ಬೆತ್ತಲೆ ಅರಸನ ರಾಜರಹಸ್ಯ
ಈಚೆಗೆ ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮದ ನಡುವೆ ಅಲ್ಲಿ ನೆರೆದಿದ್ದ ಅನೇಕ ಹೆಣ್ಣು ಮಕ್ಕಳ (ಸ್ತ್ರೀಯರಲ್ಲಿ ಮಹಿಳೆಯರು, ಹುಡುಗಿಯರು, ಎಂದೆಲ್ಲ ವಯಸ್ಸಿಗನುಗುಣವಾಗಿ ವ್ಯತ್ಯಾಸವಿದೆ!) ಗೌರವಕ್ಕೆ ಅಪಚಾರವಾಗುವಂತಹ ಕಿಡಿಗೇಡಿತನ ನಡೆಯಿತು. ಎಂದಿನಂತೆಯೇ ಮಾಧ್ಯಮದವರು ಸಾಕಷ್ಟು ಪ್ರಚಾರ ಮಾಡಿದರು ಮತ್ತು ಪ್ರಚಾರ ಪಡೆದರು. ತಕ್ಷಣ ಕ್ರಮ ಕೈಗೊಳ್ಳಬೇಕಾಗಿದ್ದ ಪೊಲೀಸರು ತಬ್ಬಿಬ್ಬಾದವರಂತೆ ಸುಮ್ಮನಿದ್ದರು. ಎಲ್ಲೆಡೆ ಖಂಡನೆಯಾಯಿತು.
ಈ ಗಲಾಟೆಗೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಜರಗಿಸುವುದರ ಬದಲಾಗಿ ಹೀಗಾಗಲು ಹೆಣ್ಣುಮಕ್ಕಳ ವೇಷಭೂಷಣ ಕಾರಣವೆಂದೋ ನಡುರಾತ್ರಿ ಮೀರಿದ ಅನಂತರವೂ ಹೊಸ ವರ್ಷದ ವಿಜೃಂಭಣೆ ನಡೆದದ್ದು ಕಾರಣವೆಂದೋ, ಬಾರುಗಳು ತೆರೆದಿಟ್ಟದ್ದು ಕಾರಣವೆಂದೋ, ವಿವಿಧ ವಾದಗಳು ಶುರುವಾದವು. ರಾಜಕಾರಣಿಗಳು ಎಷ್ಟೇ ಬುದ್ಧಿವಂತರಾದರೂ ಅವಸರದ ಸಂದರ್ಭದಲ್ಲಿ ತಮ್ಮ ಕಾಲುಬೆರಳನ್ನು ಬಾಯಿಗಿಟ್ಟುಕೊಳ್ಳುತ್ತಾರೆ. ಹಾಗೆಯೇ ನಮ್ಮ ರಾಜ್ಯದ ಗೃಹ ಸಚಿವರು ಈ ಘಟನೆಗೆ ಹೆಣ್ಣುಮಕ್ಕಳ ಮೇಲೆ ಅಪವಾದ ಹೇಳಿ ಸೂಕ್ತ ಕ್ರಮಕ್ಕೆ ನಿರ್ದೇಶಿಸಿದರು. ತಕ್ಷಣ ಮಹಿಳಾ ಆಯೋಗಗಳು ಇದನ್ನು ಗಮನಿಸಿ ಮಂತ್ರಿಗಳ ವೈಯಕ್ತಿಕ ಪ್ರತಿಕ್ರಿಯೆಯ ಕುರಿತು ವಿವರಣೆಯನ್ನು ಅಪೇಕ್ಷಿಸಿದವು. ಮಂತ್ರಿಗಳು ತಾನು ಹೀಗೆ ಹೇಳಲೇ ಇಲ್ಲವೆಂದೂ ಮಾಧ್ಯಮಗಳು ತನ್ನ ಹೇಳಿಕೆಯನ್ನು ತಿರುಚಿವೆಯೆಂದೂ ಹೇಳಿ ಕ್ಷಮೆ ಯಾಚಿಸುವುದನ್ನು ತಪ್ಪಿಸಿಕೊಂಡರು ಮತ್ತು ತಾವು ಕೈಗೊಂಡ ಕಾನೂನು ಕ್ರಮಗಳನ್ನು ಸಮರ್ಥಿಸಿಕೊಂಡರು.
