ನೋಟು ರದ್ದತಿ, ಭ್ರಷ್ಟಾಚಾರ ಮತ್ತು ಮೋದಿ ಸರಕಾರದ ಬೂಟಾಟಿಕೆ
ದೊಡ್ಡ ದೊಡ್ಡ ರಾಜಕಾರಣಿಗಳನ್ನೊಳಗೊಂಡ ಈ ಇಡೀ ಪ್ರಕರಣದಲ್ಲಿ ಏನೊ ಗೋಲ್ಮಾಲ್ ನಡೆದಿರುವ ಅನುಮಾನ ಬರುವುದಿಲ್ಲವೇ? ಕಾಳಧನ, ಖೋಟಾ ನೋಟು, ಭಯೋತ್ಪಾದನೆಗಳ ನಿರ್ಮೂಲನದ ಮಾತುಗಳೆಲ್ಲವೂ ನಗದುರಹಿತ ಉದ್ದಿಮೆಯ ಕಾರ್ಪೊರೇಟುಗಳಿಗೆ ಹಾಸಿರುವ ರತ್ನಗಂಬಳಿಯನ್ನು ಮರೆಮಾಡುವ ಸಲುವಾಗಿವೆ; ಅಸಲಿಗೆ ಎಲ್ಲವೂ ಹೆಚ್ಚುಕಡಿಮೆ ಯಥಾಪ್ರಕಾರ ಮುಂದುವರಿದಿದೆ ಎಂಬ ಸತ್ಯವನ್ನು ಜನ ಎಷ್ಟು ಬೇಗ ಅರಿಯುತ್ತಾರೊ ಅಷ್ಟೂ ಒಳ್ಳೆಯದು.
ನೋಟು ರದ್ದತಿಯ ಸತ್ಪರಿಣಾಮಗಳ ಕುರಿತು ಜನತೆಯ ಮುಂದಿರಿಸಲಾದ ಭವ್ಯ ಚಿತ್ರಣಗಳು ಮತ್ತು ಭರವಸೆಗಳೆಲ್ಲವೂ ನೀರ ಮೇಲಣ ಗುಳ್ಳೆಯಂತೆ ಅತ್ಯಲ್ಪ ಕಾಲದಲ್ಲಿ ಒಡೆದುಹೋಗಿವೆ. ನೋಟು ರದ್ದತಿ ಮಾಡಲು ನಿರ್ಧರಿಸಿದವರು ಯಾರೆಂಬ ವಿಷಯವನ್ನು ತೆಗೆದುಕೊಂಡರೆ ಅದು ಆರ್ಬಿಐನ ಸಲಹೆ ಎಂದು ಕೇಂದ್ರ ಸರಕಾರ ವಾದಿಸುತ್ತಲೆ ಬಂದಿತ್ತು. ಆದರೆ ಆದೇಶ ಸರಕಾರದಿಂದಲೇ ಬಂದಿರುವುದಾಗಿ ಈಗ ಖುದ್ದು ಆರ್ಬಿಐ ಒಪ್ಪಿಕೊಂಡಿದೆ. ವಾಸ್ತವದಲ್ಲಿ ಆದೇಶ ನೇರವಾಗಿ ಮೋದಿಯಿಂದಲೇ ಬಂದಿದೆ. ಇದನ್ನು ಸಾರ್ವಜನಿಕವಾಗಿ ಹೇಳುವ ಹಾಗಿಲ್ಲವಲ್ಲ, ಹಾಗಾಗಿ ಸರಕಾರದಿಂದ ಬಂದಿದೆ ಎನ್ನುತ್ತಿದೆ ಆರ್ಬಿಐ. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಕೂಡಾ ಹೆಚ್ಚು ಕಡಿಮೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಇಂಡಿಯಾ ಟುಡೆ’ ಟಿವಿ ವಾಹಿನಿಯ ಕರಣ್ ಥಾಪರ್ಗೆ ನೀಡಿದ ಸಂದರ್ಶನದ ವೇಳೆ ‘‘ನೋಟು ರದ್ದತಿಯ ನಿರ್ಧಾರ ತೆಗೆದುಕೊಂಡಿರುವುದು ಸರಕಾರ ಅಲ್ಲ, ಮೋದಿ ಮತ್ತವರ ಪರಮಾಪ್ತರ ಒಂದು ಗುಂಪು’’ ಎಂದವರು ಹೇಳಿದ್ದಾರೆ. ನೋಟು ರದ್ದತಿಯನ್ನು ಮತ್ತೊಮ್ಮೆ ಕಟುವಾಗಿ ಟೀಕಿಸಿರುವ ಸೇನ್, ‘‘ಅದೊಂದು ಬಹುದೊಡ್ಡ ಪ್ರಮಾದ’’ ಎಂದಿದ್ದಾರೆ. ಆದರೂ ಮೋದಿಯವರಲ್ಲಿ ಜನರನ್ನು ನಂಬಿಸಬಲ್ಲ ಮಾಂತ್ರಿಕತೆ ಇರುವುದರಿಂದಲೇ ಅವರಿಗೆ ಜನಬೆಂಬಲ ಹೆಚ್ಚುತ್ತಿದೆ ಎಂಬುದು ಅವರ ಅಭಿಪ್ರಾಯವಾಗಿದೆೆ. ಆದರೂ ಸೇನ್ ಪ್ರಕಾರ ಮೋದಿಯ ಕಥೆ ಇಂದು ನೆಪೋಲಿಯನ್ ತರ ಆಗಿದೆಯಂತೆ. ಅದೇನೆಂದರೆ ನೆಪೋಲಿಯನ್ ಕೂಡಾ ತನ್ನ ಪ್ರಚಾರಯಂತ್ರದ ಮೂಲಕ ತನ್ನ ಸಾಧನೆಗಳನ್ನು ಮಿತಿಮೀರಿ ದೊಡ್ಡದು ಮಾಡಿಸಿದ್ದಲ್ಲದೆ ಸೋಲಿಲ್ಲದ ನಾಯಕ ಎಂಬ ಇಮೇಜು ಬೆಳೆಸಿಕೊಂಡಿದ್ದ. ಹೀಗಿರುವಾಗ ಒಮ್ಮೆ ರಷ್ಯಾದ ಮೇಲೆ ದಂಡೆತ್ತಿ ಹೋದಾಗ ಸೋಲು ಅನುಭವಿಸಿ ಸ್ವದೇಶಕ್ಕೆ ವಾಪಸಾದ. ಆದರೆ ಆತ ಹೇಳಿದ್ದು ಮಾತ್ರ ತಾನು ರಶ್ಯಾದ ಹಿಮಾಚ್ಛಾದಿತ ಪರ್ವತಗಳನ್ನು ನೋಡುವುದಕ್ಕೋಸ್ಕರ ಪ್ರವಾಸ ಹೋಗಿದ್ದೆ ಎಂದು!
ನೋಟು ರದ್ದತಿಯಿಂದ ತತ್ತರಿಸಿರುವ ಕೈಗಾರಿಕಾ ವಲಯ
ಮೋದಿ ಸರಕಾರದ ನೋಟು ರದ್ದತಿ ಭಾರತದ ಬಡ, ದಮನಿತ, ರೈತ, ಕಾರ್ಮಿಕ, ಮಹಿಳಾ ವರ್ಗಗಳ ಜತೆ ಕೈಗಾರಿಕಾ ಕ್ಷೇತ್ರವನ್ನೂ ತೀವ್ರವಾಗಿ ಬಾಧಿಸಿದೆ. ದೇಶದ ಅತಿ ದೊಡ್ಡ ಕೈಗಾರಿಕಾ ಒಕ್ಕೂಟವಾದ ಅಖಿಲ ಭಾರತ ಉತ್ಪಾದಕರ ಸಂಘ (AIMO) ನೋಟು ರದ್ದತಿಯನ್ನು ‘ವಿಫಲ ಯೋಜನೆ’ ಎಂದು ಕರೆದಿದೆ. ಇದೊಂದು ತುರ್ತು ಪರಿಸ್ಥಿತಿ. ಸರಕಾರ ಕಣ್ಣು ಮುಚ್ಚಿಕೊಂಡಿದೆ. ಸರಕಾರದಲ್ಲಿರುವವರೆಲ್ಲ ಒಂದೋ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಅಥವಾ ತಮ್ಮ ಬಾಸ್ಗಳ ಬೆನ್ನು ತಟ್ಟುತ್ತಿದ್ದಾರೆ ಎಂದು ಟೀಕಾಪ್ರಹಾರ ಮಾಡಿದೆ. ನೋಟು ರದ್ದತಿ ಪ್ರಾರಂಭವಾದಂದಿನಿಂದಲೂ ಸಂಘ, ಕೈಗಾರಿಕಾ ವಲಯದ ಚಟುವಟಿಕೆಗಳ ಮೇಲೆ ಕಣ್ಣಿರಿಸುತ್ತಾ ಬಂದಿದೆ. ಸುಮಾರು 13 ಸಾವಿರ ನೇರ ಸದಸ್ಯರನ್ನೂ, 3 ಲಕ್ಷ ಪರೋಕ್ಷ ಸದಸ್ಯರನ್ನೂ ಹೊಂದಿರುವ ಸಂಘ ಇದುವರೆಗೆ ಮೂರು ಅಧ್ಯಯನಗಳನ್ನು ಕೈಗೊಂಡಿದ್ದು ಡಿಸೆಂಬರ್ 12ರ ಅಧ್ಯಯನ ಅವುಗಳಲ್ಲಿ ಇತ್ತೀಚಿನದು. ಇದರ ಪ್ರಕಾರ ದೇಶದಾದ್ಯಂತ ಹೆಚ್ಚುಕಡಿಮೆ ಎಲ್ಲಾ ಕೈಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿವೆ; ಅದರಲ್ಲೂ ಸಣ್ಣ ಮತ್ತು ಮಧ್ಯಮ ದರ್ಜೆಯ ಘಟಕಗಳು ಅತ್ಯಧಿಕ ಸಂಕಷ್ಟದಲ್ಲಿವೆ; ಅತ್ಯಧಿಕ ದುಷ್ಪರಿಣಾಮ ಅನುಭವಿಸುತ್ತಿರುವ ರಾಜ್ಯಗಳೆಂದರೆ ಮಹಾರಾಷ್ಟ್ರ ಮತ್ತು ತಮಿಳ್ನಾಡು. ವರದಿಯಲ್ಲಿ ಒಟ್ಟು ಹಿಂಜರಿಕೆಗೆ ಕಾರಣಗಳೇನೆಂದು ಪಟ್ಟಿ ಮಾಡಲಾಗಿದೆೆ. ಉದಾಹರಣೆಗೆ ಶೂನ್ಯ ನಗದು ಒಳಹರಿವು, ನಗದು ಹಿಂಪಡೆಯುವುದಕ್ಕೆ ಮಿತಿ ಹೇರಿಕೆ, ಸಿಬ್ಬಂದಿ ವರ್ಗದ ರಜಾ, ರೂಪಾಯಿಯ ಅಂತಾರಾಷ್ಟ್ರೀಯ ಮೌಲ್ಯದಲ್ಲಿ ಕುಸಿತ, ನಿಧಿ ಸಂಗ್ರಹಕ್ಕೆ ತಗ್ಗಿದ ಆಯ್ಕೆಗಳು, ಬ್ಯಾಂಕುಗಳಿಂದ ಪ್ರಸ್ತಾಪಗಳ ಪರಿಶೀಲನೆ ನಡೆಯದಿರುವುದು, ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಅಸ್ತವ್ಯಸ್ತತೆ, ವಿದೇಶಿಯರು ಭಯ ಪಡುತ್ತಿರುವುದು ಇತ್ಯಾದಿ.
ಗಮನಾರ್ಹವಾಗಿ ಸಂಘದ ಮೂರೂ ವರದಿಗಳಿಗೆ ಮೋದಿ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ.
ಮೋದಿ ಸರಕಾರದ ಬೂಟಾಟಿಕೆ ಭ್ರಷ್ಟಾಚಾರ, ಕಾಳಧನ, ಖೊಟ್ಟಿಧನ ಮತ್ತು ಉಗ್ರವಾದಗಳ ನಿರ್ಮೂಲನಕ್ಕಾಗಿ ಎನ್ನಲಾದ ಮೋದಿ ಸರಕಾರದ ‘ಯುದ್ಧ’ ಉರುಫ್ ‘ಸರ್ಜಿಕಲ್ ದಾಳಿ’ ಉರುಫ್ ‘ಮಹಾಯಾಗ’ ಬರೀ ಬೂಟಾಟಿಕೆ ಹೊರತು ಬೇರೇನೂ ಅಲ್ಲವೆಂದು ತೋರಿಸುವ ಎರಡು ಪ್ರಮುಖ ನಿದರ್ಶನಗಳು ಇಲ್ಲಿವೆ.
