ಗಿರಿಜನರ ಅಭಿವೃದ್ಧಿಗೆ ಅರಣ್ಯ ಇಲಾಖಾಧಿಕಾರಿಗಳಿಂದ ಅಡ್ಡಿ
ಅವಕಾಶ ವಂಚಿತರಾಗುತ್ತಿರುವ ಕುದುರೆಮುಖ ಉದ್ಯಾನವನ ನಿವಾಸಿಗಳು
ಬೆಳ್ತಂಗಡಿ, ಫೆ.5: ಸರಕಾರ ಗಿರಿಜನರ ಅಭಿವೃದ್ಧಿ ಗಾಗಿ ಅನುದಾನ ಮಂಜೂರು ಮಾಡಿದೆ. ಆದರೆ ಅಧಿಕಾರಿಗಳು ಕಾಮಗಾರಿ ನಡೆಸಲು ಅವಕಾಶ ನಿರಾಕರಿಸುತ್ತಿದ್ದಾರೆ. ಮಂಜೂರಾದ ಕಾಮಗಾರಿಗಳ ಅನುಷ್ಠಾನಕ್ಕಾಗಿ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದ್ದಾರೆ ಸವಣಾಲು ಗ್ರಾಮದ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನ ನಿವಾಸಿಗಳು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ರಸ್ತೆ ಹಾಗೂ ವಿದ್ಯುತ್ ಲೈನ್ ಕಾಮಗಾರಿ ನಡೆಸಲು ಅವಕಾಶ ನಿರಾಕರಿಸಲಾಗುತ್ತಿದೆ. ರಸ್ತೆ ದುರಸ್ತಿ ಹಾಗೂ ಕಾಂಕ್ರಿಟ್ ಕಾಮಗಾರಿಗೆ ಸವಣಾಲು ಗ್ರಾಮದ ಇತ್ತಿಲ ಪೇಲ ಪ್ರದೇಶಕ್ಕೆ 20 ಲಕ್ಷ ರೂ. ಅನುದಾನ ಮಂಜೂರಾಗಿದೆ. ಆದರೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಅನುಮತಿ ನಿರಾಕರಿಸುತ್ತಿರುವ ಕಾರಣ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಸರಕಾರ ಅನುದಾನ ನೀಡಿದರೂ ಅಧಿಕಾರಿ ಗಳು ಅವಕಾಶ ನೀಡದಿರುವ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಂಜೂರಾಗಿರುವ ಅನುದಾನ ಕೈತಪ್ಪದಂತೆ ನೋಡಿಕೊಳ್ಳಲು ಇಲ್ಲಿನ ನಿವಾಸಿಗಳು ಕಚೇರಿ ಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಇವರ ಕೂಗಿಗೆ ಯಾರೂ ಕಿವಿ ಕೊಡುತ್ತಿಲ್ಲ. ಇತ್ತಿಲ, ಪೇಲ ಪ್ರದೇಶಗಳಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಕಳೆದ ಮೂರು ತಲೆಮಾರುಗಳಿಂದ ವಾಸಿಸುತ್ತಿರುವ 10 ಮಲೆಕುಡಿಯ ಕುಟುಂಬಗಳ ಸಮಸ್ಯೆಯ ಬಗ್ಗೆ ‘ವಾರ್ತಾಭಾರತಿ’ ವರ್ಷದ ಹಿಂದೆ ಸಚಿತ್ರ ವರದಿ ಪ್ರಕಟಿಸಿತ್ತು. ಆ ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಅಂದಿನ ಜಿಲ್ಲಾಧಿಕಾರಿ ಸಮಸ್ಯೆ ಪರಿಹರಿ ಸುವ ಭರವಸೆ ನೀಡಿದ್ದರು. ಬಳಿಕ ರಾಜ್ಯ ಸರಕಾರದಿಂದ ಗಿರಿಜನ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಂಕ್ರಿಟ್ ಕಾಮಗಾರಿಗೆ 20 ಲಕ್ಷ ರೂ. ಅನುದಾನವೂ ಮಂಜೂರಾಗಿತ್ತು.
