ಹುತಾತ್ಮ ಯೋಧ ವೆಂಕಟ !
ಧಾರಾವಾಹಿ-6
ಅಂದು ಪಪ್ಪು ಎಂದಿನಂತೆ ಶಾಲೆಗೆ ಬಂದಿದ್ದ. ನೋಡಿದರೆ ಶಾಲೆ ತುಂಬಾ ಕಲರವ. ಮೇಷ್ಟ್ರುಗಳಾರೂ ಪಾಠ ಮಾಡುವ ಉದ್ದೇಶವನ್ನು ಹೊಂದಿದಂತೆ ಅವನಿಗೆ ಕಾಣಲಿಲ್ಲ. ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬೇರೆ ಬೇರೆ ಗಣ್ಯರು ಕಾಣಿಸಿಕೊಳ್ಳತೊಡಗಿದ್ದರು. ಶಾಲೆಯ ಅಂಗಳದಲ್ಲೂ ಅಪರಿಚಿತರು ಸೇರಿಕೊಳ್ಳತೊಡಗಿ ದರು. ಮುಖ್ಯವಾಗಿ ಗುರೂಜಿ ಶ್ಯಾಮಭಟ್ಟರ ಜೊತೆಗೆ ಅಪ್ಪಾಜಿಯೂ ಶಾಲೆಯ ಕಚೇರಿಯಲ್ಲಿ ಕಾಣಿಸಿಕೊಂಡರು. ಅಂದರೆ ಏನೋ ವಿಶೇಷವಿರಬೇಕು. ಮುಖ್ಯವಾಗಿ ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವದ ದಿನ ಹೀಗೆ ಗಣ್ಯರೆಲ್ಲ ಶಾಲೆಯಲ್ಲಿ ಕಾಣಿಸುತ್ತಾರೆ. ಗುರೂಜಿಯವರು ಶಾರದ ಪೂಜೆಯ ದಿವಸ ಸಮಾರಂಭ ಹಮ್ಮಿಕೊಳ್ಳುವಾಗಲೂ ಇದೇ ರೀತಿಯಲ್ಲಿ ಗಣ್ಯರು ಸೇರುತ್ತಾರೆ. ಆದರೆ ಇಂದು ಯಾವ ಹಬ್ಬವೂ ಇರುವಂತಿಲ್ಲ. ಹಾಗಾದರೆ ಯಾಕೆ ಇಂತಹ ವಾತಾವರಣ? ಗಂಟೆ ಬಾರಿಸಿ ಅದೆಷ್ಟು ಹೊತ್ತಾದರೂ ಮೇಷ್ಟ್ರುಗಳು ಪುಸ್ತಕದ ಜೊತೆಗೆ ತರಗತಿ ಪ್ರವೇಶಿಸಿಲ್ಲ ಎಂದರೆ, ಏನೋ ಘಟಿಸಿದೆ. ಪಪ್ಪುವಿಗೆ ಅರ್ಥವಾಗಲಿಲ್ಲ. ಇದಕ್ಕೆಲ್ಲ ಉತ್ತರ ಗೊತ್ತಿರುವವಳು ಒಬ್ಬಳೇ. ಅವಳೇ ಜಾನಕಿ. ತನ್ನ ಡೆಸ್ಕಿನಿಂದ ಎದ್ದು ಒಂದೇ ಏಟಿಗೆ ಹಾರಿ, ಅವನು ಜಗಲಿಗೆ ಕಾಲಿಟ್ಟ. ಅಲ್ಲಿ ಕಂಬಕ್ಕೊರಗಿ ಜಾನಕಿ ಗಂಭೀರವಾಗಿ ಯೋಚಿಸುತ್ತಿದ್ದಳು.
‘‘ಜಾನು ಇವತ್ತು ರಜಾನಾ?’’ ಅವನು ಖುಷಿಯಿಂದ ಕೇಳಿದ.
