ಸುಧಾರಣೆಯ ಹಾದಿಯಲ್ಲಿ ಭಾರತೀಯ ಕ್ರಿಕೆಟ್
ಸರ್ವೋಚ್ಚ ನ್ಯಾಯಾಲಯ ಬಿಟ್ಟ ಗೂಗ್ಲಿಗೆ ದೇಶದ ಕ್ರಿಕೆಟ್ ನಿಯಂತ್ರಣ ಮಂಡಳಿ ಕ್ಲೀನ್ ಬೌಲ್ಡ್ ಅಗಿದೆ. ಜುಲೈ 2016ರಿಂದ ನ್ಯಾಯಾಲಯ ಗೂಗ್ಲಿ ಎಸೆಯುತ್ತಿದ್ದರೂ, ಕ್ಯಾರ್ ಮಾಡದೇ ಡೆಡ್ ಬ್ಯಾಟ್ ಬೀಸುತ್ತಿದ್ದ ಬಿಸಿಸಿಐ, ಕೊನೆಗೂ ಪೆವಿಲಿಯನ್ ಹಾದಿ ಹಿಡಿಯಬೇಕಾಯಿತು. ಸೆಲೆಬ್ರಿಟಿಗಳು, ರಾಜಕಾರಣಿಗಳು, ಮಂತ್ರಿಗಳು, ಪ್ರಭಾವಿಗಳು, ಉನ್ನತಾಧಿಕಾರಿಗಳು ಮತ್ತು ಭಾರೀ ಉದ್ಯಮಿಗಳಿಂದ ತುಂಬಿದ ಕ್ರಿಕೆಟ್ ನಿಯಂತ್ರಣ ಮಂಡಳಿ, ತಾನು ದೇಶದ ಕಾನೂನಿಗೆ ಆತೀತನಂತೆ ಪೋಸು ಕೊಡುತ್ತಿತ್ತು. ತಾನು ಹೋಗಿದ್ದೇ ಹೆದ್ದಾರಿ ಎನ್ನುವಂತೆ, ತಾನೊಬ್ಬನೆ ಸರಿ, ಎನ್ನುವಂತೆ ಕಾರ್ಯ ನಿರ್ವಹಿಸುತ್ತಿತ್ತು. ದೇಶದ ಸರ್ವೋಚ್ಚ ನ್ಯಾಯಾಲಯ ಕ್ರಿಕೆಟ್ ಮಂಡಳಿಗೆ ಸರಿ ದಾರಿ ತುಳಿಯಲು ಜುಲೈ 2016 ರಲ್ಲಿಯೇ ನಿರ್ದೇಶನ ನೀಡಿದ್ದು, ಅಗಲೇ ತಲೆಬಾಗಿಸಿದ್ದರೆ, ಕೊಂಚವಾದರೂ ಘನತೆ ಮತ್ತು ಗಾಂಭೀರ್ಯವನ್ನು ಉಳಿಸಿಕೊಳ್ಳಬಹುದಿತ್ತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಲ್ಲಿ, ಲೋಧಾ ಸಮಿತಿಯ ಶಿಫಾರಸುಗಳಲ್ಲಿ, ಮೊಸರಿನಲ್ಲಿ ಕಲ್ಲು ಹುಡುಕುವಂತೆ ‘ಆಶ್ರಯ ತಾಣ’ವನ್ನು ಹುಡುಕುತ್ತಿತ್ತು.
ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ, ಬಹುತೇಕರು ಬಾಲ್ ಎಸೆಯ ಲಿಲ್ಲ, ಬ್ಯಾಟ್ ಬೀಸಿಲ್ಲ ಮತ್ತು ಪ್ಯಾಡ್ ಕಟ್ಟಿಲ್ಲ ಎನ್ನುವ ಆರೋಪದಲ್ಲಿ ಹುರುಳಿಲ್ಲದಿಲ್ಲ. ದಶಕಗಳಿಂದ ಇದು ಕೆಲವೇ ಜನರ ಒಡ್ಡೋಲಗವಾಗಿದ್ದು, ಒಂದೆರಡು ಅನಿವಾರ್ಯ ಅಪವಾದಗಳನ್ನು ಬಿಟ್ಟರೆ, ದೇವಸ್ಥಾನದ ಮೊಕ್ತೇಸರ ಮಂಡಳಿಗಳಂತೆ ಎಲ್ಲರೂ ಆಜೀವ ಸದಸ್ಯರಾಗಿದ್ದಾರೆ. ವರ್ಷಗಳಿಂದ ಅವರೇ ಕಾಣುತ್ತಿದ್ದು, ಕೇವಲ ಕುರ್ಚಿಗಳನ್ನು ಅದಲು ಬದಲು ಮಾಡಿಕೊಳ್ಳುತ್ತಿದ್ದಾರೆ. ಅದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದರ ಚಟುವಟಿಕೆಗಳಲ್ಲಿ ಸರಕಾರ ಮಧ್ಯಪ್ರವೇಶಿಸಲಾಗದು ಎನ್ನುವ ದೃಷ್ಟಿಯಲ್ಲಿ, ಕಾನೂನುಗಳನ್ನು, ನೀತಿ-ನಿಯಮಾವಳಿಗಳನ್ನು ಕೆಲವರ ವೈಯಕ್ತಿಕ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿಕೊಂಡಿದ್ದು, ಕ್ರಿಕೆಟ್ ಮಂಡಳಿಯಲ್ಲಿನ ಪದಾಧಿಕಾರಿಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಸತ್ಯದ ಅರಿವು ಆಗದಿರದು. ಇದನ್ನು ಗಂಭೀರವಾಗಿ ಗಮನಿಸಿದ ಲೋಧಾ ಸಮಿತಿ, ಯಾವ ಪದಾಧಿಕಾರಿಯೂ 9 ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಇರಬಾರದು ಮತ್ತು ಒಂದು ಪದಾಧಿಕಾರಿಯ ಗರಿಷ್ಠ ವರ್ಷ 70 ಎಂದು ನಿಗದಿ ಮಾಡಿದೆ. ಕೆಲವು ಪದಾಧಿಕಾರಿಗಳು ವೈಯಕ್ತಿಕ ಆಸ್ತಿಯಂತೆ, ಕ್ರಿಕೆಟ್ ಮಂಡಳಿಯ ಹುದ್ದೆಗಳಲ್ಲಿ ನಿರಂತರವಾಗಿ ಮುಂದುವರಿಯುತ್ತಿರುವುದು ಲೋಧಾ ಸಮಿತಿಯ ಗಮನ ಸೆಳೆದಿರಬೆಕು.
