅದಕ್ಷತೆಯಿಂದಾಗಿ ಈ ಅನೋಟೀಕರಣ ಅನಿವಾರ್ಯವಾಯಿತೆ? ಐನೂರು, ಸಾವಿರ ಮೌಲ್ಯದ ನೋಟುಗಳ ಅಮಾನ್ಯತೆಯಿಂದ ಕಪ್ಪುಹಣ, ಖೋಟಾ ನೋಟು ಮುದ್ರಣ, ಭಯೋತ್ಪಾದಕರಿಗೆ ಹಣ ಪೂರೈಕೆ ಇತ್ಯಾದಿ ಸಮಸ್ಯೆಗಳು ಪರಿಹಾರವಾಗುವುದೆ? ಕಪ್ಪುಹಣದ ಧನಿಕರು ಯಾರೂ ಕಪ್ಪುಹಣವನ್ನು ತಮ್ಮ ಮನೆಗಳಲ್ಲಿ ಹಾಸಿಗೆದಿಂಬುಗಳಡಿ ಬಚ್ಚಿಡುವು ದಿಲ್ಲ. ಅವರು ಕಪ್ಪುಹಣವನ್ನು ಬಂಗಾರ-ಭೂಮಿ ಇತ್ಯಾದಿಗಳಾಗಿ ಪರಿವರ್ತಿಸು ವಷ್ಟು ಜಾಣರು. ಆದ್ದರಿಂದ ಸರಕಾರದ ಈ ಬಲೆಗೆ ಕಪ್ಪುಹಣ ಧನಾಢ್ಯರು ಸಿಕ್ಕಿಬೀಳುವುದು ಹೆಚ್ಚಿರದು. ಇದೊಂದು ನಿರರ್ಥಕ ಕ್ರಮ ಎಂಬ ಮಾತೂ ಕೇಳಿಬರುತ್ತಿದೆ, ಆರ್ಥಿಕ ತಜ್ಞ ವಲಯಗಳಿಂದ. ಆದರೆ ಮೋದಿಯವರ ಸರಕಾರ ಹೇಳುತ್ತೆ ಕಪ್ಪುಹಣ ಮಟ್ಟ ಹಾಕಿದಲ್ಲಿ ಸ್ವರ್ಗವನ್ನೇ ಧರೆಗಿಳಿಸಬಹುದು, ಮತ್ತೊಂದು ಅಚ್ಛೇದಿನ್ ಬರಲಿದೆ ಎಂದು. ‘‘ಐವತ್ತು ದಿನಗಳ ಕಾಲ ತಾಳ್ಮೆಯಿಂದಿರಿ, ಎಲ್ಲವೂ ಸರಿಹೋಗುತ್ತದೆ’ ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮಾಧಾನ. ಇದಕ್ಕಾಗಿ ದೇಶದ ಜನತೆ ಅವರಿಗೆ ಕೃತಜ್ಞರಾಗಿರಬೇಕು. ಆದರೆ ಐವತ್ತು ದಿನಗಳ ಕಾಲ ಏನು ಮಾಡಬೇಕು? ಮಣ್ಣು ತಿನ್ನಬೇಕೆ?
ಈ ದೇಶದ ಮುಕ್ಕಾಲು ಪಾಲು ಜನತೆ ಅದಾನಿ-ಅಂಬಾನಿಗಳಲ್ಲ. ದಿನಗೂಲಿ, ತಿಂಗಳ ವೇತನಗಳಿಂದ ಅಹನ್ಯಹನಿ ಕಾಲಕ್ಷೇಪ ಮಾಡುವವರು. ಸಂಜೆ ಕೂಲಿ ಹಣ ತರಬೇಕು, ಒಲೆಯಮೇಲೆ ಅನ್ನದೆಸರು/ಹಿಟ್ಟಿನ ಎಸರು ಇಡಬೇಕು. ತಿಂಗಳ ಸಂಬಳ ಬ್ಯಾಂಕಿನಿಂದ ತೆಗೆದು ಕಿರಾಣಿ ಅಂಗಡಿಯ ಹಿಂದಿನ ತಿಂಗಳ ಬಾಕಿ ತೀರಿಸಿ ದಿನಸಿ ವಗೈರೆ ತರಬೇಕು ಎನ್ನುವಂಥ ಸಮಾಜ ಬಾಂಧವರೇ ಹೆಚ್ಚು. ಆದರೆ ಸಂಸಾರಿಯಲ್ಲದ ಲೋಕಸಂಸಾರಿ ಮೋದಿಯವರಿಗೆ ಇದು ಅರ್ಥವಾಗುವುದು ಕಷ್ಟವೇ. ನೋಟುಗಳ ಏಕಾಏಕಿ ರದ್ದತಿಯಿಂದಾಗಿ ಕೂಲಿಕಾರರಿಗೆ ಕಾರ್ಮಿಕರಿಗೆ ಕೂಲಿ ಪಾವತಿ ಸಲು ಮಾಲಕರಲ್ಲಿ ಹಣವಿಲ್ಲ. ಖಾತೆಯಲ್ಲಿ ಅಳಿದುಳಿದ ಉಳಿತಾಯದ ಹಣವೋ ಸಂಬಳವನ್ನೋ ತೆಗೆದುಕೊಳ್ಳಲು ಬ್ಯಾಂಕುಗಳಲ್ಲಿ ಹಣವಿಲ್ಲ. ಇದ್ದರೂ ನಿರ್ಬಂಧ. ಎಟಿಎಂಗಳಲ್ಳಿ ಹಣವಿಲ್ಲ. ತನ್ನ ಹಣಕ್ಕಾಗಿಯೆ ಬ್ಯಾಂಕು/ಎಟಿಎಂಗಳೆದುರು ಸಾಲುಗಟ್ಟಿನಿಂತು, ಗೋಗರೆಯಬೇಕಾದಂಥ ಪರಿಸ್ಥಿತಿ. ಪ್ರಜೆ ತನ್ನ ಹಣವನ್ನು ತಗೆದುಕೊಳ್ಳುವ ಸ್ವಾತಂತ್ರ್ಯದಿಂದ ವಂಚಿತನಾದ ಪರಿಸ್ಥಿತಿ. ಮಕ್ಕಳ ಮದುವೆ ಮುಂಜಿಗಳಿಗೂ ಖರ್ಚು ಮಾಡುವ ಸ್ವಾತಂತ್ರ್ಯವಿಲ್ಲ. ಅದಕ್ಕೂ ಬ್ಯಾಂಕಿಗೆ ನೂರೆಂಟು ಸಮಜಾಯಿಷಿ ನೀಡಬೇಕು. ಕೃಷಿಕರಿಗೆ ಬಿತ್ತನೆ ಬೀಜ ಗೊಬ್ಬರ ಕೊಳ್ಳಲು ಕಾಸಿಲ್ಲ. ಸಹಕಾರ ಸಂಘಗಳ ಬ್ಯಾಂಕುಗಳಲ್ಲಿ ಹಳೆ ನೋಟುಗಳನ್ನು ಹೊಸದಕ್ಕೆ ಬದಲಾಯಿಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಗ್ರಾಮೀಣ ಜನರ ಬದುಕು ಮತ್ತಷ್ಟು ದುರ್ಭರ. ರಾಷ್ಟ್ರೀಕೃತ ಬ್ಯಾಂಕುಗಳಿರುವ ಪ್ರದೇಶದಲ್ಲೂ ಸಾಲುಗಟ್ಟಿ ನಿಲ್ಲಬೇಕು. ಹಣ ಸಿಗುವ ಖಾತರಿ ಇಲ್ಲ. ಹಣಕ್ಕಾಗಿ ನಿಂತು ಹೆಣವಾಗಿ ಬೀಳಬೇಕು. ಇಪ್ಪತ್ತೊಂದನೆ ಶತಮಾನದ ಭಾರತೀಯರ ಹಣೆಬರಹ ಹೀಗಾಗುತ್ತದೆಂದು ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು ಕನಸಿನಲ್ಲೂ ಎಣಿಸಿರಲಿಕ್ಕಿಲ್ಲ. ಆದರೆ ಇದು ಕಟು ವಾಸ್ತವ.
