ದಿಡ್ಡಳ್ಳಿಯ ಬೀದಿಪಾಲಾದ ಆದಿವಾಸಿಗಳು ಮತ್ತು ಪ್ಯಾಪಿಲಾನ್ ಬುದ್ಧ
ಗೋಡೆಯ ಮೇಲೆ ಸಾಲಾಗಿ ಜೋಡಿಸಿಟ್ಟ ದೇವರ ಫೋಟೋಗಳ ನಡುವೆ ಮುಗುಳ್ನಗುತ್ತಿರುವ ವ್ಯಕ್ತಿಯನ್ನು ತೋರಿಸಿ ವಿದೇಶೀ ಗೆಳೆಯ ಜಾಕ್ ಅದು ಯಾರೆಂದು ಶಂಕರನನ್ನು ಕೇಳುತ್ತಾನೆ.. ಗೆಳೆಯನೊಂದಿಗೆ ಮರಗೆಣಸು ಮೆಲ್ಲುತ್ತಿದ್ದ ಶಂಕರ ನಕ್ಕು ಹೇಳುತ್ತಾನೆ ‘‘ಅದು ಇಎಂಎಸ್ ಅಂದರೆ ಇ ಎಂ ಶಂಕರನ್... ನನ್ನ ಅಪ್ಪನಿಗೆ ಇಎಂಎಸ್ ಅಂದರೆ ದೇವರಿದ್ದಂತೆ...ಅದಕ್ಕೆ ನಾವು ಹೊಲೆಯರಾದರೂ ನನಗೆ ಶಂಕರನ್ ಅನ್ನೋ ಬ್ರಾಹ್ಮಣ ಹೆಸರಿಟ್ಟಿದ್ದಾರೆ... ಬ್ರಾಹ್ಮಣ ಹೆಸರಿನ ಹೊಲೆಯ... !’’ ಆಗ ಮಗನಿಗೂ ಅವನ ಗೆಳೆಯನಿಗೂ ಮರಗೆಣಸು ಬೇಯಿಸಿಕೊಟ್ಟು ತಾನು ಅದನ್ನು ತಿನ್ನುತ್ತಿರುವ ಆ ಹಳ್ಳಿಯ ಹಿರಿಯ ನಾಯಕ ಕರಿಯೆಟ್ಟನ್ ಒಂದು ದೀರ್ಘ ನಿಟ್ಟುಸಿರುಬಿಟ್ಟು ಹೇಳುತ್ತಾನೆ ‘‘ಅದೆಲ್ಲಾ ನಾನು ಮಾರ್ಕ್ಸಿಸಮ್ ಒಂದೇ ನಮ್ಮ ಬಿಡುಗಡೆಗೆ ಕಾರಣ ಎಂದು ನಂಬಿಕೊಂಡಿದ್ದಾಗ ಆದರೆ ಯಾವಾಗ ನಾವು ಹೊಲೆಯರು ಭೂಮಿ ಹಕ್ಕು ಕೇಳಿದಿವೋ ಆವಾಗ ಇಎಂಎಸ್ ಬ್ರಾಹ್ಮಣರಾದರು. ನಾವು ದಲಿತರಾದೆವು.’’ ಮಗ ಶಂಕರ ಕೆಣಕುತ್ತಾನೆ ‘‘ಹಾಗಾದರೆ ಇಎಂಎಸ್ರನ್ನು ಇನ್ನೂ ಯಾಕೆ ದೇವರ ಸ್ಥಾನದಲ್ಲಿಟ್ಟಿದ್ದೀಯಾ ತೆಗೆಯಬಹುದಲ್ಲಾ..?’’ ಕರಿಯಟ್ಟನ್ ನಿಡುಸುಯ್ದು ಹೇಳುತ್ತಾರೆ.. ‘‘ಒಮ್ಮೆ ದೇವರ ಸ್ಥಾನಕ್ಕೇರಿದರೆ ಯಾವಾಗಲೂ ದೇವರೇ... ಇಎಂಎಸ್ ಅಲ್ಲಿಯೇ ಇರಲಿ’’ ಮುಂದೆ ಬದಲಾದ ಸನ್ನಿವೇಶದಲ್ಲಿ ಮಗ ಶಂಕರ ಮೇವಾರ ಕಾಲನಿಯ ದಲಿತರ ಭೂಮಿಹಕ್ಕು ಹೋರಾಟದ ಮುಂಚೂಣಿಯಲ್ಲಿ ನೇತೃತ್ವ ವಹಿಸಿದಾಗ ಇದೇ ಕರಿಯೆಟ್ಟನ್ ಇಎಂಎಸ್ ಫೋಟೋವನ್ನು ದೇವರ ಸಾಲಿನಿಂದ ಕೆಳಗಿಳಿಸಿ ಬುದ್ಧನ ಪೋಟೋವನ್ನು ಸ್ಥಾಪಿಸುತ್ತಾನೆ..... ಖಉಉ ಹೆಸರಿನ ಎನ್ಜಿಒದ ಸದಸ್ಯರು ಕೇರಳದ ಹಲವಾರು ಹರಿಜನರ ಮತ್ತು ಆದಿವಾಸಿಗಳ ಕಾಲನಿಗಳಲ್ಲಿ ಮೀಡಿಯಾ ಡಾಕ್ಯುಮೆಂಟೇಷನ್ ಹಾಗೂ ವೀಡಿಯೊ ಡಾಕ್ಯುಮೆಂಟರಿ ತರಬೇತಿಗಳನ್ನು ನೀಡಿ ನೂರು ಹ್ಯಾಂಡಿಕ್ಯಾಮ್ಗಳನ್ನು ಫಲಾನುಭವಿಗಳಿಗೆ ಸ್ವತಃ ಡಾಕ್ಯುಮೆಂಟರಿಗಳನ್ನು ತಯಾರಿಸಲು ನೀಡಿರುವ ಸಂದರ್ಭದಲ್ಲಿ ಮೇವಾರದ ದಲಿತ ಕಾಲನಿಯಲ್ಲಿ ಸಂತೋಷಕೂಟವೊಂದನ್ನು ಸಂಘಟಿಸಿರುತ್ತದೆ. ಸಂತೋಷ ಕೂಟದಲ್ಲಿ ಭಾಗವಹಿಸಲು ಬಂದಿರುವ ಎನ್ಜಿಒದ ಸಾಮಾಜಿಕ ಕಾರ್ಯಕರ್ತರು ಪಾನಗೋಷ್ಠಿಯಲ್ಲಿ ಮಸ್ತ್ ಮಜಾ ಮಾಡುತ್ತಿರುತ್ತಾರೆ. ಸಲಿಂಗರತಿಯಲ್ಲಿ ತೊಡಗಿರುತ್ತಾರೆ. ಮತ್ತು ಗಾಂಧೀಜಿ ಬಗ್ಗೆ ಲೇವಡಿ ಮಾಡುತ್ತಾ ಮಾಡುತ್ತಾ ತಮ್ಮಾಂದಿಗೇ ಇರುವ ಹೊಲೆಯ ಶಂಕರನ ಬಗ್ಗೆ ಕೂಡಾ ಆತನ ಹುಟ್ಟಿನ, ಜಾತಿಯ ಹಿನ್ನೆಲೆಯನ್ನು ಲೇವಡಿ ಮಾಡುತ್ತಾರೆ..‘‘ಈ ದಲಿತರಿಗೆ ಪ್ರತಿಯೊಬ್ಬರಿಗೂ ಐದೈದು ಎಕರೆ ಜಾಗ ಕೊಟ್ಟು ನೋಡಿ ಒಂದು ವರ್ಷವಾದ ಮೇಲೆ ಇವರೆಲ್ಲರೂ ನಮಗೇ ಈ ಜಾಗ ಮಾರಿ ನಿರ್ಗತಿಕರಾಗಿರ್ತಾರೆ’’ ಎಂದು ತಮಾಷೆ ಮಾಡಿ ನಗುತ್ತಾರೆ. ಸಹೋದ್ಯೋಗಿಗಳ ಅಣಕ ಕೇಳಿ ತಡೆಯಲಾಗದೆ ಶಂಕರ ಮಳೆ ಸುರಿಯುತ್ತಿರುವ ಕಾರಿರುಳಲ್ಲೂ ಅವರನ್ನು ಬಹಿಷ್ಕರಿಸಿ ಹೊರನಡೆಯುತ್ತಾನೆ..!!
