varthabharthi


ಮುಂಬೈ ಮಾತು

ಮುಂಬೈ ಆಸ್ಪತ್ರೆಗಳ ದುಸ್ಥಿತಿ, ಮೂರು ತಿಂಗಳು ರನ್‌ವೇ ಬಂದ್!

ವಾರ್ತಾ ಭಾರತಿ : 24 Jan, 2017

ಮೆಟ್ರೋ ಕೆಳಗಡೆಯ ಭ್ರಷ್ಟಾಚಾರ

ಮುಂಬೈಯ ವರ್ಸೋವಾದಿಂದ ಘಾಟ್‌ಕೋಪರ್‌ಗೆ ಸುಮಾರು ಹನ್ನೊಂದು ಕಿ.ಮೀಟರ್‌ವರೆಗಿನ ಆಕರ್ಷಕ ವೇಗದ ಮೆಟ್ರೋ ಓಡಲಾರಂಭಿಸಿದಾಗ ಮುಂಬೈಯ ಟ್ರಾಫಿಕ್ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಕ್ಕಿದಂತಾಯಿತೆಂದು ಜನ ನಂಬಿದರು. ಆದರೆ ಮೆಟ್ರೋ ಟ್ರ್ಯಾಕ್‌ನ ಕೆಳಗಡೆ ಟ್ರಾಫಿಕ್ ಪೊಲೀಸರ ಭ್ರಷ್ಟಾಚಾರ ಮುಂಬೈಯ ವೇಗವನ್ನು ಕಡಿಮೆ ಮಾಡಿದೆ! ಬಾಂಬೆ ಹೈಕೋರ್ಟ್‌ನಲ್ಲಿ ಟ್ರಾಫಿಕ್ ಪೊಲೀಸರ ಭ್ರಷ್ಟಾಚಾರದತ್ತ ಬೆರಳು ತೋರಿಸುವ ಒಂದು ಅರ್ಜಿ ದಾಖಲಿಸಲಾಗಿದೆ.

ಟ್ರಾಫಿಕ್ ಪೊಲೀಸ್‌ನಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿರುವ ಹೆಡ್‌ಕಾನ್ಸ್‌ಟೇಬಲ್ ಸುನಿಲ್ ಟೋಕೆ ಎಂಬವರು ಹೈಕೋರ್ಟ್ ನಲ್ಲಿ ದಾಖಲಿಸಿದ ಒಂದು ಅರ್ಜಿಯ ಮಾಧ್ಯಮದಿಂದ ಪೊಲೀಸರ ಭ್ರಷ್ಟಾಚಾರದ ಕೊಂಡಿಯನ್ನು ಬಹಿರಂಗಪಡಿಸಿದೆ.

ಮುಂಬೈಯಲ್ಲಿ ಸ್ಥಳದ ಕೊರತೆ ಬಹಳವಿದೆ. ಹೀಗಾಗಿ ವಿಪರೀತ ಟ್ರಾಫಿಕ್‌ನ ಹೊರತಾಗಿಯೂ ರಸ್ತೆ ಬದಿಗಳಲ್ಲಿ ಪಾರ್ಕಿಂಗ್ ಮಾಡುವಂತಹ ಅಸಹಾಯಕ ದೃಶ್ಯವಿದೆ. ಹೊಟ್ಟೆಪಾಡಿಗಾಗಿ ರಸ್ತೆಪಕ್ಕ ಬೀದಿ ಅಂಗಡಿ, ಕೈಗಾಡಿಗಳನ್ನು ಇರಿಸುವ ಅಸಹಾಯಕ ಜನರಿದ್ದಾರೆ. ಈ ಅಸಹಾಯಕತೆಯ ಜೊತೆ ಟ್ರಾಫಿಕ್ ಪೊಲೀಸರ ಭ್ರಷ್ಟಾಚಾರ ಕೂಡಾ ಏರಿದೆ. ಹೆಡ್ ಕಾನ್ಸ್ ಟೇಬಲ್ ಸುನಿಲ್ ಟೋಕೆ ಅವರು ಸಲ್ಲಿಸಿದ ಈ ದೂರು ಅರ್ಜಿಯಲ್ಲಿ ಪೊಲೀಸರು ಶೋರೂಂ ಮಾಲಕರಿಂದ ಹಿಡಿದು ಗ್ಯಾರೇಜ್ ಮಾಲಕರಿಂದಲೂ ಹಣ ಪಡೆಯುತ್ತಿರುವ ಉಲ್ಲೇಖ ಮಾಡಿದ್ದಾರೆ. ಸಾಕಿನಾಕಾ ಕ್ಷೇತ್ರದಲ್ಲಂತೂ ಎಲ್ಲ ಬೈಕ್ ಶೋರೂಮ್-ಗ್ಯಾರೇಜ್‌ವಾಲಾರು ರಸ್ತೆ ಬದಿಯ ನಾಲ್ಕನೇ ಒಂದು ಭಾಗವನ್ನು ಆಕ್ರಮಿಸಿದ್ದಾರೆ. ಇವರೆಲ್ಲ ಹೇಳುವಂತೆ -‘‘ಯಾರೂ ಕೂಡಾ ತಮ್ಮನ್ನು ಏನೂ ಮಾಡಲು ಸಾಧ್ಯವಾಗಲಾರದು.’’

