ಮುಲ್ಲಾ ನಾಸಿರುದ್ದೀನ್ ಕತೆಗಳು ಮತ್ತು ಅಗ್ಗದ ಜನಪ್ರಿಯತೆ
ಜಾಗತಿಕ ಸಾಹಿತ್ಯದಲ್ಲಿ ಮುಲ್ಲಾ ನಾಸಿರುದ್ದೀನ್ ಎಂಬ ಪಾತ್ರಕ್ಕೆ ವಿಶೇಷವಾದಂತಹ ಒಂದು ಸ್ಥಾನವಿದೆ. ಬಹುಷ ಮುಲ್ಲಾ ನಾಸಿರುದ್ದೀನ್ ಅನುವಾದಗೊಂಡಿರದ ಭಾಷೆಗಳೇ ತೀರಾ ವಿರಳ.
ಆತನನ್ನು ನೀವು ಯಾವ ಭಾಷೆಯಲ್ಲಿ ಓದಿದರೂ ಆತ ನಮ್ಮದೇ ಸುತ್ತಮುತ್ತಲಿನ ವ್ಯಕ್ತಿಯೇನೋ ಎಂಬಷ್ಟು ಗಟ್ಟಿಯಾಗಿ ಓದುಗನ ಮನದಲ್ಲಿ ಅಚ್ಚೊತ್ತಿ ಬಿಡುತ್ತಾನೆ. ಆತನ ಕುರಿತು ಲಭ್ಯವಿರುವ ಮಾಹಿತಿಗಳ ಪ್ರಕಾರ ಆತನಿಗೆ ಖೋಜಾ ನಸ್ರುದ್ದೀನ್ ಎಂಬ ಹೆಸರೂ ಇದೆ.
ಸೋವಿಯತ್ ರಶ್ಯದಿಂದ ವಿಭಜನೆಗೊಂಡು ಹುಟ್ಟಿಕೊಂಡ ಹಲವು ದೇಶಗಳಲ್ಲಿ ಒಂದಾದ ಈಗಿನ ಉಝ್ಬೆಕಿಸ್ತಾನದ ಬುಖಾರಾ ಆತನ ಹುಟ್ಟೂರು. ಆದರೆ ಆತನೊಬ್ಬ ಪ್ರಸಿದ್ಧ ಅಲೆಮಾರಿ. ಆತ ಯಾವುದೇ ಒಂದು ನಿರ್ದಿಷ್ಟ ಊರಿಗೆ ಸೀಮಿತಗೊಂಡವನಲ್ಲ.
ಆತ ಮಧ್ಯ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ತಿರುಗಾಡುತ್ತಾ ಅಲ್ಲೆಲ್ಲಾ ಜನಪೀಡಕ ಪ್ರಭುತ್ವದ ವಿರುದ್ಧ ಯುದ್ಧ ಸಾರಿ ಏಕಾಂಗಿಯಾಗಿ ಹೋರಾಡಿ ತನ್ನ ಚತುರಬುದ್ಧಿಯ ಮೂಲಕ ಗೆಲುವು ಸಾಧಿಸಿದವನು. ಆತ ಹೋದಲ್ಲೆಲ್ಲಾ ತನ್ನ ಬಂಡುಕೋರ ಸ್ವಭಾವವನ್ನು ಪ್ರದರ್ಶಿಸಿ ನೊಂದವರನ್ನು, ಶೋಷಿತರನ್ನು ಬಂಡಾಯವೆಬ್ಬಿಸಿದ.
