ಉ.ಕೊರಿಯ ಜೊತೆ ನೇರ ಮಾತುಕತೆಯ ಸಾಧ್ಯತೆ ತಳ್ಳಿಹಾಕಲಾಗದು: ಅಮೆರಿಕ
ಟೋಕಿಯೊ, ಅ.17: ಉತ್ತರ ಕೊರಿಯದ ಜೊತೆ ನೇರ ಮಾತುಕತೆಯ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂದು ಅಮೆರಿಕದ ಸಹಾಯಕ ವಿದೇಶ ವ್ಯವಹಾರ ಸಚಿವ ಜಾನ್ ಜೆ.ಸಲಿವನ್ ತಿಳಿಸಿದ್ದಾರೆ.
ಈ ಇಬ್ಬರು ವಿರೋಧಿಗಳ ಮಧ್ಯೆ ಮಾತುಕತೆ ನಡೆಯಲಿ ಎಂದು ಈ ಹಿಂದೆಯೇ ಚೀನಾ ಒತ್ತಾಯಿಸಿತ್ತು. ಆದರೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರ ಜಪಾನ್ ಮಾತುಕತೆಗೆ ವಿರೋಧಿಸಿದ್ದವು. ಈ ಮಧ್ಯೆ ಉತ್ತರಕೊರಿಯ ತನ್ನ ಪರಮಾಣು ಕಾರ್ಯಕ್ರಮವನ್ನು , ಅದರಲ್ಲೂ ಪ್ರಮುಖವಾಗಿ ಅಮೆರಿಕವನ್ನು ತಲುಪಬಲ್ಲ ಕ್ಷಿಪಣಿಗಳನ್ನು ತಯಾರಿಸುವ ಕಾರ್ಯಕ್ರಮವನ್ನು ಮುಂದುವರಿಸಿತ್ತು.
ಉ. ಕೊರಿಯ ತಂದೊಡ್ಡಿರುವ ಈ ಸಮಸ್ಯೆಗೆ ರಾಜಕೀಯ ಮಾರ್ಗದಲ್ಲಿ ಪರಿಹಾರ ಹುಡುಕುವ ಬಗ್ಗೆ ನಾವು ಆದ್ಯತೆ ನೀಡಿದ್ದೇವೆ. ಆದರೆ ರಾಜಕೀಯ ಮಾರ್ಗ ವಿಫಲವಾದರೆ ನಮ್ಮ ಮಿತ್ರರಾದ ಜಪಾನ್ ಹಾಗೂ ದಕ್ಷಿಣ ಕೊರಿಯದ ಜೊತೆ, ಯಾವುದೇ ಭಾಗದಲ್ಲಿ ಎದುರಾಗುವ ಕೆಡುಕನ್ನು ಎದುರಿಸಲು ಸಿದ್ಧ ಎಂದವರು ಹೇಳಿದರು. ಜಪಾನ್ನ ಸಹಾಯಕ ವಿದೇಶ ವ್ಯವಹಾರ ಸಚಿವರ ಜೊತೆ ಮಾತುಕತೆ ನಡೆಸಿದ ಬಳಿಕ ಜಾನ್ ಸುಲ್ಲಿವನ್ ಅವರ ಹೇಳಿಕೆ ಹೊರಬಿದ್ದಿದೆ.