ಗ್ರಾಮೀಣ ಕರ್ನಾಟಕದ ಜಲ ಹೋರಾಟಗಾರ ಅಯ್ಯಪ್ಪಮಸಗಿ
‘‘ಭಾರತವನ್ನು ಈಗ ಜಲಕ್ಷಾಮದ ದೇಶ ಎಂದು ಪರಿಗಣಿಸಲಾಗಿದ್ದು, ಹಲವು ಭಾಗಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ದೇಶಕ್ಕೆ ಸಮೃದ್ಧ ನೀರಿನ ದೇಶವಾಗುವ ಎಲ್ಲ ಅರ್ಹತೆ ಹಾಗೂ ಸಾಮರ್ಥ್ಯ ಇದೆ. ಪ್ರಸ್ತುತ ಶೇ. 2 ರಿಂದ 3ರಷ್ಟು ನೀರನ್ನು ದೇಶದಲ್ಲಿ ಇಂಗಲು ಬಿಡುತ್ತಿದ್ದಾರೆ. ನಾವು ಕನಿಷ್ಠ ಶೇ. 35ರಷ್ಟಾದರೂ ನೀರನ್ನು ಮರುಬಳಕೆ ಮಾಡಿದರೆ, ಬಹುಕೋಟಿ ಮೌಲ್ಯದ ನದಿಜೋಡಣೆ ಯೋಜನೆಗಳು ಬೇಕಾಗುವುದಿಲ್ಲ’’ ಎನ್ನುವುದು ಅಯ್ಯಪ್ಪ ಮಸಗಿಯವರ ಸ್ಪಷ್ಟ ಅಭಿಪ್ರಾಯ.
‘‘ಭಾರತದಲ್ಲಿ ಸಾಕಷ್ಟು ಜಲ ಸಂರಕ್ಷಣೆ ಕಾರ್ಯ ಕೈಗೊಂಡರೆ, ದೇಶದ ದಿನಬಳಕೆ, ಕೃಷಿ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಬೇಕಾಗುವಷ್ಟು ಮಳೆ ಬೀಳುತ್ತದೆ. ಅತ್ಯಧಿಕ ಕ್ಷಮತೆ ಎಂದರೂ, ಶೇ. 40ಕ್ಕಿಂತಲೂ ಕಡಿಮೆ ಪ್ರಮಾಣದ ಮಳೆನೀರನ್ನು ನಾವು ಬಳಸಿಕೊಳ್ಳುತ್ತೇವೆ. ಇತರ ಶೇ. 50ರಷ್ಟು ನೀರು, ಹರಿದು ಜಲಸಾರಿಗೆ, ಮೀನುಗಾರಿಕೆ, ಬೋಟಿಂಗ್, ಧಾರ್ಮಿಕ ಹಾಗೂ ಇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.’’
ವಿಭಿನ್ನ ಕ್ಷೇತ್ರಗಳ ನೀರಿನ ಅಭಾವ ಪರಿಸ್ಥಿತಿ ಹಿನ್ನೆಲೆಯಲ್ಲಿ ಖಂಡಿತವಾಗಿಯೂ ಈ ವರದಿ ಆಶಾದಾಯಕ. ಜಲಕ್ಷಾಮದಿಂದ ತತ್ತರಿಸುತ್ತಿರುವ ಕರ್ನಾಟಕ- ಆಂಧ್ರದ ಗಡಿಭಾಗದಲ್ಲಿ ನೀರಿನ ಗಾಂಧಿ ಎಂದೇ ಕರೆಸಿಕೊಂಡಿರುವ ಅಯ್ಯಪ್ಪ ಮಸಗಿ ಅವರ ಅನುಭವದ ಮಾತು ಇದು. ತರಬೇತಿಯಿಂದ ಮಸಗಿ ಎಂಜಿನಿಯರ್. ಇವರು ಸುಮಾರು 26 ಸಾವಿರ ಹೆಕ್ಟೇರ್ ಒಳಭೂಮಿಯನ್ನು ಹಸನು ನೆಲವಾಗಿ ಪರಿವರ್ತಿಸಿದ್ದಾರೆ. ಸಾವಿರಾರು ಕೆರೆ ಕಟ್ಟೆ, ಕೊಳವೆಬಾವಿಗಳನ್ನು ಪುನರುಜ್ಜೀವನಗೊಳಿಸಿದ್ದು, ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳ 170ಕ್ಕೂ ಹೆಚ್ಚು ಕೈಗಾರಿಕೆಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಯಶಸ್ವಿಯಾಗಿ ರೂಪಿಸಿದ್ದಾರೆ.
