ಇದು ಟ್ರಂಪೋಚಿತ ನಿರ್ಧಾರ!
ಲೆಕ್ಕಾಚಾರ ತೀರಾ ಸರಳವಾಗಿದೆ. ಅಮೆರಿಕದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ 74 ಲಕ್ಷ. ಅದೇ ವೇಳೆಗೆ ಅಮೆರಿಕವು ಭಾರತ, ಚೀನಾದಂತಹ ದೇಶಗಳಿಗೆ ‘‘ಔಟ್ ಸೋರ್ಸ್’’ ಮಾಡುತ್ತಿರುವ ಉದ್ಯೋಗಗಳ ಸಂಖ್ಯೆ 1.40 ಕೋಟಿ. ಅಂದರೆ, ಒಂದು ವೇಳೆ ಈಗ ‘‘ಔಟ್ ಸೋರ್ಸ್’’ ಆಗಿರುವ ಉದ್ಯೋಗಗಳನ್ನೆಲ್ಲ ವಾಪಸ್ ಕಸಿದುಕೊಂಡು ಅಮೆರಿಕದ ನಿರುದ್ಯೋಗಿಗಳಿಗೆ ಕೊಟ್ಟರೂ, ಆ ಮೇಲೆ 66 ಲಕ್ಷ ಉದ್ಯೋಗಗಳು ಮಿಕ್ಕಿರುತ್ತವೆ!
ಮೊನ್ನೆ ಕೆಪಿಟೋಲ್ನ ಉಪ್ಪರಿಗೆಯ ಪಶ್ಚಿಮ ಭಾಗದದ ಅಟ್ಟಣಿಗೆಯ ಮೇಲೆ ಅಮೆರಿಕದ 45ನೆ ಅಧ್ಯಕ್ಷರಾಗಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ ಟ್ರಂಪ್ ದೊರೆ, ತನ್ನ ಕರಾರವಿಂದಗಳಲ್ಲಿ ಚಿನ್ಮುದ್ರೆ ಹೊತ್ತು ಮಾಡಿದ ಒಂದು ಘೋಷಣೆ, ಸ್ವತಃ ಚಿನ್ಮುದ್ರೆಯ ಪೇಟೆಂಟು ಹೊಂದಿರುವ ಭಾರತೀಯ ಸಂಸ್ಕೃತಿಯ ನವಸರದಾರರುಗಳ ಬೆನ್ನುಹುರಿಯಲ್ಲಿ ಸಣ್ಣದೊಂದು ಸೆಳಕು ಮೂಡಿಸಿದ್ದು ಸುಳ್ಳಲ್ಲ. ‘‘Buy American, Hire American” ಎಂಬ ನಾಲ್ಕೇ ನಾಲ್ಕು ಶಬ್ದಗಳ ಘೋಷಣೆ ಅದು.
ಇವತ್ತು ಅಮೆರಿಕದಲ್ಲಿ ಭಾರತೀಯ ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು 15.3 ಬಿಲಿಯನ್ ಡಾಲರ್ಗಳ ಹೂಡಿಕೆ ಹೊಂದಿದ್ದು, 91,000 ಉದ್ಯೋಗಗಳನ್ನು ಸೃಷ್ಟಿಸಿವೆ. ಸುಮಾರು 100ಕ್ಕೂ ಮಿಕ್ಕಿ ಭಾರತೀಯ ಕಂಪೆನಿಗಳು ಅಲ್ಲಿನ 35 ರಾಜ್ಯಗಳಲ್ಲಿ ಹರಡಿ ಬೆಳೆಯುತ್ತಿವೆ. ನ್ಯೂಜರ್ಸಿ, ಕ್ಯಾಲಿಫೋರ್ನಿಯಾ, ಟೆಕ್ಸಸ್, ಇಲಿನಾಯ್ಸಾ ಮತ್ತು ನ್ಯೂಯಾರ್ಕ್ ಇವುಗಳಲ್ಲಿ ಪ್ರಮುಖ ರಾಜ್ಯಗಳು ಎಂದು NASSCOM ವರದಿಯೊಂದು ವಿವರಿಸುತ್ತದೆ.
