ಉತ್ತರ ಪ್ರದೇಶದಲ್ಲಿ ರಿವರ್ಸ್ ಲವ್‌ಜಿಹಾದ್
ಬುದ್ಧನ ಮಹಾನಿರ್ವಾಣದ ವಿಹಾರಧಾಮವಾಗಿ ಪ್ರವಾಸಿಗಳನ್ನು ಕೈಬೀಸಿ ಕರೆಯುವ ಖುಷಿನಗರದಲ್ಲಿ ಹಿಂದೂ ಯುವ ವಾಹಿನಿ ಅಟ್ಟಹಾಸ ಮುಗಿಲುಮುಟ್ಟಿದೆ. ಗೋರಖ್‌ಪುರದ ಹೋರಾಟಗಾರ ಪರ್ವೇಝ್ ಹೇಳುವಂತೆ, ಇದು ಬಲಪಂಥೀಯ ಎಚ್‌ವೈವಿ ಸಂಘಟನೆಯ ಕೋಮುವಾದದ ಪ್ರಯೋಗಶಾಲೆಯಾಗಿದೆ. ‘‘ಇಲ್ಲಿ ಮುಸ್ಲಿಮರು ಸಾಮಾಜಿಕವಾಗಿ ತೀರಾ ದುರ್ಬಲರು ಹಾಗೂ ಎಚ್‌ವೈವಿ ಕಾರ್ಯಕರ್ತರಿಗೆ ಸಂಸದ ಆದಿತ್ಯನಾಥ್ ಬೆಂಬಲ ಇದೆ. ಇವರು ಕೋಮುಲಗಭೆ ಹಾಗೂ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ’’
ಬುದ್ಧನ ವಿಹಾರಸ್ಥಳ ಎಂದೇ ಖ್ಯಾತವಾಗಿರುವ ಖುಷಿನಗರದಲ್ಲಿ ಇದೀಗ ಮುಸ್ಲಿಂ ಹೆಣ್ಣುಮಕ್ಕಳನ್ನು ಅಪಹರಿಸಿ ಬಲಾತ್ಕಾರದಿಂದ ಹಿಂದುತ್ವಕ್ಕೆ ಮತಾಂತರಿಸುವ ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. ಉತ್ತರ ಪ್ರದೇಶ ಮುಂದಿನ ತಿಂಗಳ ಚುನಾವಣೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಈ ಸೂಕ್ಷ್ಮ ಪ್ರದೇಶದ ರಿವರ್ಸ್ ಲವ್‌ಜಿಹಾದ್ ವಾಸ್ತವ ಚಿತ್ರಣ ಅರಿಯುವ ಸಲುವಾಗಿ ಶ್ವೇತಾ ದೇಸಾಯಿ ಭೇಟಿ ನೀಡಿದ್ದರು.
ಈಗ ಈ ಮಹಿಳೆಯ ಹೆಸರು ಅಮೀಷಾ ಠಾಕೂರ್. ಗಂಡ ಅರವಿಂದ್ ನೀಡಿದ ಹೊಸ ಹೆಸರು ಇದು. ನೀಲಿ- ತಿಳಿಗುಲಾಬಿ ಮಿಶ್ರಿತ ಬಣ್ಣದ ಸೀರೆ, ಹಣೆಯಲ್ಲಿ ಸಿಂಧೂರ, ಬಿಂದಿಯಿಂದ ಶೋಭಿಸುತ್ತಿರುವ ಈಕೆ ಸಂಪ್ರದಾಯಸ್ಥ ವಿಧೇಯ ಬಹು ಆಗಿ ಕಂಡುಬರುತ್ತಾರೆ. ಆದರೆ ಪೂರ್ವ ಉತ್ತರಪ್ರದೇಶದ ಖುಷಿನಗರ ಜಿಲ್ಲೆಯ ಚೌಬಿಯಾ ರಾಂಪುರ ಗ್ರಾಮದ ಠಾಕೂರ್ ನಿವಾಸದಲ್ಲಿ ಎಲ್ಲವೂ ಸರಿಯಾಗಿದ್ದಂತೆ ಕಾಣುತ್ತಿಲ್ಲ. ಒಂದು ಬೀದಿ ಆಚೆಗೆ ಅಮೀಷಾಳ ಅಜ್ಜನ (ತಾಯಿಯ ತಂದೆ) ಮನೆ ಇದೆ. ಆದರೆ ಅಮೀಷಾ ಎಲ್ಲಿದ್ದಾಳೆ ಎಂಬ ಕಲ್ಪನೆಯೂ ಅವರಿಗೆ ಇಲ್ಲ. ಮೂರು ವರ್ಷದ ಹಿಂದೆ ಅಪಹರಿಸಲ್ಪಟ್ಟಾಗ ಆಕೆಗೆ ಕೇವಲ ಹದಿಮೂರು ವರ್ಷ. ಇದೀಗ ಆಕೆ ಹಿಂದೂ ಯುವಕನ ಪತ್ನಿ; ಪುಟ್ಟ ಜುಬೇದಾ ಖಟೂನ್ ಆಗಿ ಉಳಿದಿಲ್ಲ.
ಆಕೆಯನ್ನು ಹಿಂದೂ ಧರ್ಮಕ್ಕೆ ಮತಾಂತರಿಸುತ್ತಿರುವುದಾಗಿ ಪಂಚಾಯತ್‌ನಲ್ಲಿ ಘೋಷಿಸಿದರು. ಇದೀಗ ಆಕೆ ಹಾಗೆಯೇ ಜೀವಿಸುತ್ತಿದ್ದಾಳೆ. ನಾವು ಹೇಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯ? ಎಂದು ಮಾವ ಅಬ್ದುಲ್ಲಾ ಪ್ರಶ್ನಿಸುತ್ತಾರೆ. ಈ ವಾಸ್ತವವನ್ನು ಒಪ್ಪಿಕೊಳ್ಳುವುದು ಕುಟುಂಬಕ್ಕೆ ಕಷ್ಟ. ಗ್ರಾಮದಲ್ಲಿ ಇರುವ ಕೆಲವೇ ಮುಸ್ಲಿಂ ಕುಟುಂಬಗಳಲ್ಲಿ ಈ ಕುಟುಂಬವೂ ಒಂದು. ಪ್ರಭಾವಿ ಠಾಕೂರ್ ಕುಟುಂಬ ನಮ್ಮ ಹುಡುಗಿಯನ್ನು ಅಪಹರಿಸಿ, ಬಲಾತ್ಕಾರದಿಂದ ಮತಾಂತರಿಸಿದೆ ಎನ್ನುವುದು ಅವರ ಆರೋಪ.
ಝುಬೈದಾ ಕುಟುಂಬ 2013ರಲ್ಲಿ ದಾಖಲಿಸಿದ ಎಫ್‌ಐಆರ್ ಪ್ರಕಾರ, ರಾಮೇಶ್ವರ ಠಾಕೂರ್ ಹಾಗೂ ಅವರ ಮಕ್ಕಳಾದ ಅರವಿಂದ ಹಾಗೂ ನಗೀನ್ ಠಾಕೂರ್ ಅವರ ವಿರುದ್ಧ ಅಪಹರಣ ಮತ್ತು ಯುವತಿಯನ್ನು ಒತ್ತಾಯಪೂರ್ವಕ ವಿವಾಹಕ್ಕೆ ಒಳಪಡಿಸಿದ ಆರೋಪ ಹೊರಿಸಲಾಗಿದೆ. ಕುಟುಂಬದ ಹೇಳಿಕೆ ಪ್ರಕಾರ, ರಾಮೇಶ್ವರ ಸಿಂಗ್ ಅವರ ಹಿಂದೂ ಯುವವಾಹಿನಿ ಸ್ನೇಹಿತರು ಹಾಗೂ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ರಚಿಸಿದ ಬಲಪಂಥೀಯ ಹಿಂದೂ ಗುಂಪು ಈ ಅಪಹರಣ ಕೃತ್ಯ ಎಸಗಿದೆ.
ಝುಬೈದಾ ಕಣ್ಮರೆಯಾದ ಕೆಲ ತಿಂಗಳ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಅರವಿಂದ್ ಠಾಕೂರ್‌ನನ್ನು ಸ್ವಇಚ್ಛೆಯಿಂದ ವಿವಾಹವಾಗುತ್ತಿರುವುದಾಗಿ ಹೇಳಿಕೆ ನೀಡಿದಳು. ಇದಕ್ಕೆ ಆಕೆಯ ಕುಟುಂಬ ವಿರೋಧ ವ್ಯಕ್ತಪಡಿಸಿ, ಆಕೆ ಇನ್ನೂ ಅಪ್ರಾಪ್ತ ವಯಸ್ಸಿನವಳು; ಅರವಿಂದ್ ಆಕೆಯನ್ನು ಪುಸಲಾಯಿಸಿದ್ದಾಗಿ ಪ್ರತಿಪಾದಿಸಿತು. ನಾವು ಸಾಕಷ್ಟು ಪ್ರಯತ್ನ ಮಾಡಿದೆವು; ಪ್ರಕರಣ ದಾಖಲಿಸಿದೆವು. ನ್ಯಾಯಾಲಯದ ಕಟ್ಟೆ ಹತ್ತಿದೆವು. ಆದರೆ ಕ್ರಮೇಣ ಆಕೆ ಕಾನೂನುಬದ್ಧವಾಗಿ ವಿವಾಹಯೋಗ್ಯ ವಯಸ್ಸಿನವಳು ಎಂದು ಸುಳ್ಳು ದಾಖಲೆಗಳನ್ನು ಪ್ರಸ್ತುತಪಡಿಸಿ ಹಿಂದೂ ಯುವಕನ ಜತೆ ವಿವಾಹ ಮಾಡಿದರು ಎನ್ನುವುದು ಅಬ್ದುಲ್ಲಾ ಹೇಳಿಕೆ. ಠಾಕೂರ್ ಕುಟುಂಬ ಪಂಚಾಯ್ತಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿ, ಮುಸ್ಲಿಂ ಹುಡುಗಿಯನ್ನು ಹಿಂದುತ್ವಕ್ಕೆ ಮತಾಂತರಿಸಿದ್ದನ್ನು ಡಂಗುರ ಸಾರಿಸಿ ಮೆರವಣಿಗೆ ಮಾಡಿ ಆಚರಿಸಿದರು. ಗ್ರಾಮದಲ್ಲಿ ನಮಗೆ ಅವಮಾನ ಮಾಡುವ ಸಲುವಾಗಿ ಹೀಗೆ ಮಾಡಿದರು ಎಂದು ಅಬ್ದುಲ್ಲಾ ಆಕ್ಷೇಪಿಸುತ್ತಾರೆ. ಝುಬೈದಾ ಅಲಿಯಾಸಸ್ ಅಮೀಷಾ ಈಗ 21 ವರ್ಷದ ಮಹಿಳೆ ಎಂದು ಹೇಳಿಕೊಳ್ಳುತ್ತಿದ್ದು, ಸ್ವ ಇಚ್ಛೆಯಿಂದ ವಿವಾಹವಾಗಿರುವುದಾಗಿ ಹೇಳಿಕೊಳ್ಳುತ್ತಿದ್ದಾಳೆ. ‘‘ನಾನು ಹಿಂದೂ ಯುವಕನನ್ನು ವಿವಾಹವಾಗಿದ್ದಕ್ಕೆ ನನ್ನ ಕುಟುಂಬಕ್ಕೆ ಸಿಟ್ಟಿದೆ. ನನ್ನ ಅಪಹರಣ ಎನ್ನುವ ಪ್ರಹಸನ ತಪ್ಪು ತಿಳಿವಳಿಕೆ. ಪ್ರತಿ ದಂಪತಿಯಲ್ಲೂ ಕೆಲ ಸಮಸ್ಯೆಗಳಿರುತ್ತವೆ. ನಮ್ಮಲ್ಲೂ ಇದೆ. ಹಿಂದೂಗಳಂತೆ ನಾನು ನಡೆದುಕೊಳ್ಳುತ್ತೇನೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಉಪವಾಸ ಆಚರಿಸುತ್ತೇನೆ. ನನ್ನ ಭಾವಮೈದುನರು ಹೇಳುವಂತೆ ಮಾಡುತ್ತೇನೆ’’ ಎಂದು ಮೂರು ವರ್ಷದ ಮಗನನ್ನು ಕಂಕುಳಲ್ಲಿ ಹೊತ್ತ ಅಮೀಷಾ ಹೇಳುತ್ತಾರೆ.