ಆಕೆಯ ಕೆನ್ನೆಯನ್ನು ಅದಾವುದೋ ವಿಷಾದ ಮೆತ್ತಿಕೊಂಡಿತ್ತು. ವಿಷಯ ಗಂಭೀರವಾದದ್ದು ಎನ್ನುವುದು ಪಪ್ಪುವಿಗೆ ಅರ್ಥವಾಗಿಬಿಟ್ಟಿತ್ತು.
‘‘ನಮ್ಮೂರಿನ ಯೋಧ ವೆಂಕಟ ಅವರ ಮೃತದೇಹ ಇವತ್ತು ಬರುತ್ತಾ ಇದೆಯಂತೆ....’’
ಪಪ್ಪುವಿಗೆ ಅರ್ಥವಾಗಲಿಲ್ಲ ‘‘ಯಾರು ವೆಂಕಟ?’’
‘‘ಛೇ...ಅಷ್ಟೂ ಗೊತ್ತಿಲ್ವಾ? ನಿನ್ನಪ್ಪ ಮೇಷ್ಟ್ರು ಬೇರೆ. ಅವರು ಹೇಳಿಲ್ವಾ ನಿನಗೆ?’’ ಜಾನಕಿ ಆಕ್ಷೇಪಿಸಿದಳು.
ಪಪ್ಪು ಕಂಗಾಲಾದ ‘‘ಮನೆಯಲ್ಲಿ ಏನೋ ಹೇಳಿದಂತಿತ್ತು. ನನಗೆ ಸರಿಯಾಗಿ ಕೇಳಿಸಿರಲಿಲ್ಲ’’ ಪಪ್ಪು ಸಮಜಾಯಿಷಿ ನೀಡಿದ. ‘‘ನಮ್ಮ ಊರಿನ ವೀರಯೋಧ...ವೆಂಕಟ ಪಾಕಿಸ್ತಾನಿಗಳ ವಿರುದ್ಧ ಹೋರಾಡುತ್ತಾ ಹುತಾತ್ಮನಾಗಿ ದ್ದಾನೆ....ನೂರು ಪಾಕಿಸ್ತಾನಿಗಳನ್ನು ಒಬ್ಬನೇ ಕೊಂದು, ಜೈ ಭಾರತ ಮಾತೆ, ಜೈ ಹಿಂದ್ ಎಂದು ಘೋಷಣೆ ಕೂಗಿ ರಣರಂಗದಲ್ಲಿ ಹುತಾತ್ಮನಾದನಂತೆ....ಅವನ ಮೃತದೇಹ ಇವತ್ತು ಊರಿಗೆ ಬರ್ತಾ ಇದೆ...’’
ಪಪ್ಪುವಿಗೆ ನಾಚಿಕೆಯಾಯಿತು. ಇಷ್ಟು ಮಹತ್ವದ ವಿಷಯ ನನಗೆ ಗೊತ್ತಿರಲಿಲ್ಲವಲ್ಲ. ಅಮ್ಮನಿಗಂತೂ ಏನೂ ಗೊತ್ತಿಲ್ಲ. ಅಪ್ಪನಾದರೂ ಹೇಳಬಾರದೇ? ಸಂಕಟವಾಯಿತು ಅವನಿಗೆ. ನನ್ನ ಗೌರವವೆಲ್ಲ ಜಾನಕಿಯ ಮುಂದೆ ಹರಾಜಾಯಿತು.
ಜಾನಕಿಗಾದರೂ ಇದೆಲ್ಲ ಹೇಗೆ ಗೊತ್ತಾಗುತ್ತದೆ? ಬಹುಶಃ ಆಕೆಯ ತಂದೆ ಗುರೂಜಿ ಹೇಳಿರಬೇಕು. ಜಾನಕಿ ಹೇಳುತ್ತಲೇ ಇದ್ದಳು.