ಒಂದು ಕಾಲಕ್ಕೆ ಕ್ರಿಕೆಟನ್ನು ಸಭ್ಯರ ಆಟ ಎಂದು ಬಣ್ಣಿಸಲಾಗುತ್ತಿತ್ತು. ಈ ಬಣ್ಣನೆಗೆ ತಕ್ಕಂತೆ ಕ್ರಿಕೆಟ್ ಆಟ ಮತ್ತು ಅದರ ವ್ಯವಹಾರಗಳು ಅದೇ ರೀತಿಯಲ್ಲಿ ನಡೆಯುತ್ತಿದ್ದವು. ಆದರೆ, ಯಾವಾಗ, ಆಸ್ಟ್ರೇಲಿಯಾದ ಕೆರಿ ಪ್ಯಾಕರ್ ಒಂದು ದಿನದ ಪಂದ್ಯ ಮತ್ತು ಭಾರತದ ಲಲಿತ್ ಮೋದಿ 20 ಓವರ್ಗಳ ಚುಟುಕು ಕ್ರಿಕೆಟನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸಿ, ಟಿವಿ ಮೂಲಕ ಜಾಹೀರಾತು ಮಾಧ್ಯಮವನ್ನು ಆಕರ್ಷಿಸಿ, ಕ್ರಿಕೆಟನ್ನು ವ್ಯಾಪಾರೀಕರಣ ಮಾಡಿದರೋ, ಅಂದಿನಿಂದ, ಕ್ರಿಕೆಟ್ ತನ್ನ ಲಾಗಾಯ್ತಿನಿಂದ ಬಂದ ‘ಸಭ್ಯರ ಆಟ’ದ ಲೇಬಲ್ ಕಳಚಿಕೊಂಡು ಹೊಸ ಸ್ವರೂಪವನ್ನು ಪಡೆಯಿತು ಹಾಗೂ ಕ್ರಿಕೆಟ್ ಪಂದ್ಯಗಳು ಒಂದು ರೀತಿಯ ಜೂಜಾಗಿ ಪರಿಣಮಿಸಿತು. ಅಲ್ಲಿಯವರೆಗೆ ಕ್ರಿಕೆಟ್ ಪ್ರೇಮಿಗಳ, ಅಟಗಾರರ ಅಸ್ತಿಯಾಗಿದ್ದ, ಕ್ರಿಕೆಟ್ ನಿಯಂತ್ರಣ ಮಂಡಳಿ, ಉದ್ಯಮಿಗಳ, ಜಾಹೀರಾತು ದೊರೆಗಳ, ಟಿವಿ ಕಂಪೆನಿಗಳ ಸೆಲೆಬ್ರಿಟಿಗಳ, ರಾಜಕಾರಣಿಗಳ, ಮಹಾನ್ ಕಾರ್ಪೊರೇಟ್ ವಕೀಲರ, ಉನ್ನತ ಸರಕಾರಿ ಅಧಿಕಾರಿಗಳ ಎಲೈಟ್ ಕ್ಲಬ್ ಆಗಿ ಪರಿವರ್ತಿತಗೊಂಡಿತು.
ಲೋಧಾ ಸಮಿತಿಯು ತನ್ನ 159 ಪುಟಗಳ ವರದಿಯಲ್ಲಿ ದೇಶದಲ್ಲಿ ಕ್ರಿಕೆಟನ್ನು ಸುಧಾರಿಸುವ, ಸ್ವಚ್ಛಗಳೊಸಿಸುವ ನಿಟ್ಟಿನಲ್ಲಿ ಸಮಸ್ಯೆಯ ಉದ್ದ, ಅಗಲ ಮತ್ತು ಆಳವನ್ನು ಸುದೀರ್ಘವಾಗಿ ಮತ್ತು ಸೂಕ್ಷ್ಮವಾಗಿ ವಿಶ್ಲೇಷಿಸಿ, ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲ ಸ್ವರೂಪವನ್ನು ಬದಲಾಯಿಸುವ ಸೂತ್ರಗಳನ್ನು ಸೂಚಿಸುವುದರೊಂದಿಗೆ ಆಟದ ಬೆಳವಣಿಗೆಗೆ ಹಲವಾರು ರಚನಾತ್ಮಕ ಮತ್ತು ದೂರಗಾಮಿ ಸಲಹೆಗಳನ್ನು ನೀಡಿದೆ. ಮಂತ್ರಿಗಳನ್ನು, ಸರಕಾರದ ಉನ್ನತಾಧಿಕಾರಿಗಳನ್ನು ಮಂಡಳಿಯಿಂದ ಹೊರಗಿಡುವ ಅವರ ಸಲಹೆ ಸ್ತುತ್ಯಾರ್ಹ. ಇದಕ್ಕೂ ಮೇಲಾಗಿ ಲೋಧಾ ಸಮಿತಿ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನೂ ಕೂಡಾ ತನ್ನ ವರದಿಯಲ್ಲಿ ಸೇರಿಸಿಕೊಂಡಿರುವುದು ಇನ್ನೊಂದು ಸ್ವಾಗತಾರ್ಹ ಕ್ರಮವಾಗಿದೆ.
