ನಮ್ಮಂತಾಗಲು ನಮ್ಮೊಡನಿರ ಬಂದವರು
![ನಮ್ಮಂತಾಗಲು ನಮ್ಮೊಡನಿರ ಬಂದವರು ನಮ್ಮಂತಾಗಲು ನಮ್ಮೊಡನಿರ ಬಂದವರು](https://www.varthabharati.in/sites/default/files/images/articles/2017/01/21/william_dalrymple_20121231_350_630.jpg)
ಟೆಲಿವಿಷನ್ ಚರ್ಚೆಗಳಲ್ಲಿ ಭಾಗವಹಿಸುವಾಗಲೆಲ್ಲ ಇತಿಹಾಸಜ್ಞ, ಲೇಖಕ ವಿಲಿಯಂ ಡಾರ್ಲಿಂಪ್ಲ್ ಪಕ್ಕಾ ದೇಸಿ ದಿರಿಸಿನಲ್ಲೇ ಕಾಣು ತ್ತಾರೆ: ಖಾದಿ ಕುರ್ತಾ, ಖಾಯಮ್ಮಾಗಿ ಹೆಕ್ಕತ್ತಿನ ಮೇಲೆ ಕಲಾತ್ಮಕ ಅಂಗವಸ್ತ್ರ. ನೋಡುಗರಲ್ಲಿ ಒಂದು ತಂತಾನೆ ಖುಷಿ. ಭಾರತ, ಇಂಡಿಯಾ ಎಂಬುದಾಗಿ ಕರೆಸಿಕೊಳ್ಳುವ ನಮ್ಮ ದೇಶವನ್ನು ಪ್ರೀತಿಸುವ ವಿದೇಶೀಯರ ಕುರಿತಾಗಿ ಏನೋ ಅಕ್ಕರೆ ನಮ್ಮಲ್ಲಿ ಮೂಡುವುದು ಅತ್ಯಂತ ಸಹಜ-ಕುಗ್ರಾಮದ ಗುಡ್ಡಗಾಡು ನೋಡಬಂದು ಪ್ರಶಂಸೆಯ ಮಳೆಗರೆವ ಬುದ್ಧಿಜೀವಿ, ವಿಜ್ಞಾನಿ, ದೊಡ್ಡಮನುಷ್ಯರ ವಿಷಯದಲ್ಲಿ ಆಗುವಂತೆ. ಏನನ್ನು ಕಂಡು ಇವರು ಇಷ್ಟು ಮರುಳಾಗುತ್ತಾರೆ ಎಂಬ ಅಚ್ಚರಿ-ಕುತೂಹಲ ಅದನ್ನು ಹಿಂಬಾಲಿಸುತ್ತದೆ.
ಅಮೆರಿಕ, ಜರ್ಮನಿ, ರಶ್ಯಾ, ಪೋಲಂಡ್, ಫ್ರಾನ್ಸ್, ಆಸ್ಟ್ರೇಲಿಯ, ರೋಮ್, ಗ್ರೀಸ್ ಮುಂತಾಗಿ ಹಲವು ಪಶ್ಚಿಮ ರಾಷ್ಟ್ರಗಳಿಗೆ ಮತ್ತು ಕೆಲ ಮಧ್ಯಪ್ರಾಚ್ಯ, ಪೌರ್ವಾತ್ಯ ದೇಶಗಳಿಗೂ ಸೇರಿರಬಹುದಾದ ಈ ಜನರನ್ನು ‘ಇಂಡೋಫೈಲ್ಸ್-ಇಂಡಿಯಾವನ್ನು ಪ್ರೀತಿಸುವವರು’ ಎಂಬ ಸಮಾನ ನಾಮ ನೀಡಿ ಕರೆಯಲಾಗುತ್ತದೆ. ಹದಿನೆಂಟು, ಹತ್ತೊಂಬತ್ತು, ಇಪ್ಪತ್ತನೆ ಶತಮಾನಗಳಿಂದ, ಅಷ್ಟೇ ಏಕೆ, ಇಂದಿಗೂ ತಮ್ಮ ತಾಯ್ನೊಡನ್ನು ಬಿಟ್ಟು ಭಾರತಕ್ಕೆ ವಿದೇಶೀಯರು ಬಂದು ವಾಸಿಸುವುದು ಸಾಮಾನ್ಯ ಸಂಗತಿ. ಇಲ್ಲಿಂದ ಹೋಗಿ ಸಾಗರದಾಚೆ ನೆಲೆಸಿರುವವರು ‘ನಾನ್ ರೆಸಿಡೆಂಟ್ ಇಂಡಿಯನ್ಸ್’ ಆದರೆ ಅಲ್ಲಿಂದ ಬಂದು ಉಪಖಂಡವನ್ನು ಮನೆ ಮಾಡಿಕೊಂಡವರು ‘ರೆಸಿಡೆಂಟ್ ನಾನ್ ಇಂಡಿಯನ್ಸ್’!
‘ನಾನು’ ಯಾರು ಎಂಬ ಹುಡುಕಾಟ, ಪ್ರಪಂಚ ಸತ್ಯವೋ, ಮಿಥ್ಯವೋ ಎಂಬ ಗೊಂದಲ ಮೂಡುವ ತತ್ತ್ವಶಾಸ್ತ್ರೀಯ ಹಿನ್ನೆಲೆ, ಓದು, ಅಧ್ಯಯನ, ಸಂಶೋಧನೆಗಳ ತರಂಗಾಂತರದಲ್ಲಿದ್ದ ವಿದೇಶೀಯರು ಆರ್ಷೇಯ ಭಾರತೀಯ ತತ್ವಜ್ಞಾನದ ಕಿಟಕಿ ತೆರೆದುಕೊಂಡು ವೇದ, ಉಪನಿಷತ್‌ಗಳಲ್ಲಿರುವ ಅರಿವು ಎಟುಕಿಸಿಕೊಳ್ಳುತ್ತ ‘ಬ್ರಹ್ಮಜ್ಞಾನ’ದ ಬೆಂಬತ್ತಿದರೆ ಪರಮ ಲೌಕಿಕ ಎನ್ನಬಹುದಾದ ಹವಾಮಾನ, ಜನಜೀವನ, ಪ್ರಕೃತಿ ಸೌಂದರ್ಯ, ಕಲೆ-ಸಂಸ್ಕೃತಿ, ಸಂಗೀತ-ನೃತ್ಯ ಸಾಧನೆಗಳಿಗಾಗಿ ಬಂದು ಉಳಿದವರೂ ಅಸಂಖ್ಯ. ಇನ್ನು ರಾಜಕೀಯ ಕಾರಣಗಳಿಗಾಗಿ (ಇತ್ತೀಚಿನ) ಭಾರತವನ್ನು ಪ್ರೀತಿಸಿದ ತೀವ್ರ ರಾಜಕೀಯ ಪ್ರಜ್ಞೆಯ ವಿರಳರೂ ಇದ್ದಾರೆ. ಪ್ರಸಿದ್ಧ ಜೀವವಿಜ್ಞಾನಿ ಜೆ.ಬಿ.ಎಸ್ ಹಾಲ್ಡೇನ್ ಅವರಲ್ಲಿ ಒಬ್ಬರು.
