varthabharthi


ಮುಂಬೈ ಮಾತು

ಕಳೆಗುಂದಿದ ಗಾಳಿಪಟ ಹಾರಾಟ, ಶೌಚಾಲಯ ಹುಡುಕಲು ಆ್ಯಪ್

ವಾರ್ತಾ ಭಾರತಿ : 17 Jan, 2017
ಶ್ರೀನಿವಾಸ್ ಜೋಕಟ್ಟೆ

ಪಕ್ಷಿಗಳಿಗೆ ಮಾರಕವಾಗುವ ಗಾಳಿಪಟ ಹಾರಾಟ

ಮಕರ ಸಂಕ್ರಾಂತಿಗೆ ಅನೇಕ ಕಡೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಆದರೆ ಈ ಬಾರಿ ಗಾಳಿಪಟ ಹಾರಿಸುವವರಿಗೆ ಅನೇಕ ಕಡೆ ನಿರಾಶೆಯ ವಾತಾವರಣ ಕಂಡುಬಂತು. ಜಂಟಿ ಪೊಲೀಸ್ ಕಮಿಷನರ್ ದೇವೆನ್ ಭಾರತಿ ಅವರು ಗಾಳಿಪಟ ಹಾರಾಟದಲ್ಲಿ ನೈಲಾನ್ ನೂಲು ಮತ್ತಿತ್ತರ ಮಾರಕ ವಸ್ತುಗಳ ಬಳಕೆಗೆ ನಿಷೇಧ ಹೇರುವ ಭರವಸೆಯನ್ನು ಜೈನ ಶಕ್ತಿ ಫೌಂಡೇಶನ್‌ಗೆ ನೀಡಿದ್ದರು. ಹೀಗಾಗಿ ಈ ಬಾರಿ ಗಾಳಿಪಟ ನಿರ್ಮಾಣದ ವ್ಯಾಪಾರಿಗಳಿಗೆ ದಂಧೆ ಕಮ್ಮಿಯಾಯ್ತು.

ಮುಂಬೈ ಶಾಸಕ ಮಂಗಲ್ ಪ್ರಭಾತ್ ಲೋಢಾ ಅವರ ನೇತೃತ್ವದಲ್ಲಿ ಜೈನ ಶಕ್ತಿ ಫೌಂಡೇಶನ್ ಮತ್ತು ವಿಭಿನ್ನ ಸಂಸ್ಥೆಗಳ ಪ್ರತಿನಿಧಿ ಮಂಡಲಗಳು ಭಾರತಿ ಅವರನ್ನು ಭೇಟಿಯಾಗಿ ಒಂದು ಮನವಿ ಸಲ್ಲಿಸಿದ್ದರು. ಅದರಲ್ಲಿ ಗಾಳಿಪಟದ ನೈಲಾನ್ ನೂಲು ಪಕ್ಷಿಗಳ ಜೀವಕ್ಕೆ ಮಾರಕವಾಗಿದೆಯೆಂದು ಉಲ್ಲೇಖಿಸಲಾಗಿತ್ತು. ಅತ್ತ ಮಹಾರಾಷ್ಟ್ರ ಸರಕಾರ ಕೂಡಾ ಒಂದು ಆದೇಶದಲ್ಲಿ ನೈಲಾನ್ ನೂಲು ಮಾನವ ಜೀವ ಮತ್ತು ಪಕ್ಷಿಗಳಿಗೆ ಹಾನಿಕಾರಕ ಎಂದು ಇದನ್ನು ನಿಷೇಧಿಸುವಂತೆ ಆದೇಶ ನೀಡಿದೆ. ಆ ಆದೇಶದ ಪಾಲನೆಯನ್ನು ಪೊಲೀಸರು ಪಾಲಿಸಲು ಮುಂದಾಗಿದ್ದರು.

