ಅವನತಿಯ ಹಾದಿಯಲ್ಲಿ ಪ್ರಜಾಸತ್ತೆ
ಭಾಗ 2
ಇತ್ತೀಚಿನ ಜೈಪುರ ಉತ್ಸವದಲ್ಲಿ ಸಾಹಿತ್ಯದ ಗಂಧಗಾಳಿಯೂ ಇರದಂಥ ಮನಮೋಹನ್ ವೈದ್ಯ ಮತ್ತು ದತ್ತಾತ್ರೇಯ ಹೊಸಬಾಳೆ ಎಂಬ ಹಿಂದೂತ್ವವಾದಿ ಜೋಡಿಯೊಂದು ಭಾಗವಹಿಸಿದೆ. ಇವರಿಬ್ಬರೂ ಅಲ್ಲಿ ತಮ್ಮ ಸಿದ್ಧಾಂತವನ್ನು ಬಿತ್ತರಿಸುತ್ತಾ ಆರೆಸ್ಸೆಸ್‌ನ ನಿಷ್ಠೆ ಸಂವಿಧಾನಕ್ಕಲ್ಲ, ಮನುಸ್ಮತಿಗೆ ಎಂದು ಮತ್ತೊಮ್ಮೆ ತೋರಿಸಿಕೊಂಡಿದ್ದಾರೆ. ಜನವರಿ 20ರಂದು ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ವೈದ್ಯ ‘‘ಆದರ್ಶ ವ್ಯವಸ್ಥೆ ಎಂದರೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವುದು. ದಲಿತರು ಮತ್ತು ಬುಡಕಟ್ಟು ಜನರನ್ನು ಸುದೀರ್ಘ ಕಾಲದಿಂದ ವಿದ್ಯೆ ಮತ್ತು ಪ್ರಗತಿಯಿಂದ ಹೊರಗಿಡಲಾಗಿತ್ತು. ಮೀಸಲಾತಿಯಿಂದ ಅವರಿಗೆ ಸಹಾಯವಾಗಿದ್ದರೂ ಅದನ್ನು ಶಾಶ್ವತವಾಗಿ ಮುಂದುವರಿಸುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಒಂದು ಹಂತದಲ್ಲಿ ಅದನ್ನು ಕೊನೆಗೊಳಿಸಬೇಕೆಂದು ಅಂಬೇಡ್ಕರ್ ಹೇಳಿದ್ದರು’’ ಎಂಬರ್ಥದ ಮಾತುಗಳನ್ನಾಡಿದರು. ಹೀಗೆ ಆತ ಸಂಘಪರಿವಾರದ ಮನದಾಳದ ಬಯಕೆಯನ್ನು ತೋಡಿಕೊಂಡಿದ್ದಾರೆ. ಆದರೆ ಆತ ಇದನ್ನು ಸಾರ್ವಜನಿಕವಾಗಿ ಹೇಳಿರುವುದು ಮುಂಬರುವ ಚುನಾವಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ಮನಗಂಡ ಆರೆಸ್ಸೆಸ್ ತಕ್ಷಣ ಹೊಸಬಾಳೆ ಮೂಲಕ ತೇಪೆ ಹೊಲಿಯಲೆತ್ನಿಸಿದೆ. ವೈದ್ಯರ ಹೇಳಿಕೆ ಆತನ ಖಾಸಗಿ ನಿಲುವು; ಅದಕ್ಕೂ ಸಂಘದ ನಿಲುವಿಗೂ ಸಂಬಂಧವಿಲ್ಲ. ಸಂಘದ ಅಭಿಪ್ರಾಯದಲ್ಲಿ ಮೀಸಲಾತಿ ಈಗಲೂ ಅಗತ್ಯವಿದ್ದು ಅದು ಮುಂದುವರಿಯಬೇಕು ಎಂಬ ಹೇಳಿಕೆಯೊಂದನ್ನು ಮಾಧ್ಯಮಗಳ ಮುಖಾಂತರ ಬಿಡುಗಡೆ ಮಾಡಿದೆ. ಈ ನೂರಕ್ಕೆ ನೂರರಷ್ಟು ಸುಳ್ಳು ಹೇಳಿಕೆಗೆ ದಲಿತರು ಮೋಸಹೋದರೆಂದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿರದು. ಅವರು ಇತ್ತೀಚೆಗೆ ಆರೆಸ್ಸೆಸ್ ಸರಸಂಘಚಾಲಕ ಭಾಗವತ್ ಕೂಡಾ ವೈದ್ಯರಂತಹದೇ ಮಾತುಗಳನ್ನಾಡಿರುವುದನ್ನು ಮರೆಯಬಾರದು. ಮೋದಿಯವರ ಗುಜರಾತ್‌ನಲ್ಲೇ ಮಲಹೊರುವಿಕೆ ಮುಂದುವರಿದಿರುವುದನ್ನು, ಉನಾ ಮತ್ತು ಅಂತಹುದೆ ಸಾವಿರಾರು ಘಟನೆಗಳನ್ನು ಮರೆಯಬಾರದು.
