ಬುರ್ಖಾ: ಸಂಘ ಪರಿವಾರ ಸೃಷ್ಟಿಸಿದ ಹೊಸ ವಿವಾದ
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆಂದು ಜನರ ಕಣ್ಣಿಗೆ ಮಣ್ಣೆರಚ್ಚಿದ್ದಾಯಿತು. ಮಂದಿರದ ಹೆಸರಿಗೆ ವೋಟು ಗಿಟ್ಟುವುದಿಲ್ಲ ಎಂದು ಗೊತ್ತಾದಾಗ, ಮತಾಂತರ, ಗೋರಕ್ಷಾ ಅಭಿಯಾನ, ಲವ್ ಜಿಹಾದ್, ಬಾಬಾ ಬುಡಾನ್‌ಗಿರಿ ಹೀಗೆ ವಿವಾದಗಳ ವಿವಾದ ಸೃಷ್ಟಿಸಿ ಭಾರತೀಯರನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಹುನ್ನಾರಗಳೆಲ್ಲ ವಿಫಲವಾಗುತ್ತಲೇ ಬಂದವು. ಯಾವುದಕ್ಕೂ ಜಗ್ಗದ ಈ ಸೌಹಾರ್ದದ ಕೋಟೆಯನ್ನು ಒಡೆಯಲು ಸಂಘ ಪರಿವಾರ ಈಗ ‘ಬುರ್ಖಾ ವಿವಾದ’ ಎಂಬ ಹೊಸ ವಿವಾದ ಸೃಷ್ಟಿಸಿದೆ. ಬುರ್ಖಾ ತೊಟ್ಟು ಶಾಲಾಕಾಲೇಜಿಗೆ ಬರುವ ಮುಸ್ಲಿಂ ಹೆಣ್ಣುಮಕ್ಕಳ ಪ್ರಶ್ನೆಯನ್ನೇ ದೊಡ್ಡದು ಮಾಡಿ ಹಿಂದೂ ವೋಟ್ ಬ್ಯಾಂಕ್ ನಿರ್ಮಿಸಲು ಅದು ಹುನ್ನಾರ ನಡೆಸಿದೆ. ಈ ಹುನ್ನಾರದ ಆಳ ಅಗಲ ಅರಿಯದ ನಮ್ಮ ಕೆಲ ಪ್ರಗತಿಪರ ಗೆಳೆಯರು ಕೂಡ ಸಂಘ ಪರಿವಾರ ಸೃಷ್ಟಿಸಿದ ಕೃತಕ ಸಮಸ್ಯೆ ಸುತ್ತ ಗಾಣದ ಎತ್ತಿನಂತೆ ಸುತ್ತುತ್ತಿದ್ದಾರೆ.
ಯಾವುದೇ ವ್ಯಕ್ತಿ ಗಂಡಸು ಅಥವಾ ಹೆಂಗಸು ಆಗಿರಲಿ ತನ್ನಿಷ್ಟದಂತೆ ಬದುಕುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಧರ್ಮದ ಹೆಸರಿನಲ್ಲಿ ಯಾವುದೇ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೃತ್ಯಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಆದರೆ ಭಾರತದಂತಹ ಬಹುರಾಷ್ಟ್ರೀಯ, ಬಹುಧರ್ಮೀಯ ಮತ್ತು ಬಹುಸಂಸ್ಕೃತಿಯ ದೇಶದಲ್ಲಿ ವ್ಯಕ್ತಿ ಸ್ವಾತಂತ್ರ್ಯವೂ ಒಮ್ಮೊಮ್ಮೆ ಚರ್ಚೆಯ ವಿಷಯವಾಗುತ್ತದೆ. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರ ಮಾಡಲು ಹೊರಟಿರುವ ಸಂಘ ಪರಿವಾರ ತನ್ನ ಕಾರ್ಯಸೂಚಿಯ ಭಾಗವಾಗಿ ಈಗ ಬುರ್ಖಾ ವಿವಾದ ಕೈಗೆತ್ತಿಕೊಂಡಿದೆ. ಇತ್ತೀಚಿನ 5-6 ತಿಂಗಳಲ್ಲಿ ಕರ್ನಾಟಕದಲ್ಲಿ ಅಲ್ಲಲ್ಲಿ ಇದು ವಿವಾದದ ಸದ್ದು ಮಾಡುತ್ತಿದೆ.
