ಪುತ್ತೂರಿಗೆ ಗೋಳ್ವಾಲ್ಕರ್ ಬರಲಿಲ್ಲವೇ?
ಧಾರಾವಾಹಿ-4
ಕಾದಂಬರಿ
ಬಹುಶಃ ಪಪ್ಪು ಎಂಟನೇ ತರಗತಿಯಲ್ಲಿರಬೇಕು. ಒಂದು ದಿನ ಅನಂತಭಟ್ಟರು ಮಗನ ಜೊತೆಗೆ ಗುರೂಜಿಯ ಮನೆಗೆ ಹೋಗಿದ್ದರು. ಹಳೆಯ ಕಾಲದ, ಸಾಂಪ್ರದಾಯಿಕ ಹೆಂಚಿನ ಮನೆ ಅದು. ಮನೆ ಪ್ರವೇಶಿಸುವ ಮುನ್ನ ಉದ್ದ ಜಗಲಿ. ಸಾಧಾರಣವಾಗಿ ಪಪ್ಪು ಮನೆಯ ಜಗಲಿಯ ಕಟ್ಟೆಯ ಮೇಲೆ ಕುಳಿತು ಬಿಡುತ್ತಿದ್ದ. ಅಂದು ಅದೇನಾಯಿತೋ ಮನೆಯೊಳ ಹೊಕ್ಕ. ಒಳಗಡೆ ನೋಡಿದರೆ ಗೋಡೆಯ ಮೇಲೆ ನೀಳ ಗಡ್ಡಧಾರಿಯ ಫೋಟೋವೊಂದನ್ನು ತೂಗು ಹಾಕಲಾಗಿತ್ತು. ಪಪ್ಪು ತಂದೆಯ ಬಳಿ ಜೋರಾಗಿ ಕೇಳಿಬಿಟ್ಟ ‘‘ಅದು ಯಾರು? ರವೀಂದ್ರನಾಥ ಟಾಗೂರಾ?’’
ಮೇಷ್ಟ್ರು ‘ಶ್!’ ಎಂದು ಮಗನ ಬಾಯಿ ಮುಚ್ಚಿಸಿದರು.
ಅಷ್ಟರಲ್ಲಿ ಉತ್ತರ ತೂರಿ ಬಂತು ‘‘ಅದು ಗುರೂಜಿ ಗೋಳ್ವಾಲ್ಕರ್ ಅವರ ಫೋಟೋ’’ ಪಪ್ಪು ತಲೆಯೆತ್ತಿ ನೋಡಿದರೆ, ತನ್ನ ಸಹಪಾಠಿ ಜಾನಕಿ ನಿಂತಿದ್ದಾಳೆ.
ಅದೇ ಮೊದಲ ಬಾರಿ ಆಕೆಯನ್ನು ನೋಡುವಂತೆ ಆತ ನೋಡಿದ. ಬೈತಲೆ ಹಾಕಿದ ನೀಳ ಜಡೆ. ಹಣೆಗೆ ನಾಣ್ಯದಗಲದಷ್ಟು ದೊಡ್ಡ ಕುಂಕುಮ. ಸಾಂಪ್ರದಾಯಿಕ ಲಂಗ, ರವಿಕೆ.
‘‘ಗೋಳ್ವಾಲ್ಕರ್ ಅವರ ಫೋಟೋ ಅದು. ಅಷ್ಟೂ ಗೊತ್ತಿಲ್ವಾ?’’ ಜಾನಕಿ ಮತ್ತೊಮ್ಮೆ ಇವನನ್ನೇ ದಿಟ್ಟಿಸಿ ಕೇಳಿದಳು.
ಲೆಕ್ಕದ ಮೇಷ್ಟ್ರು ನಕ್ಕರು ‘‘ನಿನ್ನಷ್ಟು ತಲೆ ಅವನಿಗೆಲ್ಲಿರಬೇಕಮ್ಮ? ಹೇಗೆ ನಡೀತಾ ಇದೆ ಓದು?’’ ಎಂದು ಆಕೆಯ ತಲೆ ಸವರಿದರು.