ಆದರೆ ವಾಸ್ತವ ಅಬ್ದುಲ್ಲಾ ಹಾಗೂ ಅಮೀಷಾ ಹೇಳಿಕೆಯ ಮಧ್ಯೆ ಎಲ್ಲೋ ಹುದುಗಿದೆ. ಆದರೆ ಸತ್ಯಾಂಶವೆಂದರೆ ಖುಷಿನಗರ ರಿವರ್ಸ್ ಲವ್‌ಜಿಹಾದ್‌ನ ಪ್ರಯೋಗಶಾಲೆಯಾಗಿದೆ. ರಾಜಕೀಯ ಸೂಕ್ಷ್ಮ ಉತ್ತರ ಪ್ರದೇಶದಲ್ಲಿ 2014ರ ಚುನಾವಣೆ ಸಂದರ್ಭದಲ್ಲಿ ಹಿಂದೂ ಯುವತಿಯರನ್ನು ಮುಸ್ಲಿಂ ಹುಡುಗರು ವಿವಾಹವಾಗುವ ಘಟನೆ ಬಿಸಿ ಬಿಸಿ ಸುದ್ದಿಯಾಗಿತ್ತು. ಆದಿತ್ಯನಾಥ್ ಹಾಗೂ ಇತರರು ಇದನ್ನು ದೇಶದ ಭದ್ರತೆಗೆ ಅಪಾಯ ಎಂದು ಕರೆದರು. ಎಚ್‌ವೈವಿ ತಮ್ಮ ವೆಬ್‌ಸೈಟ್‌ನಲ್ಲಿ ಸಿದ್ಧಾಂತ ಎಂಬ ವಿಭಾಗದಲ್ಲಿ ಇಸ್ಲಾಂ ಪಯಣ ಜಿಹಾದ್‌ನಿಂದ ಲವ್‌ಜಿಹಾದ್ ಕಡೆಗೆ ಎಂದು ಬಣ್ಣಿಸಿದೆ. ಇದಕ್ಕೆ ವಿರುದ್ಧವಾದ ಘಟನಾವಳಿಗಳು ಇದೀಗ ನಡೆಯುತ್ತಿವೆ.
ಪ್ರಕರಣಗಳ ಸಂಖ್ಯೆ
2014ರಿಂದ 2016ರ ಅಕ್ಟೋಬರ್‌ವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಕಣ್ಮರೆ ಅಥವಾ ಅಪಹರಣದ 389 ಪ್ರಕರಣಗಳು ದಾಖಲಾಗಿವೆ. ಎಸ್ಪಿ ಭರತ್ ಕುಮಾರ್ ಯಾದವ್ ಹೇಳುವಂತೆ, ಯಾವ ಪಾಲಕರೂ ತಮ್ಮ ಹೆಣ್ಣುಮಕ್ಕಳು ಸ್ವಇಚ್ಛೆಯಿಂದ ವಿವಾಹವಾಗುವುದು ಇಷ್ಟಪಡುವುದಿಲ್ಲ. ಈ ಪೈಕಿ ಕೆಲ ಹೆಣ್ಣುಮಕ್ಕಳು ಅಪ್ರಾಪ್ತ ವಯಸ್ಸಿನವರು ಅಥವಾ ಅವರ ವಯಸ್ಸನ್ನು ಸಮರ್ಥಿಸುವ ದಾಖಲೆಗಳಿಲ್ಲ. ಅಂಥ ಪ್ರಕರಣಗಳಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟರ ಮುಂದೆ ಹೇಳಿಕೆಯನ್ನು ದಾಖಲಿಸುತ್ತೇವೆ. ಕೆಲವರು ವಿರುದ್ಧ ಧರ್ಮದವರನ್ನು ವಿವಾಹವಾಗುವುದಾಗಿ ಸ್ವಇಚ್ಛೆಯಿಂದ ಹೇಳುತ್ತಾರೆ ಆಲ್ ಇಂಡಿಯಾ ಮುಸ್ಲಿಂ ಮಜ್ಲೀಸ್-ಇ- ಮುಶಾವರತ್‌ನ ಸತ್ಯಶೋಧನಾ ತಂಡ, ಹಲವಾರು ಪ್ರಕರಣಗಳಲ್ಲಿ ಮುಸ್ಲಿಂ ಹುಡುಗಿಯರ ಅತ್ಯಾಚಾರ, ಬಲಾತ್ಕಾರದ ಅಪಹರಣ ಹಾಗೂ ಮತಾಂತರ ನಡೆದಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದೆ. ಈ ವರದಿಯನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ 2016ರ ಜನವರಿಯಲ್ಲಿ ಸಲ್ಲಿಸಲಾಗಿತ್ತು. ಸ್ಥಳೀಯ ಎಚ್‌ವೈವಿ ಗೂಂಡಾಗಳು ಹುಡುಗಿಯರ ವಿರುದ್ಧದ ದೌರ್ಜನ್ಯಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.
