ಅಮೆರಿಕದಲ್ಲೂ ‘ಮಣ್ಣಿನ ಮಕ್ಕಳ’ ಕೂಗು?
ಬಹುಜನರು ನಿರೀಕ್ಷಿಸಿದಂತೆ, ಐಟಿ ಸೆಕ್ಟರ್ ಭಯಪಟ್ಟಂತೆ, ಡೋನಾಲ್ಡ್ ಟ್ರಂಪ್, ಅಮೆರಿಕದ ‘ಮಣ್ಣಿನ ಮಕ್ಕಳ’ ಕೂಗಿಗೆ ಅಧಿಕೃತವಾಗಿ ಧ್ವನಿಗೂಡಿಸಿದ್ದಾರೆ. ಈ ನಿಟ್ಟನಲ್ಲಿ ಅವರ ಮೊದಲ ಅಧಿಕೃತ ಹೇಳಿಕೆ ಹೊರಬಿದ್ದಿದ್ದು, ಭಾರತದ ಐಟಿ ಸೆಕ್ಟರ್‌ನಲ್ಲಿ ಶಾಕ್ ಮತ್ತು ಸಂಚಲನ ಮೂಡುತ್ತಿದೆ. ಅಮೆರಿಕದ ಐವೋವಾದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ H-1B ವೀಸಾಧಾರಿಗಳು ಅಮೆರಿಕನ್ ಸಿಬ್ಬಂದಿಯ ಉದ್ಯೋಗಳನ್ನು ಲಾಗೌಟ್ ಮಾಡದಂತೆ ಅವರ ಉದ್ಯೋಗಗಳನ್ನು ಕಸಿಯದಂತೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. H-1Bವೀಸಾಗಳಿಂದ ಉದ್ಯೋಗ ಕಳೆದುಕೊಳ್ಳುವ ಕೊನೆಯ ಅಮೆರಿಕನ್ ಸಿಬ್ಬಂದಿವರೆಗೂ ಹೋರಾಡುವುದಾಗಿ ಹೇಳಿದ್ದಾರೆ. ಅಮೆರಿಕದ ಐಟಿ ಸೆಕ್ಟರ್‌ನಲ್ಲಿ ಭಾರತೀಯ ಟೆಕ್ಕಿಗಳ ಸಂಖ್ಯೆ ಗಮನಾರ್ಹವಾಗಿದ್ದು, ಟ್ರಂಪ್‌ರ ಘೋಷಣೆ ಭಾರತೀಯರಲ್ಲಿ ಮತ್ತು ಭಾರತದಲ್ಲಿ ಟೆಕ್ ಕಂಪೆನಿಗಳ ಅಪೆಕ್ಸ ಸಂಸ್ಥೆ Nassacomನಲ್ಲಿ ನಡುಕ ಉಂಟು ಮಾಡುವುದರಲ್ಲಿ ಸಂದೇಹವಿಲ್ಲ. ಇನ್ಫೋಸಿಸ್ ಮತ್ತು ಟಿಸಿಎಸ್, ಈ ಎರಡು ಕಂಪೆನಿಗಳೇ 2005 ರಿಂದ 2014ರ ವರೆಗೆ ಸುಮಾರು 86,000 ಸಿಬ್ಬಂದಿಯನ್ನು ಅಮೆರಿಕಕ್ಕೆ ಕಳಿಸಿರಬೇಕಾದರೆ, ಅಮೆರಿಕದಲ್ಲಿ ಇರಬಹುದಾದ ಭಾರತೀಯ ಟೆಕ್ಕಿಗಳ ಸಂಖ್ಯೆಯ ಅಂದಾಜಾಗಬಹುದು. ಬಹುಶಃ ಈ ‘ಸಂಖ್ಯೆ’ ಯೇ ಡೊನಾಲ್ಡ್ ಟ್ರಂಪ್‌ರ ಹೇಳಿಕೆಯ ಹಿಂದಿನ ಪ್ರೇರಕ ಇರಬಹುದು. ಅಮೆರಿಕದ ಡಿಸ್ನ್ನಿ ವರ್ಲ್ಡ್ ಕಂಪೆನಿಯಲ್ಲಿ 250 ಅಮೆರಿಕನ್ ಸಿಬ್ಬಂದಿಯನ್ನು ಮನೆಗೆ ಕಳಿಸಿ ಹೊರಗಿನವರನ್ನು (ಮುಖ್ಯವಾಗಿ ಭಾರತೀಯರನ್ನು) ಕಡಿಮೆ ಸಂಬಳಕ್ಕೆ ನೇಮಕ ಮಾಡಿಕೊಂಡ ಪ್ರಕರಣ ಮತ್ತು ಈ ತಾರತಮ್ಯದ ವಿರುದ್ಧ ಇಬ್ಬರು ಅಮೆರಿಕನ್ ಸಿಬ್ಬಂದಿ ದಾಖಲಿಸಿದ ಫೆಡರಲ್ ಲಾ ಸ್ಯೂಟ್ ಬಗ್ಗೆ ಅವರು ಉಲ್ಲೇಖಿಸುತ್ತಿದ್ದರು. ಭಾರತದ ಎರಡು ಪ್ರಖ್ಯಾತ ಐಟಿ ಕಂಪೆನಿಗಳು ಪ್ರಸ್ತುತ ಅಮೆರಿಕದಲ್ಲಿ ಈ ನಿಟ್ಟಿನಲ್ಲಿ class action law suit ಎದುರಿಸುತ್ತಿವೆ.