ಈ ಕ್ಷೇತ್ರದಲ್ಲಿ ಶನಿವಾರ ರಸ್ತೆ ಬದಿ ಸಂತೆ ನಡೆಯುತ್ತದೆ. ರಾಜ್ಯ ಸರಕಾರ ಮೆಟ್ರೋ ಓಡಿಸುತ್ತಿದೆಯಾದರೂ ಕೆಳಗಡೆ ಸಂತೆಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಹುಡುಕಿಲ್ಲ. ಈ ಬೀದಿ ವ್ಯಾಪಾರಿಗಳು ರಸ್ತೆಯನ್ನು ಆಕ್ರಮಿಸಿ ತಮ್ಮ ಅಂಗಡಿ ತೆರೆಯುತ್ತಾರೆ. ಇದರಲ್ಲಿ ಟ್ರಾಫಿಕ್ ಪೊಲೀಸರು, ಸಿಟಿ ಪೊಲೀಸರು ಮತ್ತು ಮನಪಾ ಅಧಿಕಾರಿಗಳ ಪಾಲು ನಿಶ್ಚಿತಗೊಳಿಸಲಾಗಿದೆಯಂತೆ. ಮೆಟ್ರೋ ರೈಲ್‌ನ ಕೆಳಗಡೆ ಬರುವ ಚಕಾಲ, ಜೆ.ಬಿ.ನಗರ್- ಮರೋಲ್ -ಸಾಕಿನಾಕಾ ಮುಂತಾದ ಕ್ಷೇತ್ರಗಳಲ್ಲಿ ಸಂಜೆಗೆ ವಾಹನ ಚಲಾಯಿಸುವುದು ಬಹಳ ಕಷ್ಟದ ಸಂಗತಿಯಾಗಿರುತ್ತದೆ. ಈ ಟ್ರಾಫಿಕ್ ಜಾಮ್‌ನ ಕಾರಣ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರುತ್ತಿದ್ದು ಮೆಟ್ರೋ ಲಾಭಗಳಿಸಿದೆ! ರಸ್ತೆ ಬದಿಯ ಪಾರ್ಕಿಂಗ್‌ಗೆ ದರವನ್ನು ಫಿಕ್ಸ್ ಮಾಡಲಾಗಿದೆ. ಆದರೆ ಹೈವೆ ಅಥವಾ ಮುಖ್ಯರಸ್ತೆಯಲ್ಲಿ ಪಾರ್ಕಿಂಗ್‌ಗೆ ಸರಕಾರ ಕೂಡಾ ಅನುಮತಿ ನೀಡುವುದಿಲ್ಲ. ಆದರೆ ಮೆಟ್ರೋ ಕೆಳಗಡೆಯ ಅವ್ಯವಸ್ಥೆ ಬೇರೆಯೇ.

