‘ಪ್ರತ್ಯೇಕ ವಲಯ’ದತ್ತ ಒಲವು ತೋರದ ಬೀದಿಬದಿ ವ್ಯಾಪಾರಿಗಳು
ಗ್ರಾಹಕರು ಬರುತ್ತಿಲ್ಲ-ಬೋಣಿ ಆಗುತ್ತಿಲ್ಲ ಎಂದು ಅಳಲು ತೋಡುವ ವ್ಯಾಪಾರಿಗಳು
ಮಂಗಳೂರು, ಜ.8: ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಹಲವು ವರ್ಷಗಳ ಹೋರಾಟದ ಲವಾಗಿ ಮಂಗಳೂರು ಮಹಾನಗರ ಪಾಲಿಕೆಯು ನಗರದ ಲೇಡಿಗೋಶನ್ ಆಸ್ಪತ್ರೆ ಸಮೀಪದ ಟೆಂಪೊ ಸ್ಟಾಂಡ್ ಹಿಂಬದಿಯಲ್ಲಿ ಸುಮಾರು 500 ಮಂದಿ ವ್ಯಾಪಾರಿಗಳಿಗೆ ಆಗುವಷ್ಟು ಸ್ಥಳಾವಕಾಶವಿರುವ ‘ಬೀದಿಬದಿ ವ್ಯಾಪಾರಸ್ಥರ ವಲಯ’ವನ್ನು ಸ್ಥಾಪಿಸಿ ತಿಂಗಳಾಗುತ್ತಾ ಬಂದರೂ ಬೀದಿಬದಿ ವ್ಯಾಪಾರಸ್ಥರು ಈ ವಲಯ ಪ್ರವೇಶಿಸಿ ವ್ಯಾಪಾರ ಮಾಡಲು ಒಲವು ತೋರುತ್ತಿಲ್ಲ. ಶನಿವಾರ ಮಧ್ಯಾಹ್ನ ಪ್ರತ್ಯೇಕ ವಲಯಕ್ಕೆ ಪ್ರವೇಶಿಸಿದಾಗ ಬಿಕೋ ಎನ್ನುತ್ತಿತ್ತು. ಸಾಮಗ್ರಿ ಗಳನ್ನು ಮಾರಾಟ ಮಾಡುವ ಸಲಕರಣೆಗಳ ಹೊರತುಪಡಿಸಿ ಯಾವುದೇ ಮಾರಾಟ ವಸ್ತುಗಳು ಇರಲಿಲ್ಲ. ವ್ಯಾಪಾರಿಗಳೂ ಕಂಡು ಬರಲಿಲ್ಲ. ಅಲ್ಲಿದ್ದ ಒಬ್ಬ ವ್ಯಾಪಾರಿ ಬಜಾಲ್ ಜಲ್ಲಿಗುಡ್ಡೆಯ ಅಬ್ದುಲ್ ಹಮೀದ್, ತನ್ನ ಸಾಮಗ್ರಿಗಳನ್ನು ಕಟ್ಟಿಕೊಂಡು ಹೊರಡಲು ಅಣಿಯಾಗುತ್ತಿದ್ದರು. ಪ್ರತ್ಯೇಕ ವಲಯದ ‘ಬಿಕೋ’ ಬಗ್ಗೆ ಪ್ರಶ್ನಿಸಿದಾಗ, ತಾನು 10 ದಿನದ ಹಿಂದೆ ಇಲ್ಲಿಗೆ ಬಂದು ಸಾಮಗ್ರಿಗಳನ್ನು ರಾಶಿ ಹಾಕಿ ಮಾರಾಟಕ್ಕೆ ಮುಂದಾಗುತ್ತಿದ್ದೇನೆ. ಆದರೆ ಬೋಣಿ ಆಗದ ದಿನಗಳೇ ಹೆಚ್ಚು. ಸ್ವಲ್ಪ ವ್ಯಾಪಾರವಾಗಿದ್ದರೂ ಅದರಿಂದ ಬದುಕು ಸಾಗಿಸಲು ಸಾಧ್ಯವಿಲ್ಲ. ಸುಮಾರು 20 ವರ್ಷಗಳಿಂದ ತಾನು ಬೀದಿಬದಿ ವ್ಯಾಪಾರದಲ್ಲಿ ತೊಡಗಿದ್ದೇನೆ. ಆದರೆ, ಈ ಪರಿಸ್ಥಿತಿ ಎದುರಾಗಿಲ್ಲ ಎಂದರು.
