ಶ್ರೀ(ಮಹಾ)ಭಾರತ ಮತ್ತು ಕ್ರಿಕೆಟ್
ವೈರಿಯ, ಎದುರಾಳಿಯ ಶಕ್ತಿಯನ್ನು ಕೊಂಡಾಡುವುದು ಕ್ಷತ್ರಿಯೋಚಿತ ಅನ್ನುವುದಕ್ಕಿಂತಲೂ ಮನುಷ್ಯೋಚಿತ ಗುಣವೆನ್ನಬಹುದು. ಷಡ್ವೈರಿಗಳ ಗೂಡಾಗಿರುವ ಮನುಷ್ಯ ಕೆಲವು ಬಾರಿಯಾದರೂ ಗುಣಗ್ರಾಹಿಯಾಗುತ್ತಾನೆಂಬುದನ್ನು ಸಾಬೀತುಪಡಿಸುವ ನಿದರ್ಶನಗಳು ಮಹಾಭಾರತದಲ್ಲಿ ಅನೇಕವಿವೆ. ಅಂತಹ ಒಂದು ಪ್ರಸಂಗವನ್ನು ಎತ್ತಿಕೊಂಡು ನನ್ನ ವಾದವನ್ನು ಪುಷ್ಟೀಕರಿಸುವೆ.
ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಸಂಬಂಧ ಹಾಕಿದ ಮೇಲೆ ಯಾವುದಕ್ಕೂ ಬಾದರಾಯಣ ಸಂಬಂಧ ಕಲ್ಪಿಸುವುದು ಕಷ್ಟವಲ್ಲ. ಒಂದು ಅಪರೂಪದ ಸಂಬಂಧವನ್ನು ಥಳಕುಹಾಕಿ ಅದರ ವಿಶೇಷಗಳನ್ನು ಗಮನಿಸುವುದು ನನ್ನ ಉದ್ದೇಶ.
ಮೊನ್ನೆ ಭಾರತ-ಬಾಂಗ್ಲಾದೇಶಗಳ ನಡುವೆ ಒಂದು-ಒಂದೇ ಒಂದು- ಟೆಸ್ಟ್ ಪಂದ್ಯ ನಡೆಯಿತು. ನಿರೀಕ್ಷಿಸಿದಂತೆ ಭಾರತ ಗೆಲುವು ಪಡೆಯಿತು. ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕೆಲವು ಅಚ್ಚರಿಯ ಫಲಿತಾಂಶಗಳನ್ನು ನೀಡಿ ಬೆರಗನ್ನು ಸೃಷ್ಟಿಸಿದ್ದ ಬಾಂಗ್ಲಾ ಹುಲಿಗಳು ಭಾರತಕ್ಕೆ ಬರುವಾಗಲೇ ತಾವು ಭಾರತಕ್ಕೆ ಅದರದೇ ಪಿಚ್ಚುಗಳಲ್ಲಿ ತೀವ್ರ ಪೈಪೋಟಿ ನೀಡುವ ಭರವಸೆ ನೀಡಿದ್ದರು. ಯಥಾ ಪ್ರಕಾರ ಪಂದ್ಯವು ಮೊದಲು ಬ್ಯಾಟು ಮಾಡಲು ಅನುಕೂಲ ಹೊಂದಿ ಕೊನೆಗೆ ತಿರುವು ಪಡೆಯಿತು. ಟಾಸ್ ಗೆದ್ದ ಭಾರತವು ಸಹಜವಾಗಿಯೇ ಮತ್ತು ನಿರೀಕ್ಷೆಯಂತೆಯೇ ಮೊದಲು ಬ್ಯಾಟು ಮಾಡಿ 166 ಓವರ್‌ಗಳಲ್ಲಿ 4.13 ಸರಾಸರಿ ರನ್ನುಗಳೊಂದಿಗೆ 687 ರನ್ನುಗಳನ್ನು ಪೇರಿಸಿತು. ಮುರಳಿ ವಿಜಯ್ ಶತಕ ಬಾರಿಸಿದರೆ ವಿರಾಟ್ ಕೊಹ್ಲಿ ದ್ವಿಶತಕದ ದಾಖಲೆ ಮಾಡಿದರು. ವೃದ್ಧಿಮಾನ್ ಸಹಾ ಶತಕವನ್ನು ಬಾರಿಸಿ ಅಜೇಯರಾಗಿ ಉಳಿದರು. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಶತಕದ ಸಮೀಪ ತಲುಪಿದರು. ಬಾಂಗ್ಲಾದ ಐವರು ಬೌಲರ್‌ಗಳು ನೂರಕ್ಕೂ ಹೆಚ್ಚು ರನ್ ನೀಡಿದರು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶವು ಸುಮಾರು 125 ಓವರ್‌ಗಳನ್ನು ಆಡಿ 387ರ ಮೊತ್ತವನ್ನು ತಲುಪಿತು. ಶಕಿಬ್ ಅಲ್ ಹಸನ್ 82, ಮುಷ್ಫಿಕುರ್ ರಹೀಮ್ ಭರ್ಜರಿ ಶತಕದ 127, ಮೆಹ್ದಿ ಹಸನ್ ಮಿರ್ಜ್ 51 ರನ್ನುಗಳನ್ನು ಕಲೆಹಾಕಿದರು. ಈ ಮೊತ್ತವನ್ನು ಭಾರತ ನಿರೀಕ್ಷಿಸಿರಲಿಲ್ಲ.
ಫಾಲೋ ಅನ್ ಕೊಡಲು ಸಾಧ್ಯವಿದ್ದರೂ ಭಾರತ ಮತ್ತೆ ಬ್ಯಾಟಿಂಗ್ ಮಾಡಿ 4 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿ ಬಾಂಗ್ಲಾ ಪಡೆಗೆ 458 ರನ್‌ಗಳ ಸವಾಲನ್ನು ನೀಡಿತು. ಎರಡನೆ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಸ್ವಲ್ಪ ಪ್ರತಿರೋಧವನ್ನು ನೀಡಿತಾದರೂ ಮುಹಮ್ಮದುಲ್ಲಾ ಅವರ 60 ರನ್‌ಗಳೂ ಸೇರಿದಂತೆ ಉತ್ತಮವಾಗಿ ಆರಂಭಿಸಿದ ಯಾರೊಬ್ಬರೂ ತಮ್ಮ ಇನ್ನಿಂಗ್ಸ್‌ನ್ನು ಕಟ್ಟಲು ವಿಫಲರಾದ ಕಾರಣದಿಂದ 250 ರನ್‌ಗಳಿಗೆ ಔಟಾಗಿ 208 ರನ್‌ಗಳ ಸೋಲು ಅನುಭವಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ತಲಾ ಎರಡು ವಿಕೆಟುಗಳನ್ನು ಪಡೆದ ನಮ್ಮ ಸ್ಪಿನ್‌ದ್ವಯರು ದ್ವಿತೀಯ ಇನ್ನಿಂಗ್ಸ್‌ನಲ್ಲಿ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದರೆಂದರೆ ಪಿಚ್ ಹೇಗೆ ಬದಲಾಯಿತೆಂದು ತಿಳಿಯಬಹುದು. ಅಲ್ಲಿಗೆ ಬಾಂಗ್ಲಾ ಬಿಡಿ, ಯಾವುದೇ ಸಮರ್ಥ ವಿದೇಶೀ ತಂಡವೂ ಕುಸಿದು ಹೋಗುವುದು ಖಂಡಿತ. ಒಟ್ಟಿನಲ್ಲಿ ಭಾರತದ ಬ್ಯಾಟಿಂಗ್ ಶಕ್ತಿ ಹೆಚ್ಚೇ ಅಥವಾ ಸ್ಪಿನ್ ಪಿಚ್‌ನ ಶಕ್ತಿ ಹೆಚ್ಚೇ ಎಂದು ತರ್ಕಿಸುವಂತಿತ್ತು. ಆದರೆ ನಾನು ಮೆಚ್ಚಿಕೊಂಡದ್ದು ಸೋತು ಗೆದ್ದ ಬಾಂಗ್ಲಾವನ್ನು.
ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ವಿರುದ್ಧ ಭಾರತದ ಮೈದಾನದಲ್ಲಿ ತಲಾ ನೂರಕ್ಕೂ ಹೆಚ್ಚು ಓವರ್ ಬ್ಯಾಟ್ ಮಾಡುವುದು ಸುಲಭವಲ್ಲ. ಇದೇ ಒಂದು ಮಹತ್ಸಾಧನೆ. ಇಷ್ಟೇ ಅಲ್ಲ, ಭಾರತವು ಫಾಲೋ ಅನ್ ನೀಡದಿರಲು ಮುಖ್ಯ ಕಾರಣವೆಂದರೆ ನಾಲ್ಕನೇ ಇನ್ನಿಂಗ್ಸ್ ಆಡುವುದು ಕಷ್ಟವೆಂಬ ಅರಿವು ಭಾರತ ತಂಡಕ್ಕೆ ಮೊದಲೇ ಇದ್ದದ್ದು. ಸಾಲದ್ದಕ್ಕೆ ಬಾಂಗ್ಲಾ ತಂಡವು ಮೊದಲ ಇನ್ನಿಂಗ್ಸ್ ಆಡಿದ್ದನ್ನು ಕಂಡ ಮೇಲೆ ಅವರ ಬ್ಯಾಟಿಂಗ್ ಕುರಿತು ಭಾರತಕ್ಕೆ ಸ್ವಲ್ಪ ಆತಂಕ ಮೂಡಿತ್ತು. ಹೀಗಾಗಿ ಭಾರತ ತಂಡವು ತಾನು ಊಹಿಸಿದಷ್ಟು ಮೇಲುಗೈ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮಾಧ್ಯಮಗಳು ಕೊಹ್ಲಿ ಮತ್ತು ತಂಡವನ್ನು ಮಹತ್ಸಾಧಕರೆಂದು ಹೊಗಳಿ ಬಾಂಗ್ಲಾವನ್ನು ‘ಸದೆಬಡಿದರು’ ಎಂದು ಬರೆದರೂ ಜಗದೇಕ ವೀರರ ತಂಡವೊಂದು ತಮ್ಮದೇ ನೆಲದಲ್ಲಿ ಬಾಂಗ್ಲಾದಂತಹ ತಂಡವನ್ನು ಸೋಲಿಸಿದ್ದು ನನಗೆ ವಿಶೇಷವೆಂದು ಕಾಣಲಿಲ್ಲ. ವರ್ಷಕ್ಕೆ ಐದು ಟೆೆಸ್ಟ್ ಸರಣಿಯಾಡುವ (ಹೆಚ್ಚಿನ ಪಾಲು ನಮ್ಮದೇ ತಿರುವು ನೆಲದಲ್ಲಿ) ಭಾರತವೆಲ್ಲಿ? ಐದು ವರ್ಷಕ್ಕೊಂದು ಸರಣಿಯೂ ಕಾಣದ ಬಾಂಗ್ಲಾವೆಲ್ಲಿ? ಇಷ್ಟಕ್ಕೂ ಅವರು ಶತ್ರುಗಳಲ್ಲ; ಎದುರಾಳಿಗಳು ಮಾತ್ರ. ಮೆಚ್ಚುಗೆಯು ಅಕ್ಷಾಂಶ-ರೇಖಾಂಶಗಳ ಗಡಿಯನ್ನು, ಅದಕ್ಕೆ ದೇಶ-ಕಾಲದ ಹಂಗನ್ನು ಮೀರಬೇಕು. ಅಸಮತೋಲನದಲ್ಲಿ ನಿಮ್ಮ-ನನ್ನ ಮೆಚ್ಚುಗೆ ಸದಾ ಶಕ್ತಿಹೀನನ ಪರವಾಗಿ ಇರಬೇಕು. ಗಾಂಧಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ಕ್ಷೇಮಕ್ಕೆ ಹೊಣೆಯೆಂದು ಹೇಳಿದ್ದು ಇದೇ ಅರ್ಥದಲ್ಲಿ.