‘‘....ಪಾಕಿಸ್ತಾನದ ರಕ್ಕಸರು ಅವನ ಬೆನ್ನ ಹಿಂದೆ ನಿಂತು ಗುಂಡು ಹಾರಿಸಿದರಂತೆ...ಆದರೆ ಅವನು ಅವರ ಯುದ್ಧ ವ್ಯೆಹದೊಳಗೆ ನುಗ್ಗಿ ಎಲ್ಲವನ್ನೂ ನುಚ್ಚುನೂರುಗೊಳಿಸಿದನಂತೆ. ಒಟ್ಟು 25 ಗುಂಡುಗಳು ಅವನ ದೇಹವನ್ನು ಹೊಕ್ಕರೂ ಅವನು ಕೆಳಗುರುಳಲಿಲ್ಲವಂತೆ...ಒಬ್ಬನೇ ನೂರು ಪಾಕಿಸ್ತಾನಿಗಳನ್ನು ಬಲಿ ತೆಗೆದುಕೊಂಡನಂತೆ. ಇಡೀ ಪಾಕಿಸ್ತಾನವೇ ಅವನ ಶೌರ್ಯಕ್ಕೆ ಬೆಚ್ಚಿ ಬಿದ್ದಿತಂತೆ....’’
ಜಾನು ಯುದ್ಧರಂಗವನ್ನು ವರ್ಣಿಸುತ್ತಿದ್ದಂತೆಯೇ ಪಪ್ಪುವಿನ ಕಣ್ಣ ಮುಂದೆ ತನ್ನ ತಂದೆ ಹೇಳುತ್ತಿದ್ದ ಮಹಾಭಾರತದ ಅಭಿಮನ್ಯುವಿನ ಕತೆ ಕುಣಿಯುತ್ತಿತ್ತು. ಪಪ್ಪು ಆಕ್ರೋಶಗೊಂಡಿದ್ದ. ಜಾನುವಿನ ಕಣ್ಣನ್ನು ದಿಟ್ಟಿಸುತ್ತಾ ಹೇಳಿದ ‘‘ನಾನು ದೊಡ್ಡವನಾದ ಮೇಲೆ ನಮ್ಮೂರಿನ ವೆಂಕಟನ ಸಾವಿಗೆ ಸೇಡು ತೀರಿಸುತ್ತೇನೆ...ಎಲ್ಲ ಪಾಕಿಸ್ತಾನಿಗಳನ್ನೂ ಸಾಯಿಸುತ್ತೇನೆ...’’
‘‘ಅಲ್ಲಿ ನೋಡು ನಿನ್ನ ಸ್ನೇಹಿತ ಕಬೀರ್...ಇವತ್ತು ತುಂಬಾ ಖುಷಿಯಲ್ಲಿದ್ದಾನೆ...’’ ಜಾನಕಿ ಕೈ ಮಾಡಿ ತೋರಿಸಿದಳು.
ಪಪ್ಪು ತಲೆಯೆತ್ತಿ ಕಬೀರನಿದ್ದ ಕಡೆ ನೋಡಿದ. ಅವನೇನು ಸಂತೋಷದಲ್ಲಿದ್ದಂತೆ ಕಾಣುತ್ತಿರಲಿಲ್ಲ. ಚೀಲದೊಳಗೆ ಅದೇನೋ ಹುಡುಕಾಡುತ್ತಿದ್ದ ಹಾಗಿತ್ತು. ಆದರೂ ಜಾನಕಿ ಹೇಳಿದ ಮೇಲೆ ಅದರಲ್ಲಿ ಸತ್ಯ ಇರಲೇಬೇಕು. ಅವನು ಬಲವಾಗಿ ಹೇಳಿದ ‘‘ಕಬೀರ ನನ್ನ ಸ್ನೇಹಿತ ಅಲ್ಲ’’
ಅಷ್ಟರಲ್ಲಿ ಕಚೇರಿಯಿಂದ ಸುಬ್ಬಣ್ಣ ಮೇಷ್ಟ್ರು ಬರುತ್ತಿರುವುದು ಕಂಡು ಇಬ್ಬರು ಕ್ಲಾಸಿನೊಳಗೆ ಪ್ರವೇಶಿಸಿದರು. ಮಕ್ಕಳೆಲ್ಲರೂ ಹೋ ಎನ್ನುತ್ತಾ ಕ್ಲಾಸಿನೊಳಗೆ ನುಗ್ಗಿದರು. ಮೇಷ್ಟ್ರು ತರಗತಿಯೊಳಗೆ ಪ್ರವೇಶಿಸಿದರು. ಅವರ ಕೈಯಲ್ಲಿ ಪುಸ್ತಕ ಇರಲಿಲ್ಲ. ನಾಗರಬೆತ್ತವೂ ಇರಲಿಲ್ಲ. ಮುಖದಲ್ಲಿ ಸಿಟ್ಟಿದ್ದಿರಲಿಲ್ಲ. ಒಂದು ರೀತಿಯ ವಿಷಾದವಿತ್ತು. ಮೆದುವಾಗಿ ಮಾತಿಗೆ ಶುರು ಹಚ್ಚಿದರು ‘‘ಮಕ್ಕಳೇ.....’’ ಎಂದು ಒಂದು ಅರೆಕ್ಷಣ ವೌನವಾದರು.