ಅಮೆರಿಕದಲ್ಲಿ ‘ಮಣ್ಣಿನ ಮಕ್ಕಳ’ ಕೂಗು ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿದ್ದು, ಕಳೆದ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದಲ್ಲಿ ಮಹತ್ವದ ಮತ್ತು ನಿರ್ಣಾಯಕ ಪಾತ್ರ ವಹಿಸಿದೆ ಎಂದು ರಾಜಕೀಯ ವೀಕ್ಷಕರು ವಿಶ್ಲೇಶಿಸಿದ್ದಾರೆ. ಡೋನಾಲ್ಡ್‌ರ ಚುನಾವಣ ಪ್ರಚಾರದಲ್ಲಿ ಹೊರಗುತ್ತಿಗೆ, H-1B ವೀಸಾ ಮತ್ತು ವಲಸೆ ಮತ್ತು ಮೆಕ್ಷಿಕನ್ ಗಡಿಗೆ ಚೀನಾ ಗೋಡೆಯಂಥ ಗೋಡೆ ಕಟ್ಟುವುದು ಪ್ರಮುಖವಾಗಿ ಪ್ರಸ್ತಾಪವಾಗುತ್ತಿತ್ತು. ಚುನಾವಣೆಯ ಕೊನೆಯ ದಿನಗಳಲ್ಲಿ ಅವರು ತಮ್ಮ ನಿಲುವಿನಲ್ಲಿ ಸ್ವಲ್ಪ ಮೃದುತ್ವ ತೋರಿಸಿದ್ದರೂ, ಇದು ಚುನಾವಣೆಯ ತಂತ್ರಗಾರಿಕೆಯಾಗಿತ್ತೇ ವಿನಹ ಅವರ ನಿಲುವು ಬದಲಾದ ಸಂಕೇತವಾಗಿರಲಿಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದರು. ಇದು ಈಗ ಇನ್ನೊಮ್ಮೆ ಪ್ರೂವ್ ಆಗಿದೆ. H-1B ವೀಸಾ ಅರ್ಜಿಯ ಶುಲ್ಕವನ್ನು 375 ಡಾಲರ್ ನಿಂದ 450 ಡಾಲರ್‌ಗೆ ಏರಿಸುವ ಪ್ರಸ್ತಾಪ ಅವರ ಬಳಿ ಇದೆ. ಹಾಗೆಯೇ ವೀಸಾ ಶುಲ್ಕವನ್ನು 4,000ರಿಂದ 4,500 ಡಾಲರ್ ಗೆ ಏರಿಸುವ ಇರಾದೆಯೂ ಅವರಿಗಿದೆ. ಈ ಮೂಲಕ ಅಮೆರಿಕದಲ್ಲಿ ಹೊರಗುತ್ತಿಗೆಯನ್ನು ಒಂದು ರೀತಿಯಲ್ಲಿ ನಿರ್ಬಂಧಿಸುವ ತಂತ್ರಗಾರಿಕೆ ಕಾಣುತ್ತಿದೆ. ಹಾಗೆಯೇ ಸ್ಥಳೀಯ ಉದ್ದಿಮೆಗಳಿಗೆ ಇಂಬು ಕೊಡಲು ಭಾರತದ ನಮ್ಮ ಪ್ರಧಾನಿ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಅಮೆರಿಕದಲ್ಲಿ ಶೇ. 35 ತೆರಿಗೆಯನ್ನು ವಿಧಿಸುವುದಾಗಿಯೂ ಹೇಳಿದ್ದಾರಂತೆ.