ನಾನಿದನ್ನು ಹೇಳಿದಾಗ ಆಕ್ಷೇಪಿಸಿದ ನನ್ನ ಸ್ನೇಹಿತರೊಬ್ಬರಿಗೆ ಸಮಜಾಯಿಷಿಕೆ ನೀಡಲು ನಾನು ನಮ್ಮದೇ ಪುರಾಣದ-ಮಹಾಭಾರತದ ದೃಷ್ಟಾಂತವನ್ನು ನೀಡಬೇಕಾಯಿತು. (ಆದರೂ ಅವರು ತೃಪ್ತರಾದರೆಂಬ ಬಗ್ಗೆ ನನಗೆ ಖಾತ್ರಿಯಿಲ್ಲ!)
ಮಹಾಭಾರತದಲ್ಲಿ ಅನೇಕ ಒಳ್ಳೆಯ-ಕೆಟ್ಟ ಪಾತ್ರಗಳಿವೆ. ಮಾರ್ಮಿಕ ಸನ್ನಿವೇಶಗಳಲ್ಲಿ ಅವು ಮನುಷ್ಯನ ಗುಣಗಳಿಗೆ ಹಿಡಿದ ಕನ್ನಡಿಯಂತಿವೆ. ಒಳ್ಳೆಯದೂ ಇವೆ; ಕೆಟ್ಟದ್ದೂ ಇವೆ. ಒಳ್ಳೆಯದನ್ನು ನೋಡಿ ನಾವೂ ಹೀಗೆ ಬದುಕಬೇಕು ಎಂದೂ ಕೆಟ್ಟದ್ದನ್ನು ನೋಡಿ ನಾವು ಹೀಗೆ ಬದುಕಬಾರದು ಎಂದೂ ಅನ್ನಿಸಬೇಕು. ಪ್ರಾಯಃ ಜಗತ್ತಿನ ಯಾವುದೇ ಕತೆ, ಚರಿತ್ರೆ ಪುರಾಣಕ್ಕೆ ಸಂದಾಗ ಸಮಾಜಕ್ಕೆ ಇಂತಹ ಹಲವು ಸಂದೇಶಗಳನ್ನು ನೀಡುತ್ತವೆ. ವ್ಯಾಸಭಾರತ ಸಂಸ್ಕೃತದಲ್ಲಿರುವುದರಿಂದ ಬಹಳಷ್ಟು ಜನರಿಂದ ಪೂಜೆಗೊಳ್ಳುತ್ತದೆಯೇ ಹೊರತು ಓದಿನ ಅನುಭವಕ್ಕೆ ದಕ್ಕುವುದಿಲ್ಲ. ಅದೇ ಕತೆ ಕನ್ನಡಕ್ಕೆ ಬಂದಾಗ ಪಂಪ ಮತ್ತು ಕುಮಾರವ್ಯಾಸ ಹೊಸ ದಿಕ್ಸೂಚಿಗಳಾದರು. ಭಾರತ ಕಥೆಯ ಕೊನೆಯ ಭಾಗವನ್ನು ರನ್ನನೂ ಕನ್ನಡಿಸಿದ. ಆನಂತರ ಈ ಗಾತ್ರದ ಪ್ರಯತ್ನಗಳಾಗಿಲ್ಲ. ರಾಮಾಯಣದ ಅನೇಕ ಕೃತಿಗಳು ಬಂದವಾದರೂ ಮಹಾಭಾರತ ತನ್ನ ಸಂಕೀರ್ಣತೆಯಿಂದಾಗಿಯೋ ಏನೋ ಈ ಇಬ್ಬರು ಕವಿಗಳ ಸೊತ್ತಾಗಿಯೇ ಉಳಿಯಿತು. ಅದಕ್ಕೇ ಕುಮಾರವ್ಯಾಸ ‘ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ..’ಎಂದು ಬರೆದದ್ದು. ಇಲ್ಲೂ ಒಂದು ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಬಹುದು: ರಾಮಾಯಣ ಭಾರವಾಗಿಲ್ಲ; ರಾಮಾಯಣದ ಕವಿಗಳು ಭಾರವಾದರು!
ವೈರಿಯ, ಎದುರಾಳಿಯ ಶಕ್ತಿಯನ್ನು ಕೊಂಡಾಡುವುದು ಕ್ಷತ್ರಿಯೋಚಿತ ಅನ್ನುವುದಕ್ಕಿಂತಲೂ ಮನುಷ್ಯೋಚಿತ ಗುಣವೆನ್ನಬಹುದು. ಷಡ್ವೈರಿಗಳ ಗೂಡಾಗಿರುವ ಮನುಷ್ಯ ಕೆಲವು ಬಾರಿಯಾದರೂ ಗುಣಗ್ರಾಹಿಯಾಗುತ್ತಾನೆಂಬುದನ್ನು ಸಾಬೀತುಪಡಿಸುವ ನಿದರ್ಶನಗಳು ಮಹಾಭಾರತದಲ್ಲಿ ಅನೇಕವಿವೆ. ಅಂತಹ ಒಂದು ಪ್ರಸಂಗವನ್ನು ಎತ್ತಿಕೊಂಡು ನನ್ನ ವಾದವನ್ನು ಪುಷ್ಟೀಕರಿಸುವೆ. ಮಹಾಭಾರತದ ಉದಾತ್ತ ಪಾತ್ರಗಳಲ್ಲಿ ಕರ್ಣ ಬಹಳ ದೊಡ್ಡವನು. ಕಥೆಯಲ್ಲೂ ಆತ ಕೌರವ-ಪಾಂಡವರಲ್ಲಿ ಆ ಎರಡೂ ವಂಶಸ್ಥನೆನಿಸದೆಯೇ ಜ್ಯೇಷ್ಠನೆನಿಸಿದವನು. ಸೂರ್ಯನ ಮಗನಾದರೂ ಬದುಕಿನಲ್ಲಿ ಕತ್ತಲೆಯನ್ನು ಅನುಭವಿಸಿದವನು. ಸಮಾಜದ ಕುತ್ಸಿತ ಭಾವನೆಗಳಿಗೆ ತುತ್ತಾದವನು. ಆದರೂ ತಾನು ನಂಬಿದ ಸತ್ಯ, ಸತ್ವ, ಆದರ್ಶಗಳನ್ನು ಬಲಿಕೊಡದೆ ಹುತಾತ್ಮನಾದವನು. ಹೀಗಾಗಿ ನಾಯಕರಿಗಿಂತ ದೊಡ್ಡ ನಾಯಕನಾಗಿ ಆತ ಮಹಾಭಾರತದುದ್ದಕ್ಕೂ ಹೊಳೆದವನು. ‘ನನ್ನಿಯೊಳ್ ಇನತನಯಂ’ ಎಂದು ಪಂಪನಿಂದ ಹೊಗಳಿಸಿಕೊಂಡವನು. ಮನುಷ್ಯಸಹಜವಾದ ಏನೇ ಲೋಪಗಳನ್ನು ಗುರುತಿಸಿದರೂ (ಲೋಪಗಳಿಲ್ಲದ ಪಾತ್ರಗಳೇ ಮಹಾಭಾರತದಲ್ಲಿಲ್ಲ!) ಕರ್ಣನು ಮಹಾಭಾರತದ ಸರ್ವಶ್ರೇಷ್ಠ ಪುರುಷನಾಗಿ ಕಾಣಿಸುತ್ತಾನೆ. (ಶ್ರೇಷ್ಠ ಅಭಿನಯದ ಪ್ರಶಸ್ತಿ ಕೃಷ್ಣನಿಗೇ ದಕ್ಕಬೇಕಲ್ಲ!)