ಬುರ್ಖಾ ಸೇರಿದಂತೆ ಯಾವುದೇ ಉಡುಪನ್ನು ಧರಿಸಬೇಕು ಅಥವಾ ಧರಿಸಬಾರದು ಎಂಬುದು ಆಯಾ ವ್ಯಕ್ತಿಯ ವಿವೇಚನೆಗೆ ಬಿಟ್ಟ ವಿಷಯ. ಈ ಬಗ್ಗೆ ಹೆಸರಾಂತ ನಟಿ ಶಬಾನಾ ಆಜ್ಮಿಯವರು ಒಂದೆಡೆ ಮಾತನಾಡುತ್ತ, ನನಗೆ ಬೇಕೆಂದಾಗ ಬುರ್ಖಾ ಧರಿಸುತ್ತೇನೆ. ಬೇಡವೆಂದಾಗ ಕಳಚಿ ಇಡುತ್ತೇನೆ ಎಂದು ಹೇಳಿದ್ದಾರೆ. ಎಲ್ಲ ಧರ್ಮಗಳಲ್ಲೂ ಸಂಪ್ರದಾಯವಾದಿಗಳು, ಉದಾರವಾದಿಗಳು ಇರುತ್ತಾರೆ. ಹಿಂದೂ ಕುಟುಂಬದ ತಂದೆ-ತಾಯಂದಿರು ತಮ್ಮ ಮಕ್ಕಳು ಹಣೆಗೆ ಕುಂಕುಮ ಹಚ್ಚಿಕೊಂಡು, ಬಳೆ ತೊಟ್ಟು ಓಡಾಡಬೇಕೆಂದು ಬಯಸುವಂತೆ ಮುಸ್ಲಿಂ ಕುಟುಂಬದವರು ತಮ್ಮ ಮಕ್ಕಳು ಬುರ್ಖಾ ಧರಿಸಿ ಶಾಲೆಗೆ ಹೋಗಬೇಕೆಂದು ಬಯಸುತ್ತಾರೆ. ಯಾವ ಉಡುಪನ್ನಾದರೂ ಧರಿಸಿ ಬರಲಿ, ಹೆಣ್ಣುಮಕ್ಕಳು ಅಕ್ಷರ ಕಲಿಯಲು ಬರುತ್ತಿದ್ದಾರಲ್ಲ. ಅದನ್ನು ಸ್ವಾಗತಿಸಬೇಕಿದೆ.
ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಬರುವುದನ್ನು ಸಂಘ ಪರಿವಾರದ ಕೋಮುವಾದಿಗಳು ಸಹಿಸುತ್ತಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಿರುವಾಗಲೇ ತಮ್ಮ ಹಿಂದೂ ರಾಷ್ಟ್ರ ಅಜೆಂಡಾ ಜಾರಿಗೆ ತರಲು ತರಾತುರಿಯಲ್ಲಿರುವ ಆರೆಸ್ಸೆಸ್ ಹಿಂದೂ ಮತ್ತು ಮುಸ್ಲಿಮರು ಒಂದಾಗಿ ಬೆರೆಯುತ್ತಿದ್ದಂತೆ ನಾನಾ ಮಸಲತ್ತುಗಳು ನಡೆಸಿದೆ. ಮಂದಿರ ನಿರ್ಮಾಣ, ಲವ್ ಜಿಹಾದ್‌ನಂತಹ ವಿಷಯಗಳು ಅಪ್ರಸ್ತುತವಾದಾಗ, ಈಗ ಬುರ್ಖಾದ ಸುತ್ತ ವಿವಾದ ಸೃಷ್ಟಿಸಲು ಹೊರಟಿದೆ.