ಭಾರತ ಎಂಬ ಕಲ್ಪನೆ, ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿ ಸಾಕಾರಗೊಂಡದ್ದನ್ನು, ವಿಶ್ವದಲ್ಲಿ ತನ್ನದೂ ಒಂದು ರಾಜಕೀಯ ಅಸ್ತಿತ್ವ ದೃಢಪಡಿಸಿಕೊಂಡದ್ದನ್ನು ಅದೇ ಕಾಲದಲ್ಲಿ, ಅಲ್ಲಲ್ಲೇ ಇದ್ದು ಗಮನಿಸಿದ, ವಿಶ್ಲೇಷಿಸಿದ ಪ್ರಖರ ಮನಸ್ಸು ಈ ವಿದ್ಯಮಾನವನ್ನು ಗ್ರಹಿಸಿರುವುದು ಹೀಗೆ: ತಮ್ಮ ಸರಕಾರಕ್ಕೆ ಕಿರಿಕಿರಿ ಉಂಟುಮಾಡುವ ಪೀಡೆಯಾಗಿ ಬದುಕುವುದು, ಉಳಿಯುವುದು ಪ್ರಜೆಗಳ ಮುಖ್ಯ ಕರ್ತವ್ಯಗಳಲ್ಲಿ ಒಂದು ಎಂದ ಥಾಮಸ್ ಜೆಫರ್ಸನ್ (ಅಮೆರಿಕದ ಸಂಸ್ಥಾಪಕ ಪಿತಾಮಹ ಹಾಗೂ ಮೂರನೆ ಅಧ್ಯಕ್ಷ) ಅವರ ಮಾತನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ. ‘‘ನಾನು ಭಾರತ ಸರಕಾರಕ್ಕೆ ಒಂದು ಪೀಡೆಯಾಗಬಲ್ಲೆ, ಆಗಿದ್ದೇನೆ. ಅದು ನನ್ನ ಟೀಕೆ-ವಿಮರ್ಶೆಗಳಿಗೆ ಅನುಮತಿ, ಅವಕಾಶ ನೀಡುವಷ್ಟು ಯೋಗ್ಯವಾದ ಸರಕಾರವಾಗಿದೆ. ಇವಕ್ಕೆ ಕೆಲವೊಮ್ಮೆ ತಡವಾಗಿ ಪ್ರತಿಕ್ರಿಯೆ ಸಿಕ್ಕರೂ ನಾನು ಭಾರತದ ಹೆಮ್ಮೆಯ ಪ್ರಜೆ. ಈಗ ಇರುವ ಮುಕ್ತ ಮಾದರಿ ಭಂಗವಾಗಬಹುದು, ಮುರಿದು ಹೋಗಬಹುದು...ಆದರೆ ಇದೊಂದು ವಿಸ್ಮಯಕಾರಿಯಾದ ಅದ್ಭುತ ಪ್ರಯೋಗ.’’
ಈ ಪ್ರಯೋಗದಲ್ಲಿ ಭಾಗಿಯಾಗಲು ಅವರು ತಮ್ಮ ಅರವತ್ತರ ವಯೋಮಾನದಲ್ಲಿ ಬ್ರಿಟನ್ ತೊರೆದಿದ್ದರು. ಲಂಡನ್ ವಿಶ್ವವಿದ್ಯಾನಿಲಯದ ಹುದ್ದೆಗೆ ರಾಜೀನಾಮೆ ಕೊಟ್ಟು ಅಂದಿನ ಕಲ್ಕತ್ತೆಯ ‘ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್‌ಟಿಟ್ಯೂಟ್’ ಸೇರಿಕೊಂಡರು. ವಿಜ್ಞಾನಿಗಳ ಜತೆ ಮಾತ್ರವಲ್ಲ, ಜನ ಸಾಮಾನ್ಯರೊಂದಿಗೂ ಸ್ಥಳೀಯರಿಗಿಂತ ಸ್ಥಳೀಯರಾಗಿ ಬೆರೆತು ಬದುಕಿದರು ಎನ್ನುತ್ತದೆ, ಅವರ ಜೀವನ ವೃತ್ತಾಂತ. ಹಿಮಾಲಯದ ತಪ್ಪಲನ್ನು ಆರಿಸಿಕೊಂಡು ಅಖಂಡವಾಗಿ ಐದು ದಶಕಗಳಿಂದ ಬರವಣಿಗೆಯಲ್ಲಿ ತೊಡಗಿರುವ ಭಾರತೀಯ ಇಂಗ್ಲಿಷ್ ಲೇಖಕ, ಪದ್ಮಭೂಷಣ ರಸ್ಕಿನ್ ಬಾಂಡ್ ಸಹ ಇಂತಹ ಒಬ್ಬ (ಸಮ ಕಾಲೀನ) ಜಾಗೃತ ಇಂಡೋಫೈಲ್ ಪ್ರಜೆ.
