ನಗದು ಇಲ್ಲದೆ ರೈತರ ಪರದಾಟ ಗುಜರಾತ್ ಬಿಜೆಪಿಗೆ ಪೇಚಾಟ
ಜಗದೀಶ್‌ಭಾಯ್ ರಮಣಿ, ನೋಟು ರದ್ದತಿಗೆ ಮುನ್ನ ಬಿಜೆಪಿಯ ಕಟ್ಟಾ ಬೆಂಬಲಿಗ. ಆದರೆ ಕಳೆದ ಎರಡು ತಿಂಗಳಿನಿಂದ ಅವರಿಗೆ ಪಕ್ಷದ ಬಗ್ಗೆ ಇದ್ದ ಎಲ್ಲ ಉತ್ಸಾಹವೂ ಕುಗ್ಗಿದೆ. ‘‘ಆರಂಭದಲ್ಲಿ ನಾನು ಮೋದಿ ಬಗ್ಗೆ ಬಹಳ ವಿಶ್ವಾಸ ಹೊಂದಿದ್ದೆ. ಏಕೆಂದರೆ ನಮಗೆ ಆಗುವ ಅನನುಕೂಲಗಳು ಕೇವಲ 50 ದಿನಗಳಿಗೆ ಸೀಮಿತ ಎಂದು ಅವರು ಹೇಳಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ನಗದು ಕೊರತೆ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ’’ ಎಂದು ಸುರೇಂದ್ರನಗರದ ಗೋಮ್ತಾ ಗ್ರಾಮದಲ್ಲಿ 13 ಎಕರೆ ಕೃಷಿಭೂಮಿ ಹೊಂದಿರುವ ರಮಣಿ ಹೇಳುತ್ತಾರೆ. ‘‘ಈ ಬಾರಿ ಮೋದಿ ಪ್ರತಿಪಾದನೆಯಂತೆ ಒಂದೂ ಆಗಿಲ್ಲ. ಆದ್ದರಿಂದ ಮುಂದಿನ ಬಾರಿ ಬಿಜೆಪಿಗೆ ಮತ್ತೆ ಮತ ಹಾಕುತ್ತೇನೆ ಎಂದು ನನಗೆ ಅನಿಸುವುದಿಲ್ಲ’’ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ನೋಟು ರದ್ದತಿ ನಿರ್ಧಾರ ಪ್ರಕಟವಾಗುವ ಸ್ವಲ್ಪಮುಂಚೆ ರಮಣಿಕ್‌ಭಾಯ್ ಪಟೇಲ್ ಅವರು ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಲಖ್ತರ್‌ನಲ್ಲಿರುವ ತಮ್ಮ 10 ಎಕರೆ ಭೂಮಿಯಲ್ಲಿ ಬೆಳೆದ 600 ಕೆ.ಜಿ. ಹತ್ತಿ ಕಟಾವು ಮಾಡಿದ್ದರು. ಕಚ್ಚಾ ಹತ್ತಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವೇಳೆಯಲ್ಲೇ ಕೇಂದ್ರ ಸರಕಾರ 500 ಹಾಗೂ 1000 ರೂಪಾಯಿ ನೋಟು ಚಲಾವಣೆ ರದ್ದು ಮಾಡಿತು. ಪ್ರತಿಯೊಬ್ಬರೂ ಬ್ಯಾಂಕಿನಿಂದ ನಗದು ಪಡೆಯಲು ಹೆಣಗಾಡುತ್ತಿದ್ದರು. ಅವರ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಅವರ ಹತ್ತಿ ಬೆಳೆಗೆ ನಗದು ಬದಲಾಗಿ ಚೆಕ್ ರೂಪದಲ್ಲಿ ಹಣ ಬಂದಿತ್ತು.