ಮೂಲತಃ ಮುಲ್ಲಾ ನಾಸಿರುದ್ದೀನ್ ಎಂದರೆ ಉಳ್ಳವರ, ಅರಸೊತ್ತಗೆಯ ಪರಮ ಶತ್ರು. ನೊಂದವರ, ತುಳಿತಕ್ಕೊಳಗಾದವರ, ಬಡವರ ಕಣ್ಮಣಿ. ಮಧ್ಯ ಏಷ್ಯಾದಲ್ಲೆಲ್ಲಾ ಆತನೊಬ್ಬ ಜಾನಪದ ಹೀರೋ. ಆತನ ಕುರಿತು ಹುಟ್ಟಿಕೊಂಡ ಕತೆಗಳು ಅಸಂಖ್ಯ. ಆತ ಸಿದ್ಧಾಂತಗಳ ಬೇಲಿಯಿಲ್ಲದ ಕಮ್ಯುನಿಸ್ಟ್.
ಇನ್ನೊಂದರ್ಥದಲ್ಲಿ ಆತ ಇಸ್ಲಾಮೀ ಭಕ್ತಿಪಂಥವೆಂದೇ ಹೇಳಲಾಗುವ ಸೂಫಿಸಂನ ತತ್ವಜ್ಞಾನಿ. ಮೌಲಾನಾ ಜಲಾಲುದ್ದೀನ್ ರೂಮಿಯಂತಹವರು ಗಂಭೀರವಾದ ಅಧ್ಯಾತ್ಮದ ಜೊತೆ ಜೊತೆಗೆ ಜನಸೇವೆಯ ಮೂಲಕ ಜನಾನುರಾಗಿಗಳಾದ ಸೂಫಿಗಳಾದರೆ, ಮುಲ್ಲಾ ನಾಸಿರುದ್ದೀನ್ ತನ್ನ ಹಾಸ್ಯ ಸ್ವಭಾವ ಮತ್ತು ಚತುರ ಬುದ್ಧಿಯಿಂದ ಉಳ್ಳವರನ್ನು ಸದೆಬಡಿಯುತ್ತಾ ಜನಮಾನಸದಲ್ಲಿ ವಿಶೇಷ ಸ್ಥಾನಮಾನ ಗಿಟ್ಟಿಸಿಕೊಂಡ ತೆಳು ಅಧ್ಯಾತ್ಮದ ಸೂಫಿ.
ಆತನ ಕುರಿತ ಕತೆಗಳನ್ನು ಓದುವಾಗ ಆತ ನಮಗೆ ಚಾರ್ಲಿ ಚಾಪ್ಲಿನ್‌ನಂತಹ ಹಾಸ್ಯಗಾರನಂತೆ ಕಾಣುತ್ತಾನೆ. ಚಾರ್ಲಿ ಚಾಪ್ಲಿನ್ ತನ್ನ ಹಾಸ್ಯ ಪಾತ್ರಗಳ ಮೂಲಕ ವ್ಯವಸ್ಥೆಯ ಕ್ರೌರ್ಯವನ್ನು, ನೀಚತೆಯನ್ನು ಅಣಕಿಸುತ್ತಾನೆ, ಹಸಿವನ್ನು ಮನೋಜ್ಞವಾಗಿ ನಟಿಸಿ ತೋರಿಸುತ್ತಾನೆ. ತನ್ನ ದಿ ಡಿಕ್ಟೇಟರ್ ಎಂಬ ಸಿನೆಮಾದಲ್ಲಂತೂ ಸರ್ವಾಧಿಕಾರಿ, ನಾಝಿ ಹಿಟ್ಲರ್‌ನನ್ನೇ ವ್ಯಂಗ್ಯ ಮಾಡುತ್ತಾನೆ. ಇವುಗಳನ್ನೆಲ್ಲಾ ಮುಲ್ಲಾ ನಾಸಿರುದ್ದೀನ್ ತನ್ನ ವಾಸ್ತವ ಬದುಕಿನಲ್ಲೇ ಮಾಡಿದ್ದ.