ದೇಶದಲ್ಲಿ ಕ್ರಿಕೆಟನ್ನು ಸ್ವಚ್ಛಗೊಳಿಸುವ ಮತ್ತು ಸುಧಾರಿಸುವ ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಲೋಧಾ ಸಮಿತಿ ವರದಿಯನ್ನು, ಕ್ರಿಕೆಟ್ ನಿಯಂತ್ರಣ ಮಂಡಳಿ ಗಂಭೀರವಾಗಿ ಪರಿಗಣಿಸದೆ, ಕೊನೆಯ ಬಾಲ್ವರೆಗೂ ರಕ್ಷಣಾತ್ಮಕ, ನುಸುಳುವಿಕೆಯ ಮತ್ತು ಜಾರಿಕೊಳ್ಳುವ ಬ್ಯಾಟ್ ಬೀಸಿದ್ದು ಮಹಾ ತಪ್ಪು.
ಮೇಲುನೋಟಕ್ಕೆ ಇದು ಕೇವಲ ಲೋಧಾರವರ ವರದಿ ಇರಬಹುದು. ಆದರೆ, ಇದರ ಹಿಂದೆ ಕೋಟ್ಯಂತರ ಕ್ರಿಕೆಟ್ ಪ್ರಿಯರ ನಿರೀಕ್ಷೆಗಳಿಗೆ ಸ್ಪಂದನೆ ಇತ್ತು ಎನ್ನುವ ವಾಸ್ತವವನ್ನು ಬಿಸಿಸಿಐ ತಿಳಿಯಲು ವಿಫಲವಾಗಿದ್ದು ವಿಷಾದಕರ. ಕ್ರಿಕೆಟ್ ಮಂಡಳಿಯ ಕಾರ್ಯ ವೈಖರಿ ಬಗೆಗೆ ದೇಶದಲ್ಲಿ ಅತೃಪ್ತಿಯ ಹೊಗೆ ಇದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುವ ಕಾಮೆಂಟ್ಗಳೇ ಇದಕ್ಕೆ ಸಾಕ್ಷಿ. ಸದ್ಯ ಭಾರತದ ಕ್ರಿಕೆಟ್ ತಂಡ ಉಚ್ಛ್ರಾಯ ಸ್ಥಿತಿಯಲ್ಲಿದೆ ಎಂದರೆ, ಇದರ ಅರ್ಥ, ಕ್ರಿಕೆಟ್ನಲ್ಲಿ ಎಲ್ಲವೂ ಸರಿಯಾಗಿದೆ ಎಂದಲ್ಲ. ನ್ಯಾಯಾಲಯ ನೇಮಿಸಿದ ಸಮಿತಿಯ ನಿರ್ದೇಶನದ ವಿರುದ್ದ ಈಜುವ ಸಾಹಸದ ದುರಂತವನ್ನು ಊಹಿಸಿದವರು ಶರದ್ ಪವಾರ್ ಒಬ್ಬರೇ. ನ್ಯಾಯಾಲಯ ಚಾಟಿ ಬೀಸುವ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಮುತ್ಸದ್ದಿತನವನ್ನು ಮತ್ತು ಕಾನೂನು ಪರಿಜ್ಞಾನವನ್ನು ಮೆರೆದರು.