ಘಟನೆ ಇದೀಗ ತೆಳುವಾಗುತ್ತ ಹೋಗುತ್ತಿದೆ. ಜನರು ನಿಧಾನವಾಗಿ ಇನ್ನೊಂದು ಪ್ರಸಂಗದತ್ತ ಮನಸ್ಸನ್ನು ನೀಡುತ್ತಾರೆ; ಗೊಂದಲವೆಬ್ಬಿಸುತ್ತಾರೆ; ಮತ್ತೆ ಇನ್ನೊಂದು; ಮತ್ತೊಂದು. ಸಾರ್ವಜನಿಕರ ಆಸಕ್ತಿ ಮತ್ತು ಉತ್ಸಾಹ ಎಷ್ಟು ಹಿರಿದೋ ಅವರ ನೆನಪು ಅಷ್ಟೇ ಕಿರಿದು. ಹೀಗಾಗಿ ಎಲ್ಲವೂ ಇದ್ದೂ ಏನೂ ಇಲ್ಲವೆನ್ನಿಸುತ್ತದೆ. ಭಾರತೀಯರು ಸಹಿಷ್ಣುಗಳು; ಭಾರತದ ಸಂಸ್ಕೃತಿ ಹಿರಿದು; ಇಡೀ ವಿಶ್ವವು ಕತ್ತಲೆಯ ಕೂಪದಲ್ಲಿದ್ದಾಗ ಭಾರತೀಯರು ರೇಷ್ಮೆ ವಸ್ತ್ರಗಳನ್ನು ಸಂಬಾರ ಜೀನಸುಗಳನ್ನು ಚಿನ್ನಬೆಳ್ಳಿ ವಜ್ರ-ವೈಢೂರ್ಯಗಳನ್ನು ರಫ್ತು ಮಾಡುತ್ತಿದ್ದರಂತೆ ಎಂದು ಭಾರತೀಯರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಹೀಗಾಗಿ ವಿಜ್ಞಾನದಿಂದ ಕ್ರೀಡೆಯ ವರೆಗೆ, ಸಾಹಿತ್ಯ-ಸಂಗೀತದಿಂದ ರಾಜಕಾರಣದ ವರೆಗೆ ಭಾರತೀಯರು ಸಾರ್ವಕಾಲಿಕವಾಗಿ, ಸಾರ್ವತ್ರಿಕವಾಗಿ ಶ್ರೇಷ್ಠರು ಎಂಬ ನಂಬಿಕೆಯನ್ನು ಭಾರತೀಯರು ಇತರರನ್ನು ನಂಬಿಸಿಕೊಂಡೇ ಬಂದಿದ್ದಾರೆ.