ಮುಲ್ಲಾ ನಾಸಿರುದ್ದೀನ್‌ನನ್ನು ಇನ್ನೊಂದು ದೃಷ್ಟಿಕೋನದಲ್ಲಿ ನೋಡುವಾಗ ಆತ ನಮಗೆ ಇಂಗ್ಲಿಷ್ ಸಾಹಿತ್ಯದ ಪ್ರಸಿದ್ಧ ಹೀರೋ ಪಾತ್ರವಾದ ರಾಬಿನ್ ಹುಡ್‌ನಂತೆಯೂ ಕಾಣುತ್ತಾನೆ. ರಾಬಿನ್ ಹುಡ್‌ನಂತೆಯೇ ಮುಲ್ಲಾ ನಾಸಿರುದ್ದೀನ್ ಅರಸೊತ್ತಗೆಯ ಅಂಧಾ ಕಾನೂನನ್ನು ಮುರಿಯುತ್ತಾನೆ.
ಉಳ್ಳವರಿಂದ ಕಿತ್ತು ಬಡವರ ಹಸಿವು ನೀಗಿಸುತ್ತಾನೆ. ಒಟ್ಟಿನಲ್ಲಿ ಆತನ ಪಾತ್ರವು ಜಾಗತಿಕ ಸಾಹಿತ್ಯದಲ್ಲಿ ಗಿಟ್ಟಿಸಿಕೊಂಡ ಸ್ಥಾನವು ಎಷ್ಟು ಶಕ್ತಿಯುತವಾದುದೆಂದರೆ ಅಂತಹ ಇನ್ನೊಂದು ಪಾತ್ರವನ್ನು ಸಾಹಿತ್ಯ ಜಗತ್ತು ಮತ್ತೆಂದೂ ಸೃಷ್ಟಿಸಲಾಗದೇನೋ....?
ಮುಲ್ಲಾ ನಾಸಿರುದ್ದೀನನ ಕೆಲವು ಬಿಡಿಬಿಡಿ ಕತೆಗಳನ್ನು ಕನ್ನಡ ಸಾಹಿತ್ಯದಲ್ಲಿ ಕಟ್ಟುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಾ ಬಂದಿರುವುದು ಶ್ಲಾಘನೀಯ. ಆದರೆ ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಅದು ಹಳಿತಪ್ಪಿ ಪೋಲಿ ಜೋಕ್‌ಗಳ ಮಟ್ಟಕ್ಕಿಳಿಯುತ್ತಿರುವುದು ವಿಷಾದನೀಯ.
ಕನ್ನಡ ಸಾಹಿತ್ಯದ ಕೆಲವು ಜರ್ನಲ್‌ಗಳಲ್ಲಿ ಹೆಸರಾಂತ ಸಾಹಿತಿಗಳು, ಅನುವಾದಕರು ಮುಲ್ಲಾ ನಾಸಿರುದ್ದೀನ್‌ನನ್ನು ಕನ್ನಡೀಕರಿಸುವ ನೆಪದಲ್ಲಿ ಆತನ ಪಾತ್ರವನ್ನು ಅಕ್ಷರಶಃ ಕೊಲೆ ಮಾಡುತ್ತಾ ಬಂದಿದ್ದಾರೆ.