ಮಹಾರಾಷ್ಟ್ರ ಸರಕಾರವು ಗಾಳಿಪಟ ಹಾರಿಸುವಲ್ಲಿ ನೈಲಾನ್ ಹಗ್ಗ, ಝಿಂಕ್, ಗಾಜು ಮೊದಲಾದುವುಗಳನ್ನು ಬಳಸುವುದಕ್ಕೆ ನಿಷೇಧಿಸಿದೆ. ಇದರ ಪ್ರತಿಯನ್ನು ಸಹ ಮನವಿಯಲ್ಲಿ ಜೈನ್ ಶಕ್ತಿ ಫೌಂಡೇಶನ್ ಪ್ರತಿನಿಧಿ ಮಂಡಲವು ಜಂಟಿ ಪೊಲೀಸ್ ಕಮಿಷನರ್‌ಗೆ ನೀಡಿತ್ತು. ನಂತರ ದೇವೆನ್ ಭಾರತಿ ಅವರು ಎಲ್ಲಾ ಪೊಲೀಸ್ ಠಾಣೆಗಳಿಗೆ ಆದೇಶ ನೀಡಿದರು. ಗಾಳಿಪಟದಲ್ಲಿ ನಿಷೇಧಿತ ವಸ್ತುಗಳನ್ನು ಬಳಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದರು. ಪ್ರತೀ ವರ್ಷ ಮಕರ ಸಂಕ್ರಾಂತಿಯ ಸಮಯ ಹಾರಿಸುವ ಗಾಳಿಪಟದ ಕಾರಣ ದೊಡ್ಡ ಸಂಖ್ಯೆಯಲ್ಲಿ ಪಕ್ಷಿಗಳು ನೈಲಾನ್ ನೂಲಿಗೆ ಸಿಕ್ಕಿ ಸಾಯುವ ಪ್ರಕರಣಗಳು ವರದಿಯಾಗುತ್ತಿವೆ. ಕೆಲವೊಮ್ಮೆ ಮನುಷ್ಯರೂ, ಬೈಕ್ ಸವಾರರೂ ಈ ನೂಲಿಗೆ ಸಿಕ್ಕಿ ರಸ್ತೆ ಅಪಘಾತಕ್ಕೆ ಸಿಲುಕುವುದಿದೆ.
 
‘‘ಈ ಬಾರಿ ಗಾಳಿಪಟ ದಂಧೆ ಇಳಿಕೆಯಾಗಿದೆ ಎನ್ನುತ್ತಿದ್ದರೂ ನಿಷೇಧದ ಹೊರತೂ ಹಲವೆಡೆ ಗಾಳಿಪಟ ಮಾರಾಟ ಭರ್ಜರಿ ನಡೆದಿದೆ. ಇದು ನಿರಾಶೆ ತಂದಿದೆ’’ ಎನ್ನುತ್ತಾರೆ ‘ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್’ನ ನಿಕುಂಜ್ ಶರ್ಮಾ. ಪರೇಲ್‌ನ ವೆಟೆರ್ನರಿ ಹಾಸ್ಪಿಟಲ್‌ಗೆ ಮೊನ್ನೆ ತನಕ 60ಕ್ಕೂ ಹೆಚ್ಚು ಗಾಯಾಳು ಪಕ್ಷಿಗಳನ್ನು ತರಲಾಗಿತ್ತು. ಮುಂಬೈಯಲ್ಲಿ ಕಬೂತರ್ ಖಾನಾಗಳ ಸಂಖ್ಯೆ ಹೆಚ್ಚು, ಹಾಗಾಗಿ ಮುಕ್ಕಾಲು ಪ್ರತಿಶತ ಗಾಯಾಳು ಪಕ್ಷಿಗಳು ಪಾರಿವಾಳಗಳೇ. ಅನಂತರ ಗಿಡುಗ, ಕಾಗೆ .... ಇತ್ಯಾದಿ. ಒಂದು ಸಮಯವಿತ್ತು. ಅಕ್ಟೋಬರ್ ತಿಂಗಳಿನಿಂದಲೇ ಮುಂಬೈಯಲ್ಲಿ ಗಾಳಿಪಟ ಹಾರಾಟದಲ್ಲಿ ಮಕ್ಕಳು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈ ದಿನಗಳಲ್ಲಿ ಮಕ್ಕಳ ಓದಿನ ಹೊರೆ ಹೆಚ್ಚಾಗಿರುವ ಕಾರಣ ಹೊರಾಂಗಣದ ಚಟುವಟಿಕೆಗಳು ಕಡಿಮೆಯಾಗುತ್ತಿವೆ. 