‘ಹಾಗಿದ್ದರೆ, ನಿಮಗೆ ಮನಪಾ ಪ್ರತ್ಯೇಕ ವ್ಯಾಪಾರಿ ವಲಯ ನಿರ್ಮಿಸಿ ಕೊಟ್ಟದ್ದು ತಪ್ಪು ಅಂತೀರಾ?’ ಎಂದು ಕೇಳಿದರೆ, ‘ಇಲ್ಲ... ಇಲ್ಲ... ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಆತಂಕ ಆಗುತ್ತಲೇ ಇತ್ತು. ಮನಪಾ ಅಕಾರಿಗಳು ಯಾವಾಗ ದಾಳಿ ಮಾಡುತ್ತಾರೆ ಎಂದು ಹೇಳಲಿಕ್ಕೆ ಆಗುತ್ತಿರಲಿಲ್ಲ. ಆದರೆ, ಈಗ ಹಾಗಿಲ್ಲ. ಇದು ನಮ್ಮೆಲ್ಲರ ಹೋರಾಟದ ಲದಿಂದ ಮನಪಾವೇ ನಮಗೆ ಗುರುತಿನ ಚೀಟಿ ಕೊಟ್ಟಿದೆ. ಅದನ್ನು ಸದುಪಯೋಗಪಡಿಸುವ ಜವಾಬ್ದಾರಿ ನಮ್ಮದಾಗಿದೆ’ ಎಂದರು.
‘ವ್ಯಾಪಾರ ಆಗಿಲ್ಲ ಅಂತ ಬೇಸರವಿದೆ. ಹಾಗಂತ ಮತ್ತೆ ಬೀದಿಬದಿಯತ್ತ ಹೊರಳುವುದು ಸರಿಯಲ್ಲ. ಎಲ್ಲ ಬೀದಿಬದಿ ವ್ಯಾಪಾರಸ್ಥರಿಗೂ ಮನಪಾ ಗುರುತಿನ ಚೀಟಿ ನೀಡಬೇಕು. ಎಲ್ಲರೂ ಇಲ್ಲೇ ವ್ಯಾಪಾರ ಮಾಡಬೇಕು. ಇಲ್ಲಿ ವ್ಯಾಪಾರ ನಡೆಯುತ್ತಿರುವ ಬಗ್ಗೆ ಜನರಿಗೆ ತಿಳಿಸುವಂತಹ ವ್ಯವಸ್ಥೆಯಾಗಬೇಕು. ಈ ವಲಯವನ್ನು ಆವರಣದೊಳಗೆ ಪ್ರತ್ಯೇಕಿಸಿಡುವ ಬದಲು ಇದನ್ನು ತೆರೆದಿಡಬೇಕಿದೆ. ಅದಕ್ಕಾಗಿ ಮುಂಭಾಗದ ಆವರಣ ಗೋಡೆಯನ್ನು ಕೆಡವಿ ಕಬ್ಬಿಣದ ಗೇಟುಗಳನ್ನು ನಿರ್ಮಿಸಿಕೊಡಬೇಕು’ ಎಂದು ಅಬ್ದುಲ್ ಹಮೀದ್ ಅಭಿಪ್ರಾಯಪಟ್ಟರು.
ಗುರುತಿನ ಚೀಟಿ ಸಿಕ್ಕರೂ ಪ್ರಯೋಜನವಿಲ್ಲ: ಮನಪಾ ಈಗಾಗಲೇ 208 ಮಂದಿಗೆ ಅಕ ಗುರುತಿನ ಚೀಟಿ ನೀಡಿದೆ. ಇನ್ನೂ ಹಲವರಿಗೆ ಚೀಟಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಗುರುತಿನ ಚೀಟಿ ಸಿಕ್ಕಿದರೂ ಕೂಡ ಅದರ ಪ್ರಯೋಜನ ವ್ಯಾಪಾರಿಗಳಿಗೆ ಇಲ್ಲದಂತಾಗಿದೆ. ಗುರುತಿನ ಚೀಟಿ ಸಿಕ್ಕವರು ಪ್ರತ್ಯೇಕ ವಲಯ ಪ್ರವೇಶಿಸಿಯೂ ಉತ್ತಮ ವ್ಯಾಪಾರವಾಗದ ಹತಾಶೆಯಲ್ಲಿದ್ದರೆ, ಚೀಟಿ ಪಡೆಯದ ಹಲವರು ಬೀದಿಬದಿಯಲ್ಲೇ ವ್ಯಾಪಾರ ಮಾಡಿ ಎಂದಿನಂತೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದರಿಂದ ಚೀಟಿ ಪಡೆದವರು ವ್ಯಾಪಾರ ಮಾಡಲಾಗದೆ ಪರಿತಪಿಸುವಂತಾಗಿದೆ. ಒಟ್ಟಿನಲ್ಲಿ ಗುರುತಿನ ಚೀಟಿ ಪಡೆದ ವ್ಯಾಪಾರಿಗಳು ಬೀದಿಬದಿಗೆ ಬೀಳುವಂತಾಗಿದೆ.
ಸಾಮಾನ್ಯವಾಗಿ ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ನಡೆಯುತ್ತಿದೆ. ಇದೀಗ ಬೀದಿಬದಿಯ ವ್ಯಾಪಾರ ನಿಗದಿತ ಸಮಯದಲ್ಲಿ ಬಿರುಸಿನಿಂದ ನಡೆಯುತ್ತಿದ್ದರೂ ಪ್ರತ್ಯೇಕ ವಲಯದಲ್ಲಿ ಮಾತ್ರ ಬೆಳಗ್ಗೆ 10ಗಂಟೆಯ ಬಳಿಕ ಯಾರೂ ಕಾಣಿಸುತ್ತಿಲ್ಲ. ಇದು ವ್ಯಾಪಾರಿಗಳ ಪರವಾಗಿ ಹೋರಾಟ ಮಾಡುವ ಸಂಘಟನೆಯ ನಾಯಕರಿಗೂ ಸವಾಲಾಗಿ ಪರಿಣಮಿಸಿದೆ.