ಮೆಟ್ರೋ ಸ್ಟೇಷನ್‌ಗಳ ಕೆಳಗೆ ಪ್ರವೇಶ ದ್ವಾರದಲ್ಲಿ ಯಾವುದೇ ತೊಂದರೆಗಳು ಪ್ರಯಾಣಿಕರಿಗೆ ಆಗಬಾರದು ಎನ್ನುವ ಸರಕಾರಿ ಹೇಳಿಕೆ ಮೆಟ್ರೋದ ಹಲವು ಪ್ರವೇಶ ದ್ವಾರಗಳಲ್ಲಿ ಸುಳ್ಳೆನಿಸಿದೆ. ಕೆಲವೆಡೆ ಮನಪಾ ರಸ್ತೆ ಅಗೆದು ಕೆಸರು ಮಾಡಿದ್ದು ಬ್ಯಾರಿಕೇಡ್ ಇರಿಸಿ ತನ್ನ ಕೆಲಸ ಮುಗಿಯಿತು ಎಂದು ತಿಳಿದಂತಿದೆ. ಹೀಗಾಗಿ ಇನ್ನಷ್ಟು ಟ್ರಾಫಿಕ್ ಕಿರಿಕಿರಿ ಬೇರೆ ಸೃಷ್ಟಿಯಾಗಿದೆ.

* * *
ವರ್ಲಿಯ ಕಾರ್ಮಿಕ ಆಸ್ಪತ್ರೆಯ ದುಸ್ಥಿತಿ: ಪ್ರಧಾನಿಗೆ ಪತ್ರ ಬರೆದ ಕಾರ್ಮಿಕ; ತನಿಖೆಗೆ ಆದೇಶ
ಮುಂಬೈಯ ಮನಪಾ-ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಬಹುದೊಡ್ಡ ಸಾಲು ಕಂಡು ಬಂದರೆ ಮತ್ತೊಂದೆಡೆ ವರ್ಲಿಯಲ್ಲಿರುವ ಇ.ಎಸ್.ಐ.ಸಿ.(ಎಂಪ್ಲಾಯ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಷನ್) ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತಿದೆ! ಕಾರಣ ಈ ಆಸ್ಪತ್ರೆಯ ಹೀನ ಸ್ಥಿತಿ. ಇಲ್ಲಿ ವೈದ್ಯರು ಸಮಯಕ್ಕೆ ಇರುವುದೇ ಇಲ್ಲ. ತುರ್ತು ಸ್ಥಿತಿ ಸೌಲಭ್ಯವೂ ದೊರೆಯುತ್ತಿಲ್ಲ. ಹೀಗಾಗಿ ಓರ್ವ ರೋಗಿ ಈ ಆಸ್ಪತ್ರೆಯ ದುಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದು, ನಂತರ ಪ್ರಧಾನಿಯವರ ಕಛೇರಿಯಿಂದ ರಾಜ್ಯ ಸರಕಾರಕ್ಕೆ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದೆ. ಈ ಕಾರ್ಮಿಕ ಆಸ್ಪತ್ರೆಯಲ್ಲಿ ಸುರಕ್ಷೆಯ ಕುರಿತು ಯಾವುದೇ ವ್ಯವಸ್ಥೆ ಇಲ್ಲ. ಇಲ್ಲಿಗೆ ರೋಗಿಯನ್ನು ಕರೆ ತಂದರೆ ಗುಣವಾಗುವ ಬದಲು ರೋಗ ಉಲ್ಫಣಗೊಳ್ಳಬಹುದು ಎನ್ನುತ್ತಾರೆ ರೋಗಿಗಳ ಕುಟುಂಬದವರು.

ಬೆಂಕಿ ನಂದಿಸುವ ಎಕ್ಸ್ಟಿಂಗ್ಯೂಶರ್ ಇಲ್ಲಿ ತುಕ್ಕು ಹಿಡಿದಿದೆ. ಕಿಟಕಿಗಳೂ ಮುರಿದು ಹೋಗಿವೆ. ಹಲವು ಡಿಪಾರ್ಟ್‌ಮೆಂಟ್‌ಗಳು ಬಂದ್ ಇವೆ. ಹಲವು ವಾರ್ಡ್‌ಗಳು ರೋಗಿಗಳಿಲ್ಲದ ಕಾರಣ ಬಂದ್ ಇವೆ. ಇಲ್ಲಿ ಪುರುಷ -ಮಹಿಳೆಯರು ಎಂದು ರೋಗಿಗಳಿಗಾಗಿ 200 ಹಾಸಿಗೆಗಳಿವೆ. ಸದ್ಯ ರೋಗಿಗಳ ಸಂಖ್ಯೆ ಕೇವಲ 20 ರಿಂದ 30 ಮಾತ್ರ!.