ರಿಯಲ್ ಎಸ್ಟೇಟ್ ಏಜಂಟನೊಬ್ಬ ಏಕಾಏಕಿ ಅಮೆರಿಕದ ಗದ್ದುಗೆ ಏರಿ ಕುಳಿತದ್ದನ್ನು ಅರಗಿಸಿಕೊಳ್ಳುವುದಕ್ಕೆ ಆಗದೆ ಸ್ವತಃ ಅಮೆರಿಕ ಇನ್ನೂ ಏದುಸಿರು ಬಿಡುತ್ತಿದೆ. ಜಾಗತೀಕರಣದ ಅಮಲು ಪದಾರ್ಥವನ್ನು ಜಗತ್ತಿಗೆ ಉಣಿಸಿ ಲೋಲುಪತೆಗೆ ಕಾಯುತ್ತಿದ್ದ ಅಮೆರಿಕಕ್ಕೆ ಒಂದು ಸರಿಬೆಳಗು ಹೊತ್ತಿನಲ್ಲಿ ಶುದ್ಧ ರಾಷ್ಟ್ರಾಭಿಮಾನದ ಬೆಲ್ಲ ತಿನ್ನಿಸಿದ ಡೊನಾಲ್ಡ್ ಟ್ರಂಪ್, ‘america first' ಎಂಬ ಬೀಜಮಂತ್ರದೊಂದಿಗೆ ಯಾರೂ ಎಣಿಸದ ರೀತಿಯಲ್ಲಿ ಟ್ರಂಪ್ ಟವರಿನ ತನ್ನ ಕ್ಯಾಬಿನ್ನಿನಿಂದ ಶ್ವೇತಭವನದ ಓವಲ್ ಆಫೀಸಿನೊಳಗೆ ನೆಗೆದುಬಿಟ್ಟಿದ್ದರು. ಪಠಿಸುತ್ತಿದ್ದ ಮಂತ್ರ ಈಗ ತಿನ್ನೋದಕ್ಕೆ ಬದನೆ ಕಾಯಿಯಾಗಿ ಎದುರು ಬಂದು ನಿಂತಿದೆ.
ಈಗ ಕೆಲವು ಅಂಕಿಸಂಖ್ಯೆಗಳನ್ನು ಗಮನಿಸಿ:
* ಅಮೆರಿಕಕ್ಕೆ ‘ಆಫ್ ಶೋರಿಂಗ್’ ಯಾಕೆ ಒಗ್ಗಿಹೋಯಿತೆಂಬುದಕ್ಕೆ ಉತ್ತರ ಸರಳ. ಅಮೆರಿಕದ ಪ್ರಜೆಗಳ ಮಧ್ಯಮ ವರ್ಗದ ವಾರ್ಷಿಕ ಸಂಬಳ 35,000ರಿಂದ 75,000 ಡಾಲರ್ಗಳಷ್ಟಿರುತ್ತದೆ. ಅದೇ ವೇಳೆಗೆ, ಭಾರತದಲ್ಲಿ ಆ ಮೊತ್ತ, ವರ್ಷಕ್ಕೆ 8,400 ಡಾಲರ್; ಚೀನಾದಲ್ಲಿ 7,000 ಡಾಲರ್. ಮೂರು ಕಾಸಿನ ಬೆಲೆಯಲ್ಲಿ ಕೆಲಸಗಾರರು ಸಿಗುವುದಿದ್ದರೆ ಯಾರಿಗೆ ಬೇಡ ಹೇಳಿ? ಅಮೆರಿಕದ ಸಂಸತ್ತು ವರ್ಷಕ್ಕೆ 60,000ದಷ್ಟು H1B ವೀಸಾ (ಅಮೆರಿಕದಲ್ಲಿ ಉದ್ಯೋಗಕ್ಕೆ 3 ವರ್ಷಗಳ ಅವಧಿಗೆ ಅವಕಾಶ ಮಾಡಿಕೊಡುವ ವೀಸಾ ಇದು.)ಕ್ಕೆ ಅವಕಾಶ ನೀಡುತ್ತಿದ್ದು, ಈ ಒಂದು ಬಾಬ್ತಿನಲ್ಲೇ ಅಮೆರಿಕದ ಕಂಪೆನಿಗಳು ಕೋಟ್ಯಂತರ ರೂಪಾಯಿಗಳ ಲಾಭವನ್ನು ಉಳಿಸಿಕೊಳ್ಳುತ್ತಿವೆ.