ಜಲ ಹೋರಾಟಗಾರ
ದೇಶವನ್ನು ಸಶಕ್ತ ಜಲ ದೇಶವಾಗಿ ರೂಪಿಸುವ ಕನಸು ಹೊತ್ತು ಕಳೆದ ಒಂದೂವರೆ ದಶಕದಿಂದ ಜಲ ಹೋರಾಟ ಕೈಗೊಂಡಿದ್ದಾರೆ. ಅವರ ಪ್ರಕಾರ, ಬೆಂಗಳೂರಿನ 827 ಚದರ ಕಿಲೋಮೀಟರ್ ವಿಸ್ತೀರ್ಣದ ಮೇಲೆ ವಾರ್ಷಿಕ ಸರಾಸರಿ 100 ಸೆಂಟಿಮೀಟರ್ ಮಳೆ ಬೀಳುತ್ತದೆ. ಇದನ್ನು ಸಂಪೂರ್ಣವಾಗಿ ಸಂಗ್ರಹಿಸಿದರೆ, ನಗರದ ಜನತೆಯ ಮೂರು ವರ್ಷಗಳ ಅಗತ್ಯಕ್ಕೆ ಸಾಕಾಗುವಷ್ಟು ನೀರನ್ನು ಸಂಗ್ರಹಿಸಬಹುದಾಗಿದೆ. ಇಡೀ ನಗರ ವ್ಯಾಪ್ತಿಗೆ ಆವರಣಗೋಡೆ ನಿರ್ಮಿಸಿ, ನೀರು ವ್ಯರ್ಥವಾಗಿ ಹರಿದು ಹೋಗದಂತೆ ಮಾಡಿದರೆ, ಅಂತರ್ಜಲ ಮಟ್ಟ ಒಂದು ಮೀಟರ್‌ನಷ್ಟು ಏರಬಲ್ಲದು.
‘‘ಭಾರತವನ್ನು ಈಗ ಜಲಕ್ಷಾಮದ ದೇಶ ಎಂದು ಪರಿಗಣಿಸಲಾಗಿದ್ದು, ಹಲವು ಭಾಗಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ದೇಶಕ್ಕೆ ಸಮೃದ್ಧ ನೀರಿನ ದೇಶವಾಗುವ ಎಲ್ಲ ಅರ್ಹತೆ ಹಾಗೂ ಸಾಮರ್ಥ್ಯ ಇದೆ. ಪ್ರಸ್ತುತ ಶೇ. 2 ರಿಂದ 3ರಷ್ಟು ನೀರನ್ನು ದೇಶದಲ್ಲಿ ಇಂಗಲು ಬಿಡುತ್ತಿದ್ದಾರೆ. ನಾವು ಕನಿಷ್ಠ ಶೇ. 35ರಷ್ಟಾದರೂ ನೀರನ್ನು ಮರುಬಳಕೆ ಮಾಡಿದರೆ, ಬಹುಕೋಟಿ ಮೌಲ್ಯದ ನದಿಜೋಡಣೆ ಯೋಜನೆಗಳು ಬೇಕಾಗುವುದಿಲ್ಲ’’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
ನೀರು ಲಭ್ಯತೆ
ದತ್ತಿ ಕಾರ್ಯ ಮನೆಯಿಂದಲೇ ಆರಂಭವಾಗುತ್ತದೆ. ಲಾರ್ಸನ್ ಆ್ಯಂಡ್ ಟೂಬ್ರೊ ಕಂಪೆನಿಯಲ್ಲಿ 26 ವರ್ಷ ಕಾಲ ಕೆಲಸ ಮಾಡಿದ ಅವರು, ತಮ್ಮ ಕನಸನ್ನು ಅಮೃತಹಳ್ಳಿಯ ಸಹಕಾರನಗರದಲ್ಲಿರುವ 23x33 ಅಡಿಯ ನಿವೇಶನದಲ್ಲಿ ನಿರ್ಮಿಸಿದ ಮನೆಯಿಂದ ನನಸುಗೊಳಿಸಲು ಮುಂದಾದರು. ಮೂರು ಮಹಡಿಯ ಮನೆಯಲ್ಲಿ ಐದು ಕುಟುಂಬ ವಾಸವಿದ್ದು, 1986ರಿಂದಲೂ ಕೇವಲ 68 ಅಡಿ ಆಳದ ಕೊಳವೆಬಾವಿಯಲ್ಲೇ ಎಲ್ಲ ಅಗತ್ಯಗಳನ್ನು ಈಡೇರಿಸಲಾಗುತ್ತಿದೆ. ಕೊಳವೆಬಾವಿಯ ಜತೆಗೆ ಮಳೆನೀರು ಕೊಯ್ಲು, ಮರುಬಳಕೆ ಮೂಲಕ ಇತರ ಅಗತ್ಯ ಪೂರೈಸಲಾಗುತ್ತಿದೆ.
