ರೈಲಿನ ಹಳಿಯಿಂದ ಕೈಸೇರಿದ ಮೊಬೈಲ್
ಒಂದು ಕ್ಷಣಿಕ ದುರಂತ ಮತ್ತು ನಂಬಲಸಾಧ್ಯ ಸುಖಾಂತ್ಯ
ತಾಳಗುಪ್ಪದಿಂದ ಬೆಂಗಳೂರಿನತ್ತ ನಮ್ಮ ರಾತ್ರಿ ಟ್ರೇನ್ ಹೊರಟು ಹತ್ತು ನಿಮಿಷ ಆಗಿತ್ತಷ್ಟೆ. ಹಳೇಕಾಲದ ಡಬ್ಬ ಟ್ರೇನ್ ಆಗಿದ್ದರಿಂದ ಫೋನನ್ನು ರೀಚಾರ್ಜ್ ಮಾಡಲು ಟಾಯ್ಲೆಟ್ ಬಳಿ ಎರಡು ಸಾಕೆಟ್ ಮಾತ್ರ ಇದ್ದವು. ಒಂದಕ್ಕೆ ನನ್ನ ಬೆಲೆಬಾಳುವ ಸ್ಮಾರ್ಟ್ ಫೋನ್ ಸಿಕ್ಕಿಸಿದ್ದೆ. ಅದರ ಪಕ್ಕದ ಸಾಕೆಟ್ಟಿನಲ್ಲಿ ಇನ್ನೊಬ್ಬ ತನ್ನ ಚಾರ್ಜರನ್ನು ಅಂಟಿಸಲು ಹೋಗಿ ನನ್ನ ಫೋನ್ ಕೆಳಕ್ಕೆ ಬಿದ್ದು ಮಟಾಮಾಯ! ಅಲ್ಲಿ ಇಲ್ಲಿ ಗಡಿಬಿಡಿಯಲ್ಲಿ ಹುಡುಕಿದರೆ ಎಲ್ಲೂ ಇಲ್ಲ. ಸೀದಾ ಅಲ್ಲಿನ ಕಿಂಡಿಯ ಮೂಲಕ ಹಳಿಗಳ ಮಧ್ಯೆ ಜಲ್ಲಿಹಾಸಿನ ನೆಲ ಸೇರಿತ್ತು. ಬೀಳಿಸಿದವನ ಫೋನನ್ನೇ ಬಳಸಿ ಡಯಲ್ ಮಾಡಿದಾಗ ರಿಂಗಿಂಗ್ ಸದ್ದು ಕೇಳುತ್ತಿತ್ತು. ರೈಲು ವೇಗದಲ್ಲಿ ಸಾಗುತ್ತಿತ್ತು.
ಘೋರ ಕತ್ತಲು, ಸುತ್ತೆಲ್ಲ ದಟ್ಟ ಕಾಡು. ಚೇನ್ ಎಳೆದು ಗಾಡಿ ನಿಂತರೂ ಕತ್ತಲಲ್ಲಿ ಕಿಲೊಮೀಟರ್ ಹಿಂದಕ್ಕೆ ಹಳಿಗುಂಟ ಹೋಗಿ ಹುಡುಕುವುದು ಅಸಾಧ್ಯ. ಇನ್ನೈದು ಕಿ.ಮೀ. ಮುಂದೆ ಬರಲಿರುವ ಸಾಗರದ ನಿಲ್ದಾಣದಲ್ಲಿ ಇಳಿಯಲೆ? ಪತ್ನಿ ರೇಖಾಗೆ ಅವಸರದಲ್ಲಿ ಫೋನ್ ಮಾಡಿ, ಅವಳ ಮೂಲಕ ತಂಗಿ ವಿಶಾಲಾಕ್ಷಿಗೆ ಫೋನ್ ಮಾಡಿಸಿ, ಅವಳ ಮೂಲಕ ಸಾಗರದ ನೆಚ್ಚಿನ ಗೆಳೆಯ ಅಖಿಲೇಶ್ ಚಿಪ್ಪಳಿಗೆ ಫೋನ್ ಮಾಡಿಸುವಷ್ಟರಲ್ಲಿ ಸಾಗರವನ್ನೂ ಬಿಟ್ಟು ರೈಲು ಹೊರಟಿತ್ತು. ನನ್ನ ಫೋನನ್ನು