ಸದ್ಯ ಚುನಾವಣೆ ಜ್ವರದಲ್ಲಿರುವ ಚಳಿನಾಡು ಉತ್ತರಾಖಂಡ ಅವರ ಸ್ವಂತೂರು. ಹಿಮಾಚ್ಛಾದಿತ ಸುಂದರ ಪ್ರದೇಶ, ವ್ಯವಸ್ಥೆಯ ಲೋಪಗಳಿಂದ ಕ್ರಮೇಣ ಕೊಳಕಾದ, ಜಲ-ವಾಯು ಪ್ರದೂಷಣೆಗಳಿಗೆ ಪಕ್ಕಾಗಿರುವ, ಶೌಚ ನೈರ್ಮಲ್ಯ ಇಲ್ಲದ ಅಪಾಯಕಾರಿ ತಾಣವಾಗುತ್ತಿರುವ ಕುರಿತು ಅವಕಾಶ ದೊರೆತಾಗೆಲ್ಲ ದನಿ ಎತ್ತುತ್ತಿರುತ್ತಾರೆ. ಸ್ಥಳೀಯರಿಗಿಂತ ಸ್ಥಳೀಯರಾಗಿ ಬದುಕುವುದು ಬರಿದೇ ಉತ್ಪ್ರೇಕ್ಷಾಲಂಕಾರ ವೇ ಎಂದು ಮನಸ್ಸಲ್ಲಿ ಕೊರೆಯುವುದುಂಟು. ಏಕೆಂದರೆ ಒಂದು ನಾಡಿನ ಸಂಸ್ಕೃತಿ, ಅಲ್ಲಿ ಹುಟ್ಟಿದವರಿಗೆ ರಕ್ತಗತವಾಗಿ ಬರುವಂಥದು. ಅಥವಾ ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ ಅವರವರ ಡಿಎನ್‌ಎ ಯಲ್ಲಿ ಬೆಸೆದುಕೊಂಡಿರುವ ಸಂಗತಿ. ಆದ್ದರಿಂದಲೇ ‘ಬೀಯಿಂಗ್ ಇಂಡಿಯನ್’ ಗೂ ‘ಬಿಕಮಿಂಗ್ ಇಂಡಿಯನ್’ಗೂ ಸಾಕಷ್ಟು ವ್ಯತ್ಯಾಸಗಳಿವೆ ಎನ್ನುತ್ತಾರೆ, ಈ ಕುರಿತು ಪುಸ್ತಕ ಬರೆದಿರುವ ರಾಜಕೀಯ ನೇತಾರ, ವಾಗ್ಮಿ ಪವನ್ ವರ್ಮ.
ಅವರ ಪ್ರಕಾರ ಸಾಕಷ್ಟು ಪುರಾತನ ಹಾಗೂ ಅತ್ಯಂತ ಸಂಕೀರ್ಣ ಆಗಿರುವ ‘ಭಾರತೀಯ ಸಂಸ್ಕೃತಿ’ ಅಷ್ಟು ಸುಲಭವಾಗಿ ಅನ್ಯರಿಗೆ ಮೈಗೂಡುವಂಥದ್ದಲ್ಲ. ಇರಬಹುದೇನೋ ಎಂದು ತಲೆದೂಗುವಷ್ಟರಲ್ಲಿ ಧುತ್ತೆಂದು ನೆನಪಾಗುತ್ತದೆ, ದೇವನೂರ ಮಹಾದೇವರ ‘ಕುಸುಮ ಬಾಲೆ’ಯನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ವಿಷಯ! ಅನುವಾದಕಿ ಸೂಸನ್ ಡೇನಿಯಲ್ ಮೂಲ ಕಾದಂಬರಿ ಕುರಿತು ವಿಸ್ತೃತ ಒಳನೋಟಗಳೊಂದಿಗೆ, ಪುಂಖಾನುಪುಂಖವಾಗಿ ಮೀಮಾಂಸೆಗೈದಿರುವುದೂ ಒಂದು ಅದ್ಭುತವೇ ಸರಿ, ಅಥವಾ ಈ ಬಗೆಯ ಪ್ರಜ್ಞಾಪೂರ್ವಕ ಸ್ವೋಪಜ್ಞ ಒಳಗಿನವರಾಗುವುದು-ಕಾನ್ಷಿಯಸ್ ಕ್ರಿಟಿಕಲ್ ಇನ್‌ಸೈಡರ್ ಪ್ರತಿಭೆಯ ಅಮೂರ್ತ ಜಗತ್ತಿಗೆ ಸೇರಿದ್ದೇನೋ.