ಮರುಪೂರಣ
ಮಸಗಿಯವರ ತಂತ್ರದಲ್ಲಿ ನೀರು ಸಂಗ್ರಹ, ಫಿಲ್ಟರ್‌ಮಾಡುವ ಪೂರ್ವದ ಹಂತ ಹಾಗೂ ಫಿಲ್ಟರಿಂಗ್ ಸೇರಿದೆ. ಆ ಬಳಿಕ ನೀರು ಮಣ್ಣಿನ ನೈಸರ್ಗಿಕ ಚಿಲುಮೆಗೆ ಮರುಪೂರಣ ಮಾಡಲಾಗುತ್ತದೆ. ಮೊದಲು ಅವರು ಭೂಮಿಯ ಸಮೀಕ್ಷೆ ನಡೆಸಿ, ಕೆರೆ ನಿರ್ಮಿಸುತ್ತಾರೆ ಹಾಗೂ ಫಿಲ್ಟರ್ ಬಾವಿಗಳನ್ನು ನಿರ್ಮಿಸುತ್ತಾರೆ. ಈ ಕೆರೆಗಳನ್ನು ಕಲ್ಲು, ಹರಳು ಹಾಗೂ ಮರಳಿನಿಂದ ನಿರ್ಮಿಸಲಾಗುತ್ತದೆ. ಅಗತ್ಯಬಿದ್ದರೆ ಪಾಲಿಪ್ರೊಪೈಲಿನ್ ಶೀಟ್‌ಗಳನ್ನು ಅಳವಡಿಸಿ, ನೀರು ಹೀರಿಕೊಳ್ಳುವುದು ತಡೆಯಲಾಗುತ್ತದೆ. ನೀರು ವ್ಯರ್ಥವಾಗುವುದನ್ನು ಕಡಿಮೆ ಮಾಡುವ ಸಲುವಾಗಿ, ಹನಿ ನೀರಾವರಿಯನ್ನು ಅವರು ಸಲಹೆ ಮಾಡುತ್ತಾರೆ. ಈ ಮೂಲಕ ಗಿಡಗಳ ಬೇರುಗಳಿಗೆ ನೀರು ಹರಿಸಲಾಗುತ್ತದೆ. ಅವರು ಕೊರಟಗೆರೆ ತಾಲೂಕು ಹೊಳವನಹಳ್ಳಿಯ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ 10 ಘನ ಅಡಿಯ 32 ಗುಂಡಿಗಳನ್ನು ತೋಡಿ, 11 ಇಂಗು ಬಾವಿಗಳನ್ನು ನಿರ್ಮಿಸಿದ್ದಾರೆ. ದಿನಕ್ಕೆ 80 ಸಾವಿರ ಲೀಟರ್ ಅಮೂಲ್ಯ ನೀರನ್ನು ಪಡೆದು, 7000 ಮರಗಳಿಗೆ ನೀರು ಉಣಿಸುತ್ತಾರೆ.
ಅನುಭವದ ಮೂಲಕವೇ ಈ ಅನ್ವೇಷಣೆ ಮಾಡಿರುವ ಅವರು, ಒಂದು ಎಕರೆಯಲ್ಲಿ 4 ಸಾವಿರ ಲೀಟರ್ ನೀರು ಸಂಗ್ರಹಿಸಬೇಕಾದರೆ, 4 ಇಂಚು ಆಳ ಸಾಕಾಗುತ್ತದೆ. ಆದ್ದರಿಂದ ಅವರು ಪ್ರತಿ ದಿನ ಪಡೆಯುವ ನೀರು ಎರಡು ಎಕರೆ ಮೊಣಕಾಲುದ್ದದ ಹೊಂಡದಿಂದ ಸಿಗುತ್ತದೆ.
