ವಚನಕಾರರಿಂದ ಆಧುನಿಕ ಸಾಹಿತ್ಯವನ್ನು ಮೀರಿಸುವ ಸಾಹಿತ್ಯಕೃಷಿ: ವೈದೇಹಿ
ಮಂಗಳೂರು, ಫೆ.10: ಯಾವುದೇ ಆಧುನಿಕ ಸಾಹಿತ್ಯವನ್ನು ಮೀರಿಸುವ ಸಾಹಿತ್ಯವನ್ನು ಅಕ್ಕ ಮಹಾದೇವಿ ಸೇರಿದಂತೆ ವಚನಕಾರರು ಬಹಳ ಹಿಂದೆಯೇ ರಚಿಸಿದ್ದಾರೆ ಎಂದು ಖ್ಯಾತ ಸಾಹಿತಿ ವೈದೇಹಿ ಅಭಿಪ್ರಾಯಿಸಿದರು.
ಸಂತ ಆ್ಯಗ್ನೆಸ್ ಕಾಲೇಜು(ಸ್ವಾಯತ್ತ) ಕನ್ನಡ ಹಾಗೂ ಗ್ರಂಥಾಲಯ ವಿಭಾಗ, ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಆಕಾಶವಾಣಿ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಇತ್ತೀಚಿನ ವಿದ್ಯಮಾನಗಳು’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಕ್ಕ ಮಹಾದೇವಿಯಂತಹ ವಚನಕಾರರು ರಚಿಸಿದ ಕೃತಿಗಳನ್ನು ಹಿಂದಿನ ಕಾಲದ ಸಾಹಿತ್ಯ ದೂರ ಇಡಲು ಸಾಧ್ಯವಿಲ್ಲ. ಈ ಕೃತಿಗಳು ನಮ್ಮ ಇಂದಿನ ಸಮಾಜದ ಹುಳುಕುಗಳನ್ನು ಎತ್ತಿ ತೋರುತ್ತವೆ ಮತ್ತು ಸಾರ್ವಕಾಲಿಕ ವೌಲ್ಯವನ್ನು ಸಾರುತ್ತವೆ. ಮಹಿಳಾ ಸಾಹಿತಿಗಳು ತಮ್ಮ ಕೃತಿಗಳ, ಮೂಲಕ ಆತ್ಮಕತೆಗಳನ್ನು ಬರೆಯುವ ಮೂಲಕ ಸಮಾಜದಲ್ಲಿ ನಮ್ಮ ಧ್ವನಿಯೂ ಇದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು.
ಪ್ರಸಕ್ತ ಹೊರಗೆ ಹೋದ ಹೆಣ್ಣು ಮಗು ಸುರಕ್ಷಿತವಾಗಿ ಹಿಂದಿರುಗಿ ಬರಲಾಗದ ಸಮಾಜ ನಮ್ಮ ಸುತ್ತ ಸೃಷ್ಟಿಯಾಗಿದೆ. ಈ ಸನ್ನಿವೇಶದಲ್ಲಿ ಮನುಷ್ಯರನ್ನು ಪರಸ್ಪರ ಒಂದುಗೂಡಿಸುವ ಸಾಹಿತ್ಯ ಕೃತಿಗಳು ದೀಪ ಹಚ್ಚುವ ರೀತಿಯಲ್ಲಿ ನಮ್ಮ ನಡುವೆ ಮೂಡಿ ಬರಬೇಕಾಗಿದೆ ಎಂದು ವೈದೇಹಿ ನುಡಿದರು.
ಹೆಣ್ಣು ಮಕ್ಕಳ ಬಗ್ಗೆ ಅಪಕಲ್ಪನೆ ಸೃಷ್ಟಿಯಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ಸುತ್ತಮುತ್ತ ಏನು ನಡೆಯುತ್ತಿವೆ ಎಂಬ ಕುತೂಹಲ, ಕಾತರವನ್ನು ಇಟ್ಟುಕೊಂಡು ನಾವು ಕೃತಿಗಳನ್ನು ರಚಿಸಬೇಕು.ಸಮಾಜದಲ್ಲಿ ಹಲವು ಮಹಿಳೆಯರು ತಮ್ಮ ನೋವು ನಲಿವುಗಳನ್ನು ಕೃತಿಗಳಲ್ಲಿ ದಾಖಲಿಸಿದ್ದರೂ ನಾವು ಮತ್ತೆ ನಮ್ಮ ಅನುಭವವಗಳನ್ನು ದಾಖಲಿಸಬೇಕಾಗಿದೆ. ಏಕೆಂದರೆ ನಾವು ಇಲ್ಲಿ ಉಸಿರಾಡಿಕೊಂಡು ಬದುಕಿದ್ದೇವೆ. ಸಾಹಿತ್ಯ ತಮ್ಮ ಇರುವಿಕೆಯ ಗುರುತು, ಉಸಿರಾಡುತ್ತಿರುವುದರ ಸಂಕೇತವಾಗಿದೆ ಎಂದರು.
ಹಿಂದಿನ ಮಹಿಳೆಯರು ಅಡುಮನೆಯಲ್ಲೇ ಇದ್ದುಕೊಂಡು ಪ್ರಮುಖವಾದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಈಗಿನ ಮಹಿಳೆಯರು ಅಡುಗೆ ಮನೆಯನ್ನು ಬಿಟ್ಟು ಹೊರ ಬಂದಿದ್ದಾರೆ.ಸಾಕಷ್ಟು ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ವರ್ತಮಾನದ ಘಟನೆಗಳನ್ನು ತೆರೆದ ಕಣ್ಣುಗಳಿಂದ ನೋಡಿ ತಮ್ಮ ಕೃತಿಗಳನ್ನು ರಚಿಸಬೇಕಾದ ಅಗತ್ಯವಿದೆ ಎಂದು ವೈದೇಹಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕಿ ಎನ್.ಉಷಾಲತಾ, ಸೈಂಟ್ ಆ್ಯಗ್ನೆಸ್ ಕನ್ನಡ ಸಂಘದ ಸಂಚಾಲಕ ಡಾ.ಸಂಪೂರ್ಣಾನಂದ ಬಳ್ಕೂರ್, ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕ ಪಿ.ಸೂರ್ಯನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಸ್ವೀನಾ ಎ.ಸಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.