ಕರ್ಣನ ಬದುಕಿನ ಕೊನೆಯ ಹಂತ. ಕರ್ಣಾರ್ಜುನರ ಕಾಳಗ. ಕೃಷ್ಣನೇ ಸಾರಥಿಯಾಗಿ ಅಗ್ನಿದತ್ತವಾದ ರಥ, ಕೈಯ್ಯ ಗಾಂಡೀವ, ಧ್ವಜದ ಹನುಮ ಹೀಗೆ ಅತ್ಯುತ್ತಮ ಸರಕುಗಳನ್ನು ಹೊಂದಿದ ಅರ್ಜುನನೆದುರು ಒಲ್ಲದ ಗಂಡ ಶಲ್ಯಸಾರಥ್ಯದ ಕರ್ಣನ ಮುಖಾಮುಖಿ. ದೇವತೆಗಳೇ ಈ ಯುದ್ಧವನ್ನು ನೋಡಲು ಗಗನದಲ್ಲಿ ನೆರೆದರಂತೆ. ಪಂಪ ಚಿತ್ರಿಸಿದ ಈ ಯುದ್ಧಸಂದರ್ಭದಲ್ಲಿ ಅರ್ಜುನನ ಪರಾಕ್ರಮದ ವರ್ಣನೆಯೇ ಹೆಚ್ಚು. ಆದರೆ ಕುಮಾರವ್ಯಾಸನ ಕಾವ್ಯ ಕಲೆ ಇತ್ತಂಡಕ್ಕೂ ನ್ಯಾಯವೊದಗಿಸಬೇಕೆಂಬ ಮತ್ತು ಮನುಷ್ಯ ಹೃದಯವನ್ನು ಬಿಚ್ಚಿ ತೋರಿಸಬೇಕೆಂಬ ಹುಮ್ಮಸ್ಸಿನಲ್ಲಿದ್ದಂತಿದೆ. ಮುಖ್ಯವಾದ ಕಥೆಗೆ ಅವಶ್ಯವಿದೆಯೋ ಇಲ್ಲವೋ ಇಲ್ಲೊಂದು ತಂತ್ರ-ಪ್ರತಿತಂತ್ರದ ಭೂಮಿಕೆ ಸಿದ್ಧವಾಗಿದೆ. ಅರ್ಜುನನ ಶರಸಂಧಾನಕ್ಕೆ ‘ಒಂದು ಯೋಜನೆವರೆಗೆ ತಿರ್ರನೆ ತಿರುಗಿ ತೊಲಗಿತು ಕರ್ಣರಥವಂದು’ ಎನ್ನುತ್ತಾನೆ ಕುಮಾರವ್ಯಾಸ. ಆದರೆ ಶಲ್ಯ ರಥವನ್ನು ಮತ್ತೆ ಮೊದಲಿದ್ದಲ್ಲಿಗೇ ತಂದು ನಿಲ್ಲಿಸುತ್ತಾನೆ. ಈಗ ಕರ್ಣನ ಸರದಿ. ಆತ ಬಿಟ್ಟ ಬಾಣಕ್ಕೆ ಅರ್ಜುನನಿಗೇನಾಯಿತು? ‘ಅರಿಯ ಶರಹತಿಗಳುಕಿ ತಿರ್ರನೆ ತಿರುಗಿ ಪಾರ್ಥನ ತೇರು ಬಿಲ್ಲಂತರಕೆ ಹಿಂದಕೆ ತೊಲಗೆ ಕಂಡು ಮುರಾರಿ ಬೆರಗಾದ’ ಬೆರಗಾದ್ದಷ್ಟೇ ಅಲ್ಲ-‘ಅರರೆ ಧಣುಧಣು ಪೂತು ಪಾಯಿಕು ಸರಿಯ ಕಾಣೆನು