ಶತಮಾನಗಳಿಂದ ಕಾಡಿನಲ್ಲೇ ಬದುಕುತ್ತಿರುವ ಮೇವಾರದ ಹೊಲೆಯರು ವಾಸಕ್ಕೆ ಭೂಮಿ ಹಕ್ಕು ಹೋರಾಟ ಕೈಗೆತ್ತಿಕೊಂಡರೆ ಸರಕಾರ ಪೊಲೀಸರನ್ನು ಛೂಬಿಟ್ಟು ನಕ್ಸಲರೆಂದು ಬಂಧಿಸಿ ಹಿಂಸೆ ಕೊಡುತ್ತದೆ. ದಲಿತರ ಹುಡುಗಿಯೊಬ್ಬಳು ಕಷ್ಟಪಟ್ಟು ಆಟೋರಿಕ್ಷಾ ಓಡಿಸಿ ದುಡ್ಡು ಸಂಪಾದಿಸಿ ತನ್ನ ಹಳ್ಳಿಯಲ್ಲಿ ತನ್ನ ಸಮುದಾಯದ ಮಕ್ಕಳಿಗೆ ಜೋಪಡಿ ಶಾಲೆಯನ್ನು ನಡೆಸುತ್ತಿದ್ದರೆ ಮೇಲ್ವರ್ಗದ ಮಧ್ಯಮವರ್ಗದ ಇತರ ಸಮುದಾಯದ ಮಂದಿ ಇವಳ ಮೇಲೆ ಕಾಮುಕ ದೃಷ್ಟಿ ಬೀರುತ್ತಾರೆ. ಪ್ರತಿರೋಧ ತೋರಿದ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಹಿಂಸಿಸುತ್ತಾರೆ. ಅವಳ ಜೀವನಾಧಾರವಾಗಿದ್ದ ಆಟೋರಿಕ್ಷಾವನ್ನು ಸುಟ್ಟುಬಿಡುತ್ತಾರೆ.
ಶತಮಾನಗಳಿಂದ ವಾಸಿಸುತ್ತಾ ಕೃಷಿ ಮಾಡುತ್ತಿರುವ ಮೇವಾರದ ಕಾಲನಿಯನ್ನು ತೃಜಿಸಿ ತೆರಳುವಂತೆ ಕೋರ್ಟ್ ಆದೇಶ ಮಾಡುತ್ತದೆ. ಆ ಸಂಧರ್ಭದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರಕಾರ ದಲಿತರನ್ನು ಮೇವಾರದಿಂದ ಒಕ್ಕಲೆಬ್ಬಿಸಲು ಗಾಂಧಿವಾದಿ ರಾಮದಾಸಜೀ ನೇತೃತ್ವದಲ್ಲಿ ಮನವೊಲಿಕೆಯ ಸತ್ಯಾಗ್ರಹ ಕೈಗೊಳ್ಳುತ್ತದೆ. ಮೇವಾರದ ದಲಿತರು ಪ್ರತಿಭಟನೆ ಮಾಡಿ ಮೇವಾರದ ಮುಖ್ಯ ಸ್ಥಳವೊಂದರಲ್ಲಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿ ಸಾಮೂಹಿಕವಾಗಿ ಬೌದ್ಧ ಧರ್ಮಕ್ಕೆ ಮತಾಂತರ ಗೊಳ್ಳುತ್ತಾರೆ. ದಲಿತರನ್ನು? ಮೇವಾರ ತೃಜಿಸುವಂತೆ ಸತ್ಯಾಗ್ರಹ ಮಾಡುವ ಕಾಂಗ್ರೆಸ್ ನಾಯಕರಿಗೆ ಬಲವಾದ ಪೊಲೀಸ್ ರಕ್ಷಣೆ ನೀಡುವ ಸರಕಾರ ವಾಸಿಸಲು ಭೂಮಿಕೇಳುವ ದಲಿತರ ಮೇಲೆ ಹಿಂಸೆಯನ್ನು ಪ್ರಯೋಗಿಸುತ್ತದೆ. ಬುಧ್ಧನ ಮೂರ್ತಿಯನ್ನು ಧ್ವಂಸ ಮಾಡಿ,ಗುಡಿಸಲುಗಳಿಗೆ ಬೆಂಕಿಯಿಟ್ಟ ಪೊಲೀಸರು ದಲಿತರ ಮೇಲೇ ದೌರ್ಜನ್ಯ ಎಸಗುತ್ತಾರೆ. ಪೊಲೀಸರ ದೌರ್ಜನ್ಯ, ಗುಡಿಸಲುಗಳು ಉರಿಯುತ್ತಿರುವ ಹಿನ್ನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಮದಾಸಜಿಯವರ ಸತ್ಯಾಗ್ರಹದ ರಘುಪತಿ ರಾಘವ ರಾಜಾರಾಮ್ ಭಜನೆ ಕೇಳಿಬರುತ್ತಿದ್ದಂತೆ... ಅಳಿದುಳಿದ ದಲಿತರು, ಸಾವಿರಾರು ವರ್ಷಗಳಿಂದ ಅದೇ ಜಾಗದಲ್ಲಿ ಹುಟ್ಟಿ ಬೆಳೆದು ನಲಿದಾಡಿದ್ದ ಹೊಲೆಯರು ಉಳಿದ ಸಾಮಾನುಗಳನ್ನು ಹೊತ್ತುಕೊಂಡು ಮೇವಾರ ಬಿಟ್ಟು ಹೊರಟುಹೋಗುತ್ತಾರೆ... ಮುಂದಿನ ದೃಶ್ಯ ಕೊನೆಯ ದೃಶ್ಯ ...ಸಾಲುಸಾಲಾಗಿ ಕಾಡಿನ ನಡುವೆಯಿಂದ... ಕಲ್ಲುಗಣಿಗಳ ಕೊರಕಲುಗಳೆಡೆಯಿಂದ ಮೌನವಾಗಿ ತೆರಳುವ ದಲಿತರ ಸಾಲುಗಳು ಕ್ಯಾಮರಾದ ಲಾಂಗ್ ಶಾಟ್ ನಲ್ಲಿ ಸುಮಾರು ಹೊತ್ತು ವಿಭಿನ್ನ ಲೋಕೇಷನ್ಗಳಲ್ಲಿ ಮೂಡುತ್ತಿರುವಂತೆ...ದಟ್ಟ ವಿಷಾದದ ಛಾಯೆಯೊಂದು ಪ್ರೇಕ್ಷಕರ ಮನಸ್ಸಲ್ಲಿ ಛಾಪು ಹುಟ್ಟಿಸುತ್ತದೆ.