ಪಡ್ಡೆ ಹುಡುಗರ ಪೋಲಿ ಜೋಕುಗಳ ಪಾತ್ರವಾಗಿ ಮುಲ್ಲಾ ನಾಸಿರುದ್ದೀನನ್ನು ನಿರೂಪಿಸುವುದು, ಗೆಳೆಯನ ಹೆಂಡತಿಯನ್ನು ಚತುರ ಬುದ್ಧಿ ಉಪಯೋಗಿಸಿ ವ್ಯಭಿಚರಿಸುವುದು, ಹೆಂಡದ ಅಮಲಿನಲ್ಲಿ ಮಾತನಾಡುವುದು, ಮನೆಗಳ ಸೂರು ಒಡೆದು ಕಳ್ಳತನ ಮಾಡುವುದು, ಹೆಂಡತಿಯನ್ನು ಚತುರ ಬುದ್ಧಿಯಿಂದ ತವರಿಗಟ್ಟುವುದು, ಚತುರ ಬುದ್ಧಿಯಿಂದ ಮಾರುಕಟ್ಟೆಯಲ್ಲಿ ಮೋಸಮಾಡುವುದು. ಹೀಗೆ ಎಂತೆಂತದೋ ಕಳ್ಳ, ವ್ಯಭಿಚಾರಿ, ಮೋಸಗಾರ, ಕುಡುಕ, ಪತ್ನಿಪೀಡಕ ಪಾತ್ರದಲ್ಲಿ ಓರ್ವ ಜನಪದ ಹೀರೋನನ್ನು ನಿರೂಪಿಸುವುದು ಎಷ್ಟು ಸಮಂಜಸ? ಇದನ್ನೆಲ್ಲಾ ಮಾಡುತ್ತಿರುವುದು ಯಾವುದೋ ಅಬ್ಬೇಪಾರಿ ಲೇಖಕನಲ್ಲ, ಇವನ್ನೆಲ್ಲಾ ಪ್ರಕಟಿಸುವುದು ಯಾವುದೋ ಕೀಳಭಿರುಚಿಯ ಜೋಕ್ ಪುಸ್ತಕಗಳಲ್ಲ ಎನ್ನುವುದು ಬೇಸರದ ಸಂಗತಿ.
ಇಂತಹದ್ದನ್ನೆಲ್ಲಾ ಒಬ್ಬ ಪ್ರಾರಂಭಿಸಿದರೆ ಸಾಕು ಅವು ಸಮೂಹ ಸನ್ನಿಯಂತೆ ವೇಗವಾಗಿ ಹರಡಿಬಿಡುತ್ತದೆ. ಬರೆಯಲು ವಸ್ತು ಇಲ್ಲದವರೆಲ್ಲಾ ಮುಂದೆ ಇಂತಹದ್ದೇ ಕೆಲಸಕ್ಕಿಳಿದು ಬಿಡುವ ಅಪಾಯವಿದೆ.
ನಮ್ಮ ಕರಾವಳಿ ಕರ್ನಾಟಕದಲ್ಲಂತೂ ಸಜ್ಜನರಿಗೆ ಇಂತಹ ಕೀಳಭಿರುಚಿಯ ಕತೆ ಕಟ್ಟುವ ಒಂದು ನೀಚ ಪರಂಪರೆಯೇ ಇದೆ. ಉದಾ: ರಾಮಪ್ಪ ಪೂಜಾರಿಯೆಂಬ ಓರ್ವ ಅಪ್ಪಟ ಮಾನವತಾವಾದಿಗೆ ಹುಂಬ, ಮೂರ್ಖನ ಪಾತ್ರ ಕಟ್ಟಿ ಹಸಿ ಹಸಿ ಸುಳ್ಳುಗಳನ್ನು ಪೋಣಿಸಿ ರಾಂಪನ ಜೋಕುಗಳೆಂದು ಹರಡಿ ಬಿಡಲಾಗಿತ್ತು.
ಅದೆಷ್ಟು ಅತಿರೇಕಕ್ಕೆ ತಲುಪಿತ್ತೆಂದರೆ ‘ರಾಂಪನ ಜೋಕುಗಳು’ ಎಂಬ ಚಿಕ್ಕ ಚಿಕ್ಕ ಸರಣಿ ಪುಸ್ತಕಗಳನ್ನೇ ಪ್ರಕಟಿಸಿ ಮಾರುಕಟ್ಟೆಗೆ ಬಿಡಲಾಗಿತ್ತು. ದುರದೃಷ್ಟವೇನೆಂದರೆ ಅವುಗಳು ಒಂದು ಕಾಲದಲ್ಲಿ ಬಿಸಿ ಬಿಸಿ ರೊಟ್ಟಿಯಂತೆ ಬಿಕರಿಯಾಗುತ್ತಿತ್ತು.
