ತೊಕ್ಕೊಟ್ಟು: ಶಿಲಾನ್ಯಾಸ ಹಂತದಲ್ಲೇ ಉಳಿದ ‘ಅಬ್ಬಕ್ಕ ಭವನ’
ಮಂಗಳೂರು, ಜ.31: ಪ್ರಪ್ರಥಮ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ದೇವಿಯ ಹೆಸರಿನಲ್ಲಿ ಉಳ್ಳಾಲ ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಲಾದ ‘ಅಬ್ಬಕ್ಕ ಭವನ’ವು ಶಿಲಾನ್ಯಾಸ ಹಂತದಲ್ಲೇ ಬಾಕಿಯಾಗಿದೆ.
2014ರ ಜೂ.21ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಆಹಾರ ಸಚಿವ ಯು.ಟಿ.ಖಾದರ್ ‘ಅಬ್ಬಕ್ಕ ಭವನ’ಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಕಳೆದ ಎರಡೂವರೆ ವರ್ಷದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಅಬ್ಬಕ್ಕ ಉತ್ಸವ ಸಮಿತಿಯು ಜಿಲ್ಲೆಯ ಸಚಿವರು ಮತ್ತು ಜಿಲ್ಲಾಕಾರಿಯನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯ ಸರಕಾರ ವರ್ಷಂಪ್ರತಿ 25-30-40 ಲಕ್ಷ ರೂ. ಹೀಗೆ ಅಬ್ಬಕ್ಕ ಉತ್ಸವ ಆಚರಿಸಲು ಹಣ ಬಿಡುಗಡೆ ಮಾಡುತ್ತಿದ್ದರೂ ‘ಭವನ’ದ ಬಗ್ಗೆ ಆಸಕ್ತಿ ತಾಳಿದಂತಿಲ್ಲ. ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿ ಯಾಗಿದ್ದಾಗ ನಡೆದ ಅಬ್ಬಕ್ಕ ಉತ್ಸವದಲ್ಲಿ ಅವರು ‘ಅಬ್ಬಕ್ಕ ಭವನ’ದ ಬಗ್ಗೆ ಘೋಷಣೆ ಮಾಡಿದ್ದರು. ಬಜೆಟ್ನಲ್ಲೂ ಆ ಬಗ್ಗೆ ಉಲ್ಲೇಖಿಸಿದ್ದರು. ಆ ಬಳಿಕ 2 ಕೋ.ರೂ. ಬಿಡುಗಡೆ ಆಗಿತ್ತು. ಆದರೆ, ಶಿಲಾನ್ಯಾಸ ನೆರವೇರಿ ಎರಡೂವರೆ ವರ್ಷ ಕಳೆದರೂ ಅಬ್ಬಕ್ಕ ಭವನ ತಲೆ ಎತ್ತಿಲ್ಲ. ಶಿಲಾನ್ಯಾಸದ ಸಂದರ್ಭ ಈ ಭವನದ ನಿರ್ಮಾಣ ವೆಚ್ಚ 5 ಕೋ.ರೂ. ಆಗಿತ್ತು. ಈಗ ಅದು 8 ಕೋ.ರೂ.ಗೆ ಏರಿದೆ. ಆರಂಭದಲ್ಲಿ ನಿರ್ಮಿತಿ ಕೇಂದ್ರಕ್ಕೆ ಅಬ್ಬಕ್ಕ ಭವನದ ನಿರ್ಮಾಣದ ಹೊಣೆ ವಹಿಸಿಕೊಡಲಾಗಿತ್ತು. ಬಳಿಕ ಅದು ಲೋಕೋಪಯೋಗಿ ಇಲಾಖೆಯ ಹೆಗಲಿಗೇರಿತ್ತು. ಈಗ ಅದರ ಜವಾಬ್ದಾರಿ ಯಾರಿಗೆ ವಹಿಸಿಕೊಡಲಾಗಿದೆ ಎಂಬುದು ಸ್ಪಷ್ಟತೆ ಇಲ್ಲ. ಬಿಡುಗಡೆಯಾಗಿರುವ 2 ಕೋ.ರೂ. ಜಿಲ್ಲಾಕಾರಿಯ ಖಾತೆಯಲ್ಲೇ ಉಳಿದು ಕೊಂಡಿದೆ. ಈ ಬಗ್ಗೆ ಜನಪ್ರತಿನಿಗಳು, ಜಿಲ್ಲಾ ಡಳಿತ ನಿರಾಸಕ್ತಿ ವಹಿಸಿದೆ.