ಇತರ ಹಲವು ಮಂದಿ ರೈತರಂತೆ, ಅವರು ಹಿಂಗಾರು ಹಂಗಾಮು ಬಿತ್ತನೆಗಾಗಿ ಬೀಜ ಹಾಗೂ ಗೊಬ್ಬರ ಖರೀದಿಯ ದ್ವಂದ್ವದಲ್ಲಿ ಸಿಲುಕಿದ್ದಾರೆ. ಗ್ರಾಮೀಣ ಬ್ಯಾಂಕುಗಳಲ್ಲಿ ಪ್ರತಿ ಖಾತೆದಾರರಿಗೆ ವಾರಕ್ಕೆ 8,000 ರೂಪಾಯಿ ಮಾತ್ರ ನಗದು ನೀಡಲಾಗುತ್ತಿದೆ. ಆದರೆ ಅಧಿಕೃತವಾಗಿ 24 ಸಾವಿರ ರೂಪಾಯಿಗಳನ್ನು ವಾರಕ್ಕೆ ಪಡೆಯಬಹುದು ಎನ್ನುವುದು ಪಟೇಲ್ ಅವರಿಗೆ ಗೊತ್ತಿದೆ. ಆದರೆ ಬಹುತೇಕ ರೈತರಿಗೆ ಈ ಸೌಲಭ್ಯ ಇಲ್ಲ.
ರೈತರ ಹಿಂಗಾರು ಸಂಕಷ್ಟವನ್ನು ಪರಿಹರಿಸುವ ಸಲುವಾಗಿ ಕೇಂದ್ರ ಸರಕಾರ, ರೈತರಿಂದ 500 ರೂಪಾಯಿಯ ಹಳೆನೋಟುಗಳನ್ನು ಡಿಸೆಂಬರ್ 15ರವರೆಗೆ ಪಡೆಯುವಂತೆ ರಾಜ್ಯ ಸರಕಾರಿ ಸ್ವಾಮ್ಯದ ಬಿತ್ತನೆಬೀಜ ಮಳಿಗೆಗಳಿಗೆ ಸೂಚನೆ ನೀಡಿತ್ತು. ಆದರೆ ಸುರೇಂದ್ರ ನಗರ ಜಿಲ್ಲೆಯ ಹಲವು ಭಾಗಗಳ ಸರಕಾರಿ ಮಳಿಗೆಗಳಲ್ಲಿ ಸಾಕಷ್ಟು ಬಿತ್ತನೆ ಬೀಜ ದಾಸ್ತಾನು ಇಲ್ಲ ಎನ್ನುವುದು ಪಟೇಲ್ ಗಮನಕ್ಕೆ ಬಂದಿದೆ. ಇದರಿಂದಾಗಿ ರೈತರು ಅನಿವಾರ್ಯವಾಗಿ ಖಾಸಗಿ ಬೀಜ ಮಳಿಗೆ ಗಳನ್ನು ಸಂಪರ್ಕಿಸುವುದು ಅನಿವಾರ್ಯವಾಗಿದೆ. ಇಲ್ಲಿ ನಗದು ರಹಿತ ಪಾವತಿಗೆ ವ್ಯವಸ್ಥೆ ಇರುವುದು ಅಪರೂಪ.
ರಸಗೊಬ್ಬರ ಇನ್ನೊಂದು ಸಮಸ್ಯೆ. ಗೊಬ್ಬರ ಮಾರಾಟಗಾರರಿಗೆ ಚೆಕ್ ಮೂಲಕ ಹಣ ಪಾವತಿಸಲು ಪಟೇಲ್ ಇಚ್ಛಿಸಿದ್ದರು. ಆದರೆ ಹಲವು ವರ್ಷಗಳಿಂದ ರಸಗೊಬ್ಬರಗಳ ಬದಲಾಗಿ ಜೈವಿಕ ಗೊಬ್ಬರಗಳನ್ನು ಬಳಸುವಂತೆ ಸರಕಾರ ರೈತರಿಗೆ ಸೂಚಿಸಿದೆ. ಆದರೆ ಇಂಥ ಸೆಗಣಿ ಗೊಬ್ಬರಗಳನ್ನು ಮಾರಾಟ ಮಾಡುವ ಯಾರೂ ಚೆಕ್ ಸ್ವೀಕರಿಸುವುದಿಲ್ಲ. ಏಕೆಂದರೆ ಅವರಿಗೆ ಮೇವು ಖರೀದಿಸಲು ನಗದಿನ ಅಗತ್ಯವಿದೆ. ‘‘ಅವರ ಸಮಸ್ಯೆ ನನಗೆ ಅರ್ಥವಾಗುತ್ತದೆ. ಏಕೆಂದರೆ ಹಸು ಚೆನ್ನಾಗಿ ತಿನ್ನದಿದ್ದರೆ, ಹಾಲಿನ ಪ್ರಮಾಣ ಮತ್ತು ಗುಣಮಟ್ಟ ಎರಡೂ ಕುಸಿಯುತ್ತದೆ. ಎಲ್ಲರೂ ನಗದು ರಹಿತ ವ್ಯವಹಾರದಲ್ಲಿ ಉಳಿದುಕೊಳ್ಳುತ್ತಾರೆ ಎಂದು ಸರಕಾರ ಹೇಗೆ ಬಯಸುತ್ತದೆ’’ ಎನ್ನುವುದು ಅವರ ಪ್ರಶ್ನೆ.