ಬೀಳಿಸಿದ್ದಕ್ಕೆ ತಪಿಸುತ್ತಿದ್ದ ಸಹಪಯಣಿಗ ಮಂಜು ಅಷ್ಟೇ ಆತಂಕದಿಂದ ತನ್ನ ದೂರದ ಪರಿಚಿತರಿಗೆ, ಅವರ ಮೂಲಕ ಪೊಲೀಸರಿಗೆ, ಫೋನ್ ಎಲ್ಲಿ ಬಿದ್ದಿದೆಯೆಂದು ಹುಡುಕಬಲ್ಲ ತಜ್ಞರಿಗೆ ಕರೆ ಕರೆಯುತ್ತಲೇ ಇದ್ದ. ಮುಂದಿನ ಒಂದು ಗಂಟೆಯ ಕಾಲ ಹತ್ತಿಪ್ಪತ್ತು ಅಗೋಚರ ಗೆಳೆಯರು, ಹತ್ತಾರು ಸಹಪ್ರಯಾಣಿಕರು ಹೇಗಾದರೂ ನೆರವು ನೀಡೋಣವೆೆಂದು ಚರ್ಚಿಸುತ್ತ ಬಸವಳಿದು ನಿದ್ದೆ ಹೋದರು. ನಾನು ಫೋನ್ ನಲ್ಲಿ ಇದ್ದ ಅಸಂಖ್ಯ ಚಿತ್ರಗಳು, ವಿಡಿಯೊ, ಧ್ವನಿ ರೆಕಾರ್ಡ್, ಓಲಾ ಮನಿ, ಏರ್ ಟೆಲ್ ಬ್ಯಾಲೆನ್ಸ್ ಎಲ್ಲ ಕಳೆದುಕೊಂಡು ಹಳಿಗಳ ನಡುವೆ ಅದೃಷ್ಟವನ್ನು ಹಳಿಯುತ್ತ ಹೇಗೊ ಮುದುಡಿ ರಾತ್ರಿ ಕಳೆದೆ.
ಬೆಂಗಳೂರನ್ನು ದಾಟಿ, ಕೆಂಗೇರಿಯಲ್ಲಿ ಇಳಿದು ನಸುಕಿನಲ್ಲಿ ಮನೆ ತಲುಪಿ ಕಂಬಳಿ ಹೊದ್ದು ಮಲಗಿ, ಅರೆನಿದ್ದೆಯಲ್ಲಿ ಮತ್ತೊಮ್ಮೆ ನನ್ನ ಮೊಬೈಲ್ ಗೆ ರಿಂಗ್ ಕೊಟ್ಟು ಕನಸಿನ ಲೋಕಕ್ಕೆ ಜಾರಿದೆ. ಅಲ್ಲೂ ಅದೇ ಮರುಕದ ಮಂಪರು. ಅಲ್ಲೆಲ್ಲೋ ಕಾಡಿನಲ್ಲಿ ಹಳಿಗಳ ಮಧ್ಯೆ ಫೋನ್ ರಿಂಗ್ ಸದ್ದು ಕೇಳುತ್ತಿತ್ತು. ಪಾಪ, ಆರು ತಿಂಗಳಿನ ಹೊಸ ಹಸುಗೂಸು ಅದು. ಈಗ ಎಲ್ಲೋ ಅನಾಥ ಸ್ಥಿತಿಯಲ್ಲಿ ಮೈತುಂಬ ಗಾಯಗಳಾಗಿ, ನಡುಗುವ ಚಳಿಯಲ್ಲಿ, ಹಸಿದ ಸ್ಥಿತಿಯಲ್ಲಿ ನೆರವಿಗಾಗಿ ಕ್ಷೀಣ ಆಕ್ರಂದನ ಹೊಮ್ಮಿಸಿ ಸೈಲೆಂಟ್ ಆದ ಹಾಗೆ ಕನಸು. ಯಾರೋ ದಯಾಳು ಅದನ್ನು ಎತ್ತಿ ರೀಚಾರ್ಜ್ ಮಾಡಿ ನನಗೆ ಕರೆ ಕೊಟ್ಟ ಹಾಗೆ. ನಾನು ಅದನ್ನು ಎತ್ತಿ ಮೈದಡವಿದ ಹಾಗೆ.
