varthabharthi


ಅಂಬೇಡ್ಕರ್ ಚಿಂತನೆ

ಹಿಂದೂ ಮಹಾಸಭೆ ಮತ್ತು ಅಸ್ಪಶ್ಯತೆ

ವಾರ್ತಾ ಭಾರತಿ : 17 Feb, 2017
ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಈಗ ಕೆಲವೇ ದಿನಗಳ ಹಿಂದೆ ಸೂರತ್‌ನಲ್ಲಿ ಹಿಂದೂಮಹಾಸಭೆಯ ಅಧಿವೇಶನ ನಡೆಯಿತು, ಮತ್ತೆ ಅದಕ್ಕೆ ಸಮನಾಗಿ ರಾಷ್ಟ್ರೀಯ ಸಭೆಯ ಕೂಟದ ನಿಮಿತ್ತ ಸಾಮಾಜಿಕ ಸಭೆಗಳಂತಹ ಶುದ್ಧ ಸಭೆಗಳು, ಅಸ್ಪಶ್ಯತಾ ನಿವಾರಕ ಸಭೆಗಳು ನಡೆದುವು. ಸೂರತ್‌ನಲ್ಲಿ ನಡೆದ ಹಿಂದೂ ಮುಸಲ್ಮಾನರ ದಂಗೆಗೆ ಸಂಬಂಧಿತ ಖಟ್ಲೆ ಈಗಲೂ ನಡೆದಿರುವ ಕಾರಣ, ಸೂರತ್‌ನ ಹಿಂದೂ ಸಮಾಜದಲ್ಲಿ ಹಿಂದೂ ಮಹಾಸಭೆಯ ಬಗ್ಗೆ ವಿಶೇಷ ಉತ್ಸಾಹ ಇರುವುದು, ಮತ್ತು ಆ ಕಾರಣದಿಂದಲೇ ಈ ವರ್ಷದ ಅಧಿವೇಶನ ಅಲ್ಲಿ ನಡೆಯುವುದು ಸ್ವಾಭಾವಿಕವಾಗಿದೆ. ಅಲ್ಲಿನ ಹಿಂದೂ ಮಹಾಸಭೆಯ ಶಾಖೆಯ ಓರ್ವ ಪ್ರಮುಖ ಕಾರ್ಯಕರ್ತ ಡಾ.ರಾಯ್‌ಜೀ ಅವರ ಹೆಸರು ಅಲ್ಲಿನ ಹಿಂದೂ ಮುಸಲ್ಮಾನ ದಂಗೆಗೆ ಸಂಬಂಧಿತ ಖಟ್ಲೆಯಲ್ಲಿ ಈಗ ತುಂಬ ಪ್ರಸಿದ್ಧಿಗೆ ಬಂದಿದೆ. ಅವರೇ ಸ್ವಾಗತ ಮಂಡಳಿಯ ಪ್ರಮುಖರೂ ಆಗಿದ್ದರು. ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಕೋಲ್ಕತಾ ‘‘ಮಾಡರ್ನ್ ರಿವ್ಯೆ’’ ಪತ್ರಿಕೆಯ ಸ್ಥಾಪಕ ಹಾಗೂ ಸಂಪಾದಕ ರಮಾನಂದ ಚಟರ್ಜಿ ಅವರನ್ನು ಯೋಜಿಸಲಾಗಿತ್ತು. ಚಟರ್ಜಿ ಒಬ್ಬ ಪ್ರಸಿದ್ಧ ಲೇಖಕರಾಗಿದ್ದು, ಸ್ವತಂತ್ರ ವಿಚಾರ ಹಾಗೂ-ಸ್ಪಷ್ಟವಾದಿತ್ವಕ್ಕೆ ಖ್ಯಾತರಾಗಿದ್ದರು. ಬ್ರತಹ್ಮಸಮಾಜದ ಅನುಯಾಯಿಯಾದ ಅವರ ವಿಚಾರಗಳು ಮೊದಲಿನಿಂದಲೂ ಕಷ್ಟಸಾಧ್ಯವೆನ್ನುವಷ್ಟು ಕಟ್ಟಾ ಸುಧಾರಣಾವಾದಿಯಾಗಿದ್ದವು. ಇಂತಹವರು ಹಿಂದೂ ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದುದು ಆಶ್ಚರ್ಯವೇ.

