‘ಡಿಮಾನಿಟೈಜೇಶನ್’ನ ಹೊರೆಯೆಷ್ಟು?
ಮಂತ್ರಕ್ಕಿಂತ ಉಗುಳೇ ಜಾಸ್ತಿ ಆದದ್ದು, ತಲೆಗಿಂತ ಮುಂಡಾಸೇ ಭಾರ ಆದದ್ದು... ಹೀಗೆ ಹತ್ತಾರು ಗಾದೆಮಾತುಗಳಿವೆ ಇಂತಹದೊಂದು ಸ್ಥಿತಿಯ ಬಗ್ಗೆ. 8/11ರ ಬಳಿಕ ಅದರ ನಿರೀಕ್ಷಿತ ಫಲಿತಾಂಶ ಮತ್ತು ಅದಕ್ಕೆ ಮಾಡಲಾಗಿರುವ ಖರ್ಚುಗಳನ್ನು ಹೋಲಿಸಿ ನೋಡುವುದಕ್ಕೆ ಇದು ಸಕಾಲ. ಏಕೆಂದರೆ, ಪ್ರಧಾನಿ ಹೇಳಿರುವ 50 ದಿನಗಳ ವಿಂಡೋ ಮುಕ್ತಾಯದ ಹಂತದಲ್ಲಿದೆ.
ಬರಿಯ ಡಿಮಾನಿಟೈಜೇಶನ್ (ನೋಟು ರದ್ದತಿ) ಭೂಕಂಪನಕ್ಕೆ ತಗುಲಿದ ವೆಚ್ಚದ್ದು ಒಂದು ತೂಕವಾದರೆ, ಅದರ ಪಶ್ಚಾತ್ಕಂಪನಗಳಿಂದ ಆಗಿರುವ/ಆಗಲಿರುವ ವೆಚ್ಚಗಳದ್ದೇ ಇನ್ನೊಂದು ತೂಕ. ಕೊನೆಯಲ್ಲಿ ಇದು ಬೆಟ್ಟ ಅಗೆದು ಇಲಿಯೂ ಸಿಗದಂತಹ ಒಂದು ಸ್ಥಿತಿಗೆ ತಲುಪುವ ಹಾದಿಯಲ್ಲಿ ಇರುವಂತೆ ಕಾಣಿಸತೊಡಗಿದೆ.
ರೂ. 2000ದ ಒಂದು ನೋಟು ಮುದ್ರಣಕ್ಕೆ 3.54ರೂ. ಮತ್ತು 500ರ ಒಂದು ನೋಟು ಮುದ್ರಣಕ್ಕೆ 3.09ರೂ ವೆಚ್ಚ ಬೀಳುತ್ತದೆಂದು ಸರಕಾರ ಆರ್‌ಟಿಐ ಅರ್ಜಿಯೊಂದಕ್ಕೆ ಮೊನ್ನೆ ಉತ್ತರಿಸಿದೆ. ರಿಸರ್ವ್ ಬ್ಯಾಂಕು ನೋಟು ರದ್ದತಿ ಮಾಡಿ ಹೊರತೆಗೆದ 140 ಲಕ್ಷ ಕೋಟಿ (14 ಟ್ರಿಲಿಯನ್) ರೂಪಾಯಿಗಳನ್ನು ಮತ್ತೆ ಅದೇ ದಾಮಾಶಯದಲ್ಲಿ ಚಲಾವಣೆಗೆ ತರಲು ಕೇವಲ ಮುದ್ರಣ ವೆಚ್ಚ ಅಂದಾಜು 15,000 ಕೋಟಿ ರೂಪಾಯಿಗಳೆಂದು ಮತ್ತು ಮುದ್ರಿತ ಕರೆನ್ಸಿಗಳ ಸಾಗಾಟ, ವಿತರಣೆಗಳಿಗೆ ಎಲ್ಲ ಒಟ್ಟು 16,800 ಕೋಟಿ ರೂಪಾಯಿಗಳ ವೆಚ್ಚ ತಗಲುತ್ತದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಇಐಉ) ಅಂದಾಜು ಮಾಡಿದೆ.
ಇನ್ನೊಂದೆಡೆ ಬ್ಯಾಂಕುಗಳು ದೇಶದೆಲ್ಲೆಡೆ ತಮ್ಮ ಅಂದಾಜು 1,37,000 ಶಾಖೆಗಳಲ್ಲಿ 12.3 ಲಕ್ಷ ಸಿಬ್ಬಂದಿಯನ್ನು ಬಳಸಿಕೊಂಡು ರದ್ದಾದ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ವಿನಿಮಯ ಮಾಡಲು ಈ 50 ದಿನಗಳ ವಿಂಡೋದೊಳಗೆ ತಗುಲುವ ವೆಚ್ಚ (50 ದಿನಗಳಿಂದ ಮುಂದೆ ಈ ವೆಚ್ಚವೂ ಹೆಚ್ಚಲಿದೆ), ದೇಶದೊಳಗಿರುವ 2,02,801 ಎಟಿಎಂ ಯಂತ್ರಗಳನ್ನು ಮರು ಕ್ಯಾಲಿಬ್ರೇಟ್ ಮಾಡುವ ವೆಚ್ಚ ಹಾಗೂ ಅಂಚೆ ಕಚೇರಿಗಳ ಮೂಲಕ ಹಣ ವಿನಿಮಯ ಮಾಡಿಕೊಂಡ ವೆಚ್ಚ ಸೇರಿ ಒಟ್ಟು ಬ್ಯಾಂಕುಗಳಿಗೆ ಡಿಮಾನಿಟೈಜೇಶನ್‌ನ ಮೊದಲ 50 ದಿನಗಳ ವೆಚ್ಚ 35,140 ಕೋಟಿ ರೂಪಾಯಿಗಳು.
