varthabharthi


Social Media

ಭಾಷಿಕ ಸಾಮರಸ್ಯದ ಸಮ್ಮೇಳನಕ್ಕೆ ಸಾಕ್ಷಿಯಾಯಿತು ರಾಯಚೂರು

ಕನ್ನಡ ಹಬ್ಬವನ್ನು ಅಚ್ಚುಕಟ್ಟಾಗಿ ನಡೆಸಲು ಜೊತೆಗೂಡಿದ ಕನ್ನಡೇತರ ಕನ್ನಡಿಗರು !

ವಾರ್ತಾ ಭಾರತಿ : 6 Dec, 2016
ಕುಮಾರ್ ಬುರಡಿಕಟ್ಟಿ

ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್

ರಾಯಚೂರು ಸಾಹಿತ್ಯ ಸಮ್ಮೇಳನ. ಡಿಸೆಂಬರ್ 2, 3 ಮತ್ತು 4ರಂದು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಈ ಕನ್ನಡದ ಹಬ್ಬ ಹಲವು ಕಾರಣಗಳಿಂದ ನನಗೆ ವಿಶಿಷ್ಟವಾಗಿ ಕಂಡಿತು.

ಮೊದಲನೆಯದಾಗಿ, ಇದರ ಅಚ್ಚುಕಟ್ಟಾದ ನಿರ್ವಹಣೆ. ಪ್ರತಿದಿನ ಸುಮಾರು 7000 ಪ್ರತಿನಿಧಿಗಳು ಮತ್ತು 30,000 ಇತರೆ ಕನ್ನಡಾಭಿಮಾನಿಗಳು ಭಾಗವಹಿಸಬಹುದೆಂದು ಸ್ವಾಗತ ಸಮಿಯಿತಿಯು ಅಂದಾಜಿಸಿತ್ತು. ಅಂತೆಯೇ ಊಟೋಪಚಾರದ ವ್ಯವಸ್ಥೆಯನ್ನು ಮಾಡಿಕೊಂಡಿತ್ತು. ಆದರೆ, ಅದರ ಅಂದಾಜಿನ ಗೆರೆಗಳನ್ನು ದಾಟಿ ಮೊದಲನೆಯ ದಿನ ಒಂದೂ ಕಾಲು ಲಕ್ಷ ಜನಸಾಗರ ಹರಿದು ಬಂತು. ಕೊನೆಯ ಎರಡು ದಿನ ಸುಮಾರು 80,000 ದಿಂದ 1,00,000 ದಷ್ಟು ಜನ ಇದರಲ್ಲಿ ಭಾಗವಹಿಸಿದರು. ಊಟೋಪಚಾರಗಳು ಹದಗೆಟ್ಟು ಇಡೀ ಸಮ್ಮೇಳನವೇ ಅವ್ಯವಸ್ಥೆಯ ಆಗರವಾಗಿ ಹೋಗುತ್ತದೆ ಎಂದೇ ನಾನು ಎಣಿಸಿದ್ದೆ. ಆದರೆ ಹಾಗಾಗಲಿಲ್ಲ, ಸಂಘಟಕರು ಹರಸಾಹಸ ಪಟ್ಟು ಬಂದವರಿಗೆಲ್ಲಾ ಊಟ ಹಾಕಿ ನಮ್ಮನ್ನು ವಿಸ್ಮಯಗೊಳಿಸಿದರು. ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆದವು. ಅದನ್ನೆಲ್ಲಾ ವರದಿ ಮಾಡೋಕೆ ಬೇರೆಯೇ ಜನ ಇದ್ದಾರೆ ಅಂತ ನಾವು ಅದರ ಕಡೆ ಗಮನ ಕೊಡಲಿಲ್ಲ. ನಮ್ಮ ಮನೆಗೇ ನಾಲ್ಕು ಜನ ಅನಿರೀಕ್ಷಿತವಾಗಿ ಬಂದು ಬಿಟ್ಟರೆ ಅವರಿಗೆ ಊಟ, ತಂಗಲು ವ್ಯವಸ್ಥೆ ಮಾಡುವುದಕ್ಕೆ ನಮಗೇ ಕಷ್ಟವಾಗುತ್ತದೆ. ಅಂತಾಹದ್ದರಲ್ಲಿ ನಿರೀಕ್ಷಿಸಿದ್ದರ ಮೂರು ಪಟ್ಟು ಜನ ದಿಢೀರನೆ ಬಂದರೆ ಸ್ವಲ್ಪ ಸಮಸ್ಯೆಗಳು ಆಗೇ ಆಗುತ್ತವೆ. ಆದರೂ ಅದನ್ನು ನಿಭಾಯಿಸಿದ ಸಂಘಟಕರಿಗೆ ಅಭಿನಂದನೆ ಸಲ್ಲಿಸಲೇಬೇಕು.