ಸರಕಾರಕ್ಕೆ ವಾಸ್ತವದ ಅರಿವಿಲ್ಲವೇ?
ನವೆಂಬರ್ 8ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘‘ನೋಟು ರದ್ದತಿಯ ಮುಖ್ಯ ಉದ್ದೇಶ, ಆರ್ಥಿಕತೆಯಿಂದ ಕಪ್ಪುಹಣವನ್ನು ಕಿತ್ತುಹಾಕಬೇಕು ಎನ್ನುವುದು’’ ಎಂದು ಸ್ಪಷ್ಟಪಡಿಸಿದ್ದರು. ಆ ಬಳಿಕ ಸರಕಾರದ ನಿಲುವು ಪದೇ ಪದೇ ತೊಯ್ದುಟದಲ್ಲಿದೆ. ಕಪ್ಪುಹಣದ ವಾದದಿಂದ ಹೊಸ ವಾದಕ್ಕೆ ಹೊರಳಿ, ದೇಶದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಪೈಕಿ ಶೇ. 86ರಷ್ಟು ರದ್ದು ಮಾಡುವ ಮೂಲಕ ನಗದು ರಹಿತ ವ್ಯವಸ್ಥೆಗೆ ಹೊರಳಲು ಅನುಕೂಲಕರ ವಾತಾವರಣವನ್ನು ದೇಶದಲ್ಲಿ ಸೃಷ್ಟಿಸಲಾಗಿದೆ ಹಾಗೂ ಡಿಜಿಟಲ್ ಪಾವತಿ ಸಾಧನದ ಬಳಕೆಗೆ ಉತ್ತೇಜಿಸಲು ಇದು ಒಳ್ಳೆಯ ಮಾರ್ಗ ಎಂದು ಪ್ರತಿಪಾದಿಸಲಾಗುತ್ತಿದೆ.
ನೋಟು ರದ್ದತಿ ನಿರ್ಧಾರವು ಸಾವಿರಾರು ಭಾರತೀ ಯರನ್ನು ಬ್ಯಾಂಕ್ ಖಾತೆ ಆರಂಭಿಸಲೇ ಬೇಕಾದ ಅನಿವಾರ್ಯತೆಗೆ ತಳ್ಳಿದೆ. ಪೇಟಿಎಂನಂಥ ಇ-ವ್ಯಾಲೆಟ್ ಕಂಪೆನಿಗಳು, ಕಳೆದ ಎರಡು ತಿಂಗಳಿಂದ ಅಭೂತಪೂರ್ವ ವಹಿವಾಟು ಹೆಚ್ಚಳವನ್ನು ಕಂಡಿವೆ. ಕೇಂದ್ರ ಸರಕಾರ ಇದೀಗ ಭೀಮ್ ಆ್ಯಪ್ ಉತ್ತೇಜಿಸುತ್ತಿದ್ದು, ಇದು ಮೊಬೈಲ್ ಫೋನ್ ಆಧರಿತ ಪಾವತಿ ವ್ಯವಸ್ಥೆಯಾಗಿದೆ. ಭಾರತ್ ಇಂಟರ್‌ಫೇಸ್ ಫಾರ್ ಮನಿ ಎನ್ನುವುದು ಇದರ ವಿಸ್ತೃತ ರೂಪ. ಇದು ಭಾರತೀಯ ಜನಸಮುದಾಯದ ನಗದುರಹಿತ ಚಾಂಪಿಯನ್ ಆಗಲಿದೆ.