ಮೊದಲ 50 ದಿನಗಳಲ್ಲಿ ನೋಟು ವಿನಿಮಯಕ್ಕಾಗಿ ಸಾರ್ವಜನಿಕರು ತಮ್ಮ ಬೇರೆಲ್ಲ ಕೆಲಸ, ಉದ್ಯೋಗಗಳನ್ನು ಬಿಟ್ಟು ಬ್ಯಾಂಕಿನಲ್ಲಿ ಸರತಿ ಸಾಲು ನಿಲ್ಲುವುದರಿಂದ ಅಂದಾಜು 45.8 ಕೋಟಿ ಮಾನವ ದಿನಗಳು ನಷ್ಟ ಆಗಲಿದ್ದು, ಅದರಿಂದ ಆಗಲಿರುವ ಉತ್ಪಾದಕತೆಯ ನಷ್ಟ ಸರಿಸುಮಾರು 1500 ಕೋಟಿ ರೂಪಾಯಿಗಳೆಂದು ಇಐಉ ಅಂದಾಜಿಸಿದೆ.
ದಿನಬಳಕೆಯ ವಸ್ತುಗಳ ರೈತರು, ಸಾಗಾಟಗಾರರು, ಸರಬರಾಜು ಗಾರರು, ಉತ್ಪಾದಕರು, ಮಾರಾಟಗಾರರ ಮತ್ತು ಗ್ರಾಹಕರ ನಡುವೆ ಮೊದಲ 50 ದಿನಗಳಲ್ಲಿ, ಹಣ ಚಲಾವಣೆಯ ಪ್ರಮಾಣ ಕಡಿಮೆ ಆಗಿರುವುದರಿಂದ ವ್ಯವಹಾರದ ಪ್ರಮಾಣ ಕುಸಿದು, ಆಗುವ ಆರ್ಥಿಕ ನಷ್ಟವನ್ನು ವಿವಿಧ ವಿಶ್ಲೇಷಣೆಗಳನ್ನಾಧರಿಸಿ, ಸುಮಾರು 61,500 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಇನ್ನು ಕೈಗಾರಿಕೆ, ಆಟೊಮೊಬೈಲ್, ಆರೋಗ್ಯ ಮತ್ತಿತರ ಹಲವು ರಂಗಗಳಲ್ಲಿ ಆಗುವ ವೆಚ್ಚಗಳನ್ನೆಲ್ಲ ಇನ್ನಷ್ಟೇ ವಿಶ್ಲೇಷಿಸಬೇಕಿದ್ದು, ಜೊತೆಗೆ ಅಸಂಘಟಿತ ವಲಯದ ಉದ್ದಿಮೆಗಳು, ಕಾರ್ಮಿಕರು ಮತ್ತಿತರ ಅಂಶಗಳನ್ನೂ ಪರಿಗಣಿಸಬೇಕಿದೆ. ಅದನ್ನೆಲ್ಲ ಸೇರಿಸಿದರೆ, ದೊರಕಲಿರುವ ವೆಚ್ಚ ಯಾರನ್ನೂ ಹೌಹಾರುವಂತೆ ಮಾಡೀತು.
ಈಗ ವಿಶ್ಲೇಷಣೆ ಆಗಿರುವ ರಂಗಗಳಲ್ಲಿ ನೋಟು ರದ್ದತಿಯ ಮೊದಲ 50 ದಿನಗಳ ಒಟ್ಟು ನಿರೀಕ್ಷಿತ ವೆಚ್ಚ: 1,28,440 ಕೋಟಿ ರೂಪಾಯಿಗಳು!
ನಡುವೆ ಸರಕಾರ ಏಕಾಏಕಿ ‘‘ಕ್ಯಾಶ್ ಲೆಸ್’’ ಮಾದರಿಯನ್ನು ಅನುಸರಿಸಲು ಜನರನ್ನು ಒತ್ತಾಯ ಮಾಡತೊಡಗಿದೆ. ಇದಕ್ಕೆ ಅಗತ್ಯ ಇರುವ ಪಿಒಎಸ್ ಉಪಕರಣಗಳು, ಪೇಮೆಂಟ್ ಬ್ಯಾಂಕಿಂಗ್ ಮತ್ತದರ ಸುರಕ್ಷೆ, ಕಾರ್ಯಕ್ಷಮತೆಗಳನ್ನು ಹೆಚ್ಚಿಸುವ ಕೆಲಸಗಳಿಗೆ, ಜನರನ್ನು ಈ ಮಾದರಿಯ ವ್ಯವಹಾರಕ್ಕೆ ಸಿದ್ಧಪಡಿಸಲು ತಗುಲುವ ವೆಚ್ಚಗಳೂ ಸೇರಿದರೆ ಒಟ್ಟು ಹೊರೆಯನ್ನು ಊಹಿಸಲೂ ಸಾಧ್ಯವಾಗದು.