ಮಕ್ಕಳೆಲ್ಲ ಅವರ ಬಾಯಿಯಿಂದ ಹೊರಬೀಳುವ ಮಾತಿಗಾಗಿ ಕಣ್ಣು, ಬಾಯಗಲಿಸಿ ಕಾದರು.
‘‘ಮಕ್ಕಳೇ...ಎಲ್ಲರೂ ಹೊರಗೆ ಸಾಲಾಗಿ ನಿಲ್ಲಬೇಕು. ಇನ್ನೇನು ನಮ್ಮೂರಿನ ಹೆಮ್ಮೆಯ ಪುತ್ರ, ಭಾರತ ಮಾತೆಯ ವೀರ ಸೇನಾನಿ, ಹುತಾತ್ಮ ವೆಂಕಟ ಅವರ ಮೃತದೇಹ ಶಾಲೆಯ ಮೈದಾನಕ್ಕೆ ಬರುತ್ತದೆ. ನೀವೆಲ್ಲರೂ ಸಾಲಾಗಿ ಹೋಗಿ ಆ ಪುಣ್ಯಾತ್ಮನಿಗೆ ನಮಸ್ಕರಿಸಬೇಕು. ಯಾರೂ ಗದ್ದಲ ಮಾಡಬಾರದು, ಮಾತನಾಡಬಾರದು. ಹಾಗೆ ಮಾಡಿದ್ದೇ ಆದಲ್ಲಿ ಹುತಾತ್ಮನಿಗೆ ಅಗೌರವ ಸಲ್ಲಿಸಿದಂತಾಗುತ್ತದೆ. ನೀವೆಲ್ಲರೂ ಮುಂದೆ ದೊಡ್ಡವರಾಗಿ ಹುತಾತ್ಮ ವೆಂಕಟನಂತೆ ತಾಯ್ನಾಡಿಗಾಗಿ ಹೋರಾಡುವ ವೀರ ಸೈನಿಕರಾಗಬೇಕು...’’
ಮಕ್ಕಳು ವೌನವಾಗಿ ಆಲಿಸುತ್ತಿದ್ದರು. ಅವರಿಗೆ ಎಲ್ಲವೂ ಅರ್ಥವಾಗಿರಲಿಲ್ಲ. ಆದರೆ ವಿಷಯ ಗಂಭೀರವಾದದ್ದು ಎನ್ನುವುದು ಮನವರಿಕೆಯಾಗಿತ್ತು. ಸುಬ್ಬಣ್ಣ ಮೇಷ್ಟ್ರು ವೆಂಕಟನ ಕತೆಯನ್ನು ಹೇಳುವುದಕ್ಕೆ ಆರಂಭಿಸಿದರು.
‘‘ವೆಂಕಟ ಇದೇ ಶಾಲೆಯ ನನ್ನ ಹೆಮ್ಮೆಯ ಶಿಷ್ಯ. ನನ್ನ ಮೇಲೆ ವಿಶೇಷ ಪ್ರೀತಿ. ನಾನು ಸುಭಾಶ್ಚಂದ್ರ ಬೋಸ್, ಭಗತ್ ಸಿಂಗ್, ರಾಣಾಪ್ರತಾಪರ ಕತೆಗಳನ್ನು ಹೇಳುತ್ತಿದ್ದರೆ ಅವನು ಕಣ್ಣೀರು ಸುರಿಸುತ್ತಿದ್ದ. ಆಟದಲ್ಲಿ, ಪಾಠದಲ್ಲಿ ಸದಾ ಮುಂದು...ಪಾಕಿಸ್ತಾನದ ಹೆಸರೆತ್ತಿದರೆ ಕೆಂಡಾಮಂಡಲವಾಗುತ್ತಿದ್ದ...ಸೈನಿಕನಾಗಿ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವುದೇ ನನ್ನ ಗುರಿ ಎಂದು ಹೇಳುತ್ತಿದ್ದ. ಬಾಲ್ಯದಲ್ಲೇ ಅವನೊಂದು ಗುರಿ ಇಟ್ಟಿದ್ದ ಕಾರಣ ಇದೀಗ ಅವನು ಅದನ್ನು ಸಾಧಿಸಿದ್ದಾನೆ...ನೀವೂ ನಿಮ್ಮ ಬದುಕಿನಲ್ಲಿ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು....’’ ಎನ್ನುತ್ತಾ ಮೇಷ್ಟ್ರು ವೆಂಕಟನ ಕತೆಯನ್ನು ಹೇಳುತ್ತಿದ್ದರೆ ಮಕ್ಕಳೆಲ್ಲ ಕಣ್ಣೀರಾದರು.
ತುಸು ಹೊತ್ತಲ್ಲೇ ಶಾಲೆಯ ಅಂಗಳದಲ್ಲಿ ವಾಹನಗಳ, ಜನಗಳ ಗದ್ದಲ....ಮೆರವಣಿಗೆ...‘ಭಾರತ್ ಮಾತಾ ಕಿ ಜೈ’ ‘ಪಾಕಿಸ್ತಾನಕ್ಕೆ ದಿಕ್ಕಾರ’ ‘ವೀರ ವೆಂಕಟನಿಗೆ ಜೈ’ ಮೊದಲಾದ ಘೋಷಣೆಗಳು.....ಮಕ್ಕಳೆಲ್ಲ ತರಗತಿಯ ಗಡಿಯನ್ನು ದಾಟಿ ಜಗಲಿಯಲ್ಲಿ ನಿಂತು ನೋಡತೊಡಗಿದರು. ಅಷ್ಟ್ರರಲ್ಲಿ ಮೇಷ್ಟ್ರು ‘ವಿಸಿಲ್’ ಊದುತ್ತಾ ‘ಮಕ್ಕಳೇ ಸಾಲಾಗಿ ನಿಲ್ಲಿ...ಸಾಲಾಗಿ ನಿಲ್ಲಿ...’ ಎಂದು ಮಿಲಿಟರಿ ಅಧಿಕಾರಿಯಂತೆ ಬೊಬ್ಬೆ ಹೊಡೆಯ ತೊಡಗಿದರು. ಮಕ್ಕಳೆಲ್ಲ ಸಾಲಾಗಿ ನಿಲ್ಲತೊಡಗಿದರು. ಜಾನಕಿಯ ಹಿಂದೆ ಪಪ್ಪು ಸೇರಿಕೊಂಡ. ಕಬೀರ ಓಡೋಡುತ್ತಾ ಪಪ್ಪುವಿನ ಹಿಂದೆ ಸೇರಿಕೊಂಡ. ಆದರೆ ಅದು ಪಪ್ಪುವಿಗೆ ಇಷ್ಟವಾಗಲಿಲ್ಲ.