ಎಐಎಂಎಂಎಂ ಅಧ್ಯಕ್ಷ ಮುಹಮ್ಮದ್ ಸುಲೈಮಾನ್ ಅವರ ಪ್ರಕಾರ, ಇಂಥ ಪ್ರಕರಣಗಳ ಎಲ್ಲ ಆರೋಪಿಗಳಿಗೆ ಎಚ್‌ವೈವಿ ಸಂಪರ್ಕ ಅಥವಾ ಪ್ರಭಾವ ಇದೆ. ಈ ಭಾಗದಲ್ಲಿ ಮುಸ್ಲಿಂ ಸಮುದಾಯ ಹಿಂದುಳಿದಿರುವುದು ಇಂಥ ಪ್ರಕರಣ ಹೆಚ್ಚಲು ಮೂಲ ಕಾರಣ. ಮುಸ್ಲಿಮರು ಸಾಮಾಜಿಕ ಹಾಗೂ ಆರ್ಥಿಕವಾಗಿಯೂ ದುರ್ಬಲರು. ಹುಡುಗಿಯರು ಅಪಹರಣಕ್ಕೆ ಒಳಗಾಗಿರುವ ಹಲವು ಕುಟುಂಬಗಳಲ್ಲಿ ಹಿರಿಯ ಪುರುಷರಿಲ್ಲ ಅಥವಾ ಅಂಥ ಹೆಣ್ಣುಮಕ್ಕಳ ತಂದೆ ವಲಸೆ ಕಾರ್ಮಿಕರಾಗಿ ದುಡಿಯುವವರು. ಅವರು ಅಶಕ್ತರು ಹಾಗೂ ಅಸಹಾಯಕರು.
ಸಾಮಾಜಿಕ ಬಹಿಷ್ಕಾರ
ದೇಶದಲ್ಲಿರುವ ಒಟ್ಟು ಮುಸ್ಲಿಂ ಜನಸಂಖ್ಯೆಯ ನಾಲ್ಕನೆ ಒಂದರಷ್ಟು ಭಾಗ ಉತ್ತರ ಪ್ರದೇಶದಲ್ಲಿ ವಾಸವಿದೆ. ಈ ಪೈಕಿ ಶೇ.36ರಷ್ಟು ಅಲ್ಪಸಂಖ್ಯಾತರು ಪೂರ್ವ ಭಾಗದಲ್ಲಿದ್ದಾರೆ. ಪೂರ್ವತುದಿಯಲ್ಲಿ ಗೋರಖ್‌ಪುರ ಜಿಲ್ಲೆಯ ಜತೆ ಹಾಗೂ ಬಿಹಾರ ಜತೆ ಗಡಿ ಹಂಚಿಕೊಂಡಿರುವ ಖುಷಿನಗರ ಜಿಲ್ಲೆಯಲ್ಲಿ, ಮುಸ್ಲಿಂ ಜನಸಂಖ್ಯೆ ಕೇವಲ ಶೇ.16. ಇಲ್ಲಿ ಧಾರ್ಮಿಕವಾಗಿ ಭಿನ್ನತೆ ಇದ್ದರೂ, ಸಾಮಾಜಿಕವಾಗಿ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ಭಿನ್ನತೆ ವಿರಳ. ಹಲವಾರು ಮಂದಿ ಮುಸ್ಲಿಮರು ಹಿಂದೂ ಹೆಸರುಗಳನ್ನು ಹೊಂದಿದ್ದಾರೆ. ಮಹಿಳೆಯರು ತಿಲಕ ಇಟ್ಟುಕೊಳ್ಳುತ್ತಾರೆ. ಜನಪ್ರಿಯ ಚಾತ್ ಹಬ್ಬವನ್ನು ಆಚರಿಸುತ್ತಾರೆ ಕೂಡ. ಆದಾಗ್ಯೂ ಭೂ ವಿಂಗಡಣೆ, ತಾಝಿಯಾ ಗಾತ್ರ, ಲೈಂಗಿಕ ಕಿರುಕುಳ ಹಾಗೂ ಪ್ರೇಮಪ್ರಕರಣಗಳು ಹಿಂಸಾತ್ಮಕ ಕೋಮುಗಲಭೆಗಳಿಗೆ ಕಾರಣವಾಗುತ್ತಿವೆ. ಮುಸ್ಲಿಂ ಕುಟುಂಬಗಳು ಗ್ರಾಮದ ಅಂಚಿನಲ್ಲಿ ವಾಸವಾಗಿವೆ; ಕೆಲವೆಡೆ ಪ್ರತ್ಯೇಕ ಗೋಡೆ ಮೂಲಕ ಈ ಪ್ರದೇಶಗಳನ್ನು ವರ್ಗೀಕರಿಸಿರುವುದೂ ಇದೆ.