ಎರಡನೆಯದಾಗಿ ನನ್ನನ್ನು ಗಾಢವಾಗಿ ಆಕರ್ಷಿಸಿದ್ದು ಕನ್ನಡದ ಈ ಹಬ್ಬದ ಸಂಘಟನೆಯಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದ ಕನ್ನಡೇತರ ಜನ. ರಾಜ್ಯದ ಯಾವುದೇ ಭಾಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದರೂ ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಂಘಟನಾ ಸಮಿತಿಯ ಸಂಚಾಲಕರಾಗಿರುತ್ತಾರೆ. ಜೊತೆಗೆ ಅದರ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಕೋಶಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಇಲ್ಲಿಯೂ ಸಹ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದರು. ಅವರು ಮೂಲತಃ ತಮಿಳರು. ಆದರೆ ಅವರು ಸಂಘಟನಾ ಸಮಿತಿಯನ್ನು ಮುನ್ನಡೆಸಿದ ರೀತಿ, ಹಗಲು-ರಾತ್ರಿಯೆನ್ನದೇ 33 ಉಪಸಮಿತಿಗಳೊಂದಿಗೆ ಸಮನ್ವಯ ಸಾಧಿಸುತ್ತಾ ದುಡಿದ ಬಗೆ, ಯಾವ್ಯಾವ ಪೆಂಡಾಲ್ ಎಲ್ಲಿರಬೇಕು, ಊಟದ ವ್ಯವಸ್ಥೆ ಹೇಗಿರಬೇಕು, ಪುಸ್ತಕ ಮಳಿಗೆಗಳು ಯಾವ ರೀತಿಯಲ್ಲಿರಬೇಕು, ಮಾಧ್ಯಮ ಕೇಂದ್ರ ಮುಖ್ಯ ವೇದಿಕೆಯಿಂದ ಎಷ್ಟು ದೂರ ಇರಬೇಕು, ಅಲ್ಲಿ ಏನೇನಿರಬೇಕು, ಅವರಿಗೆ ಊಟದ ವ್ಯವಸ್ಥೆ ಎಲ್ಲಿರಬೇಕು ಎಂಬಿತ್ಯಾದಿ ಸಣ್ಣ ಸಣ್ಣ ವಿಷಯಗಳನ್ನೂ ಬಹಳ ಖುದ್ದಾಗಿ ಮುತುವರ್ಜಿ ವಹಿಸಿದ ರೂಪಿದರು. ಮಾಧ್ಯಮ ಕೇಂದ್ರದಲ್ಲಿ ಇಂಟರ್ನೆಟ್ ಸಂಪರ್ಕ ಸಮಸ್ಯೆ ಎದುರಾಗಿದೆ ಎಂದು ಗೊತ್ತಾದ ಕೂಡಲೂ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ತಾಂತ್ರಿಕ ತಂಡ ಅಲ್ಲೇ ಬೀಡುಬಿಟ್ಟು ಬಗೆಹರಿಸುವಂತೆ ಸೂಚಿಸಿದರು (ಆದರೂ ಸಮಸ್ಯೆ ಮುಂದುವರಿಯಿತು ಎಂಬುದು ಬೇರೆ ವಿಷಯ). ತಮಿಳು ಮೂಲದ ಜಿಲ್ಲಾಧಿಕಾರಿಯೊಬ್ಬ ಕನ್ನಡದ ಹಬ್ಬಕ್ಕೆ ಇಷ್ಟೊಂದು passionate ಆಗಿ ತೊಡಗಿಕೊಂಡದ್ದು ನಿಜಕ್ಕೂ ನನಗೆ ಅವರ ಮೇಲಿನ ಅಭಿಮಾನವನ್ನು ಹೆಚ್ಚಿಸಿತು. 
ಇನ್ನು 2000 ಪೊಲೀಸ್ ಪಡೆಯ ನೇತೃತ್ವ ವಹಿಸಿ ಅನಿರೀಕ್ಷಿತವಾಗಿ ಹರಿದು ಬಂದ ಜನಸ್ತೋಮವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್. ಮೂಲತಃ ಹಿಂದಿ ಭಾಷಿಕರಾದ ರಾಥೋಡ್ ಉತ್ತರ ಪ್ರದೇಶದವರು. ವಿಐಪಿಗಳಿಗೆ ರಕ್ಷಣೆ, ಗಣ್ಯರಿಗೆ ರಕ್ಷಣೆ, ಜನಸ್ತೋಮದ ನಿಯಂತ್ರಣ, ಟ್ರಾಫಿಕ್ ನಿಯಂತ್ರಣ, ಕಾನೂನು ಸುವ್ಯವಸ್ಥೆಯ ಕಾಪಾಡುವಿಕೆ – ಅದ್ಭುತವಾಗಿ ಮಾಡಿದರು.