ಶೌಚಾಲಯ ಹುಡುಕುವವರಿಗೆ ಮನಪಾದ ಮೊಬೈಲ್ ಆ್ಯಪ್

ಮುಂಬೈ ಜನರು ರಸ್ತೆಗಳಲ್ಲಿ ಓಡಾಡುವಾಗ ಇನ್ನು ಮುಂದೆ ಅಗತ್ಯವಿದ್ದಾಗ ಶೌಚಾಲಯ ಎಲ್ಲಿದೆ ಎಂದು ಪರದಾಡಬೇಕಾಗಿಲ್ಲ. ಕಾರಣ ಮುಂಬೈ ಮನಪಾ ಮೊಬೈಲ್‌ನಲ್ಲಿ ಶೌಚಾಲಯ ಎಲ್ಲಿದೆ ಎಂದು ತಿಳಿಸಲಿದೆ. ಕಳೆದ ವಾರ ಮುಂಬೈ ಮಹಾನಗರ ಪಾಲಿಕೆಯು ಶೌಚಾಲಯ ಎಲ್ಲಿದೆ ಎಂದು ತಿಳಿಸುವ ಮೊಬೈಲ್ ಆ್ಯಪ್‌ನ್ನು ಲಾಂಚ್ ಮಾಡಿದೆ. ಈ ಆ್ಯಪ್‌ನಿಂದ ಜನರು ಹತ್ತಿರದ ಶೌಚಾಲಯ ಹುಡುಕಬಹುದಾಗಿದೆ.
ಮುಂಬೈ ಮಹಾನಗರದಲ್ಲಿ ಪ್ರತೀದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಸುತ್ತಾಡಲು ಬರುತ್ತಾರೆ. ಕೆಲವರು ವಿಭಿನ್ನ ಕೆಲಸಗಳಿಗಾಗಿ ಬರುತ್ತಾರೆ. ಇಂತಹ ಜನರು ಅಗತ್ಯ ಬಿದ್ದಾಗ ಶೌಚಾಲಯಗಳನ್ನು ಹುಡುಕಲು ತುಂಬಾ ಪರದಾಡುತ್ತಿದ್ದಾರೆ. ಇವರ ಈ ತೊಂದರೆ ದೂರ ಮಾಡುವಲ್ಲಿ ಮಹಾನಗರ ಪಾಲಿಕೆಯು ಮೊಬೈಲ್ ಟಾಯ್ಲೆಟ್ ಲೊಕೆಟರ್ ಆ್ಯಪ್‌ನ್ನು ಲಾಂಚ್ ಮಾಡಿದೆ. ಇದರಲ್ಲಿ ಶೌಚಾಲಯ ಎಲ್ಲಿದೆ ಎಂದು ತಿಳಿದು ಬರುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಆ್ಯಪ್‌ಅನ್ನು ಮೊಬೈಲ್ ಫೋನ್‌ಗೆ ಡೌನ್‌ಲೋಡ್ ಮಾಡಬಹುದು. ಮನಪಾದ ಸುಮಾರು 800 ಉಚಿತ ಸಾರ್ವಜನಿಕ ಶೌಚಾಲಯಗಳನ್ನು ಈ ಆ್ಯಪ್‌ಗೆ ಜೋಡಿಸಲಾಗಿದೆ. ಇತರ ಶೌಚಾಲಯಗಳನ್ನೂ ಈ ಆ್ಯಪ್‌ಗೆ ಜೋಡಿಸುವ ತಯಾರಿ ನಡೆಯುತ್ತಿದೆ.