ಹಸಿರುದ್ವೀಪ
ಹಿಂದೂಪುರ ತಾಲೂಕಿನ ಸುಬ್ರಾಯಪೇಟೆ ಗ್ರಾಮದ ಮತ್ತೊಂದು ಹೊಲಕ್ಕೆ ಹೋದರೆ, ಬರಪೀಡಿತ ಪ್ರದೇಶದ 85 ಎಕರೆ ಪ್ರದೇಶವನ್ನು ಇವರ ಜಲಸಂರಕ್ಷಣೆ ತಂತ್ರ ಹಸಿರುಭೂಮಿಯಾಗಿ ಪರಿವರ್ತಿಸಿದೆ. ಸುತ್ತಮುತ್ತಲೂ ಒಣಹೊಲಗಳಿದ್ದರೆ, ಈ ಹಸಿರುದ್ವೀಪ ಸಹಜವಾಗಿಯೇ ಎಲ್ಲರ ಗಮನ ಸೆಳೆಯುತ್ತದೆ.
ರಾಯಲಸೀಮೆ ಪ್ರದೇಶದ ಒಂದು ಭಾಗವಾಗಿರುವ ಇಲ್ಲಿ ವಾರ್ಷಿಕ ಮಳೆಪ್ರಮಾಣ ಕೇವಲ 35 ಸೆಂಟಿಮೀಟರ್. ಆದರೆ ನಾಲ್ಕು ಹೊಂಡಗಳು ಹಾಗೂ 10 ಸಾವಿರ ಪುಟ್ಟ ಹೊಂಡಗಳು 18 ರಿಂದ 20 ಕೋಟಿ ಲೀಟರ್ ನೀರನ್ನು ವಾರ್ಷಿಕವಾಗಿ ಸಂಗ್ರಹಿಸುತ್ತವೆ. ಮಸಗಿ ಹಾಗೂ ಅವರ ಸ್ನೇಹಿತರು ಈ ಭೂಮಿಯನ್ನು 2015ರಲ್ಲಿ ಖರೀದಿಸಿದ್ದಾರೆ. ಹಿಂದೂಪುರದಿಂದ 40 ಕಿಲೋಮೀಟರ್ ದೂರದಲ್ಲಿ ಈ ಭೂಮಿ ಇದೆ. ಇದೀಗ 25 ಸಾವಿರ ಮರಗಿಡಗಳು ಇಲ್ಲಿವೆ. ಈ ಪೈಕಿ ಶೇ. 60ರಷ್ಟು ಅರಣ್ಯಭೂಮಿ.
ಈ ಒಣಭೂಮಿಯನ್ನು ಹಸಿರು ಭೂಮಿಯಾಗಿ ಪರಿವರ್ತಿಸಿರುವ ಪ್ರಯತ್ನಕ್ಕೆ ಪೂರಕವಾಗಿ 5 ಅಶ್ವಶಕ್ತಿಯ 2 ಸೌರಪಂಪ್‌ಸೆಟ್ಟುಗಳನ್ನು ಆಂಧ್ರಪ್ರದೇಶ ಸರಕಾರ ನೀಡಿದೆ. ಮರಗಳ ಜತೆಗೆ ಈ ಭೂಮಿಯನ್ನು ಪಶುಪಾಲನೆಗೆ ಬಳಸಲಾಗುತ್ತದೆ. ಹೊಲದಲ್ಲಿ ಕೆಲಸ ಮಾಡುವ 10 ಮಂದಿಗೆ ಅಡುಗೆಗೆ ಗೋಬರ್ ಅನಿಲವನ್ನೂ ಇದು ಒದಗಿಸುತ್ತದೆ.
ಸ್ವ ಅನುಭವ
ಅಯ್ಯಪ್ಪಮಸಗಿ ಮೂಲತಃ ಗದಗ ಜಿಲ್ಲೆ ನಾಗರಾಳ ಗ್ರಾಮದವರು. ತಮ್ಮ ಬಾಲ್ಯದ ದಿನಗಳಲ್ಲಿ ತಾಯಿ ಮೂರು ಕಿಲೋಮೀಟರ್ ದೂರದಿಂದ ನೀರು ತರಲು ಮುಂಜಾನೆ 3ಕ್ಕೇ ಎದ್ದು ಹೋಗುತ್ತಿದ್ದುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಕಡುಬಡತನದಲ್ಲಿ ಬೆಳೆದ ಅವರು, ನೀರಿನ ಸುಸ್ಥಿರ ಲಭ್ಯತೆ ಬಗ್ಗೆ ಆರಂಭದಿಂದಲೂ ಚಿಂತಿಸುತ್ತಾ ಬಂದಿದ್ದರು. ಬೆಮೆಲ್‌ನಲ್ಲಿ ಉದ್ಯೋಗ ಸಿಕ್ಕಿದ ಬಳಿಕ, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಬಳಿಕ ಎಲ್‌ಆ್ಯಂಡ್‌ಟಿನಲ್ಲಿ ಕೆಲಸ ಮಾಡುವ ವೇಳೆ, ನೀರಿನ ಸಮಸ್ಯೆ ಬಗ್ಗೆ ಆಳವಾದ ಅಧ್ಯಯನ ಕೈಗೊಂಡರು.
ಜಲ ಸಾಕ್ಷರತೆ
2003ರಲ್ಲಿ, ಮನೆಯವರ ವಿರೋಧದ ನಡುವೆಯೂ ಜಲ ಸಂರಕ್ಷಣೆ ಯೋಜನೆಗೆ ಧುಮುಕಿದರು. ‘ಜಲ ಸಾಕ್ಷರತೆ ಪ್ರತಿಷ್ಠಾನ’ ಎಂಬ ಸಂಸ್ಥೆಯನ್ನು 2005ರಲ್ಲಿ ಹುಟ್ಟುಹಾಕಿದರು. ಈ ಸಂಘಟನೆ ಮೂಲಕ ರೈತರು, ಉದ್ಯಮಿಗಳು ಹಾಗೂ ನಗರ ಕುಟುಂಬಗಳಲ್ಲಿ ಜಲಸಾಕ್ಷರತೆ ಮೂಡಿಸುವ ಪ್ರಯತ್ನ ಕೈಗೊಂಡರು. ಕಳೆದ 14 ವರ್ಷಗಲ್ಲಿ 13 ರಾಜ್ಯಗಳಲ್ಲಿ 7 ಸಾವಿರ ಜಲಸಾಕ್ಷರತೆ ಕಾರ್ಯಕ್ರಮಗಳನ್ನು ಅವರು ಹಮ್ಮಿಕೊಂಡಿದ್ದಾರೆ.
ಹುಬ್ಬಳ್ಳಿಯ 18 ಗ್ರಾಮಗಳಲ್ಲಿ ಜಲ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ದೇಶಪಾಂಡೆ ಫೌಂಡೇಷನ್ ಯೋಜನೆಗೆ ನೆರವಾಗಿದ್ದಾರೆ. 2009ರಲ್ಲಿ ಇವರಿಗೆ ಜಮನ್‌ಲಾಲ್ ಬಜಾಜ್ ಗ್ರಾಮೀಣಾಭಿವೃದ್ಧಿ ವಿಜ್ಞಾನ ಹಾಗೂ ತಂತ್ರಜ್ಞಾನ ಅನ್ವಯಿಕೆ ಪ್ರಶಸ್ತಿ ಪಡೆದಿದ್ದಾರೆ. ಹಲವು ಭೂಪ್ರವರ್ತಕ ಸಂಸ್ಥೆಗಳಿಗೆ, ಐಟಿ ಕಂಪೆನಿಗಳಿಗೆ, ವಸತಿ ಸಂಕೀರ್ಣ, ಶಿಕ್ಷಣ ಸಂಸ್ಥೆಗಳಿಗೆ ಮಳೆನೀರು ಕೊಯ್ಲು ತಂತ್ರಗಳ ಬಗ್ಗೆ ಸಲಹೆ ನೀಡಿದ್ದಾರೆ. ‘ಭಾರತದ ಜಲ ಚಿಕಿತ್ಸಕ’, ‘ನೀರಿನ ಗಾಂಧಿ’ ಮತ್ತು ‘ಒಣ ಕೊಳವೆಬಾವಿಗಳ ವೈದ್ಯ’ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.