ಪೂರ್ವ ಉತ್ತರ ಪ್ರದೇಶ ಅಧಿಕ ಪ್ರಮಾಣದ ಬಡತನ ಹಾಗೂ ಕಡಿಮೆ ಸಾಕ್ಷರತೆ ಪ್ರಮಾಣವನ್ನು ಹೊಂದಿದೆ. ಕಡಿಮೆ ಆದಾಯ ಹಾಗೂ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಇದೆ. ಬಹುತೇಕರು ಗ್ರಾಮೀಣ ಹಿನ್ನೆಲೆಯವರಾಗಿದ್ದು, ಕಬ್ಬು ಬೆಳೆಯುವ ರೈತರು. ಇದು ಮಾತ್ರ ಇಡೀ ಜಿಲ್ಲೆಯಲ್ಲಿ ಲಾಭದಾಯಕ ಬೆಳೆ. ಕಳೆದ ಕೆಲ ವರ್ಷಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಮುಚ್ಚಿವೆ. ಈ ಕಾರಣದಿಂದ ಪುರುಷರು ನಗರ ಪ್ರದೇಶಗಳಿಗೆ ಉತ್ತಮ ಅವಕಾಶ ಅರಸಿ ವಲಸೆ ಹೋಗಿದ್ದಾರೆ. ಸುಲೈಮಾನ್ ಹೇಳುವಂತೆ, ಇಂತಹ ಕುಟುಂಬಕ್ಕೆ ಸೇರಿದ ಹೆಣ್ಣುವುಕ್ಕಳೇ ಕಣ್ಮರೆಯಾಗುತ್ತಿರುವುದು.ರಿವರ್ಸ್ ಲವ್ ಜಿಹಾದ್ ಬಗ್ಗೆ ಸಾಕಷ್ಟು ವರದಿ ಮಾಡಿರುವ ಸ್ಥಳೀಯ ಪತ್ರಕರ್ತ ಮುಹಮ್ಮದ್ ಅನ್ವರ್ ಸಿದ್ದಿಕಿ ಹೇಳುವಂತೆ, ಇಂಥ ಬಹುತೇಕ ಬಾಲಕಿಯರು ಪತ್ತೆಯಾಗಿಲ್ಲ. ಇತರ ಹಲವು ಮಂದಿ ಬಹಿಷ್ಕಾರದ ಭೀತಿಯಿಂದ ಸುಮ್ಮನಾಗಿದ್ದಾರೆ. ‘‘ಇಂಥ ಘಟನೆಗಳ ಸುದ್ದಿಗಳನ್ನು ಕನಿಷ್ಠ ಹೆಣ್ಣುಮಕ್ಕಳ ಮದುವೆವರೆಗಾದರೂ ಮುಚ್ಚಿಡಲು ಕುಟುಂಬಗಳು ಪ್ರಯತ್ನಿಸುತ್ತಿವೆ. ಕೆಲವರು ಮಾತ್ರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಮ್ಮದೇ ಗ್ರಾಮದ ನೆರೆಹೊರೆಯವರು ಕಿರುಕುಳ ನೀಡಿ, ಬೆದರಿಕೆ ಹಾಕಿ, ಪ್ರಕರಣ ವಾಪಸು ಪಡೆಯುವಂತೆ ಒತ್ತಡ ತರುತ್ತಿದ್ದಾರೆ ಎಂದು ಹೆಣ್ಣುಮಕ್ಕಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ’’
ಒಡೆದ ಗ್ರಾಮದ ಕಥೆ
2016ರ ಅಕ್ಟೋಬರ್‌ನಲ್ಲಿ ವಕೀಲ ಸತ್ಯೇಂದ್ರನಾಥ್ ರಾಯ್ ಅವರಿಗೆ ಕಕ್ಷಿದಾರ ಭುಲಾಯ್ ಅಲಿಯಾಸ್ ಹಬೀಬ್ ಅನ್ಸಾರಿ, ಖುಷಿನಗರದ ಬಾಲನ್ಯಾಯ ಮಂಡಳಿಯಲ್ಲಿದ್ದ ತಮ್ಮ ಪುತ್ರಿ ಬಗೆಗಿನ ಪ್ರಕರಣ ವಾಪಸು ಪಡೆಯುವಂತೆ ಮನವಿ ಮಾಡಿದರು. ಮಗಳ ವಿವಾಹ ನೆರವೇರಿಸಲು ಸಿದ್ಧತೆ ನಡೆಸಿದ್ದು, ಪ್ರಕರಣ ಇರುವುದರಿಂದ ಯಾರೂ ವಿವಾಹವಾಗಲು ಮುಂದಾಗುತ್ತಿಲ್ಲ. ಆದ್ದರಿಂದ ಪ್ರಕರಣ ವಾಪಸು ತೆಗೆಯಬೇಕು ಎಂದು ಮನವಿ ಸಲ್ಲಿಸಿದರು. 2014ರ ಮಾರ್ಚ್ ತಿಂಗಳಲ್ಲಿ ನೂರಿ ಎಂಬ ಯುವತಿಯನ್ನು ಗೌರಿ ಶ್ರೀರಾಮ್‌ನಲ್ಲಿರುವ ಆಕೆಯ ಮನೆಯಿಂದ ನಾಲ್ವರು ಹಿಂದೂ ಯುವಕರು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಹತ್ತು ದಿನಗಳ ಬಳಿಕ ಆಕೆ ವಾಪಸಾಗಿದ್ದಳು. ನೂರಿ ಮ್ಯಾಜಿಸ್ಟ್ರೇಟರ ಮುಂದೆ ಹೇಳಿಕೆ ನೀಡಿ, ನಾಲ್ವರು ಯುವಕರನ್ನು ಗುರುತಿಸಿದ್ದಳು.ಅದರಲ್ಲಿ ಬಾಲಾಪರಾಧಿಯೂ ಸೇರಿದ್ದ. ಬಾಲಕಿಯ ತಂದೆ ಎಫ್‌ಐಆರ್ ದಾಖಲಿಸಿದ್ದಕ್ಕೆ ಆರೋಪಿಗಳ ಕುಟುಂಬಗಳು ಕಿರುಕುಳ ನೀಡಲಾರಂಭಿಸಿದವು. ಇದರಿಂದ ಗ್ರಾಮದಲ್ಲೇ ಮುಕ್ತವಾಗಿ ತಿರುಗಾಡುತ್ತಿದ್ದ ಆರೋಪಿಗಳ ಹೆಸರನು್ನ ಕೈಬಿಡುವುದು ಅನಿವಾರ್ಯವಾಯಿತು.