ಯೋಗ ಪರೀಕ್ಷೆ ತೇರ್ಗಡೆಯಾದರೆ ಕೈದಿಗಳ ಸಜೆ ಕಡಿತ !

ಯಾವನಾದರೂ ಅಪರಾಧಿಗೆ ಎಷ್ಟು ಸಜೆ ಎಂದು ನ್ಯಾಯಾಲಯ ನಿರ್ಧರಿಸುತ್ತದೆ. ಕೆಳ ನ್ಯಾಯಾಲಯ ನೀಡಿದ ಸಜೆಯನ್ನು ಕಡಿಮೆ ಮಾಡುವ ಅಧಿಕಾರ ಮೇಲಿನ ನ್ಯಾಯಾಲಯಕ್ಕೆ ಇರುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಜೈಲು ಆಡಳಿತವು ಕೈದಿಗಳ ಸಜೆಯನ್ನು ಕಡಿಮೆ ಮಾಡಬಹುದಾಗಿದೆ.
ಅದರಂತೆ ಮಹಾರಾಷ್ಟ್ರದ ಜೈಲುಗಳಲ್ಲಿ ಬಂಧಿಯಾಗಿರುವ ಸುಮಾರು 250 ಕೈದಿಗಳ ಸಜೆಯನ್ನು ಕಡಿಮೆ ಮಾಡಲಾಗಿದೆ. ಯಾಕೆ ಈ ಕೈದಿಗಳಿಗೆ ಸಜೆ ಕಡಿಮೆ ಮಾಡಲಾಯಿತು ಎಂದರೆ ಈ ಕೈದಿಗಳೆಲ್ಲ ಯೋಗದ ಪರೀಕ್ಷೆ ತೇರ್ಗಡೆ ಹೊಂದಿರುವುದು ಎನ್ನಲಾಗಿದೆ.

ಜೈಲ್‌ನ ಹೆಚ್ಚುವರಿ ಡಿಜಿ ಡಾ. ಭೂಷಣ್ ಉಪಾಧ್ಯಾಯ ಅವರು ಪತ್ರಕರ್ತರಿಗೆ ತಿಳಿಸಿದಂತೆ ಈ ತನಕ ಸುಮಾರು 40 ಕೈದಿಗಳ ಸಜೆ ಕಡಿಮೆ ಮಾಡಲಾಗಿದೆ. 200ಕ್ಕೂ ಹೆಚ್ಚು ಕೈದಿಗಳ ಸಜೆ ಕಡಿಮೆಗೊಳಿಸುವ ಪ್ರಕ್ರಿಯೆ ಒಂದೆರಡು ವಾರದಲ್ಲಿ ಪೂರ್ಣಗೊಳ್ಳಲಿದೆ. ಇಲ್ಲಿ ಕೆಲವು ಕೈದಿಗಳಿಗೆ 30 ದಿನಗಳು ಹಾಗೂ ಕೆಲವರಿಗೆ 50 ದಿನಗಳ ಸಜೆ ಕಡಿಮೆ ಮಾಡಲಾಗಿದೆ. ಡಾ. ಭೂಷಣ್ ಉಪಾಧ್ಯಾಯರ ಅನುಸಾರ ಜೈಲ್ ಆಡಳಿತವು ಹೆಚ್ಚೆಂದರೆ 90 ದಿನಗಳ ತನಕ ಯಾವನೇ ಅಪರಾಧಿಯ ಉತ್ತಮ ನಡವಳಿಕೆಗಾಗಿ ಸಜೆ ಕಡಿಮೆ ಮಾಡಬಹುದಾಗಿದೆಯಂತೆ. ಈಗ ಸಜೆ ಕಡಿಮೆ ಗೊಳಿಸಿದ ಕೈದಿಗಳು ಎಷ್ಟು ದಿನ ಮತ್ತು ಯೋಗ ಪರೀಕ್ಷೆಯಲ್ಲಿ ಎಷ್ಟು ಅಂಕ ಅಥವಾ ಗ್ರೇಡ್ ಪಡೆದಿದ್ದಾರೆ ಎಂದು ತನಿಖೆ ನಡೆಸಿ ಕಡಿಮೆ ಮಾಡಲಾಗಿದೆ.