ಮಸಗಿ ಅವರ ಪ್ರಕಾರ, ಬೆಂಗಳೂರು ನಗರಕ್ಕೆ ದಿನಕ್ಕೆ 130 ಕೋಟಿ ಲೀಟರ್ ನೀರು ಬೇಕು. ಬೆಂಗಳೂರು ಜಲಮಂಡಳಿ 90 ಕೋಟಿ ಲೀಟರ್ ನೀರು ಪೂರೈಸುತ್ತಿದೆ. ನಗರದಲ್ಲಿ ಮೆಟ್ರೊ ಟ್ರ್ಯಾಂಕ್‌ನಿಂದಲೇ 34 ಕೋಟಿ ಲೀಟರ್ ಮಳೆನೀರು ಕೊಯ್ಲು ಮಾಡಲು ಅವಕಾಶವಿದೆ.
waterliteracyfoundation@yahoo.com
ಬಿಸ್ಲೆರಿ ಘಟಕದ ಸುತ್ತ
ಬಿಸ್ಲೆರಿ ಇಂಟರ್‌ನ್ಯಾಶನಲ್ ಪ್ಲಾಂಟ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಉದಯಗಿರಿ ಗ್ರಾಮದಲ್ಲಿದೆ. ಕೊಳವೆಬಾವಿಗಳ ಮಟ್ಟ ಪಾತಾಳಕ್ಕೆ ಇಳಿದ ಹಿನ್ನೆಲೆಯಲ್ಲಿ ಈ ಘಟಕವನ್ನು 2012ರಲ್ಲಿ ಮುಚ್ಚಲು ನಿರ್ಧರಿಸಲಾಗಿತ್ತು. ಕಂಪೆನಿ, ಅಯ್ಯಪ್ಪಮಸಗಿಯವರ ಮಳೆ ನೀರು ಸಂಗ್ರಹ ತಂತ್ರಕ್ಕೆ ಮೊರೆ ಹೋಯಿತು. 6.5 ಎಕರೆ ಪ್ರದೇಶದಲ್ಲಿ ಸಿಎಸ್‌ಆರ್ ಯೋಜನೆಯಡಿ ಜಲ ಸಂರಕ್ಷಣೆ ಯೋಜನೆ ಕೈಗೊಂಡಿತು. ಮಳೆನೀರು ಸಂಗ್ರಹಕ್ಕೆ ಕೃತಕ ಕೆರೆ ನಿರ್ಮಿಸಲಾಯಿತು.
ರಸ್ತೆ ಬದಿ 1.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಿಯುವ ನೀರನ್ನೂ ಸಂಗ್ರಹಿಸಿತು. ಹಲವು ಇಂಗು ಹೊಂಡಗಳನ್ನು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಯಿತು. ಬಿಸ್ಲೆರಿ ಪ್ಲಾಂಟ್‌ನ ಹಿರಿಯ ವ್ಯವಸ್ಥಾಪಕ ಜಿ.ಎನ್.ವಿಶ್ವನಾಥ್ ಹೇಳುವಂತೆ, ಇಂದು 12.6 ಕೋಟಿ ಲೀಟರ್ ನೀರನ್ನು ಪ್ರತೀ ವರ್ಷ ಸಂಗ್ರಹಿಸಲಾಗುತ್ತಿದೆ. ಅಂತರ್ಜಲ ಮಟ್ಟ 80 ಅಡಿಗೆ ಬಂದಿದೆ. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ್ ಆಚಾರ್ಯ 2013ರಲ್ಲಿ ಉದ್ಘಾಟಿಸಿದರು.
ಸಿಮೆಂಟ್ ಪ್ಲಾಂಟ್‌ಗೆ ಮರುಜೀವ
ತೊಂಡೆಬಾವಿ ಪ್ರದೇಶದಲ್ಲಿರುವ ಎಸಿಸಿ ಸಿಮೆಂಟ್ ಘಟಕವನ್ನು 2012ರಲ್ಲಿ ನೀರಿನ ಕೊರತೆಯಿಂದಾಗಿ ಎರಡು ತಿಂಗಳು ಮುಚ್ಚಲಾಯಿತು. ಘಟಕದ 50 ಎಕರೆ ಪ್ರದೇಶದಲ್ಲಿ ಮಸಗಿಯವರ ಮಳೆನೀರು ಸಂಗ್ರಹ ಯೋಜನೆ ಅನುಷ್ಠಾನಕ್ಕೆ ತರಲಾಯಿತು. 18 ಇಂಗುಬಾವಿಗಳನ್ನು ಸೃಷ್ಟಿಸಲಾಯಿತು. ಅಲ್ಲಿಂದ ನೀರನ್ನು ಸಂಪ್‌ಗಳಿಗೆ ಹರಿಸಿ, ಕೊಳವೆಬಾವಿ ಮರುಪೂರಣ ಘಟಕಕ್ಕೆ ಕಳುಹಿಸಲಾಗುತ್ತದೆ.