ಲೋಧಾ ಸಮಿತಿಯ ನಿರ್ದೇಶನಗಳು ಮತ್ತು ಈ ನಿಟ್ಟಿನಲ್ಲಿ ನ್ಯಾಯಾಲಯ ತೆಗೆದುಕೊಂಡ ಕ್ರಮಗಳು ಕ್ರಿಕೆಟ್ ಆಟವನ್ನು ಶುದ್ಧೀಕರಣ ಗೊಳಿಸುವ, ಸ್ವಚ್ಛಗೊಳಿಸುವ ಮತ್ತು ಸುಧಾರಿಸುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆಗಳು. ಕೇವಲ ರಾಜಕಾರಣಿಗಳನ್ನು ಮತ್ತು ಸರಕಾರಿ ನೌಕರರನ್ನು ಬಿಸಿಸಿಐನಿಂದ ಹೊರಹಾಕಿದರೆ ಸಾಲದು. ಬೇರೆ, ಬೇರೆ ಹುದ್ದೆಗಳನ್ನು ಅಲಂಕರಿಸುತ್ತಾ ದಶಕಗಳಿಂದ ಮಂಡಳಿಯಲ್ಲಿ ‘ಆಜೀವ ಸದಸ್ಯ’ರಾಗಿರುವವರನ್ನು ಹೊರ ಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ದೊರಕುವಂತಾಗಬೇಕು. ಹಾಗೆಯೇ ಆಟಗಾರರು ಆಡುವ ಟೆಸ್ಟ್, ಒಂದು ದಿನದ ಪಂದ್ಯ, ಚುಟುಕು ಪಂದ್ಯಗಳ ಮೇಲೆ ನಿಯಂತ್ರಣ ಹೇರಿ, ಎಲ್ಲಾ ಅರ್ಹರಿಗೂ ಮೈದಾನಕ್ಕೆ ಇಳಿಯಲು ಅವಕಾಶ ದೊರೆಯುವಂತಾಗಬೇಕು. ಆಟಗಾರರು ಶತಕ ಬಾರಿಸಲಿ. ಅದರೆ, ಅವರು ಟೆಸ್ಟ್, ಒಂದು ದಿನದ ಪಂದ್ಯ ಮತ್ತು ಚುಟುಕು ಪಂದ್ಯಗಳ ಶತಕ ಬಾರಿಸುವುದನ್ನು ನಿಯಂತ್ರಿಸಬೇಕು. ಸುಮಾರು 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಪ್ರತಿಭೆಗಳು ಕೇವಲ ಕೆಲವು ಭಾಗಕ್ಕೆ ಮತ್ತು ಅವಕಾಶಗಳು ಕೆಲವರಿಗೆ ಸೀಮಿತವಾಗಬಾರದು.
ಲೋಧಾ ಸಮಿತಿಯ ಶಿಫಾರಸುಗಳು, ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳಿಗೂ ಅನ್ವಯಿಸಬೇಕು. ಆಗಲೇ ಸುರೇಶ ಕಲ್ಮಾಡಿ ಮತ್ತು ಅಜಯ ಸಿಂಗ್ ಚೌತಾಲರಂಥ ‘ಆಜೀವ ಅಧ್ಯಕ್ಷರ’ ಸಮಸ್ಯೆ ಉದ್ಭವವಾಗುವುದಿಲ್ಲ. ಇಂದು ಕೆಲವು ಕ್ರೀಡಾ ಸಂಸ್ಥೆಗಳು ಕ್ರೀಡೆಯನ್ನು ಉದ್ಧ್ದರಿಸುವುದನ್ನು ಬಿಟ್ಟು ಸ್ವಹಿತ, ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಾಣುತ್ತದೆ. ಹಾಗೆಯೇ ಕ್ರಿಕೆಟ್ ಆಟಗಾರರಿಗೆ ಮತ್ತು ಅಧಿಕಾರಿಗಳಿಗೆ ನೀಡುವ ಗೌರವ ಧನ ಅಥವಾ ಸಂಬಳಕ್ಕೆ ಸ್ವಲ್ಪ ಹಿಡಿತ ಇರಬೇಕು. ಈಗಿನ ಹಿಮಾಲಯದೆತ್ತರಕ್ಕೆ ಮಿತಿ ಇರಬೇಕು. ನ್ಯಾಯಾಲಯಗಳು ಮತ್ತು ಸರಕಾರಗಳು ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯನ್ನು ಇಡಬೇಕು ಮತ್ತು ಇಚ್ಛಾಶಕ್ತಿಯನ್ನು ತೋರಿಸಬೇಕು. ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳ ಹುದ್ದೆ ಗೌರವಾನ್ವಿತ ವಾಗಿರಬೇಕೇ ವಿನಹ ಅವರಿಗೆ ಅದು ಸುಖೀ ಜೀವನದ ಸೋಫಾನ ವಾಗಬಾರದು.