ಅಪೇಕ್ಷಿಸಿದಂತೆ ಅವರ ಭಾಷಣ ಸ್ಪಷ್ಟವೂ, ನಿರ್ಭಿಡೆಯಿಂದ ಕೂಡಿದುದೂ ಆಗಿತ್ತು. ಹಿಂದೂ ಸಮಾಜಕ್ಕಂಟಿದ ಜಾತಿಭೇದ ಮತ್ತು ಅಸ್ಪಶ್ಯತೆಯೆಂಬ ಮಹಾರೋಗವನ್ನು- ಪೂರ್ಣ ನಿರ್ಮೂಲನಗೊಳಿಸಬೇಕೆಂದು ಅವರು ಪ್ರತಿಪಾದಿಸಿದರು. ತಮ್ಮ ಭಾಷಣದಿಂದ ಅವರು ಹಿಂದೂ ಸಮಾಜದ ಕಣ್ಣಿಗೆ ಅಂಜನವನ್ನೇನೋ ಚೆನ್ನಾಗಿ ಎರೆದರು, ಆದರೆ ಅದು ಎಷ್ಟು ಸಮಯ ನಿಲ್ಲುವುದೆಂಬ ಬಗ್ಗೆ ನಮಗೆ ಶಂಕೆ ಅನಿಸುತ್ತಿದೆ. ಕಾರಣ, ಹಿಂದೂ ಸಮಾಜವು ಕಲ್ಪನಾತೀತವಾಗಿ ದಪ್ಪ ಚರ್ಮದ್ದಾಗಿದೆ. ಇಂತಹ ವಿಚಾರ ಪ್ರದರ್ಶಿಸುವವರನ್ನು ಉಚ್ಚ-ಸ್ಥಾನದಲ್ಲಿರಿಸಿದರೂ, ತಮ್ಮ ಕೆಲಸಗಳನ್ನು ಮೊದಲಿನಂತೆಯೇ ಮಾಡುವವರೆಂಬುದಕ್ಕೆ, ಗೌತಮ ಬುದ್ಧನಿಂದ ತೊಡಗಿ ಮಹಾತ್ಮ ಗಾಂಧಿವರೆಗೆ ನಿದರ್ಶನಗಳಿವೆ. ಗೌತಮ ಬುದ್ಧನು ಜಾತಿಭೇದವನ್ನು ನಿಷೇಧಿಸಿದನು, ಧರ್ಮಕಾಂಡದ ನಿಷ್ಫಲತೆಯನ್ನು ಪ್ರತಿಪಾದಿಸಿದನು, ಆದರೆ ಹಿಂದೂ ಸಮಾಜವು ಅವನನ್ನು ದೇವರ ಒಂದು ಅವತಾರವಾಗಿಸಿ, ಅವನ ಬೋಧೆಯನ್ನು ಅಲ್ಲಿ ಕಾದಿರಿಸಿತು. ಇಂದು ಮಹಾತ್ಮಾ ಗಾಂಧಿ ಅವರ ಬಗೆಗೂ-ಇದೇ ವರ್ತನೆ ತೋರಿದೆ. ನಮ್ಮ ಮಹಾರಾಷ್ಟ್ರದಲ್ಲಿನ ಗಾಂಧಿಪಂಥದ ಜನರೆಡೆಗೆ ನೋಡಿದರೆ ಕಾಣಿಸುವುದೇನು? ಮಹಾತ್ಮಾ ಗಾಂಧಿ ಅವರ ಎಷ್ಟು ಮಂದಿ ಮಹಾರಾಷ್ಟ್ರೀಯ ಅನುಯಾಯಿಗಳು ಅಸ್ಪಶ್ಯತಾ ನಿವಾರಣೆಗಾಗಿ ಮನಃಪೂರ್ವಕ ಪ್ರಯತ್ನ ಮಾಡಿದ್ದಾರೆ? ಪ್ರಯತ್ನ ಮಾಡಿಲ್ಲ, ಅಷ್ಟೇ ಅಲ್ಲ. ಅಸ್ಪಶ್ಯತಾ ನಿವಾರಣೆಯ ಪ್ರಯತ್ನವನ್ನು ವಿರೋಧಿಸುವುದನ್ನೂ ಅವರಲ್ಲಿ ಹಲವರು ನಿಲ್ಲಿಸಿಲ್ಲ. ದೊಡ್ಡ ದೊಡ್ಡ ಸಮಾಜ ಸುಧಾರಕರು, ಧರ್ಮಸುಧಾರಕರು ತಮ್ಮ ತಮ್ಮ ಹೊಟ್ಟೆಯನ್ನು ಸಂಕುಚಿಸಿಕೊಂಡು ಬಾಳುವ ಚತುರತೆಯನ್ನೇನು ತೋರಿದ್ದಾರೋ, ಅದನ್ನು ಲಕ್ಷದಲ್ಲಿರಿಸಿಕೊಂಡರೆ, ರಮಾನಂದ ಚಟರ್ಜಿ ಅವರಂಥ ಕಟ್ಟಾ ಬ್ರಹ್ಮಾಸಮಾಜ ವಾದದ ಅನುಯಾಯಿ ಹಿಂದೂ ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದುದು ಆಶ್ಚರ್ಯವೆನಿಸದು.