ನಾಳಿನ ಭಾರತದ ನಿರ್ಮಾಪಕರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೋಮುವಾದದ ರೋಗವನ್ನು ಅಂಟಿಸುವ ಕೆಲಸ ನಡೆದಿದೆ. ಅಧ್ಯಯನ, ಆಟೋಟದಲ್ಲಿ ತೊಡಗಬೇಕಾದ ವಿದ್ಯಾರ್ಥಿಗಳು ಈಗ ಜಾತಿ-ಧರ್ಮದ ನೆಲೆಯಲ್ಲಿ ಪರಸ್ಪರ ಶತ್ರುಗಳಂತೆ ವರ್ತಿಸುತ್ತಿದ್ದಾರೆ. ಸಮವಸ್ತ್ರದ ಹೆಸರಿನಲ್ಲಿ ಬುರ್ಖಾ ಧರಿಸಿ ಬರುವ ಹೆಣ್ಣುಮಕ್ಕಳನ್ನು ಅವಮಾನಿಸುವ ನೀಚ ಕೃತ್ಯಗಳು ಕೆಲ ಕಡೆ ನಡೆದಿವೆ. ಯಾರು ಯಾವ ಬಟ್ಟೆ ಧರಿಸಿ ಬರಬೇಕು? ಯಾವ ಸಂಗೀತವನ್ನು ಕೇಳಬೇಕು? ಯಾವ ನಾಟಕವನ್ನು ನೋಡಬೇಕು ಎಂಬುದನ್ನು ತೀರ್ಮಾನಿಸುವ ದೊಣ್ಣೆ ನಾಯಕರು ಹುಟ್ಟಿಕೊಂಡಿದ್ದಾರೆ. ನಮಗೆ ಇಷ್ಟವಾದ ಬಟ್ಟೆಯನ್ನು ನಾವು ಧರಿಸುವಂತಿಲ್ಲ. ಇಷ್ಟವಾದ ಸಂಗೀತ ಕೇಳುವಂತಿಲ್ಲ. ನಮ್ಮಿಷ್ಟದ ನಾಟಕವನ್ನು ನೋಡುವಂತಿಲ್ಲ. ಇದು ಗೋವಿಂದಭಟ್ಟರು, ಶಿಶುನಾಳ ಷರೀಫರು ಬದುಕಿದ ಕರ್ನಾಟಕದ ಇಂದಿನ ಸ್ಥಿತಿ.
80ರ ದಶಕದವರೆಗೆ ನಾವು ವ್ಯಾಸಂಗ ಮಾಡುವಾಗಲೆಲ್ಲ, ಅಧ್ಯಯನ ಮತ್ತು ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಪೈಪೋಟಿ ಇರುತ್ತಿತ್ತು. ಪರೀಕ್ಷೆಯಲ್ಲಿ ಉಳಿದವರಿಗಿಂತ ಹೆಚ್ಚು ಅಂಕ ಗಳಿಸಬೇಕೆಂದು ಜಿದ್ದಿನಿಂದ ಅಭ್ಯಾಸ ಮಾಡುತ್ತಿದ್ದರು. ಈ ಪೈಪೋಟಿಯಲ್ಲಿ ಜಾತಿ-ಧರ್ಮದ ವಾಸನೆ ಇರುತ್ತಿರಲಿಲ್ಲ. ಆದರೆ ಈಗ ಆ ಆರೋಗ್ಯಕರ ವಾತಾವರಣ ಹೋಗಿ, ಮೈಮುಚ್ಚಲು ಧರಿಸುವ ಉಡುಪು ಪೈಪೋಟಿಯ ವಿಷಯವಾಗಿದೆ. ಕೆಲ ತಿಂಗಳ ಹಿಂದೆ ಹಾನಗಲ್‌ನ ಕುಮಾರೇಶ್ವರ ಕಾಲೇಜಿನಲ್ಲಿ, ಹಿರೇಕೆರೂರಿನ ಕಾಲೇಜೊಂದರಲ್ಲಿ ಈ ವಸ್ತ್ರಸಂಹಿತೆ ವಿವಾದದ ಅಲೆಯನ್ನು ಎಬ್ಬಿಸಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುತ್ತಿರುವ ಕಾರಣ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವಂತೆ ಎಬಿವಿಪಿ ತಂತ್ರ ರೂಪಿಸಿತ್ತು. ಇದಕ್ಕೂ ಮುಂಚೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬುರ್ಖಾ ವಿವಾದ ಸೃಷ್ಟಿಯಾಗುತ್ತಲೇ ಇತ್ತು. ಶಾಂತವೇರಿ ಗೋಪಾಲಗೌಡರು ಬದುಕಿದ್ದ ಶಿವಮೊಗ್ಗ ಜಿಲ್ಲೆಗೂ ಈಗ ಈವ್ಯಾಧಿಹರಡಿದೆ. ಓದುವುದನ್ನು-ಬರೆಯುವುದನ್ನು ಬಿಟ್ಟು ಇತರ ಧರ್ಮೀಯರು ಯಾವ ಬಟ್ಟೆ ಧರಿಸಿಕೊಂಡು ಬರುತ್ತಾರೆಂದು ಹುಡುಕುವುದೇ ವಿದ್ಯಾರ್ಥಿಗಳ ಕೆಲಸವಾಗಿದೆ. ಎಬಿವಿಪಿ ಎಂಬ ಸಂಘಟನೆ ಒಂದು ಸಮುದಾಯದ ವಿದ್ಯಾರ್ಥಿಗಳನ್ನು ಹೀಗೆ ದಾರಿ ತಪ್ಪಿಸಿದೆ.
ಒಂದು ಕಾಲಕ್ಕೆ ಪ್ರಗತಿಪರರ ತಾಣವೆನಿಸಿದ್ದ ಸಹ್ಯಾದ್ರಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡು ಬರುತ್ತಿದ್ದಾರೆಂದು ಎಬಿವಿಪಿ ಹುಡುಗರು ಕೇಸರಿ ಶಾಲು ಹಾಕಿಕೊಂಡು ಬರುತ್ತಿದ್ದಾರೆ. ಬುರ್ಖಾ ಜೊತೆ ಪೈಪೋಟಿ ಮಾಡಬೇಕಿದ್ದರೆ ಅವರು ಕೂಡ ಮೈತುಂಬಾ ಕೇಸರಿ ಬುರ್ಖಾ ಹಾಕಿಕೊಂಡು ಬಂದರೆ ಸೂಕ್ತವಾಗಿರುತ್ತಿತ್ತು.
ನಮ್ಮ ಶಾಲಾ ಕಾಲೇಜುಗಳ ಇಂದಿನ ಸ್ಥಿತಿ ನೋಡಿದಾಗ, 70-80ರ ದಶಕದ ವಿದ್ಯಾರ್ಥಿ ಜೀವನ ನೆನಪಾಗುತ್ತದೆ. ಆಗ ಪ್ರವೇಶ ಶುಲ್ಕ, ಪರೀಕ್ಷೆ ಶುಲ್ಕಗಳನ್ನು 5 ರೂಪಾಯಿ ಹೆಚ್ಚಿಸಿದ್ದರೆ ಅದನ್ನು ವಿರೋಧಿಸಿ ವಿದ್ಯಾರ್ಥಿಗಳು ಮುಷ್ಕರಕ್ಕೆ ಇಳಿಯುತ್ತಿದ್ದರು. ಅಷ್ಟೇ ಅಲ್ಲ, ಹೊಟೇಲ್, ತಿಂಡಿ ಪದಾರ್ಥಗಳ ಬೆಲೆಯನ್ನು 5 ಪೈಸೆ ಹೆಚ್ಚಿಸಿದರೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಆದರೆ ಈಗ ಇಂತಹ ಪ್ರಶ್ನೆಗಳ ವಿರುದ್ಧ ವಿದ್ಯಾರ್ಥಿಗಳು ದನಿಯೆತ್ತುವುದಿಲ್ಲ. ದನಿ ಎತ್ತದಂತೆ ಎಬಿವಿಪಿ ಅವರನ್ನು ದಾರಿ ತಪ್ಪಿಸಿದೆ. ಅಂತಲೇ ಖಾಸಗಿ ಕಾಲೇಜು ಆಡಳಿತ ವರ್ಗದವರು ಮತ್ತು ಭಾರೀ ಹೊಟೇಲ್ ಮಾಲಕರು ತಮ್ಮ ಲಾಭಕೋರತನಕ್ಕೆ ನೆರವಾದ ಸಂಘ ಪರಿವಾರದವರನ್ನು ಹಾಡಿ ಹೊಗಳುತ್ತಾರೆ. ಸಾವಿರಾರು ರೂಪಾಯಿ ದೇಣಿಗೆ ನೀಡುತ್ತಾರೆ. ಈಗ ಶಿಕ್ಷಣ ಉಳ್ಳವರ ಸ್ವತ್ತಾಗಿದೆ. ಖಾಸಗಿ ಕಾಲೇಜುಗಳಲ್ಲಿ ಮಿತಿ ಮೀರಿದ ಶೋಷಣೆಯಿದೆ. ಈ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಾದ ವಿದ್ಯಾರ್ಥಿಗಳು, ತಮ್ಮ ಸಹಪಾಠಿ ಸಹೋದರಿಯರು ಬುರ್ಖಾ ಧರಿಸಿ ಬರುತ್ತಾರೆಂದು ತಾವು ಕೂಡ ಕೇಸರಿ ಶಾಲು ಧರಿಸಿಕೊಂಡು ಹೋಗುತ್ತಿದ್ದಾರೆ. ಈ ರೀತಿ ಇಡೀ ವಿದ್ಯಾರ್ಥಿ ಸಮುದಾಯವನ್ನು ಎಬಿವಿಪಿ ದಾರಿ ತಪ್ಪಿಸಿದೆ.
ಬುರ್ಖಾ ಧರಿಸುವುದು ಅಥವಾ ಬಿಡುವುದು ವಿದ್ಯಾರ್ಥಿನಿಯರ ಆಯ್ಕೆಗೆ ಬಿಟ್ಟ ವಿಷಯ. ಬುರ್ಖಾ ಧರಿಸಿಕೊಂಡು ಬರುವ ವಿದ್ಯಾರ್ಥಿನಿಯರು ಇರುವಂತೆ ಬುರ್ಖಾ ಧರಿಸದೇ ಇರುವ ಮುಸ್ಲಿಂ ವಿದ್ಯಾರ್ಥಿನಿಯರೂ ಇದ್ದಾರೆ. ಇನ್ನು ಕೆಲವರು ಕಾಲೇಜುವರೆಗೆ ಬುರ್ಖಾ ಧರಿಸಿಕೊಂಡು ಬಂದು, ಕಾಲೇಜಿನಲ್ಲಿ ಬುರ್ಖಾ ಕಳಚಿಟ್ಟು ಕ್ಲಾಸ್‌ರೂಮಿಗೆ ಬರುತ್ತಾರೆಂದು ಎಲ್ಲರಿಗೂ ಗೊತ್ತಿರುವ ಸಂಗತಿ.
ಈ ಬುರ್ಖಾ ವಿವಾದವಾಗಲಿ, ಲವ್ ಜಿಹಾದ್ ಗದ್ದಲವಾಗಲಿ ಆಕಸ್ಮಿಕವಾಗಿ ಹುಟ್ಟಿಕೊಂಡ ಸಮಸ್ಯೆಗಳಲ್ಲ. ಆರೆಸ್ಸೆಸ್ ಎಂಬ ಸಂಘಟನೆ ತನ್ನ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ಸಾಧನೆಗಾಗಿ ರೂಪಿಸಿದ ವ್ಯವಸ್ಥಿತ ಕಾರ್ಯತಂತ್ರ. ಈ ಕಾರ್ಯತಂತ್ರವನ್ನು ಎಳೆಯ ವಿದ್ಯಾರ್ಥಿಗಳ ಮೂಲಕ ಜಾರಿಗೆ ತಂದರೆ ಇದರ ಪ್ರತಿಫಲ 5-6 ದಶಕ ದೊರೆಯುತ್ತದೆ ಎಂದು ಸಂಘ ಪರಿವಾರಕ್ಕೆ ಗೊತ್ತಿದೆ. ಅಂತಲೇ ಎಬಿವಿಪಿ ಸಂಘಟನೆ ಹುಟ್ಟು ಹಾಕಿ ವಿದ್ಯಾರ್ಥಿಗಳ ಮೇಲೆ ಬಲೆ ಬೀಸುತ್ತಿದೆ. ಇನ್ನು ಎಡಪಂಥೀಯ ಪ್ರಗತಿಪರ ಸಂಘಟನೆಗಳು ಶೈಕ್ಷಣಿಕ ರಂಗವನ್ನು ಬಿಟ್ಟು ಎಷ್ಟೋ ವರ್ಷಗಳಾದವು.ಕಾರ್ಮಿಕರ ಆರ್ಥಿಕ ಬೇಡಿಕೆಗಳಿಗಾಗಿ ಬಿಎಂಎಸ್ ಜೊತೆ ಮುಷ್ಕರ ನಡೆಸುವಲ್ಲಿ ಅವು ಸಂತೃಪ್ತವಾಗಿವೆ. ಅಂತಲೇ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಮತ್ತು ಹೈದರಾಬಾದನ ಕೇಂದ್ರೀಯ ವಿಶ್ವವಿದ್ಯಾಲಯದಂತಹ ಕೆಲ ವಿಶ್ವವಿದ್ಯಾನಿಲಯಗಳನ್ನು ಹೊರತುಪಡಿಸಿದರೆ ಬಹುತೇಕ ಕಾಲೇಜುಗಳಲ್ಲಿ ಎಬಿವಿಪಿ ನೆಲೆಯೂರಿದೆ.
ಪರಿಸ್ಥಿತಿ ಎಷ್ಟು ಕೈ ಮೀರಿ ಹೋಗಿದೆಯೆಂದರೆ, ಈಗ ಇದು ಬುರ್ಖಾ ವಿವಾದಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಇತ್ತೀಚೆಗೆ ತುಮಕೂರಿನಲ್ಲಿ ಅಂತರ ಕಾಲೇಜು ನಾಟಕ ಸ್ಪರ್ಧೆಯಲ್ಲಿ ರಾಜಪ್ಪ ದಳವಾಯಿ ಅವರ ದಾರಾ ಶಿಕೋ ನಾಟಕಕ್ಕೆ ಸಂಘ ಪರಿವಾರದ ಕಾರ್ಯಕರ್ತರು ಅಡ್ಡಿಯುಂಟು ಮಾಡಿದರು. ಮೊಘಲರ ಕಾಲದಲ್ಲಿ ದಿಲ್ಲಿಯಲ್ಲಿದ್ದ ದಾರಾ ಶಿಕೋ ಎಂಬ ಸೂಫಿ ಸಂತನ ಕುರಿತಾದ ಈ ನಾಟಕ ಮುಸ್ಲಿಂ ಪರ ಎಂಬುದು ಈ ಕೋಮುವಾದಿಗಳ ಆಕ್ಷೇಪವಾಗಿತ್ತು. ಈ ನಾಟಕವನ್ನು ಪ್ರದರ್ಶಿಸಲು ಸಿದ್ಧತೆ ನಡೆಸಿದ್ದು ರಾಜ್ಯದ ಗೃಹ ಸಚಿವ ಪರಮೇಶ್ವರ ಒಡೆತನದ ಸಿದ್ಧಾರ್ಥ ಕಾಲೇಜಿನ ವಿದ್ಯಾರ್ಥಿಗಳು. ರಾಜ್ಯದ ಗೃಹ ಸಚಿವರ ಒಡೆತನದ ಕಾಲೇಜಿನ ಆಡಳಿತ ವರ್ಗವನ್ನೇ ಹೆದರಿಸಿ ನಾಟಕ ಪ್ರದರ್ಶನ ರದ್ದುಪಡಿಸುವಲ್ಲಿ ಸಂಘ ಪರಿವಾರ ಯಶಸ್ವಿಯಾಯಿತು.