ಆದರೆ ಸುರೇಂದ್ರನಗರದಂಥ ಪ್ರದೇಶದ ಸಾಮಾನ್ಯ ರೈತ ನಗದು ರಹಿತ ವ್ಯವಸ್ಥೆಯಲ್ಲಿ ಬದುಕುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಇದರಿಂದ ವೇದ್ಯವಾಗುವ ಅಂಶವೆಂದರೆ, ಸರಕಾರಕ್ಕೆ ಗ್ರಾಮೀಣ ಭಾರತದ ತಳಮಟ್ಟದ ವಾಸ್ತವಗಳ ಅರಿವು ಇಲ್ಲ ಎನ್ನುವುದು.
ಸರಕಾರದ ನಗದುರಹಿತ ಕನಸನ್ನು ಟೀಕಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮೀಣ ಗುಜರಾತ್‌ನ ರೈತರು ಇದೀಗ ಮೋದಿ ಬಗ್ಗೆ ಮತ್ತು ಬಿಜೆಪಿ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಮುಂದಿನ ಅಕ್ಟೋಬರ್‌ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಈ ಭ್ರಮನಿರಸನ, ಮೋದಿಯವರ ತಾಯ್ನೆಲದಲ್ಲಿ ಬಿಜೆಪಿಯ ಭವಿಷ್ಯಕ್ಕೆ ಮಾರಕವಾಗಿ ಪರಿಗಣಿಸುವ ಎಲ್ಲ ಸಾಧ್ಯತೆಗಳಿವೆ.
ಮತ್ತೆ ಬಿಜೆಪಿಗೆ ಮತ ಹಾಕಲಾರೆ
ಉದಾಹರಣೆಗೆ ಜಗದೀಶ್‌ಭಾಯ್ ರಮಣಿ, ನೋಟು ರದ್ದತಿಗೆ ಮುನ್ನ ಬಿಜೆಪಿಯ ಕಟ್ಟಾ ಬೆಂಬಲಿಗ. ಆದರೆ ಕಳೆದ ಎರಡು ತಿಂಗಳಿನಿಂದ ಅವರಿಗೆ ಪಕ್ಷದ ಬಗ್ಗೆ ಇದ್ದ ಎಲ್ಲ ಉತ್ಸಾಹವೂ ಕುಗ್ಗಿದೆ. ‘‘ಆರಂಭದಲ್ಲಿ ನಾನು ಮೋದಿ ಬಗ್ಗೆ ಬಹಳ ವಿಶ್ವಾಸ ಹೊಂದಿದ್ದೆ. ಏಕೆಂದರೆ ನಮಗೆ ಆಗುವ ಅನನುಕೂಲಗಳು ಕೇವಲ 50 ದಿನಗಳಿಗೆ ಸೀಮಿತ ಎಂದು ಅವರು ಹೇಳಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ನಗದು ಕೊರತೆ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ’’ ಎಂದು ಸುರೇಂದ್ರನಗರದ ಗೋಮ್ತಾ ಗ್ರಾಮದಲ್ಲಿ 13 ಎಕರೆ ಕೃಷಿಭೂಮಿ ಹೊಂದಿರುವ ರಮಣಿ ಹೇಳುತ್ತಾರೆ. ‘‘ಈ ಬಾರಿ ಮೋದಿ ಪ್ರತಿಪಾದನೆಯಂತೆ ಒಂದೂ ಆಗಿಲ್ಲ. ಆದ್ದರಿಂದ ಮುಂದಿನ ಬಾರಿ ಬಿಜೆಪಿಗೆ ಮತ್ತೆ ಮತ ಹಾಕುತ್ತೇನೆ ಎಂದು ನನಗೆ ಅನಿಸುವುದಿಲ್ಲ’’ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ನವೆಂಬರ್ ಮಧ್ಯದಲ್ಲಿ ರಮಣಿ ತಮ್ಮ 700 ಕೆಜಿ ಹತ್ತಿಗೆ ಸುಮಾರು 70 ಸಾವಿರ ರೂಪಾಯಿ ಆದಾಯ ಪಡೆದರು. ಆದರೆ ಬ್ಯಾಂಕಿನಲ್ಲಿ ನಗದು ಕೊರತೆ ಇದ್ದ ಹಿನ್ನೆಲೆಯಲ್ಲಿ ಅವರು ತಮ್ಮ ಆದಾಯದ ಮತ್ತು ಉಳಿತಾಯದ ಒಂದು ಭಾಗವನ್ನಷ್ಟೇ ಪಡೆಯುವುದು ಸಾಧ್ಯವಾಗಿದೆ.