ಇಂತಹ ಒಂದು ಅಭಿಮಾನ ಇರಲೇ ಬೇಕು. ಇಲ್ಲದಿದ್ದರೆ ಕೀಳರಿಮೆ ಪ್ರಾಪ್ತವಾಗುತ್ತದೆ. ಕಿಪ್ಲಿಂಗ್ ಇಂಗ್ಲೆಂಡನ್ನು ‘‘ನಿನ್ನೆಲ್ಲ ದೋಷಗಳೊಂದಿಗೂ ನಿನ್ನನ್ನು ಗೌರವಿಸುತ್ತೇನೆ’’ ಎಂದು ಹೇಳಿದ್ದನ್ನು ನೆನಪಿಸಿಕೊಂಡು ಭಾರತೀಯರೂ ತಮ್ಮ ದೇಶದ, ಜನರ ಕೊರತೆಗಳನ್ನು ದೋಷಗಳನ್ನು ಹೇಳಿ ತಮ್ಮನ್ನು ತಾವು ಗೌರವಿಸಿಕೊಂಡರೆ ಅದಕ್ಕೊಂದು ಜಾಗತಿಕ ನ್ಯಾಯ ಲಭ್ಯವಾಗಬಹುದು. ಅದಲ್ಲದೆ ಏನು ಮಾಡಿದರೂ ಹೇಗೆ ಮಾಡಿದರೂ ಅದು ಸರಿಯೆಂಬ ಕುತರ್ಕ ಈ ದೇಶವನ್ನಾಗಲೀ ಈ ದೇಶದ ಜನರನ್ನಾಗಲೀ ಎಲ್ಲಿಗೂ ಒಯ್ಯದು. ಒಬ್ಬ ಮನುಷ್ಯ ಗದ್ದೆಯ ಏರಿಯಲ್ಲಿ ನಿಂತು ಸೊಂಟಕ್ಕೆ ಕೈಗಳನ್ನಿಟ್ಟು ಇದಕ್ಕಿಂತ ಕೆಳಗೂ ನಂದೇ ಮೇಲೂ ನಂದೇ ಎಂದು ಹೇಳಿದಂತಾದೀತು. ನಂಬುವವರು ಕೆಳಗಿನ ಗದ್ದೆಯನ್ನೂ ಮೇಲಿನ ಗದ್ದೆಯನ್ನೂ ನೋಡಿ ಹುಡುಗಿ ಕೊಟ್ಟಾರು.
ಯಥಾರ್ಥ ಗೊತ್ತಿದ್ದವರು ಆತನ ಪೊಳ್ಳುತನ ಮತ್ತು ಪೌರುಷವನ್ನು ನೋಡಿ ನಕ್ಕಾರು. ಸದ್ಯ ಭಾರತದಲ್ಲಿ ಈ ರೀತಿಯ ಸುಳ್ಳುಗಳ ದೊಡ್ಡ ಬೆಳೆಯೇ ಸಿದ್ಧವಾಗಿದೆ. ನಮಗೆ ಬೇಕಾದ್ದನ್ನು ನಾವು ಹೇಗೆ ಬೇಕಾದರೂ ನಂಬಿಸಬಲ್ಲೆವು ಎಂಬ ಹುಂಬತನದ ವಿಶ್ವಾಸ ನಮಗೆ ಬಂದಿದೆ. ಇದು ರಾಜಕಾರಣದಲ್ಲಿ ಸಹಜ ಲಕ್ಷಣವಾಗಿದ್ದರೆ ಜನರಲ್ಲಿ ಹೊಸ ಬೆಳವಣಿಗೆಯಾಗಿದೆ. ನಮ್ಮ ಅನುಮಾನಗಳನ್ನು ಬದಿಗಿಟ್ಟು ನಮಗೆ ಬೇಕಾದ್ದನ್ನು ಯಾರಿಗೂ ರಫ್ತು ಮಾಡಬಲ್ಲೆವೆಂಬ ವಿಶ್ವಾಸವನ್ನು ದಕ್ಕಿಸಿಕೊಂಡಿದ್ದೇವೆ. ನಮ್ಮ ಕೊರತೆಗಳನ್ನು ಯಾರಿಗೂ ಹೇಳದೇ ಅದು ಬೃಹದಾಕಾರದಲ್ಲಿ ಬೆಳೆದು ಎಲ್ಲರಿಗೂ ಗೋಚರಿಸಿದರೂ ಅದು ಯಾರಿಗೂ ಕಾಣುವುದಿಲ್ಲವೆಂಬ ಹುಚ್ಚು ನಂಬಿಕೆ ದೃಢವಾಗತೊಡಗಿದೆ. ಬೆತ್ತಲೆ ಅರಸನ ರಾಜರಹಸ್ಯ ಬುದ್ಧಿವಂತರಲ್ಲಿ ಬಯಲಾಗುವುದೇ ಇಲ್ಲವಲ್ಲ! ಅದಕ್ಕೆ ಹುಚ್ಚು ಮನಸ್ಥಿತಿಯ ಅಥವಾ ಮುಗ್ಧರ ಅಭಿಪ್ರಾಯವನ್ನು ಕಾಡಬೇಕು; ಬೇಡಬೇಕು.