ಕೇಂದ್ರದ ಬಿಜೆಪಿ ಸರಕಾರಕ್ಕೆ ಈ ದೇಶದ ಮಣ್ಣಿನ ಬದುಕಿನ ಅರಿವು ಸ್ವಲ್ಪವಾದರೂ ಇದ್ದಿದ್ದರೆ ಅದು ಇಂಥ ಧುಡುಂ ನಿರ್ಧಾರಕ್ಕೆ ಬರುತ್ತಿರಲಿಲ್ಲ. ಅಮಾರ್ತ್ಯಸೇನ್ ಹೇಳಿರುವಂತೆ ಇದು, ‘‘ವಿಶ್ವಾಸದ ಆಧಾರದಲ್ಲಿ ನಿಂತಿರುವ ಅರ್ಥ ವ್ಯವಸ್ಥೆಯ ಮೂಲಕ್ಕೆ ನೀಡಿದ ನಿರಂಕುಶ ಏಟು, ನಿರಂಕುಶ ಅಧಿಕಾರದ ನಿರ್ಧಾರ.’’ ಎಷ್ಟು ಕೋಟಿ ಕಪ್ಪುಹಣ ಇದೆ ಎಂಬುದು ಸರಕಾರಕ್ಕೆ ಗೊತ್ತಿತ್ತು. ಅಷ್ಟು ಮೊತ್ತದ ಗರಿಷ್ಠ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದು ಕೊಂಡರೆ ಅಷ್ಟೇ ಮೊತ್ತದ ಹೊಸ ನೋಟುಗಳನ್ನು ಚಲಾವಣೆಗೆ ಬಿಡಬೇಕೆಂಬ ಪರಿಜ್ಞಾನ ಸರಕಾರಕ್ಕಿರಲಿಲ್ಲವೆ? ಹೊಸ ನೋಟುಗಳ ಮುದ್ರಣಕ್ಕೆ ಎಷ್ಟು ಕಾಲ ಹಿಡಿಯುತ್ತದೆ ಎಂಬ ಪರಿವೆ ಸರಕಾರಕ್ಕಿರಲಿಲ್ಲವೆ? ಹೊಸ ನೋಟುಗಳ ವಿನ್ಯಾಸ ಹಳೆಯ ಎಟಿಎಂಗಳಿಗೆ ಹೊಂದಿಕೊಳ್ಳುವಂತಿರಬೇಕು ಎಂಬ ಸಾಮಾನ್ಯ ತಿಳಿವಳಿಕೆಯೂ ನಮ್ಮ ರಿಸರ್ವ್ ಬ್ಯಾಂಕ್ ಪ್ರಭೃತಿಗಳಿಗಿರಲಿಲ್ಲವೆ? ದೇಶೀಯ ಟಂಕಸಾಲೆಗಳಲ್ಲಿ ರಾತ್ರೋರಾತ್ರಿ ಅಷ್ಟು ದೊಡ್ಡ ಮೊತ್ತದ ನೋಟುಗಳ ಮುದ್ರಣ ಅಸಾಧ್ಯ ಎಂಬುದು ತಿಳಿದಿರಲಿಲ್ಲವೆ? ವಿದೇಶಗಳಲ್ಲಿ ನೋಟುಗಳನ್ನು ಮುದ್ರಿಸಿ ತರುವ ಸವಲತ್ತು ಇದೆ ಎಂಬುದು ಗೊತ್ತಿರಲಿಲ್ಲವೆ?
‘ಹಿಂದನರಿಯದದು ಮುಂದನೇನ...’ ಎನ್ನುವುದು ವಚನದ ಒಂದು ಮಾತು. ಆದರೆ ಮೋದಿಯವರ ಸರಕಾರಕ್ಕೆ ಹಿಂದಣ ಹೆಜ್ಜೆ ಹಾಗಿರಲಿ ಇಂದಣ ಹೆಜ್ಜೆಯ ಪರಿಚಯವೂ ಇದ್ದಂತಿಲ್ಲ. ಭುಗಿಲೆದ್ದು ಉರಿಯುತ್ತಿರುವ ವರ್ತಮಾನದ ಬಗ್ಗೆ ಯೋಚಿಸದೆ ಅದು ಭವಿಷ್ಯದ ಬಗ್ಗೆ ಮಾತನಾಡಲಾರಂಭಿಸಿದೆ. ಸುಲಭವಾಗಿ ಮನೆಕಟ್ಟಲು