ಅನಿವಾಸಿ ಭಾರತೀಯರಿಗೆ ಇನ್ನಷ್ಟು ಸೌಲಭ್ಯ: ಸಚಿವ ಗೊಯೆಲ್
ಪ್ರವಾಸಿ ಭಾರತೀಯ ದಿವಸ್‌ಗೆ ಚಾಲನೆ
ಬೆಂಗಳೂರು, ಜ.7: ಭಾರತೀಯ ಯುವ ಸಮೂಹ ವಿಶ್ವದೆಲ್ಲೆಡೆ ರಾಷ್ಟ್ರದ ಯಶಸ್ಸನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಮೂಲಕ ಭಾರತಮಾತೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ವಿಜಯ್ ಗೋಯೆಲ್ ತಿಳಿಸಿದ್ದಾರೆ.
ಶನಿವಾರ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆರಂಭಗೊಂಡ ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ್ ಸಮಾರಂಭದಲ್ಲಿ ಯುವ ಪ್ರವಾಸಿ ಭಾರತೀಯ ದಿವಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಶೇ.65ರಷ್ಟು ಯುವ ಸಮುದಾಯಕ್ಕೆ ಉದ್ಯೋಗ ನೀಡುವುದರ ಜೊತೆ ಸಂಸ್ಕೃತಿ, ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಯುವ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದ ಅವರು, 500 ರೂ. ಮತ್ತು ಸಾವಿರ ರೂ. ಮುಖಬೆಲೆಯ ನೋಟು ರದ್ದು ಕ್ರಮವನ್ನು ರಾಷ್ಟ್ರದ ಜನತೆ ಮುಕ್ತವಾಗಿ ಪ್ರೋತ್ಸಾಹಿಸಿ ಬ್ಯಾಂಕ್ ಮುಂದೆ ಗಂಟೆಗಟ್ಟಲೆ ಕಾದರೂ, ದೇಶದ ಹಿತಕ್ಕಾಗಿ ಪ್ರಧಾನಿ ಕ್ರಮವನ್ನು ಸ್ವಾಗತಿಸಿದ್ದಾರೆ ಎಂದು ಸ್ಮರಿಸಿದರು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಅಣುಬಾಂಬ್ ಪರೀಕ್ಷೆ ವೇಳೆಯು ಇದೇ ರೀತಿ ವಿರೋಧ ವ್ಯಕ್ತವಾಗಿತ್ತು. ಆದರೆ, ಆಗ ಮಾಡಿದ ಸಾಧನೆಯನ್ನು ಈಗ ಮೆಚ್ಚಿಕೊಳ್ಳುತ್ತಿದ್ದಾರೆ. ಅನಿವಾಸಿ ಭಾರತೀಯರ ಸಮಸ್ಯೆ ಆಲಿಸಲು ಮುಕ್ತ ಮನಸ್ಸು ಹೊಂದಿದ್ದು, ಅನಿವಾಸಿ ಭಾರತೀಯರಿಗೆ ಶೈಕ್ಷಣಿಕ ಮೀಸಲಾತಿ, ಶುಲ್ಕ ಇಳಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಸೂರಿನಾಮ್ ದೇಶದ ಉಪ ರಾಷ್ಟ್ರಪತಿ ಮೈಕೆಲ್ ಅಶ್ವಿನ್ ಆಧೀನ್ ಮಾತನಾಡಿ, ಭಾರತ ವಿಶ್ವ ಗುರು ಆಗಬೇಕು. ಅದನ್ನು ಯಾರೂ ತಡೆಯಬಾರದು. ಭಾರತ- ಸೂರಿನಾಮ್ ದೇಶಗಳ ನಡುವೆ ಉತ್ತಮ ಸಂಬಂಧ ವೃದ್ದಿಯಾಗಬೇಕು. ಪರಸ್ಪರ ಗೌರವ, ಪರಿಸರ ನೀತಿ ವಿನಿಮಯ ಆಗಬೇಕು ಎಂದು ಅಪೇಕ್ಷಿಸಿದರು.
ನಮ್ಮ ದೇಶದಲ್ಲಿ ಶೇ.20ಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದಾರೆ. ನೈಸರ್ಗಿಕ ಸಂಪನ್ಮೂಲ ಹೇರಳವಾಗಿದ್ದು, ಬಂಡವಾಳ ಹೂಡಿಕೆಗೆ ಅನುಕೂಲವಾಗಿದೆ. ತೈಲ, ಗಣಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಮನ ಸೆಳೆದಿದ್ದು, ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ವಿದೇಶಾಂಗ ಇಲಾಖೆ ಕಾರ್ಯದರ್ಶಿ ಧ್ಯಾನೇಶ್ವರ್ ಮೂಳೆ ಮಾತನಾಡಿ, ಪ್ರವಾಸಿ ಭಾರತೀಯ ದಿವಸ್ ಮೇಳಕ್ಕೆ 72 ರಾಷ್ಟ್ರದ 7200ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರು ಅಲ್ಲಿ ಸೂಕ್ತ ವ್ಯವಸ್ಥೆ ದೊರೆಯದ ಕಾರಣ 50 ವಿದ್ಯಾರ್ಥಿಗಳನ್ನು ಸಮ್ಮೇಳನಕ್ಕೆ ಕಳುಹಿಸಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ.ವಿ.ಕೆ.ಸಿಂಗ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು, ಅನಿವಾಸಿ ಭಾರತೀಯ ಪ್ರತಿನಿಧಿಗಳು ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.