ದೊಡ್ಡ ಬೆಳಗಾಗಿ ಗಂಟೆ ಎಂಟೂ ಆಗಿರಲಿಲ್ಲ. 'ರೀ ಏಳ್ರೀ! ಫೋನ್ ಸಿಕ್ತಂತೆ' ಎಂದು ಪತ್ನಿ ಮತ್ತೆ ಮತ್ತೆ ಭುಜ ಹಿಡಿದು ಅಲುಗಿಸಿದರೂ ನಾನು ಕನಸಿನ ಲೋಕದಲ್ಲೇ ಇದ್ದೆ. 'ನಿಜಕ್ಕೂ ಸಿಕ್ತಂತೆ, ವಿಶಾಲಾಕ್ಷಿ ಫೋನ್ ಮಾಡಿದ್ಲು' ಎಂದು ಇವಳು ಕೂಗಿ ಕೂಗಿ ನನ್ನನ್ನು ಎಚ್ಚರಿಸಿದಾಗ ಧಡಕ್ಕನೆ ಎದ್ದೆ.
ಫೋನ್ ಸಿಕ್ಕಿದ್ದು ಖಾತ್ರಿಯಾಯಿತು.
ಆಗಿದ್ದೇನೆಂದರೆ ಸಾಗರದ ಸಮೀಪದ ಚಿಪ್ಪಳಿಯ ಮಿತ್ರ ಅಖಿಲೇಶ್ ಗೆ ರಾತ್ರಿಯೇ ಸಂದೇಶ ಹೋಗಿತ್ತು. ಅವರು ನಸುಕಿನಲ್ಲಿ ಎದ್ದು, ಅಪಾರ ಚಳಿಯಲ್ಲಿ ಬೈಕ್ ತೆಗೆಯಲಾರದೆ ನಡುಗಿ, ಇನ್ನೊಬ್ಬ ಮಿತ್ರ ಜಯಪ್ರಕಾಶ್ ಗೆ ಹೇಳಿ ಅವರ ಕಾರಿನಲ್ಲಿ ರೇಲ್ವೆ ಹಳಿಗೆ ಸಮಾನಾಂತರವಾಗಿ 20ಕಿಮೀ ಆಚಿನ ಕಾನ್ಲೆವರೆಗೆ ಹೋಗಿ ಎರಡು ತಂಡಗಳಾಗಿ ಬೇರ್ಪಟ್ಟು ಆ ನಿರ್ಜನ ಹಳಿಗಳ ಮಧ್ಯೆ ಎರಡೂ ದಿಕ್ಕಿಗೆ ಚಾರಣ ಹೊರಟರು. ಅಖಿಲೇಶ್ ಒಂದರ್ಧ ಕಿಲೊಮೀಟರ್ ಹೋಗಿದ್ದಾಗ, ಬೆಂಗಳೂರಿಂದ ತಂಗಿ ಎದ್ದು ಟೀ ಮಾಡುವ ಮುನ್ನ ನನ್ನ ಆ ನಂಬರಿಗೆ ರಿಂಗ್ ಕೊಟ್ಟಳು. ಅಖಿಲೇಶರ ಕಣ್ಣೆದುರೇ ರೈಲು ಹಳಿಗಳ ಮಧ್ಯೆ ರಿಂಗ್ ಆಗುತ್ತಿತ್ತು. ಫೋನ್ ನ ಕಪ್ಪು ಗಾಜು ಸೀಳು ಬಿಟ್ಟಿದ್ದರೂ ವನಸಿರಿಯ ನಡುವೆ ಸಂತಸದ ತರಂಗವನ್ನು ಹೊಮ್ಮಿಸಿತ್ತು.
