ಶೀಘ್ರ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಅಂತ್ಯ?
ಬೆಂಗಳೂರು, ಜ.8: ನೋಟು ರದ್ದತಿಯ ನಂತರ ಡಿಜಿಟಲ್ ವ್ಯವಹಾರಕ್ಕೆ ಅಗತ್ಯವಿರುವ ದೊಡ್ಡ ಉತ್ತೇಜನ ಸಿಗುತ್ತಿರುವ ಕಾರಣದಿಂದ ಕಾರ್ಡ್ ಗಳು, ಎಟಿಎಂಗಳು ಮತ್ತು ಪಿಒಎಸ್ ಯಂತ್ರಗಳು 2020 ಒಳಗೆ ದೇಶದಾದ್ಯಂತ ಅಪ್ರಸ್ತುತವಾಗಲಿವೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. ಭಾರತ ಹಣಕಾಸು ತಂತ್ರಜ್ಞಾನ ಮತ್ತು ಸಾಮಾಜಿಕ ಹೊಸತನ ವಿಷಯದಲ್ಲಿ ದೊಡ್ಡ ಅಡ್ಡಿಯನ್ನು ಎದುರಿಸುತ್ತಿದೆ. ಈ ಅಡ್ಡಿಯೇ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವಂತೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
“2020ರಲ್ಲಿ, ಅಂದರೆ ಮುಂದಿನ ಎರಡೂವರೆ ವರ್ಷದಲ್ಲಿ ಭಾರತದಲ್ಲಿ ಡೆಬಿಟ್ ಕಾರ್ಡುಗಳು, ಕ್ರೆಡಿಟ್ ಕಾರ್ಡುಗಳು, ಎಲ್ಲಾ ಎಟಿಎಂ ಯಂತ್ರಗಳು, ಎಲ್ಲಾ ಪಿಒಎಸ್ ಯಂತ್ರಗಳೂ ಅಪ್ರಸ್ತುತವಾಗಲಿದೆ. ಏಕೆಂದರೆ ಎಲ್ಲಾ ಭಾರತೀಯರು ಕೇವಲ ಹೆಬ್ಬೆರಳನ್ನು ಬಳಸಿಕೊಂಡು 30 ಸೆಕೆಂಡುಗಳಲ್ಲಿ ಹಣಕಾಸು ವ್ಯವಹಾರ ಮಾಡಲಿದ್ದಾರೆ ಎಂದು ಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಪ್ರವಾಸಿ ದಿವಸ್ 2017 ಎನ್ನುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸ್ಟಾರ್ಟ್ ಅಪ್ ಗಳು ಮತ್ತು ಇನ್ನೋವೇಶನ್ ಗಳು ಮತ್ತು ಭಾರತದ ಮೇಲೆ ಸಾಮಾಜಿಕ ಪರಿಣಾಮ ಎನ್ನುವ ವಿಷಯದಲ್ಲಿ ಮಾತನಾಡಿದ ಅವರು, “ನಾವೀಗ ದೊಡ್ಡ ಪ್ರಮಾಣದಲ್ಲಿ ಡಿಜಿಟಲ್ ಪಾವತಿಗಾಗಿ ಒತ್ತಡ ಹೇರುತ್ತಿದ್ದೇವೆ. ಇದು ದೊಡ್ಡ ಅಡ್ಡಿಯಾಗಿದೆ ಮತ್ತು ಹಲವಾರು ಹೊಸ ವಿಧಾನಗಳನ್ನು ಮುಂದಿಡಲಿದೆ. ಬಯೋಮೆಟ್ರಿಕ್ ಮೂಲಕ ಭಾರತ ಇದಕ್ಕೆ ಅಗತ್ಯ ಹಿನ್ನೆಲೆಯನ್ನು ಭಾರತ ರೂಪಿಸಿಕೊಂಡಿದೆ” ಎಂದು ಅವರು ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ಭೀಮ್ ಆಪ್ ಮತ್ತು ಆಧಾರ್ ಮೂಲಕದ ಪಾವತಿ ವ್ಯವಸ್ಥೆಯನ್ನು ಉದಾಹರಿಸಿ ಹೇಳಿದ್ದಾರೆ.
ಭಾರತದಲ್ಲಿ ಬಿಲಿಯನ್ ಮೊಬೈಲ್ ಮತ್ತು ಬಿಲಿಯನ್ ಬಯೋಮೆಟ್ರಿಕ್ ವ್ಯವಸ್ಥೆ ಇದ್ದೂ ನಗದು ವ್ಯವಹಾರವನ್ನೇ ಅವಲಂಭಿಸಿದೆ. ಹೀಗಾಗಿ ನೋಟು ರದ್ದತಿ ನಂತರ ಡಿಜಿಟಲ್ ವ್ಯವಹಾರಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ 2 ಟ್ರಿಲಿಯನ್ ಡಾಲರ್ ಅಧಿಕೃತ ಮತ್ತು ಮತ್ತೊಂದು ಒಂದು ಟ್ರಿಲಿಯನ್ ಅರ್ಥವ್ಯವಸ್ಥೆ ಅನಧಿಕೃತವಾಗಿದ್ದರೆ ಪ್ರಗತಿ ಸಾಧ್ಯವಿಲ್ಲ. ಹೀಗಾಗಿ ಅನಧಿಕೃತ ಅರ್ಥವ್ಯವಸ್ಥೆಯನ್ನು ಅಧಿಕೃತಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಇದು ಭಾರತದ ಅತೀ ದೊಡ್ಡ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.