ಇನ್ನೊಂದು ಕಡೆ ಪಂಜರದ ಅರಗಿಣಿಗಳಂತಾಗಿರುವ ಸಿಬಿಐ ಮತ್ತು ಎನ್‌ಐಎ ಮೋದಿ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಮಾಲೆಗಾಂವ್ ಮತ್ತಿತರ ಭಯೋತ್ಪಾದಕ ಕೃತ್ಯಗಳ ತನಿಖೆಗಳು ಹಳ್ಳ ಹಿಡಿಯುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಆರೋಪಿಗಳಲ್ಲೊಬ್ಬಳಾದ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಜಾಮೀನು ನೀಡಲು ತನ್ನಿಂದೇನೂ ಅಭ್ಯಂತರವಿಲ್ಲವೆಂದು ಎನ್‌ಐಎ ಇತ್ತೀಚೆಗೆ ನ್ಯಾಯಾಲಯಕ್ಕೆ ತಿಳಿಸಿದೆ! ಸರಕಾರಿ ಪ್ರತಿನಿಧಿಗಳ ಆಯ್ಕೆಗೇ ಹೆಚ್ಚು ಬೆಲೆ ಇರುವಂತಹ ನ್ಯಾಯಾಂಗ ಆಯೋಗವೆ ಬೇಕೆೆಂದು ಮೋದಿ ಸರಕಾರ ಪಟ್ಟುಹಿಡಿದಿದೆ. ಆ ಮೂಲಕ ಅದು ಕಾನೂನು, ನ್ಯಾಯಾಲಯಗಳನ್ನೂ ತನ್ನ ಗುಲಾಮರನ್ನಾಗಿಸಲು ಹೊರಟಿದೆ. ತನ್ನ ಈ ಹೆಬ್ಬಯಕೆಗೆ ಅಡ್ಡಿಯಾಗಿರುವ ನ್ಯಾಯಾಂಗಕ್ಕೆ ಪಾಠ ಕಲಿಸಲು ಮುಂದಾಗಿರುವ ಅದೀಗ ಹೈಕೋರ್ಟು ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಪರೀತ ವಿಳಂಬ ಮಾಡುವ ಮೂಲಕ ನ್ಯಾಯದಾನ ಪ್ರಕ್ರಿಯೆಯನ್ನೆ ವಿಳಂಬಿಸುತ್ತಿದೆ.