ಇದಕ್ಕೆ ಎಷ್ಟು ಉದಾಹರಣೆಗಳನ್ನು ಬೇಕಾದರೂ ನೀಡಬಹುದು: ಭಾರತ ರೋಮಿನಂತೆ ಪುರಾಣಪ್ರಸಿದ್ಧ ದೇಶ. ಇಲ್ಲಿ ಎಲ್ಲದಕ್ಕೂ ಪವಾಡದ ಅದ್ಭುತ ತಿರುವು ಸಿಗುತ್ತದೆ. ವಿಜ್ಞಾನ ಎಷ್ಟೇ ಬೆಳೆದರೂ ಅಷ್ಟೇ ತೀವ್ರವಾಗಿ ಮೂಢನಂಬಿಕೆಯೂ ಬೆಳೆದಿದೆ. ಶತಮಾನಗಳುದ್ದಕ್ಕೂ ವೈಜ್ಞಾನಿಕ ಸಂಶೋಧನೆಗಳು ಜನರನ್ನು ಹೊಸ ಮನೋಭಾವಕ್ಕೆ ಎತ್ತುವಾಗ ಇನ್ನೊಂದೆಡೆ ಜ್ಯೋತಿಷ್ಯ, ಮಾಟ-ಮಂತ್ರ, ಹರಕೆ ಹೀಗೆ ನಂಬಬಾರದ್ದು, ನಂಬಲಾಗದ್ದು ನಂಬಿಕೆಯ ಪಾತ್ರದಲ್ಲಿ ತುಂಬಿಕೊಳ್ಳುತ್ತಿದೆ. ಒಂದು ಚಿಕ್ಕ ನಿದರ್ಶನ ಹೇಳಬೇಕಾದರೆ ದಾಸಶ್ರೇಷ್ಠರಾದ ಸಂತ ಕವಿ ಕನಕದಾಸರನ್ನು ನೆನಪಿಸಿಕೊಳ್ಳಬಹುದು. ಅವರು ಕೇವಲ ಐದು ಶತಮಾನಗಳ ಹಿಂದೆ ಇದ್ದವರು; ನಿಖರವಾಗಿ ಹೇಳುವುದಾದರೆ ಇನ್ನೊಂದಷ್ಟು ದೂರ, ಅಷ್ಟೇ. ಆ ಕಾಲಕ್ಕೆ ಯುರೋಪು ಮಾತ್ರವಲ್ಲ, ಮಧ್ಯಪ್ರಾಚ್ಯ, ಮಧ್ಯಪೂರ್ವ ದೇಶಗಳೆಲ್ಲ ಇಡೀ ವಿಶ್ವದಲ್ಲಿ ವ್ಯವಹರಿಸಿ ವಿಹರಿಸುತ್ತಿದ್ದವು. ಕೊಲಂಬಸ್ ಅಮೆರಿಕವನ್ನು ಹುಡುಕಿದ್ದ. ಜನರು ನೆಲದಲ್ಲಿ, ಕುದುರೆಗಳಲ್ಲಿ, ಒಂಟೆ-ಆನೆಗಳಲ್ಲಿ, ರಥಗಳಲ್ಲಿ, ಹಡಗಿನಲ್ಲಿ, ಮನುಷ್ಯರಂತೆಯೇ ನಡೆದಾಡುತ್ತಿದ್ದರು. ಕಾಗದ ಪತ್ರ, ಕಬ್ಬಿಣ ಮುಂತಾದ ಲೋಹಗಳು, ಕೆತ್ತನೆಕೆಲಸಗಳು, ಹೊಸ ಅನ್ವೇಷಣೆಗಳು ಜಗತ್ತನ್ನು ಮುಂದೆ ನಡೆಯುವಂತೆ ಮಾಡುತ್ತಿದ್ದವು. ಈ ಕಾಲಕ್ಕೆ ಪವಾಡಗಳು ನಡೆಯುವುದಿರಲಿ, ದೇವರ ಅಸ್ತಿತ್ವವು ಬರಿಯ ನಂಬಿಕೆಯ ಚಿಹ್ನೆಗಳಾಗಿದ್ದವು.