ಹಿಂದೂ ಸಮಾಜದ ಒಡಲ ಬಡಬಾಗ್ನಿಯಲ್ಲಿ ಬುದ್ಧ ಬಸವ, ಮಹಾವೀರ, ಚೈತನ್ಯ, ರಮಾನಂದ, ಚಕ್ರಧರ ಎಲ್ಲರೂ ಸುಟ್ಟು ಬೂದಿಯಾದರು. ಭಾಗವತ ಸಂಪ್ರದಾಯದ ಸಾಧುಸಂತರೂ ನಾಶವಾದರು. ನಾನಕ, ಕಬೀರರಿಗೂ ಅದೇ ಗತಿಯಾಯಿತು. ರಾಮಮೋಹನ, ದಯಾನಂದ, ರಾಮಕೃಷ್ಣ ಪರಮಹಂಸ, ವಿಷ್ಣುಬುವಾ ಬ್ರಹ್ಮಚಾರಿ, ಜ್ಯೋತಿಬಾಫುಲೆ, ರಾನಡೆ, ಭಂಡಾರ್‌ಕರ್, ವಿವೇಕಾನಂದ, ರಾಮತೀರ್ಥ, ಶ್ರದ್ಧಾನಂದ, ಇವರೆಲ್ಲರಿಗೂ ಹಿಂದೂ ಸಮಾಜದಿಂದ ಇದೇ ಗತಿಯಾಯಿತು. ಮಹಾತ್ಮಾ ಗಾಂಧಿ, ಆಚಾರ್ಯ ರಾಯ್, ರಮಾನಂದ ಚಟರ್ಜಿ ಅವರನ್ನೂ ಜೀರ್ಣಿಸಿಬಿಡುವ ಸಾಮರ್ಥ್ಯವಿದ್ದಂತೆ.! ವ್ಯಕ್ತಿಯ ಮಹಾತ್ಮೆ ಹೆಚ್ಚಿಸುವ, ಇಲ್ಲವೇ, ನಮಗೆ ಬೇಡವೆಂದಾದರೆ ಆತ ಎಷ್ಟೇ ಉತ್ತಮನಿದ್ದರೂ ಅತ್ತ ಗಮನಹರಿಸದೆ, ನಮ್ಮ ಪೂರ್ವರೀತಿಯನ್ನೇ ಮುಂದುವರಿಸುವ ಈ ಕಲೆ ಹಿಂದೂ ಸಮಾಜಕ್ಕೆ ಅದ್ಭುತವಾಗಿ ಸಾಧಿಸಿದೆ. ಹಿಂದೆ ವೈಷ್ಣವ ಪಂಥಿಯಾಗಿದ್ದ ರಮಾನಂದ ಉದಾರಮತವಾದವನ್ನು ನಿಷ್ಕ್ರಿಯಗೊಳಿಸಿದ ಅದೇ ಹಿಂದೂ ಸಮಾಜವು, ಪ್ರಸಕ್ತ ಬ್ರಹ್ಮಪಂಥೀಯ ರಮಾನಂದರ ಉದಾರ ಮತವಾದವನ್ನು ನಿಷ್ಕ್ರಿಯಗೊಳಿಸುವ ಧೈರ್ಯವನ್ನು ಹೊಂದಿದ್ದರೆ- ಅದರಲ್ಲಿ ಆಶ್ಚರ್ಯವೇನು? ಹಿಂದೂ ಸಮಾಜವು ಫ್ರಾನ್ಸ್‌ನಬೂರ್ಜ್ವಾ ರಾಜಮನೆತನದಂತೆ-ಏನನ್ನೂ ಕಲಿಯುವುದಿಲ್ಲ, ಏನನ್ನೂ ಮರೆಯುವುದಿಲ್ಲ. ಹಿಂದೂ ಸಮಾಜವು-ಇಷ್ಟು ಸಂವೇದನಾಹೀನಾವಾಗಿದ್ದರೂ, ತನಕ ಅಸ್ತಿತ್ವದ ತಾತ್ಕಾಲಿಕ ಸಂರಕ್ಷಣೆ ಮಾಡುವಷ್ಟು ಮಟ್ಟಿನ ಹೊಂದಾಣಿಕೆ ಗುಣ ಅದಕ್ಕಿದೆಯೆಂದು ಒಪ್ಪಿಕೊಳ್ಳಬೇಕು. ಪರ್ಯಾಯ ಕಂಡುಹಿಡಿಯುವಲ್ಲಿ ಹಿಂದೂ ಧರ್ಮದ ಶಾಸ್ತ್ರಿ, ಪಂಡಿತರನ್ನು ಮೀರಿಸುವವರಿಲ್ಲ. ಸಮಯ ಸಮಯ ಬಂದಂತೆ-ನಡೆದುಕೊಳ್ಳುವುದು ಮತ್ತು ಬಂದ ಅವಕಾಶವನ್ನು ಹೇಗಾದರೂ ಕೈವಶ ಮಾಡಿಕೊಳ್ಳುವುದು ಹಿಂದೂ ಸಮಾಜದ ಹುಟ್ಟುಗುಣವೇ ಆಗಿದೆ. ಈ ಹೊಂದಾಣಿಕೆ ಗುಣದಿಂದಾಗಿಯೇ ಅದು ಇದುವರೆಗೂ ಉಳಿದುಕೊಂಡು ಬಂದಿದೆ. ಹೀಗೆ ಜೀವಿಸುವುದು ಎಷ್ಟು ಶ್ರೇಯಸ್ಕರ ಎಂಬುದು ಬೇರೆ ಪ್ರಶ್ನೆ.

ಈ ಹೊಂದಾಣಿಕೆಯ ಗುಣ ಕೇವಲ ತಾತ್ಕಾಲಿಕವಾಗಿ ಆತ್ಮಸಂರಕ್ಷಣೆಗೆ ಉಪಯುಕ್ತವಾಗುವಂತಿರಬಹುದು.-ಸಮಾಜಪುರುಷನ ದೇಹ ಪ್ರಕೃತಿ ಸದೃಢವಾಗಲು, ಅವನ ಸಾಮರ್ಥ್ಯ ಹೆಚ್ಚಲು, ಅವನ ದೇಹದ ಎಲ್ಲ ದೋಷಗಳು ಮೊದಲು ಪರಿಹಾರವಾಗಬೇಕು. ಸೂರತ್‌ನಲ್ಲಿ ನಡೆದ ಹಿಂದೂ ಮಹಾಸಭೆಯ ವೇಳೆ ಸ್ಪಶ್ಯರ ಜೊತೆಯಲ್ಲೇ ಅಸ್ಪಶ್ಯರೆಂಬವರ ಮೆರವಣಿಗೆಯೊಂದು ನಡೆಯಿತು. ಈ ಮೆರವಣಿಗೆಯಲ್ಲಿ ಸುಮಾರು ಎಂಬತ್ತೈದು ಜನರಿದ್ದರು ಮತ್ತು, ಸ್ಪಶ್ಯ, ಅಸ್ಪಶ್ಯರು ಜೊತೆಯಾಗಿ ಸಾಗಿದುದರಿಂದ ಹಿಂದೂ ಧರ್ಮದ ಮೇಲೆ ಯಾವುದೇ ಪ್ರಾಣ ಸಂಕಟ ಬಂದೊದಗಲಿಲ್ಲ. ಅಷ್ಟೇ ಅಲ್ಲ, ಹಿಂದೂ ಧರ್ಮದ ಅವಸಾನವೂ ಇದರಿಂದಾಗಿ ದೂರವೇ-ಉಳಿಯಿತು. ಆದರೆ ಕೆಲವು ಪ್ರವಿತ್ರರೆಂಬವರಿಗೆ ಇದು ಹಿಡಿಸಲಿಲ್ಲ. ವೈಷ್ಣವರೆಂದು