ರಾಮಪ್ಪ ಪೂಜಾರಿ ಬಡವರಿಗೆ, ಶ್ರಮಿಕರಿಗೆ, ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಬೆಲೆಗೆ ಹೊಟ್ಟೆ ತುಂಬಾ ಊಟ (ಫುಲ್ ಊಟ) ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿ ಹೊಟೇಲ್ ಉದ್ಯಮದಲ್ಲಿ ಮಾನವೀಯತೆಯ ಪರಂಪರೆಯೊಂದಕ್ಕೆ ನಾಂದಿ ಹಾಡಿದ್ದರು. ಇದನ್ನು ಸಹಿಸಲಾಗದ ಪಟ್ಟ ಭದ್ರ ಶಕ್ತಿಗಳು ರಾಮಪ್ಪ ಪೂಜಾರಿಯ ಹೆಸರಲ್ಲಿ ಕೀಳಭಿರುಚಿಯ ಹಾಸ್ಯಗಳನ್ನು ಸೃಷ್ಟಿಸಿದರು.
ಅದನ್ನು ರಾಮಪ್ಪರಿಂದ ಉಪಕೃತರಾದವರ, ಆತನ ಜಾತಿ ಬಂಧುಗಳ ಬಾಯಲ್ಲೇ ಹರಿಯಬಿಟ್ಟರು. ಇದೀಗ ಕನ್ನಡ ಸಾಹಿತ್ಯದಲ್ಲೂ ಅಂತಹದ್ದೊಂದು ಕೆಟ್ಟ ಪರಂಪರೆ ಶುರುವಾಗಿದೆ.
ಯಾವ ವರ್ಗದ ಪರ ಮುಲ್ಲಾ ನಾಸಿರುದ್ದೀನ್ ಹೋರಾಡಿದನೋ, ಅದೇ ವರ್ಗದ ಪರ ಕಾಳಜಿ ತೋರಿಸುವವರು ಎನ್ನುವ ಹಣೆಪಟ್ಟಿ ಹೊತ್ತವರು ತಾವು ಮಾಡುತ್ತಿರುವುದು ತಪ್ಪು ಎಂಬ ಕಿಂಚಿತ್ ಪ್ರಜ್ಞೆಯೂ ಇಲ್ಲದೆ ಮುಲ್ಲಾ ನಾಸಿರುದ್ದೀನ್ ಹೆಸರಲ್ಲಿ ಕೀಳಭಿರುಚಿಯ ಚತುರ ಪ್ರಸಂಗಗಳನ್ನು ಸಾಹಿತ್ಯದ ನೆಪದಲ್ಲಿ ಸೃಷ್ಟಿಸುತ್ತಿದ್ದಾರೆ.
ಮುಲ್ಲಾ ನಾಸಿರುದ್ದೀನ್‌ನನ್ನು ಒಂದೆಡೆ ಸೂಫಿ ತತ್ವಜ್ಞಾನಿ ಎನ್ನುತ್ತಾರೆ. ಮತ್ತೊಂದೆಡೆ ಹಾಗೆಂದವರೇ ಸೂಫಿಸಂಗೆ ತದ್ವಿರುದ್ಧವಾದ ಮೋಸ, ದಗಲ್ಬಾಜಿ, ವ್ಯಭಿಚಾರ, ಕಳ್ಳತನ, ಕೆಡುಕು ಮುಂತಾದ ವಸ್ತುಗಳನ್ನಿಟ್ಟುಕೊಂಡು ಮುಲ್ಲಾ ನಾಸಿರುದ್ದೀನನ ಕತೆಗಳನ್ನು ಮರುನಿರೂಪಿಸುತ್ತಾರೆ.