ರಾಷ್ಟ್ರಧ್ವಜದಿಂದ ಮುಚ್ಚಿದ್ದ ಪೆಟ್ಟಿಗೆಗೆ ಇಣುಕಲು ಪಪ್ಪು ತುಂಬಾ ಪ್ರಯತ್ನಪಟ್ಟ. ಆದರೆ ವೆಂಕಟನ ಮುಖ ಕಾಣಲೇ ಇಲ್ಲ. ಆದರೆ ಜಾನಕಿಗೆ ಆತನ ಮುಖ ಕಂಡಿರಬೇಕು. ಅವಳು ಅಳುತ್ತಿದ್ದಳು. ಪೆಟ್ಟಿಗೆಯನ್ನು ಎರಡೂ ಕೈಗಳಿಂದ ಮುಟ್ಟಿ ತನ್ನ ಕಣ್ಣಿಗೆ ಒತ್ತಿಕೊಂಡಳು. ಪಪ್ಪು ಕೂಡ ಹಾಗೆಯೇ ಮಾಡಿದ. ಇದ್ದಕ್ಕಿದ್ದಂತೆಯೇ ಅದೇನು ತೋಚಿತೋ, ಜಾನಕಿ ಮೆಲ್ಲಗೆ ಪಪ್ಪುವಿಗೆ ಕೇಳುವಂತೆ ಘೋಷಿಸಿಯೇ ಬಿಟ್ಟಳು ‘‘ನಾನು ಮದುವೆಯಾಗುವ ಗಂಡು ಭಾರತ ಮಾತೆಗಾಗಿ ಹೋರಾಡುವ ಸೈನಿಕನಾಗಿರಬೇಕು. ಸೈನಿಕನನ್ನಲ್ಲದೆ ಇನ್ನಾರನ್ನೂ ಮದುವೆಯಾಗಲಾರೆ...’’
ಅದನ್ನು ಕೇಳಿದ್ದೇ ಪಪ್ಪು ರೋಮಾಂಚಿತನಾದ. ಅವನೂ ಮನದಲ್ಲೇ ಘೋಷಿಸಿಕೊಂಡ ‘‘ನಾನು ಸೈನಿಕನಾಗಿಯೇ ತೀರುತ್ತೇನೆ....’’
ಹೀಗೆ ಪಪ್ಪುವಿನೊಳಗೆ ಒಬ್ಬ ಪ್ರೇಮಿಯೂ, ಯೋಧನೂ ಏಕಕಾಲದಲ್ಲಿ ಹುಟ್ಟುವುದಕ್ಕೆ ಬಜತ್ತೂರಿನ ಹೆಮ್ಮೆಯ ವೀರಯೋಧ, ಹುತಾತ್ಮ ವೆಂಕಟ ನಿಮಿತ್ತವಾಗಿ ಬಿಟ್ಟ. ಅಷ್ಟರಲ್ಲಿ ಯಾರೋ ಜೋರಾಗಿ ಚೀರಾಡುತ್ತಿರು ವುದು ಕೇಳಿ ಪಪ್ಪು ಬೆಚ್ಚಿ ಬಿದ್ದ. ದೂರದಲ್ಲಿ ಮಹಿಳೆಯೊ ಬ್ಬಳು ಹಣೆ ಚಚ್ಚಿಕೊಂಡು ಅಳುತ್ತಿದ್ದಳು. ಇನ್ನಾರೋ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆಕೆಯ ತಲೆಗೂದಲು ಕೆದರಿತ್ತು. ಸೆರಗು ಹರಿದಿತ್ತು. ಮುಖ ಒಣಗಿತ್ತು. ಆಕೆ ಕಾಲನ್ನು ಎಳೆಯುತ್ತಾ ಶವಪೆಟ್ಟಿಗೆಯ ಹತ್ತಿರ ಬರುತ್ತಿದ್ದಳು. ಆಕೆಯ ಜೊತೆಗೆ ಒಬ್ಬ ಪುಟ್ಟ ಬಾಲಕಿ. ಅದೂ ಅಳುತ್ತಿತ್ತು. ಜಾನಕಿ ಹೇಳಿದಳು ‘‘ಅವಳು ವೆಂಕಟನ ಪತ್ನಿ. ಆಕೆಯ ಪಕ್ಕ ಪುಟ್ಟ ಬಾಲಕಿ ಇದ್ದಾಳಲ್ಲ...ಅದು ಆಕೆಯ ಮಗಳು. ವೆಂಕಟನ ಪತ್ನಿ ತುಂಬು ಗರ್ಭಿಣಿಯಂತೆ....’’