ಶಿಲಾನ್ಯಾಸ ಲಕವೇ ನಾಪತ್ತೆ: ತೊಕ್ಕೊಟ್ಟಿನ ಹೊಸ ಬಸ್ನಿಲ್ದಾಣದ ಬಳಿ 42 ಸೆಂಟ್ಸ್ ಜಾಗವನ್ನು ಅಬ್ಬಕ್ಕ ಭವನಕ್ಕೆ ಮೀಸಲಿರಿಸಿ, 2014ರ ಜೂನ್ನಲ್ಲಿ ಜಿಲ್ಲೆಯ ಸಚಿವದ್ವಯರು ಶಿಲಾನ್ಯಾಸ ನೆರವೇರಿಸಿದ್ದರು. ಆದರೆ 2 ತಿಂಗಳಲ್ಲೇ ಆ ನಾಮಲಕ ಕಾಣೆಯಾಗಿದೆ. ಇದು ಕಿಡಿಗೇಡಿಗಳ ಕೃತ್ಯ ಎನ್ನುವುದಕ್ಕಿಂತಲೂ ಗ್ರಾನೆಟ್ನ ಆಸೆಯಿಂದ ಯಾರೋ ಕಿತ್ತುಕೊಂಡು ಹೋಗಿರಬೇಕು ಎಂದು ಶಂಕಿಸಲಾಗಿದೆ. ಆದರೆ ಈ ಕುರಿತು ಜಿಲ್ಲಾಡಳಿತ ಅಥವಾ ಅಬ್ಬಕ್ಕ ಉತ್ಸವ ಸಮಿತಿಯು ಯಾವುದೇ ಕ್ರಮ ಕೈಗೊಂಡಂತಿಲ್ಲ.
ಉತ್ಸವಕ್ಕೆ ಅನುದಾನ: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪ್ರಥಮ ಅಧ್ಯಕ್ಷ ಬಿ.ಎ.ವಿವೇಕ ರೈ ‘ಅಬ್ಬಕ್ಕ ಉತ್ಸವ’ ನಡೆಸುವ ಬಗ್ಗೆ ಚಿಂತಿಸಿ 1997ರಲ್ಲಿ ಮಾಜಿ ಶಾಸಕ ಬಿ.ಎಂ.ಇದಿನಬ್ಬರ ಅಧ್ಯಕ್ಷತೆಯಲ್ಲಿ ತೊಕ್ಕೊಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಸಿದ್ದರು. ಅದರಂತೆ ‘ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ’ ರಚಿಸಿ ಅದೇ ವರ್ಷದ ನ.8, 9ರಂದು ತುಳು ಅಕಾಡಮಿಯ ಸಹಯೋಗದಲ್ಲಿ ಉಳ್ಳಾಲ ಮಾಸ್ತಿಕಟ್ಟೆಯ ಭಾರತ್ ಪ್ರೌಢಶಾಲೆಯಲ್ಲಿ ಪ್ರಥಮ ಅಬ್ಬಕ್ಕ ಉತ್ಸವ ಆಚರಿಸಲಾಯಿತು.
ಆ ಬಳಿಕ 1998, 1999, 2000, 2002, 2006, 2010 ಹೀಗೆ 7 ಉತ್ಸವ ವನ್ನು ಸಮಿತಿಯ ಪದಾಕಾರಿಗಳು ದಾನಿಗಳ ನೆರವಿನಿಂದ ನಡೆಸಿದ್ದರು. ಆರ್ಥಿಕ ಸಮಸ್ಯೆಯಿಂದಾಗಿ 2001, 2003, 2004, 2005, 2007, 2008, 2009ರಲ್ಲಿ ಸಮ್ಮೇಳನ ನಡೆದಿರಲಿಲ್ಲ. ಬಳಿಕ ನಡೆದ ಉತ್ಸವಕ್ಕೆ ಸರಕಾರವು 25, 30, 40 ಲಕ್ಷ ರೂ. ಹೀಗೆ ಅನುದಾನ ಬಿಡುಗಡೆಗೊಳಿಸುತ್ತಾ ಬಂದಿದೆ. ಆದರೆ ಈ ಎಲ್ಲ ಉತ್ಸವಗಳು ಉಳ್ಳಾಲ ವ್ಯಾಪ್ತಿಯ ಗಡಿದಾಟದಿರುವುದು ವಿಪರ್ಯಾಸ.