‘ಕೇವಲ ಬೀಜ ಹಾಗೂ ಗೊಬ್ಬರ ಖರೀದಿಸಲು ಕಷ್ಟವಾಗಿದೆ ಎಂಬ ಕಾರಣಕ್ಕೆ ನನಗೆ ಹತಾಶೆ ಉಂಟಾಗಿಲ್ಲ. ಬದಲಾಗಿ, ನನ್ನ ಕೂಲಿಕಾರ್ಮಿಕರಿಗೆ ನಾನು ಕೂಲಿ ನೀಡಲು ಕೂಡಾ ಸಾಧ್ಯವಾಗುತ್ತಿಲ್ಲ’’ ಎನ್ನುವುದು ರಮಣಿ ಅವರ ಅಳಲು. ಈಗಾಗಲೇ ಹಲವು ಬಾರಿ ಬ್ಯಾಂಕಿಗೆ ತೆರಳುವ ಸಲುವಾಗಿ ಅವರು ತಮ್ಮ ಇಡೀ ದಿನದ ಕೆಲಸ ಸ್ಥಗಿತಗೊಳಿಸಿದ್ದಾರೆ. ಇಷ್ಟಾಗಿಯೂ ತಮ್ಮ ಹೊಲದಲ್ಲಿ ಕೆಲಸ ಮಾಡುವ 10-12 ಕೂಲಿಕಾರ್ಮಿಕರಿಗೆ ದಿನಕ್ಕೆ 100-150 ರೂಪಾಯಿ ಕೂಲಿ ನೀಡುವುದೂ ಸಾಧ್ಯವಾಗುತ್ತಿಲ್ಲ. ‘‘ಈ ಕೂಲಿಕಾರ್ಮಿಕರು ಅನಕ್ಷರಸ್ಥರು. ಬ್ಯಾಂಕ್ ಖಾತೆ ಎಂದರೇನು ಎನ್ನುವುದೂ ಅವರಿಗೆ ಗೊತ್ತಿಲ್ಲ. ಅವರಿಗೆ ನಗದು ಅಲ್ಲದೆ ನಾನು ಬೇರೆ ಯಾವ ರೂಪದಲ್ಲಿ ಕೂಲಿ ನೀಡಲು ಸಾಧ್ಯ?’’ ಎಂದು ಅವರು ಪ್ರಶ್ನಿಸುತ್ತಾರೆ.
ಇಷ್ಟಾಗಿಯೂ ದೊಡ್ಡ ಸಂಖ್ಯೆಯ ರೈತರು, ತಮ್ಮ ಕೂಲಿಕಾರ್ಮಿಕರಿಗಿಂತ ಸ್ವಲ್ಪಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದ್ದಾರೆ. ಉದಾಹರಣೆಗೆ ಸುರೇಂದ್ರನಗರದಲ್ಲಿ ನೂರಾರು ಮಂದಿ ಹೈನುಗಾರಿಕೆ ಹೊಂದಿರುವ ರೈತರಿಗೆ ಕಳೆದ 50 ದಿನಗಳಿಂದ ಪಾವತಿ ಬಂದಿಲ್ಲ. ಏಕೆಂದರೆ ಅವರು ತಮ್ಮ ಮೊದಲ ಬ್ಯಾಂಕ್ ಖಾತೆಯನ್ನು ಇನ್ನಷ್ಟೇ ತೆರೆಯಬೇಕಾಗಿದೆ.