60x40 ಮೀಟರ್‌ನ ಕೃತಕ ಕೆರೆಗೆ ಇದನ್ನು ಹರಿಸಲಾಗುತ್ತದೆ. ಕೇವಲ 15 ದಿನಗಳಲ್ಲಿ ಕೊಳವೆಬಾವಿ ಮರುಪೂರಣವಾಗುತ್ತದೆ. ಅಕ್ಕಪಕ್ಕದ 17 ಕೊಳವೆಬಾವಿಗಳು ಕೂಡಾ ಗುಣಮಟ್ಟದ ಅಧಿಕ ನೀರನ್ನು ಒದಗಿಸುವಂತಾಗಿದೆ. ಇದೀಗ ಕಂಪೆನಿ 9.92 ಕೋಟಿ ಲೀಟರ್ ನೀರು ಸಂಗ್ರಹಿಸುತ್ತದೆ.
ಶಿವಮೊಗ್ಗದಲ್ಲಿ ಸುಸ್ಥಿರ ಸರಬರಾಜು
ಶಾಹಿ ಎಕ್ಸ್‌ಪೋರ್ಟ್ಸ್ ಎಂಬ ಸಂಸ್ಥೆ ಮೈಸೂರು ಹಾಗೂ ಶಿವಮೊಗ್ಗದಲ್ಲಿ ಘಟಕ ಹೊಂದಿತ್ತು. ತೀವ್ರವಾಗಿ ನೀರಿನ ಕೊರತೆ ಎದುರಿಸುತ್ತಿತ್ತು. ಮಸಗಿಯವರ ಜಲ ಸಂರಕ್ಷಣೆ ವೇದಿಕೆಯ ಸಂಪರ್ಕ ಪಡೆದು, ಛಾವಣಿ ನೀರು ಸಂಗ್ರಹವನ್ನು ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಘಟಕದ ನಾಲ್ಕು ಎಕರೆ ಪ್ರದೇಶದಲ್ಲಿ ಕೈಗೊಂಡಿತು. ಫಿಲ್ಟರ್ ಮೂಲಕ ಹರಿಯುವ ನೀರನ್ನು ಸಂಪ್‌ನಲ್ಲಿ ಸಂಗ್ರಹಿಸಲಾಯಿತು.
ಕಂಪೆನಿಯ ಶಿವಮೊಗ್ಗ ಘಟಕದಲ್ಲಿ ದೊಡ್ಡ ಯೋಜನೆ ರೂಪಿಸಲಾಯಿತು. ಇಲ್ಲಿ ಛಾವಣಿ ನೀರು ಹಾಗೂ 200 ಎಕರೆ ಪ್ರದೇಶದ ನೀರನ್ನು ಸಂಗ್ರಹಿಸಲಾಯಿತು. ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಎ.ವಿ.ಶ್ರೀದತ್ತ ಹೇಳುವಂತೆ ‘‘ಈಗ ಶಿವಮೊಗ್ಗ ಘಟಕ 15 ಕೋಟಿ ಲೀಟರ್ ನೀರನ್ನು ಸಂಗ್ರಹಿಸುತ್ತಿದೆ. ವಾರ್ಷಿಕ ಬೇಡಿಕೆ 10 ಕೋಟಿ ಲೀಟರ್ ಮಾತ್ರ. ಇದೀಗ ಘಟಕವು ಅಕ್ಕಪಕ್ಕದ ಸ್ಥಳಗಳಲ್ಲಿ ಜೈವಿಕ ಕೃಷಿ ಕೈಗೊಂಡಿದೆ. ಎರಡೂ ಘಟಕಗಳಿಗೆ ಒಂದು ಕೋಟಿ ವೆಚ್ಚವಾಗಿದ್ದು, ವಾರ್ಷಿಕವಾಗಿ ದೊಡ್ಡ ಮೊತ್ತದ ಹಣವನ್ನು ಉಳಿಸುತ್ತದೆ.’’