ಮಲಯಾಳಂ ನಿರ್ದೇಶಕ ಜಯನ್ ಚೆರಿಯನ್ರವರ ‘ಪ್ಯಾಪಿಲೋನ್ ಬುದ್ಧ’ ಮಲಯಾಳಂ ಸಿನೆಮಾದ ಕೊನೆಯ ದೃಶ್ಯಗಳು ತೀರಾ ಇತ್ತೀಚೆಗಿನ ಕೊಡಗು ಜಿಲ್ಲೆಯ ದಿಡ್ಡಳ್ಳಿಯಲ್ಲಿ ದಲಿತರನ್ನು ಅವರ ಹಟ್ಟಿಗಳಿಂದ ಅರಣ್ಯ ಇಲಾಖೆಯವರು ಹೊರಗೆ ಹಾಗಿ ಬೀದಿಯಲ್ಲಿ ನಿಲ್ಲಿಸಿರುವ ಘಟನೆ ನೆನಪಿಗೆ ಬಂದರೆ ಅಚ್ಚರಿಯಿಲ್ಲ. ಸಿನೆಮಾದ ಮುಖ್ಯ ಪಾತ್ರ ಕರಿಯೆಟ್ಟನ್ ತಮ್ಮ ಸಮುದಾಯದ ಜನರಿಗೆ ಹೇಳುವ ಮಾತು ನೆನಪಿಗೆ ಬರುತ್ತದೆ. ‘‘ಸರಕಾರ ಧಾರ್ಮಿಕ ಸಂಘಟನೆಗಳಿಗೆ ಉದ್ಯಮಿಗಳಿಗೆ ಸಾವಿರಾರು ಎಕರೆ ಜಮೀನು ಪುಕ್ಕ್ಕಟೆಯಾಗಿ ಕೊಡುತ್ತದೆ. ಆದರೆ ಸಾವಿರಾರು ವರ್ಷಗಳಿಂದ ವಾಸಿಸುತ್ತಿರುವ ದಲಿತರಿಗೆ ಒಂದೊಂದು ಎಕರೆ ಜಮೀನು ಕೊಡಲು ಒಪ್ಪುವುದಿಲ್ಲ... ನಾವು ಪ್ರತಿಭಟಿಸಬೇಕು. ಸಂವಿಧಾನದಲ್ಲಿ ಲಭ್ಯರುವ ಎಲ್ಲಾ ವಿಧಾನಗಳನ್ನು ಉಪಯೋಗಿಸಿಕೊಂಡು ಪ್ರತಿಭಟಿಸಬೇಕು...!!’’
ಜಯನ್ ಚೆರಿಯನ್ ಸಿನೆಮಾದಲ್ಲಿ ತೋರಿಸುವ ಕೆಲವು ದೃಶ್ಯಗಳು ವಿಶೇಷ ವಾಗಿವೆ... ಶಂಕರನ್ನನ್ನು ಪೊಲೀಸರು ತೀವ್ರವಾಗಿ ಹಿಂಸಿಸುವ ರೀತಿಯನ್ನು ಹಸಿಹಸಿಯಾಗಿ ತೋರಿಸಿದ್ದರೂ ಅದು ಎದೆಯಾಳಕ್ಕೆ ತಣ್ಣಗೆ ಇಳಿಯುತ್ತದೆ ಹೊರತು ಅಶ್ಲೀಲ ಅನ್ನಿಸುವುದಿಲ್ಲ.. ಆ ದೃಶ್ಯದಲ್ಲಿ ಶಂಕರನ್ನು ಬರೀ ಬೆತ್ತಲೆ ಮೇಜಿನ ಮೇಲೆ ಮಲಗಿಸಿದ ಪೊಲೀಸರು ಕಾಂಡೋಮ್ ನಲ್ಲಿ ಮೆಣಸಿನ ಪುಡಿಯನ್ನು ತುಂಬಿ ಆತನ ಶಿಷ್ನಕ್ಕೆ ತೊಡಿಸಿ ಬಾಯಿ ಬಿಡಿಸಲು ಪ್ರಯತ್ನಿಸುತ್ತಾರೆ. ಮಂದ ಬೆಳಕಿನಲ್ಲಿ ಪೊಲೀಸ್ ಲಾಕಪ್ಪಿನಲ್ಲಿ ನಡೆಯುವ ಕ್ರಿಯೆಯಲ್ಲಿ ಶಂಕರನ ಬೆತ್ತಲೆ ದೇಹ ಆತನ ಕಿರುಚಾಟ ಆಕ್ರಂದನದೊಂದಿಗೆ ಬಿಲ್ಲಿನಂತೆ ಸೆಟೆದು ಬಾಗುತ್ತದೆ.. ಆಕ್ರಂದನ ತುತ್ತತುದಿಗೇರಿ ನಿಧಾನವಾಗಿ ಕ್ಷೀಣಿಸುತ್ತಿದ್ದಂತೆ ....ದೃಶ್ಯ ಬದಲಾಗುತ್ತದೆ.