ಕರೆಯಲ್ಪಡುವ ಸೂರತ್‌ನ ಹಲವರು, ಈ ಮೆರವಣಿಗೆಯ ವಿರುದ್ಧ -ಹಸ್ತಪತ್ರಿಕೆ ಹಂಚಿ ಭಯಂಕರ ಅಧರ್ಮ ನಡೆಯುತ್ತಿದೆ ಎಂದು ಬೊಬ್ಬಿಟ್ಟರು. ಈ ವೈಷ್ಣವರೆಂಬವರ ಮೇಲೆ ನನಗೆ ನಿಜಕ್ಕೂ ಅನುಕಂಪವೆನಿಸುತ್ತದೆ. ‘‘ವಿಷ್ಣುಮಯ ಜಗ ವೈಷ್ಣವರ ಧರ್ಮ; ಭೇದಾಭೇದದ ಭ್ರಮೆ ಅಮಂಗಳ’’ ಎಂದು ತುಕೋಬಾರಂತಹ ಮಹಾವೈಷ್ಣವರು ಸಾರಿ ಹೇಳಿದ್ದಾರೆ. ಯಾರ ಜಾತಿ ದುರಭಿಮಾನವು ನಾಶವಾಗುವುದಿಲ್ಲವೋ ಅವರು ವೈಷ್ಣವರಾಗಿರದೆ, ವೈಭವ ಧರ್ಮದ ನದೀತಳದ ಒಂದು ಪುಟ್ಟ ಕಲ್ಲಷ್ಟೇ ಎನ್ನಬೇಕಷ್ಟೇ. ಸೂರತ್‌ನಲ್ಲಿ ಹಿಂದೂ ಮಹಾಸಭೆಯ ಜೊತೆಜೊತೆಗೇ ಅಸ್ಪಶ್ಯೋದ್ಧಾರ ಪರಿಷತ್ತು-ನಡೆದು, ಅಲ್ಲಿ ಮಾಮೂಲು ನಿರ್ಣಯಗಳು ಅಂಗೀಕರಿಸಲ್ಪಟ್ಟವು.

ಅಸ್ಪಶ್ಯರಿಗೆ ಶಾಲೆ, ಪಾರ್ಕ್-ಹಾಗೂ ಸಾರ್ವಜನಿಕ-ಸ್ಥಳಗಳಲ್ಲಿ ಪ್ರವೇಶ ನಿಷಿದ್ಧವಿರಬಾರದು, ಎಂದು ಮುನಿಸಿಪಾಲಿಟಿ, ಲೋಕಲ್ ಬೋರ್ಡ್‌ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನು ವಿನಂತಿಸಿಕೊಳ್ಳುವ ನಿರ್ಣಯ ಅದರಲ್ಲಿತ್ತು. ಈ ಒಪ್ಪಂದದ ಅನುಷ್ಠಾನದಲ್ಲಿ ಹಿಂದೂಮಹಾಸಭೆಯ ಸ್ಥಳೀಯ ಶಾಖೆಯು ಎಲ್ಲೆಲ್ಲಿ ಪ್ರತ್ಯಕ್ಷ ಪ್ರಯತ್ನ ಮಾಡಿದೆ ಎಂಬುದನ್ನು ತಿಳಿದರೆ ಒಳ್ಳೆಯದು. ಪ್ರಸಕ್ತ ಅ್ಪಸ್ಪಶ್ಯೋದ್ಧಾರ ಸಭೆ ಎಂದರೆ, ಹಿಂದೂ ಮಹಾಸಭೆಯ ಬಾಲವೇ ಆಗಿದೆ. ಅಸ್ಪಶ್ಯರು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ನಡೆದಿರುವ ಪ್ರಯತ್ನ ಹಿಂದೂ ಮಹಾಸಭೆಯ ನಾಯಕರಿಗೆ ಇಷ್ಟವಿಲ್ಲವಷ್ಟೇ ಅಲ್ಲ, ಈ ಹಿಂದೂ ಮಹಾಸಭೆಯ ಜನರು ಅಸ್ಪಶ್ಯರಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನೂ ಸ್ವತಃ ಮಾಡುತ್ತಿದ್ದಾರೆ. ನಾವು ಖುಷಿಯಿಂದ ಕೊಟ್ಟುದ್ದನ್ನು ಅಸ್ಪಶ್ಯರು ತೆಗೆದುಕೊಳ್ಳಬೇಕು, ಅದರಲ್ಲೇ ಸಮಾಧಾನ ಕಂಡುಕೊಂಡು ನಮಗೆ ಕೃತಜ್ಞರಾಗಿರಬೇಕು. ನಾವು ಕುಳಿತುಕೊಳ್ಳಲು ಹೇಳಿದರೆ ಕುಳಿತುಕೊಳ್ಳಬೇಕು. ಏಳೆಂದರೆ, ‘‘ಜೀ ಹುಜೂರ್’’ ಎಂದು ಏಳಬೇಕು, ಹೀಗಿದೆ, ಅಸ್ಪಶ್ಯರ ಬಗ್ಗೆ ಹಿಂದೂ ಮಹಾಸಭೆಯವರ ಧೋರಣೆ. ಇದರ ಒಂದು ತಾಜಾ ಸಾಕ್ಷ-ಸೂರತ್‌ನ ಹಿಂದೂ ಮಹಾಸಭೆಯ ಅಧಿವೇಶನದಲ್ಲಿ ಅಂಗೀಕೃತವಾದ ನಿರ್ಣಯ. ಈ ನಿರ್ಣಯದಂತೆ ಅಸ್ಪಶ್ಯರಿಗೆ ದೇವಳ, ಶಾಲೆ, ಪಾರ್ಕ್, ಸಭೆ ಮುಂತಾದ ಸ್ಥಳಗಳಲ್ಲಿ ಪ್ರವೇಶಕ್ಕೆ ನಿಷೇಧವಿಲ್ಲದೆ ಸಮತೆಯನ್ನು ಕಾಯಲಾಗಿದೆ ಎಂದರೂ, ಮುನಿಸಿಪಾಲಿಟಿ, ಲೋಕಲ್‌ ಬೋರ್ಡ್ ಮುಂತಾದ ಸ್ಥಾನೀಯ ಸಂಸ್ಥೆಗಳಲ್ಲಿ ಹಾಗೆಯೇ ಪ್ರಾಂತಿಕ ಕಾಯ್ದೆ ಕೌನ್ಸಿಲ್ ಮತ್ತು ಲೆಜಿಸ್ಲೇಟಿವ್ ಅಸೆಂಬ್ಲಿಗಳಲ್ಲಿ ಪ್ರತಿನಿಧಿಯನ್ನು ಸರಕಾರ ನೇಮಿಸುವುದು-ಇದು ದೇಶದ ಹಿತಕ್ಕೆ ಮತ್ತು ಸ್ವತಃ ಅಸ್ಪಶ್ಯವರ್ಗದ ಸ್ವಾಭಿಮಾನಕ್ಕೆ ಘಾತಕವಾಗಿದೆಯೆಂದು ಹೇಳಲಾಗಿದೆ. ನಮಗೂ ಇದೊಂದು ಗೌಣ ಮಾರ್ಗವೆಂದೇ ಅನಿಸುತ್ತದೆ.