ಇತ್ತೀಚೆಗೆ ಈ ಕಾರ್ಮಿಕ ಆಸ್ಪತ್ರೆಗೆ ಶುಶ್ರೂಷೆಗೆ ಬಂದ ದೀನನಾಥ್ ಕುಮಾರ್ ಪಾಸ್ವಾನ್ ಹೇಳುವಂತೆ, ‘‘ರಾತ್ರಿ ಈ ಆಸ್ಪತ್ರೆಯ ದೃಶ್ಯ ಇನ್ನೂ ಭಯಾನಕ ಇರುತ್ತದೆ. ಆಸ್ಪತ್ರೆಯಲ್ಲಿ ಡಾಕ್ಟರ್‌ಗಳೇ ಇರುವುದಿಲ್ಲ. ಮೆಡಿಕಲ್ ಸ್ಟೋರ್‌ನಲ್ಲಿ ಔಷಧಿಗಳೂ ಮುಗಿದಿವೆ’’ ಎನ್ನುತ್ತಾರೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಅವರು ಪ್ರಧಾನಿಗೆ ಪತ್ರ ಬರೆದು ಇಲ್ಲಿಯ ದುಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ನಂತರ ರಾಜ್ಯ ಸರಕಾರಕ್ಕೆ ಪ್ರಧಾನಿಯವರ ಕಛೇರಿಯಿಂದ ಈ ಬಗ್ಗೆ ತನಿಖೆ ಮಾಡುವಂತೆ ಆದೇಶ ಬಂದಿದೆ.

* * *

ಆಪರೇಶನ್ ಥಿಯೇಟರ್‌ನಲ್ಲಿ ಜಿರಳೆ!
ಮುಂಬೈ ಪಕ್ಕದ ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ 45 ವರ್ಷದ ವ್ಯಕ್ತಿಯ ಕಾಲಿನ ಆಪರೇಶನ್ ನಡೆಯುತ್ತಿತ್ತು. ಅನಿರೀಕ್ಷಿತವಾಗಿ ಡಾಕ್ಟರ್‌ಗಳು ಆಪರೇಶನ್ ನಿಲ್ಲಿಸಿದರು. ಕಾರಣ ಇಷ್ಟೇ-ಆಪರೇಶನ್ ಥಿಯೇಟರ್‌ನಲ್ಲಿ ಜಿರಳೆ ಕಂಡುಬಂದದ್ದು.! ಸರ್ಜನ್ ಆಪರೇಶನ್ ನಿಲ್ಲಿಸಿ ಜಿರಳೆಯ ವೀಡಿಯೋ ತೆಗೆದರು. ಆಪರೇಷನ್ ಥಿಯೇಟರ್ ಸ್ವಚ್ಛವಾಗಿರಬೇಕು. ಆದರೆ ಇಲ್ಲಿ ಜಿರಳೆ ಓಡಾಡುವುದು ಕಂಡ ನಂತರ ಡಾಕ್ಟರ್ ಚಿಂತೆಗೀಡಾದರು.