ತಾಲೂಕು ಕೇಂದ್ರವಾದ ಬೆಳ್ತಂಗಡಿಯಿಂದ 7 ಕಿ.ಮೀ. ದೂರವಿರುವ ಸವಣಾಲುವಿನಿಂದ 7 ಕಿ.ಮೀ. ಅಂತರದಲ್ಲಿ ದಟ್ಟ ಕಾಡುಗಳ ಮಧ್ಯೆ ಇತ್ತಿಲ ಪೇಲ ಪ್ರದೇಶವಿದೆ. ಸುಮಾರು ಮೂರು ಕಿ.ಮೀ. ರಸ್ತೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದ ಒಳಗೆ ಹಾದು ಹೋಗುತ್ತದೆ. ಈ ರಸ್ತೆ ತೀರಾ ನಾದು ರಸ್ತಿಯಲ್ಲಿದೆ. ಕಲ್ಲು ಬಂಡೆಗಳ ನಡುವೆ ಹಾದು ಹೋಗುವ ರಸ್ತೆ ಅತ್ಯಂತ ಹಾಳಾಗಿರುವ ಪ್ರದೇಶದಲ್ಲಿ ಕಾಂಕ್ರಿಟ್ ಮಾಡಲು ನಿರ್ಧ ರಿಸಲಾಗಿತ್ತು. ಶಾಸಕ ವಸಂತ ಬಂಗೇರ ಇದಕ್ಕೆ ಶಂಕು ಸ್ಥಾಪನೆಯನ್ನೂ ನೆರವೇರಿಸಿದ್ದರು. ಆದರೆ ಕಾಮಗಾರಿ ನಡೆಸಲು ಮಾತ್ರ ಅರಣ್ಯ ಇಲಾಖೆ ಬಿಡಲೇ ಇಲ್ಲ. ರಸ್ತೆ ಕಾಮಗಾರಿಗೆ ಮುಂದಾದರೆ ಕೇಸು ದಾಖಲಿಸುವುದಾಗಿ ಗುತ್ತಿಗೆದಾರನನ್ನು ಎಚ್ಚರಿಸಿದ್ದರು. ಇದೇ ಕಾರಣಕ್ಕೆ ಇದುವರೆಗೆ ಯಾವುದೇ ಕಾಮಗಾರಿ ಆರಂಭಗೊಂಡಿಲ್ಲ. ಕಾಮಗಾರಿ ಆಗದಿದ್ದಲ್ಲಿ ಇದಕ್ಕೆ ಮಂಜೂರಾಗಿರುವ ಅನುದಾನ ವಾಪಸ್ ಹೋಗುವ ಸಾಧ್ಯತೆ ಇದೆ.
ಶಾಸಕ ವಸಂತ ಬಂಗೇರ ಈ ಬಗ್ಗೆ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಿ ಅವಕಾಶ ನೀಡುವಂತೆ ಕೇಳಿಕೊಂಡಿದ್ದರೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದೀಗ ಲಭ್ಯವಾ ಗುತ್ತಿರುವ ಮಾಹಿತಿಯಂತೆ ಈ ರಸ್ತೆ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾ ಖೆಯ ವನ್ಯಜೀವಿ ವಿಭಾಗದವರು ಐಟಿಡಿಪಿ ಇಲಾಖೆಗೆ ಪತ್ರ ಬರೆದಿದ್ದಾರೆ. ಐಟಿಡಿಪಿ ಇಲಾಖೆಯವರೂ ಕಾಮಗಾರಿ ನಡೆಸಲು ಅನುಮತಿ ಪಡೆಯಲು ಅಗತ್ಯ ಕ್ರಮಕ್ಕೆ ಯಾವುದೇ ಉತ್ಸಾಹ ತೋರಿಸಿಲ್ಲ. ಒಟ್ಟಾರೆ ಯಾಗಿ ಈ ಕಾಮಗಾರಿಯನ್ನು ಎಲ್ಲರೂ ಕೈಬಿಟ್ಟಿ ರುವಂತೆ ಕಾಣಿಸುತ್ತಿದೆ.