ಉಪಾಧ್ಯಾಯ ಅವರು 2 ವರ್ಷಗಳ ಮೊದಲು ಜೈಲ್‌ನ ಹೆಚ್ಚುವರಿ ಡಿಜಿ ಆಗಿ ಬಂದಾಗ ಕೈದಿಗಳಿಗೆ ಯೋಗದ ಕುರಿತು ಆಸಕ್ತಿ ಹುಟ್ಟಿಸಲು ತೀರ್ಮಾನಿಸಿದರು. ಅದರಂತೆ ಯೋಗ ಗುರು ಬಾಬಾ ರಾಮ್‌ದೇವ್‌ರನ್ನು ಸಂಪರ್ಕಿಸಿದರು. ಮೊದಲಿಗೆ ಜೈಲ್ ಸಿಬ್ಬಂದಿಗೆ ಯೋಗ ಕಲಿಸಲಾಯಿತು. ಅನಂತರ ಈ ಸಿಬ್ಬಂದಿಯ ಮೂಲಕ ಕೈದಿಗಳಿಗೆ ಯೋಗ ತರಬೇತಿ ಕೊಡಿಸ ಲಾಯಿತು. ಕೆಲವು ಜೈಲ್ ಸಿಬ್ಬಂದಿಯನ್ನು ತರಬೇತಿಗಾಗಿ ಲೋನಾವಾಲಾದ ಕೈವಲ್ಯ ಧಾಮ್‌ಗೆ ಕಳುಹಿಸಲಾಗಿತ್ತು. ಯೋಗ ತರಬೇತಿ ಪಡೆಯುವ ಕೈದಿಗಳಿಗೆ ಎಪ್ರಿಲ್ ಅಥವಾ ಅಕ್ಟೋಬರ್‌ನಲ್ಲಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಇದೀಗ ಸುಮಾರು 250 ಕೈದಿಗಳು ಯೋಗ ತರಬೇತಿ - ಪರೀಕ್ಷೆ ಹೊಂದಿದ್ದು ಅವರು ಕಳೆದ ಅಕ್ಟೋಬರ್‌ನಲ್ಲಿ ಯೋಗ ಪರೀಕ್ಷೆಗೆ ಕುಳಿತಿದ್ದರು.

ಆದರೆ ಡ್ರಗ್ಸ್ ಅಪರಾಧದಲ್ಲಿ ಸಜೆ ಅನುಭವಿಸುವ ಕೈದಿಗಳ ಸಜೆ ಕಡಿಮೆ ಮಾಡಲಾಗುವುದಿಲ್ಲ. ಮಹಾರಾಷ್ಟ್ರದಲ್ಲಿ ಒಟ್ಟೂ 54 ಪ್ರಮುಖ ಜೈಲುಗಳಿವೆ. ಇದರಲ್ಲಿ ಸುಮಾರು 29 ಸಾವಿರ ಕೈದಿಗಳಿದ್ದಾರೆ. ಇವರಲ್ಲಿ 8 ಸಾವಿರ ವಿಚಾರಣಾಧೀನ ಕೈದಿಗಳು. ಈ ಕೈದಿಗಳ ಸಜೆ ಮಾತ್ರ ಕಡಿಮೆ ಮಾಡಲಾಗುತ್ತದೆ.