ಪಪ್ಪು ಆತಂಕದಿಂದ ಜಾನಕಿಯ ಮುಖವನ್ನೇ ನೋಡಿದ. ಅವನಿಗೆ ನಿಜಕ್ಕೂ ಅಳು ಬಂದಿತ್ತು.
ಅಂದು ರಾತ್ರಿ ನಿದ್ರೆಯಲ್ಲಿ ಪಪ್ಪುವಿನ ಕನಸಲ್ಲಿ ವೆಂಕಟನ ಪತ್ನಿಯ ಮುಖ ಮಾಸಲಾಗಿ ಕಾಣಿಸಿಕೊಂಡಿತ್ತು. ಆಕೆ ಕಾಲೆಳೆಯುತ್ತಾ ಅವನೆಡೆಗೆ ಬರುವುದಕ್ಕೆ ತವಕಿಸುತ್ತಿದ್ದಳು. ಪಪ್ಪು ಅಲ್ಲಿಂದ ಓಡುವುದಕ್ಕೆ ಯತ್ನಿಸುತ್ತಿದ್ದ. ಅವಳು ನಿಧಾನಕ್ಕೆ ಹತ್ತಿರವಾಗುತ್ತಿದ್ದಂತೆ, ಇವನು ಬೇರು ಬಿಟ್ಟ ಕಾಲನ್ನು ಎತ್ತಿ ಹಿಂದಕ್ಕೆ ಇಡಲು ಹವಣಿಸುತ್ತಿದ್ದ. ಸಾಧ್ಯವಾಗುತ್ತಿಲ್ಲ. ಕಾಲುಗಳೆರಡೂ ಮರಗಟ್ಟಿವೆ.
ಅವನು ಜಾನಕಿಯನ್ನು ಜೋರಾಗಿ ಸಹಾಯಕ್ಕೆ ಕರೆ ಯಲು ಯತ್ನಿಸುತ್ತಿದ್ದ. ಆದರೆ ಧ್ವನಿಯೇ ಹೊರಡುತ್ತಿಲ್ಲ. ಅಲ್ಲೆಲ್ಲೂ ಜಾನಕಿಯಿಲ್ಲ. ಕೆದರಿದ ಕೂದಲ ಜೊತೆಗೆ ವೆಂಕಟನ ಪತ್ನಿ ಹತ್ತಿರವಾಗುತ್ತಿದ್ದಾಳೆ. ಆಕೆಯ ಹಿಂದೆ ಆಕೆಯ ಹೆಣ್ಣು ಮಗಳು. ಹರಕಲು ಲಂಗ, ಹರಿದ ರವಿಕೆ ಧರಿಸಿದವಳು. ಮೂಗು ಸಿಂಬಳ ಸುರಿಸುತ್ತಿತ್ತು. ಅವಳು ‘ಅಪ್ಪಾ...’ ಎಂದು ಅಳುತ್ತಿದ್ದಳು.
ಪಪ್ಪುವಿಗೆ ಭಯದಿಂದ ಉಸಿರು ನಿಂತಂತಾಯಿತು. ಅವನು ‘‘ಅಮ್ಮಾ...’’ ಎಂದು ಚೀರಿದ.
ನಿದ್ದೆಗೆ ಅಣಿಯಾಗುತ್ತಿದ್ದ ಲಕ್ಷ್ಮಮ್ಮ ಆ ಕೂಗು ಕೇಳಿ ಮಗನ ಬಳಿಗೆ ಧಾವಿಸಿದರು. ‘ಏನಾಯ್ತೋ? ಕನಸು ಬಿತ್ತೇನೋ?’ ಲಕ್ಷ್ಮಮ್ಮ ಮಗನನ್ನು ತಡವಿ ಕೇಳಿದರು.