ಅಖಿಲೇಶ್ ಚಿಪ್ಪಳಿ ಹೇಳಿಕೇಳಿ ವೈದ್ಯವೃತ್ತಿಯವರು. ಗಾಯಗೊಂಡ ಮಗುವಿಗೆ ಆರೈಕೆ ಮಾಡುವಂತೆ, ಪವರ್ ಸೇವರ್ ಹಾಕಿ, ಮನೆಗೆ ಒಯ್ದು ಚಾರ್ಜ್ ಮಾಡಿ, ಮೆತ್ತನೆಯ ಬ್ಯಾಂಡೇಜ್ ಸುತ್ತಿ ಹತ್ತಿಯ ಪೆಟ್ಟಿಗೆಯಲ್ಲಿ ಭದ್ರವಾಗಿ ಮಲಗಿಸಿ ಅರಿವಳಿಕೆ ಸ್ವಿಚಾಫ್ ಮಾಡಿ ಅದನ್ನು ತ್ವರಿತ ಕೊರಿಯರ್ ಮಾಡಿದರು. ಫೋನ್ ಕೈತಪ್ಪಿದ 42 ಗಂಟೆಯೊಳಗೆ ಮತ್ತೆ ನನ್ನ ಸೇರುವಂತೆ ಮಾಡಿದರು. ಅವಸರದಲ್ಲಿ ತೆರೆದು ಅದರ ಗೀರು ಗೀರಿನ ಮುಖವನ್ನು ಒರೆಸಿದರೆ ಮೆಮೊರಿಯ ತುಂಬ ಅದರದ್ದೇ ಕ್ಷೇಮ ಸಮಾಚಾರ ವಿಚಾರಿಸಲು ಯಾರ್ಯಾರೋ ಮಾಡಿದ ಅಸಂಖ್ಯ ಕಾಲ್ ದಾಖಲೆಗಳು ತುಂಬಿದ್ದವು. ನನ್ನಲ್ಲೂ ಧನ್ಯತಾ ಭಾವವನ್ನು ಚಿಮ್ಮಿಸುತ್ತಿದ್ದವು.
ಉಪಸಂಹಾರ: ಕತೆಗಾರ ಎಸ್ ದಿವಾಕರ್ ರ ಹೊಸ ಪ್ರಬಂಧ ಸಂಕಲನ
'ಒಂದೊಂದು ನೆನಪಿಗೂ ಒಂದೊಂದು ವಾಸನೆ' ಇದೇ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ ಕಾಣಲಿದೆ. ಆ ಕೃತಿಯಲ್ಲಿನ ಸುಂದರ ಪ್ರಬಂಧಗಳಿಗೆ ನಾನು ಮುನ್ನುಡಿ ಬರೆಯಬೇಕಿತ್ತು. 'ಕೊನೇ ಕ್ಷಣದಲ್ಲಿ ನೆನಪಿಸಿದರೂ ಸಾಕು ಬರೆದುಕೊಡುತ್ತೇನೆ' ಎಂದು ನಾನು ಅವರಿಗೆ ಹೇಳಿದ್ದೆ. ಅದಕ್ಕೆಂದು ಜಾಗ ಖಾಲಿ ಇಟ್ಟುಕೊಂಡ ಅವರು ಕೊನೇ ನಿಮಿಷದಲ್ಲಿ ಅದನ್ನು ನೆನಪಿಸಲೆಂದು ಮಾಡಿದ ಅನೇಕ ಆರ್ತ ಕರೆಗಳೆಲ್ಲ ಕಾನನದಲ್ಲಿ ಹಳಿಗಳ ಮಧ್ಯೆ ಅರಣ್ಯರೋದನವಾಗಿತ್ತು. ಹಾಗಾಗಿ ಮುನ್ನುಡಿ ಇಲ್ಲದೆ ಅದು ಪ್ರಕಟವಾಗುತ್ತಿದೆ. ಪರವಾಗಿಲ್ಲ, ಮುನ್ನುಡಿ ಮಹತ್ವದ್ದಲ್ಲ. ಆದರೆ ಅವರ ಸಂಕಲನದ ಮೊದಲ ಪ್ರಬಂಧ 'ಖಾಲಿ ಕ್ಯಾನ್ವಾಸ್ ತುಂಬೀತು ಹೇಗೆ?' ಎಂಬುದನ್ನು ಓದಿದರೆ ಸಾಕು, ಎಲ್ಲ ಪ್ರಬಂಧಗಳನ್ನೂ ಅದೇ ಓದಿಸಿಕೊಂಡು ಹೋಗುತ್ತದೆ. ನನ್ನ ಪಾಲಿಗಂತೂ ನೆನಪಿನ, ಡೀಸೆಲ್ ರೈಲಿನ ಹೊಗೆಯ ಗಾಢ ವಾಸನೆಯನ್ನು ಅದು ಸೂಸುತ್ತಿರುತ್ತದೆ.