ಕ್ಯಾಂಪಸ್‌ಗಳಲ್ಲಿ ವಿಷ
ಕೇಂದ್ರದಲ್ಲಿ ಎನ್‌ಡಿಎ 2 ಆಡಳಿತ ಪ್ರಾರಂಭವಾದ ನಂತರ ಸಂಘ ಪರಿವಾರ ಕ್ಯಾಂಪಸ್‌ಗಳೊಳಗೆ ತನ್ನ ಹೆಡೆ ಬಿಚ್ಚಿ ಪೂತ್ಕರಿಸಲು ಶುರುಮಾಡಿದೆ. ದಲಿತ ವಿದ್ಯಾರ್ಥಿಗಳು ಸಂಘಟಿತರಾಗುವುದನ್ನು ಸಹಿಸದ ಅದರ ಉಪಸಂಸ್ಥೆ ‘ಎಬಿವಿಪಿ’ ಮದ್ರಾಸ್ ಐಐಟಿನಲ್ಲಿ ದಲಿತ ವಿದ್ಯಾರ್ಥಿಗಳ ಅಂಬೇಡ್ಕರ್ ಪೆರಿಯಾರ್ ಅಧ್ಯಯನ ಸಂಘಟನೆ ವಿರುದ್ಧ ನಂಜು ಕಾರಿದ ನಂತರ ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ಸಂಘಟನೆಯನ್ನು ಗುರಿಯಾಗಿಸಿದುದು ರೋಹಿತ್ ವೇಮುಲಾನ ಆತ್ಮಹತ್ಯೆಯ ದುರಂತದಲ್ಲಿ ಪರ್ಯಾವಸಾನಗೊಂಡಿತು. ಇತ್ತ ಮೋದಿ ಸರಕಾರದ ಗುಲಾಮನಂತೆ ವರ್ತಿಸಿದ ಉಪಕುಲಪತಿಗೆ ‘ಮಿಲೇನಿಯಂ ಪ್ರಶಸ್ತಿ’ ಸಿಕ್ಕಿತು. ಕಳೆದ ವರ್ಷ ದಿಲ್ಲಿಯ ಜವಾಹರ್‌ಲಾಲ್ ವಿಶ್ವವಿದ್ಯಾನಿಲಯದಲ್ಲಿ ಎಬಿವಿಪಿ ಪುಂಡರು ಕನ್ಹಯ್ಯಾ ಕುಮಾರ್ ಮತ್ತಿತರರ ವಿರುದ್ಧ ನಡೆಸಿದ ದೊಡ್ಡ ಹಂಗಾಮಾ ಜ್ಞಾಪಕವಿರಬಹುದು. ಆಗ ಪಾಕ್ ಪರ ಘೋಷಣೆ ಕೂಗಿದವರು ಲಷ್ಕರ್ ಕಿಡಿಗೇಡಿಗಳು ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದರೆ ಸ್ಮತಿ ಇರಾನಿ ತನ್ನ ತಲೆಯನ್ನೆ ಕತ್ತರಿಸಿಕೊಳ್ಳಲು ಸಿದ್ಧರಿದ್ದರು. ಇಷ್ಟೆಲ್ಲ ನಾಟಕೀಯ ಘಟನೆಗಳ ಅಂತಿಮ ಫಲಿತಾಂಶವೇನು? ಇದುವರೆಗೂ ಆರೋಪಪಟ್ಟಿ ಸಲ್ಲಿಕೆ ಆಗಿಲ್ಲ! ಇದೀಗ ಎಬಿವಿಪಿ ಜತೆ ತಾಕಲಾಟ ನಡೆಸಿದಂತಹ ನಜೀಬ್ ಎಂಬ ವಿದ್ಯಾರ್ಥಿಯೂ 2016ರ ಅಕ್ಟೋಬರ್ 15ರಿಂದ ನಾಪತ್ತೆಯಾಗಿದ್ದಾರೆ. ದಿಲ್ಲಿ ಪೊಲೀಸರು ಆತನ ಪತ್ತೆಹಚ್ಚುವಲ್ಲಿ ಅನಾಸಕ್ತರಾಗಿರುವುದು ಏನನ್ನು ಸೂಚಿಸುತ್ತದೆ?