* ಅಮೆರಿಕದ ಕಂಪೆನಿಗಳ ಕಾಲ್ ಸೆಂಟರ್ ವ್ಯವಹಾರಗಳು ಭಾರತಕ್ಕೂ, ಫಿಲಿಪ್ಪೀನ್ಸ್ ದೇಶಕ್ಕೂ ಹಂಚಿಹೋಗುತ್ತಿವೆ. ಯಾಕೆಂದರೆ, ಅಮೆರಿಕದಲ್ಲಿ ಕಾಲ್ ಸೆಂಟರ್ ಕೆಲಸದ ಬೆಲೆ ಗಂಟೆಗೆ 20 ಡಾಲರ್ ಗಳಾದರೆ, ಭಾರತ/ಫಿಲಿಪ್ಪೀನ್ಸ್ಗಳಲ್ಲಿ ಈ ಸೇವೆ ಗಂಟೆಗೆ 12 ಡಾಲರ್ ಗಳೊಳಗೇ ಲಭ್ಯ. ಹಾಗಾಗಿ, ಅಮೆರಿಕದ 2,50,000 ಕಾಲ್ ಸೆಂಟರ್ ಉದ್ಯೋಗಗಳು ಆಫ್ ಶೋರ್ ಆಗಿವೆ.
* ಮೇಲ್ಖರ್ಚುಗಳು ಹೆಚ್ಚಿರುವ ಅಮೆರಿಕದಲ್ಲಿ ಸಣ್ಣ ಕಂಪೆನಿಗಳಿಗೆ ತಮ್ಮಲ್ಲಿನ ಕಾರುಕೂನಿಕೆ ಕೆಲಸಗಳು ದೊಡ್ಡ ಹೊರೆ. ಹಾಗಾಗಿ ಅಲ್ಲಿನ ಶೇ. 85 ಸಣ್ಣ ಕಂಪೆನಿಗಳು ತಮ್ಮ ಬ್ಯಾಕ್ ಆಫೀಸ್ ಕೆಲಸಗಳನ್ನು ಶೇರುಗಾರಿಕೆ ಮಾಡುವ ಐಟಿ ಕಂಪೆನಿಗಳಿಗೆ ವಹಿಸಿಕೊಡುತ್ತವೆ. ಇದರಿಂದ ಅಮೆರಿಕದ ಸಣ್ಣ ಕಂಪೆನಿಗಳಿಗೆ ಶೇ. 25 ವೆಚ್ಚ ಉಳಿತಾಯ ಆಗುತ್ತದಂತೆ.
ವಾಸ್ತವ ಏನು?
ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣೆಯ ವೇಳೆ ಅಮೆರಿಕದ ಕಾರ್ಪೊರೇಟ್ ತೆರಿಗೆಯನ್ನು ಶೇ. 35ರಿಂದ 15ಕ್ಕೆ ಇಳಿಸುತ್ತೇನೆಂಬ ಆಶ್ವಾಸನೆ ನೀಡಿದ್ದರು. ಇದು ಜಾರಿಗೆ ಬಂದರೆ, ಫೋರ್ಡ್, ಮೈಕ್ರೋಸಾಫ್ಟ್, GEಯಂತಹ ಅಮೆರಿಕದ ದೊಡ್ಡ ಕಂಪೆನಿಗಳು ಮರಳಿ ಅಮೆರಿಕದ ನೆಲೆಯಿಂದಲೇ ತಮ್ಮ ವ್ಯವಹಾರವನ್ನು ಆರಂಭಿಸಲಿವೆ ಎಂಬ ನಿರೀಕ್ಷೆ ಇದೆ. ಜೊತೆಗೆ ಅಮೆರಿಕದಲ್ಲಿ ಕನಿಷ್ಠ ವೇತನವನ್ನು ವಾರ್ಷಿಕ 1,00,000 ಡಾಲರ್ಗಳಿಗೆ ಏರಿಸಲಾಗುವುದೆಂಬ ಆಶ್ವಾಸನೆಯೂ ಇತ್ತು. ಇವೆಲ್ಲವೂ ಕಾರ್ಯರೂಪಕ್ಕೆ ಯಾವಾಗ ಮತ್ತು ಹೇಗೆ ಬರಲಿವೆ ಎಂಬ ಪ್ರಶ್ನೆಗಳ ನಡುವೆಯೇ ಕೆಲವು ವಿರೋಧಾಭಾಸಗಳೂ ಎದ್ದು ಕಾಣುತ್ತಿವೆ.
