ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ 115 ಕೋಟಿ ರೂ.ಬೇನಾಮಿ ಹಣ ಪತ್ತೆ
ಬೆಂಗಳೂರು, ಜ. 23: ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ (ಐಟಿ)ಅಧಿಕಾರಿಗಳು ಸೂಕ್ತ ದಾಖಲೆಗಳಲ್ಲಿದ್ದ 115.2 ಕೋಟಿ ರೂ. ಬೇನಾಮಿ ಹಣ, 12 ಕೆ.ಜಿ.ಚಿನ್ನವನ್ನು ಪತ್ತೆ ಮಾಡಿದ್ದಾರೆ.
ಜ.20ರಿಂದ ಗೋವಾ ಹಾಗೂ ಕರ್ನಾಟಕ ವಲಯದ ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿ, ಸಹೋದರ ಲಖನ್ ಜಾರಕಿಹೊಳಿ, ಅವರ ಮಾಲಕತ್ವದ ಉದ್ದಿಮೆಗಳ ಮೇಲೆ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸದ ಮೇಲೆ ದಾಳಿ ನಡೆಸಿದ್ದರು.
ಬೆಳಗಾವಿ, ಗೋಕಾಕ್, ಬೆಂಗಳೂರು ಸೇರಿದಂತೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಬೃಹತ್ ಮೊತ್ತದ ದಾಖಲೆ ರಹಿತ ಹಣ ಮತ್ತು ಚಿನ್ನಾಭರಣಗಳನ್ನು ಪತ್ತೆ ಮಾಡಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ. ಸೂಕ್ತ ದಾಖಲೆ ನೀಡಿದ ಬಳಿಕ ಹಿಂದಿರುಗಿಸಲಾಗುವುದು ಎಂದು ಹೇಳಲಾಗಿದೆ.
ಸಚಿವ ರಮೇಶ್ ಜಾರಕಿಹೊಳಿ ಒಡೆತನ ಸಕ್ಕರೆ ಕಾರ್ಖಾನೆಯೊಂದು ಗೋವಾ ರಾಜ್ಯದಲ್ಲಿದ್ದು, ಆ ಬಗ್ಗೆ ತೆರಿಗೆ ವಂಚನೆ ಮಾಡಲಾಗಿತ್ತು. ಅಲ್ಲದೆ, ಇತ್ತೀಚೆಗೆ ತಮ್ಮ ಪುತ್ರನ ವಿವಾಹವನ್ನು ಅದ್ದೂರಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ದ್ವೇಷದಿಂದ ದಾಳಿ: ದೇಶದಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳ ಮುಖಂಡರ ನಿವಾಸಗಳನ್ನು ಗುರಿಯನ್ನಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದರ ಹಿಂದೆ ರಾಜಕೀಯ ದ್ವೇಷದ ಸಂಶಯವಿದೆ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾನು ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದರೆ ಹತಾಶೆಯ ಮನೋಭಾವ ಎಂಬ ಭಾವನೆ ಮೂಡಬಹುದು. ಆದರೆ, ತನಗೆ ಆಗದ ವ್ಯಕ್ತಿಗಳು ತನ್ನ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೂರು ನೀಡಿದ್ದು, ಈ ಬಗ್ಗೆ ಶೀಘ್ರದಲ್ಲೆ ಬಹಿರಂಗಪಡಿಸುವೆ ಎಂದು ಹೇಳಿದರು.