ಇಲ್ಲಿ ಮರ ಕಡಿಯುವ ಅಗತ್ಯವೇ ಇಲ್ಲ
ಇತ್ತಿಲ ಪೇಲ ಪ್ರದೇಶದಲ್ಲಿ ಈಗಾಗಲೇ ಕಚ್ಚಾ ರಸ್ತೆಯಿದ್ದು, ಕಾಂಕ್ರಿಟ್ ರಸ್ತೆ ನಿರ್ಮಿಸಲು ಯಾವುದೇ ಮರಗಳನ್ನು ಕಡಿಯುವ, ಅರಣ್ಯ ನಾಶಮಾಡುವ ಅಗತ್ಯವಿಲ್ಲ. ಹೊಸ ರಸ್ತೆಯ ನಿರ್ಮಾಣದ ಅಗತ್ಯವೂ ಇಲ್ಲ. ಇರುವ ರಸ್ತೆ ಯನ್ನೇ ಅಭಿವೃದ್ದಿಪಡಿಸಿದರೆ ಸಾಕು. ಅಲ್ಲದೇ, ಅರಣ್ಯ ಇಲಾಖೆಗೆ ಈ ಕಾಮಗಾರಿಗೆ ಅವಕಾಶ ನೀಡಲು ಕಾನೂನಿನಲ್ಲೇ ಅವಕಾಶವಿದೆ. ಅಗತ್ಯ ಬಿದ್ದರೆ ಮರಗಳನ್ನು ಕಡಿದೂ ಅವಕಾಶ ಕಲ್ಪಿಸ ಬಹುದು. ಆದರೆ ಅರಣ್ಯ ಇಲಾಖೆ ಮಾತ್ರ ಈ ಬಗ್ಗೆ ನಿರ್ಲಕ್ಷ ವಹಿಸಿದೆ. ತಾವಾಗಿಯೇ ಹೋಗಿ ಅನುಮತಿ ಪಡೆಯುವಷ್ಟು ಇಲ್ಲಿನ ಜನರು ಶಕ್ತರಾಗಿಲ್ಲ.
ವಿದ್ಯುದ್ದೀಕರಣವೂ ರದ್ದು
ರಾಜೀವ ಗಾಂಧಿ ವಿದ್ಯುದ್ದೀಕರಣ ಯೋಜನೆ ಯಲ್ಲಿ ಇತ್ತಿಲ ಪೇಲ ಪ್ರದೇಶಕ್ಕೆ ಮಂಜೂ ರಾಗಿದ್ದ ವಿದ್ಯುತ್ ಸಂಪರ್ಕ ಯೋಜನೆ ಹಿಂದೆಯೇ ಮಂಜೂರಾಗಿತ್ತು. ಗುತ್ತಿಗೆದಾ ರರು ಕಾಮಗಾರಿ ನಡೆಸಲು ಬಂದಾಗ ಇದೇ ರೀತಿ ಅರಣ್ಯ ಇಲಾಖೆಯವರು ಅಡ್ಡಿಯಾಗಿ ದ್ದರು. ಕಾಮಗಾರಿ ನಡೆಸಲು ಅವಕಾಶ ನೀಡದೆ ಮಂಜೂರಾದ ಕಾಮಗಾರಿಯೂ ರದ್ದಾಗು ವಂತೆ ಮಾಡಿದ್ದರು. ಇದೀಗ ರಸ್ತೆಗೂ ಅರಣ್ಯ ಇಲಾಖೆಯವರೇ ಅಡ್ಡಿಯಾಗುತ್ತಿದ್ದಾರೆ. ಈ ರಸ್ತೆ ಮಧ್ಯೆ ದೊಡ್ಡ ತೊರೆಯೊಂದು ಹರಿಯುತ್ತಿದ್ದು, ಮಳೆಗಾಲದಲ್ಲಿ ಇದನ್ನು ದಾಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಳೆ ಗಾಲದಲ್ಲಿ ಇವರಿಗೆ ಕಾಲ್ನಡಿಗೆಯೇ ಗತಿಯಾಗಿದೆ. ಇಲ್ಲಿ ತಾತ್ಕಾಲಿಕ ವಾಗಿ ಮರದ ಸೇತುವೆಯನ್ನು ಜನರೇ ನಿರ್ಮಿಸಿದ್ದು, ಅದೇ ಜನರಿಗೆ ಆಧಾರವಾಗಿದೆ. ಯಾವುದೇ ರೀತಿಯ ಅನಾರೋಗ್ಯ ಎದುರಾದರೂ ರೋಗಿಗಳನ್ನು ಹೊತ್ತುಕೊಂಡೇ ಬರಬೇಕಾದ ಸ್ಥಿತಿ ಇವರದ್ದಾಗಿದೆ. ಕೆಲ ವರ್ಷಗಳ ಹಿಂದೆ ಯಾವುದೋ ಯೋಜನೆಯಲ್ಲಿ ಸೇತುವೆ ನಿರ್ಮಿಸಲು ದೊಡ್ಡ ಸಿಮೆಂಟ್ ಪೈಪ್ (ಮೋರಿ)ಗಳನ್ನು ಇಲ್ಲಿ ತಂದು ಹಾಕಲಾಗಿದೆ. ಆದರೆ ಈ ವರೆಗೆ ಯಾವುದೇ ಕಾಮಗಾರಿಗಳು ನಡೆದಿಲ್ಲ. ಸಿಮೆಂಟ್ ಪೈಪ್‌ಗಳು ಮಾತ್ರ ಕಾಡಿನ ಮಧ್ಯೆ ಅನಾಥವಾಗಿ ಬಿದ್ದುಕೊಂಡಿವೆ. ಇದಕ್ಕೂ ಅರಣ್ಯ ಇಲಾಖೆ ಅಡ್ಡಿಪಡಿಸಿತ್ತು. ಒಟ್ಟಾರೆಯಾಗಿ ಅರಣ್ಯ ಇಲಾಖೆಯ ಅಡ್ಡಿಪಡಿ ಸುವಿಕೆ ಕಾರಣ ಸವಣಾಲು ಗ್ರಾಮದ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನ ನಿವಾಸಿಗಳು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಂದೆಡೆ ಸರಕಾರ ಅನುದಾನ ಮಂಜೂರು ಮಾಡುತ್ತಿದೆ. ಮತ್ತೊಂದೆಡೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸುವ ಕಾರ್ಯವನ್ನು ಮಾಡುತ್ತಿದೆ. ಈ ರೀತಿಯಾಗಿ ಸರಕಾರಗಳು ಆದಿವಾಸಿಗಳನ್ನು ನಿರಂತರವಾಗಿ ವಂಚಿಸುತ್ತಿವೆ. ಸರಕಾರದ ಇಲಾಖೆಗಳ ನಡುವೆಯೇ ಇಂತಹ ಪರವಾನಿಗೆಗಳ ಕಾರ್ಯಗಳು ನಡೆಯುವಂತಾಗಬೇಕು. ಕೂಡಲೇ ತಾಲೂಕಿನ ವಿವಿಧ ಪ್ರದೇಶಗಳಿಗೆ ಮಂಜೂರಾಗಿರುವ ಕಾಮಗಾರಿಗಳಿಗೆ ಅನುಮತಿ ನೀಡುವ ಕಾರ್ಯವನ್ನು ಅರಣ್ಯ ಇಲಾಖೆ ಕೂಡಲೇ ಮಾಡಬೇಕು. ಇಲ್ಲದಿದ್ದರೆ ನಾವು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ.
-ಜಯಾನಂದ ಪಿಲಿಕಲ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