ಬ್ಯಾಂಕ್ ಸಾಲ, ಉದ್ಯೋಗಾವಕಾಶ ಏರಿಕೆ ಹೀಗೆ ಬಿಜೆಪಿ ಸರಕಾರ ಮತ್ತು ಪಕ್ಷದ ವಕ್ತಾರರು ನೋಟು ಅಮಾನ್ಯ ತರಲಿರುವ ಭವ್ಯ ಭವಿಷ್ಯದ ಕಾಮನಬಿಲ್ಲುಗಳ ಬಡಾಯಿ ಕೊಚ್ಚುತಿದ್ದಾರೆ. ಪ್ರಧಾನ ಮಂತ್ರಿಯವರಂತೂ ತಮ್ಮದೇ ಆದ ಸಾಮಾಜಿಕ ಮಾಧ್ಯಮದ ಮೂಲಕ ಸಮೀಕ್ಷೆ ನಡೆಸಿ ಜನ ನೋಟು ಅಮಾನ್ಯದ ಪರವಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಪರಿವಾರದ ‘ಚಿಲಿಪಿಲಿ’(ಟ್ವೀಟ್ಗಳು)ಗಳಾಗಲಿ ಚಂದನ ವಾಹಿನಿಯ ಮುಂದೆ ತಂದುನಿಲ್ಲಿಸಿದವರ ‘ಗಿಳಿಪಾಠ’ವಾಗಲಿ ಯಶಸ್ಸಿನ ಮಾನದಂಡವಾಗದು. ತೊಂದರೆ ತಾಪತ್ರಯಗಳನ್ನು ಹೇಳಿಕೊಳ್ಳಲು ಯಾವುದೇ ವೇದಿಕೆ ಅಥವಾ ಸಾಧನಸಂಪರ್ಕಗಳಿಂದ ವಂಚಿತರಾದ ನಲವತ್ತು ಕೋಟಿ ಅನಕ್ಷರಸ್ಥರು ಮತ್ತು ಇಪ್ಪತ್ತು ಕೋಟಿಗೂ ಹೆಚ್ಚು ಅಸಂಘಟಿತ ಕೂಲಿಕಾರ್ಮಿಕರು ಈ ದೇಶದಲ್ಲಿದ್ದಾರೆ ಎಂಬುದನ್ನು ಮರೆಯವಂತಿಲ್ಲ. ಜನ ಕಪ್ಪುಹಣ/ಭ್ರಷ್ಟಾಚಾರದ ವಿರುದ್ಧವಾಗಿದ್ದಾರೆಯೇ ವಿನಃ ನೋಟು ಅಮಾನ್ಯ ಮತ್ತು ಅದನ್ನು ಜಾರಿಗೆ ತಂದ ವಿವೇಚನಾರಹಿತ ನೀತಿ ಮತ್ತು ಅದಕ್ಷತೆಯನ್ನು ಅನುಮೋದಿಸಿಲ್ಲ ಎಂಬುದು ಅವರ ತಲೆಗೆ ಹೊಳೆದಂತಿಲ್ಲ ಅಥವಾ ಗೂಢಚಾರ ಇಲಾಖೆಯ ವಂದಿಮಾಗಧರು ಅವರಿಗೆ ತಿಳಿಸಿದಂತಿಲ್ಲ. ಮಹಾರಾಷ್ಟ್ರ, ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿನ ಬಿಜೆಪಿ ಜಯವನ್ನು ತಮ್ಮ ನೋಟು ಅಮಾನ್ಯಕ್ಕೆ ದೊರೆತ ವಿಜಯ ಎಂದು ಹೆಮ್ಮೆಯಿಂದ ಬೀಗುವ ಮೋದಿಯವರಿಗೆ ತಮ್ಮದೇ ಆದ ಶ್ರಮ ದುಡಿಮೆಯ ಹಣ ಪಡೆಯಲು ದಿನಗಟ್ಟಲೆ ಬ್ಯಾಂಕು/ ಎಟಿಎಂಗಳೆದುರು ಸಾಲುಗಟ್ಟಿ ನಿಂತು ಹಣ ಸಿಗದೆ ಹೆಣವಾದವರ ಬಗ್ಗೆ ಏನೂ ಅನ್ನಿಸದಿರುವುದು ಎಂಥ ಕ್ರೂರ ವ್ಯಂಗ್ಯ. ಇದಕ್ಕನ್ನುತ್ತಾರೆ ಸಂವೇದಾನಾರಹಿತ ಸರಕಾರ ಎಂದು. ನಿರಂಕುಶ ಅಧಿಕಾರದ ಒಂದು ಅಸಡ್ಢಾಳ ಕ್ರಮದಿಂದಾಗಿ, ತಮ್ಮ ದುಡಿಮೆಯ ಹಣ ಪಡೆಯಲು ಹೋಗಿ ಹೆಣವಾದವರಿಗಾಗಿ ಸರಕಾರದಿಂದ ಒಂದು ಹನಿ ಕಣ್ಣಿರಲ್ಲ! ಇದು ಅಮಾನುಷ ಸರಕಾರ!
ಹೊಸ ನೋಟುಗಳ ಪೂರೈಕೆಯಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಡಿಜಿಟಲೀಕರಣದ ಮೊರೆಹೊಕ್ಕಿದೆ. ಬೆಳಗಾಗುವುದರೊಳಗಾಗಿ ನಗದು ವ್ಯವಹಾರವನ್ನು ನಿಲ್ಲಿಸುವ ಹುಚ್ಚು ಹಂಬಲ. ಬ್ಯಾಂಕಿಂಗ್ ಸೌಲಭ್ಯವನ್ನೇ ಕಾಣದ ಕೋಟಿಗಟ್ಟಲೆ ಹಳ್ಳಿಗಾಡು ಮಂದಿಗೆ ಪ್ಲಾಸ್ಟಿಕ್ ಹಣ ಹೇಗೆ ಕೈಗೆಟಕೀತು? ಹಣದೊಂದಿಗೆ ಜನಕ್ಕೆ ಭಾವನಾತ್ಮಕ ಸಂಬಂಧವಿದೆ. ಇದನ್ನು ಮರೆಯಬಾರದು. ಅವರ ಪಾಲಿಗೆ ಅದು ಧನಲಕ್ಷ್ಮಿ. ನಗದು ಅರ್ಥವ್ಯವಸ್ಥೆಯನ್ನು ಪೂರ್ತಿಯಾಗಿ ನಿಲಿಸುವ ತುಘಲಕ್ ಆಲೋಚನೆ ಸಲ್ಲದು. ಪ್ಲಾಸ್ಟಿಕ್ ಹಣದ ಬಳಕೆಯನ್ನು ಜನರ ಆಯ್ಕೆಗೆ ಬಿಡುವುದು ಒಳಿತು. ಈಗಾಗಲೇ ಬಹುಪಾಲು ನಗರವಾಸಿ ಮಂದಿ ದೊಡ್ಡಮೊತ್ತದ ಕೊಡುಕೊಳ್ಳುವಿಕೆ ವ್ಯವಹಾರಗಳನ್ನು ಆನ್ಲೈನ್ ಮೂಲಕವೇ ನಡೆಸುತ್ತಿದ್ದಾರೆ. ಹಾಲು, ಹಣ್ಣು, ತರಕಾರಿಯಂಥ ಸಣ್ಣಪುಟ್ಟ ಬಾಬುಗಳಿಗಾದರೂ ನಗದು ಬೇಕಾಗುತ್ತದೆ. ಅಲ್ಲಾದರೂ ಒಂದು ಆಪ್ತ ಸಂಬಂಧ ಉಳಿಸಲು ಸಾಧ್ಯವಾದೀತು.