ಆನ್‌ಲೈನ್‌ನತ್ತ ಕಾಲೀ-ಪೀಲೀ ಟ್ಯಾಕ್ಸಿ

ದೇಶದಲ್ಲಿ ಕಳೆದ ನವೆಂಬರ್ 8ರಿಂದ 500 ಮತ್ತು 1000 ರೂಪಾಯಿಯ ದೊಡ್ಡ ನೋಟುಗಳ ನಿಷೇಧದ ನಂತರ ಮುಂಬೈಯ ಕಪ್ಪು-ಹಳದಿ (ಕಾಲೀ-ಪೀಲೀ) ಟ್ಯಾಕ್ಸಿಗಳ ಚಾಲಕರು ಕೂಡಾ ಸಂಕಷ್ಟಕ್ಕೆ ಬಿದ್ದಿದ್ದಾರೆ. ಇದೀಗ ಇವರೂ ಕೂಡಾ ಡಿಸೆಂಬರ್ 31ರ ನಂತರ ಆನ್‌ಲೈನ್ ಆ್ಯಪ್‌ನಿಂದ ಪೇಮೆಂಟ್ ಪಡೆಯಲು ಮುಂದಾಗಿದ್ದಾರೆ. ಕಪ್ಪು- ಹಳದಿ ಟ್ಯಾಕ್ಸಿಯವರು ಈಗಾಗಲೇ ಓಲಾ ಮತ್ತು ಉಬರ್‌ನಂತಹ ಆನ್‌ಲೈನ್ ಟ್ಯಾಕ್ಸಿ ಕ್ಯಾಬ್‌ಗಳಿಂದ ಮೊದಲೇ ತೊಂದರೆ ಅನುಭವಿಸಿದ್ದಾರೆ. ಮುಂಬೈ ಟ್ಯಾಕ್ಸಿಮೆನ್ಸ್ ಯೂನಿಯನ್ ಚಿಲ್ಲರೆ ಹಣದ ವಿವಾದವನ್ನು ಮುಂದಿಟ್ಟು ನಗರದ ಎಲ್ಲಾ ಟ್ಯಾಕ್ಸಿಗಳನ್ನು ಆನ್‌ಲೈನ್‌ಗೆ ಒಳಪಡಿಸಲು ಮುಂದಾಗಿದೆ. ಕೆಲವು ಟ್ಯಾಕ್ಸಿಗಳು ಈಗಾಗಲೇ ಪೆಟಿಎಂಗೆ ಒಳಪಟ್ಟಿದ್ದರೂ ಈ ಸಂಖ್ಯೆ ಕಡಿಮೆ.

ಬಾಂಬ್ ನಿಷ್ಕ್ರಿಯಕ್ಕೆ ನೀರಿನ ಧಾರೆ

ಸಮಯದ ಜೊತೆ ದೇಶದಲ್ಲಿ ಬಾಂಬ್ ಮತ್ತು ಇತರ ಸ್ಫೋಟಕ ಪದಾರ್ಥಗಳನ್ನು ನಿಷ್ಕ್ರಿಯಗೊಳಿಸುವ ಹೊಸ ತಾಂತ್ರಿಕ ಮತ್ತು ಅತ್ಯಾಧುನಿಕ ಉಪಕರಣಗಳು ಬಂದಿವೆ. ಈ ಉಪಕರಣಗಳ ನೀರಿನ ಧಾರೆಯಿಂದ ಯಾವುದೇ ಬಾಂಬ್ ಸ್ಫೋಟಗೊಳ್ಳುವ ಮೊದಲೇ ನಿಷ್ಕ್ರಿಯಗೊಳಿಸಬಹುದಾಗಿದೆ. ಮುಂಬೈಯ ಮರೋಲ್ ಪೊಲೀಸ್ ಟ್ರೈನಿಂಗ್ ಕ್ಯಾಂಪ್‌ನಲ್ಲಿ ಮೂರು ದಿನಗಳ ಕಾಲ ನಡೆದ ಪ್ರದರ್ಶನದ ಸಂದರ್ಭದಲ್ಲಿ ಎನ್.ಎಸ್.ಜಿ. ಇದನ್ನು ಪ್ರದರ್ಶಿಸಿದೆ. ಈ ಪ್ರದರ್ಶನ ರೆಜಿಂಗ್ ಡೇ ಸಂದರ್ಭದಲ್ಲಿತ್ತು. ಇದರಲ್ಲಿ ಫಾರೆನ್ಸಿಕ್, ಅಗ್ನಿಶಾಮಕ ದಳದ ಜೊತೆಗೆ ಎನ್.ಎಸ್.ಜಿ ಕೂಡಾ ಒಂದು ಸ್ಟಾಲ್ ಅಳವಡಿಸಿತ್ತು.