ಮತ್ತೊಂದು ದೃಶ್ಶದಲ್ಲಿ ದಲಿತ ಹೆಣ್ಣನ್ನು ಇತರ ಸಮುದಾಯದವ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿ ಎಸೆದು ಹೋಗಿರು ತ್ತಾರೆ. ರಾತ್ರಿಯ ಕ್ಷೀಣ ಬೆಳಕಿನಲ್ಲಿ ಆ ಹೆಣ್ಣಿನ ಬೆತ್ತಲೆ ದೇಹ ಕಾಡಿನ ಮಧ್ಯೆ ಅನಾಥವಾಗಿ ಬಿದ್ದಿರುವುದನ್ನು ಕ್ಯಾಮರಾ ಕಣ್ಣುಗಳು ತೋರಿಸುತ್ತವೆ...ಹೆಣ್ಣಿನ ದೇಹವನ್ನು ಛಾಯೆಯ ರೂಪದಲ್ಲಿ ಕಾಣಿಸುವ ಕ್ಯಾಮರಾ ನೋಡುಗನ ಅಂತಃಸತ್ವವನ್ನು ಪ್ರಶ್ನಿಸುತ್ತದೆ.
ಯಾವುದೇ ರಾಜಕೀಯ ಪಕ್ಷದ ಸರಕಾರಗಳಿರಲಿ ಅವುಗಳು ದಲಿತರ ಆದಿವಾಸಿಗಳ ಭೂಮಿ ಹಕ್ಕು ಪ್ರಶ್ನೆಗಳನ್ನು ಒಂದೇ ರೀತಿ ನಿಭಾಯಿಸುತ್ತವೆ. ದಲಿತರಿಗೆ ಆದಿವಾಸಿಗಳಿಗೆ ಭೂಮಿ ಹಕ್ಕನ್ನು ನಿರಾಕರಿಸುವುದರ ಮೂಲಕ ಭಾರತದ ಎಲ್ಲಾ ರಾಜಕೀಯ ಪಕ್ಷಗಳೂ ದಲಿತರ ವಿಷಯದಲ್ಲಿ ಸಮಾನರು ಎಂದು ಸ್ಪಷ್ಟವಾಗಿ ಅಷ್ಟೇ ಕಠೋರವಾಗಿ ಹೇಳುವ ದಿಟ್ಟತನವನ್ನು ಜಯನ್ ಚೆರಿಯನ್ ಮಾಡಿದ್ದಾರೆ.
2016ರ ಡಿಸೆಂಬರ್ 17ರಂದು ಮಂಗಳೂರಿನ ಸಹಮತ ಫಿಲಂ ಸೊಸೈಟಿಯು ‘ಪ್ಯಾಪಿಲೋನ್ ಬುದ್ಧ’ ಚಿತ್ರವನ್ನು ಪ್ರದರ್ಶಿಸಿತು. ಇದೇ ಚಲನಚಿತ್ರವನ್ನು ಅಗಸ್ಟ್ ತಿಂಗಳಲ್ಲಿ ಸಹಮತ ಫಿಲಂ ಸೊಸೈಟಿ ಮತ್ತು ಸಮನ್ವಯ ಮನುಜಮತ ವಾಟ್ಸ್ಯಾಪ್ ಗುಂಪಿನ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಿದ್ದಾಗಲೂ ಬಂದಂತಹ ವೀಕ್ಷಕರು ತುಂಬಾಹೊತ್ತು ವಿಷಾದದ ಛಾಯೆಯಲ್ಲಿ ಮುಳುಗಿದ್ದರು. ಅದೇ ಸಮಯದಲ್ಲಿ ‘ಚಲೋ ಉಡುಪಿ’ ಕಾರ್ಯಕ್ರಮ ನಡೆದಿದ್ದು ಆ ಚಳವಳಿಯಲ್ಲಿ ದಲಿತರು ಭೂಮಿ ಮತ್ತು ಆಹಾರದ ಆಯ್ಕೆ ನಮ್ಮ ಹಕ್ಕು ಎಂದು ಕೇಳಿದ್ದು ಪ್ರೇಕ್ಷಕರ ಮನಸ್ಸಿನಲ್ಲಿ ಪ್ರಭಾವ ಬೀರಿದ್ದು ಸ್ಪಷ್ಟವಾಗಿತ್ತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.