ಹಾಗೆಯೇ ಹಿಂದೂ ಮಹಾಸಭೆಯು ಅಸ್ಪಶ್ಯರ ಸಹಿತ ಎಲ್ಲ ಹಿಂದೂಗಳಿಗೂ ಇದನ್ನು ನೇಮಿಸುವುದೋ, ಇಲ್ಲಾ, ಕೇವಲ ಅಸ್ಪಶ್ಯರಿಗೆ ಮಾತ್ರವೇ ಎಂದು ತಿಳಿದಿಲ್ಲ. ಅಸ್ಪಶ್ಯರಂತಹ ವರ್ಗದ ಜನರ ಪ್ರತಿನಿಧಿಯನ್ನು ಸರಕಾರ ನೇಮಿಸುವುದಕ್ಕೆ ಯಾವ ತತ್ವದ ಮೇಲೆ ವಿರೋಧವಾಗಿದೆಯೋ ಅದೇ ತತ್ವದ ಮೇಲೆ, ಮಿಶ್ರ ಮತದಾರ ಸಂಘದ ವತಿಯಿಂದ ಇಲ್ಲೂ ಆಕ್ಷೇಪ ಎತ್ತಬಹುದು. ಹಿಂದೂ ಮಹಾಸಭೆಗೆ ಅಸ್ಪಶ್ಯರ ಬಗ್ಗೆ ಇನಿತಾದರೂ ಕಾಳಜಿ ಇದ್ದಿದ್ದರೆ, ಅಸ್ಪಶ್ಯರ ಪ್ರತಿನಿಧಿಯನ್ನು ಅದೇ ವರ್ಗದ ಮತದಾರರ ಸಂಘದಿಂದ ಆರಿಸಬೇಕೆಂದು ಸ್ಪಷ್ಟ ನುಡಿಯುತ್ತಿದ್ದರು. ಎಂದು ಅಸ್ಪಶ್ಯತೆ ಸಂಪೂರ್ಣ ನಿರ್ಮೂಲನವಾಗುವುದೋ ಅಂದು ನಾವೂ ಮಿಶ್ರ ಮತದಾರರ ಸಂಘವನ್ನು ಬೆಂಬಲಿಸುವೆವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇತರ ಸಮಾಜಗಳ ಮೇಲೆ ವಿಶ್ವಾಸವಿರಿಸಲು ನಾವು ಸಿದ್ಧರಿಲ್ಲ. ಸರಕಾರ ಹಾಗೂ ಅಸ್ಪಶ್ಯ ವರ್ಗದ ಹಿತಸಂಬಂಧ ಏಕರೂಪಿಯಲ್ಲ. ಇಷ್ಟೇ ಅಲ್ಲ, ಎಲ್ಲಿವರೆಗೆ ಸ್ಪಶ್ಯಾಸ್ಪಶ್ಯದ ಕಲಹ ಹಿಂದೂ ಸಮಾಜದಲ್ಲಿರುವುದೋ ಅಲ್ಲಿವರೆಗೆ ಈ ಎರಡು ವರ್ಗಗಳ ಹಿತಸಂಬಂಧ ಪರಸ್ಪರ ವಿರುದ್ಧವೇ ಇರುತ್ತದೆನ್ನಲು ಅಡ್ಡಿಯಿಲ್ಲ.