ರೋಗಿಯ ಸರ್ಜರಿ ನಡೆಸುತ್ತಿದ್ದ ಸೀನಿಯರ್ ಸರ್ಜನ್ ಸಂಜಯ್ ಬರ್ನವಾಲ ಸರ್ಜರಿ ನಿಲ್ಲಿಸಿ ಆಪರೇಶನ್ ಥಿಯೇಟರ್‌ನಲ್ಲಿ ಓಡಾಡು ತ್ತಿದ್ದ ಜಿರಳೆಯ ವೀಡಿಯೋ ರೆಕಾರ್ಡಿಂಗ್ ನಡೆಸಿದ್ದೇಕೆ ಅಂದರೆ ಆಸ್ಪತ್ರೆಯಲ್ಲಿ ಕೊಳಕು ಇದೆ ಎನ್ನುವ ಬಗ್ಗೆ ಆಸ್ಪತ್ರೆ ಆಡಳಿತದ ಗಮನ ಸೆಳೆಯುವುದಾಗಿತ್ತಂತೆ. ಆಪರೇಶನ್ ಥಿಯೇಟರ್‌ನಲ್ಲಿ ಕೊಳಕಿದ್ದರೆ ರೋಗಿಗೆ ಸೋಂಕು ತಗಲುವ ಅಪಾಯವಿರುತ್ತದೆ. ಡಾಕ್ಟರ್ ಬರ್ನವಾಲ ಅವರು ಕಳೆದ ತಿಂಗಳು ಕೂಡಾ ಆಪರೇಶನ್ ಥಿಯೇಟರ್ ಸ್ವಚ್ಛವಿಲ್ಲ ಎನ್ನುವ ಬಗ್ಗೆ ದೂರು ನೀಡಿದ್ದರು. ಈ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯು ಥಾಣೆ ನಗರ ನಿಗಮ ಸಂಚಾಲಿತವಾಗಿದೆ. ಈ ಆಸ್ಪತ್ರೆ ಕೊಳಕಿನ ಕಾರಣ ಈಗಾಗಲೇ ಸಮಸ್ಯೆಗಳನ್ನು ಎದುರಿಸುತ್ತಿದೆ. ಕಳೆದ ತಿಂಗಳು ಸರ್ಜರಿಯ ನಂತರ 25 ಪ್ರತಿಶತ ರೋಗಿಗಳು ಸೋಂಕಿನ ತೊಂದರೆಗೊಳಗಾಗಿದ್ದಾರೆ. ರಾಜೀವ್‌ಗಾಂಧಿ ಮೆಡಿಕಲ್ ಕಾಲೇಜ್‌ಗೆ ಸಂಬಂಧಿಸಿದ 500 ಬೆಡ್ ಇರುವ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯಲ್ಲಿ ನಾಲ್ಕು ಹೊಸ ಮೌಡ್ಯುಲರ್ ಆಪರೇಶನ್ ಥಿಯೇಟರ್‌ಗಳಿವೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಕೇವಲ ಒಂದು ಆಪರೇಷನ್ ಥಿಯೇಟರ್ ಮಾತ್ರ ಕೆಲಸ ಮಾಡುತ್ತಿದೆ.
* * *
ಮನಪಾ ಚುನಾವಣೆ: ಫೋರ್ಸ್‌ವನ್ ವಿಭಜನೆ
 ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ಧಿ ಕಲಿಸಲು ಮತ್ತು ಮುಸ್ಲಿಂ ಮತಗಳ ವಿಭಜನೆ ತಡೆಯುವುದಕ್ಕೆ ಮುಂಬೈಯಲ್ಲಿ ‘ಫೋರ್ಸ್ ವನ್’ ಹೆಸರಿನ ಸಂಘಟನೆ ರಚನೆಯಾಗಿತ್ತು. ಇದರಲ್ಲಿ ಮುಸ್ಲಿಂ ಲೀಗ್, ಅವಾಮಿ ವಿಕಾಸ್ ಪಾರ್ಟಿ, ರಾಷ್ಟ್ರೀಯ ಉಲೇಮಾ ಕೌನ್ಸಿಲ್, ಪೀಸ್ ಪಾರ್ಟಿ, ಮಹಾಜ್.... ಮೊದಲಾದ 17 ಚಿಕ್ಕ-ದೊಡ್ಡ ಮುಸ್ಲಿಂ ಪಕ್ಷಗಳು ಒಟ್ಟು ಸೇರಿ ‘ಫೋರ್ಸ್ ವನ್’ ರಚನೆಯಾಗಿತ್ತು ಆಗ, ಈ ಪಕ್ಷಗಳ ಒಕ್ಕೂಟವು ಪ್ರತೀ ಚುನಾವಣೆಯಲ್ಲೂ ಒಗ್ಗಟ್ಟಾಗಿರುವ ನಿರ್ಣಯ ತಳೆದಿತ್ತು. ಆದರೆ ವಿಧಾನಸಭಾ ಚುನಾವಣೆಯ ನಂತರ ಕ್ರಮೇಣ ಈ ಒಕ್ಕೂಟದಿಂದ ಒಂದೊಂದೇ ಪಕ್ಷಗಳು ಹೊರಬರತೊಡಗಿದವು. ಇದೀಗ ಮುಂಬೈ ಮನಪಾ ಚುನಾವಣೆಯನ್ನು ಮುಂದಿಟ್ಟು ಮುಸ್ಲಿಂ ನೇತಾರರು ತಮ್ಮ ತಮ್ಮ ಲೆಕ್ಕಾಚಾರಕ್ಕೆ ಬಿದ್ದಿದ್ದಾರೆ. ಅತ್ತ ‘ಫೋರ್ಸ್ ವನ್’ ಕ್ಷೀಣವಾಗಿದೆ.