ಸುಳ್ಳು ಸುದ್ದಿಗಳ ಛಾಂಪಿಯನ್
ಸಂಘಪರಿವಾರ ತನ್ನ ಹುಟ್ಟಿನಿಂದಲೂ ಸುಳ್ಳು ಹೇಳುವ ಕಲೆಯನ್ನು ಕರಗತಮಾಡಿಕೊಂಡಿದೆ. ತಾನೊಂದು ಬರೀ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುತ್ತಲೆ ರಾಜಕೀಯದಲ್ಲೂ ನೇರವಾಗಿ ಕೈಯಾಡಿಸಿರುವುದನ್ನು ಯಾರು ತಾನೆ ಕಂಡಿಲ್ಲ? ಗಾಂಧಿ ಹತ್ಯೆಯ ಘಟನೆಯಿಂದ ಆರಂಭಿಸಿ; ನಾನಾ ಕೋಮು ಗಲಭೆಗಳನ್ನು ಹಿಂದಿಕ್ಕಿ; ಬಾಬರಿ ಮಸೀದಿ, ಗುಜರಾತ್ ನರಮೇಧಗಳನ್ನು ಹಾಯ್ದು; ಮಾಲೆಗಾಂವ್, ಅಜ್ಮೀರ್ ದರ್ಗಾ ಮುಂತಾದ ಸ್ಫೋಟಕೃತ್ಯಗಳನ್ನು, ಚರ್ಚ್ ದಾಳಿಗಳನ್ನು ದಾಟಿ ಇಂದಿನವರೆಗೂ ಅದು ತನ್ನ ಪಾತ್ರವನ್ನು ನಿರಾಕರಿಸುತ್ತಲೇ ಬಂದಿದೆ. ಮೋದಿ ಪ್ರಧಾನಿ ಆದ ನಂತರದಲ್ಲಂತೂ ಸಂಘಪರಿವಾರದ ಸುಳ್ಳುಗಳಿಗೆ, ಮಿಥ್ಯಾರೋಪಗಳಿಗೆ ಮಿತಿಯೆ ಇಲ್ಲವೆಂದಾಗಿದೆ. ಕ್ಯಾಂಪಸ್‌ಗಳಲ್ಲಿ, ಮಾಧ್ಯಮಗಳಲ್ಲಿ, ಎಲ್ಲಿ ನೋಡಿದರಲ್ಲಿ ಸುಳ್ಳೆ ವಿಜೃಂಭಿಸುತ್ತಿದೆ. ದಾವೂದ್ ಇಬ್ರಾಹೀಂ ಕುರಿತ ಗಾಳಿ ಸಮಾಚಾರ ಇದಕ್ಕೊಂದು ಅತ್ಯುತ್ತಮ ನಿದರ್ಶನ. ‘‘ದಾವೂದ್ ಇಬ್ರಾಹೀಂ ಸಂಯುಕ್ತ ಅರಬ್ ಪ್ರಾಂತಗಳಲ್ಲಿ ರೂ. 15,000 ಕೋಟಿ ಮೌಲ್ಯದ ಆಸ್ತಿಪಾಸ್ತಿಗಳ ಒಡೆಯ; ಇತ್ತೀಚೆಗೆ ಅಲ್ಲಿನ ಸರಕಾರ ದಾವೂದ್‌ನ ಆಸ್ತಿಗಳ ಮೇಲೆ ದಾಳಿಗಳನ್ನು ಆಯೋಜಿಸಿದೆ; ಇದರ ಪೂರ್ತಿ ಕೀರ್ತಿ ಮೋದಿಜಿಗೆ ಸಲ್ಲಬೇಕು ಏಕೆಂದರೆ ಇದು ಮೋದಿಜಿಯವರ ಪರಿಣತ ರಾಜತಾಂತ್ರಿಕ ನಡೆಯ ಫಲವಾಗಿದೆ’’ ಎಂಬ ಸುದ್ದಿಯೊಂದನ್ನು ಹಬ್ಬಿಸಲಾಗಿತ್ತು. ಆದರೆ ಸಂಯುಕ್ತ ಅರಬ್ ಪ್ರಾಂತಗಳ ರಾಯಭಾರಿ ಆಗಿರುವ ಅಹ್ಮದ್ ಅಲ್ ಬನ್ನಾ ಈ ಸುದ್ದಿಯನ್ನು ನಿರಾಕರಿಸಿರುವುದಷ್ಟೆ ಅಲ್ಲ, ಇಂತಹ ದಾಳಿಗಳಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ! ಇದರಿಂದ ಮೋದಿಭಕ್ತರ ಬಲೂನಿಗೆ ಮುಳ್ಳು ಚುಚ್ಚಿದಂತಾಗಿದೆ!