ಅಂತೆಯೇ, ಹಲವು ಉಪಸಮಿತಿಗಳ ಕಾರ್ಯನಿರ್ವಹಣೆಯ ಉಸ್ತುವಾರಿ ಹೊತ್ತುಕೊಂಡಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಕೂರ್ಮರಾವ್ ತೆಲುಗಿನವರು. ಸಮ್ಮೇಳನ ಸಂಘಟನೆಗಾಗಿ ಮುಖ್ಯವೇದಿಕೆ, ಪುಸ್ತಕ ಮಳಿಗೆಗಳು, ಊಟೋಪಚಾರದ ಪೆಂಡಾಲುಗಳು ಮುಂತಾದ ತಾತ್ಕಾಲಿಕ ಸಂರಚನೆಗಳನ್ನು ಕಟ್ಟಿಕೊಟ್ಟವರು ತಮಿಳರು. ಊಟೋಪಚಾರದ ಗುತ್ತಿಗೆ ಪಡೆದು ಅಚ್ಚುಕಟ್ಟಾಗಿ ನಿರ್ವಹಿಸಿದವರು ಗುಜರಾತಿಗಳು. ಊಟ ಬಡಿಸಿದ್ದೂ ಹಿಂದಿ ಮಾತಾಡುತ್ತಿದ್ದ ಹುಡುಗರು. ಸಮ್ಮೇಳನದ ಸುಗಮ ನಿರ್ವಹಣೆಗಾಗಿ ನಿಯೋಜಿಸಲಾಗಿದ್ದ 3000 ಸ್ವಯಂ ಸೇವಕರಲ್ಲಿ ಬಹಳಷ್ಟು ಜನ ಬೇರೆ ರಾಜ್ಯಗಳಿಂದ ಬಂದಿದ್ದ ವಿದ್ಯಾರ್ಥಿಗಳೇ ಆಗಿದ್ದರು. 
ಸಮ್ಮೇಳನಾಧ್ಯಕ್ಷ ಬರಗೂರು ರಾಮಚಂದ್ರಪ್ಪನವರ ಮೆರವಣಿಗೆಯ ಸಮಯದಲ್ಲಿ ಆರು ಕಿ.ಮೀ. ಉದ್ದಕ್ಕೂ ಭಾಗವಹಿಸಿದ ಕಲಾವಿದರಿಗೆ, ಸಾಮಾನ್ಯ ಜನರಿಗೆ ಉಚಿತವಾಗಿ ನೀರು, ಮಜ್ಜಿಗೆ, ತಂಪು ಪಾನಿಯ ವಿತರಿಸಿದವರೂ ಹಿಂದಿ ಮಾತಾಡುವ ಹುಡುಗರು. ಅದನ್ನು ಪ್ರಾಯೋಜಿಸಿದವರು ರಾಜಸ್ತಾನ್ ಮೂಲದ ಮಾರ್ವಾಡಿಗಳು.