ಜಾರಿಯಾಗದ ನಿರ್ಣಯಗಳು: ಅಬ್ಬಕ್ಕ ಭವನ ನಿರ್ಮಾಣ ಮಾತ್ರವಲ್ಲ, ಪ್ರತೀ ಉತ್ಸವದಲ್ಲಿ ಕೈಗೊಳ್ಳಲಾದ ನಿರ್ಣಯಗಳೂ ಜಾರಿಯಾಗಿಲ್ಲ. ರಾ.ಹೆ. 66ರಲ್ಲಿರುವ ಪಂಪ್ವೆಲ್ ವೃತ್ತಕ್ಕೆ ಹಾಗೂ ಬೆಂಗಳೂರಿನ ಕ್ವೀನ್ಸ್ ರಸ್ತೆಗೆ ರಾಣಿ ಅಬ್ಬಕ್ಕನ ಹೆಸರಿಡಬೇಕು, ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕನ ಹೆಸರಿಡಬೇಕು, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪಠ್ಯಪುಸ್ತಕದಲ್ಲಿ ಅಬ್ಬಕ್ಕನ ಕುರಿತು ಪಾಠ ಅಳವಡಿಸಬೇಕು, ದ.ಕ. ಜಿಲ್ಲೆಗೆ ಮಂಗಳೂರು ಅಥವಾ ತುಳು ಜಿಲ್ಲೆ ಎಂದು ನಾಮಕರಣ ಮಾಡಬೇಕು, ಮಂಗಳೂರು ಮನಪಾ ಹೃದಯ ಭಾಗದಲ್ಲಿ ಹಾದು ಹೋಗುವ ರಸ್ತೆಯೊಂದರಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆ ಸ್ಥಾಪಿಸಿ ಅದಕ್ಕೆ ರಾಣಿ ಅಬ್ಬಕ್ಕ ವೃತ್ತ ಎಂದು ನಾಮಕರಣ ಮಾಡಬೇಕು, ಮಂಗಳೂರು-ದಿಲ್ಲಿ ಮಧ್ಯೆ ಸಂಚರಿಸುವ ರೈಲು ಗಾಡಿಯೊಂದಕ್ಕೆ ‘ರಾಣಿ ಅಬ್ಬಕ್ಕ ಎಕ್ಸ್ ಪ್ರೆಸ್’ ಎಂದು ಹೆಸರಿಸಬೇಕು, ಉಳ್ಳಾಲದಲ್ಲಿ ವೀರರಾಣಿ ಅಬ್ಬಕ್ಕ ಸ್ಮಾರಕ ಸಭಾಭವನ ಸ್ಥಾಪಿಸಬೇಕು, ಮಂಗಳೂರು ವಿವಿಯಲ್ಲಿ ‘ರಾಣಿ ಅಬ್ಬಕ್ಕ ಅಧ್ಯಯನ ಪೀಠವನ್ನು ಸ್ಥಾಪಿಸಬೇಕು’ ಎಂಬಿತ್ಯಾದಿ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ.
ಈ ಬಾರಿ ಮತ್ತೆ ‘ಬನ್ನಿ ಅಬ್ಬಕ್ಕನ ನಾಡಿಗೆ... ಧರ್ಮ ಸಮನ್ವಯದ ಬೀಡಿಗೆ... ಹೆಮ್ಮೆಯ ತುಳುನಾಡಿಗೆ’ ಎಂಬ ಕರೆ ಕೇಳಿ ಬರುತ್ತಿದೆ. ಅದರಂತೆ ಫೆ.4, 5ರಂದು ಕೊಣಾಜೆ ಸಮೀಪದ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ನಡೆಯುವ ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ.
ಶಿಲಾನ್ಯಾಸಕ್ಕೆ ಆತುರ ತೋರಿದವರು ನಿರ್ಮಾಣದ ಬಗ್ಗೆ ಆಸಕ್ತಿ ವಹಿಸದ್ದು ವಿಪರ್ಯಾಸ. ಸಚಿವ ಯು.ಟಿ. ಖಾದರ್ ತನ್ನ ಕ್ಷೇತ್ರದ ಹೆಮ್ಮೆಯ ವಿಚಾರ ಇದೆಂದು ಪರಿಗಣಿಸಿ ಶೀಘ್ರ ಭವನ ನಿರ್ಮಾಣಕ್ಕೆ ಮುಂದಾಗಬೇಕು.
*ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ
ಸಾಮಾಜಿಕ ಕಾರ್ಯಕರ್ತರು
ಅಬ್ಬಕ್ಕ ಭವನ ನಿರ್ಮಾಣಕ್ಕೆ ನಾವು ಪ್ರಯತ್ನ ನಡೆಸುತ್ತಲೇ ಇದ್ದೇವೆ. ಆದರೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅಬ್ಬಕ್ಕ ಭವನ ತಲೆ ಎತ್ತಲಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗೆ ಕಾಲಹರಣ ಮಾಡಿದರೆ ಇದರ ಅಂದಾಜು ವೆಚ್ಚದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ.
*ದಿನಕರ ಉಳ್ಳಾಲ್
ಕಾರ್ಯಾಧ್ಯಕ್ಷರು, ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