ಡೋನಾಲ್ಡ್‌ರ ಹೇಳಿಕೆ ಬಗ್ಗೆ ಭಾರತೀಯ ಐಟಿ ಕಂಪೆನಿಗಳ ಆಧಿಕೃತ ಪ್ರತಿ ಕ್ರಿಯೆ ಇನ್ನೂ ಬರಬೇಕಾಗಿದೆ. ಆದರೆ, ಅವರ ಹೇಳಿಕೆ ಐಟಿ ಕಂಪೆನಿಯಲ್ಲಿ ನಡುಕ ಹುಟ್ಟಿಸಿರುವುದು ನಿಜ ಮತ್ತು ಅಮೆರಿಕವನ್ನು ಖಳನಾಯಕರನ್ನಾಗಿ ಬಿಂಬಿಸುವ ಪ್ರಯತ್ನವೂ ಅಷ್ಟೇ ಅರ್ಥ ಹೀನ. ಯಾವುದೇ ರಾಷ್ಟ್ರವು ತನ್ನ ಜನತೆಯ, ತನ್ನ ದೇಶದ ಹಿತಾಸಕ್ತಿಯನ್ನು ರಕ್ಷಿಸಬೇಕಾದರೆ, ಇಂತಹ ಕ್ರಮಗಳು ಅನಿವಾರ್ಯ. ಡೊನಾಲ್ಡ್ ಮಾಡುತ್ತಿರುವುದೂ ಅದನ್ನೇ. ಈ ದೇಶಕ್ಕೆ ಟೆಕ್ಕಿಗಳು ತರುವ ವಿದೇಶಿ ಹಣ ದೇಶದ ವಿದೇಶಿ ವಿನಿಮಯ ಸಂಗ್ರಹದ ಗಮನಾರ್ಹ ಪ್ರಮಾಣ ಎನ್ನುವುದನ್ನು ಗ್ರಹಿಸಿದಾಗ ಸರಕಾರವೂ ಡೊನಾಲ್ಡ್‌ರ ಈ ನಿಲುವಿನ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿದೆ. ಭಾರತಕ್ಕೆ ಬರುವ ವಿದೇಶಿ ಹಣವು ನಮ್ಮ ಜಿಡಿಪಿಯ ಶೇ. 4 ಇದ್ದು, ಈ ವಿದೇಶಿ ಒಳಹರಿವಿನಲ್ಲಿ ಶೇ. 26 ಟೆಕ್ಕಿಗಳಿಂದ ಬರುತ್ತದೆ ಎನ್ನುವ ಸತ್ಯ ದೇಶದ ಹಣಪಾವತಿಯ ಸಮತೋಲನ ನಿರ್ವಹಿಸುವವರ ನಿದ್ದೆ ಕೆಡಿಸುತ್ತದೆ.
ವಿಶ್ವ ಬ್ಯಾಂಕಿನ ಒಂದು ವರದಿ ಪ್ರಕಾರ ಪ್ರಚಲಿತ ಅನಾವರಣ ವಾಗುತ್ತಿರುವ ಅಟೋಮೇಷನ್ ವ್ಯವಸ್ಥೆ ಭಾರತದಲ್ಲಿ ಶೇ. 69 ಉದ್ಯೋಗ ವನ್ನು ಬಲಿತೆಗೆದುಕೊಳ್ಳುವ ಸಾಧ್ಯತೆ ಇದೆ. ಇದು ಹೆಚ್ಚಾಗಿ ಸಾಫ್ಟ್‌ವೇರ್ ಉದ್ಯೋಗಿಗಳನ್ನೇ ಟಾರ್ಗೆಟ್ ಮಾಡುವುದರಲ್ಲಿ ಸಂಶಯವಿಲ್ಲ. ಐಟಿ ಉದ್ಯಮದ ದಿಗ್ಗಜರೊಬ್ಬರ ಪ್ರಕಾರ ಇನ್ನು 9 ವರ್ಷಗಳಲ್ಲಿ ಅಟೋಮೇಷನ್ 20 ಕೋಟಿ ಯುವ ಭಾರತೀಯರನ್ನು ನಿರುದ್ಯೋಗಿಗಳನ್ನಾಗಿ ಮಾಡಲಿದೆ. ಸುಮಾರು 