ಇಷ್ಟೆಲ್ಲ ಪರಿಣತ ವಲಯ/ವರ್ಗಗಳಿಗೆ ಸೇರದ ಸಾಧಾರಣ ಇಂಡೋ ಫೈಲ್‌ಗಳು, ಅತ್ತೆಮನೆ ಸೇರಿದ ಹೊಸ ಸೊಸೆ ಸ್ವಲ್ಪಹೆಚ್ಚೇ ಉತ್ಸಾಹದಲ್ಲಿ ಅಲ್ಲಿಗೆ ಹೊಂದಿಕೊಳ್ಳಲು ಹೆಣಗುವಂತೆ ಹೆಣಗಿ, ‘‘ಸಲ್ವಾರ್ ಕಮೀಝ್‌ತೊಟ್ಟೆ, ನೆಲದ ಮೇಲೆ ಕೂತು ಉಂಡೆ, ಮಸಾಲೆ ಖಾದ್ಯಗಳನ್ನು ಸವಿದೆ. ಬರೀ ಬಾಲಿವುಡ್ ಸಿನೆಮಾ ನೋಡಿದೆ. ಹಿಂದಿ ಕಲಿತೆ. ‘ಶೋಲೆ’ಯ ಡೈಲಾಗ್ ಉರುಹೊಡೆದೆ. ಬಲವಂತವಾಗಿ ಕಥಕ್ ಕಲಿತು ಭಯಂಕರ ವಾಗಿ ನರ್ತಿಸಿದೆ. ಇದೆಲ್ಲ ಯಾಕೋ ಅತಿಯಾಯಿತು ಅಂತ ನನಗೇ ಅನಿಸಿದಾಗ ಬಿಟ್ಹಾಕ್ ಅಂತ ಮಾಮೂಲಿಯಾಗಿ ಇರತೊಡಗಿದೆ’’ ಎಂದು ತಮಾಷೆಯಾಗಿ ಪೂರ್ವಾವಲೋಕನ ಮಾಡುವುದುಂಟು. ಆದರೂ ಅವರು, ಇಂಡಿಯಾವನ್ನು ವಾಸಿಸಲು, ಪ್ರೀತಿಸಲು ಆರಿಸಿಕೊಂಡ ಮಂದಿ. ಇಲ್ಲಿನ ಪೌರತ್ವ ಪಡೆದು, ನೀರು ಕುಡಿದು (ಶಬ್ದಶಃ, ರೂಪಕಾತ್ಮಕ ಎರಡೂ ಅರ್ಥದಲ್ಲಿ) ನಿಯಮ ಪಾಲಿಸಿ, ತೆರಿಗೆ ಪಾವತಿಸುವ ಇಂಡಿಯನ್ನರು. ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಪಡೆದ ತಾಯ್ನಾಡು ಹಾಗೂ ತೋಳ್ತೆರೆದು ಸ್ವಾಗತಿಸಿದ ವಲಸೆ ದೇಶ ಎರಡನ್ನೂ ಸಮ ಸಮನಾಗಿ ಪ್ರೀತಿಸುವವರೂ ಇದ್ದಾರೆ; ಅವರದು ಉಭಯವಾಸಿ ಅಸ್ತಿತ್ವ. ಜಾಗತೀಕರಣೋತ್ತರ ಪ್ರಪಂಚ ಎಲ್ಲ ಕಡೆಯಿಂದ ಎಲ್ಲ ಕಡೆಗೆ ಸಂಪರ್ಕಿತವಾಗಿರುವ ಪುಟ್ಟ ಹಳ್ಳಿಯಂತೆ ಅಗಿದೆ. ಮಹಾನಗರ, ನಗರವಾಸಿಗಳು ವಿದೇಶಿ ಅಳಿಯ, ಸೊಸೆಯಂದಿರಿಗೆ ಹೊಂದಿಕೊಂಡಿದ್ದಾರೆ. ಪರಿವಾರಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಈ ಸದಸ್ಯರಿಗೆ ಭಾರತ ಪ್ರೀತಿ ಆಯ್ಕೆ ಅಷ್ಟೇ ಆಗದೆ ಅನಿವಾರ್ಯವೂ ಆಗಿದ್ದೀತು. ಅದರೂ ನಮ್ಮೆಂದಿಗೆ ಪ್ರವಾಸಕ್ಕೆ ತಮ್ಮ ಮಕ್ಕಳನ್ನು ನೆರೆ ಮನೆಯವರು ಕಳುಹಿಸಿದಾಗ ಸ್ವಲ್ಪಹೆಚ್ಚೇ ಕಕ್ಕುಲಾತಿಯಿಂದ ಅವರನ್ನು ನೋಡಿಕೊಳ್ಳುವಂತೆ ಇಂಡೋಫೈಲ್‌ಗಳನ್ನು ನೋಡಿ ನಾವು, ಸ್ಥಳೀಯರು ನಮ್ಮ ದೇಶಭಕ್ತಿ ಠಸ್ಸೆ ಸರಿಯಾಗಿ ಬಿದ್ದಿದೆಯೇ ಎಂದು ಪರಿಶೀಲಿಸಿಕೊಳ್ಳುವ ಮನಸ್ಸಾಗುತ್ತದೆಯಷ್ಟೆ.
ಬಹುಶಃ, ದುಪ್ಪಟ್ಟು ಹುರುಪಿನಿಂದ ‘ಸುಂದರ ನದಿ ವನಗಳ ನಾಡಿಗೆ’ ಜಯಘೋಷ ಕೂಗುತ್ತೇವೆ. ಆದರೆ ಅಷ್ಟು ಸಾಕೆ? ಇಲ್ಲಿ ನೋಟು ಅಮಾನ್ಯೀಕರಣದ ಹವಾ ಎದ್ದಿದ್ದಾಗ ಇರಾಕ್-ಸಿರಿಯಾಗಳಲ್ಲಿ ಸಾವು-ನೋವು-ಹಿಂಸೆಯ ತಾಂಡವ. ‘‘ಶಾಂತಿಪ್ರಿಯ ಜವಾಬ್ದಾರಿಯುತ ದೇಶ ಎನಿಸಿಕೊಂಡಿರುವ ಭಾರತ ಈ ಕುರಿತು ಪಿಟ್ಟೆನ್ನಲಿಲ್ಲ’’ ಏಕೆ ಎಂದು ತಮ್ಮ ಅಂಕಣದಲ್ಲಿ ಕವಿ, ಸಮಾಜ ವಿಜ್ಞಾನಿ ಶಿವ್ ವಿಶ್ವನಾಥನ್ ಆಕ್ಷೇಪಿಸಿದ್ದರು. ನಾವು ಯಾರ ತಂಟೆಗೂ ಹೋಗುವುದಿಲ್ಲ ಎಂಬ ಜಡತ್ವದ ಭೋಳೆ ವಿದೇಶಿ ನೀತಿ ತರವೆ ಎಂದಿದ್ದರು. ಭಾರತದ್ದೇ ಮುನಿದಿರುವ ಅಂಗ, ಕಾಶ್ಮೀರ ಜನತೆಯ ಭಾವಾವೇಗ, ತ್ಯಕ್ತರೆನಿಸಿಕೊಂಡ ಒಳತೋಟಿ ದೇಶನಾಯಕರ ಸಂವೇದನೆಯನ್ನು ಮೀಟಿರುವುದೂ ಇತ್ತೀಚೆಗೆ. ವಿಶ್ವಪ್ರಜೆಯಾಗುವುದು, ದೇಶಪ್ರೇಮ ಎನ್ನುವ ಉನ್ನತ ಉದಾತ್ತ ಭಾವನೆಯನ್ನು ಸಂಕುಚಿತಗೊಳಿಸದೇ ಕಾಯ್ದುಕೊಳ್ಳುವ ಪ್ರಯತ್ನ. ಆದರೆ ಹಾಲ್ಡೇನ್ ಮಹಾಶಯರು ಬಿಡಿಸಿಟ್ಟಂತೆ, ವಿಶ್ವ ಸರಕಾರ ಎಂಬುದೊಂದು ಇಲ್ಲದಿರುವುದರಿಂದ ಸರಕಾರಕ್ಕೆ ಪೀಡೆಯಾಗಿ ಬದುಕುವ ಸೌಭಾಗ್ಯ ಅಲ್ಲಿ ಇಲ್ಲ! ನಮ್ಮೆಲ್ಲ ಬುದ್ಧಿವಂತಿಕೆ, ಹೊಣೆಗಾರಿಕೆ, ನೇರವಂತಿಕೆಗೆ ಒರೆಗಲ್ಲು, ಅನುಕೂಲಕ್ಕಾಗಿ ಮಾಡಿಕೊಂಡ ಪರಿಕಲ್ಪನೆಯಾದರೂ ದೇಶವೇ ಆಗಬೇಕು. ಹಾಗೆ ದೇಶಭಕ್ತಿ, ದೈವಭಕ್ತಿಗಿಂತಲೂ ಹೆಚ್ಚು ಟ್ಯಾಂಜಿಬಲ್-ಸ್ಪರ್ಶಿಸಿ ಖಚಿತಪಡಿಸಿಕೊಳ್ಳಲು ಬರುವಂತಹದು.
ಸಂಕಷ್ಟದಲ್ಲಿರುವಾಗ ಕೂಗಿ ಕರೆದರೆ ದೇವರು ಓ ಎನ್ನಬಹುದು ಅಥವಾ ಇಲ್ಲ. ಆದರೆ ಸ್ವದೇಶ ಅನ್ನಲೇಬೇಕು. ಅನ್ನುವುದಕ್ಕಾಗಿ ಸ್ವತಃ ರೂಪಿಸಿಕೊಂಡಿರುವ ನಿಯಮಾವಳಿ, ಅದರಿಂದ ಸಂಚಯಿತವಾಗುವ ದೇಶಬಾಂಧವ ನಂಟು ಉತ್ಕಟವಾಗಿಯೇ ಇರುತ್ತದೆ, ಇರಬೇಕು. ಭಾರತೀಯರ ಸಮೂಹ ಪ್ರಜ್ಞೆಯ ಮೇಲಾಗಿರುವ ಗಾಯ ಅಂದರೆ ವಸಾಹತೀಕರಣದ್ದು. ಹೇಗಿದ್ದೆವು, ಈಗ ಹೇಗಾಗಿದ್ದೇವೆ ಎಂಬ ಸ್ವಾನುಕಂಪ, ಹೆಮ್ಮೆಗಳ ಮಿಶ್ರಭಾವವೂ ದೇಶಭಕ್ತಿ ಉದ್ದೀಪಿಸುವುದನ್ನು ಮನಗಂಡಿದ್ದೇವೆ. ಕಾಂಗ್ರೆಸ್ ಸಂಸದ, ಪ್ರತಿಭಾವಂತ ಲೇಖಕ ಶಶಿ ತರೂರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮನ್ನು ಅಸಮಾನರು ಎಂದು ಭಾವಿಸಿ ಆಳ್ವಿಕೆಗೆ ಒಳಪಡಿಸಿದ ಬ್ರಿಟಿಷರ ತರ್ಕ, ತಾತ್ವೀಕರಣಗಳಲ್ಲಿ ನಿಜ ಎಷ್ಟು, ಹುಸಿ ಎಷ್ಟು ಎಂದು ತಮ್ಮ (ಕಳೆದ ನವೆಂಬರ್‌ನಲ್ಲಿ ಪ್ರಕಟಗೊಂಡ) ಪುಸ್ತಕ ‘ಆ್ಯನ್ ಎರಾ ಆಫ್ ಡಾರ್ಕ್‌ನೆಸ್: ದಿ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ’ದಲ್ಲಿ ಸುಗ್ರಾಸವಾಗಿ ಬಿಡಿಸಿಟ್ಟರು. ಇದಕ್ಕೆ ಪೂರ್ವಭಾವಿಯಾಗಿ ಆಕ್ಸ್‌ಫರ್ಡ್ ಡಿಬೇಟ್‌ನಲ್ಲಿ, ಇದೇ ವಿಷಯದ ಮೇಲೆ ಅವರು ತಡೆಯಿಲ್ಲದೆ ಬಿಟ್ಟ ವಾಗ್ಬಾಣಗಳು ತಮ್ಮ ಪೂರ್ವಜರು ಮಾಡಿದ ಅಂದಿನ ಪ್ರಮಾದಕ್ಕೆ ಇಂದಿನ ಇಂಗ್ಲಿಷ್ ಪ್ರೇಕ್ಷಕರನ್ನು ಘಾಸಿಗೊಳಿಸುತ್ತಲೇ ಮುದಗೊಳಿಸಿದವು! ವೈರಲ್ ಆದ ಆ ವಾಗ್ಝರಿಯಲ್ಲಿ ಮಿಂದ ದೇಶವಾಸಿಗಳ ಆನಂದವನ್ನಂತೂ ಕೇಳುವುದೇ ಬೇಡ. ನಾನು ಇನ್ನೂ ಪ್ರೌಢಿಮೆಯ, ಚೆನ್ನಾದ ಪುಸ್ತಕಗಳನ್ನು ಬೇರೆ ವಿಷಯಗಳ ಮೇಲೆ ಬರೆದಿದ್ದೇನೆ. ಆದರೆ ಇದಕ್ಕೆ ಸಿಕ್ಕ ಸ್ಪಂದನೆ ನನ್ನನ್ನು ಚಕಿತಗೊಳಿಸಿತು ಎಂಬ ಸಂಭ್ರಮ ಆಗ ಅವರದು.
ಸೇನೆ ಹಾಗೂ ಅರೆ ಸೇನಾಪಡೆಗಳ ಯೋಧರು ದೇಶಬಾಂಧವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಧಾನಿಗೆ, ಸಾಮಾಜಿಕ ಜಾಲತಾಣಗಳ ಮೂಲಕ ಅಳಲು ತೋಡಿಕೊಂಡಿದ್ದು ಇತ್ತೀಚಿಗೆ ಕೋಲಾಹಲ ಎಬ್ಬಿಸಿತ್ತಲ್ಲವೆ? ಆ ಬಗ್ಗೆ ಚರ್ಚಿಸಲು ಬಂದ ಸುಬೇದಾರ್ ಮಾತುಮಾತಿನಲ್ಲಿ ನಾವು ತಿಂಗಳುಗಟ್ಟಲೆ ಅಭ್ಯಾಸ ಮಾಡಿದ್ದರೂ ಗಣರಾಜ್ಯೋತ್ಸವದಲ್ಲಿ ಪರೇಡ್ ಮಾಡಲು ಬಿಡಲಿಲ್ಲ ನೀವು... ಎಂದು ಬಿಜೆಪಿ ಪ್ರತಿನಿಧಿಯನ್ನು ಉದ್ದೇಶಿಸಿ ಮುಗ್ಧವಾಗಿ ಹೇಳಿ, ಸೇನೆ, ಅರೆಸೇನೆಯನ್ನು ಬೇರೆ ಬೇರೆಯಾಗಿ ಏಕೆ ಸರಕಾರ ಗಣಿಸುತ್ತದೆ ಎಂಬ ನೋವು-ನಿರಾಸೆ ತೋಡಿಕೊಂಡರು.
ನೋಡಿ ಮನಸ್ಸು ಹಸಿಯಾಗಿದ್ದು ಏಕೆ?