1. ಮೊದಲನೆಯದು ಇದೇ ಜನವರಿ 10ರಂದು ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಹೊರಬಿದ್ದಿರುವ ಮಾಹಿತಿಗಳು ಹೇಳುವ ಕಥೆ. ಇದು ಮೋದಿ ಸರಕಾರದ ತಥಾಕಥಿತ ‘ಯುದ್ಧ’ದ ಟೊಳ್ಳುತನವನ್ನು ಸಂಪೂರ್ಣವಾಗಿ ಬಯಲಿಗೆಳೆಯುತ್ತದೆ. ರಿಸರ್ವ್ ಬ್ಯಾಂಕ್ ವರದಿ ಪ್ರಕಾರ ಭಾರತದಲ್ಲಿ ಉತ್ಪಾದನೆಯಾಗುವ ಕಾಳಧನದಲ್ಲಿ ದೊಡ್ಡ ಮೊತ್ತವೊಂದು ಕಡಲಾಚೆಯ ನೇರ ಹೂಡಿಕೆ (ಒಡಿಐ) ಹೆಸರಲ್ಲಿ ಮಾರಿಷಿಯಸ್, ಸಿಂಗಾಪುರ, ಸೈಪ್ರಸ್ಗಳಂತಹ ದೇಶ ಗಳಿಗೆ ವರ್ಗಾವಣೆಯಾಗುತ್ತದೆ. ಅಲ್ಲಿನ ಸ್ಥಳೀಯ ಕಂಪೆನಿಗಳಲ್ಲಿ ಹೂಡಿಕೆಯಾಗುವ ಈ ದುಡ್ಡು ನಂತರ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಎಂಬ ಹೊಸ ಹೆಸರಿನೊಂದಿಗೆ ಭಾರತದೊಳಕ್ಕೆ ಮರುಪ್ರವೇಶಿಸಿ ಅದೇ ಕಂಪೆನಿಗಳ ಭಾರತೀಯ ಶಾಖೆಗಳಲ್ಲಿ ಜಮೆಯಾಗುತ್ತದೆ. ಕಪ್ಪುಹಣವನ್ನು ಬಿಳಿಯಾಗಿಸುವ ದೊಡ್ಡವರ ಈ ದಂಧೆ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ರೀತಿಯ ದಂಧೆಗಳು ಮತ್ತು ಬೇನಾಮಿ ಆಸ್ತಿ ಖರೀದಿಗಳನ್ನು ತಡೆಯುವುದಕ್ಕಾಗೆಂದೇ ಮೇಲ್ಕಂಡ ದೇಶಗಳೊಂದಿಗೆ ತಾನು ಒಡಂಬಡಿಕೆಗಳನ್ನು ಮಾಡಿಕೊಂಡಿರುವುದಾಗಿ ಮೋದಿ ಸರಕಾರ ಕೊಚ್ಚಿಕೊಳ್ಳುತ್ತಿದೆ. ಇದು ನಿಜ ಆಗಿದ್ದರೆ ಈ ಒಡಿಐ, ಎಫ್ಡಿಐಗಳ ಪ್ರಮಾಣದಲ್ಲಿ ದೊಡ್ಡ ಮಟ್ಟದ ಇಳಿತ ಆಗಬೇಕಿತ್ತು. ಆದರೆ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆ ಆಗಿದೆ ಎನ್ನುತ್ತಿವೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ದತ್ತಾಂಶಗಳು! 2014-15ರ ಸಾಲಿಗೆ ಹೋಲಿಸಿದರೆ 2015-16ರಲ್ಲಿ ಸಿಂಗಾಪುರ, ಸೈಪ್ರಸ್ಗಳಿಂದ ಎಫ್ಡಿಐನಲ್ಲಿ ಹೆಚ್ಚಳ ಆಗಿದ್ದರೆ ಮಾರಿಷಿಯಸ್ನಿಂದ ಎಫ್ಡಿಐ ಹೆಚ್ಚುಕಮ್ಮಿ ಮೊದಲಿನಷ್ಟೇ ಇರುವುದಾಗಿ ತಿಳಿದುಬರುತ್ತದೆ! ಅಷ್ಟು ಮಾತ್ರವಲ್ಲ, ಎಫ್ಡಿಐನ ಶೇ. 92ರಷ್ಟು ಹಣ ಷೇರುಗಳಲ್ಲಿ ಹೂಡಿಕೆಯಾಗಿದೆ ಹೊರತು ಸಾಲ ರೂಪದಲ್ಲಿ ಇಲ್ಲ. ಷೇರುಗಳಲ್ಲಿ ಹೂಡಿಕೆ ಎಂಬುದು ಸಂಶಯಾಸ್ಪದ ವ್ಯವಹಾರವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಭ್ರಷ್ಟಾಚಾರ ನಿರ್ಮೂಲನ ಮಾಡುವೆವೆಂದು ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಮೋದಿ ಸರಕಾರ ಉಳ್ಳವರ ಕಪ್ಪುಬಿಳುಪಿನ ದಂಧೆಗಳನ್ನು ಅಬಾಧಿತವಾಗಿ ಮುಂದುವರಿಯಲು ಬಿಟ್ಟಿದೆ!
2. ಎರಡನೆ ಉದಾಹರಣೆ ಗುಜರಾತ್ ಮುಖ್ಯಮಂತ್ರಿ ಮತ್ತು ಇತರ ಹಲವಾರು ರಾಜಕಾರಣಿಗಳಿಗೆ ಕೋಟಿಗಟ್ಟಲೆ ಲಂಚ ಸಂದಾಯ ಆಗಿರುವುದನ್ನು ಅರುಹುವ ಸಹಾರಾ ಬಿರ್ಲಾ ಪೇಪರ್ಸ್ ಹಗರಣ. 2013-14ರಲ್ಲಿ ಬಿರ್ಲಾ ಮತ್ತು ಸಹಾರಾ ಕಂಪೆನಿಗಳಿಂದ ಗುಜರಾತ್ ಸಿ.ಎಂ. ಮತ್ತಿತರ ರಾಜಕಾರಣಿಗಳಿಗೆ ಲಂಚ ಪಾವತಿಯಾಗಿರುವುದಕ್ಕೆ ಸಂಬಂಧಿಸಿದಂತೆ ‘ಕಾಮನ್ ಕಾಸ್’ ಎಂಬ ಎನ್ಜಿಒ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಅದು, ತನ್ನ ಆರೋಪಗಳಿಗೆ ಪುರಾವೆಯಾಗಿ ಆದಾಯ ತೆರಿಗೆ ಅಧಿಕಾರಿಗಳು ಸದರಿ ಕಾರ್ಪೊರೇಟುಗಳ ಕಚೇರಿಗಳಿಂದ ವಶಪಡಿಸಿಕೊಂಡಿದ್ದ ಕೆಲವೊಂದು ಎಕ್ಸೆಲ್ ಶೀಟುಗಳು, ಈ-ಮೇಲ್ಗಳು ಮತ್ತು ಇತರ ದಾಖಲೆಗಳನ್ನು ಹಾಜರುಪಡಿಸಿತ್ತು. ಕಾಮನ್ ಕಾಸ್ ಪರವಾಗಿ ವಾದಿಸಿದ ಲಾಯರ್ ಪ್ರಶಾಂತ್ ಭೂಷಣ್, ನ್ಯಾಯಾಲಯ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಬೇಕು ಮತ್ತು ವಿಶೇಷ ತನಿಖಾ ತಂಡದ ಮೂಲಕ ಕೂಲಂಕಷ ತನಿಖೆ ನಡೆಸಬೇಕು ಎಂದು ಕೋರಿದ್ದರು. ಆದರೆ ನ್ಯಾಯಾಲಯ ಮೋದಿ ಸರಕಾರದ ವಾದವನ್ನು ಎತ್ತಿಹಿಡಿಯುತ್ತಾ ಸ್ಪಷ್ಟ ಹಾಗೂ ನಂಬಲರ್ಹ ಪುರಾವೆಗಳು ಬೇಕಾಗಿವೆ ಎಂದು ಹೇಳಿ ಪ್ರಕರಣವನ್ನು