ಇದು ಕರ್ನಾಟಕದ ಇಂದಿನ ಸ್ಥಿತಿ. ಇಷ್ಟೆಲ್ಲ ನಡೆದಿರುವಾಗ, ಸಿದ್ದರಾಮಯ್ಯ ಸರಕಾರ ಏನು ಮಾಡುತ್ತಿದೆ ಎಂದು ಅನೇಕ ಸ್ನೇಹಿತರು ಪ್ರಶ್ನಿಸುತ್ತಿದ್ದಾ. ಆದರೆ ಸಂಘ ಪರಿವಾರ ಎಷ್ಟು ಪ್ರಬಲವಾಗಿದೆಯೆಂದರೆ, ಸರಕಾರದ ಆಡಳಿತಾಂಗದ ಎಲ್ಲಾ ವಿಭಾಗಗಳಲ್ಲಿ ಆರೆಸ್ಸೆಸ್ ಕಾರ್ಯರ್ಕರು ನುಸುಳಿಕೊಂಡಿದ್ದಾರೆ. ರಾಜ್ಯದಲ್ಲಿ ಸೆಕ್ಯೂಲರ್ ಪಕ್ಷದ ಸರಕಾರವಿದ್ದರೂ, ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿಯಿದ್ದರೂ ಕೂಡ ಏನೂ ಮಾಡಲಾಗದ ಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಗತಿಸಿದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರ ಪರ್ಯಾಯ ಸರಕಾರವೇ ಆಡಳಿತ ನಡೆಸುತ್ತಿದೆ. ನಮ್ಮ ಪಕ್ಕದ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರವಿದ್ದರೂ ಕೂಡ ಅಲ್ಲೂ ಆಡಳಿತಾಂಗದಲ್ಲಿ ಸಂಘ ಪರಿವಾರ ಪ್ರವೇಶಿಸಿದೆ. ಈ ಬಗ್ಗೆ ಹಿರಿಯ ಸಿಪಿಎಂ ನಾಯಕ ಅಚ್ಯತಾನಂದನ್ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಕರ್ನಾಟಕಕ್ಕೂ-ಕೇರಳಕ್ಕೂ ವ್ಯತ್ಯಾಸವೇನೆಂದರೆ, ಕರ್ನಾಟಕದ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಸಂಘ ಪರಿವಾರಕ್ಕೂ ಶರಣಾಗುತ್ತಾರೆ. ಆದರೆ ಕೇರಳದ ಕಮ್ಯುನಿಸ್ಟರು ಜಾತ್ಯತೀತ ಮೌಲ್ಯಗಳ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಓಡಾಡುತ್ತಾರೆ. ಬಲಿದಾನ ಮಾಡುತ್ತಾರೆ.