500 ಮತ್ತು 1000 ರೂಪಾಯಿ ನೋಟುಗಳನ್ನು ಹಿಂಪಡೆದದ್ದರಿಂದ ಸಮ್ಮೇಳನಕ್ಕೆ ಜನರಿಂದ, ಉದ್ಯಮಿಗಳಿಂದ ಹರಿದು ಬರಲಿದ್ದ ದೇಣಿಗೆಯೂ ಬತ್ತಿಹೋಗಿತ್ತು. ಆ ಸಮಯದಲ್ಲಿ ಜಿಲ್ಲಾಧಿಕಾರಿ ಸೆಂಥಿಲ್ ಸಮಯ ಪ್ರಜ್ಞೆ ಮೆರೆದು ದೇಣಿಗೆಯನ್ನು ಹಣದ ರೂಪದಲ್ಲಿ ಸಂಗ್ರಹಿಸುವುದರ ಬದಲಿಗೆ ವಸ್ತು ಮತ್ತು ಸೇವೆಗಳ ರೂಪದಲ್ಲಿ ಸಂಗ್ರಹಿಸಲು ಮುಂದಾದರು. ಪರಿಣಾಮವಾಗಿ ಹೊಟೆಲ್ ಮಾಲಿಕರಿಗೆ ಉಚಿತವಾಗಿ ಹೊಟೆಲ್ ರೂಮುಗಳನ್ನು ನೀಡಲು ಮನವೊಲಿಸಿ ಒಪ್ಪಿದರು. ಅಕ್ಕಿಗಿರಣಿ ಮಾಲಿಕರಿಗೆ ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಮಾಡುವುದಕ್ಕೆ ಒಪ್ಪಿಸಿದರು. ಹೀಗೆ ವಿವಿಧ ರೂಪದಲ್ಲಿ ಆರ್ಥಿಕವಾಗಿ ಸಹಕರಿಸಿದವರಲ್ಲಿ ಅನೇಕ ಮಂದಿ ಕನ್ನಡೇತರರಾಗಿದ್ದಾರೆ. ಉದಾಹರಣೆಗೆ, ತೆಲಂಗಾಣದ ನಾರಾಯಣಪೇಟೆಯ ಎಮ್ಮೆಲ್ಲೆ ಎಸ್. ಆರ್. ರೆಡ್ಡಿ, ರಾಜಸ್ತಾನ ಮೂಲದ ಉದ್ಯಮಿ ವಿಷ್ಣುಕಾಂತ ಬೂದಡಿ, ತೆಲುಗು ಮೂಲದ ಎ.ಪಾಪಾರೆಡ್ಡಿ ಇತ್ಯಾದಿ. ಈ ದೃಷ್ಟಿಯಲ್ಲಿ ನೋಡಿದಾಗ ಈ ಸಮ್ಮೇಳನ ಭಾಷಿಕ ಸಾಮರಸ್ಯದ ಸಮ್ಮೇಳನವಾಗಿ ನನಗೆ ಕಂಡಿತು.

ಅಂದಹಾಗೆ, ನಾನು ಭಾಗವಹಿಸಿದ, ವರದಿ ಮಾಡಿದ ಮೊದಲ ಸಾಹಿತ್ಯ ಸಮ್ಮೇಳನವಿದು. ಸಮ್ಮೆಳನ ಮುಗಿದ ಮೇಲೆ ಬರೆದ ಒಂದು ವರದಿ ಮತ್ತು ಜಿಲ್ಲಾಧಿಕಾರಿ ಸೆಂಥಿಲ್ ಫೋಟೋ ಇಲ್ಲಿವೆ ನೋಡಿ...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)