ಬೆಳಗಾವಿ: ಸಂಕಷ್ಟದಲ್ಲೂ ಕಂಬಳಿ ನೆಯ್ಗೆ ವೃತ್ತಿ ಅಬಾಧಿತ
ಮನೆ ಮನೆಗಳಿಗೂ ದಾಂಗುಡಿ ಇಟ್ಟಿರುವ ರಂಗುರಂಗಿನ ಶಾಲುಗಳು, ರಗ್ಗು, ಚಾದರಗಳಿಗೆ ಮಾರು ಹೋಗಿರುವ ಜನರಿಂದ ಸಾಂಪ್ರದಾಯಿಕ ಬೆಚ್ಚನೆಯ ಹೊದಿಕೆ ಕಂಬಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದಾಗಿ ಕಂಬಳಿ ನೆಯ್ಗೆಯನ್ನೇ ನೆಚ್ಚಿಕೊಂಡಿರುವ ಕುಶಲಕರ್ಮಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ.
ಆದರೂ, ತಲೆತಲಾಂತರದಿಂದ ಬಂದ ಕುಲಕಸಬು ಕಂಬಳಿ ತಯಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡು ನೂರಾರು ಕುಟುಂಬಗಳು ಉಪ ಜೀವನ ನಡೆಸುತ್ತಿವೆ. ಈ ನೆಯ್ಗೆ ಇತ್ತೀಚೆಗೆ ಕಡಿಮೆ ಆಗುತ್ತಿದ್ದರೂ ಒಂದಷ್ಟು ಕುಟುಂಬಗಳು ಈ ನೆಯ್ಗೆಯನ್ನೇ ನಂಬಿಕೊಂಡಿವೆ.
ನೇಯುವ ಕರಿ ಉಣ್ಣೆ ಕಂಬಳಿ, ಬಿಳಿ ಉಣ್ಣೆ ಕಂಬಳಿ, ಪಟ್ಟಿಪಟ್ಟಿ ಕಂಬಳಿ, ಹೈಗಪಟ್ಟಿ ಕಂಬಳಿ, ಮಗ್ಗಿ ಕಂಬಳಿ, ಕರಿಬಿಳಿ ಪಟ್ಟಿ ಕಂಬಳಿ ಮೊದಲಾದ ವಿಶಿಷ್ಟ ನಮೂನೆಗಳ ಕಂಬಳಿಗಳು ಪ್ರಸಿದ್ಧವಾಗಿವೆ. ಆರ್ಡರ್ ಪಡೆದು ನೇಯುವ ಕಂಬಳಿಗಳು ಇನ್ನೂ ಗುಣಮಟ್ಟದ್ದಾಗಿರುತ್ತವೆ.
‘‘ಸುಮಾರು 4ರಿಂದ 5 ಕಿ.ಗ್ರಾಂ. ಉಣ್ಣೆ ಬಳಸಿ ತಯಾರಿಸುವ 7 ಮೊಳ ಉದ್ದ ಮತ್ತು ಎರಡುವರೆ ಮೊಳ ಅಗಲದ ಸಣ್ಣ ನೂಲಿನ ಕಂಬಳಿ ತಯಾರಿಕೆಗೆ ಎರಡರಿಂದ ಮೂರು ದಿನ ಬೇಕಾಗುತ್ತದೆ. ಇದನ್ನು ತಯಾರಿಸಲು ಉಣ್ಣೆ ನೂಲುವುದು, ಹುಣಸೆ ಬೀಜ, ನೆಯ್ಗೆ ಕೂಲಿಯನ್ನು ಸೇರಿಸಿದರೆ ಕನಿಷ್ಠ ರೂ. 2,500ರಿಂದ 2,800ರವರೆಗೆ ಖರ್ಚಾಗುತ್ತದೆ. ಅದನ್ನು ಮಾರುಕಟ್ಟೆಯಲ್ಲಿ ಕೇವಲ ರೂ. 1,600ರಿಂದ 1,800ರವರೆಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಕಂಬಳಿ ನೆಯ್ಗೆ ಕೂಲಿಯೂ ನೇಕಾರರಿಗೆ ಸಿಗುವುದಿಲ್ಲ. ಆದರೂ, ಹಿರಿಯರಿಂದ ಬಳುವಳಿಯಾಗಿ ಬಂದಿರುವ ಈ ಕಲೆ, ವೃತ್ತಿಕೌಶಲವನ್ನು ಕಡೆಗಣಿಸಬಾರದು ಎಂಬ ಉದ್ದೇಶದಿಂದ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’’ ಎಂದು ನೇಕಾರ ಬಾಳಪ್ಪ ಭರಮಪ್ಪಜಂಗನ್ನವರ ಎಂಬವರು ಅಳಲು ತೋಡಿಕೊಳ್ಳುತ್ತಾರೆ.