500ನ ಮತ್ತು 100 ಮೌಲ್ಯದ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡಿದ್ದರ ಮುಖ್ಯ ಉದ್ದೇಶಗಳಲ್ಲಿ ಕಪ್ಪುಹಣ ನಿರ್ನಾಮದ ಜೊತೆಗೆ ಭ್ರಷ್ಟಾಚಾರ ನಿರ್ಮೂಲನ ಮತ್ತು ಭಯೋತ್ಪಾದಕರಿಗೆ ಹಣ ಪೂರೈಕೆ ನಿಗ್ರಹಿಸುವುದೂ ಆಗಿದೆ ಎಂಬುದು ಸರಕಾರದ ಅಂಬೋಣ. ಇದು ಎಷ್ಟರಮಟ್ಟಿಗೆ ಯಶಸ್ವಿಯಾದೀತು? ಒಂದು ಚಿಕ್ಕ ಉದಾಹರಣೆ ಗಮನಿಸೋಣ. ಹಳೇ ನೊಟುಗಳು ಹೋಗಿ ಅವುಗಳ ಜಾಗಕ್ಕೆ 500-2000 ರೂ. ಮೌಲ್ಯದ ಹೊಸ ನೋಟುಗಳು ಬಂದು ಹದಿನೈದು ಇಪ್ಪತ್ತು ದಿನಗಳಾಗಿವೆಯಷ್ಟೆ. ಬೆಂಗಳೂರಿನ ಸರಕಾರಿ ಅಧಿಕಾರಿ ಮತ್ತು ಗುತ್ತಿಗೆದಾರರೊಬ್ಬರ ಮನೆಯಲ್ಲಿ ಒಂದು ಕೋಟಿಗೂ ಹೆಚ್ಚು ಮೊತ್ತದ 2,000 ರೂ. ಮೌಲ್ಯದ ಹೊಸ ನೋಟುಗಳು ಪತ್ತೆಯಾಗಿವೆ. ಚಿಕ್ಕಮಗಳೂರಿನ ಸಮೀಪ 75ಲಕ್ಷ ರೂ. ಮೌಲ್ಯದ ಹೊಸ ನೋಟುಗಳ ಕಳ್ಳಸಾಗಾಣೆೆಯನ್ನು ಹಿಡಿಯಲಾಗಿದೆ. ಹಾಗೆಯೇ ಲಷ್ಕರೆ ತೊಯ್ಬೆ ಭಯೋತ್ಪಾದಕರ ಬಳಿಯೂ 2000 ರೂ. ಹೊಸನೋಟುಗಳು ಸಿಕ್ಕಿವೆ. ತಮಿಳುನಾಡಿನಿಂದಲೂ ಇಂಥ ವರದಿಗಳು ಬಂದಿವೆ. ಹೊಸ ನೋಟುಗಳು ಇಷ್ಟು ಬೇಗ ಅಕ್ರಮಮಾರ್ಗ ಹಿಡಿದಿದ್ದಾದರೂ ಹೇಗೆ? ನೋಟು ಅಮಾನ್ಯ ವಿಚ್ಛಿದ್ರಕಾರಿ. ಅದರಿಂದ ಜನರ ನಡವಳಿಕೆಯನ್ನು ಬದಲಾಯಿಸಿವುದು ಸಾಧ್ಯವಿಲ್ಲ ಎಂದಿರುವ ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಪಾಲ್ ಕ್ರಗ್ಮನ್ ಅವರ ಮಾತುಗಳಿಗೆ ಇದಕ್ಕಿಂತ ಉತ್ತಮವಾದ ಉದಾಹರಣೆ ಬೇಕೆ?
ಭ್ರಷ್ಟಾಚಾರ ನಿರ್ಮೂಲನೆಗೆ ತಮ್ಮ ಸರಕಾರ ಕಟಿಬದ್ಧವಾಗಿದೆ ಎಂದು ಸಮಯ ಸಿಕ್ಕಾಗಲೆಲ್ಲ ನರೇಂದ್ರ ಮೋದಿಯವರು ಮತ್ತು ಅವರ ಸಂಪುಟದ ಸದಸ್ಯರು ಹೇಳುತ್ತಲೇ ಇರುತ್ತಾರೆ. ಹೀಗೆ ಸಂಕಲ್ಪಮಾಡಿರುವ ಸರಕಾರಕ್ಕೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕಪಾಲರ ನೇಮಕ ಏಕೆ ಇನ್ನೂ ಸಾಧ್ಯವಾಗಿಲ್ಲ? ಲೋಕಪಾಲ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಪಡೆದು 2013ರಲ್ಲಿ ಶಾಸನವಾಯಿತು. ಇನ್ನೂ ಲೋಕಪಾಲರ ನೇಮಕವಾಗಿಲ್ಲ. ಲೋಕಪಾಲರ ನೇಮಕದಲ್ಲಿ ಆಗಿರುವ ವಿಳಂಬವನ್ನು ಖಂಡಿಸಿರುವ ಸುಪ್ರೀಂ ಕೋರ್ಟ್ ಭ್ರಷ್ಟಾಚಾರ ನಿರ್ಮೂಲನೆ ಕುರಿತ ಸರಕಾರದ ಬದ್ಧತೆಯನ್ನೇ ಪ್ರಶ್ನಿಸಿದೆ. ಲೋಕಪಾಲರ ನೇಮಕಮಾಡುವ ಸಮಿತಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಸದಸ್ಯರಾಗಿರಬೇಕೆಂದು ಶಾಸನ ಹೇಳುತ್ತದೆ. ಹಾಲಿ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರು ಇಲ್ಲದಿರುವುದರಿಂದ ಶಾಸನಕ್ಕೆ ತಿದ್ದುಪಡಿ ಮಾಡಬೇಕಾಗಿದೆ ಎಂಬ ವಾದವನ್ನು ನ್ಯಾಯಾಲಯ ಪುರಸ್ಕರಿಸಿಲ್ಲ. ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಸನ್ನೇ ಸಭಾಧ್ಯಕ್ಷರು ತಮ್ಮ ವಿವೇಚನಾ ಅಧಿಕಾರ ಬಳಸಿ ವಿರೋಧ ಪಕ್ಷದ ನಾಯಕರೆಂದು ಮಾನ್ಯಮಾಡಬಹುದು. ಅದನ್ನೂ ಮಾಡಿಲ್ಲ ಅಥವಾ ಶಾಸನಕ್ಕೆ ತಿದ್ದುಪಡಿಯನ್ನೂ ಮಾಡಿಲ್ಲ. ಹಿಗಾಗಿ ಲೋಕಪಾಲರ ನೇಮಕ ನೆನಗುದಿಯಲ್ಲಿ ಬಿದ್ದಿದೆ. ಇದು ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸರಕಾರ ಎಷ್ಟು ಪ್ರಾಮಾಣಿಕವಾಗಿದೆ ಎಂಬುದಕ್ಕೆ ಒಂದು ಸಣ್ಣ ನಿದರ್ಶನವಷ್ಟೆ. ಮೋದಿಯವರು ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗ ಅಲ್ಲಿ ಲೋಕಾಯುಕ್ತರ ನೇಮಕ ಸರಕಾರ ಮತ್ತು ರಾಜ್ಯಪಾಲರ ನಡುವಣ ವಿವಾದದ ವಿಷಯವಾಗಿತ್ತು. ಲೋಕಪಾಲ/ಲೋಕಾಯುಕ್ತರುಗಳ ಬಗ್ಗೆ ಮೋದಿಯವರಿಗೇಕೆ ಜಿಗುಪ್ಸೆಯೋ ತಿಳಿಯದು. ಇಂಥದೇ ದಿವ್ಯ ತಿರಸ್ಕಾರವನ್ನು ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆಯೂ ನಾವು ಕಾಣುತ್ತಿದ್ದೇವೆ. ಸಂಸತ್ ಸದಸ್ಯರು ಸದನದಲ್ಲಿ ಗಂಭೀರ ಚರ್ಚೆಯಲ್ಲಿ ತೊಡಗುವುದಕ್ಕಿಂತ ಬಾವಿಗೆ ಬಿದ್ದು ಹುಯಿಲೆಬ್ಬಿಸುವದರಲ್ಲೇ ಹೆಚ್ಚು ಉತ್ಸುಕರಿರುವಂತೆ ತೋರುತ್ತದೆ. ಇದರಲ್ಲಿ ಪಕ್ಷಭೇದವಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಹೀಗೇ ಮಾಡುತ್ತಿತ್ತು. ಈಗ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಈ ಸಲ ಅಧಿವೇಶನ ಶುರುವಾದಾಗಿನಿಂದಲೂ ವಿರೋಧ ಪಕ್ಷಗಳ ಸದಸ್ಯರುಗಳು ಸಂಸತ್ತಿನ ಎರಡೂ ಸದನಗಳಲ್ಲಿ ಪ್ರಧಾನಿ ಮೋದಿಯವರ ಉಪಸ್ಥಿತಿಗೆ ಆಗ್ರಹಿಸಿ ಗದ್ದಲಗಲಾಟೆ ಮಾಡುತ್ತಿದ್ದಾರೆ. ಇದರಿಂದಾಗಿ ಸದನಗಳಲ್ಲಿ ಕಲಾಪಗಳೇ ನಡೆಯುತ್ತಿಲ್ಲ. ಕಳೆದ ಅಧಿವೇಶನದಲ್ಲೂ ಮೋದಿಯವರ ಉತ್ತರಕ್ಕಾಗಿ ಆಗ್ರಹಿಸಿ ಹೀಗೆಯೇ ಕಲಾಪಕ್ಕೆ ತಡೆಯೊಡ್ಡಿದ್ದರು. ಮೋದಿಯವರು ಹೊರಗಡೆ ಮಾತನಾಡುತ್ತಾರೆ, ಸದನದಲ್ಲಿ ಮಾತನಾಡುವುದಿಲ್ಲ. ಸಂಸತ್ ಭವನಕ್ಕೆ ಬರುತ್ತಾರೆ, ಸದನಗಳಿಗೆ ಬರುವುದಿಲ್ಲ ಎಂಬುದು ವಿರೋಧ ಪಕ್ಷಗಳ ದೂರು. ಇದರಲ್ಲಿ ಹುರುಳಿಲ್ಲದೇ ಇಲ್ಲ. ಮೋದಿಯವರಿಗೆ ಚುನಾಯಿತ ಜನಪ್ರತಿನಿಧಿಗಳಿರುವ ಲೋಕಸಭೆ ಬಗ್ಗೆಯೂ ಜುಗುಪ್ಸೆಯೇನೋ! ಒಟ್ಟಾರೆಯಾಗಿ, ಸದಸ್ಯರಿರಲಿ ಪ್ರಧಾನಿಗಳಿರಲಿ, ಇಂಥ ಅನಾದರಣೀಯ ಪ್ರವೃತ್ತಿ ಸಂಸದೀಯ ಪ್ರಜಾಸತ್ತೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.