ಜಾನಕಿ ಸುಮ್ಮನೆ ನಕ್ಕಳು. ‘‘ನಮಸ್ಕಾರ ಲೆಕ್ಕದ ಮೇಷ್ಟ್ರಿಗೆ’’ ಎನ್ನುತ್ತಾ ಗುರೂಜಿಯವರ ಪ್ರವೇಶವಾಯಿತು.
ಪಪ್ಪು ಮೆಲ್ಲ ಎದ್ದು ಹೊರಗೆ ಬಂದ. ಜಾನಕಿ ಅವನಿಗೆ ಜೊತೆಯಾದಳು.
‘‘ನಿನ್ನ ಹೆಸರು ಪ್ರತಾಪ ಸಿಂಹ ಅಲ್ಲವೇ?’’ ಆಕೆ ಕೇಳಿದಳು.
‘‘ಹೌದು. ಎಲ್ಲರೂ ಪಪ್ಪು ಎಂದು ಕರೆಯುತ್ತಾರೆ...’’ ಅವನು ಸ್ಪಷ್ಟಪಡಿಸಿದ.
‘‘ತುಂಬಾ ಒಳ್ಳೆಯ ಹೆಸರು...’’ ಜಾನಕಿ ಹೇಳಿದಾಗ ಅವನಿಗೆ ಖುಷಿ ಅನ್ನಿಸಿತು ‘‘ಗುರೂಜಿ ಇಟ್ಟ ಹೆಸರಂತೆ...’’ ಎಂದು ಅವನು ಹೆಸರಿನ ಹಿನ್ನೆಲೆ ವಿವರಿಸಿದ.
‘‘ಪ್ರತಾಪ ಸಿಂಹ ಯಾರು ಗೊತ್ತಾ?’’ ಆಕೆ ಕೇಳಿದಳು. ಇವನು ಆ ಪ್ರಶ್ನೆಗೆ ಪೆಚ್ಚಾದ. ಅವನಿಗೆ ಪ್ರತಾಪ ಸಿಂಹ ಯಾರು ಎನ್ನುವ ವಿವರ ಗೊತ್ತೇ ಇರಲಿಲ್ಲ.
‘‘ಹಿಂದೂ ರಾಷ್ಟ್ರಕ್ಕಾಗಿ ಹೋರಾಡಿದ ಧೀರ. ಮೊಗಲರ ವಿರುದ್ಧ ಹೋರಾಡಿದಾತ...’’
ಹಾಗೆಂದು ಹೇಳುವಾಗ ಆಕೆಯ ಹಣೆ ನೆರಿಗೆಗಟ್ಟುತ್ತಿತ್ತು. ಶಾಲೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದಾಗಲೂ ಈಕೆ ಇಷ್ಟೇ ಗಂಭೀರವಾಗಿ ಮಾತನಾಡುತ್ತಾಳೆ ಅನ್ನಿಸಿತು. ಅದೇನೇ ಇರಲಿ, ತನ್ನ ಹೆಸರಿನ ಕುರಿತಂತೆ ಆಕೆಗೆ ತುಂಬಾ ಗೌರವವಿದೆ ಎನ್ನುವುದು ಅವನಿಗೆ ಹೆಮ್ಮೆ ತಂದಿತು.
‘‘ಮೊಗಲರು ಯಾರು?’’ ಇವನು ಕೇಳಿದ. ಬಹುಶಃ ಪುರಾಣದಲ್ಲಿ ಬರುವ ರಾಕ್ಷಸರೇ ಇರಬೇಕು ಎಂದು ಅನ್ನಿಸಿತ್ತು ಪಪ್ಪುವಿಗೆ.
‘‘ಅಷ್ಟೂ ಗೊತ್ತಿಲ್ವಾ? ಅವರು ಹಿಂದೂಗಳ ಶತ್ರುಗಳು. ಔರಂಗಜೇಬ್ ಗೊತ್ತಾ? ನೂರಾರು ದೇವಸ್ಥಾನಗಳನ್ನು ನಾಶ ಮಾಡಿದ್ದಾನಂತೆ...’’