‘‘ಆದರೆ ಅಪ್ರಾಪ್ತ ವಯಸ್ಸಿನವನನ್ನು ಮಾತ್ರ ಜೈಲಿಗೆ ಕಳುಹಿಸಲಾಯಿತು. ಉಳಿದವರ ಹೆಸರನ್ನು ಪೊಲೀಸರು ಕೈಬಿಟ್ಟರು ಎಂದು ರಾಯ್ ಹೇಳುತ್ತಾರೆ. ಆರೋಪಿಗಳು ಎಚ್‌ವೈವಿ ಸದಸ್ಯರು ಎನ್ನುವುದು ಗ್ರಾಮಸ್ಥರ ಆರೋಪ. ಮುನ್ನಾ ಶಾಹಿ ಎಂಬವರ ಆಣತಿಯಂತೆ ಈ ಪುಟ್ಟ ಹಳ್ಳಿಯ ಮುಸ್ಲಿಂ ಸಮುದಾಯ ಇದೀಗ 500 ಮೀಟರ್ ಗೋಡೆ ನಿರ್ಮಿಸಿಕೊಂಡು ಪ್ರತ್ಯೇಕವಾಗಿ ವಾಸವಾಗಿದೆ. ಮುನ್ನಾ ಶಾಹಿ ಎಚ್‌ವೈವಿ ಮುಖಂಡ ಎನ್ನುವುದು ಇಡೀ ಗ್ರಾಮಕ್ಕೆ ಗೊತ್ತು. ಅವರು ಹಾಗೂ ಅವರ ಬೆಂಬಲಿಗರು ಇಡೀ ಗ್ರಾಮದಲ್ಲಿ ಭೀತಿಯ ವಾತಾವರಣ ಮೂಡಿಸಿದ್ದಾರೆ’’ ಎಂದು ಗ್ರಾಮಸ್ಥ ಮುನ್ನಿ ವಿವರಿಸಿದರು.
‘‘ಪ್ರತಿದಿನವನ್ನು ಭೀತಿಯಿಂದಲೇ ಕಳೆಯಬೇಕಾಗಿದೆ’’ ಎಂದು ಇದೇ ಗ್ರಾಮದಲ್ಲಿ ಮೂರನೆ ವರ್ಷದ ಬಿಎ ವಿದ್ಯಾರ್ಥಿನಿ ಶಮೀನಾ ಖಟೂನ್ ಹೇಳುತ್ತಾರೆ. ನೆರೆಯ ಯುವಕ ಸಂತೋಷ್ ಎಂಬಾತ ಬೆದರಿಸಿ, ದೈಹಿಕವಾಗಿ ಹಲ್ಲೆ ಮಾಡಿದ ದಿನದಿಂದ ಇದೇ ಸ್ಥಿತಿ ಇದೆ. ಆತ ನನ್ನನ್ನು ಅಪಹರಿಸಲು ಬಂದಿದ್ದ. ಇನ್ನೇನಾಗಬೇಕು ಎಂದು ಆಕೆ ನಿಸ್ಸಹಾಯಕವಾಗಿ ಪ್ರಶ್ನಿಸುತ್ತಾಳೆ. ದೊಡ್ಡದಾಗಿ ಬೊಬ್ಬೆ ಹಾಕಿದ್ದರಿಂದ ಸಂಬಂಧಿಕರು ನೆರವಿಗೆ ಬಂದರು. ಆತ ಎಚ್‌ವೈವಿಗೆ ಸೇರಿದ ಯುವಕ. ಊರಲ್ಲಿ ಗಲಾಟೆ ಎಬ್ಬಿಸುವವರು. ಎಫ್‌ಐಆರ್‌ನಲ್ಲಿ ಸಂತೋಷ್ ಹೆಸರು ನಮೂದಿಸಿದ್ದರೂ, ಆರೋಪ ಹೊರಿಸಿಲ್ಲ.
ಲವ್‌ಜಿಹಾದ್
ಲವ್‌ಜಿಹಾದ್ ಎನ್ನುವುದು ವಿವಾದಾತ್ಮಕ ಪದವಾಗಿದ್ದು, ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆಯ ವಿವಾಹಕ್ಕೆ ಇದನ್ನು ಬಳಸಲಾಗುತ್ತದೆ. ಮತಾಂತರದ ಹಿನ್ನೆಲೆಯಲ್ಲಿ ಈ ಹೆಸರು ಹುಟ್ಟಿಕೊಂಡಿದ್ದು, 2009ರಲ್ಲಿ ಬಿಜೆಪಿ ಆಡಳಿತದ ವೇಳೆ ಕರ್ನಾಟಕದಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ಇದು. ಇದು ರಾಜಕೀಯ ಕ್ಷೇತ್ರದ ಸಂಚಲನಕ್ಕೆ ಕಾರಣವಾಯಿತು ಹಾಗೂ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಕೇರಳದಲ್ಲಿ ಕೂಡ ವ್ಯಾಪಕ ಚರ್ಚಾ ವಿಷಯವಾಗಿತು. ಮುಸ್ಲಿಂ ಸಮುದಾಯದವರು ಹಿಂದೂ ಮಹಿಳೆಯನ್ನು ಹನಿಟ್ರ್ಯಾಪ್ ಮೂಲಕ ಮತಾಂತರಿಸುವ ಹುನ್ನಾರ ಎಂದು ಆರೆಸ್ಸೆಸ್ ಹಾಗೂ ಬಿಜೆಪಿಯಂತಹ ಬಲಪಂಥೀಯರು ಇದಕ್ಕೆ ಬಣ್ಣ ಕಟ್ಟಿದರು.