ತಳ್ಳಿಹಾಕಿದೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ಎರಡು ಮುಖ್ಯ ಅಂಶಗಳಿವೆ. ಒಂದು, ಸರ್ವೋಚ್ಚ ನ್ಯಾಯಾಲಯ ಇಲ್ಲಿ ಈ ಹಿಂದೆ 2013ರಲ್ಲಿ ಲಲಿತಾ ಕುಮಾರಿ ವರ್ಸಸ್ ಉತ್ತರ ಪ್ರದೇಶ ಸರಕಾರ ಪ್ರಕರಣದಲ್ಲಿ ಪಂಚ ಸದಸ್ಯರ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ಕಡೆಗಣಿಸಿದೆ. ಪ್ರಕರಣ ದಾಖಲಿಸುವುದಕ್ಕೆ ಲಭ್ಯ ಮಾಹಿತಿ ನ್ಯಾಯಸಮ್ಮತ ಅಥವಾ ವಿಶ್ವಾಸಾರ್ಹ ಆಗಿರಬೇಕೆಂದಿಲ್ಲ ಎಂಬ ತೀರ್ಪು ಲಲಿತಾ ಕುಮಾರಿ ಪ್ರಕರಣದಲ್ಲಷ್ಟೆ ಅಲ್ಲದೆ ಇನ್ನೂ ಹಲವಾರು ಪ್ರಕರಣಗಳಲ್ಲಿ ಬಂದಿದೆ. ಅದರ ಪ್ರಕಾರ ‘‘ಒಂದು ವೇಳೆ ಲಭ್ಯ ಮಾಹಿತಿಯಲ್ಲಿ ವಿಚಾರಣಾರ್ಹ ಅಪರಾಧ ನಡೆದಿರುವುದಾಗಿ ತಿಳಿದುಬರದಿದ್ದರೆ ತಕ್ಷಣ ಎಫ್ಐಆರ್ ದಾಖಲಿಸಬೇಕಾಗಿಲ್ಲ.... ಪೊಲೀಸರು ಪ್ರಾಯಶಃ ಒಂದು ವಿಧದ ಪ್ರಾಥಮಿಕ ತನಿಖೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ.... ತನಿಖೆಯಲ್ಲಿ ಮಾಹಿತಿ ಸುಳ್ಳೆಂದು ಕಂಡುಬಂದಲ್ಲಿ ದೂರುದಾರನ ವಿರುದ್ಧ ಕಾನೂನುಕ್ರಮ ಜರಗಿಸುವ ಅವಕಾಶ ಇದ್ದೇ ಇದೆ.’’ ಇದೇ ಮಾನದಂಡವನ್ನು ಖಂಡಿತಾ ಸಹಾರಾ ಬಿರ್ಲಾ ಪ್ರಕರಣಕ್ಕೂ ಅನ್ವಯಿಸಬಹುದಾಗಿತ್ತು. ನ್ಯಾಯಾಲಯಕ್ಕೆ ಸಲ್ಲಿಕೆಯಾದ ದಾಖಲೆಗಳು ವಿಚಾರಣಾರ್ಹ ಅಪರಾಧಗಳು ನಡೆದಿರುವುದನ್ನು ಬಯಲುಗೊಳಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಅನುಮಾನ ಇದ್ದಲ್ಲಿ ಅದು ಈ ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶಿಸಬಹುದಿತ್ತು. ಅಪರಾಧಗಳು ನಡೆದಿವೆ ಎಂದು ತಿಳಿದು ಬಂದಲ್ಲಿ ಎಫ್ಐಆರ್ ದಾಖಲಿಸುವಂತೆ ಹೇಳಬಹುದಿತ್ತು. ಹಾಗೆ ಮಾಡದಿರುವುದು ಸರ್ವೋಚ್ಚ ನ್ಯಾಯಾಲಯದ ಗೌರವ, ವಿಶ್ವಾಸಾರ್ಹತೆಗಳಿಗೆ ಧಕ್ಕೆ ಉಂಟುಮಾಡಿದೆ.