ಇಂತಹ ಸಂದರ್ಭದಲ್ಲಿ ಕನಕದಾಸರು ಉಡುಪಿಯಲ್ಲಿ ಬಂದು ಪ್ರವೇಶ ಸಿಗದೆ ಕೂಗಿ ಕರೆದಾಗ ಕೃಷ್ಣ ಮುಖ ತಿರುಗಿಸಿದನೆಂದಾಗಲೀ ಕನಕನ ಕಿಂಡಿ ತೆರೆಯಿತೆಂದಾಗಲೀ ನಂಬುವುದು ವೈಚಾರಿಕತೆಯ ಲಕ್ಷಣವಲ್ಲ; ಭಾವೋದ್ರೇಕವೆಂದೇ ತಿಳಿಯುವುದು ಬುದ್ಧಿಯಿರುವುದರ ಸಂಕೇತ. ಆದರೆ ಇಂದೂ ಇಂತಹ ಸಂಗತಿಗಳನ್ನು ಹರಿದಾಸರೂ ಮಾತ್ರವಲ್ಲ, ವಿದ್ಯಾವಂತರೂ, ಸಾಮಾಜಿಕ ಮಾರ್ಗದರ್ಶಕರಾಗಬೇಕಾದವರೂ ಅಸಾಮಾನ್ಯರೂ ಅತ್ಯಂತ ಭಕ್ತಿ-ಭಾವೋದ್ವೇಗದಿಂದ ವಿವರಿಸುತ್ತಾರೆ. ಕೇಳುವುದಕ್ಕೆ ಆಹ್ಲಾದಕರವಾಗಬಹುದು; ಆದರೆ ಆರೋಗ್ಯಕರವಂತೂ ಅಲ್ಲ. ಭಾರತದ ಬೆಳವಣಿಗೆಯಲ್ಲಿ ಇಂತಹ ಮೂಢತನವು ಸದಾ ಇತ್ತೆಂಬುದನ್ನು ರಾಜಾರಾಮ್ ಮೋಹನರಾಯ್, ವಿವೇಕಾನಂದ ಮುಂತಾದವರು ಗಮನಿಸಿ ಎಚ್ಚರಿಸಲು ಯತ್ನಿಸಿದ್ದಾರೆ. ಆದರೆ ಎದ್ದಂತೆ ನಟಿಸಿದ ಸಮಾಜವು ಮತ್ತೆ ನಿದ್ದೆಹೋಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಈ ಭ್ರಮೆಗಳು ಸ್ವಲ್ಪಕ್ಷೀಣವಾದಂತೆ ತೋರುತ್ತದೆ. ಏನೇ ಉದ್ವೇಗ-ಆವೇಶಗಳಿದ್ದರೂ ಅವು ದೇಶಕ್ಕೆ ಮುಡಿಪಾಗಿತ್ತು; ಅಥವಾ ಆದರ್ಶಗಳ ಕನಸಿಗೆ ಮಾತ್ರ ಸೀಮಿತವಾಗಿತ್ತು. ಅನಂತರದ ಗಾಂಧಿ ನೆಹರು ಯುಗದಲ್ಲಿ ಅವರನ್ನು ಎಷ್ಟೇ ಮಹತ್ತಾಗಿ ಚಿತ್ರಿಸಿದವರೂ ಅವರನ್ನು ಪವಾಡ ಪುರುಷರಂತೆ ಅಥವಾ ಅತಿಮಾನವರಂತೆ ಚಿತ್ರಿಸಲಿಲ್ಲ. ಪವಾಡ ಪುರುಷರೆಂದು ಮೂರ್ಖರೂ ಅಂಧಾಭಿಮಾನಿಗಳೂ ನಂಬುತ್ತಿದ್ದ ಕೆಲವು ಸಂತರುಗಳೂ ತಾವು ಸಮಾಜದೊಳಗಿದ್ದೇವೆಂಬುದನ್ನು ಮೀರದೆ ಬದುಕಿದ್ದರು. ಇದರಿಂದಾಗಿ ಅವರಲ್ಲಿ ಬಹುತೇಕ ಮಂದಿ ನಾಸ್ತಿಕರ, ವಿಚಾರವಾದಿಗಳ ಮತ್ತು ವೈಜ್ಞಾನಿಕ ಮನೋಭಾವದವರ ಸವಾಲುಗಳನ್ನೆದುರಿಸಲು ಅಶಕ್ತರಾದರು. ಇನ್ನು ಕೆಲವರು ಹಗರಣಗಳಲ್ಲಿ ಮತ್ತು ಮನುಷ್ಯ ಸಹಜ ಪ್ರಕರಣಗಳಲ್ಲಿ ಸಿಕ್ಕಿಕೊಂಡದ್ದೂ ಇದೆ. ಈ ಜಗತ್ತಿಗೆ ನಿಲುಕದ್ದು ಎಂದು ನಾವು ತಿಳಿಯದ ಅನೇಕ ಸಂಗತಿಗಳನ್ನು ಬಹಿರಂಗಮಾಡಿದವರೂ ಅವಕ್ಕೆ ಮನುಷ್ಯ ನಿರ್ಮಿತ ವ್ಯಾಪ್ತಿ-ಮಿತಿಗಳಿವೆಯೆಂದು ಸಾರಿದರು. ರಾಜಕಾರಣಿಗಳು ದೇವರಾಗಲು, ದೇವತೆಗಳಾಗಲು ಸಾಧ್ಯವಿಲ್ಲ. ಉದಾತ್ತ ಪ್ರಸಂಗಗಳು ಉದಾರಚರಿತರನ್ನು ನಿರ್ಮಿಸಬಹುದು. ಅಂಥವರನ್ನು ಭಾವನೆಗಳಲ್ಲಿ ಹುದುಗಿಸಿಕೊಂಡು ಪ್ರತಿಷ್ಠಾಪಿಸುವವರಿದ್ದಾರೆ. ಆದರೆ ಅದು ವೈಯಕ್ತಿಕ ಮತ್ತು ಹಾನಿರಹಿತ. ಆದರೆ ಅಂತಹ ನಂಬಿಕೆಗಳು, ಅಪನಂಬಿಕೆಗಳು ಸಮೂಹ ಸನ್ನಿಯನ್ನು ಸೃಷ್ಟಿಸಿದರೆ ಅದು ಗಂಡಾಂತರಕಾರಿ. ಬುದ್ಧನ ವಿರುದ್ಧ, ಯೇಸುವಿನ ವಿರುದ್ಧ, ಬಸವಣ್ಣನ ವಿರುದ್ಧ ಸಂಚು ಹೂಡಿದ ಗುಂಪು ಅವರ ಉದಾತ್ತ ವ್ಯಕ್ತಿತ್ವವನ್ನು ನಂಬದೆ ಅವರನ್ನು ಪವಾಡಸದೃಶರೆಂದು ನೋಡಿದರು. ಜನೋಪಯೋಗೀ ಕೆಲಸಗಳನ್ನು ಮಾಡುವ ವ್ಯಕ್ತಿಯೊಬ್ಬ ತನ್ನನ್ನು ಜನರಿಂದ ಹೆಚ್ಚಿನವನೆಂದು ಎಂದು ತಿಳಿದರೆ ಅದು ನಾಯಕತನವನ್ನು ತೋರಿಸಬೇಕೇ ಹೊರತು ಅತಿಮಾನುಷತೆಯನ್ನಲ್ಲ. ಧರ್ಮ, ನಂಬಿಕೆ ಅಫೀಮಾದರೆ ಅಮೃತವೂ ವಿಷವಾಗಬಹುದು.
