ಮೂಡುಬಿದಿರೆ ಪುರಸಭೆಯ ಮಾಜಿ ಅಧ್ಯಕ್ಷ ಮೂಡುಬರ್ಕೆ ಭೋಜ ಕೋಟ್ಯಾನ್
ಮೂಡುಬಿದಿರೆ , ಡಿ.29 : ಇಲ್ಲಿನ ಪುರಸಭೆಯ ಮಾಜಿ ಅಧ್ಯಕ್ಷ, ಒಂಟಿಕಟ್ಟೆ ಮೂಡು ಬರ್ಕೆಯ ಕೃಷಿಕ ಭೋಜಕೋಟ್ಯಾನ್(57) ಗುರುವಾರ ನಿಧನ ಹೊಂದಿದರು.
ಮೂಲತಃ ಕೃಷಿಕರಾಗಿ, ಒಂಟಿಕಟ್ಟೆ ಬ್ರಹ್ಮಶ್ರೀ ಬೈದರ್ಕಳ ಗರಡಿಯ ಹಾಗೂ ಮೂಡುಬರ್ಕೆ ಭಂಡಾರದ ಮನೆಯ ಗುರಿಕಾರರಾಗಿದ್ದ ಅವರು ನಾಲ್ಕು ಅವಧಿಗೆ ಮೂಡುಬಿದಿರೆ ಪುರಸಭಾ ಸದಸ್ಯರಾಗಿ ಜನಪ್ರತಿನಿಧಿಯಾಗಿ ಗುರುತಿಸಿಕೊಂಡವರು. 2008ರಿಂದ 10ರ ಅವಧಿಯಲ್ಲಿ ಎರಡೂವರೆ ವರ್ಷಗಳ ಅವಧಿಗೆ ಪುರಸಭೆಯ 10ನೇ ಅಧ್ಯಕ್ಷರಾಗಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಮೂಡುಬಿದಿರೆಗೊಂದು ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣದ ಗುರಿಯೊಂದಿಗೆ ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಗೋವಾದಲ್ಲಿನ ಮಾದರಿ ಮಾರುಕಟ್ಟೆಯ ಪರಿಶೀಲನೆ ಮತ್ತು ಅಧ್ಯಯನಕ್ಕಾಗಿ ನಿಯೋಗವನ್ನೂ ಅವರು ಕೊಂಡೊಯ್ದಿದ್ದರು. ಘನತ್ಯಾಜ ವಿಲೇವಾರಿಯ ಅಡಚಣೆ ಉಂಟಾದಾಗ ತಮ್ಮ ನಿವೇಶದಲ್ಲೇ ಜಾಗ ಮಾಡಿಕೊಟ್ಟಿದ್ದರು. ಪರಿಸರ ಕಾಳಜಿಯೊಂದಿಗೆ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಅಚ್ಚುಕಟ್ಟಿನ ವ್ಯವಸ್ಥೆಗೆ ತಮ್ಮ ಅವಧಿಯಲ್ಲಿ ಅವರು ಚಾಲನೆ ನೀಡಿದ್ದರು.
ಸ್ನೇಹ ವ್ಯಕ್ತಿತ್ವದವರಾಗಿದ್ದು ಒಂಟಿಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ, ಅಯ್ಯಪ್ಪ ಮಂದಿರ ಜೀರ್ಣೋದ್ಧಾರ ಸಮಿತಿಯಲ್ಲಿ ಅವರು ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.
ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.