ಎರಡನೆ ಕಳವಳಕಾರಿ ಅಂಶವೆಂದರೆ ಸಹಾರಾದ ವಿರುದ್ಧ ಕ್ರಿಮಿನಲ್ ಖಟ್ಲೆ ಜರಗಿಸದಂತೆ ಆದಾಯ ತೆರಿಗೆ ಫೈಸಲಾತಿ ಆಯೋಗ (Income Tax Settlement Commission) ತಡೆಯಾಜ್ಞೆ ನೀಡಿದೆ ಮಾತ್ರವಲ್ಲ ಅದನ್ನು ಸರ್ವೋಚ್ಚ ನ್ಯಾಯಾಲಯವೂ ಎತ್ತಿಹಿಡಿದಿದೆ. ಇದರ ಹಿನ್ನೆಲೆ ಹೀಗಿದೆ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನ್ನ ಕಚೇರಿಯಿಂದ ವಶಪಡಿಸಿಕೊಂಡಿದ್ದ ಕಾಗದಪತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಸಹಾರಾ ಆರಂಭದಲ್ಲಿ ಆಯೋಗದ ದ್ವಿತೀಯ ಹೆಚ್ಚುವರಿ ಪೀಠಕ್ಕೆ (Additional Bench II, Lucknow) ದೂರು ಸಲ್ಲಿಸಿತ್ತು. ಅವೆಲ್ಲವೂ ಖೋಟಾ ದಾಖಲೆಪತ್ರಗಳಾಗಿದ್ದು ಓರ್ವ ಹಿರಿಯ ಅಧಿಕಾರಿಯ ಹೆಸರನ್ನು ಕೆಡಿಸುವುದಕ್ಕಾಗಿ ತನ್ನೊಬ್ಬ ನೌಕರನಿಂದ ಸೃಷ್ಟಿಸಲ್ಪಟ್ಟುದೆಂದು ದೂರಿನಲ್ಲಿ ಹೇಳಲಾಗಿತ್ತು. ಹೆಚ್ಚುವರಿ ಪೀಠ ಈ ದೂರನ್ನು ಆಗಸ್ಟ್ನಲ್ಲಿ ತಿರಸ್ಕರಿಸಿತ್ತು. ಆಗ ಸಹಾರಾ ಏನು ಮಾಡಿತೆಂದರೆ ಪ್ರಕರಣವನ್ನು ದಿಲ್ಲಿಯಲ್ಲಿರುವ ಆಯೋಗದ ಪ್ರಧಾನ ಪೀಠಕ್ಕೆ ವರ್ಗಾಯಿಸುವಂತೆ ಆಯೋಗದ ಅಧ್ಯಕ್ಷರಲ್ಲಿ ಕೋರಿಕೊಂಡಿತು. ಇದರ ನಂತರದಲ್ಲೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಇದ್ದಕ್ಕಿದ್ದಂತೆ ಆಯೋಗದ ಓರ್ವ ಸದಸ್ಯರಾದ ಬಲ್ದೀಪ್ ಸಿಂಗ್ ಎಂಬವರನ್ನು ಹಠಾತ್ತಾಗಿ ಚೆನ್ನೈಗೆ ವರ್ಗಾವಣೆ ಮಾಡಲಾಗಿದೆ. ಕೋಲ್ಕತ್ತಾ ವಲಯದ ಪ್ರಧಾನ ಆಯುಕ್ತ ಆಗಿದ್ದ ಸಂದು ನವೆಂಬರ್ 2015ರಲ್ಲಿ ನಿವೃತ್ತಿಯಾದ ಬಳಿಕ ಮಾರ್ಚ್ 2016ರಲ್ಲಿ ಪ್ರಧಾನ ಪೀಠದ ಮೂವರು ಸದಸ್ಯರಲ್ಲೊಬ್ಬರಾಗಿ ನೇಮಕವಾಗಿದ್ದರು. ನೇಮಕಾತಿ ನಿಯಮಗಳ ಪ್ರಕಾರ ಅವರನ್ನು ದಿಲ್ಲಿ ಬಿಟ್ಟು ಹೊರಗೆಲ್ಲೂ ವರ್ಗಾವಣೆ ಮಾಡಕೂಡದೆಂದಿದೆ. ಸ್ವಾಭಾವಿಕವಾಗಿ ಸಂದು ತನ್ನನ್ನು ನಿಯಮಗಳನ್ನು ಬದಿಗೆ ತಳ್ಳಿ ವರ್ಗಾಯಿಸಿರುವ ಕ್ರಮವನ್ನು ದಿಲ್ಲಿ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಅಕ್ಟೋಬರ್ 27ರಂದು ಏಕಸದಸ್ಯ ಪೀಠ ವರ್ಗಾವಣೆಯನ್ನು ತಡೆಹಿಡಿಯಲು ಆದೇಶಿಸಿತು. ಕೇಂದ್ರ ಸರಕಾರ ಇದರ ವಿರುದ್ಧ ದ್ವಿಸದಸ್ಯ ಪೀಠಕ್ಕೆ ದೂರು ಸಲ್ಲಿಸಿದಾಗ ಸಂದು ಅನುಪಸ್ಥಿತಿಯಲ್ಲಿ ವಿಚಾರಣೆ ನಡೆದು ಹಿಂದಿನ ತಡೆಯಾಜ್ಞೆಯನ್ನು ತಡೆಯುವ ಆದೇಶ ಹೊರಬಿದ್ದಿದೆ. ಈ ತೀರ್ಪನ್ನು ಪ್ರಶ್ನಿಸಿ ಸಂದು ಮತ್ತೆ ನ್ಯಾಯಾಲಯದ ಮೆಟ್ಟಲು ಹತ್ತಿದ್ದಾರೆ.
ಆದರೆ ನ್ಯಾಯಾಲಯದ ನೋಟಿಸಿಗೆ ಮೋದಿ ಸರಕಾರ ಇದುವರೆಗೂ ಉತ್ತರಿಸಿಲ್ಲ. ಸಂದು ಅವರನ್ನು ವರ್ಗಾಯಿಸಿದ ನಂತರ ಆಗಸ್ಟ್ನಲ್ಲಿ ಸಹಾರಾ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನವಂಬರ್ 10ರಂದು ಇದ್ದಕ್ಕಿದ್ದಂತೆ ಕ್ಷಿಪ್ರ ತೀರ್ಪು ನೀಡಿದ ಆಯೋಗ, ಐಟಿ ಇಲಾಖೆ ತಾನು ವಶಪಡಿಸಿಕೊಂಡ ದಾಖಲೆಪತ್ರಗಳ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂಬ ಸಹಾರಾ ವಾದವನ್ನು ಒಪ್ಪಿದೆಯಲ್ಲದೆ ಸಹಾರಾಗೆ ಕಾನೂನುಕ್ರಮ ಜರಗುವಿಕೆ ಮತ್ತು ದಂಡಪಾವತಿಯಿಂದ ವಿನಾಯಿತಿ ನೀಡಿದೆ.
ಇದನ್ನೆಲ್ಲ ನೋಡುವಾಗ ದೊಡ್ಡ ದೊಡ್ಡ ರಾಜಕಾರಣಿಗಳನ್ನೊಳಗೊಂಡ ಈ ಇಡೀ ಪ್ರಕರಣದಲ್ಲಿ ಏನೋ ಗೋಲ್ಮಾಲ್ ನಡೆದಿರುವ ಅನುಮಾನ ಬರುವುದಿಲ್ಲವೇ? ಕಾಳಧನ, ಖೋಟಾ ನೋಟು, ಭಯೋತ್ಪಾದನೆಗಳ ನಿರ್ಮೂಲನದ ಮಾತುಗಳೆಲ್ಲವೂ ನಗದುರಹಿತ ಉದ್ದಿಮೆಯ ಕಾರ್ಪೊರೇಟುಗಳಿಗೆ ಹಾಸಿರುವ ರತ್ನಗಂಬಳಿಯನ್ನು ಮರೆಮಾಡುವ ಸಲುವಾಗಿವೆ; ಅಸಲಿಗೆ ಎಲ್ಲವೂ ಹೆಚ್ಚುಕಡಿಮೆ ಯಥಾಪ್ರಕಾರ ಮುಂದುವರಿದಿದೆ ಎಂಬ ಸತ್ಯವನ್ನು ಜನ ಎಷ್ಟು ಬೇಗ ಅರಿಯುತ್ತಾರೋ ಅಷ್ಟೂ ಒಳ್ಳೆಯದು.
(ಆಧಾರ: ವಿವಿಧ ಮೂಲಗಳಿಂದ)