ಡಿ.20: ಶರೀಅತ್ ಸಂರಕ್ಷಣಾ ಮಹಿಳಾ ಸಮಾವೇಶ
ಮಂಗಳೂರು, ಡಿ.16: ರಾಜಕೀಯದ ಕಾರಣಗಳಿಗಾಗಿ ತ್ರಿವಳಿ ತಲಾಖ್ ಅನ್ನೇ ಭೂತಾಕಾರವಾಗಿ ಬಿಂಬಿಸುತ್ತಿರುವ ಯತ್ನಗಳು ಕೇಂದ್ರ ಸರಕಾರದಿಂದ ನಡೆಯುತ್ತಿದೆ. ಮುಸ್ಲಿಮ್ ಮಹಿಳೆಯರನ್ನು ಹಕ್ಕು ವಂಚಿತರಂತೆ ಚಿತ್ರಿಸಲು ಯತ್ನಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಜಿಲ್ಲೆಯ ಎಲ್ಲ ಮುಸ್ಲಿಮ್ ಸಂಘಟನೆಗಳ ಸಹಭಾಗಿತ್ವದಲ್ಲಿ ಮಹಿಳಾ ಸಮಾವೇಶವನ್ನು ಡಿ.20ರಂದು ಬೆಳಗ್ಗೆ 9:30ಕ್ಕೆ ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಸದಸ್ಯೆ ಶಮೀರಾ ಜಹಾನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಮಾವೇಶದ ಅಧ್ಯಕ್ಷತೆಯನ್ನು ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಉಪಾಧ್ಯಕ್ಷೆ ರೊಹರಾ ಅಬ್ಬಾಸ್ ವಹಿಸಲಿದ್ದು, ಎಸ್‌ಕೆಎಸ್‌ಎಂನ ಮಹಿಳಾ ಘಟಕದ ಮುಮ್ತಾಝ್ ಬಿನ್ ಶಂಸುದ್ದೀನ್, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಯು.ಸುನೈನಾ, ಮುಸ್ಲಿಮ್ ಪರ್ಸನಲ್ ವುಮೆನ್ಸ್ ಫ್ರಂಟ್‌ನ ಶಾಹಿದಾ ಅಸ್ಲಮ್, ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಸದಸ್ಯೆ ಡಾ.ಅಸ್ಮಾ ರೊಹರಾ, ಎಚ್‌ಐಎಫ್ ಮಹಿಳಾ ಘಟಕದ ರೈಹಾನ ಬಿಂತಿ ಹಕೀಂ, ಸಿಸ್ಟರ್ಸ್ ಆಫ್ ಹೋಪ್‌ನ ಮರಿಯಂ ಶಫೀನಾ, ಹಿದಾಯ ಅರೆಬಿಕ್ ಇನ್‌ಸ್ಟಿಟ್ಯೂಟ್‌ನ ಶಹನಾಝ್ ಅಹ್ಮದ್ ಹಾಗೂ ವಿವಿಧ ಮುಸ್ಲಿಮ್ ಸಂಘಟನೆಗಳ ಮಹಿಳಾ ವಿಭಾಗದ ನಾಯಕಿಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶರೀಅತ್ ಸಂರಕ್ಷಣಾ ಮಹಿಳಾ ಸಮಾವೇಶದ ಸಂಚಾಲಕಿ ಸಾಜಿದಾ ಮೂಮಿನ್, ಸಯೀದಾ ಯೂಸುಫ್, ಯುನಿವೆಫ್ ಮಹಿಳಾ ಘಟಕದ ಉಪಾಧ್ಯಕ್ಷೆ ಫಾತಿಮಾ ಶರೀಫ್, ವುಮೆನ್ಸ್ ಇಂಡಿಯಾ ಮೂವ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ಲೀಮ್ ಉಪಸ್ಥಿತರಿದ್ದರು.