 26/11ರ ದಾಳಿಯ ನಂತರ ಮುಂಬೈಯಲ್ಲಿ ಎನ್.ಎಸ್.ಜಿ.ಯ ಸ್ಥಾಯಿ ಯುನಿಟ್ ಸ್ಥಾಪಿಸಲಾಗಿತ್ತು. ಎನ್.ಎಸ್.ಜಿ.ಯ ರೀತಿಯಲ್ಲೇ ಮುಂಬೈಯಲ್ಲಿ ಫೋರ್ಸ್-ವನ್ ಕೂಡ ಸ್ಥಾಪನೆಯಾಗಿದೆ. ಅದಕ್ಕೂ ಅಧುನಿಕ ಉಪಕರಣಗಳು ಮತ್ತು ಇತರ ಸೌಲಭ್ಯಗಳನ್ನು ನೀಡಲಾಗಿದೆ. (ಅರ್ಥಾತ್ ಎನ್.ಎಸ್.ಜಿ ಬಳಿ ಇರುವಷ್ಟು).ಮೊದಲು ಪ್ರತೀ ಬಾಂಬ್ ನಿಷ್ಕ್ರಿಯ ತಂಡವು ಬಾಂಬ್ ನಿರೋಧಕ ಜಾಕೆಟ್ ಧರಿಸಿ ಬಾಂಬ್ ನಿಷ್ಕ್ರಿಯಗೊಳಿಸುತ್ತಿತ್ತು. ಇನ್ನು ಮುಂದೆ ಎಲ್ಲಾದರೂ ಬಾಂಬ್ ಇರುವ ಸಂದೇಹ ಬಂದಾಗ ಆಧುನಿಕ ಉಪಕರಣಗಳ ಜೊತೆ ತಲುಪುತ್ತದೆ. ವಿಶಿಷ್ಟ ದುರ್ಬೀನು ಮೂಲಕ ಬ್ಯಾಗ್ ಅಥವಾ ಭೂಮಿಯ ಒಳಗಡೆ ಸ್ಫೋಟಕ ಇದೆಯೋ ಎಂದು ಪರಿಶೀಲಿಸುತ್ತದೆ. ನಂತರ ಸ್ನಿಫರ್ ಡಾಗ್ಸ್ ಸಹಾಯ ಪಡೆಯಲಾಗುತ್ತದೆ. ಕೆಲವೊಮ್ಮೆ ಎಕ್ಸ್‌ರೇ ಮೆಷಿನ್ ಕೂಡಾ ಒಯ್ಯಲಾಗುತ್ತದೆ. ಇದರ ಬೆಲೆ 67 ಲಕ್ಷದಿಂದ ಒಂದು ಕೋಟಿ ರೂ. ತನಕ ಇರುತ್ತದೆ. ಇದರ ಮೂಲಕ ಸ್ಫೋಟಕ್ಕೆ ಬಳಸಲಾಗಿರುವ ಬ್ಯಾಟರಿ ಯಾವ ಬದಿ ಇರುವುದೆಂದು ಕಂಡು ಹಿಡಿಯುತ್ತಾರೆ. ನಂತರ ಎನ್.ಎಸ್.ಜಿ ಅಥವಾ ಫೋರ್ಸ್-ವನ್ ಉದ್ದದ ಕೇಬಲ್ ಹೊರ ತೆಗೆಯುತ್ತದೆ ಹಾಗೂ ದೂರದಿಂದ ನೀರಿನ ವೇಗದ ಧಾರೆ ಬಳಸಿ ಬ್ಯಾಟರಿಯಿಂದ ಬಾಂಬ್‌ನ್ನು ಪ್ರತ್ಯೇಕಿಸುತ್ತದೆಯಂತೆ. ಎಕ್ಸ್‌ರೇ ಮೆಷಿನ್‌ನಿಂದ ಯಾವ ಬಾಂಬ್‌ನಲ್ಲಿ ಎಷ್ಟು ಸಮಯದ ಟೈಮರ್ ಅಳವಡಿಸಲಾಗಿದೆ ಎಂದೂ ತಿಳಿಯುತ್ತಾರೆ.