ಎಲ್ಲರಿಗೂ ಗುರುತಿನ ಚೀಟಿ ನೀಡಲಿ
ನಗರದ ಸುಮಾರು 600 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಕೊಡಬೇಕಿತ್ತು. ಆದರೆ ಮನಪಾ ಕೇವಲ 208 ಮಂದಿಗೆ ಮಾತ್ರ ಈ ಚೀಟಿ ನೀಡಿದೆ. ಇನ್ನೂ 350 ಮಂದಿಗೆ ಕೊಡಲು ಬಾಕಿಯಿದೆ. ಪ್ರತ್ಯೇಕ ವಲಯ ನೀಡಿದ ಬಳಿಕ ವಾದರೂ ಪಾಲಿಕೆ ಎಲ್ಲರಿಗೂ ಚೀಟಿ ನೀಡಬೇಕಾಗಿತ್ತು. ಕೆಲವರಿಗೆ ಕೊಟ್ಟು ಇನ್ನು ಕೆಲವರಿಗೆ ಕೊಡದ ಕಾರಣ ಸಮಸ್ಯೆಯಾಗಿದೆ. ಅಕೃತ ವ್ಯಕ್ತಿಗೆ ವ್ಯಾಪಾರ ಆಗದಂತ ಸನ್ನಿವೇಶವನ್ನು ಮನಪಾ ಮಾಡಿದೆ. ಎಲ್ಲರಿಗೂ ಚೀಟಿ ಕೊಟ್ಟು, ಎಲ್ಲರನ್ನೂ ಪ್ರತ್ಯೇಕ ವಲಯದಲ್ಲಿ ಕೂರಿಸಿ, ಆವರಣ ಗೋಡೆಯನ್ನು ಕೆಡವಿ ಕಬ್ಬಿಣದ ಗೇಟ್ ನಿರ್ಮಿಸಿ ಕೊಟ್ಟರೆ ಮಾತ್ರ ಪ್ರತ್ಯೇಕ ವಲಯಕ್ಕೊಂದು ಅರ್ಥ ಬಂದೀತು.
*ಪ್ರತ್ಯೇಕ ಆಹಾರ ವಲಯ ಕೊಡಿ: ಆಮ್ಲೆಟ್, ಚುರುಮುರಿ, ನೂಡಲ್ಸ್ ಇತ್ಯಾದಿ ಾಸ್ಟ್ ುಡ್ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯ ಕೊಡುವಂತೆ ಮನಪಾಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, 208 ಗುರುತಿನ ಚೀಟಿಯ ಪೈಕಿ 25 ಮಂದಿ ಆಹಾರ ತಯಾರಿ ವ್ಯಾಪಾರಿ ಗಳಿಗೂ ಚೀಟಿ ನೀಡಲಾಗಿದೆ. ಆಮ್ಲೆಟ್, ಚುರುಮುರಿ, ನೂಡಲ್ಸ್ ತಯಾರಿಸಿ ಕೊಟ್ಟರೂ ಇಕ್ಕಟ್ಟಾದ ಸ್ಥಳದಲ್ಲಿ ನಿಂತೋ, ಕುಳಿತೋ ತಿನ್ನಲು ಸಾಧ್ಯವಿಲ್ಲ. ಅಲ್ಲದೆ, ಬೆಂಕಿಯ ಬಿಸಿಗೆ ಪಕ್ಕದಲ್ಲೇ ಇರುವ ತರಕಾರಿ, ಹಣ್ಣು ಹಂಪಲು ಹಾಳಾಗುವ ಸಾಧ್ಯತೆಯಿದೆ. ಇದನ್ನು ಮನಪಾ ಅಕಾರಿಗಳು ಗಮನಿಸಬೇಕು.
ಸುನೀಲ್ ಕುಮಾರ್ ಬಜಾಲ್,
ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ.
ಸುಸಜ್ಜಿತ ವಲಯ
ಇದೀಗ ಗುರುತಿಸಲ್ಪಟ್ಟಿರುವ ಪ್ರತ್ಯೇಕ ವಲಯವು ಅತ್ಯಂತ ಸುಸಜ್ಜಿತ ವಾಗಿದೆ. ಇಂಟರ್ಲಾಕ್ ಅಳವಡಿಸಿದ್ದರಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ ಗ್ರಾಹಕರಿಗೂ ಅನುಕೂಲವಾಗಿದೆ. ಧೂಳಿನಿಂದ ಮುಕ್ತವಾದ ಈ ವಲಯವು ಭದ್ರತೆಯ ದೃಷ್ಟಿಯಿಂದಲೂ ಉತ್ತಮ ಸ್ಥಳ.