ಮಿಶ್ರ ಮತದಾರ ಸಂಘದಿಂದ ಅಸ್ಪಶ್ಯರ ಪ್ರತಿನಿಧಿಯನ್ನು ನೇಮಿಸುವ ವ್ಯವಸ್ಥೆಯಾದರೆ, ಅಲ್ಪಸಂಖ್ಯಾತ ಅಸ್ಪಶ್ಯರ ಹಿತದತ್ತ ಲಕ್ಷ ನೀಡುವುದು ಸಾಧ್ಯವಾಗದು. ಅಸ್ಪಶ್ಯ ಪ್ರತಿನಿಧಿಯೆಂದು ಆರಿಸಿ ಬರುವ ಉಮೇದುವಾರರು ಇತರ ವರ್ಗದ ಜನರ ತಂತ್ರಕ್ಕೊಳಗಾಗಿ -ಅಂದರೆ, ಹಿಂದೂ ಸಭಾದ ಕೈಗೂಸಾಗಿ ಇರಬಲ್ಲವರೇ ಆರಿಸಿ ಬರುವರು. ಹಾಗಾಯ್ತೆಂದರೆ, ಅಸ್ಪಶ್ಯರ ಸ್ವತಂತ್ರ ಸ್ವಾಭಿಮಾನಿ ಚಳವಳಿ ನೆಲ ಕಚ್ಚುವುದು. ಅವರ ಈ ಕುಟಿಲತೆಯಿಂದಾಗಿಯೇ ನಮ್ಮ ಅಸ್ಪಶ್ಯ ಬಂಧುಗಳು ಅವರ ಚಳವಳಿಯಿಂದ ದೂರವಿರಬೇಕೆಂದು ಬಯಸುತ್ತೇವೆ. ಹಿಂದೂ ಮಹಾಸಭೆಯ ಚಳವಳಿಯು ಕೃತ್ರಿಮವೂ, ಸಂಕುಂಚಿತ ದೃಷ್ಟಿಯುಳ್ಳದ್ದೂ, ಧ್ಯೇಯಶೂನ್ಯವೂ, ತತ್ವಪರಾಙ್ಮಖವೂ ಆಗಿದೆ. ಅಸ್ಪಶ್ಯರ ಬಗ್ಗೆ ನಿಜವಾದ ಕಳಕಳಿ ಅವರಲ್ಲಿಲ್ಲ. ಅಸ್ಪಶ್ಯರು ಧರ್ಮಾಂತರ ಮಾಡುವುದು ಬೇಡ ಮತ್ತು ಅದರಿಂದಾಗಿ ಹಿಂದೂಗಳ ಸಂಖ್ಯಾಬಲ ಕಡಿಮೆಯಾಗುವುದು ಬೇಡ ಎಂಬಿಷ್ಟೇ ಉದ್ದೇಶದಿಂದ ಹಿಂದೂ ಮಹಾಸಭೆಯವರು ಅಸ್ಪಶ್ಯತಾನಿವಾರಣೆಯ ಪ್ರಶ್ನೆಯನ್ನು ಕೈಗೆತ್ತಿಕೊಂಡಿದ್ದಾರೆ. ಎಂದು ಕೇವಲ ನ್ಯಾಯ ಮತ್ತು ಸಮತೆಯ ದೃಷ್ಟಿಯಿಂದ ವಿಚಾರ ಮಾಡಲು ಮತ್ತು ಮಾನವ ಹಕ್ಕುಗಳ ಬಗ್ಗೆ ಕಾಳಜಿ ಹೊಂದಲು ಅವರು ಕಲಿತುಕೊಳ್ಳುವರೋ ಆಗಷ್ಟೇ, ಅವರ ಚಳವಳಿಗೆ ನಿಜವಾದ ಜೀವಂತಿಕೆ ಬರುವುದು. ಇಂದು ಹಿ.ಮ. ಸಭಾವಾಲಾ ಅವರು, ಚಾತುರ್ವರ್ಣ್ಯದ ಚೌಕಟ್ಟನ್ನೇ ತಿರುಗಿಸಿ ಬಿಡಿ ಎಂದಿದ್ದಾರೆ. ಆದರೆ ಅದು ರುಚಿಸುವಂತಹುದಲ್ಲ ಮತ್ತು ಅವರ ಬುದ್ಧಿಗೆ ಆಳವೂ ಅಲ್ಲ. ಹಿಂದೂ ಸಮಾಜದ ಪ್ರಗತಿಯನ್ನು ಕುಂಠಿತಗೊಳಿಸುವ, ಅದನ್ನು ವಿರೂಪಗೊಳಿಸುವ, ನಿಶ್ಯಕ್ತವಾಗಿಸುವ ಜಾತಿಭೇದಪದ್ಧತಿಯನ್ನು ಶಾಶ್ವತವಾಗಿರಿಸಿಕೊಂಡು ನಿಜವಾದ ಹಿಂದೂ ಸಂಘಟನೆಯಾಗಿರುವುದು ಶಕ್ಯವಿಲ್ಲ. ಅರ್ಥಾತ್, ಜಾತಿಭೇದಜನ್ಯ ಉಚ್ಚ-ನೀಚ ತಾರತಮ್ಯವನ್ನುಳಿಸಿಕೊಂಡು ಇರುವ ಸಂಘಟನೆ ಬರೀ ಕೃತ್ರಿಮವಷ್ಟೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)