‘‘ಓಹ್...’’ ಎಂದ. ಆಕೆ ಮೊಗಲರ ಬಗ್ಗೆ ಮಾತನಾಡುತ್ತಿದ್ದ ಹಾಗೆಯೇ ತನ್ನ ಹೆಸರಿನ ಹಿರಿಮೆ ಹೆಚ್ಚುತ್ತಿರುವುದು ಆತನಿಗೆ ಗೊತ್ತಾಯಿತು.
‘‘ಅದೆಲ್ಲಾ ನನಗೂ ಗೊತ್ತು.. ಅಪ್ಪ ಹೇಳಿದ್ದಾರೆ...’’ ಎಂದ. ‘‘ಗೋಳ್ವಾಲ್ಕರ್ ಯಾರು ಗೊತ್ತಾ?’’ ಜಾನಕಿ ಮತ್ತೆ ಕೇಳಿದಳು.
ಪಪ್ಪುವಿಗೆ ಮತ್ತೆ ಗೊಂದಲ. ನಾಚಿಕೆ. ‘‘ಗೊತ್ತು ಗೊತ್ತು. ಅವರು ದೊಡ್ಡ ಕವಿ. ಟಾಗೂರರಷ್ಟೇ ದೊಡ್ಡ ಕವಿ’’ ಎಂದು ಬಿಟ್ಟ.
ಜಾನಕಿ ಜೋರಾಗಿ ನಕ್ಕಳು. ‘‘ಅಲ್ಲ, ಅಲ್ಲ, ಸ್ವಾತಂತ್ರ ಹೋರಾಟಗಾರರು...’’ ಎಂದು ಪಪ್ಪು ತನ್ನನ್ನು ತಿದ್ದಿಕೊಂಡ.
ಜಾನಕಿ ಮತ್ತೂ ಜೋರಾಗಿ ನಕ್ಕಳು.
‘‘ಬಾ, ನಿನಗೆ ಗೋಳ್ವಾಲ್ಕರ್ ಬಗ್ಗೆ ಹೇಳಿ ಕೊಡುವೆ....’’ ಎಂದು ಕರೆದು ಪಕ್ಕಕ್ಕೆ ಕೂರಿಸಿದಳು. ಪಪ್ಪುವಿಗೆ ಅವಳ ಸನ್ನಿಧಿ ತುಂಬಾ ಹಿತ ಅನ್ನಿಸಿತು. ಆಕೆಗೆ ಅಂಟಿಕೊಂಡು ಆತ ಕೂತ. ‘‘ನೀನು ಅಪ್ಪನ ಶಾಖೆಗೆ ಹೋಗಿದ್ದೀಯಾ?’’ ಕೇಳಿದಳು.
‘‘ಇಲ್ಲ...’’ ಎಂದು ತಲೆಯಾಡಿಸಿದ. ‘‘ಹೂಂ...ಶಾಖೆಗೆ ಹೋಗುವವರಿಗೆಲ್ಲ ಗೋಳ್ವಾಲ್ಕರ್ ಗೊತ್ತು....ಗೋಳ್ವಾಲ್ಕರ್ ಹಿಂದೂಸ್ಥಾನಕ್ಕೆ ಅಡಿಪಾಯ ಹಾಕಿದವರು....ಹಿಂದೂಗಳ ರಕ್ಷಣೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು....’’ ಜಾನಕಿ ವಿವರಿಸತೊಡಗಿದಳು.
‘‘ಸ್ವಾತಂತ್ರ ಹೋರಾಟಗಾರರೇ?’’ ಪಪ್ಪು ಕೇಳಿದ.
‘‘ಸ್ವಾತಂತ್ರಕ್ಕಾಗಿಯೂ ಹೋರಾಡಿದ್ದರು. ಆದರೆ ಹಿಂದೂಗಳಿಗಾಗಿ ತುಂಬಾ ತುಂಬಾ ಹೋರಾಡಿದ್ದರು’’ ಜಾನಕಿ ಸ್ಪಷ್ಟಪಡಿಸಿದಳು.
ಜಾನಕಿ ಹೇಳಿದುದರಲ್ಲಿ ಬಹುತೇಕ ಪಪ್ಪುವಿಗೆ ಅರ್ಥವೇ ಆಗಲಿಲ್ಲ. ಆದರೆ ಜಾನಕಿ ತುಂಬಾ ಮುದ್ದಾಗಿ ಮಾತನಾಡುತ್ತಾಳೆ....ಆಕೆ ತುಂಬಾ ತುಂಬಾ ಚೆಂದ ಎನ್ನುವುದು ಅವನ ಗಮನಕ್ಕೆ ಬಂತು. ಅವಳು ಮಾತನಾಡಿದಷ್ಟು ಹೊತ್ತೂ ಆತ ತುಂಬಾ ಖುಷಿಯಾಗಿದ್ದ. ತಂದೆ ಹೊರಗೆ ಬಂದದ್ದೇ...ಆಕೆಗೆ ನಮಸ್ತೆ ಹೇಳಿ, ಅಲ್ಲಿಂದ ಹೊರಟ. ಗೇಟು ತಲುಪಿದವನು ತಿರುಗಿ ನೋಡಿದರೆ, ಜಾನಕಿ ಪಪ್ಪುವನ್ನೇ ನೋಡುತ್ತಾ ನಿಂತಿದ್ದಳು. ಅವಳು ಮತ್ತೊಮ್ಮೆ ಮುಗುಳ್ನಕ್ಕಳು.
ಮನೆಗೆ ಹೋದವನೇ ತಾಯಿಯಲ್ಲಿ ಕೇಳಿದ ‘‘ಅಮ್ಮ, ನಿನಗೆ ಗೋಳ್ವಾಲ್ಕರ್ ಗೊತ್ತಾ?’’
ಅಡುಗೆ ಕೆಲಸದಲ್ಲಿ ತೊಡಗಿದ್ದ ಲಕ್ಷ್ಮಮ್ಮ ಆ ಹೆಸರನ್ನು ಅದೇ ಮೊದಲ ಬಾರಿ ಕೇಳಿದ್ದರು ‘‘ಇಲ್ಲ ಮಗಾ’’
‘‘ಅರೆ! ಗೋಳ್ವಾಲ್ಕರ್ ಗೊತ್ತಿಲ್ವಾ?’’ ಪಪ್ಪು ಅಚ್ಚರಿಯಿಂದ ಕೇಳಿದ. ‘‘ನನಗೆ ಗಾಂಧಿ ಗೊತ್ತು ಮಗ. ನಿನ್ನ ತಾತ ಮುಕುಂದರಾಯರು ಸ್ವಾತಂತ್ರ ಹೋರಾಟಕ್ಕಿಳಿದಾಗ, ಗಾಂಧಿಯ ಜೊತೆಗಿದ್ದರಂತೆ. ಪುತ್ತೂರಿಗೆ ಗಾಂಧಿ ಬಂದಾಗ ನನ್ನ ಅಜ್ಜಿಯಲ್ಲಿದ್ದ ಎಲ್ಲ ಬಂಗಾರವನ್ನು ನಿನ್ನ ತಾತ ಅವರಿಗೆ ಒಪ್ಪಿಸಿದ್ದರಂತೆ...’’
ಪಪ್ಪು ಪೆಚ್ಚಾಗಿ ಬಿಟ್ಟ.
‘‘ಪುತ್ತೂರಿಗೆ ಗೋಳ್ವಾಲ್ಕರ್ ಬರಲಿಲ್ಲವಾ?’’ ಮತ್ತೆ ಕೇಳಿದ.
‘‘ಗೊತ್ತಿಲ್ಲ ಮಗಾ’’ ‘‘ತಾತಾ ಗೋಳ್ವಾಲ್ಕರ್‌ರನ್ನು ಭೇಟಿಯಾಗಿರ ಲಿಲ್ವಾ?’’ ಅವನು ಪ್ರಶ್ನಿಸಿದ.
‘‘ಗೊತ್ತಿಲ್ಲ ಮಗಾ. ನಿನ್ನ ಅಪ್ಪನನ್ನು ಕೇಳು’’
ಅಪ್ಪನಲ್ಲಿ ಇದೆಲ್ಲಾ ಕೇಳುವುದಕ್ಕೆ ಅಳುಕು. ‘‘ಬಂದಿರಬೇಕು. ತಾತನೂ ಅವರನ್ನು ಭೇಟಿಯಾಗಿರಬೇಕು. ನಿನಗೆ ಗೊತ್ತಾ, ಗೋಳ್ವಾಲ್ಕರ್ ದೊಡ್ಡ ಸ್ವಾತಂತ್ರ ಹೋರಾಟಗಾರರಂತೆ...’’ ಬೇರೇನೂ ವಿವರಿಸುವುದಕ್ಕೆ ತಿಳಿಯದೆ ಹೇಳಿಬಿಟ್ಟ.
‘‘ಹೌದ ಮಗಾ. ಒಳ್ಳೆಯದಾಯಿತು. ನೀನು ಅವರ ಹಾಗೆಯೇ ದೇಶಸೇವೆ ಮಾಡಬೇಕು...’’ ತಾಯಿ ಸಮಾಧಾನಿಸಿದರು.
‘‘ಅಮ್ಮಾ, ನಿನಗೆ ಜಾನಕಿ ಗೊತ್ತಾ?’’
‘‘ಯಾವ ಜಾನಕಿ?’’
‘‘ಅದೇ ಅಮ್ಮಾ...ಗುರೂಜಿ ಮಗಳು ಜಾನಕಿ...’’
‘‘ಅವಳಾ...ಅವಳೇನು ಗೊತ್ತಿಲ್ಲದೆ...ತುಂಬಾ ಚೂಟಿ. ಜಾಣೆ...ಮುದ್ದು... ಅವಳ ಹಾಗೆಯೇ ನೀನೂ ಕಲಿತು ಹುಷಾರಾಗಬೇಕು...’’
‘‘ಜಾನಕಿಗೆ ತುಂಬಾ ತುಂಬಾ ಗೊತ್ತಮ್ಮ...ಗೋಳ್ವಾಲ್ಕರ್ ಬಗ್ಗೆ ತುಂಬಾ ಗೊತ್ತು. ಜಾನಕಿ ನನ್ನ ಫ್ರೆಂಡ್...’’
ಇದಕ್ಕಿದ್ದಂತೆಯೇ ಕೇಳಿದ ‘‘ಪ್ರತಾಪ ಸಿಂಹ ಅಂದ್ರೆ ಯಾರು ಗೊತ್ತಾ...’’
ಲಕ್ಷ್ಮಮ್ಮ ತಲೆಯೆತ್ತಿದರು ‘‘ಯಾವನೋ ದೊಡ್ಡ ರಾಜ ಅಂತೆ ಮಗಾ...’’
‘‘ಮೊಗಲರ ವಿರುದ್ಧ ಹೋರಾಡಿದ ಹಿಂದೂ ರಾಜ ಅಂತೆ....ನಾನೂ ಅವನ ಹಾಗೇ ಆಗಬೇಕು...’’
‘‘ಮೊಗಲರು ಈಗ ಎಲ್ಲಿದ್ದಾರಪ್ಪ? ನೀನು ಕಲಿತು ಹುಷಾರಾಗಬೇಕು...ಒಳ್ಳೆಯ ಸಂಗೀತ ವಿದ್ವಾಂಸನಾಗಬೇಕು...ಊರಿಗೆ ಒಳ್ಳೆಯವನಾಗಿ ಬಾಳಬೇಕು...ನಿನ್ನ ತಾತನ ಹಾಗೆ...ಮುಕುಂದ ರಾಯರು ಎಂದರೆ ಇಡೀ ಊರೇ ಗೌರವಿಸುತ್ತಿತ್ತು. ನೀನೂ ಅವರ ಹಾಗೆ ಬೆಳೆಯಬೇಕು...’’