‘‘ಕೇವಲ ಚುನಾವಣೆ ಸಮಯವಷ್ಟೇ ಈ ಪಕ್ಷಗಳು ಏಕತೆಯ ಧ್ವನಿ ಎಬ್ಬಿಸುತ್ತದೆ. ಅನಂತರ ಈ ಏಕತೆ ಕಾಣೆಯಾಗುತ್ತದೆ’’ ಎನ್ನುತ್ತಾರೆ ಫೋರ್ಸ್ ವನ್‌ನ ಒಂದು ಭಾಗವಾಗಿರುವ ‘ಅವಾಮಿ ವಿಕಾಸ್ ಪಾರ್ಟಿ’ಯ ಅಧ್ಯಕ್ಷ ಶಂಶೇರ್ ಪಠಾಣ್. ಈಗಾಗಲೇ ‘ಪೀಸ್ ಪಾರ್ಟಿ’ ತಾನು ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಹೇಳಿದೆ. ಹೀಗಾಗಿ ಶಂಶೇರ್ ಪಠಾಣ್‌ರು ಮನಪಾ ಚುನಾವಣೆಯಲ್ಲಿ ‘ಬಹುಜನ್ ರಿಪಬ್ಲಿಕನ್ ಸೋಶಿಯಲಿಸ್ಟ್ ಪಾರ್ಟಿ’ಯ ಜೊತೆಗೂಡಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅತ್ತ ಕಾಂಗ್ರೆಸ್ ಕೂಡಾ ಬೇರೆಯಾಗಿ ಸ್ಪರ್ಧಿಸಿದರೆ ಎಂ.ಐ.ಎಂ. ಕೂಡ ಸ್ಪರ್ಧಿಸುತ್ತಿದ್ದು ಮುಸ್ಲಿಂ ಮತಗಳನ್ನು ಸೆಳೆಯಲಿದೆ. ನಡುವೆ ಮುಸ್ಲಿಂ ಮತಗಳು ತನಗಿವೆ ಎಂದು ಹೇಳುತ್ತಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಈಗ ಮುಂಬೈಯಿಂದ ಮಾಯವಾಗುತ್ತಿರುವ ಲಕ್ಷಣಗಳಿವೆ.
ಕೇರಳದ ನಂತರ ಮುಂಬೈಯಲ್ಲಿ ಕೂಡಾ ಛಾಪು ಬೀರಿದ್ದ ಮುಸ್ಲಿಂ ಲೀಗ್‌ನ ನಾಯಕರು ಪಕ್ಷ ತ್ಯಜಿಸುತ್ತಿದ್ದಾರೆ.
ಪರ್ವೇಜ್ ಲಕ್‌ಡಾವಾಲಾರು ಮುಂಬೈ ಅಧ್ಯಕ್ಷ ಸ್ಥಾನ ತ್ಯಜಿಸಿದ ನಂತರ ಉಪಾಧ್ಯಕ್ಷ ಸಾಜಿದ್ ಸುಪಾರಿವಾಲಾ ಪಕ್ಷದ ನೇತೃತ್ವ ವಹಿಸಿದ್ದರು. ಆದರೆ ಅವರೂ ಪಕ್ಷದ ನೀತಿಯಿಂದ ತನ್ನ ಬೆಂಬಲಿಗರ ಜೊತೆ ಹೊರಬಂದರು.
* * *
ಫೆಬ್ರವರಿ 1ರಿಂದ ಮುಖ್ಯ ರನ್‌ವೇ ಬಂದ್
ಮುಂಬೈ ವಿಮಾನ ನಿಲ್ದಾಣದ ಮುಖ್ಯ ರನ್‌ವೇ ಫೆಬ್ರವರಿ 1ರಿಂದ ರಿಪೇರಿ ಕಾರ್ಯ ಪ್ರಯುಕ್ತ ಮೂರು ತಿಂಗಳ ಕಾಲ ಬಂದ್ ಇರುತ್ತದೆ. ಹೀಗಾಗಿ ವಿಮಾನ ಸೇವೆಯ ಮೇಲೆ ಭಾರೀ ಪರಿಣಾಮ ಬೀರಲಿದೆ. ಇಂತಹ ಸ್ಥಿತಿ ಅಕ್ಟೋಬರ್ 2016ರಲ್ಲೂ ಕಂಡು ಬಂದಿತ್ತು. ಆ ಸಮಯದಲ್ಲೂ ರಿಪೇರಿ ಕಾರ್ಯಕ್ಕಾಗಿ ಬಂದ್ ಮಾಡಲಾಗಿತ್ತು.
ಫೆಬ್ರವರಿ ಒಂದರಿಂದ ಮುಂಬೈ ಏರ್‌ಪೋರ್ಟ್ ಮುಖ್ಯ ರನ್‌ವೇ ಮೂರು ತಿಂಗಳಿಗಾಗಿ ಬೆಳಗ್ಗೆ 9ರಿಂದ ಸಂಜೆ 5ರ ತನಕ ಬಂದ್ ಇರಿಲಾಗುವುದು. ಈ ಸಮಯ ಎರಡನೆಯ ರನ್‌ವೇ ವಿಮಾನ ಸೇವೆಗಳಿಗೆ ತೆರೆದಿರುವುದು. ಆದರೆ ಈ ರನ್‌ವೇಯ ಸಾಮರ್ಥ್ಯ ಕಡಿಮೆ ಇರುವುದರಿಂದ ವಿಮಾನ ಓಡಾಟದ ಸಮಯ ತಡವಾಗಲಿವೆ.

