ರಂಗಭೂಮಿ ಧರ್ಮ ನಿರಪೇಕ್ಷತಾ ಮಾಧ್ಯಮ: ಮಂಡ್ಯ ರಮೇಶ್
"ಮುರಾರಿ -ಕೆದ್ಲಾಯ ರಂಗೋತ್ಸವ"ಕ್ಕೆ ಚಾಲನೆ
ಉಡುಪಿ, ಫೆ.17: ಮನರಂಜನೆ ಮಾತ್ರವಲ್ಲದೆ ಸಾಮಾಜಿಕ ಶಿಕ್ಷಣ ನೀಡುವ ರಂಗಭೂಮಿಯು ಧರ್ಮ ಹಾಗೂ ಜಾತಿ ನಿರಪೇಕ್ಷತೆಯ ಮಾಧ್ಯಮವಾಗಿದೆ ಎಂದು ನಟ ಮಂಡ್ಯ ರಮೇಶ್ ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಮೂರು ದಿನಗಳ ಡಾ.ನಿ.ಮುರಾರಿ ಬಲ್ಲಾಳ್, ಪ್ರೊ.ಕೆ.ಎಸ್.ಕೆದ್ಲಾಯ ನೆನಪಿನ ಱಮುರಾರಿ -ಕೆದ್ಲಾಯ ರಂಗೋತ್ಸವೞವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಂಗಭೂಮಿಯ ಆಂದೋಲನವು ಇಂದು ದೇಶ ಮಾತ್ರವಲ್ಲದೆ ಹೊರ ದೇಶಕ್ಕೂ ವ್ಯಾಪಿಸಿದೆ. ನಟರಲ್ಲಿ ಆಂತರಿಕ ಶಕ್ತಿ ಎಂಬುದು ಕಡಿಮೆ. ಅದನ್ನು ರಂಗಭೂಮಿ ನೀಡುತ್ತದೆ. ಜಾಗತೀಕರಣದ ಹೊಡೆದವನ್ನು ಎದುರಿಸುವ ಸಾಮರ್ಥ್ಯವು ನಮ್ಮ ಜಾನಪದ ಸಂಸ್ಕೃತಿಗೆ ಇದೆ ಎಂದರು.
ಮುಖ್ಯಅತಿಥಿಯಾಗಿ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ, ಸಂತೋಷ್ ಬಲ್ಲಾಳ್ ಉಪಸ್ಥಿತರಿದ್ದರು.
ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮೇಘ ಸಮೀರ ನಿರ್ದೇಶನದ ನಟನ ಮೈಸೂರು ತಂಡದಿಂದ "ಬಹುಮುಖಿ" ನಾಟಕ ಪ್ರದರ್ಶನಗೊಂಡಿತು.