‘‘ನೋಟು ರದ್ದತಿ ಆರಂಭದ ಬಳಿಕ ಜಿಲ್ಲೆಯ ಗುಡ್ಡಗಾಡು ಗ್ರಾಮಗಳಿಂದ ಸಣ್ಣ ರೈತರು ನನ್ನ ಬಳಿ ಬಂದಿದ್ದಾರೆ. ಬ್ಯಾಂಕ್ ಖಾತೆ ತೆರೆಯಲು ನೆರವಾಗುವಂತೆ ಕೋರಿದ್ದಾರೆ’’ ಎಂದು ಸುರೇಂದ್ರನಗರ ಜಿಲ್ಲಾಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕಾಂತಿಭಾಯ್ ತಮಾಲಿಯಾ ವಿವರಿಸಿದರು. ಬಹಳಷ್ಟು ಮಂದಿ ಬ್ಯಾಂಕಿಂಗ್ ವಿಚಾರದಲ್ಲಿ ಅನನುಭವಿಗಳು ಹಾಗೂ ಅನಕ್ಷರಸ್ಥರು. ಆದರೆ ಸರಕಾರ ಇದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದೀಗ ನೋಟು ರದ್ದತಿ ಮೂಲಕ ನಗದು ರಹಿತ ವ್ಯವಸ್ಥೆಗೆ ಮುಂದಾಗಿದೆ
ಬಿಜೆಪಿಯೊಳಗೇ ಟೀಕೆ?
‘‘ನೋಟು ರದ್ದತಿ ನಿರ್ಧಾರದ ಸೂಕ್ತ ಅನುಷ್ಠಾನದಲ್ಲಿ ಮತ್ತು ನಗದು ರಹಿತ ಆರ್ಥಿಕತೆಯ ಯೋಜನೆಯಲ್ಲಿ ಇರುವ ಲೋಪಗಳನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳದಿದ್ದರೂ, ಗುಜರಾತ್‌ನಲ್ಲಿ ಕೆಳ ಶ್ರೇಣಿಯ ಪಕ್ಷದ ಕಾರ್ಯಕರ್ತರು, ಇದಕ್ಕೆ ಭಿನ್ನಮತವನ್ನು ವ್ಯಕ್ತಪಡಿಸುತ್ತಿದ್ದಾರೆ’’ ಎಂದು ರೈತರ ಹಕ್ಕುಗಳ ಹೋರಾಟಗಾರ ಸಾಗರ್ ರಾಬ್ರಿ ಹೇಳುತ್ತಾರೆ.
ಡಿಸೆಂಬರ್ 14ರಿಂದ ಜನವರಿ 2ರವರೆಗೆ, ರಾಬ್ರಿ ಹಾಗೂ ಗುಜರಾತ್ ಖೇದತ್ ಸಮಾಜದ ಇತರ ಸದಸ್ಯರು, ರಾಜ್ಯದಲ್ಲಿ ರೈತರು ಕಳೆದ ಕೆಲ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿಯಲು ರಾಜ್ಯದ ಸೌರಾಷ್ಟ್ರ ಪ್ರದೇಶದಲ್ಲಿ 460 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ. ‘‘ನನ್ನ ಯಾತ್ರೆಯ ಅವಧಿಯಲ್ಲಿ, ನೋಟು ರದ್ದತಿಯನ್ನು ಅನುಷ್ಠಾನಗೊಳಿಸಿದ ವಿಧಾನದ ಬಗ್ಗೆ ಹಲವು ಮಂದಿ ರೈತರು ಅಸಮಾಧಾನ ಹೊಂದಿರುವುದು ನನಗೆ ದೃಢಪಟ್ಟಿದೆ. ಕೃಷಿ ಕಾರ್ಮಿಕರು ದೊಡ್ಡಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ರೈತರು ಭಿಕ್ಷುಕರ ಸ್ಥಿತಿಗೆ ಬಂದಿದ್ದಾರೆ. ನಾನು ಭೇಟಿ ಮಾಡಿದ ಹಲವು ಮಂದಿ ಬಿಜೆಪಿ ಮುಖಂಡರು ತಮ್ಮದೇ ಸರಕಾರವನ್ನು ಕಟುವಾಗಿ ಟೀಕಿಸುತ್ತಿದ್ದಾರೆ.’’
