ನಡುರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ!
ಬೆಂಗಳೂರಿನಲ್ಲಿ ಮುಂದುವರಿದ ಕಾಮುಕರ ಅಟ್ಟಹಾಸ
ಬೆಂಗಳೂರು, ಜ.4: ಬೆಂಗಳೂರು ನಗರದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದ್ದು, ಹೊಸ ವರ್ಷಾಚರಣೆಯ ಅಮಲಿನಲ್ಲಿ ಮತ್ತೊಂದು ತಲೆತಗ್ಗಿಸುವ ಘಟನೆ ನಡೆದಿದೆ.
ನಗರದ ಕಮ್ಮನಹಳ್ಳಿಯಲ್ಲಿ ಹೊಸ ವರ್ಷದ ಮೊದಲ ದಿನ ಕಾಮುಕರ ತಂಡವೊಂದು ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡುತ್ತಿರುವುದು ರಸ್ತೆ ಬದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯುವತಿಯೊಬ್ಬಳು ರಿಕ್ಷಾದಿಂದ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಹೊಂಡಾ ಆ್ಯಕ್ಟೀವಾದಲ್ಲಿ ಬಂದ ಇಬ್ಬರು ಕಾಮುಕರು ಯುವತಿಯನ್ನು ಅಡ್ಡಗಟ್ಟಿದ್ದಾರೆ. ಮಾತ್ರವಲ್ಲ ಆಕೆಯನ್ನು ಬಲವಂತವಾಗಿ ಅಪ್ಪಿ ಮುತ್ತಿಟ್ಟಿದ್ದಾರೆ. ಯುವತಿಯನ್ನು ಎಳೆದುಕೊಂಡು ಹೋಗಲು ವಿಫಲ ಯತ್ನ ನಡೆಸಿದ್ದ ಕಾಮುಕರು ಅಮಾನುಷವಾಗಿ ಆಕೆಯನ್ನು ರಸ್ತೆಗೆ ತಳ್ಳಿ ಪರಾರಿಯಾಗಿದ್ದಾರೆ.
ಕಾಮುಕರ ತಂಡ ಡಿ.31ರ ಮಧ್ಯ ರಾತ್ರಿ ಸಂತ್ರಸ್ತ ಯುವತಿಯ ಮನೆಯೆದುರೇ ಈ ಕೃತ್ಯ ಎಸೆಗಿದ್ದಾರೆ. ಯುವತಿಯರು ಇದುವರೆಗೆ ಯಾವುದೇ ದೂರು ನೀಡಿಲ್ಲ. ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ಕಾಮುಕರಿಗಾಗಿ ಬಲೆ ಬೀಸಿದ್ದಾರೆ.
ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದಾಗ ಸಾವಿರಾರು ಜನರಿದ್ದಾಗಲೆ ಕಾಮುಕರ ಗುಂಪು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ವಿಷಯ ಮೊನ್ನೆಯಷ್ಟೇ ವರದಿಯಾಗಿದ್ದು, ಇದು ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.