‘ಬಲ್ವಾಂಗ್ (ತಿಳಿದವ) ಕಂಬಳಿ-ಅರೆಯದವ (ತಿಳಿಯದವ) ಮುಂಬಳಿ’ ಎಂಬ ನಾಣ್ಣುಡಿಯಂತೆ ಕಂಬಳಿ ತಯಾರಿಕೆ ವೃತ್ತಿ ಕಷ್ಟಕರವಾಗಿದೆ. ಅಂತಹ ವಿಶಿಷ್ಟ ನೆಯ್ಗೆ ಕಲೆ ಹಾಲುಮತ ಕುಟುಂಬಗಳಿಗೆ ಕರಗತವಾಗಿದೆ. ಆದರೆ, ಅವರ ಕಲೆಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಅವರು ಮಾರುಕಟ್ಟೆಯೊಂದಿಗೆ ನೇರ ಸಂಪರ್ಕ ಹೊಂದಿಲ್ಲ. ತಾವು ತಯಾರಿಸಿದ ಕಂಬಳಿಯನ್ನು ಸುತ್ತಮುತ್ತಲಿನ ಹಳ್ಳಿ-ಪಟ್ಟಣಗಳಲ್ಲಿನ ಸಂತೆ, ಜಾತ್ರೆ, ಉತ್ಸವಗಳಲ್ಲಿ ಅಥವಾ ಊರೂರು ಸುತ್ತಾಡಿ ಮಾರಾಟ ಮಾಡುತ್ತಾರೆ. ಕೆಲವೊಮ್ಮೆ ವಿವಿಧೆಡೆಯ ವ್ಯಾಪಾರಸ್ಥರು ಇವರಿಂದ ಸಗಟು ದರದಲ್ಲಿ ಕಂಬಳಿ ಖರೀದಿಸುತ್ತಾರೆ. ಸರಕಾರ ಇಂಥ ಕಂಬಳಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ತಮಗೆ ನೇರ ಆದಾಯ ದೊರಕುವುದರಿಂದ ಆರ್ಥಿಕ ಪುನಶ್ಚೇತನ ನೀಡಿದಂತಾಗುತ್ತದೆ ಎಂಬುದು ಕಂಬಳಿ ನೇಕಾರರ ಆಗ್ರಹವಾಗಿದೆ.
‘‘ಕರಗಾಂವ ಡ್ರೈ ಏರಿಯಾ ಆಗೇದರೀ, ಮಳಿ ಸರಿಯಾಗಿ ಬೀಳೋದಿಲ್, ಬೆಳಿನೂ ಚೆನ್ನಾಗಿ ಬರೋದಿಲ್ಲ. ಇಲ್ಲಿ ದುಡಿಲಾಕ್ ಕೆಲ್ಸಾನೂ ಸಿಗೋದಿಲ್ರೀ, ಹೀಂಗಾಗಿ ಕಂಬಳಿ ನೇಯ್ಗಿ ಕೆಲ್ಸಾನ ನಮ್ಮ್ ಕುಟುಂಬಗೋಳಿಗಿ ಆಧಾರ್ ಆಗೇದರೀ, ಸಂತೀಗಿ ರೊಕ್ಕಾ ಕಡಿಮಿ ಬಿದ್ದಾಗ್, ಒಂದ್ ಕಂಬಳಿ ನೇಯ್ದು ಅದನ್ ಮಾರಿ ಉಪಜೀವನಾ ನಡಸ್ತೇವರೀ, ಸಂಕಷ್ಟದಲ್ಲಿರುವ ನಮಗ್ ಸರಕಾರ ಏನಾದರೂ ಕಂಬಳಿ ತಯಾರಿಕೆ ಸಂಬಂಧ್ ಆರ್ಥಿಕ ಸಹಾಯ, ಮನೆ, ವಯೋವೃದ್ಧ ಕಂಬಳಿ ನೇಕಾರರಿಗೆ ಪೆನ್ಷನ್ದಂತಹ ಸವಲತ್ ಕೊಡಬೇಕು’’ ಎಂಬುದು ಶಿವಪುತ್ರ ರಾಮಲಿಂಗ ಹುಚ್ಚಬೀರಗೋಳ ಅವರು ಬೇಡಿಕೊಳ್ಳುತ್ತಾರೆ.
ಕಂಬಳಿಯನ್ನು ಮಂಗಳ ಕಾರ್ಯಗಳಿಗೆ ಬಳಸುವ ಶುಭಸೂಚಕ ವಸ್ತ್ರ ವೆಂದು ಪರಿಗಣಿಸಲಾಗುತ್ತದೆ. ಆ ಕಾರಣಕ್ಕಾಗಿಯೇ ಇಂದೂ ಬಹುತೇಕ ಮನೆಗಳಲ್ಲಿ ಒಂದಾದರೂ ಕಂಬಳಿಯನ್ನು ಕಾಣುತ್ತೇವೆ. ಚುಮುಚುಮು ಚಳಿಯಲ್ಲಿ ಬೆಚ್ಚನೆಯ ಅನುಭವ ನೀಡುವ ಕಂಬಳಿ ಹೊದ್ದವನೇ ಬಲ್ಲ. ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಸೂಸುವ ಕಂಬಳಿ ನೇಕಾರಿಕೆ ವೃತ್ತಿ ಇಂದು ನೇಪಥ್ಯಕ್ಕೆ ಸರಿಯುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಮುದಾಯ ತಮಗೆ ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂಬುದು ಕಂಬಳಿ ನೇಕಾರರ ಆಶಯ.