ಸಂಘಿಗಳ ಭ್ರಷ್ಟಾಚಾರಕ್ಕೆ ಅಡೆತಡೆಗಳಿಲ್ಲ
ಭ್ರಷ್ಟಾಚಾರವನ್ನು ಕೊನೆಗೊಳಿಸುವೆವೆಂದು ಹೇಳುತ್ತಾ ವೋಟು ಗಿಟ್ಟಿಸಿ ಅಧಿಕಾರಕ್ಕೆ ಬಂದವರೆ ಖುದ್ದು ಭ್ರಷ್ಟಾಚಾರದ ಕೂಪದಲ್ಲಿ ಕೊಳೆಯುತ್ತಿರುವ ವಿಷಯ ಈಗ ತೆರೆದ ರಹಸ್ಯ. ಗುಜರಾತ್ ಪೆಟ್ರೋಲಿಯಂ ಕಾರ್ಪೊರೇಷನ್, ಸಹಾರಾ ಬಿರ್ಲಾ ಪೇಪರ್ಸ್ ಇತ್ಯಾದಿಗಳು ನೇರವಾಗಿ ಮೋದಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿವೆ. ಇನ್ನು ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಲೆಕ್ಕವಿಲ್ಲ. ಉದಾಹರಣೆಗೆ ವ್ಯಾಪಂ ಹಗರಣ ಕುಖ್ಯಾತಿಯ ಮಧ್ಯ ಪ್ರದೇಶದಲ್ಲಿ ಇದೀಗ ಸುಮಾರು 500 ಕೋಟಿ ಮೌಲ್ಯದ ಹವಾಲಾ ದಂಧೆಯೊಂದು ನಡೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದ ಕಟ್ನಿ ಎಂಬಲ್ಲಿ ನಕಲಿ ಕಂಪೆನಿಗಳ ಹೆಸರಲ್ಲಿ, ಬಿಪಿಎಲ್ ಕಾರ್ಡುದಾರರ ಮತ್ತು ಇನ್ನಿತರರ ಕಾಲ್ಪನಿಕ ಹೆಸರುಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಇದರಲ್ಲಿ ಅನೇಕ ವಾಣಿಜ್ಯೋದ್ಯಮಿಗಳು ಭಾಗಿಯಾಗಿದ್ದಾರೆ. ಇದರ ಹಿಂದೆ ರಾಜ್ಯದ ಕೈಗಾರಿಕಾ ಸಚಿವ ಸಂಜಯ ಪಾಠಕ್‌ರ ಕೈವಾಡವೂ ಇರುವಂತೆ ತೋರಿಬರುತ್ತಿದೆ. 2014ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದಂಥಾ ಈ ಕೋಟ್ಯಧಿಪತಿ ಗಣಿಧಣಿ ರಾಜ್ಯದ ರಾಷ್ಟ್ರೀಯ ಉದ್ಯಾನ ಮತ್ತಿತರ ಪ್ರವಾಸಿ ತಾಣಗಳಲ್ಲಿರುವ ಹಲವಾರು ಹೋಟೆಲ್‌ಗಳ ಮಾಲಕನೂ ಆಗಿದ್ದಾನೆ. ಈ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಎಸ್.ಪಿ. ಗೌರವ್ ತಿವಾರಿ ಕಳೆದ ವಾರ ಇಬ್ಬರನ್ನು ಬಂಧಿಸಿದ ಬಳಿಕ ಅವರ ಬಾಯಿಂದ ಮಾನ್ಯ ಮಂತ್ರಿಮಹೋದಯನ ಹೆಸರು ಹೊರಬಂದಿದೆ. ಇದಾದ ಕೆಲವೇ ದಿನಗಳಲ್ಲಿ ತಿವಾರಿಯನ್ನು ಎತ್ತಂಗಡಿ ಮಾಡಲಾಗಿದೆ!
