ಶಿವಮೊಗ್ಗದಿಂದ ಈಶ್ವರಪ್ಪ ಸ್ಪರ್ಧೆ ಖಚಿತ: ಶಿಕಾರಿಪುರದಿಂದ ಬಿಎಸ್‌ವೈ ಅಖಾಡಕ್ಕೆ
ಬಿ.ವೈ.ರಾಘವೇಂದ್ರ ಅಸೆಂಬ್ಲಿಗೋ? ಲೋಕಸಭೆಗೋ?
ಶಿವಮೊಗ್ಗ, ಜ. 28: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅಖಾಡಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಹಾಗೆಯೇ ಬಿ.ಎಸ್.ಯಡಿಯೂರಪ್ಪಅವರು ಶಿಕಾರಿಪುರದಿಂದ ಅಖಾಡಕ್ಕಿಳಿಯುವುದು ಖಚಿತ ಎಂದು ಹೇಳಲಾಗುತ್ತಿದ್ದು, ಇದನ್ನು ಬಿಜೆಪಿಯ ಉನ್ನತ ಮೂಲಗಳು ದೃಢಪಡಿಸಿವೆ. ಬಿಎಸ್‌ವೈ ಅವರು, ರಾಜ್ಯಾಧ್ಯಕ್ಷರಾದ ಬಳಿಕ ತವರೂರು ಶಿವಮೊಗ್ಗ ಬಿಜೆಪಿಯಲ್ಲಿ ಮರು ಪ್ರಾಬಲ್ಯ ಸಾಧಿಸಲು ಮುಂದಾದರು. ತಮ್ಮ ಆಪ್ತರನ್ನಷ್ಟೇ ಪಕ್ಷದ ಪ್ರಮುಖ ಸ್ಥಾನಗಳಿಗೆ ನಿಯೋಜನೆ ಮಾಡಿದರು. ಈಶ್ವರಪ್ಪ ಅವರ ಬೆಂಬಲಿಗರಿಗೆ ಪ್ರಾತಿನಿಧ್ಯ ಸಿಗದಂತಾಗಿತ್ತು.
ಈ ನಡುವೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ಅವರಿಗೆ ಟಿಕೆಟ್ ಅನುಮಾನ ಎಂಬ ಮಾತುಗಳು ಪಕ್ಷದ ಕಾರ್ಯಕರ್ತರ ವಲಯದಲ್ಲಿ ಹರಿದಾಡಲಾರಂಭಿಸಿದ್ದವು. ಬಿಎಸ್‌ವೈಯವರೇ ಶಿವಮೊಗ್ಗ ನಗರ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಾರೆ ಇಲ್ಲವೇ ಅವರ ಬೆಂಬಲಿಗರಲ್ಲಿ ಓರ್ವರಿಗೆ ಟಿಕೆಟ್ ಸಿಗುವುದು ನಿಶ್ಚಿತ ಎಂಬ ಮಾತುಗಳು ಕೇಳಿಬರಲಾರಂಭಿಸಿದ್ದವು. ಈ ನಡುವೆ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚಿಸಿ ಪಕ್ಷದಲ್ಲಿ ಅಕ್ಷರಶಃ ಬಿರುಗಾಳಿ ಎಬ್ಬಿಸಿ, ಬಿಎಸ್‌ವೈ ವಿರುದ್ಧ ತೊಡೆ ತಟ್ಟಿ ನಿಂತರು.
ಈ ನಡುವೆ ಮಾಜಿ ಸಂಸತ್ ಸದಸ್ಯ, ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡಿದ್ದ ಆಯನೂರು ಮಂಜುನಾಥ್ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಾವು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಘೋಷಿಸಿದ್ದರು. ಇದರಿಂದ ಈಶ್ವರಪ್ಪ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ? ಎಂಬ ಚರ್ಚೆಗಳು ಬಿರುಸುಗೊಳ್ಳಲಾರಂಭಿಸಿದವು. ಇದೆಲ್ಲದರ ನಡುವೆ ‘ಈಶ್ವರಪ್ಪ ತಮ್ಮ ಸ್ವಕ್ಷೇತ್ರ ಶಿವಮೊಗ್ಗದಿಂದ ಕಣಕ್ಕಿಳಿಯುವುದು ನಿಶ್ಚಿತ’ ಎಂದು ಸ್ಪಷ್ಟಪಡಿಸುತ್ತಲೇ ಇದ್ದರು.