2ರಿಂದ 2.50 ಲಕ್ಷ ಹೆಚ್ಚುವರಿ ಉದ್ಯೋಗಕ್ಕೆ ಕೆಂಪು ಸಿಗ್ನಲ್ ತೋರಿಸುವುದರೊಂದಿಗೆ, ಇನ್ನು ಹತ್ತು ವರ್ಷದಲ್ಲಿ 2,25,000 ಮಧ್ಯಮ ದರ್ಜೆಯ ಉದ್ಯೋಗಗಳನ್ನು ಕಡಿಮೆಮಾಡಲಿದೆ. ಐಟಿ ಸೆಕ್ಟರ್ ಮೇಲೆ ಅಟೋಮೇಷನ್ ದಾಳಿಯ ಭೀತಿ ಇರುವಾಗಲೇ, ಡೊನಾಲ್ಡ್ ಟ್ರಂಪ್, H-1B ವೀಸಾ ನಿಯಂತ್ರಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಹೊರಗುತ್ತಿಗೆ ವಿಚಾರದಲ್ಲಿ, ಹೊರಗಿನವರನ್ನು, ಮುಖ್ಯವಾಗಿ ಭಾರತೀಯರನ್ನು ಟಾರ್ಗೆಟ್ ಮಾಡುವ ಮೊದಲು, ತಮ್ಮ ದೇಶದವರನ್ನು ಕೈ ಬಿಟ್ಟು, ಉಪೇಕ್ಷಿಸಿ, ನಿರ್ಲಕ್ಷಿಸಿ, ಕಡಿಮೆ ಸಂಬಳಕ್ಕೆ ಹೊರಗಿನವರಿಂದ ದುಡಿಸಿಕೊಳ್ಳುವ ತಮ್ಮ ದೇಶದ ಉದ್ಯೋಗಪತಿಗಳನ್ನು ಪ್ರಶ್ನಿಸಬೇಕು. ನಮ್ಮವರನ್ನು ನಿರ್ಲಕ್ಷಿಸಿ ನಾವು ಅಡಿಕೆ-ಕಾಫಿ ತೋಟದಲ್ಲಿ, ಕಟ್ಟಡಗಳ ನಿರ್ಮಾಣದಲ್ಲಿ, ಮೆಟ್ರೋ ನಿರ್ಮಿಸಲು ಹೊರಗಿನಿಂದ ಬಂದವರನ್ನು ಕಡಿಮೆ ಸಂಬಳ ಸೌಲಭ್ಯಕ್ಕೆ ದುಡಿಸಿಕೊಳ್ಳುತ್ತಿರುವಂತೆಯೇ ಅಮೆರಿಕದ ಉದ್ಯಮಿಗಳ ಲಾಭ ಬಡುಕತನ ಅಲ್ಲಿ ಹೊರಗುತ್ತಿಗೆ ಮತ್ತು ವಲಸೆಯಂಥ ಸಮಸ್ಯೆಗಳನ್ನು ಹುಟ್ಟುಹಾಕಿದ್ದು ಇದಕ್ಕೆ ವಲಸಿಗರನ್ನು ದೂಷಿಸಲಾಗುತ್ತಿದೆ.
ಅದಕ್ಕೂ ಮಿಗಿಲಾಗಿ ‘ಮಣ್ಣಿನ ಮಕ್ಕಳು’ ಅಥವಾ ಪ್ರಾದೇಶಿಕ ಮನೋ ಭಾವನೆ ನಮ್ಮಲ್ಲೇ ತುಂಬಿ ತುಳುಕುತ್ತಿರುವಾಗ, ಡೊನಾಲ್ಡ್ ಟ್ರಂಪ್‌ರ ಧೋರಣೆಯನ್ನು ವಿರೋಧಿಸುವ ನೈತಿಕ ಹಕ್ಕು ನಮ್ಮಲ್ಲಿ ಇದೆಯೇ? ಅಲ್ಲದೆ ಡೊನಾಲ್ಡ್‌ರ ಈ ನಿಲುವಿಗೆ ಅಮೆರಿಕದಲ್ಲಿ ಸಾಕಷ್ಟು ಬೆಂಬಲವಿದೆ ಎನ್ನುವುದು ತುಂಬಾ ಗಮನಾರ್ಹ ಬೆಳವಣಿಗೆ.