ನಾನು (ಲೇಖಕ) ಮುಲ್ಲಾ ನಾಸಿರುದ್ದೀನನ ಬಗ್ಗೆ ಮತ್ತು ಆತನ ಕತೆಗಳನ್ನು ಓದಿದ್ದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ. ನನಗೆ ಅಲ್ಲೆಲ್ಲೂ (ನನ್ನ ಓದಿನ ಪರಿಮಿತಿಯಲ್ಲಿ) ಆತನ ಕಾಲದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಆತನ ಕಾಲದ ಆಡಳಿತ ವ್ಯವಸ್ಥೆ, ಸಾರಿಗೆ ಸಂಪರ್ಕ, ಕರೆನ್ಸಿ, ವ್ಯಾಪಾರ ಪದ್ಧತಿ ಇತ್ಯಾದಿಗಳ ಬಗ್ಗೆ ಸಿಗುವ ಮಾಹಿತಿಗಳು ಆತ ಬದುಕಿದ್ದ ಕಾಲ ಕನಿಷ್ಠ ಇನ್ನೂರು ವರ್ಷಗಳ ಹಿಂದೆ ಎಂಬುವುದಕ್ಕೆ ಪುರಾವೆ ಒದಗಿಸುತ್ತದೆ.
ಬಸ್ಸು, ಕಾರು, ವಿಮಾನ, ಆಧುನಿಕ ಬಾರ್, ವಿದ್ಯುತ್, ಮೊಬೈಲ್, ದೂರವಾಣಿ, ಬ್ಯಾಂಕ್, ಸಿನೆಮಾ ಥಿಯೇಟರ್ ಇತ್ಯಾದಿಗಳನ್ನೆಲ್ಲಾ ಆತನ ಕತೆಗಳಲ್ಲಿ ನಿರೂಪಿಸುವಾಗ ಅವುಗಳೆಲ್ಲಾ ಅಪ್ಪಟ ಸುಳ್ಳು ಮತ್ತು ಹೊಂದಿಕೆಯಾಗದ ಕಲ್ಪನೆಗಳು ಎಂಬುದು ಎಂತಹವನ ಅರಿವಿಗೂ ಬರುತ್ತದೆ.
ಆತನ ಕತೆಗಳನ್ನು ಬರೆಯುವವರು ಯಾರೂ ಅವುಗಳು ಸತ್ಯ ಕತೆಗಳೆಂದು ದಾಖಲಿಸಿಲ್ಲ ನಿಜ, ಅವೆಲ್ಲಾ ಕಾಲ್ಪನಿಕ ಪ್ರಸಂಗಗಳೆಂದೇ ನಿರೂಪಿಸಿದ್ದಾರೆ. ಅಂತಹ ಕಾಲ್ಪನಿಕ ಪ್ರಸಂಗಗಳಿಗೆಲ್ಲಾ ಆತನ ಹೆಸರನ್ನೇ ಯಾಕೆ ಜೋಡಿಸಬೇಕು? ಆತನ ಹೆಸರಲ್ಲಿ ಕತೆ ಕಟ್ಟುವವರೆಲ್ಲಾ ಮೊಟ್ಟ ಮೊದಲು ಆತನ ವ್ಯಕ್ತಿತ್ವ ಮತ್ತು ಹೋರಾಟದ ಕುರಿತಂತೆ ಸ್ವಲ್ಪವಾದರೂ ಅಧ್ಯಯನ ಮಾಡಬೇಕು ಮತ್ತು ಇತ್ತೀಚಿನ ವರ್ಷಗಳಿಂದಷ್ಟೇ ಪ್ರಾರಂಭವಾದ ಸಾಹಿತ್ಯದ ಹೆಸರಿನ ಕೆಟ್ಟ ಪರಂಪರೆಯನ್ನು ಕೂಡಲೇ ನಿಲ್ಲಿಸಬೇಕು.
ಇಂತಹ ಅಗ್ಗದ ಜನಪ್ರಿಯತೆ ಬಯಸಿ ಸುಳ್ಳಿನ ಕಂತೆ ಪೋಣಿಸುವುದು ಪ್ರಜ್ಞಾವಂತ ಲೇಖಕರಿಗೆ ಭೂಷಣವಲ್ಲ.