ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಲಿರುವ ಜಿಎಸ್‌ಟಿ: ಜಂಟಿ ಆಯುಕ್ತ ಮುರಳೀಕೃಷ್ಣ
ಬೆಂಗಳೂರು,ಜ.30: ಸರಕು ಹಾಗೂ ಸೇವಾ ತೆರಿಗೆಯು ದೇಶದ ಎಲ್ಲಾ 29 ರಾಜ್ಯಗಳು ಹಾಗೂ ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ತೆರಿಗೆಗಾಗಿ ಒಂದೇ ವೇದಿಕೆಯನ್ನು ಒದಗಿಸುವುದು ಎಂದು ವಾಣಿಜ್ಯ ತೆರಿಗೆಗಳ (ಆಡಳಿತ) ಜಂಟಿ ಆಯುಕ್ತ ಮುರಳೀಕೃಷ್ಣ ತಿಳಿಸಿದ್ದಾರೆ.
ನಗರದಲ್ಲಿ ಇಂಡಿಯನ್ ಬ್ಯುಸಿನೆಸ್ ಫೋರಂ ಆಯೋಜಿಸಿದ್ದ ಉದ್ಯಮಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ದೇಶದಲ್ಲಿ ಕೇಂದ್ರ ಮಾರಾಟ ತೆರಿಗೆ, ಮನರಂಜನಾ ತೆರಿಗೆ, ವ್ಯಾಟ್,ಪ್ರವೇಶಾತಿ ತೆರಿಗೆ, ಬೆಟ್ಟಿಂಗ್ ತೆರಿಗೆ, ಲಕ್ಸುರಿ ತೆರಿಗೆ ಮುಂತಾದ ಏಳು ವಿಧದ ತೆರಿಗೆಗಳು ಇರುವ ಹೊರತಾಗಿಯೂ ‘‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ್’ ಇದರಲ್ಲಿ ಭಾರತವು 180 ರಾಷ್ಟ್ರಗಳ ಪೈಕಿ 130ನೆ ಸ್ಥಾನದಲ್ಲಿದೆಯೆಂದು ತಿಳಿಸಿದರು.
ಸರಕು ಹಾಗೂ ಸೇವಾ ತೆರಿಗೆಯ ಪರವಾಗಿ ಜನಬೆಂಬಲ ಸಿಗುವ ಸಲುವಾಗಿ ವಿವಿಧ ವೇದಿಕೆಗಳಲ್ಲಿ ಅದರ ಬಗ್ಗೆ ಚರ್ಚೆಗಳನ್ನು ನಡೆಸುತ್ತಿರುವ ಮುರಳೀಕೃಷ್ಣ ಈ ಹೊಸ ತೆರಿಗೆಯಿಂದ ಪಾರದರ್ಶಕತೆ ಹೆಚ್ಚುವುದು ಎಂದು ಹೇಳಿದ್ದಾರೆ. ವರ್ತಕರುಯಾವುದೇ ‘ಸಿ’ ನಮೂನೆ ಅರ್ಜಿಯನ್ನು ತುಂಬಿಸುವ ಅಗತ್ಯವಿಲ್ಲವೆಂದು ಹೇಳಿದ ಅವರು ದೇಶದಲ್ಲಿ ಈಗಿರುವ ತೆರಿಗೆ ವ್ಯವಸ್ಥೆ ಬಹಳ ಕ್ಲಿಷ್ಟಕರವಾಗಿದೆಯೆಂದು ತಿಳಿಸಿದರು.
ಜಿಎಸ್‌ಟಿ ಒಂದು 15 ಅಂಕಿಗಳಿರುವ ಸಂಖ್ಯೆಯಾಗಿರುತ್ತದೆ ಹಾಗೂ ಇದರ 10 ಅಂಕಿಗಳು ಪ್ಯಾನ್ ನಂಬರಿನದನ್ದಾಗಿರುತ್ತದೆ ಎಂದರು. ಅರ್ಜಿ ಸಲ್ಲಿಸಿದ ನಾಲ್ಕೇ ದಿನಗಳಲ್ಲಿ ನೋಂದಣಿಯನ್ನು ಪರಿಶೀಲನೆಗಿಂತ ಮುಂಚಿತವಾಗಿಯೇ ಮಾಡಲಾಗುವುದು. ಎಲ್ಲಾ ತೆರಿಗೆಗಳಿಗೂ ಒಂದೇ ರಿಟರ್ನ್ ಫೈಲಿಂಗ್ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಹೆಚ್ಚುವರಿ ಆಯುಕ್ತ ಅಡೂರು ಬಿ.ಶಂಸುದ್ದೀನ್, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಡಾ.ರವಿ ಪ್ರಸಾದ್ ಸಭಿಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.
ಎಫ್. ಸಿ.ಸಿ.ಐ ತೆರಿಗೆ ಸಮಿತಿ ಅಧ್ಯಕ್ಷ ಬಿ ಟಿ ಮನೋಹರ್ ಮುಖ್ಯ ಅತಿಥಿಯಾಗಿದ್ದರು. ಐಬಿಎಫ್ ಉಪಾಧ್ಯಕ್ಷ ಸಿ.ಕೆ.ಪಿ ಅಝೀಝ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಇಂಡಿಯನ್ ಬ್ಯುಸಿನೆಸ್ ಫೋರಂ ಡೈರೆಕ್ಟರ್ ಕೆ.ಎಂ ಸಿದ್ದೀಕ್ ಉಪಸ್ಥಿತರಿದ್ದರು.