ವಿಐಪಿ ವಾಹನ ನಂಬರ್‌ಗಳಿಗೆ ಬೇಡಿಕೆ

ನವಿಮುಂಬೈಯ ವಾಶಿ ಆರ್‌ಟಿಒ ಕಾರ್ಯಾಲಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ವಿಐಪಿ ವಾಹನ ನಂಬರ್‌ಗಳ ಬೇಡಿಕೆ ನಿರಂತರ ವೃದ್ಧಿಯಾಗುತ್ತಿದೆ. ಇದರಿಂದ ವಾಶಿ ಆರ್‌ಟಿಒಗೆ ಕೋಟಿಗಟ್ಟಲೆ ರೂಪಾಯಿ ಆದಾಯ ಪ್ರಾಪ್ತಿಯಾಗಿದೆ. ಕೇವಲ ವಿಐಪಿ ನಂಬರ್‌ಗಳ ಹರಾಜಿನಿಂದ ವಾಶಿ ಆರ್‌ಟಿಒಗೆ 2016ರಲ್ಲಿ ಒಟ್ಟು 5 ಕೋಟಿ 70 ಲಕ್ಷ ರೂಪಾಯಿ ಆದಾಯ ಪ್ರಾಪ್ತಿಯಾಗಿದೆ. ವಿಐಪಿ ಎನ್ನಲಾಗುವ ನಂಬರ್‌ಗಳಲ್ಲಿ 1 ಕ್ರಮಾಂಕದಿಂದ ಹಿಡಿದು 9 ರ ತನಕ ಎಲ್ಲಾ ನಂಬರ್‌ಗಳಿಗೆ (11, 22, 33, 44 ರಿಂದ 99.....ಈ ರೀತಿ 111, 1111 ರಿಂದ 999, 9999 ಅಥವಾ 1234, 1122 ಇಂತಹ ನಂಬರ್‌ಗಳಿಗೆ) ಬೇಡಿಕೆ ಜಾಸ್ತಿಯಾಗಿದೆ. ಈ ವಿ.ಐ.ಪಿ. ನಂಬರ್‌ಗಳ ದರ 5 ಸಾವಿರದಿಂದ ಹಿಡಿದು ಒಂದು ಲಕ್ಷ ರೂಪಾಯಿ ತನಕ ಇರುತ್ತದೆ.
ಭವಿಷ್ಯದಲ್ಲಿ ಬರುವ ಹೊಸ ಸೀರೀಸ್‌ನ ವಿಐಪಿ ನಂಬರ್‌ಗಳ ಏಲಂನ ದರ ಈಗಿನ ದರಕ್ಕಿಂತ ಮೂರು ಪಟ್ಟು ಅಧಿಕ ಇರುವುದಂತೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)