ಸ್ವಕ್ಷೇತ್ರದಲ್ಲೆ ಪಿಂಕ್ ಕ್ರಾಂತಿ
ನೆನಪಿದೆಯೇ, ಮೋದಿ ತನ್ನ 2014ರ ಚುನಾವಣಾಪೂರ್ವದ ಭಾಷಣಗಳಲ್ಲಿ ‘ಪಿಂಕ್ ಕ್ರಾಂತಿ’ ಎಂದು ಬಾರಿಬಾರಿಗೆ ಯುಪಿಎ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದುದು? ನೆನಪಿದೆಯೆ ‘ತನ್ನ ಹೃದಯ ನೋವಿನಿಂದ ರೋದಿಸುತ್ತಿದೆ’ ಎಂದು ಹೋದಲ್ಲಿ ಬಂದಲ್ಲಿ ಭಾವನಾತ್ಮಕವಾಗಿ ಭಾಷಣ ಬಿಗಿಯುತ್ತಿದ್ದುದು? ಅದೇ ಸಂದರ್ಭದಲ್ಲಿ ನಾಲ್ಕು ಅತಿ ದೊಡ್ಡ ಬೀಫ್ ರಫ್ತು ಕಂಪೆನಿಗಳ ಮಾಲಕರು ಹಿಂದೂಗಳು ಮತ್ತು ಸಂಗೀತ ಸೋಮ ಎಂಬ ಸಂಘಿ ಬೀಫ್ ರಫ್ತು ಕಂಪೆನಿಯೊಂದರಲ್ಲಿ ಪಾಲುದಾರ ಎಂಬ ಸಂಗತಿ ಜಗಜ್ಜಾಹೀರಾಯಿತು. ಈಗ ಇದೇ ಆಷಾಢಭೂತಿತನದ ಮುಂದುವರಿಕೆಯಂತಿರುವ ಕುತೂಹಲಕರ ಮಾಹಿತಿಯೊಂದು ಲಭ್ಯವಾಗಿದೆ. ವಿಷಯ ಏನೆಂದರೆ 2014ರ ನವೆಂಬರ್‌ನಲ್ಲಿ ಮೋದಿ ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ತನ್ನ ಚುನಾವಣಾ ಕ್ಷೇತ್ರವಾದ ವಾರಣಾಸಿಯಿಂದ 30 ಕಿಮೀ. ದೂರದಲ್ಲಿರುವ ಜಯಪುರ ಎಂಬ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದು. ಯಥಾಪ್ರಕಾರ ಇದಕ್ಕೆ ಭಾರೀ ದೊಡ್ಡ ಪ್ರಚಾರವನ್ನೂ ನೀಡಲಾಗಿದೆ. ಆ ಸಂದರ್ಭದಲ್ಲಿ ಮೋದಿ ಸಂಸದನೊಬ್ಬ ಗ್ರಾಮವನ್ನು ದತ್ತಕ್ಕೆ ತೆಗೆದುಕೊಳ್ಳುವುದಲ್ಲ, ತದ್ವಿರುದ್ಧವಾಗಿ ಗ್ರಾಮ ಸಂಸದನನ್ನು ದತ್ತು ಸ್ವೀಕರಿಸುತ್ತದೆ ಎಂದೆಲ್ಲ ಭೋಂಗು ಬಿಟ್ಟಿದ್ದ. ತರುವಾಯ ಹಲವಾರು ಖಾಸಗಿ ಕಂಪೆನಿಗಳು ಜಯಪುರಕ್ಕೆ ಧಾವಿಸಿ ಬಂದವು. ಗ್ರಾಮ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದನ್ನು ತೋರಿಸಲು ಎಟಿಎಂ ಬಂತು, ಒಂದು ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರದ ಸ್ಥಾಪನೆ ಆಯಿತು, ಸೋಲಾರ್ ಬೀದಿದೀಪಗಳು ಉರಿಯತೊಡಗಿದವು. ಹೀಗೆ ಜಯಪುರಕ್ಕೆ ಕಾಲಿಟ್ಟ ಖಾಸಗಿ ಕಂಪೆನಿಗಳಲ್ಲಿ ಅಲ್ಲಾನಾಸನ್ಸ್ ಕೂಡಾ ಒಂದು. ಅಲ್ಲಾನಾಸನ್ಸ್ ಪ್ರಧಾನ ವ್ಯಾಪಾರ ಏನು ಗೊತ್ತೆ? ಮಾಂಸ ರಫ್ತು. ಅದೂ ಅಂತಿಂಥಾ ಮಾಂಸ ಅಲ್ಲ, ಬೀಫ್! ಅಲ್ಲಾನಾಸನ್ಸ್ ಭಾರತದ ಎಮ್ಮೆ ಮಾಂಸವನ್ನು 70ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತದೆ! ಪಿಂಕ್ ಕ್ರಾಂತಿ ಎಂದರೆ ಇದೇ ತಾನೆ?