ಏರ್ ಟ್ರಾಫಿಕ್ ಕಂಟ್ರೋಲರ್ ಅಧಿಕಾರಿಗಳ ಅನುಸಾರ ಜಂಬೋ ವಿಮಾನ ಸೇವೆಗಳ ಮೇಲೆ ಇದು ಇನ್ನಷ್ಟು ಪರಿಣಾಮ ಬೀರಲಿವೆ. ಯಾಕೆಂದರೆ ಅಲ್ಲಿ ಜಂಬೋ ವಿಮಾನಗಳು ಲ್ಯಾಂಡ್ ಆಗಲಾರದು.
ಫೆಬ್ರವರಿ ಒಂದರಿಂದ ಸುಮಾರು ಮೂರು ತಿಂಗಳು ಬೆಳಿಗ್ಗೆ 9ರಿಂದ 5ರ ತನಕ ಪ್ರತೀದಿನ ಮುಂಬೈಯಿಂದ ಹೊರಡುವ ಮತ್ತು ತಲುಪುವ ವಿಮಾನ ಸೇವೆಗಳಲ್ಲಿ 70ರಿಂದ 80ರಷ್ಟು ವಿಮಾನ ಸೇವೆಗಳು ರದ್ದಾಗಲಿವೆ. ಏರ್ ಟ್ರಾಫಿಕ್ ಕಂಟ್ರೋಲ್‌ನ ಮಾಜಿ ಡಿಜಿಎಂ ಎಸ್.ಮಂಗ್‌ಲಾ ಅವರು ಈಗಾಗಲೇ ತನಿಖಾ ರಿಪೋರ್ಟ್ ನೀಡಿದ್ದು ಮುಂಬೈ ಮತ್ತು ಜುಹು ಏರ್‌ಪೋರ್ಟ್ ಅಸುರಕ್ಷಿತವಿದೆ ಎಂದು ಹೇಳಿದ್ದರು. (ಆದರೆ ಅವರನ್ನು ಕೋಲ್ಕತ್ತಾಕ್ಕೆ ವರ್ಗಾವಣೆ ಮಾಡಲಾಯಿತು.) ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತೀದಿನ ಸುಮಾರು 800ರಷ್ಟು ದೇಶ ವಿದೇಶಗಳ ವಿಮಾನಗಳು ಬಂದಿಳಿಯುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)