ನಾಳೆಯಿಂದ ರಾಜ್ಯದ ಪೆಟ್ರೋಲ್ ಬಂಕ್‌ಗಳು ಕಾರ್ಡ್‌ಗಳನ್ನು ಸ್ವೀಕರಿಸುವುದಿಲ್ಲ
ಬ್ಯಾಂಕುಗಳಿಂದ ವಹಿವಾಟು ಶುಲ್ಕ ವಸೂಲಿಗೆ ವಿರೋಧ
ಬೆಂಗಳೂರು,ಜ.9: ಇಂಧನ ಮಾರಾಟಕ್ಕಾಗಿ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪ್ರತಿ ಹಣ ಸ್ವೀಕಾರದ ಮೇಲೆ ಶೇ.1ರಷ್ಟು ವಹಿವಾಟು ಶುಲ್ಕವನ್ನು ವಿಧಿಸುವ ಬ್ಯಾಂಕುಗಳ ‘ದಿಢೀರ್ ಮತ್ತು ವಿವೇಚನಾರಹಿತ ’ಕ್ರಮವನ್ನು ವಿರೋಧಿಸಿ ನಾಳೆಯಿಂದ ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳು ಕಾರ್ಡ್‌ಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಿವೆ.
ಇಂದಿಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್‌ಗಳ ಸಂಘ ಮತ್ತು ಬೆಂಗಳೂರು ಪೆಟ್ರೋಲಿಯಂ ಡೀಲರ್‌ಗಳ ಸಂಘದ ಅಧ್ಯಕ್ಷ ಬಿ.ಆರ್.ರವೀಂದ್ರನಾಥ ಅವರು, ಬ್ಯಾಂಕುಗಳು ಜನರ ಕ್ಷಮೆ ಯಾಚಿಸಬೇಕು ಎಂದರು. ತೈಲ ಮಾರಾಟ ಕಂಪನಿಗಳು ವಿತರಕರ ಲಾಭಾಂಶವನ್ನು ಶೇ.0.3ರಿಂದ ಶೇ.0.5ರವರೆಗೆ ನಿಗದಿಗೊಳಿಸಿವೆ. ಬ್ಯಾಂಕುಗಳು ನಮ್ಮ ಮೇಲೆ ನೇರವಾಗಿ ಶೇ.1 ವಹಿವಾಟು ಶುಲ್ಕವನ್ನು ಹೇರಿದರೆ ನಾವೆಲ್ಲಿ ಹೋಗಬೇಕು? ಇಂತಹ ಪರಿಸ್ಥಿತಿಯಲ್ಲಿ ನಾವು ಉಳಿಯುವದೇ ಕಷ್ಟ ಎಂದು ಅವರು ಹೇಳಿದರು.
ಕಾರ್ಡ್ ಬಳಸುವ ಗ್ರಾಹಕರ ಮೇಲೆ ಯಾವುದೇ ಹೊಸ ಶುಲ್ಕವನ್ನು ವಿಧಿಸುತ್ತಿಲ್ಲವಾದ್ದರಿಂದ ಬ್ಯಾಂಕುಗಳ ಈ ಕ್ರಮ ಜನರ ಮೇಲೆ ನೇರ ಪರಿಣಾಮವನ್ನು ಬೀರುವುದಿಲ್ಲ. ಆದರೆ ಬಂಕ್‌ಗಳು ಕಾರ್ಡ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿ ‘ನಗದು ಮಾತ್ರ ’ ನೀತಿಗೆ ಅಂಟಿಕೊಂಡರೆ, ನೋಟು ರದ್ದತಿಯ ಬಳಿಕ ನಗದು ಹಣದ ಹರಿವು ಕಡಿಮೆಯಾಗಿರುವದರಿಂದ ಖಂಡಿತವಾಗಿಯೂ ಲಕ್ಷಾಂತರ ಗ್ರಾಹಕರು ತೊಂದರೆಯನ್ನು ಎದುರಿಸಬೇಕಾಗುತ್ತದೆ.