ತಾನು ಒಂದು ಹೇಳುತ್ತಿದ್ದರೆ, ತಾಯಿ ಇನ್ನೊಂದು ಹೇಳುತ್ತಿದ್ದಾಳೆ ಎಂದು ಪಪ್ಪುವಿಗೆ ಸಿಟ್ಟು ಬಂದು, ಅಲ್ಲಿಂದ ಎದ್ದು ಹೋದ. ಮರುದಿನ ಶಾಲೆಗೆ ಹೋದದ್ದೇ ಕಬೀರನ ಪಕ್ಕ ಕೂತು, ಜಾನಕಿಯ ಕಡೆಗೆ ಕಣ್ಣು ಹಾಯಿಸಿದ. ಅವಳು ಗಂಭೀರವಾಗಿ ಪಾಠ ಕೇಳುತ್ತಿದ್ದಳು. ಒಂದು ಬಾರಿಯಾದರೂ ತನ್ನ ಕಡೆಗೆ ಕಣ್ಣಾಯಿಸಬಹುದು ಎಂದು ಭಾವಿಸಿದ್ದ. ಊಹುಂ...ಆಕೆ ಗಂಭೀರವಾಗಿ ಪಾಠವನ್ನು ಆಲಿಸುತ್ತಿದ್ದಳು. ಅವನು ನಿರಾಶನಾದ.
ಮಧ್ಯಾಹ್ನ ಊಟದ ಬೆಲ್ಲು ಹೊಡೆಯಿತು. ಶಾಲೆಯ ಜಗಲಿಗೆ ಕಾಲಿಡಬೇಕು, ಯಾರೋ ಕರೆದಂತಾಯಿತು ‘‘ಪ್ರತಾಪ್...’’
ಅರೇ! ನನ್ನ ಹೆಸರು!
ಆತನನ್ನು ಇತ್ತೀಚಿನ ದಿನಗಳಲ್ಲಿ ಯಾರೂ ಪ್ರತಾಪ ಎಂದು ಕರೆದದ್ದೇ ಇಲ್ಲ. ಎಲ್ಲರೂ ಅವನನ್ನು ಪಪ್ಪು ಎಂದೇ ಕರೆಯುತ್ತಿದ್ದರು. ಅವನೂ ಅಷ್ಟೇ. ಪ್ರತಾಪ್ ಎಂಬ ಹೆಸರನ್ನೇ ಮರೆತಿದ್ದ. ಇದೀಗ ಪ್ರತಾಪ್ ಎಂಬ ಕರೆ. ಅದೂ ಜಾನಕಿಯ ಧ್ವನಿ!
ಹೆಮ್ಮೆಯಿಂದ ಹಿಂದಿರುಗಿ ನೋಡಿದ. ಜಾನಕಿ ನಗುತ್ತಿದ್ದಳು. ಅವಳ ಹಣೆಯ ತುಂಬ ಕೆಂಪು ಬೊಟ್ಟು. ಎಷ್ಟು ಚಂದ! ಹೆಣೆದ ನೀಳ ಜಡೆಯನ್ನು ಹೆಗಲ ಮೇಲೆ ಇಳಿಸಿಕೊಂಡಿದ್ದಳು.
‘‘ಇವತ್ತು ಸಂಜೆ ಮನೆಗೆ ಬರುತ್ತೀಯಾ?’’ ಆಕೆ ಕೇಳಿದಳು.
‘‘ನೋಡಬೇಕು...ತಂದೆ ಬರುತ್ತಾರಾದರೆ ಅವರ ಜೊತೆ ಬರುವೆ...’’ ಹೇಳಿದ.
ತುಸು ವೌನ. ಇದ್ದಕ್ಕಿದ್ದಂತೆಯೇ ತನ್ನ ಅನುಮಾನವನ್ನು ಅವಳಲ್ಲಿ ತೋಡಿಕೊಂಡ ‘‘ಗೋಳ್ವಾಲ್ಕರ್ ಪುತ್ತೂರಿಗೆ ಬಂದಿದ್ದರಾ?’’