ಕೊನೆಹನಿ
ರಾಷ್ಟ್ರೀಯತೆ, ಮುಸ್ಲಿಂ ದ್ವೇಷ, ವಲಸಿಗರಿಗೆ ನಿರ್ಬಂಧ, ಜನಮರುಳ ಭಾಷಣದಂತಹ ವಿಷಯಗಳಲ್ಲಿ ಭಾರತ ಮತ್ತು ಅಮೆರಿಕದ ಪ್ರಸಕ್ತ ನಾಯಕದ್ವಯರ ಮಧ್ಯೆ ಬಹಳಷ್ಟು ಸಾಮ್ಯಗಳು ಗೋಚರಿಸುತ್ತವೆ. ಆದರೆ ಪ್ರಜಾ ಪ್ರತಿರೋಧ ಮತ್ತು ಮಾಧ್ಯಮ ಸ್ವಾತಂತ್ರದ ವಿಷಯಗಳಿಗೆ ಬಂದಾಗ ಉಭಯ ದೇಶಗಳ ಪ್ರಜಾಸತ್ತೆ ನಡುವಿನ ಅಗಾಧ ವ್ಯತ್ಯಾಸ ಎದ್ದು ಕಾಣುವಂತಿದೆ. ಅಮೆರಿಕದಾದ್ಯಂತ ಲಕ್ಷಾಂತರ ಜನ ಟ್ರಂಪ್ ಆಯ್ಕೆಯನ್ನು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ಅಮೆರಿಕನ್ ಪತ್ರಕರ್ತರು ಟ್ರಂಪ್‌ಗೆ ಬಹಿರಂಗ ಪತ್ರವೊಂದನ್ನು ಬರೆದು ‘‘ನಮ್ಮ ಓದುಗರಿಗೆ, ಕೇಳುಗರಿಗೆ, ವೀಕ್ಷಕರಿಗೆ ಅತ್ಯುತ್ತಮ ಸೇವೆ ನೀಡುವುದು ಹೇಗೆಂದು ನಿರ್ಧರಿಸುವವರು ನಾವೆ ಹೊರತು ನೀವಲ್ಲ....... ನಾವು ಯಾರು, ಯಾತಕ್ಕೋಸ್ಕರ ಇಲ್ಲಿರುವೆವು ಎಂಬ ಅತ್ಯಂತ ಮೂಲಭೂತ ಪ್ರಶ್ನೆಗಳ ಬಗ್ಗೆ ಮರುಚಿಂತನೆ ಮಾಡುವಂತೆ ಜುಲುಂ ಮಾಡಿರುವಿರಿ. ಇದಕ್ಕಾಗಿ ನಿಮಗೆ ತುಂಬಾ ಆಭಾರಿಯಾಗಿರುವೆವು......’’ ಎಂದು ಖಾರವಾಗಿ ಹೇಳಿದ್ದಾರೆ. ಭಾರತದಲ್ಲಿ? ಮಾತು ಸೋತಿದೆ.