ರೇಂದ್ರನಗರದ ಲಖ್ತರ್ ಬ್ಲಾಕ್‌ನ ಓಲಾಕ್ ಗ್ರಾಮದ ರೈತ ಮಹೇಶ್‌ಭಾಯ್ ಮಜೀತಿಯಾ ಹೇಳುವಂತೆ, ‘‘ಬಿಜೆಪಿ ಕಾರ್ಯಕರ್ತರು ತೀವ್ರ ಅಸಮಾಧಾನ ಹೊಂದಿದ್ದಾರೆ. ಏಕೆಂದರೆ ಅವರೇ ಸ್ವತಃ ನೋಟು ರದ್ದತಿಯ ನಿರ್ಧಾರದಿಂದಾಗಿ ಸಾಕಷ್ಟು ಬವಣೆಪಟ್ಟಿದ್ದಾರೆ. ನಮ್ಮ ಗ್ರಾಮದ ಎಲ್ಲ ಬಿಜೆಪಿ ಕಾರ್ಯಕರ್ತರು ನೋಟು ಬಂಧಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅದನ್ನು ಬಹಿರಂಗವಾಗಿ ಹೇಳಲು ಭಯಪಡುತ್ತಿದ್ದಾರೆ. ಇದರ ಬದಲಾಗಿ ಅವರು, ಕಪ್ಪುಹಣ ಸಂಗ್ರಹವಾದ ಬಳಿಕ ಸರಕಾರದಿಂದ ಹೇಗೆ ರೈತರಿಗೆ ಹೇಗೆ ಹಣ ಹರಡುತ್ತದೆ ಎಂಬ ಬಗ್ಗೆ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ.’’
ಸುರೇಂದ್ರನಗರದ ಮಾಜಿ ಶಾಸಕ ಬಿಜೆಪಿಯ ಧನರಾಜ್ ಕೇಲಾ ಹೇಳುವಂತೆ, ‘‘ನಗದು ಕೊರತೆಯಿಂದಾಗಿ ಶ್ರೀಮಂತರಿಗಿಂತ ಹೆಚ್ಚಾಗಿ ಬಡವರು, ರೈತರು ಹಾಗೂ ಕೂಲಿಕಾರ್ಮಿಕರು ತೊಂದರೆಗೀಡಾಗಿದ್ದರೂ, ಸುಮ್ಮನಿದ್ದಾರೆ.’’
‘‘ಆದರೆ ಆ ಬಗ್ಗೆ ನೀವು ಯೋಚಿಸಿದರೆ, ಭಾರತದಲ್ಲಿ ಕೇವಲ ಶೇ. 30ರಷ್ಟು ಮಂದಿಗೆ ಮಾತ್ರ ನಗದುರಹಿತ ಹಣಕಾಸು ವಿಧಾನದ ಬಗ್ಗೆ ಅರಿವು ಇದೆ’’ ಎಂದು ಕೇಲಾ ಹೇಳುತ್ತಾರೆ. ಉಳಿದ ಶೇ. 20ರಷ್ಟು ಜನರು, ತಮ್ಮ ಮೊಬೈಲ್ ಫೋನ್ ಬಳಕೆ ಮಾಡುವುದನ್ನು ಈಗಷ್ಟೇ ಆರಂಭಿಸಿದ್ದಾರೆ. ಉಳಿದ ವರ್ಗ, ಅದರಲ್ಲೂ ಮುಖ್ಯವಾಗಿ, ಗ್ರಾಮೀಣ ಭಾರತದ ದಿನಗೂಲಿ ಕಾರ್ಮಿಕರು ಇನ್ನೂ ಅನಕ್ಷರಸ್ಥರು. ಅವರಲ್ಲಿ ಬಹುತೇಕ ಮಂದಿಗೆ ಬ್ಯಾಂಕ್ ಎಂದರೇನು ಎನ್ನುವುದೇ ತಿಳಿದಿಲ್ಲ. ಹಲವು ಮಂದಿ ರೈತರು ಹಾಗೂ ಕಾರ್ಮಿಕರಿಗೆ ಬ್ಯಾಂಕ್ ಖಾತೆ ತೆರೆಯಲು ನಾನು ನೆರವು ನೀಡಿದ್ದೇನೆ. ಆದರೆ ಅವರು ಬ್ಯಾಂಕಿಗೆ ಹೋದಾಗ, ಸಾಹೇಬ್ ಇದರಿಂದ ನಾವು ಏನು ಮಾಡಬೇಕು ಎಂದು ಪ್ರಶ್ನಿಸುತ್ತಾರೆ’’ ಎನ್ನುವುದು ಕೇಲಾ ಅವರ ವಿಶ್ಲೇಷಣೆ.
ಕೃಪೆ: scroll.in