ಪಪ್ಪುವಿಗೆ ಎಚ್ಚರವಾಗಿ, ಬಿಟ್ಟಗಣ್ಣಲ್ಲಿ ತಾಯಿಯನ್ನೇ ನೋಡತೊಡಗಿದ. ಈಗ ಸಮಾಧಾನ. ‘‘ಕೆಟ್ಟ ಕನಸು ಬಿತ್ತೇನೋ...’’ ಲಕ್ಷ್ಮಮ್ಮ ಗೊಣಗಿದರು.
ಪಪ್ಪು ಏನನ್ನೋ ಹೇಳುವುದಕ್ಕೆ ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ. ತಾಯಿಯನ್ನು ಬಲವಾಗಿ ತಬ್ಬಿಕೊಂಡ. ‘‘ಹೇಳಿದ್ದೊಂದೂ ಕೇಳುವುದಿಲ್ಲ. ಎಲ್ಲೆಲ್ಲೋ ತಿರುಗಾಡಿ ಬರುವುದು. ಯಾರ ಕೆಟ್ಟ ದೃಷ್ಟಿ ಬಿತ್ತೋ....ಆ ಬ್ಯಾರಿ ಹುಡುಗನ ಸಹವಾಸ ಮೊದಲು ನಿಲ್ಲಿಸು’’ ಎಂದು ಲಕ್ಷ್ಮಮ್ಮ ಮಗನನ್ನು ತಟ್ಟಿ ಸಮಾಧಾನ ಮಾಡ ತೊಡಗಿದರು. ತಾಯಿಯನ್ನು ತಬ್ಬಿಕೊಂಡೇ ಮತ್ತೆ ನಿದ್ದೆಗೆ ಶರಣಾದ.
ಇದಾದ ಒಂದು ವಾರದಲ್ಲಿ ಅವನು ಊರಲ್ಲಿ ಒಂದು ವಿಶೇಷ ಕಂಡ. ಶಾಲೆಯ ಪಕ್ಕದಲ್ಲೇ ಮುಸ್ಲಿಮರ ಮದ್ರಸ ಇದೆ. ಅಲ್ಲಿ ಬಹಳಷ್ಟು ಟೊಪ್ಪಿಧಾರಿಗಳು ನೆರೆದಿದ್ದರು. ಅಷ್ಟೇ ಅಲ್ಲ, ಅಲ್ಲಿಂದ ಊರಿನುದ್ದಕ್ಕೂ ‘‘ಭಾರತ ಮಾತೆಗೆ ಜೈ’’ ‘‘ಪಾಕಿಸ್ತಾನಿ ಉಗ್ರರಿಗೆ ಧಿಕ್ಕಾರ’’ ಎಂದು ಕೂಗುತ್ತಾ ಮೆರವಣಿಗೆಯೊಂದು ಹೊರಟಿತು. ಅವರೆಲ್ಲ ಅಂಗಡಿ ಅಂಗಡಿಗಳ ಮುಂದೆ ನಿಂತು ಹಣ ಸಂಗ್ರಹಿಸುತ್ತಿದ್ದರು. ‘ಪ್ರಧಾನಿಯವರ ಕಾರ್ಗಿಲ್ ಪರಿಹಾರ ನಿಧಿಗೆ ಹಣ ಸಂಗ್ರಹ’ ಎಂಬ ದೊಡ್ಡ ಬ್ಯಾನರನ್ನು ಕೂಡ ಹಿಡಿದುಕೊಂಡಿದ್ದರು.
‘‘ಅರೇ...ಇವರೇಕೆ ಮೆರವಣಿಗೆ ಹೊರಟಿದ್ದಾರೆ...ಇವರು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಬೇಕಿತ್ತಲ್ಲ...?’’ ಎಂದು ಅವನು ತಲೆಕೆಡಿಸಿಕೊಳ್ಳ ತೊಡಗಿದ.
(ರವಿವಾರದ ಸಂಚಿಕೆಗೆ)