‘‘ಬಂದಿರಬೇಕು. ಗೊತ್ತಿಲ್ಲ. ಆದರೆ ಮಂಗಳೂರಿಗೆ ಬಂದಿದ್ದರು...ಆಗ ಅಪ್ಪ ತುಂಬಾ ಸಣ್ಣವರಂತೆ...ಗೋಳ್ವಾಲ್ಕರ್ ಭಾಷಣವನ್ನು ಕೇಳಿದ್ದರಂತೆ...’’ ಜಾನಕಿ ಉತ್ತರಿಸಿದಳು.
‘‘ಗಾಂಧಿ ಪುತ್ತೂರಿಗೆ ಬಂದಿದ್ದರಂತೆ. ನನ್ನ ಅಮ್ಮ ಹೇಳಿದಳು. ಗಾಂಧಿಯ ಜೊತೆಗೆ ಗೋಳ್ವಾಲ್ಕರ್ ಇದ್ದಿರಬಹುದಾ?’’ ಪಪ್ಪು ಮತ್ತೆ ಅನುಮಾನವನ್ನು ಮುಂದಿಟ್ಟ.
‘‘ಗೊತ್ತಿಲ್ಲ...ಬಂದಿರಲೂಬಹುದು...ಅಪ್ಪನಿಗೆ ಗೊತ್ತಿರಬಹುದು...’’
‘‘ನನ್ನ ತಾತ ಮುಕುಂದ ರಾಯರು ಸ್ವಾತಂತ್ರ ಹೋರಾಟಗಾರರು ಗೊತ್ತಾ? ಅಮ್ಮ ಹೇಳಿದ್ದಳು...ಅವರು ಗಾಂಧಿಯನ್ನು ಭೇಟಿ ಮಾಡಿದ್ದರಂತೆ...’’
ಜಾನಕಿ ವೌನವಾಗಿದ್ದಳು.
‘‘ನನ್ನ ಡ್ರಾಯಿಂಗ್ ಬುಕ್ಕಿನಲ್ಲಿ ನಾನು ರಾಣಾ ಪ್ರತಾಪ ಸಿಂಹನ ಚಿತ್ರ ಬಿಡಿಸಿದ್ದೇನೆ ನೋಡ್ತೀಯಾ?’’ ಜಾನಕಿ ಒಮ್ಮೆಲೆ ಮಾತು ಬದಲಿಸಿದಳು.
ಪಪ್ಪುವಿಗೆ ತನ್ನದೇ ಚಿತ್ರ ಬಿಡಿಸಿದಷ್ಟು ರೋಮಾಂಚನ. ‘‘ಹೌದಾ?’’ ಬಾಯಗಲಿಸಿದ. ಇಬ್ಬರು ಮತ್ತೆ ಕೊಠಡಿಯೊಳಗೆ ಹೋದರು. ಆಕೆ ತನ್ನ ಚೀಲದಿಂದ ಡ್ರಾಯಿಂಗ್ ಪುಸ್ತಕ ತೆಗೆದಳು.
‘ರಾಣಾ ಪ್ರತಾಪ ಸಿಂಹ’ ಅಲ್ಲಿ ಮೀಸೆ ತಿರುವುತ್ತಿದ್ದ. ಪಪ್ಪು ತಾನು ಯಾರು ಎನ್ನುವುದನ್ನು ಮೊತ್ತ ಮೊದಲು ನೋಡಿಕೊಂಡ ಕನ್ನಡಿಯಾಗಿತ್ತು ಆ ಡ್ರಾಯಿಂಗ್ ಪುಸ್ತಕ. ಬಳಿಕ ಜಾನಕಿ ಮೆಲ್ಲಗೆ ಪಿಸುಗುಟ್ಟಿದಳು ‘‘ನೀನು ಕಬೀರನ ಜೊತೆ ಯಾಕೆ ಓಡಾಡುತ್ತೀಯ?’’
(ರವಿವಾರದ ಸಂಚಿಕೆಗೆ)