ಖುಷಿನಗರ ಈಗ ಕೋಮು ಕಡಾಯಿ
ಬುದ್ಧನ ಮಹಾನಿರ್ವಾಣದ ವಿಹಾರಧಾಮವಾಗಿ ಪ್ರವಾಸಿಗಳನ್ನು ಕೈಬೀಸಿ ಕರೆಯುವ ಖುಷಿನಗರದಲ್ಲಿ ಎಚ್‌ವೈವಿ ಅಟ್ಟಹಾಸ ಮುಗಿಲುಮುಟ್ಟಿದೆ. ಗೋರಖ್‌ಪುರದ ಹೋರಾಟಗಾರ ಪರ್ವೇಝ್ ಹೇಳುವಂತೆ, ಇದು ಬಲಪಂಥೀಯ ಎಚ್‌ವೈವಿ ಸಂಘಟನೆಯ ಕೋಮುವಾದದ ಪ್ರಯೋಗಶಾಲೆಯಾಗಿದೆ. ‘‘ಇಲ್ಲಿ ಮುಸ್ಲಿಮರು ಸಾಮಾಜಿಕವಾಗಿ ತೀರಾ ದುರ್ಬಲರು ಹಾಗೂ ಎಚ್‌ವೈವಿ ಕಾರ್ಯಕರ್ತರಿಗೆ ಸಂಸದ ಆದಿತ್ಯನಾಥ್ ಬೆಂಬಲ ಇದೆ. ಇವರು ಕೋಮುಲಗಭೆ ಹಾಗೂ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ’’
2008ರಲ್ಲಿ ಪರ್ವೇಝ್ ಅಲಹಾಬಾದ್ ಹೈಕೋರ್ಟ್‌ನ ಮೊರೆಹೋದ ಬಳಿಕ, ಪೊಲೀಸರು ಆದಿತ್ಯನಾಥ್ ಹಾಗೂ ಪಕ್ಷದ ಕಾರ್ಯಕರ್ತರು ಸೇರಿದಂತೆ ಐದು ಮಂದಿ ಬಿಜೆಪಿ ಮುಖಂಡರ ವಿರುದ್ಧ ಗೋರಖ್‌ಪುರದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಕಾರಣಕ್ಕೆ ದೂರು ದಾಖಲಿಸಿದರು. 2007ರಲ್ಲಿ ಕೋಮುಗಲಭೆ ಸುಮಾರು 15 ದಿನ ಕಾಲ ಹಬ್ಬಿ, 10 ಮಂದಿ ಮುಸ್ಲಿಮರನ್ನು ಬಲಿ ಪಡೆದಿತ್ತು. ಸುಪ್ರೀಂಕೋರ್ಟ್, ಆರೋಪಿಗಳ ವಿರುದ್ಧದ ತನಿಖೆ ನಿಲ್ಲಿಸುವಂತೆ ಸೂಚಿಸಿ, ಪ್ರಕರಣದ ಬಗ್ಗೆ ಉತ್ತರ ಪ್ರದೆೀಶ ಸರಕಾರದಿಂದ ವರದಿ ಕೇಳಿತು.
2007ರ ಗಲಭೆ ಬಳಿಕ ಹಿರಿಯ ವಕೀಲ ಹಾಗೂ ಖುಷಿನಗರ ನಿವಾಸಿ ಶಫೀಯುಲ್ಲಾ ಖಾನ್, ನೂರಾರು ಮಂದಿ ಎಚ್‌ವೈವಿ ಕಾರ್ಯಕರ್ತರ ಪರ ನ್ಯಾಯಾಲಯದಲ್ಲಿ ವಾದಿಸಿದರು. ಖುಷಿನಗರ ನಿಸ್ಸಂದೇಹವಾಗಿ ಎಚ್‌ವೈವಿ ಕರ್ಮಭೂಮಿ. ‘‘ಪ್ರತೀ ಗ್ರಾಮದಲ್ಲಿ ಸಂಘಟನೆಯ ಪದಾಧಿಕಾರಿಗಳ ಹೆಸರು ಇರುವ ಕೇಸರಿ ಫಲಕ ರಾರಾಜಿಸುತ್ತದೆ. ಸದಸ್ಯರು ಕೇಸರಿ ಶಿರವಸ್ತ್ರಗಳೊಂದಿಗೆ ಬೀದಿಗೆ ಬರುವುದನ್ನು ನೋಡಿದರೆ, ಇದರ ಪ್ರಭಾವ ತಿಳಿಯುತ್ತದೆ. ಪೊಲೀಸರು ಹಾಗೂ ಆಡಳಿತ ಕೂಡಾ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಇದುವರೆಗೆ ಕೋಮುಗಲಭೆ ಪ್ರಕರಣಗಳಲ್ಲಿ ಯಾವ ಎಚ್‌ವೈವಿ ಸದಸ್ಯನಿಗೂ ಶಿಕ್ಷೆಯಾಗಿಲ್ಲ. ಏಕೆಂದರೆ ಅವರ ಹೆಸರೇ ಯಾವ ಆರೋಪಪಟ್ಟಿಯಲ್ಲೂ ಸೇರುತ್ತಿಲ್ಲ’’ ಎನ್ನುವುದು ಖಾನ್ ಅವರ ಹೇಳಿಕೆ.