ಈಚೆಗೆ ನಮ್ಮ ರಾಜಕಾರಣವನ್ನು ನೋಡಿದರೆ ಒಬ್ಬ ವ್ಯಕ್ತಿಯ ಸುತ್ತ ಎಷ್ಟು ದಂತಕಥೆಗಳನ್ನು ಸೃಷ್ಟಿಸಬಹುದೋ ಅಷ್ಟನ್ನೂ ಸೃಷ್ಟಿಸಲಾಗುತ್ತಿದೆಯೆಂಬುದು ಸ್ಪಷ್ಟವಾಗುತ್ತದೆ. ಕಲ್ಪನೆ ಮತ್ತು ಅಶಯಗಳೇ ಈ ಕಥೆಗಳ ಬೇರು. ತಮಗೆ ಇಷ್ಟವಾಗುವ ವ್ಯಕ್ತಿಯೊಬ್ಬನಿದ್ದರೆ ಆತ ನಿಂತದ್ದು, ಕುಳಿತದ್ದು, ನಡೆದದ್ದು, ನಿದ್ರಿಸಿದ್ದು, ಎಲ್ಲವನ್ನೂ ಈ ಮಂದಿ ಮಗುವಿನ ಆಟವನ್ನು ನೋಡಿ ಆನಂದಿಸುವ ತಂದೆತಾಯಂದಿರಂತೆ ಆನಂದಿಸುತ್ತಾರೆ. ಮಗು ಆಡುವ ಪ್ರತೀ ಪದ, ಸ್ವರ, ಚಲನೆ ಎಲ್ಲದಕ್ಕೂ ತಂದೆ ತಾಯಿ ಅರ್ಥ ಸೃಷ್ಟಿ ಮಾಡುವಂತೆ ಅಭಿಮಾನಿಗಳು ಹೊಸ-ಹಳೆ ಅರ್ಥವನ್ನು, ನೀಡುತ್ತಾರೆ; ಅಷ್ಟೇ ಅಲ್ಲ; ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲದ-ಸಲ್ಲದ ವಿವರಣೆಯನ್ನೂ ನೀಡುತ್ತಾರೆ. ನೀವು ಒಪ್ಪಿಕೊಳ್ಳುವ ವರೆಗೂ ಅವರು ತಮ್ಮ ಹಠವನ್ನು ಬಿಡಲಾರರು. ಇದೊಂದು ಹಠಯೋಗ. ವರ್ತಮಾನದಲ್ಲಿ ಮನುಷ್ಯ ಲೌಕಿಕ ಆಸೆ-ಆಕಾಂಕ್ಷೆಗಳನ್ನು ಬಿಡಲಾರನಾದ್ದರಿಂದ ಅದಕ್ಕೆ ಪೂರಕವಾದ ಇಂತಹ ಅಂಶಗಳನ್ನು ಸಮಾಜದಲ್ಲಿ ಬೇರೂರುವಂತೆ ಮಾಡುವುದು ನಾಯಕರಿಗೆ ಸುಖ ನೀಡುತ್ತದೆ. ಅದು ಬೆಳೆಯುವಂತಹ ವಾತಾವರಣವನ್ನು ಸೃಷ್ಟಿಸುವಲ್ಲಿ ಎಲ್ಲ ನೆರವನ್ನೂ ಈ ನಾಯಕತ್ವವು ನೀಡುತ್ತದೆ. ಇದರಿಂದ ದೇಶ, ಸಮಾಜ ಎಷ್ಟೇ ಹಿಂದೆ ಹೋದರೂ ಅವರು ಲಕ್ಷಿಸಲಾರರು. ಏಕೆಂದರೆ ಮಹತ್ತರವಾದ ಲೌಕಿಕ ಹೆಗ್ಗುರಿಯೊಂದು ಬದುಕಿನ ಹೆಗ್ಗುರುತಾಗಿರುತ್ತದೆ. ಅದಕ್ಕೆ ಧರ್ಮ, ಅಧ್ಯಾತ್ಮ ಮಾತ್ರವಲ್ಲ ರಕ್ತ ಇತ್ಯಾದಿಗಳ ಬಣ್ಣದ ಲೇಪವಿದ್ದರೆ ಈ ಹಾದಿ ಹೆಚ್ಚು ವರ್ಣರಂಜಿತವಾಗುತ್ತದೆ.