ಅಮೆರಿಕದಲ್ಲಿ ಬಹು ಬೇಡಿಕೆಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಕಂಪ್ಯೂಟರ್ ಪರಿಣತರು ಎಷ್ಟಿದ್ದಾರೆ?
1981ರಲ್ಲಿ ಶೇ. 2.2ರಷ್ಟಿದ್ದ ಅಮೆರಿಕದ ಕಂಪ್ಯೂಟರ್ ಪದವೀಧರರ ಸಂಖ್ಯೆ 2011ರ ಹೊತ್ತಿಗೆ ಶೇ. 2.76 ಆಗಿದೆ. ಅಮೆರಿಕದ ವಿಶ್ವವಿದ್ಯಾನಿಲಯ ಗಳಲ್ಲಿ ವಿದೇಶೀ ವಿದ್ಯಾರ್ಥಿಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಚೀನಾ ಮತ್ತು ಎರಡನೆ ಸ್ಥಾನದಲ್ಲಿರುವುದು ಭಾರತ. ಅಮೆರಿಕದಲ್ಲಿ ಕಲಿಯುತ್ತಿರುವ ಚೀನಾದ ವಿದ್ಯಾರ್ಥಿಗಳಲ್ಲಿ ಶೇ. 28 ಬಿಸಿನೆಸ್ ಮ್ಯಾನೇಜ್ಮೆಂಟ್ ಮತ್ತು ಶೇ. 20 ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ಅಮೆರಿಕದಲ್ಲಿ ಕಲಿಯುತ್ತಿರುವ ಭಾರತದ ವಿದ್ಯಾರ್ಥಿಗಳಲ್ಲಿ ಶೇ. 38 ಇಂಜಿನಿಯರಿಂಗ್ ಮತ್ತು ಶೇ.26 ಗಣಿತ, ಕಂಪ್ಯೂಟರ್ ವಿಜ್ಞಾನದ ವಿದ್ಯಾರ್ಥಿಗಳು. ಅಮೆರಿಕದ ವಿವಿಗಳಲ್ಲಿ ಡಾಕ್ಟೋರಲ್ ವಿದ್ಯಾಭ್ಯಾಸ ಮಾಡುತ್ತಿರುವವರಲ್ಲಿ ಶೇ.11.6 (2012-13) ವಿದೇಶೀಯರಾಗಿದ್ದು, ಅವರಲ್ಲಿ ಶೇ. 57 ಇಂಜಿನಿಯರಿಂಗ್, ಶೇ. 53 ಕಂಪ್ಯೂಟರ್ ಮತ್ತು ಶೇ. 50 ಗಣಿತ, ಸ್ಟಾಟಿಸ್ಟಿಕ್ಸ್ ವಿದ್ಯಾರ್ಥಿಗಳು ವಿದೇಶೀಯರು.
ಹಾಗಾಗಿ ಟ್ರಂಪ್ ಘೋಷಣೆ ಬರಿಯ ಬಾಯಿಪಟಾಕಿ ಆಗಿ ಉಳಿಯುವ ಸಾಧ್ಯತೆಗಳೇ ಜಾಸ್ತಿ ಎಂದು ವಿಶ್ಲೇಷಿಸಲಾಗುತ್ತಿದೆ. ಒಬಾಮಾ ಕೂಡ ಎಂಟು ವರ್ಷಗಳ ಹಿಂದೆ ತನ್ನ ಚುನಾವಣೆಯ ವೇಳೆ ಇದೇ ಧ್ವನಿಯಲ್ಲಿ ಮಾತನಾಡಿದ್ದರಾದರೂ ಏನೂ ಬದಲಾಗಲಿಲ್ಲ ಎಂಬ ವಾಸ್ತವವೂ ಈ ವಾದದ ಬೆಂಬಲಕ್ಕಿದೆ.
ಕೃಪೆ: ಅವಧಿ