ಭಾಪೆನುತ ವಿಸ್ತರಿಸಿ ದಾನವ ವೈರಿ ಕರ್ಣನ ಹಿರಿದು ಹೊಗಳಿದನು’ ತನ್ನೆದುರೇ ವೈರಿಯನ್ನು ಹೀಗೆ ಹೊಗಳಿದ್ದು ಅರ್ಜುನನಿಗೆ ಹಿಡಿಸಲಿಲ್ಲ; ಅದೊಂದು ಅಪಮಾನದಂತಾಯಿತು. ಮಾಧ್ಯಮಗಳಲ್ಲಿ ನಾಳೆ ಪ್ರಕಟವಾಗುವ ಹೆಡ್‌ಲೈನ್ ತನ್ನದೇ ಇರಬೇಕೆಂಬ ತವಕದಲ್ಲಿದ್ದ ಅರ್ಜುನನ ಮನಸ್ಸು ಕುಗ್ಗಿತು. ಆತ ‘ಒಲವರವಲಾ ಮುರಹರಂಗೀ ಬಲದೊಳಗೆ ಸಾಹಸವ ಸುಡುಸುಡಲೆನುತ ದುಗುಡವ ಪಿಡಿದು ಫಲುಗುಣನಿಳುಹಿದನು ಧನುವ’ ಎನ್ನುತ್ತಾನೆ ಕವಿ. ಒಂದರ್ಥದಲ್ಲಿ ಕುರುಕ್ಷೇತ್ರದ ಯುದ್ಧರಂಗದಲ್ಲಿ ಎರಡನೇ ಬಾರಿ ಅರ್ಜುನನ ಶಸ್ತ್ರ ಸನ್ಯಾಸ.
ಮೊದಲಿಗೆ ವಿಷಾದ ಯೋಗವಾದಾಗ ಕೃಷ್ಣನಿಂದ ಗೀತಾಭ್ಯಾಸ ನಡೆಯಿತು. ಈಗ ಮಧ್ಯಂತರದ ಅನಂತರ ಅದೇ ಅವಾಂತರ! ಕೃಷ್ಣ ಗೊತ್ತಿದ್ದೋ ಗೊತ್ತಿಲ್ಲದೆಯೋ ಅರ್ಜುನನ ವೈರಾಗ್ಯವನ್ನು ವಿಚಾರಿಸುತ್ತಾನೆ. ‘ದುಗುಡವಿದೇನು’ ‘ಧನುವನು ತೊರೆದ ಕಾರಣವೇನುೞಎಂದು ಕೇಳುತ್ತಾನೆ. ಅದಕ್ಕೆ ಅರ್ಜುನನ ನಿರೀಕ್ಷಿತ ಉತ್ತರವಿದೆ: ‘ಕಾಲುಗುಣವೆಂದರಿಯೆ ಮೇಣ್ ತನ್ನಾಳುತನ ಪುಸಿಯಾಯ್ತು ರಿಪುಭಟನಾಳುತನ ದಿಟವಾಯ್ತು ಕೌತುಕವೆಂದನಾ ಪಾರ್ಥ’. ಮುಂದುವರಿಸಿ ‘ಒಂದು ಯೋಜನೆವರೆಗೆ ತಿರುಗಿತು ಹಿಂದಕಹಿತನ ತೇರು ತಾನೆಸಲೊಂದು ಬಿಲ್ಲಂತರಕೆ ತೊಲಗಿತು ನಮ್ಮ ರಥವಿಂದು ಇಂದು ಕರ್ಣನ ಸಾಹಸಕೆ ಮನಸಂದು ಪತಿಕರಿಸಿದಿರಿ ಕೌತುಕವೆಂದು ಕಾಲವ ಬೈದೆನೆಂದನು ಪಾರ್ಥನಾ ಹರಿಗೆ’. ಈಗ ಕೃಷ್ಣನು ಅರ್ಜುನನಿಗೆ ‘ನಿಜ ಬಿಲ್ಲಾಳುತನವನು ನಿನ್ನ ಮನದಲಿ ತಿಳಿದು ನೋಡೆಂದ’ ಎಂದು ಹೇಳಿ ಅನಂತರ ಈ ಮೇಲಾಟದ ಪರಿಸ್ಥಿತಿಯನ್ನು ಹೀಗೆ ಹೇಳುತ್ತಾನೆ: ‘ಬಸುರೊಳಗೆ ಬ್ರಹ್ಮಾಂಡಕೋಟಿಯ ಮುಸುಕಿಕೊಂಡಿಹ ನಾ ಸಹಿತ ಮೇಲೆಸೆವ ಸಿಂಧದ ಹನುಮ ಸಹಿತೀ ದಿವ್ಯ ಹಯ ಸಹಿತ ಎಸುಗೆಯಲಿ ತೊಲಗಿಸುವ ಕರ್ಣನ ಅಸಮ ಸಾಹಸ ಪಿರಿದೋ ಹುಲುರಥದೆಸುಗೆ ನಿನ್ನಗ್ಗಳಿಕೆ ಪಿರಿದೋ ಪಾರ್ಥ ಹೇಳೆಂದ’ ನಟ ಕೃಷ್ಣ ಇಲ್ಲಿ ಒಂದು ಘಳಿಗೆ ಮನುಷ್ಯನಾಗುತ್ತಾನೆ. ಕರ್ಣನ ‘ತೊಡೆಸೋಂಕಿನಲಿ’ ಕುಳಿತ ನಿಕಟತೆಯನ್ನು (ಪ್ರ) ದರ್ಶಿಸುತ್ತಾನೆ.
ಇಲ್ಲೇ ಇರುವುದು ಅಸಮಾನತೆಯನ್ನು ಹೋಗಲಾಡಿಸುವ ಮೀಸಲಾತಿಯ ಪಂಥ ಅನ್ನಿಸುತ್ತದೆ. ಒಂದೇ ರೀತಿಯ ಸವಲತ್ತುಗಳೊಂದಿಗಿರುವವರು ಸಮಾನ ಬಾಳ್ವೆಯ ಅವಕಾಶ ಪಡೆಯುತ್ತಾರೆ. ಆದರೆ ಶೋಷಣೆಗೊಳಗಾದವರಿಗೆ ಮಹಾನ್ ಮಹಲುಗಳ ಒಡೆಯರ ವಿರುದ್ಧ ಸ್ಪರ್ಧಿಸುವ ಅವಕಾಶವಿರುವುದಿಲ್ಲ. ಆದರೂ ಯಾರೊಬ್ಬನು ತನಗಿಂತ ಹೆಚ್ಚು ಸೌಕರ್ಯ-ಸವಲತ್ತುಗಳೊಂದಿಗಿರುವವರೊಂದಿಗೆ ಸ್ಪರ್ಧಿಸಿದರೆ, ಆತ ಸೋತರೂ ಆತನ ಸಾಧನೆಯು ಮಹತ್ವದ್ದಾಗಿರುತ್ತದೆ. ಅಭಿಮನ್ಯು ಸತ್ತು ಗೆದ್ದದ್ದು ಹೀಗೆಯೇ. ಅಮರ್ ಸೊನಾರ್ ಬಾಂಗ್ಲಾದ ಹುಲಿಗಳು ಗೆದ್ದದ್ದೂ ಇದೇ ಅಳತೆಯಲ್ಲಿ.