ಪ್ರಸ್ತುತ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ ಅವರು ಸ್ಪರ್ಧಿಸುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಬಿಎಸ್‌ವೈ ಹಾಗೂ ಈಶ್ವರಪ್ಪ ಕಲಹ ಮರೆತು ಮತ್ತೆ ಒಂದಾಗಿದ್ದಾರೆ. ಒಟ್ಟಾಗಿ ಚುನಾವಣೆ ಎದುರಿಸುವ ಘೋಷಣೆ ಮಾಡಿದ್ದಾರೆ. ಈ ಹೊಸ ಬೆಳವಣಿಗೆಯಿಂದ ಎಲ್ಲ ಅಡೆತಡೆಗಳು ನಿವಾರಣೆಯಾಗಿಈಶ್ವರಪ್ಪ ಅವರು ಶಿವಮೊಗ್ಗದಿಂದ ಅಖಾಡಕ್ಕಿಳಿಯುವುದು ಬಹುತೇಕ ನಿಶ್ಚಿತ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ. ಶಿಕಾರಿಪುರದಿಂದ ಸ್ಪರ್ಧೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ವೈ ಕ್ಷೇತ್ರ ಬದಲಾವಣೆ ಮಾಡುತ್ತಾರೆಂಬ ಚರ್ಚೆ ಕೇಳಿಬಂದಿತ್ತು. ಬೆಂಗಳೂರು ನಗರ ಕ್ಷೇತ್ರವೊಂದರಿಂದ ಸ್ಪರ್ಧಿಸುತ್ತಾರೆಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ, ಕ್ಷೇತ್ರ ಬದಲಾವಣೆಯ ಯಾವುದೇ ಪ್ರಯೋಗ ನಡೆಸದಿರಲು ನಿರ್ಧರಿಸಿರುವ ಅವರು, ತಮಗೆ ರಾಜಕೀಯ ಜೀವನ ಕೊಟ್ಟ ಸ್ವಕ್ಷೇತ್ರ ಶಿಕಾರಿಪುರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭೆಗೆ: ಬಿ.ವೈ.ರಾಘವೇಂದ್ರರವರು ವಿಧಾನಸಭೆ ಚುನಾವಣಾ ಕಣಕ್ಕಿಳಿಯುತ್ತಾರೆಂಬ ಚರ್ಚೆಗಳು ನಡೆಯುತ್ತಿವೆ ಯಾದರೂ ಇದು ಖಚಿತವಾಗಿಲ್ಲ.
ಬಿ.ಎಸ್.ವೈ.ರವರು ವಿಧಾನಸಭೆ ಪ್ರವೇಶಿಸಿದರೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದ್ದು, ಅವರ ರಾಜೀನಾಮೆಯಿಂದ ತೆರವಾಗುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಪುತ್ರನನ್ನು ಮತ್ತೊಮ್ಮೆ ಕಣಕ್ಕಿಳಿಸುವ ಚಿಂತನೆ ಬಿಎಸ್‌ವೈ ಅವರದ್ದು ಎಂದು ಹೇಳಲಾಗುತ್ತಿದೆ. ಇದೀಗ ಬಿಜೆಪಿಯ ಮುಖಂಡರು ಮುಂಬರುವ ವಿಧಾನಸಭೆ ಚುನಾವಣೆಯತ್ತ ಚಿತ್ತ ಹರಿಸಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷಕ್ಕಾದ ಮುಖಭಂಗದಿಂದ ಹೊರಬರಲು ಕಾರ್ಯತಂತ್ರ ರೂಪಿಸಲಾರಂಭಿಸಿದ್ದಾರೆ.