ಬಹುಹಂತದ ಚುನಾವಣೆ ಉತ್ತರ ಪ್ರದೇಶದಲ್ಲಿ ಫೆಬ್ರವರಿ 11ಕ್ಕೆ ಆರಂಭವಾಗುತ್ತದೆ. ಕೋಮುದಳ್ಳುರಿಯ ಭೀತಿ ಮುಸ್ಲಿಂ ಸಮುದಾಯದಲ್ಲಿದೆ. ಜಾಟ್ ಸಮುದಾಯದ ಯುವತಿಗೆ ಮುಸ್ಲಿಂ ಯುವಕನೊಬ್ಬ ಕಿರುಕುಳ ನೀಡಿದ್ದಾನೆ ಎಂಬ ಆರೋಪದೊಂದಿಗೆ ಹುಟ್ಟಿಕೊಂಡ ಮುಝಫ್ಫರ್‌ನಗರ ಕೋಮುಗಲಭೆಯ ಕರಾಳ ನೆನಪು ಇನ್ನೂ ಹಸಿಯಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ನವರಾತ್ರಿ ಹಾಗೂ ಮೊಹರಂ ಮೆರವಣಿಗೆ ವೇಳೆ ಬತ್ರ್‌ಲಿ ಗ್ರಾಮದಲ್ಲಿ ನಡೆದ ಕೋಮುಗಲಭೆ ಇತ್ತೀಚಿನ ಉದಾಹರಣೆ. 50ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ಮನೆಗೆ ಬೀಗ ಹಾಕಿ ತಲೆಮರೆಸಿಕೊಳ್ಳಬೇಕಾಯಿತು. ಅಂಗಡಿಗಳು ಹಾಗೂ ಬೆಲ್ಲದ ಘಟಕಗಳು ನಾಶವಾದವು. ಗ್ರಾಮದ ಸರಪಂಚ, ಆನೆಯ ಮೇಲೆ ಮೆರವಣಿಗೆಯಲ್ಲಿ ಬಂದು, ಮಸೀದಿ ಪಕ್ಕದ ಅಗಲ ಕಿರಿದಾದ ಬೀದಿಯಲ್ಲಿ ಮೆರವಣಿಗೆ ಹೋಗಬೇಕು ಎಂದು ಪಟ್ಟು ಹಿಡಿದ. ಇದಕ್ಕೆ ಮುಸ್ಲಿಂ ಸಮುದಾಯ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಕೋಮುಗಲಭೆಯ ಕಿಡಿ ಹತ್ತಿಕೊಂಡಿತ್ತು. ಕ್ಷಣಮಾತ್ರದಲ್ಲೇ ಗುಂಪು ಸೇರಿಕೊಂಡು ಮುಸ್ಲಿಮರ ಮನೆಗಳಿಗೆ ಕೊಳ್ಳಿ ಇಟ್ಟರು. ಈ ಗುಂಪಿನಲ್ಲಿದ್ದ ಹಲವು ಮಂದಿ ಹೊರಗಿನವರು ಹಾಗೂ ಎಚ್‌ವೈವಿ ಕಾರ್ಯಕರ್ತರು. ಗಲಭೆ ದೊಡ್ಡದಾಗುವ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯೆಪ್ರವೇಶಿಸಿ, ರಾಜೇಶ್ವರ್ ಸಿಂಗ್ ಸೇರಿದಂತೆ ಎಚ್‌ವೈವಿ ಮುಖಂಡರು ಸ್ಥಳಕ್ಕೆ ಭೇಟಿ ನೀಡದಂತೆ ತಡೆದರು.
ಯಾವುದೇ ಕೋಮುಗಲಭೆಗಳಾಗದಂತೆ ಎಚ್ಚರ ವಹಿಸಿದ್ದು, ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಆಡಳಿತ ಯಂತ್ರ ಹೇಳುತ್ತದೆ. ಹಿಂದೂ ಹಾಗೂ ಮುಸ್ಲಿಮರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತದೆ. ಎಚ್‌ವೈವಿ ಮುಖಂಡ ಸಿಂಗ್ ಇದೀಗ ಚುನಾವಣಾ ಟಿಕೆಟ್ ನಿರೀಕ್ಷೆಯಲ್ಲಿದ್ದು, ಬಂಧನದಲ್ಲಿರುವ ಹಿಂದೂ ಯುವಕರ ಹೆಸರುಗಳನ್ನು ಕೈಬಿಟ್ಟು, ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ‘‘ಈ ಗಲಭೆಗೆ ಮುಸ್ಲಿಮರೇ ಕಾರಣ. ಅವರೇ ಓಡಿಹೋಗಿ ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಯಾವ ಹಿಂದೂಗಳನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುವಂತಿಲ್ಲ’’ ಎಂದು ಅವರು ಹೇಳಿದ್ದಾರೆ. ಎಚ್‌ವೈವಿ ಪೊಲೀಸ್ ಇಲಾಖೆಯ ಮೇಲೆ ಪ್ರಭುತ್ವ ಸಾಧಿಸಿದೆ ಎಂಬ ವಾದವನ್ನು ಜಿಲ್ಲಾಧಿಕಾರಿ ಶಂಭು ಕುಮಾರ್ ಅಲ್ಲಗಳೆಯುತ್ತಾರೆ. ‘‘ತಾವು ಪ್ರಬಲರು ಎಂದು ಬಿಂಬಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ನಾವು ಪರಿಸ್ಥಿತಿ ನಿಯಂತ್ರಿಸುತ್ತಿದ್ದೇವೆ’’ ಎನ್ನುವುದು ಅವರ ವಿವರಣೆ.